top of page
CamScanner 07-17-2020 12.03.37_3.jpg

ಸಿನಿ ಸಂಪದ

ಪರಿವಿಡಿ

1.    ಕನ್ನಡ ಸಿನಿಮಾಲೋಕ..... ಒಂದಿಷ್ಟು ಅವಲೋಕನ
2.    ಕನ್ನಡ ಮತ್ತು ಕನ್ನಡ ಚಲನಚಿತ್ರ
3.    ಕನ್ನಡ ಸಿನಿಮಾ ಜಗತ್ತು : ಕೆಲವು ನೋಟಗಳು
4.    ಕನ್ನಡ ಚಲನಚಿತ್ರಗೀತೆಗಳು ಮತ್ತು ಪ್ರೇಮ
5.    ಕನ್ನಡಕ್ಕೊಬ್ಬನೇ ‘ಅಣ್ಣ’ ರಾಜ್‍ಕುಮಾರ್..... 
6.    ಕನ್ನಡ ಸಿನಿಮಾ ಮತ್ತು ಪ್ರೇಕ್ಷಕರು
7.    ಚಲನಚಿತ್ರ ಮತ್ತು ಹಾಡುಗಳು 
8.    ಮುತ್ತುರಾಜ್ ಕನ್ನಡದ ಕಣ್ಮಣಿ
9.     ಶಿವಪ್ಪ ಕಾಯೋ ತಂದೆ....
10.   ರಾಮನ ಅವತಾರ....
11.   ನಾನು ನೀನು ನೆಂಟರಯ್ಯಾ.....
12.   ನಗುನಗುತಾ ನಲಿ ನಲಿ.....

 

ಕನ್ನಡಕ್ಕೊಬ್ಬನೇ ‘ಅಣ್ಣ’ ರಾಜ್‍ಕುಮಾರ್..... 

         ‘ರಾಜ್’ ಎನ್ನುವ ಪದವೊಂದು ಕರ್ನಾಟಕದ ಬಹುಜನ ಶ್ರೀಸಾಮಾನ್ಯರಲ್ಲಿ ಕದಲಿದರೆ, ಅಲ್ಲೊಂದು ಸಾಂಸ್ಕøತಿಕ ಕಥನವೇ ರೂಪುತಳೆಯುತ್ತದೆ. ಆದರ್ಶ, ಕನಸು, ಕನವರಿಕೆ, ಕಾಡುವಿಕೆ ಎಂಬೆಲ್ಲಾ ಸಮ್ಮಿಶ್ರಭಾವಗಳು ಭೌತಿಕವಾಗಿ ನಮ್ಮೊಂದಿಗಿಲ್ಲದ ನೆನಪು ಆ ಸಾರ್ಥಕ ಜೀವ-ಭಾವದ ಬಗೆಗೆ ಕಣ್ಣಂಚಲ್ಲಿ, ಮನದ ತುದಿಯಲ್ಲಿ ಮೌನವಾದ ಭಾವುಕ ಭಾವವು ಹೆಪ್ಪುಗಟ್ಟುತ್ತದೆ. ಇದು ಕನ್ನಡಕೊಬ್ಬನೇ ರಾಜ್‍ಕುಮಾರ್ ಎಂಬ ‘ಮುತ್ತುರಾಜ’ನ ಸಾರ್ಥಕ ಬದುಕಿನ ರೀತಿ. “ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ....”

         ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗವನ್ನು ಒಮ್ಮೆ ತಿರುಗಿ ನೋಡಿದರೂ ಎದ್ದು ಕಾಣುವ ಆಕರ್ಷಕ ಚಿತ್ರ ರಾಜ್. ‘ಕನ್ನಡ ಚಲನಚಿತ್ರ ಬೆಳೆದಂತೆ ರಾಜ್‍ಕುಮಾರ್, ರಾಜ್‍ಕುಮಾರ್ ಬೆಳೆದಂತೆ ಕನ್ನಡ ಚಲನಚಿತ್ರ’ ಪರಸ್ಪರ ಪೂರಕ ಎನ್ನುವಂತೆಯೆ ಬೆಳೆದದ್ದು, ಉಳಿದದ್ದು ಯಾರೂ ನಿರಾಕರಿಸಬಹುದಾದ ಸಂಗತಿಯಲ್ಲ. ಕರ್ನಾಟಕದ ಕನ್ನಡಜನ ಕಲೆ-ಸಂಸ್ಕøತಿಯನ್ನು ಪೋಷಿಸುವಲ್ಲಿ ಎಂದಿಗೂ ಹಿಂದೆ-ಮುಂದೆ ನೋಡಿದವರಲ್ಲ, ಬದುಕಿನ ಭಾವವಾಗಿಯೇ ಕಲೆಯನ್ನು ಬದ್ಧತೆಯಿಂದಲೇ ಭಾವಿಸಿಕೊಂಡವರು, ಅದಕ್ಕೆ ಪೂರಕವಾಗಿಯೇ ನಡೆದುಕೊಂಡ ಕಲಾವಿದರೂ ಆದರ್ಶದ ಹಾದಿಯಲ್ಲೇ ನಡೆದವರು.... ಇದಕ್ಕೆ ಕಳಶಪ್ರಾಯ ಮುತ್ತುರಾಜ್. “ಮಾಯೆಯ ತೆರೆಯನು ಸರಿಸಿದರೇನೆ ಕಾಣುವುದು ನಿಜವಾ...”

        ಕನ್ನಡ ಚಿತ್ರರಂಗ, ತನ್ಮೂಲಕ ಭಾರತೀಯ ಚಿತ್ರರಂಗದ ಸಂದರ್ಭಕ್ಕೆ ‘ರಾಜ್’ ಒಂದು ವಿಶಿಷ್ಟವೂ ಅನನ್ಯವೂ ಪರಿಪೂರ್ಣವೂ ಆದ ಅಧ್ಯಾಯ. ರಂಗಭೂಮಿಯಲ್ಲಿ ಬದುಕು ಕಂಡುಕೊಂಡ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರ ಮಗ ಎಸ್. ಪಿ. ಮುತ್ತುರಾಜ್ ಬಡತನವೇ ಮೊದಲಾದ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ವಿಪರ್ಯಾಸ. ಇದು ಕನ್ನಡ ಸಿನಿಮಾರಂಗದ ಅದೃಷ್ಟವಾಯ್ತು ಎನಿಸುವುದು ವಿಚಿತ್ರವಾದರೂ ಸತ್ಯ. ಇಂದಿಗೆ ರಾಜ್ ಈ ನೆಲದಲ್ಲಿ ‘ಸಿನಿಮಾ’ ಎಂಬ ಮಾಯಾಲೋಕವನ್ನು ಮೀರಿಯೂ ಹತ್ತಾರು ಅರ್ಥಗಳಿಗೆ, ರೂಪಗಳಿಗೆ ಪರ್ಯಾಯವಾಗಿ, ದಂತಕತೆಯಾಗಿ, ಐತಿಹ್ಯವಾಗಿ, ಸಾಂಸ್ಕøತಿಕ ನಾಯಕನ ಅರ್ಥವನ್ನು, ಪಡೆದುಕೊಂಡ ಮೇರುವ್ಯಕ್ತಿತ್ವವಾದದ್ದು ನಮ್ಮೆದುರಿಗಿರುವ ವಾಸ್ತವ. “ಭಾಗ್ಯವಂತರು ನಾವೆ ಭಾಗ್ಯವಂತರು”

        ಇಂದಿನ ಕನ್ನಡ ಸಿನಿಮಾಲೋಕದ ದಿನನಿತ್ಯದ ಆಗು-ಹೋಗುಗಳನ್ನು ಗಮನಿಸುವ ಹೊತ್ತಿಗೆ, ಸಿನಿಮಾಗಳ ಏಕತಾನತೆಯ ಶೂನ್ಯಗಳಲ್ಲಿ ನಿರಾಶೆಯಾಗಿರುವ ಸಹೃದಯ ಪ್ರೇಕ್ಷಕನಿಗೆ ಮತ್ತೆ-ಮತ್ತೆ ಕಾಡುವ ರಾಜ್, ಮತ್ತೊಮ್ಮೆ ಹುಟ್ಟಿಬರಬಾರದೆ? ಎನಿಸುವುದು ಭಾವುಕತೆಯ ಕನವರಿಕೆಯಾದರೂ ರಾಜ್‍ಗೆ ಅವರೊಬ್ಬರೇ ಸಾಟಿಯಾಗಿದ್ದರು ಎನ್ನುವ ಅರಿವನ್ನು ಮತ್ತೆ-ಮತ್ತೆ ದೃಢಪಡಿಸುತ್ತದೆ. ಕಲೆಯನ್ನು ಮನತುಂಬಿ ಹಾರೈಸಿ, ಬೆಳೆಸಿದ್ದ ಕನ್ನಡ ರಸಿಕರ ಕಳಕಳಿಯ ಸಾಚಾತನದ ನೋವಿದು. 

        1929 ಏಪ್ರಿಲ್ 24 ರಂದು ಮುತ್ತುರಾಜ್ ಜನನ. ಅಪ್ಪನ ರಂಗಭೂಮಿಯ ಕೃಷಿ, ಮಗನನ್ನು ಆಕರ್ಷಿಸಿದ್ದು ಸಹಜವಾಗಿತ್ತು. ಕುತೂಹಲದ ರೂಪವಾಗಿಯೂ ಆರಂಭವಾದ ಈ ನಂಟು ಮುತ್ತುರಾಜ್‍ನನ್ನು ಕನ್ನಡದ ‘ಅನಭಿಷಕ್ತ ಸಾಮ್ರಾಟ’ನನ್ನಾಗಿಸಿದ್ದು ಮಾತ್ರ ಅದ್ಭುತ. 1954 ಮುತ್ತುರಾಜ್ ಮತ್ತು ಕನ್ನಡಚಲನಚಿತ್ರದ ಇತಿಹಾಸದಲ್ಲಿ ಮಹತ್ವದ ವರ್ಷ ಗುಬ್ಬಿವೀರಣ್ಣ ಹಾಗೂ ಎಚ್.ಎಲ್.ಎನ್. ಸಿಂಹ ಅವರ ಶೋಧಸಾಹಸದ ಫಲವಾಗಿ ಮುತ್ತುರಾಜ್ ಪೂರ್ಣಪ್ರಮಾಣದ ನಾಯಕರಾಗಿ ಕನ್ನಡದ ಬೆಳ್ಳಿತೆರೆಯನ್ನು ‘ಬೇಡರ ಕಣ್ಣಪ್ಪ’ನಾಗಿ ಆವರಿಸಿಕೊಂಡರು. ಚಿತ್ರದ ಶತದಿನೋತ್ಸವದ ಯಶಸ್ಸು, ಒಬ್ಬ ನಾಯಕನನ್ನು ಸಹೃದಯರ ಎದೆಯೊಳಗೆ ದಾಖಲಿಸಿತು. ಅಲ್ಲಿಂದಾಚೆಗೆ ಆ ನಟ, ವಾಮನ ತ್ರಿವಿಕ್ರಮನಾದಂತೆ ಬೆಳೆಯುತ್ತಾ ಸಾಗಿದ. ನಿನ್ನೆಗಳ ಹಾದಿಯನ್ನು ಮರೆಯದೆ ವರ್ತಮಾನದ ಎಚ್ಚರದಲ್ಲಿ ಭವಿಷ್ಯವನ್ನು ಕನವರಿಸುತ್ತಲೇ ತನ್ನ ವ್ಯಕ್ತಿತ್ವದಿಂದ, ಸಾಧನೆಯಿಂದ, ಸಹಜ ಪ್ರೀತಿಯಿಂದ ಉಳಿದು, ಬೆಳೆದು ಕನ್ನಡ ಚಲನಚಿತ್ರರಂಗದ ನಟಸಾರ್ವಭೌಮನಾಗಿ, ಜನರ ಅಭಿಮಾನದ ಅಣ್ಣನಾಗಿ, ನಿರಂತರವಾಗಿ ಅಭಿಮಾನಕ್ಕೆ ಪಾತ್ರವಾದ. ಇದೊಂದು ಕನ್ನಡದ ಕಲೆಯ ಸಾಂಸ್ಕøತಿಕ ಚರಿತ್ರೆ. “ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವಾ ತಾಣವೇ ಗಂಧದ ಗುಡಿ....”

         ಪೌರಾಣಿಕ, ಸಾಮಾಜಿಕ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪಾತ್ರಗಳು, ಐತಿಹಾಸಿಕ, ಜಾನಪದ, ಭಕ್ತಿಪ್ರಧಾನ ಕೊನೆಗೆ ಕನ್ನಡದ ಅಪರೂಪದ ದಾಖಲೆಯಾದ ಬಾಂಡ್ ಚಿತ್ರಗಳ ಪ್ರಯೋಗದಲ್ಲಿಯೂ ಯಶಸ್ವಿಯಾದವರು ರಾಜ್. ಬಹುಶಃ ಭಾರತದೇಶದಲ್ಲಿ ಅದೆಷ್ಟೇ ಪ್ರತಿಭಾವಂತ ನಟರಿದ್ದಾಗ್ಯೂ ಹೀಗೆ ಎಲ್ಲಾ ಬಗೆಯ ಪಾತ್ರಗಳಲ್ಲಿಯೂ ‘ಸೈ’ ಎನಿಸಿಕೊಂಡ ನಟನೊಬ್ಬನನ್ನು ಕಾಣಲಿಕ್ಕಿಲ್ಲ ಎನ್ನುವುದು ರಾಜ್‍ಕುಮಾರ್ ಅವರಂತಹ ನಟನಾ ಶ್ರೇಷ್ಠತೆಯನ್ನೆಂತೋ, ಕನ್ನಡಿಗರ ಹೆಮ್ಮೆಯನ್ನೂ ಎತ್ತರಿಸುವಂತಹುದು. “ನಾನು ನಿಮ್ಮವನು ನಿಮ್ಮ ಮನೆಮಗನು....”

         ವಾಕ್ಚಿತ್ರಪರಂಪರೆಯ ಮುಖ್ಯಲಕ್ಷಣಗಳಲ್ಲಿ ಒಂದಾದ ಹಾಡುವ ಪರಂಪರೆಯನ್ನು ಅದ್ಭುತವಾಗಿ ಸಾಧಿಸಿಕೊಂಡ ರಾಜ್ ಜನರಿಂದ ಗಾನಗಂಧರ್ವ ಎಂಬ ಪ್ರಶಂಸೆಗೂ ಪಾತ್ರವಾದದ್ದು ಅವರ ಶ್ರಮ ಮತ್ತು ಪ್ರತಿಭೆಗೆ ಸಂದ ಫಲ. ರಂಗಭೂಮಿಯ ಹಿನ್ನೆಲೆಯ ಶಿಸ್ತು, ಬದುಕಿನ ಬದ್ಧತೆ, ಕಲೆಯ ಕಳಕಳಿ ನಿರಂತರವಾಗಿ ರಾಜ್‍ರನ್ನು ಎಚ್ಚರಿಸುತ್ತಲೇ, ಅಭಿನಯಕ್ಕೆ ಹೇಳಿಮಾಡಿಸಿದ ಶರೀರ, ಪೂರಕವಾಗಿ ಶಾರೀರವನ್ನು ಕಾಯ್ದುಕೊಳ್ಳಲು ಅನುವುಮಾಡಿತ್ತು. ಅವರ ಕಂಠದಿಂದ ಹೊಮ್ಮಿದ ಅವೆಷ್ಟೋ ಹಾಡುಗಳು ಇಂದಿಗೂ ಈ ನೆಲದ ಬದುಕನ್ನು ವ್ಯಷ್ಟಿಯಾಗಿ, ಸಮಷ್ಟಿಯಾಗಿ ಕಾಡುತ್ತಲೇ ಕನವರಿಸುವಂತೆ ಮಾಡಿವೆ. ಇಂತಹ ಹಾಡು ರಾಜ್‍ರಿಂದ ಮಾತ್ರ ಸಾಧ್ಯ ಎನಿಸಿದ್ದಿದೆ. ಇಂದಿಗೂ ಕೆಲವು ಹಾಡು-ಹಾಡುಗಾರರ ಹೊತ್ತಿನಲ್ಲಿ ಸುಶ್ರಾವ್ಯ, ಸ್ಫುಟತೆಯ ರೂಪವಾಗಿ ರಾಜ್ ಮತ್ತೆ-ಮತ್ತೆ ಭಾವವಾಗಿಯೇ ಕಾಡುವುದಿದೆ. “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಮತ್ತಾರಿಂದಲೋ ಕೇಳಿದ್ದರೆ ಅಂತಹ ಯಶಸ್ಸು, ರೋಮಾಂಚನ ಸಾಧ್ಯವಾಗುತ್ತಿತ್ತೆ? ಜನರ ನಾಡಗೀತೆ ಎಂಬಂತೆಯೇ ಪ್ರಸಿದ್ಧವಾಗಿ ಎಲ್ಲರನ್ನು ಕುಣಿಸಿ-ತಣಿಸಿದ ಈ ಹಾಡಿನ ಧ್ವನಿ ಮತ್ತು ವ್ಯಕ್ತಿತ್ವಕ್ಕಿದ್ದ ಬದ್ಧತೆಯನ್ನು ಸುಲಭಕ್ಕೆ ಶಬ್ದಗಳಲ್ಲಿ ಅಳೆಯಲಾಗುವುದಿಲ್ಲ. ರಾಜ್ ಎಂದರೆ ಅದು ರಾಜ್ ಮಾತ್ರ. “ಸಂಗೀತವೇ ನೀ ನುಡಿಯುವ ಮಾತೆಲ್ಲಾ....”

        ಕನ್ನಡದ ಮೊದಲು ಶತ ಚಿತ್ರಗಳ ನಾಯಕನಟರಾದ ರಾಜ್ ಅದೇ ಉತ್ಕರ್ಷದ ಹಾದಿಯಲ್ಲಿ ಕ್ರಮಿಸಿ ಇನ್ನೂರನ್ನು ದಾಟಿದವರು. ಅವರ  ಈ ಯಾನ ಕೇವಲ ಸಿನಿಮಾದಿಂದ ಸಿನಿಮಾಕ್ಕೆ ಎಂಬ ಮಿತಿಯದ್ದಾಗಿರಲಿಲ್ಲ ಅವೆಷ್ಟೋ ಸಾಧನೆಯ  ಫಲಿತಗಳಾಗಿದ್ದವು, ಸಾಮಾಜಿಕತೆಯ ನೆರಳುಗಳಿದ್ದವು, ನಾಡು ನುಡಿಯ ಕಳಕಳಿಗಳಿದ್ದವು, ಪ್ರತೀ ಏಳು-ಬೀಳುಗಳಲ್ಲಿ ಕನ್ನಡದ ಕಲಾರಸಿಕರೊಂದಿಗೊಂದು ಅವಿನಾಭಾವ ಬಾಂಧವ್ಯವಿತ್ತು ‘ಅಭಿಮಾನಿಗಳು ದೇವರಾಗಿದ್ದರು’ ಜಗತ್ತಿನ ಯಾವ ನಟನೂ ತನ್ನ ಅಭಿಮಾನಿಗಳಲ್ಲಿ ಕಾಣಲಾಗದ ಧನ್ಯತೆಯ ಭಾವವಿದಾಗಿತ್ತು. ಪರಸ್ಪರ ಪ್ರೀತಿ-ವಾತ್ಸಲ್ಯಗಳಲಿದ್ದ ಕಾಳಜಿ, ನಂಬಿಕೆ ಮತ್ತು ಸಹಜವಾದ ಬದ್ಧತೆಯಿಂದಷ್ಟೇ ಇದು ಸಾಧ್ಯವಾಗಿತ್ತು. 

        ನಟನಾಗಿ ಅನುಭವಿಸಿದ, ಅಭಿನಯಿಸಿದ ಪಾತ್ರಗಳಲ್ಲಿದ್ದ ವೈವಿಧ್ಯತೆಯೇ ರಾಜ್‍ರ ಅನನ್ಯತೆಗೆ ಅನಂತ ಸಾಕ್ಷಿ. ಸತಿಶಕ್ತಿಯ ಮಂತ್ರವಾದಿಯಾಗಲಿ, ಭಕ್ತಪ್ರಹ್ಲಾದದಹಿರಣ್ಯಕಶ್ಯಪನಾಗಲಿ, ಕಾಳಿದಾಸನಾಗಲಿ, ಬಂಗಾರದ ಮನುಷ್ಯ ನಾಗಲಿ, ಬಾಂಡ್ ಆಗಲಿ, ಭಕ್ತಕುಂಬಾರನೋ, ಸಂತ ತುಕಾರಾಮನೋ ಎಲ್ಲಕ್ಕೂ ಸೈ, ಎಲ್ಲದರಲ್ಲೂ ಪರಕಾಯ ಪ್ರವೇಶ. ಶ್ರದ್ಧೆ ಮತ್ತು ವೃತ್ತಿಯಾಚೆಗೆ ಕಲೆ ಎಂಬ ಆರಾಧನೆಯ ಫಲಿತವಿದು. ಇಷ್ಟು ಅನಂತ ಸಾಧನೆಯ ಸಾರ್ಥಕ ಕ್ಷಣದಲ್ಲಿಯೂ “ತನ್ನ ಸಾಧನೆ ಸಮುದ್ರದಲ್ಲಿನ ಹನಿಯಷ್ಟು” ಎನ್ನುವ ವಿನಯವಂತಿಕೆ ರಾಜ್ ಅವರಿಗಿದ್ದದ್ದೇ ಅವರನ್ನು ಮತ್ತಷ್ಟು ಎತ್ತರಕ್ಕೇರಿಸಿತ್ತೆನ್ನಬಹುದು. ಈ ಹೊತ್ತಿನ ಒಂದೆರಡು ಅರೆ-ಬರೆ ಸಿನಿಮಾಗಳ ಯಶಸ್ಸಿನಲ್ಲಿ ಎಲ್ಲವೂ ತಾವೇ ಎಂದು ಭ್ರಮಿಸುವ ಕೆಲವು ನಟರು ರಾಜ್‍ರಿಂದ ಕಲೆಯ ಮೊದಲಕ್ಷರವನ್ನು ಕಲಿಯದಂತಾದದ್ದು ದುರಂತವಲ್ಲದೆ ಬೇರೇನು? ಇಂದಿನ ಸ್ವಯಂ ಘೋಷಣೆಯ ಸೂಪರ್‍ಸ್ಟಾರ್ ಪಟ್ಟಗಳು, ವಾದಗಳು ಪ್ರಜ್ಞಾವಂತ ಪ್ರೇಕ್ಷಕರಲ್ಲಿ ಪಾಪದ ಕರುಣೆಯನ್ನು ಮಾತ್ರ ಉಳಿಸುತ್ತವೆ. “ಎಲ್ಲ ಬಲ್ಲವರಿಲ್ಲ, ಬಲ್ಲವರು ಯಾರಿಲ್ಲ ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ....” 

        ಬಹುನಟರ ಸ್ಪರ್ಧೆಯ ನಡುವೆಯೂ ರಾಜ್ ಉಳಿದು-ಬೆಳೆದದ್ದು ಪವಾಡವಲ್ಲ, ಈ ಮೊದಲಿಗೆ ಚಿಂತಿಸಿದ ಹಾಗೆ ಅದು ಸಾಧನೆಯ, ಶ್ರದ್ಧೆಯ, ಬದ್ಧತೆಯ, ಶ್ರಮದ ಪ್ರಾಮಾಣಿಕ ಹಾದಿ. ಸದಾ ಕಲಿವ ಹಂಬಲದ ವಿನೀತತೆ, ನಿರ್ದೇಶಕರನ್ನು ಗುರುವೆಂದ ನಂಬಿಕೆ, ನಿರ್ಮಾಪಕರನ್ನು ಅನ್ನದಾತರೆಂದ ಗೌರವ, ಸಹನಟರನ್ನು ಸಮಾನವಾಗಿ ಕಂಡ ಹೃದಯವಂತಿಕೆ. ಆದ್ದರಿಂದಲೇ ರಾಜ್‍ಕುಮಾರ್ ಕನ್ನಡದ ಪ್ರತೀ ಮನೆಗಳಲ್ಲಿ ಆದರ್ಶದ ಅಪ್ಪ, ಅಣ್ಣ, ತಮ್ಮ, ಮಗ, ಗಂಡ ಎಂಬೆಲ್ಲಾ ಮಾದರಿಯ ಪ್ರತಿರೂಪವಾಗುವುದಾಯ್ತು. ರಾಜ್ ಈ ನೆಲದ ಕನ್ನಡಿಗರೆಲ್ಲರ ಮನ-ಮನೆಯ ಭಾವವಾದ್ದರಿಂದಲೇ ಆತ ಎಲ್ಲರ ‘ಅಣ್ಣ’ನಾಗಿ ಪ್ರತೀ ಕುಟುಂಬಗಳ ವಾತ್ಸಲ್ಯದ ಹಕ್ಕುದಾರನಾದದ್ದು ಸಾಧ್ಯವಾಯ್ತು, ಕನ್ನಡ ನೆಲಕ್ಕೆ ‘ಅಣ್ಣ’ ಎನ್ನುವ ಮಾತೇ ಸಾಂಸ್ಕøತಿಕ ವಿಶೇಷ ಪದವಾದದ್ದು ರಾಜ್ ಸಾಧಿಸಿಕೊಂಡ ಋಣವಾಯ್ತು. “ಕೂಡಿ ಬಾಳೋಣ ಎಂದೆಂದು ಸೇರಿ ದುಡಿಯೋಣ....”

        ನಟ ಸಾರ್ವಭೌಮ, ರಸಿಕರರಾಜ, ಗಾನಗಂಧರ್ವ, ಗೌರವ ಡಾಕ್ಟರೇಟ್, ಪದ್ಮಭೂಷಣ, ಕರ್ನಾಟಕರತ್ನ, ಪಾಲ್ಕೆ ಪ್ರಶಸ್ತಿ, ವಿದೇಶದ ಕೆಂಟಕಿ ಕರ್ನಲ್ -ಹೀಗೆ ಹತ್ತು ಹಲವು ಸನ್ಮಾನಗಳು ರಾಜ್‍ರನ್ನು ಗೌರವಿಸಿ ತಾವೇ ಗೌರವಿಸಲ್ಪಟ್ಟವು. ಪಡೆದಷ್ಟೂ ಹಿಗ್ಗದೆ, ಮತ್ತಷ್ಟು ಜವಾಬ್ದಾರಿಯಿಂದ ಕಲಿವ ಹಂಬಲದ ವಿಧೇಯನಾಗಿ, ಉಳಿದು ಕನ್ನಡವೇ ಬದುಕು ಎಂದದ್ದು, ಅವರ ನಾಡು-ನುಡಿಯ ಪ್ರೀತಿಯ ಮತ್ತೊಂದು ಮಾದರಿಯನ್ನು ಪ್ರಸ್ತುತಪಡಿಸು ವಂತಹುದು. ಹಾಗಾಗಿಯೇ ‘ಗೋಕಾಕ್ ಚಳುವಳಿ’ ‘ರಾಜ್ ಚಳುವಳಿ’ ಎಂಬ ಪರ್ಯಾಯಕ್ಕೂ ಕಾರಣವಾಯ್ತು. ಮುಂದೆ ನಿರಂತರವಾಗಿ, ನಾಡು-ನುಡಿ-ಸಂಸ್ಕøತಿ ಪರ ಯಾವುದೇ ಹೋರಾಟದ ಸಂದರ್ಭಕ್ಕೂ ರಾಜ್ ಒಂದು ಮಂತ್ರವಾಗಿ, ಶಕ್ತಿಯಾಗಿ ಉಳಿದದ್ದು ಈ ನೆಲದ ಋಣದ ಸತ್ಯವಾಗಿಯೂ ಕಾಣುವಂತಹುದು. ಇಂದು ಎಲ್ಲಾ ನೆಲೆಯಲ್ಲಿಯೂ ಶೂನ್ಯಸೃಷ್ಟಿಯಾದ ದುರಂತದಲ್ಲಿ ರಾಜ್ ಮತ್ತೆ-ಮತ್ತೆ ಕಾಡುವಾಗ ಅನಾಥಭಾವವೇ ಆವರಿಸಿಕೊಳ್ಳುತ್ತದೆ. “ಮೂಗನ ಕಾಡಿದರೇನು ಸವಿ ಮಾತನು ಆಡುವನೇನು....”

        ಒಬ್ಬ ನಾಯಕ ದಿಢೀರನೆ, ತನ್ನಿಂತಾನೇ ರೂಪುಗೊಳ್ಳುವುದಿಲ್ಲ. ಜನಸಮುದಾಯ ತನ್ನ ನಿಜದ ಪ್ರೀತಿಯಿಂದ, ಆಶೋತ್ತರಗಳ ಪ್ರತಿಸ್ಪಂದನದ ನಿರೀಕ್ಷೆಯಿಂದ, ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಗಮನಿಸಿಯೇ ತಮ್ಮ ಮಧ್ಯ ತಮ್ಮವನು ಎನಿಸಿದವನನ್ನು ನಾಯಕನನ್ನಾಗಿ ಗುರುತಿಸುತ್ತದೆ. ಇದು ಸಾಮಾನ್ಯವಾದ ಸಂಗತಿಯಲ್ಲ. ಇಂತಹ ಸಮಷ್ಟಿನೆಲೆಯಿಂದ ನಾಯಕರಾಗಿ ರೂಪುಗೊಂಡ ವ್ಯಕ್ತಿತ್ವ ರಾಜ್‍ರದ್ದು. ಇದು ದೊಡ್ಡ ಜವಾಬ್ದಾರಿಯನ್ನು ಹೊರಿಸಿತ್ತು ಕೂಡಾ. ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡ ಫಲವೇ, ‘ಕನ್ನಡಕೊಬ್ಬನೇ ರಾಜ್‍ಕುಮಾರ್’ ಎಂಬಂತಾದದ್ದು. “ಜನರಿಂದ ನಾನು ಮೇಲೆ ಬಂದೆ ಜನರನ್ನೇ ನನ್ನ ದೇವರೆಂದೆ....”

        ರಾಜ್‍ರನ್ನು ಈ ನೆಲದ ಜನ ತುಂಬಾ ಸಹಜವಾಗಿ ಪ್ರೀತಿಸಲು ಹಲವಾರು ಕಾರಣಗಳಿವೆ. ಒಂದು ಜನಪ್ರಿಯ ಮಾಧ್ಯಮವಾದ ಸಿನಿಮಾಜಗತ್ತು, ಸಂಕೀರ್ಣವಾದ ವ್ಯವಸ್ಥೆ. ಅಲ್ಲಿ ವ್ಯಕ್ತಿತ್ವವನ್ನು ಜತನಮಾಡಿಕೊಳ್ಳುವುದು ಸುಲಭವಲ್ಲ. ತಾನು, ತನ್ನಪಾತ್ರ, ಅದರ ಪ್ರಭಾವ ಮತ್ತು ಫಲಿತಗಳ ಬಗೆಗೆ ನಿರಂತರವಾದ ಎಚ್ಚರ ಅತ್ಯಗತ್ಯವಾಗಿತ್ತು. ಎಂತಹದ್ದೇ ಕಾಲದಲ್ಲೂ ತನಗೆ ಬದುಕು ನೀಡಿದ ‘ವೃತ್ತಿಗೆ’ ದ್ರೋಹ ಬಗೆಯದಂತೆ ಬದುಕುವುದು ಆದರ್ಶವಾಗಿತ್ತು. ತನ್ನನ್ನು ಗೌರವಿಸಿ ಪ್ರೀತಿ, ಬದುಕು ಎಲ್ಲವನ್ನು ಕೊಟ್ಟ ನಾಡು-ನುಡಿ ಜನಗಳ ಬಗೆಗೆ ಅಪಾರವಾದ ಋಣವನ್ನು ಹೊಂದಬೇಕಿತ್ತು. ತನ್ನವರೆಂದುಕೊಂಡ ಜನರ ಮಧ್ಯ ಬದುಕುವಾಗ ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣವಿರಬೇಕಿತ್ತು. ಇಂತಹ ಹತ್ತಾರು ಗುಣಗಳು ರಾಜ್‍ರಿಗೆ ಸಹಜವೆಂಬಂತೆ ಸಿದ್ಧಿಸಿತ್ತು. ಬದುಕಿನ ಬಗೆಗೊಂದು ನಿರಂತರವಾದ ಎಚ್ಚರವೇ ಅವರ ಮುಗ್ಧತೆಯೂ ಆಗಿತ್ತು. ಜನರ ಪ್ರೀತಿಯಲ್ಲಿ ಅದು ಮತ್ತೆ-ಮತ್ತೆ ತನ್ನನ್ನು ಪರಿಶೀಲಿಸಿಕೊಂಡ ಪ್ರಯತ್ನವಾಗಿತ್ತು.... “ಹಾಲು ಜೇನು ಒಂದಾದ ಹಾಗೆ....”

       ವೃತ್ತಿಜೀವನದ ಯಶಸ್ಸು, ಅವರನ್ನು ಬೇರೆ ಚಿತ್ರರಂಗದತ್ತಲೂ ಕರೆದಿತ್ತು. ಆದರೆ, ಅವರ ನೆಲದ ಅಭಿಮಾನ ಗಟ್ಟಿಯಾಗಿತ್ತು, ಕನ್ನಡ ಸಿನಿಮಾರಂಗ ಸವಾಲುಗಳನ್ನು ಎದುರಿಸುವ ಕಾಲಕ್ಕೆ, ನಿರ್ಮಾಪಕರ ಬಂಧುವಾಗಿದ್ದರು ಬರ, ಕ್ಷಾಮ, ಪ್ರವಾಹಗಳಂತಹ ಜನ ಸಮಸ್ಯೆ ಕಾಲಕ್ಕೆ ಸಹಾಯಕ್ಕೆ ಒದಗಿಬರುವ ಹೃದಯವಂತಿಕೆಯಿತ್ತು. ಕನ್ನಡ ಸಂಸ್ಕøತಿ-ಸಾಹಿತ್ಯ ಪರ ಕಾಳಜಿಯ ಸಿನಿಮಾಗಳ ಬಗೆಗೆ ವಿಶೇಷ ಒಲವಿತ್ತು. ಸಾಮಾಜಿಕ ಸಮಸ್ಯೆ, ಮಾನವೀಯತೆ, ವರ್ಗಸಂಘರ್ಷದಂತಹ ಸಂಗತಿಗಳು ಆದ್ಯತೆಯ ಸಂಗತಿಗಳಾಗಿದ್ದವು. ನಿರಂತರವಾಗಿ ಮನುಷ್ಯ ಸಂಬಂಧಗಳ ಕುರಿತ ಹಪ-ಹಪಿ ಅವರ ಸಿನಿಮಾಗಳ ಸಹಜ ಸಂದೇಶವಾಗಿತ್ತು. ಭಾವ-ಬಾಂಧವ್ಯದ ಮತ್ತೊಂದು ರೂಪವೇ ರಾಜ್‍ಗಿತ್ತು. “ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ....”

      ಇವೆಲ್ಲವೂ ದಿಢೀರನೆ ಆರೋಪಿಸಿಕೊಂಡದ್ದಾಗಿರಲಿಲ್ಲ. ಬದುಕು ಮಾಗಿಸಿದ ಫಲ, ಪಟ್ಟಪಾಡುಗಳು ಹಾಡಾದ ಬಗೆ, ಸಾರ್ಥಕತೆಯ ಹಂಬಲ, ನಿರಂತರ ಕಲಿಕೆಯ ವಿನಯ, ತುಂಬು ಪ್ರೀತಿಯ ಸಾಮರಸ್ಯ, ನಿರಂತರ ಅಭಿಮಾನಿಗಳೊಂದಿಗಿನ ಒಡನಾಟ ಪ್ರತೀ ಸಿನಿಮಾವನ್ನು ಮೊದಲ ಅನುಭವವೆಂದೇ ಪರಿಭಾವಿಸುವ ತಾದ್ಯಾತ್ಮತೆ, ನಿಷ್ಕಲ್ಮಷವಾದಭಾವ, ಮುಗ್ಧತೆ, ದೈವಭಕ್ತಿ ಇತ್ಯಾದಿ ಗುಣಗಳೆಲ್ಲವೂ ರಾಜ್‍ರನ್ನು ಈ ನೆಲದ ಸಾಂಸ್ಕøತಿಕ ರಾಯಭಾರಿಯಾಗಿ, ನಾಯಕನಾಗಿ ರೂಪಿಸಿತು. ವೀರಪ್ಪನ್‍ನಂತಹ ನರಹಂತಕನ ಬಳಿಯಿದ್ದು ನಲುಗಿದ ದುರಂತವೂ ರಾಜ್‍ರ ಜೀವನದಲ್ಲಿ ಘಟಿಸಿತು. “ಇದು ಯಾರು ಬರೆದ ಕತೆಯೋ ನನಗಾಗಿ ಬಂದ ವ್ಯಥೆಯೋ....”

       ಸಾವಿನ ಸಂಗತಿಯನ್ನು ಅರಗಿಸಿಕೊಳ್ಳಲಾಗದ ನಾಡಿನ ಜನತೆ ದಿಕ್ಕುತಪ್ಪಿದಂತೆ ಅರಾಜಕತೆಗೆ ತನ್ನನ್ನು ತಾನೇ ಒಡ್ಡಿಕೊಂಡದ್ದು ಇತಿಹಾಸ. ಈ ದೇಶದ ಯಾವ ನಾಯಕನನ್ನು ಕಳೆದುಕೊಂಡಾಗಲೂ ಪರಿತಪಿಸದಷ್ಟು ನೋವುಗಳು ರಾಜ್‍ರಿಂದ ದೂರಾದ ಅಭಿಮಾನಿ ದೇವರುಗಳನ್ನು ಕಾಡಿತು. ನಿಜದ ಅರ್ಥದಲ್ಲಿ ಅಭಿಮಾನಿಗಳೇ ತಮ್ಮ ‘ಅಣ್ಣ’ನ ಕೊನೆಯ ಸಂಸ್ಕಾರಮಾಡಿದಂತೆ ಋಣ ತೀರಿಸಿಕೊಂಡರು. ಇದು ಪರಸ್ಪರರ ಒಳಭಾವವೂ ಆಗಿತ್ತೇನೋ....  “ಆಡಿಸಿದಾತ ಬೇಸರ ಮೂಡಿ ಆಟಮುಗಿಸಿದ, ಸೂತ್ರವ ಹರಿದ....”

      ರಾಜ್ ಹೀಗೊಂದು ರಮ್ಯ ನೆನಪಾಗಿ, ಅದ್ಭುತ ಗಾನವಾಗಿ, ಅನನ್ಯ ಭಾವವಾಗಿ, ಸಮುದಾಯದ ಶಕ್ತಿಯಾಗಿ, ಕಾಡುವಿಕೆ ಎಂದರೆ ಅದಕ್ಕೊಂದು ಪರ್ಯಾಯವಾಗಿ ಉಳಿದು ಹೋದದ್ದು ಎಲ್ಲವನ್ನು ಮೀರಿದ್ದಾಗಿತ್ತು. ಈ ಹೊತ್ತಿನ ದುರಂತಗಳಾದ, ಜಾತಿ, ಮತ, ಪಂಗಡಗಳೇ ಮೊದಲಾದ ವಿಪರ್ಯಾಸಗಳಿಂದಾಚೆಗೆ ಎಲ್ಲರಿಂದಲೂ ಪ್ರೀತಿಸಲ್ಪಟ್ಟ ಒಬ್ಬನೇ ‘ರಾಜಕುಮಾರ’ ಕನ್ನಡಕ್ಕೆ ಒದಗಿಬಂದದ್ದು ಸಾಂಸ್ಕøತಿಕ ಕಲಾಜಗತ್ತಿನ ಭಾಗ್ಯವೆಂದರೆ ಉತ್ಪ್ರೇಕ್ಷೆಯಲ್ಲ....

      ರಣಧೀರ ಕಂಠೀರವ, ಮಯೂರ, ಶ್ರೀ ಕೃಷ್ಣದೇವರಾಯ... ಕನಕದಾಸ, ಭಕ್ತಕುಂಬಾರ.... ಕವಿರತ್ನ ಕಾಳಿದಾಸ....  ಕನ್ನಡ-ಕರ್ನಾಟಕ-ರಾಜ್ ಇದೊಂದು ಸೂತ್ರ ಭಾವೈಕ್ಯತೆಯ ಅಂಶ. 

       ಜನ್ಮಭೂಮಿ ಎಂದರೆ ಅನ್ನದ, ಋಣದ, ಅಸ್ತಿತ್ವದ ಅರ್ಥ ಎನ್ನುವುದನ್ನು ಅರಿವು ಮಾಡಿಕೊಂಡು ಅದರಂತೆಯೇ ಸಾರ್ಥಕವಾಗಿ ಬದುಕಿದ ರಾಜ್ ನಿಜದ ಅರ್ಥದಲ್ಲಿ ಈ ನಾಡಿನ ಅಣ್ಣನೇ ಹೌದಲ್ಲವೇ... ಎಚ್ಚರವಾಗಿರಬೇಕಿರುವುದು ನಮ್ಮ ಈ ಹೊತ್ತಿನ ತುರ್ತು....“ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮಇಲ್ಲಿಯೇ ಇಲ್ಲಿಯೇ...”
ಆದಷ್ಟು ಬೇಗ ಮತ್ತೆ ಹುಟ್ಟಿ ಬರಲಿ.. ನಮ್ಮ ಮುತ್ತುರಾಜ....
bottom of page