top of page

ಪ್ರೇಮ ನವೋದಯ

ಪರಿವಿಡಿ    
ಹಿನ್ನೆಲೆ                      
1. ಒಲುಮೆ      ತೀ.ನಂ. ಶ್ರೀಕಂಠಯ್ಯ   -
2. ರತ್ನನ್ ಪರ್ಪಂಚ   ಜಿ.ಪಿ. ರಾಜರತ್ನಂ    -
3. ಪ್ರೇಮಕಾಶ್ಮೀರ      ಕುವೆಂಪು        -
4. ಸಖೀಗೀತ         ದ. ರಾ. ಬೇಂದ್ರೆ        -
5. ಮೈಸೂರಮಲ್ಲಿಗೆ    ಕೆ.ಎಸ್. ನರಸಿಂಹಸ್ವಾಮಿ    -



 

ಹಿನ್ನೆಲೆ

        ನಿಸರ್ಗದ ಆದಿಮ ಸ್ವರೂಪದ ಅನನ್ಯತೆಯ ಅರಿವಿನ ಬಗೆಗೆ ಧರ್ಮ, ಸಂಸ್ಕೃತಿ, ವಿಜ್ಞಾನ, ಚರಿತ್ರೆ ತಮ್ಮ ಗ್ರಹಿಕೆಗಳಿಗನುಗುಣವಾಗಿ ವಾದಿಸಿರುವುದುಂಟು, ದಾಖಲಿಸಿರುವುದುಂಟು ಹಾಗೆಂದು ಅದಕ್ಕೆ ಒಂದು ಅಂತಿಮವಾಗಿ ಇದೇ ಸರಿ ಎನ್ನುವ ಒಂದು ಸಮರ್ಥವಾದ, ಸರ್ವಒಪ್ಪಿತವಾದ ನಿಲುವೊಂದು ಸಾಧ್ಯವಾಗಿಲ್ಲ. ಅದರರ್ಥ ನಿಸರ್ಗ ಸುಲಭಕ್ಕೆ ಯಾರಿಗೂ ದಕ್ಕುವುದಿಲ್ಲ ಎನ್ನುವುದರೊಂದಿಗೆ ಅದು ನಿತ್ಯವೂ ಗೂಢತೆಯ ಹೊಸ-ಹೊಸ ಸಾಧ್ಯತೆಗಳ ರೂಪವೇ ಆದದ್ದಿದೆ. ಜೀವಂತಿಕೆಯ ಅರ್ಥವಾದರೂ ಇದಕ್ಕಿಂತ ಮತ್ತೇನಾಗಿರುವುದು ಸಾಧ್ಯ?. ಅಂತಹ ಅಗಾಧತೆಯ ಒಂದು ಭಾಗ ಜೀವರಾಶಿ, ಅವುಗಳಲ್ಲಿ ‘ಮಾನವ’ ಎನ್ನುವ ವಾಹಿನಿಯ ಸೂತ್ರ ಒಂದು ಸೂಕ್ಷ್ಮ ಅಂಶ.

         ಏಕಕೋಶಜೀವಿಯ ಉತ್ಕರ್ಷವೆಂಬಂತೆ ಮಾನವನ ಮೂಲವನ್ನು ಹೇಳುವುದಾದರೂ ವಿಕಾಸವಾದಕ್ಕೊಂದು ಸುದೀರ್ಘ ಚರಿತ್ರೆಯಿದೆ. ಅದು ಯುಗಗಳನ್ನು ದಾಟಿ ನಿಜದ ಅಸ್ತಿತ್ವದೆಡೆಗೆ ಚಲಿಸಿದ ಮಹಾ ಪ್ರಯತ್ನ. ಅಂತೂ ಇಂತೂ ಎನ್ನುವಂತೆ ‘ಮನುಷ್ಯ’ ಮೇಲ್‍ಸ್ತರದಲ್ಲಿ ದಾಖಲಾದದ್ದು ಸತ್ಯ. ಅದರಲ್ಲಿಯೂ ಪರಿಪೂರ್ಣತೆಯ ಸಾಧ್ಯತೆ ಕಂಡದ್ದು ಗಂಡು-ಹೆಣ್ಣು ಎನ್ನುವ ವೈವಿಧ್ಯತೆಯೊಂದಿಗೆ ಎರಡು ಭಿನ್ನವಾದ ಸ್ವತಂತ್ರಜೀವ ಎನ್ನುವ ಹೊತ್ತಿಗೂ ಅವುಗಳ ‘ಪರಸ್ಪರತೆ’ ‘ಒಂದಾಗುವಿಕೆ’ಯಲ್ಲಿ ಅರ್ಥವನ್ನು ಕಂಡುಕೊಂಡಿತು. ಅದು ಮುಂದಿನ ಪರಂಪರೆಯ ರೂಪಕವೂ ಆಯಿತೆನ್ನಬಹುದು.
 
         ದೈಹಿಕವಾದ ಭಿನ್ನತೆ ಗಂಡು-ಹೆಣ್ಣನ್ನು ಮೇಲ್ನೋಟಕ್ಕೆ ರೂಪಿಸಿತು ಎನ್ನುವಾಗಲು ಅದಕ್ಕನುಗುಣವಾಗಿ ಇವರದ್ದೇ ಎನ್ನಬಹುದಾದ ಒಂದಷ್ಟು ಸ್ವಭಾವ-ಗುಣಗಳೂ ಒದಗಿಬಂದದ್ದು ಕುತೂಹಲಕರ. ಇದು ನಾವು ಅಂದುಕೊಂಡ ‘ಪರಸ್ಪರ’ ಎಂಬುವಲ್ಲಿಗೆ ಆಕರ್ಷಣೆಯಾಗಿಸುವ ಸಾಧ್ಯತೆಯೂ ಇದ್ದಿರಬಹುದು. ಇದು ಅವರಿಬ್ಬರ ನಡುವಿನ ಹೆಚ್ಚು-ಕಡಿಮೆ ಎನ್ನುವ ವಾದವಲ್ಲ. ಪೂರಕ ಎನ್ನುವುದಷ್ಟೆ. ದೈಹಿಕರಚನೆ, ಬಲಾಬಲ, ಸಾಧ್ಯಾಸಾಧ್ಯತೆಗಳೆಲ್ಲವೂ ವಿಭಿನ್ನವಾಗಿಯೇ ಇದ್ದರೂ ಅವರವರ ಮಿತಿ-ವ್ಯಾಪ್ತಿಯ ಮಾನದಂಡವೂ ವಿಶಿಷ್ಟವಾಗಿತ್ತು. ‘ಒಂದು ಗಂಡಿಗೊಂದು ಹೆಣ್ಣು’ ಎನ್ನುವುದು ಅನಿವಾರ್ಯತೆಯ ಅರ್ಥವಾಗಿಯೂ ಪರಿಭಾವಿಸಲ್ಪಟ್ಟದ್ದು ಇಂದಿಗೂ ಹಾಗೇ ಅನ್ನಿಸಿದರೂ ಇಲ್ಲಿ ಸಮಾನತೆಯ ಸಮನ್ವಯತೆಯಲ್ಲಿ ತೊಂದರೆಗಳಿವೆ.

         ಒಟ್ಟಾರೆಯಾಗಿ ಹೆಣ್ಣು-ಗಂಡು ಎನ್ನುವುದು ಮುಂದಿನ ಏನೆಲ್ಲವೂ ಸಾಧ್ಯವೋ ಅದನ್ನೆಲ್ಲಾ ಉಳಿಸಿ ಬೆಳಸಿಕೊಳ್ಳಬೇಕಿದ್ದ ಸ್ವರೂಪವೇ ಆಗಬೇಕಿತ್ತು. ಮೊದಲಲ್ಲಿ ಗಮನಿಸಿದ ಹಾಗೆ ಈ ಬಗೆಯ ಸಂಬಂಧವನ್ನು ಕೇವಲ ಎರಡು ವಿಭಿನ್ನ ಜೀವಗಳ ಆಕರ್ಷಣೆಯ ಅರ್ಥದಲ್ಲಷ್ಟೇ ನೋಡದೆ ‘ಪರಸ್ಪರ’ ಎನ್ನುವುದನ್ನು ಒಂದು ವಿಶಿಷ್ಟ ಭಾವಗ್ರಹಿಕೆಯಾಗಿಯೇ ಗುರುತಿಸಬೇಕಿತ್ತು. ಅದು ‘ಪ್ರೇಮ’ ಎನ್ನುವುದು ಸರ್ವವಿಧಿತ.

         ಪ್ರೇಮ ಒಂದು ವ್ಯವಸ್ಥಿತ ಯೋಚನೆ ಮತ್ತು ಯೋಜನೆ. ಮನುಷ್ಯನ ಬದುಕು ಪ್ರಾಣಿಜಗತ್ತಿಗಿಂತ ಭಿನ್ನ ಎನ್ನುವುದರ ಅರ್ಥವೇ ಈ ಬಗೆಯದಾಗಿರುತ್ತದೆ. ಇದೊಂದು ಅಲಿಖಿತ ನಿಯಮದಂತೆ ನೈತಿಕತೆಯ ಹೆಸರಿನಿಂದ ಆರಂಭಕ್ಕೆ ರೂಪಿಸಲ್ಪಟ್ಟಿತೆಂದುಕೊಳ್ಳಬಹುದು. ಇದು ಮುಂದೆ ಭಾರತೀಯ ಸಮಾಜಕ್ಕೆ, ಕುಟುಂಬ ವ್ಯವಸ್ಥೆಗೊಂದು ಅಡಿಪಾಯವೇ ಆದದ್ದು ವಿಶೇಷ. ಪಾಶ್ಚಾತ್ಯರ ಸಡಿಲವೂ ಸರಳವೂ ಆದ ಗಂಡು-ಹೆಣ್ಣಿನ ಸಂಬಂಧಗಳೂ ವ್ಯವಹಾರದಂತೆಯೂ ಭಾವಿಸಲ್ಪಡುವ ಹೊತ್ತಿಗೆ ಬದುಕಿನುದ್ದಕ್ಕೂ ಒಂದು ಜೋಡಿ ಸಾರ್ಥಕವಾಗಿ ಬದುಕಿಬಿಡುವ ಭಾರತೀಯ ಸಮಾಜ ಇತರರಿಗೆ, ಕುತೂಹಲವೂ ಆದರ್ಶವು ಆದದ್ದು ಸಹಜವೇ ಆಗಿತ್ತು.

         ಶ್ರೀಸಾಮಾನ್ಯರ ಬದುಕು ನಿಸರ್ಗವನ್ನು, ಅದರಾಚೆಗಿನ ಶಕ್ತಿಯನ್ನು ದೈವವೆಂದು ಒಪ್ಪಿಕೊಂಡು ಗೌರವಿಸಿದ್ದು ಈಗಾಗಲೇ ಸರ್ವವೇದ್ಯ. ಅದು ತನ್ನ ಸಂಬಂಧಗಳ ಸಾಧ್ಯತೆಗೂ ದೈವವನ್ನು, ಧರ್ಮವನ್ನು ವಿಸ್ತರಿಸಿಕೊಂಡದ್ದು ಗಮನಾರ್ಹ. ತನ್ಮೂಲಕ ಕುಟುಂಬ-ಸಮಾಜಗಳ ಬಾಂಧವ್ಯವೂ ಮತ್ತಷ್ಟು ಗಟ್ಟಿಯಾಗುವುದು ಸಾಧ್ಯವಾಯಿತು. ಗಂಡು-ಹೆಣ್ಣಿನ ಸಂಬಂಧವೂ ಜನ್ಮ-ಜನ್ಮಾಂತರದ ಬಂಧನ ಎನ್ನುವ ಭಾವುಕ ನಂಬಿಕೆಗೂ ಇದು ವಿಸ್ತರಿಸಲ್ಪಟ್ಟಿತು. ಮುಂದೆ ಕುಟುಂಬದ, ಸಮಾಜದ ಯಜಮಾನನೆಂದು ‘ಪುರುಷ’ನೇ ಪ್ರತಿಬಿಂಬಿಸಲ್ಪಟ್ಟಾಗ ಎರಡನೇ ಸ್ಥಾನಕ್ಕೆ ಇಳಿದ ಹೆಣ್ಣಾದರು ತನ್ನ ‘ಭದ್ರತೆ’ಯ ರೂಪವಾಗಿಯೂ ಗಂಡನ್ನು ಭಾವಿಸಿಕೊಂಡು ಗೃಹಕೃತ್ಯವನ್ನು ಹಕ್ಕಾಗಿಸಿಕೊಂಡದ್ದು, ಸಹಜವೆನ್ನುವಂತೆ ಘಟಿಸಿಬಿಟ್ಟಿತು. ಅದರೊಂದಿಗೆ ದುಡಿಯುವ ಹೊಣೆಗಾರಿಕೆ ಗಂಡಸಿನ ಹೆಗಲೇರಿತು. ಒಳ-ಹೊರ ಸಮನ್ವಯದ ರೂಪದಿಂದಲೂ ‘ಪರಸ್ಪರತೆ’ಗೆ ವಿಶೇಷ ಅರ್ಥವೇ ಒದಗಿಬಂದಿತು. ತಮ್ಮ ಬದುಕಿನ ಬಹುಮುಖ್ಯ ಕಾಲವನ್ನು ತುಸು ಸುದೀರ್ಘ ಎನ್ನುವಂತೆಯೇ ಜೊತೆಯಾಗಿ ಕಳೆಯುವಾಗ ಅನ್ಯೂನ್ಯತೆ ಅನಿವಾರ್ಯವೂ ಕೊನೆಗೆ ಅದು ಅನುಬಂಧದ ರೂಪವೂ ಆಗಿದ್ದಿರಬಹುದು. ಇದು ಹೊಂದಾಣಿಕೆಯ ಮಹತ್ವದ ಫಲಿತವೂ ಆಗಿತ್ತೆನ್ನಬಹುದು. ಅಂದರೆ ನಿಸರ್ಗನ್ಯಾಯ ಜೀವಜಾಲದ ಪರಂಪರೆಯನ್ನು ಉಳಿಸಿ, ಬೆಳೆಸಿ, ಭವಿಷ್ಯತ್ತಿಗೂ ಅರ್ಥವನ್ನು ಪರಿಕಲ್ಪಿಸಿದ್ದು ಹೆಣ್ಣು-ಗಂಡು ಜೊತೆ ಸಾಗುವುದರೊಂದಿಗೆ ಮಾತ್ರ ಎನ್ನುವ ಮೂಲಕ ಸಮಾನತೆಯ ಅರ್ಥವನ್ನು ಪ್ರತಿಪಾದಿಸಿತ್ತು. ಜೈವಿಕಸಂಬಂಧಕ್ಕೆ ವಿಶೇಷ ಆಯಾಮವು ಒದಗಿಬಂತು.
 
        ಗಂಡು-ಹೆಣ್ಣಿನ ನಡುವಿನ ಅನುಬಂಧಕ್ಕೆ ದೈಹಿಕ-ಮಾನಸಿಕ ಆಕರ್ಷಣೆ ಮುಖ್ಯವಾದ ಮಾರ್ಗವೂ ಆಯಿತು. ‘ಸೌಂದರ್ಯ’ ಎನ್ನುವುದಕ್ಕೆ ವಿಶೇಷ ಅರ್ಥ ಒದಗಿಬಂತು. ಅದು ದೈಹಿಕ ಮತ್ತು ಮಾನಸಿಕ ರೂಪವೆರಡರ ಸಂದರ್ಭಕ್ಕೆ ವಿಶಿಷ್ಟವೂ ವ್ಯಕ್ತಿನಿಷ್ಟವೂ ಆದ ಹಲವು ಸಾಧ್ಯತೆಗಳಿಗೆ ಅವಕಾಶನೀಡಿತು.
 
        ‘ಪ್ರೇಮ’ ಎನ್ನುವುದನ್ನು ಈ ಮೇಲಿನ ಕೆಲವು ಮಾತುಗಳಿಂದ ಸರಳೀಕರಿಸಿಕೊಂಡು ಅರ್ಥೈಸಿಕೊಳ್ಳಬಹುದು. ಮನುಷ್ಯನ ಹಲವಾರು ಆಲೋಚನೆಗಳಲ್ಲಿ ‘ಭಾವುಕತೆ’ ಬಹುಮುಖ್ಯವಾದುದು. ಇದು ‘ಪರಸ್ಪರ’ ಎನ್ನುವಂತೆ ಮನುಷ್ಯನೊಂದಿಗೆ ಇತರ ಜೀವ ಜಡವಸ್ತುಗಳ ಜೊತೆಗೂ ಒಂದು ಆತ್ಮೀಯತೆಯನ್ನು ರೂಪಿಸುವಂತಹುದು. ಅಂದರೆ ಯಾಂತ್ರಿಕತೆಯ ಅಪಾಯದಾಚೆಗೆ ಬದುಕುವ ಅವಕಾಶವನ್ನು ಹುಡುಕಿಕೊಳ್ಳುವಂತಹುದು. ಪರಿಚಯ, ಸ್ನೇಹ, ನಂಬಿಕೆ, ವಿಶ್ವಾಸ ಇವೇ ಮೊದಲಾದ ಹಲವು ರೂಪುಗಳಿಂದ ಬದುಕುವ ಸಾಧ್ಯತೆಗಳನ್ನು ಮತ್ತಷ್ಟು ವಿಶಿಷ್ಟವೆನ್ನುವಂತೆ ವಿಸ್ತರಿಸಿಕೊಳ್ಳಬಹುದಾದುದು.

         ಒಬ್ಬರಿಗೊಬ್ಬರು ಅನಿವಾರ್ಯ ಮತ್ತು ಆಕರ್ಷಣೆ ಎಂಬಂತೆ ಗಂಡು-ಹೆಣ್ಣು ಹಲವು ವಿಭಿನ್ನ ಯೋಚನೆಗಳ ಸಂದರ್ಭದಲ್ಲಿಯೂ ‘ಹೊಂದಾಣಿಕೆ’ಯ ಮೂಲಕ ಸಹನೀಯವೆನ್ನಬಹುದಾದ ರೀತಿಯಲ್ಲಿ ಭಾವಒಪ್ಪಂದ ಮಾಡಿಕೊಂಡಂತೆ ಜೊತೆಯಾಗುವುದು ‘ಸಂಬಂಧ’ವಾಗುವ ಹೊತ್ತಿಗೆ ‘ಪ್ರೇಮ’ದ ಹೆಸರಿನಿಂದಲೇ ಗುರುತಿಸಲ್ಪಟ್ಟಿತು. ಎಲ್ಲವನ್ನು ವಿಶಿಷ್ಟ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಭಾರತೀಯ ಮನಸ್ಸು ಈ ಬಗೆಯ ಗಂಡು-ಹೆಣ್ಣಿನ ಸಂಬಂಧವನ್ನು ಜನ್ಮಾಂತರಗಳ ಅರ್ಥದಿಂದಲೂ ದೈವೀಕತೆಯ ಸ್ವರೂಪದಿಂದಲೂ ಗುರುತಿಸಲು ಯತ್ನಿಸಿತೆನ್ನುವುದು ಈಗ ಇತಿಹಾಸ ಮತ್ತು ಪುರಾಣವೂ ಹೌದು.

         ಮನುಷ್ಯ ಸಂಬಂಧಗಳೇ ಶ್ರೇಷ್ಠ ಎನ್ನುವುದು ಯಾರೂ ಯಾವ ಕಾರಣದಿಂದಲೂ ನಿರಾಕರಿಸಬಹುದಾದುದಲ್ಲ. ಸಂಸ್ಕೃತಿ ನಾಗರೀಕತೆಯೇ ಮೊದಲಾದ ಪರಂಪರೆಯ ಅಭಿವೃದ್ಧಿಯ ಬದುಕು ಉನ್ನತೀಕರಣಗೊಳ್ಳುವ ಉತ್ಕರ್ಷವಾದರೂ ಮನುಷ್ಯ ಜೀವನವನ್ನೇ ಕೇಂದ್ರೀಕರಿಸಿಕೊಂಡದ್ದು ಹಾಗಾಗಿ ಪ್ರತೀ ನಡೆ, ನುಡಿ, ಆಚರಣೆ, ನಂಬಿಕೆಗಳಿಗೂ ಇಲ್ಲಿ ಅದರದ್ದೇ ಮಹತ್ವವಿದೆ. ಅದರ ಕಾರಣವೂ ಮತ್ತೇ ಬದುಕಿನ ಪ್ರೀತಿಯನ್ನು ಕುರಿತದ್ದೇ ಆಗಿರುತ್ತದೆ. ಅಂದರೆ ‘ಮಾನವಜನ್ಮ ದೊಡ್ಡದು’ ಹಾಗಾಗಿ ಸಾರ್ಥಕತೆಯ ಹಂಬಲವೇ ನಿರಂತರ ಮತ್ತು ಸಹಜ.

         ಭಾರತೀಯ ಸಾಹಿತ್ಯ ಸಂಸ್ಕøತಿಯ ದಾಖಲೆಗಳಲ್ಲಿ, ಸೃಜನಶೀಲ ಕಲ್ಪನೆಗಳಲ್ಲಿ, ಸ್ವೋಪಜ್ಞ ಬದುಕಿನಲ್ಲಿ, ಕ್ರಿಯಾಶೀಲ ನಂಬಿಕೆಗಳಲ್ಲಿ ಪ್ರೇಮದ ಪ್ರಪಂಚ ದೊಡ್ಡದು. ಗಂಡು-ಹೆಣ್ಣಿನ ಸಂಬಂಧಗಳಾಚೆಗೆ ವಿಶಿಷ್ಟವಾದುದು ಮತ್ತೇನೋ ಇದೆ ಎನ್ನುವುದನ್ನು ಒಪ್ಪಲಾರದಷ್ಟು ವಿಸ್ತøತವಾದ ಆಯಾಮ ಒಲುಮೆಯ ನಂಬಿಕೆಗಿದೆ. ಹಾಗಾಗಿಯೂ ಇಲ್ಲಿ ಗಂಡು-ಹೆಣ್ಣಿನ ಸಂಬಂಧ ಕೇವಲ ಆಸೆ, ಕಾಮನೆ, ಸುಖ ಎಂಬೆಲ್ಲಾ ಕ್ಷಣಿಕ, ಕಾಲದ ದಾಹ-ಹಸಿವಿನ ಅರ್ಥದಲ್ಲಿ ನಿಂತಿಲ್ಲ. ಅದು ಎಲ್ಲ ಪರಿಪೂರ್ಣತೆಯ ಅರ್ಥವೂ ಆಗಿದೆ. ಈ ನೆಲದ ಆದಿಮಕಾವ್ಯ ಮೌಖಿಕ, ಅಕ್ಷರ ಪರಂಪರೆಗಳಲ್ಲೆಲ್ಲಾ ಗಂಡು-ಹೆಣ್ಣಿನ, ಬದುಕಿನ ಸಂಬಂಧಗಳೇ ಪ್ರಧಾನ ಅರ್ಥವನ್ನು, ನೆಲೆಯನ್ನು, ವಿವರ-ವಿಶ್ಲೇಷಣೆಯನ್ನು ಪಡೆದುಕೊಂಡಿವೆ. ಇದರಿಂದ ಕನ್ನಡವೂ ಹೊರತಾಗಿಲ್ಲ.

         ಈ ದೇಶದ ಆದಿಮ ಕಾವ್ಯ ರಾಮಾಯಣದ ಕೇಂದ್ರವಿರುವುದೇ ರಾಮ-ಸೀತೆಯರ ಪಾತ್ರಗಳಲ್ಲಿ. ಸೀತೆಯ ಮೇಲಿನ ರಾವಣನ ವ್ಯಾಮೋಹ, ಅವನ ಮೇಲೆ ರಾಮನ ಗೆಲುವು, ಆದರ್ಶ ದಾಂಪತ್ಯದ ಗಂಡು-ಹೆಣ್ಣಿನ ಸಂಬಂಧಗಳ ಸಾರ್ಥಕತೆಯ ಫಲಿತ. ಪ್ರೇಮವೆನ್ನುವುದು ಪರಸ್ಪರ ಎನ್ನುವುದರ ಅರ್ಥವೇ ಇದು. ಮಹಾಭಾರತದ ರೂಪ ಇದಕ್ಕಿಂತ ಭಿನ್ನವಾದುದಲ್ಲ. ದ್ರೌಪತಿಯ ಮೇಲಿನ ಶೋಷಣೆ ಇಡೀ ಕೌರವರನ್ನು ಬಲಿಕೇಳುತ್ತದೆ. ಮಹಾಭಾರತದ ಮತ್ತೊಂದು ಮಹತ್ವದ ಭಾಗವೇ ಆದ ಕೃಷ್ಣಕತೆಯಲ್ಲಿಯೂ ಕೃಷ್ಣ ಈ ನೆಲದ ಆದರ್ಶ ಪ್ರೇಮದ ಸಂಕೇತವಾಗಿಯೇ ಹೊರಹೊಮ್ಮುತ್ತಾನೆ. ಅವನ ರಾಧೆಯೊಂದಿಗಿನ ಸಂಬಂಧ ನಮ್ಮ ಸಾಮಾನ್ಯ ನಂಬಿಕೆಗಳ ಚೌಕಟ್ಟನ್ನೆಲ್ಲಾ ಮೀರಿ ಒಂದು ಅಪರೂಪದ ಹಾಗೆಯೇ ಅನನ್ಯವೆನ್ನಬಹುದಾದ ಸಾರ್ಥಕ ಸಂಬಂಧವನ್ನು ಅಮರಪ್ರೇಮದ ಹೆಸರಲ್ಲಿ ದಾಖಲಿಸಿಬಿಡುತ್ತದೆ.
 
          ಸಾಮಾನ್ಯ ಗ್ರಹಿಕೆಗೆ ನಿಲುಕದಿರುವ ಆದರೆ ಮನುಷ್ಯಸಂಬಂಧಗಳಲ್ಲಿ ವಿಶೇಷವಾಗಿ ಗಂಡು-ಹೆಣ್ಣಿನ ಸಂಬಂಧಗಳಲ್ಲಿ ಅಪರೂಪದ ವೈಶಿಷ್ಟ್ಯತೆಯೂ ಸಾಧ್ಯವಾಗಬಹುದಾದ ಅನಂತತೆಯ ಹಾದಿಯನ್ನು ರಾಧಾ-ಕೃಷ್ಣರ ಪ್ರೇಮ ತೆರೆಯುತ್ತದೆ. ಅವರನ್ನು ಕುರಿತ ವಿವೇಚನೆ, ವಿಶ್ಲೇಷಣೆ ತೀರಾ ವಿಭಿನ್ನವೂ ಕೆಲವೊಮ್ಮೆ ವಿಡಂಬನೆಯೂ ವ್ಯಂಗ್ಯವೂ ಆಗಿದ್ದಿರಬಹುದು ಆದರೆ ಅದನ್ನು ಗ್ರಹಿಸಬೇಕಿರುವ ಆದರ್ಶವೇ ಭಿನ್ನವಾದುದು, ಅದಕ್ಕಿರುವ ಆಧ್ಯಾತ್ಮಿಕ ನೆಲೆ ಮತ್ತಷ್ಟು ವಿಶಿಷ್ಟವಾದುದು. ಹಾಗಾಗಿಯೇ ರಾಧಾಕೃಷ್ಣ ಭಾರತೀಯ ಸಾಹಿತ್ಯ-ಸಂಸ್ಕೃತಿಯನ್ನು ಅಪಾರವಾಗಿಯೇ ಕಾಡಿದ್ದಾರೆ.

        ವಿಶ್ವಸಾಹಿತ್ಯ ಪರಂಪರೆಯಲ್ಲಿ ಸ್ಥಾನಪಡೆದ ಕಾಳಿದಾಸನ ನಾಟಕಗಳು ಮಹತ್ವ ಪಡೆದದ್ದೇ ತಮ್ಮ ರಮ್ಯಪ್ರೇಮ ಕಥಾನಕಗಳ ಕಾರಣಕ್ಕೆ. ರಾಧಾ-ಕೃಷ್ಣರ ಕಥನವನ್ನು ಹೊರತುಪಡಿಸಿದರೆ ಈ ನೆಲವನ್ನು ಕಾಡಿದ ಮತ್ತೊಂದು ರಮ್ಯ ಕಥಾನಕ ದುಷ್ಯಂತ-ಶಕುಂತಲೆಯರ ಪ್ರೇಮ. ಬಾಣಭಟ್ಟನ ಶ್ರೇಷ್ಠ ಕೃತಿ ‘ಕಾದಂಬರಿ’ ಮಹಾಶ್ವೇತೆ-ಪುಂಡರೀಕರ ಅದಮ್ಯಪ್ರೇಮವನ್ನು ಜನ್ಮಾಂತರಗಳ ನೆಲೆಯಲ್ಲಿ ಹಿಡಿದಿಡುತ್ತದೆ. ಅಂದರೆ ಒಟ್ಟಾರೆಯಾಗಿ ಈ ಮಣ್ಣಿನ ಗುಣವೇ ಪ್ರಕೃತಿ-ಪುರುಷ ಎಂಬ ಸತ್ಯದ ಮುಖಾ-ಮುಖಿಯ ರೂಪದಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು, ಅದರ ಮೂಲ ಸ್ವರೂಪವಾದ ಪ್ರೇಮವನ್ನು ದೈವೀಕವೆಂದು ಪರಿಭಾವಿಸಿಕೊಂಡಿದೆ ಅದು ಈ ದೇಶದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದೆ. ‘ಶೃಂಗಾರ’ವನ್ನು ರಸಗಳ ರಾಜ ಎಂದೂ ಗುರುತಿಸುವುದಾದರೂ ಇದೇ ಕಾರಣದಿಂದ. ಒಂದೇ ಮಾತಿನಲ್ಲಿ ಹೇಳಬಹುದಾದರೆ, ಬಹುಶಃ ‘ಪ್ರೇಮ’ದ ಲೇಪವಿಲ್ಲದ ಕಥಾನಕವಿಲ್ಲ. ಒಂದು ವೇಳೆ ಹೀಗೊಂದು ಪ್ರೇಮತತ್ವ ಇರದೇ ಇದ್ದಿದ್ದರೆ ಸಾಹಿತ್ಯಕ್ಕೆ ಇಂತಹ ವಿರಾಟಸ್ವರೂಪ ಸಾಧ್ಯವಾಗುತ್ತಿತ್ತೆ ಎಂದುಕೊಂಡರೂ ಉತ್ತರ ಸುಲಭವಿಲ್ಲ. ಇದನ್ನು ವಿಶ್ವಸಾಹಿತ್ಯದ ಸಂದರ್ಭದಲ್ಲಿಯೂ ಸಹಜವಾಗಿಯೇ ಹೇಳಬಹುದು.

         ಈ ಬಗೆಯ ಪ್ರಾತಿನಿಧಿಕ ಮಾತುಗಳೊಂದಿಗೆ ಕನ್ನಡ ಸಾಹಿತ್ಯದ ಆರಂಭಕಾಲಕ್ಕೆ ಅಂದರೆ ನವೋದಯ ಸಾಹಿತ್ಯದ ಸಂದರ್ಭಕ್ಕೆ ಪ್ರೇಮವಸ್ತು ಪ್ರಭಾವಬೀರುವ ಬಗೆಯನ್ನು ವಿವೇಚಿಸುವ ಪ್ರಯತ್ನವಿದಾಗಿದೆ..... ಗಂಡು-ಹೆಣ್ಣಿನ ಸಂಬಂಧ ಈ ನೆಲದ ಸಹಜ ಸ್ವರೂಪವಾಗಿ ಅದು ದಾಂಪತ್ಯದ ರೂಪದಿಂದ ಸಮಾಜವನ್ನು, ತನ್ಮೂಲಕ ಸಂಸ್ಕೃತಿಯನ್ನು ರೂಪಿಸಿಕೊಂಡದ್ದು ಈಗ ಇತಿಹಾಸ. ಅಮಾನವೀಯವಾದ ಜಾತಿಕಲ್ಪನೆಯ ಆಚೆಗೂ ಈ ದೇಶದಲ್ಲಿ ಗಂಡು-ಹೆಣ್ಣಿನ ಸಂಬಂಧದ ಸ್ವರೂಪದಲ್ಲಿ ಏಕರೂಪತೆ ಕಾಯ್ದುಕೊಂಡದ್ದು ವಿಶೇಷವೆಂದೇ ಹೇಳಬಹುದು ಇದು ಮಿತಿಗಳನ್ನು ಮೀರಿದ ವ್ಯಾಪಕತೆ.

        ಹೀಗೊಂದು ಬಾಂಧವ್ಯ ಒಂದು ‘ಮನೆ’ಯ ಹೆಸರಿನಲ್ಲಿ ಸಾಧ್ಯವಾಗದಿದ್ದರೆ ಪ್ರಾಣಿಗಳಿಗಿಂತ ಭಿನ್ನವಾದ ಬದುಕು ನಮ್ಮದಾಗುವಂತಿರಲಿಲ್ಲ. ‘ಸಂತಾನ’ಗಳು ದಾಂಪತ್ಯದ ಫಲಿತಗಳಾಗಿ, ಆಸ್ತಿಯಾಗಿ ಅದು ದೇಶದ ಪರಂಪರೆಯಾಗುವಂತಿರಲಿಲ್ಲ. ಆದ್ದರಿಂದಲೇ ‘ಭಾವನೆ’ಗಳಿಗೂ ‘ಭಾವುಕತೆ’ಗೂ ಮತ್ತಷ್ಟು ವಿಶಿಷ್ಟ ಆಯಾಮಗಳು ಒದಗಿಬಂದಿವೆ. ಸಂಬಂಧಗಳಲ್ಲಿ ಕಾಣಿಸಿಕೊಳ್ಳುವ ತೊಡಕು, ಅಂತರ, ಮನಸ್ತಾಪ ಇತ್ಯಾದಿಗಳನ್ನು ಹೇಗೋ ಮೀರಿಕೊಂಡು, ಹೊಂದಾಣಿಕೆಮಾಡಿಕೊಂಡು ಬದುಕುವುದು ಈ ನೆಲದ ಗಂಡು-ಹೆಣ್ಣುಗಳಿಗೆ ಸಾಧ್ಯವಾಗಿದೆ. ವಿವಾಹದಂತಹ ವ್ಯವಸ್ಥೆ ಸಮುದಾಯದ, ಸಮಾಜದ ಒಪ್ಪಿತವಾದ ಬಂಧನವಾಗಿ ಅದಕ್ಕೊಂದು ನೈತಿಕತೆಯ ಚೌಕಟ್ಟನ್ನು, ಸಾಮಾಜಿಕ ಮನ್ನಣೆಯನ್ನು, ಮುಂದೆ ಕಾನೂನಿನ ರಕ್ಷಣೆಯನ್ನು ನೀಡುವುದಾಗಿದೆ.

        ಹೀಗೊಂದು ಸಾರ್ಥಕ ಸಂಬಂಧದ ಬಂಧ ಹಲವು ಭಾವಗಳ ನಡುವಿನ ಅನುಸಂಧಾನ. ಅವುಗಳೆಲ್ಲದರ ಮೂಲ ಉದ್ದೇಶವಾದರೂ ಸಾರ್ಥಕತೆಯ ಹಂಬಲವೇ ಆಗಿರುತ್ತದೆ. ಸಹಜವಾಗಿಯೇ ‘ಪ್ರೇಮ’ದಂತಹ ಭಾವ ಈ ನೆಲದ ಸಾಹಿತ್ಯದ ಮೂಲ ಆಕರವಾಗಿದೆ. ಕನ್ನಡಸಾಹಿತ್ಯವೂ ಇದರಿಂದ ಹೊರತಲ್ಲ ಬಹುಪಾಲು ಎಲ್ಲಾ ಕವಿಗಳನ್ನು ಇದು ಕಾಡಿಯೇ ಇದೆ.   

        ಆಧುನಿಕ ಕನ್ನಡದ ಮೊದಲ ಕಾಲಘಟ್ಟವಾದ ನವೋದಯದಲ್ಲಿ ಜೀವನಪ್ರೀತಿಯ ಗಾಢತೆಯಿಂದ ಪ್ರೇಮದಂತಹ ವಸ್ತು ಕವಿಗಳ ಮಹತ್ವದ ಆಕರವಾಗಿದೆ. ಬೇಂದ್ರೆ, ಕುವೆಂಪು, ತೀ.ನಂ.ಶ್ರೀ, ಕೆ.ಎಸ್.ನ ಅವರಂತಹ ಕವಿಗಳು ಪ್ರೇಮ ಕವನಸಂಕಲನಗಳನ್ನೇ ಪ್ರಕಟಿಸಿದ್ದಾರೆ. ರಾಜರತ್ನಂ ಅವರ ರತ್ನನ ಪದಗಳ ಸಂಕಲನದಲ್ಲಿಯೂ ಪ್ರೇಮದ ವಿಶಿಷ್ಟ ಜಗತ್ತಿದೆ. ಈ ಕವಿಗಳ ಪ್ರೇಮ ಚಿಂತನೆಯ ಆಯಾಮಗಳನ್ನು ಅವರ ಕವಿತೆಗಳ ಮೂಲಕ ಗುರುತಿಸುವ ಪ್ರಯತ್ನವಿದು. ತನ್ಮೂಲಕ ಇಂದು ಸಡಿಲಗೊಳ್ಳುತ್ತಿರುವ ಮಾನವೀಯ ಸಂಬಂಧಗಳು ಸಂಕೀರ್ಣಗೊಂಡು ಯಾಂತ್ರೀಕರಣಗೊಂಡ ಗಂಡು-ಹೆಣ್ಣಿನ ಸಂಬಂಧಗಳು ಮತ್ತು ಮುಖ್ಯವಾಗಿ ಆಧುನಿಕ ಬದುಕು ಎಲ್ಲವನ್ನು ವ್ಯವಹಾರಗೊಳಿಸಿದೆ.
 
       ‘ಪ್ರೇಮ’ವನ್ನು ಕಾಲಕಳೆಯುವ, ಹಗುರಾಗಿಯೇ ಪರಿಭಾವಿಸುವ, ಎಲ್ಲೋ ಒಂದೆಡೆ ಗಟ್ಟಿತನಗಳು ಕರಗಿಹೋಗಿ ಸ್ವೇಚ್ಛೆಯು ಪ್ರೇಮದ ಭಾವವೇ ಎಂದುಕೊಳ್ಳುತ್ತಿರುವ ಅಪಾಯವನ್ನು ಯುವಜನತೆ ಆಪ್ತವಾಗಿಯೇ ಸ್ವೀಕರಿಸುತ್ತಿರುವ ದುರಂತಗಳು ಘಟಿಸುತ್ತಿವೆ. ಈ ಹಿನ್ನೆಲೆಯಲ್ಲಿಯೂ ನಮ್ಮ ಹಿಂದಿನ ತಲೆಮಾರು ಹೇಗೋ ಸಾರ್ಥಕವಾಗಿ ಪ್ರೇಮ-ಶೃಂಗಾರಗಳನ್ನೆ ಪರಿಭಾವಿಸಿತ್ತು ಎನ್ನುವುದನ್ನು ಕುರಿತಂತೆ ಅವಲೋಕಿಸುವ ಸಣ್ಣಪ್ರಯತ್ನವೂ ಇದಾಗಿದೆ. ಬದುಕು ದೊಡ್ಡದು, ಜೀವನಪ್ರೀತಿ ಅನಿವಾರ್ಯ, ನಾವು ತೀರಾ ಯಂತ್ರದಂತೆ ಜೀವಿಸಬೇಕಿಲ್ಲ ಎಂಬ ಕಳಕಳಿಯೇ ಇಲ್ಲಿನ ಪ್ರಧಾನ ಆಶಯವಾಗಿದೆ.

 
bottom of page