top of page

ಮನೆಯೊಳಗಿನ ಮಾಯೆ

ಪರಿವಿಡಿ
1.    ಅಗತ್ಯತೆಯ ಹಾದಿ¬
2.    ಧಾರಾವಾಹಿಗಳು
3.    ಮುಂಜಾನೆ
4.    ಮಧ್ಯಾಹ್ನದ ಕಾರ್ಯಕ್ರಮಗಳು
5.    ಸಂಜೆಯ ಧಾರಾವಾಹಿಗಳು
6.    ಚಲನಚಿತ್ರ ಕೇಂದ್ರಿತ ಕಾರ್ಯಕ್ರಮಗಳು
7.    ಚಲನಚಿತ್ರಗೀತೆಗಳು
8.    ಸಿನಿಮಾ ಸಂಬಂಧಿ ಪೂರಕ ಕಾರ್ಯಕ್ರಮಗಳು
9.    ಹಾಸ್ಯ ಕುರಿತ ಕಾರ್ಯಕ್ರಮಗಳು
10.    ‘ರಿಯಾಲಿಟಿ’ ಪ್ರದರ್ಶನಗಳು
11.    ವಿಶೇಷ ಕಾರ್ಯಕ್ರಮಗಳು
12.    ಸುದ್ದಿ ವಾಹಿನಿಗಳು
13.    ಮಕ್ಕಳ ಮೀಸಲು ವಾಹಿನಿಗಳು
14.    ಪೂರಕ ಸಂಗತಿಗಳು


 

ಅಗತ್ಯತೆಯ ಹಾದಿ

       ಸಾಮಾನ್ಯವಾಗಿ ಯಾವುದೇ ಅನ್ವೇಷಣೆ ನಿರ್ದಿಷ್ಟವಾಗಿ ತಾನು ಅಂದುಕೊಂಡ ಹಾದಿಯಲ್ಲಿ ಸಾಗುವಾಗಲೂ ಮತ್ತೇನೋ ಹೊಸತನ್ನು, ಆವಿಷ್ಕರಿಸಿಬಿಡಬಹುದು. ಅಂದರೆ ಜ್ಞಾನದ ಹಾದಿಯೇ ಅಂತಹದ್ದು ಇಲ್ಲಿ ಯಾವುದಕ್ಕೂ ತುದಿ, ಕೊನೆಯೆಂಬುವುದು ಸುಲಭವಿಲ್ಲ. ವಿಜ್ಞಾನ ಮತ್ತು ಅನ್ವೇಷಣೆ ಪರಸ್ಪರ ಎಂದುಕೊಳ್ಳುವಾಗಲೇ ಅದು ಹತ್ತಾರು ವಿಕ್ರಮಗಳಿಗೆ ಸಾಕ್ಷಿಯಾಗಿದೆ. ಅದು ಯಾವುದೇ ಮಿತಿಯಲ್ಲಿ ಗುರುತಿಸಿ ಇಷ್ಟೇ ಎಂದುಬಿಡಬಹುದಾದುದಲ್ಲ. ಅದರ ಉದ್ದೇಶವಾದರೂ ಅಷ್ಟೇ ಸಾಮಾನ್ಯತೆಯನ್ನು ದಾಟಿ ಅನಂತತೆಯತ್ತ ಸಾಗಿಬಿಡುತ್ತದೆ.

         ಮೊದಲಿಗೆ ಟಿ.ವಿ. ಅನ್ವೇಷಣೆಯಾದಾಗ ಅದರ ಬಳಕೆಯ ಸಾಧ್ಯತೆಗೂ ಒಂದು ಮಿತಿ ಇದ್ದಿರಲೇಬೇಕು. ಅದೊಂದು ಅಗತ್ಯ ಅನಿವಾರ್ಯತೆಯ ರೂಪವೇ ಆಗಿದ್ದಿರಬಹುದು. ಅದು ಮನೆ-ಮನೆಯ ಮನರಂಜನೆಯ ಸಾಧನವಾದದ್ದು ಅದರ ಅಸ್ತಿತ್ವದ ಉತ್ಕರ್ಷವೇ ಆಗಿಬಿಟ್ಟಿತೇನೋ ಎನಿಸುತ್ತದೆ.

         ಸುಮಾರು 1920ರಿಂದ ಈಚೆಗೆ ವಾಣಿಜ್ಯ-ವ್ಯವಹಾರದ ಭಾಗವಾದಂತೆ ದೂರದರ್ಶನ ಸುದ್ದಿ ಮಾಹಿತಿ, ಮನರಂಜನೆ, ಜಾಹಿರಾತು ಇತ್ಯಾದಿ ವಿಚಾರಗಳ ಒಂದು ಮಾಧ್ಯಮವಾಗಿ ಮುಕ್ತವಾಯಿತು. ಅಂದು ಹಾಗೆ ಆರಂಭವಾದ ಪ್ರಯೋಗ ಇಂದಿಗೆ ತಂತ್ರಜ್ಞಾನದ ಬಹುಪಾಲು ಎಲ್ಲಾ ಬಗೆಯ ಸಾಧ್ಯತೆಗಳಲ್ಲೂ ಅಂದರೆ ದೂರವಾಣಿಯಿಂದ ಅಂತರ್ಜಾಲದವರೆವಿಗೂ ಅಂಗೈ ಅಳತೆಯ ಮೊಬೈಲ್ ಫೋನ್‍ನಲ್ಲಿಯೂ ತನ್ನನ್ನು ಅನಿವಾರ್ಯತೆಯ ರೂಪವೆಂಬಂತೆ ಉಳಿಸಿ-ಬೆಳೆಸಿಕೊಂಡಿದೆ. ಅದರಲ್ಲಿಯೂ ವಿಶೇಷವಾದ ಉನ್ನತೀಕರಿಸಿದ ತಂತ್ರಜ್ಞಾನ ದಿನೇ ದಿನೇ ಹೊಸ-ಹೊಸ ರೂಪದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುತ್ತಿದೆ. ಜಗತ್ತು ವ್ಯವಹಾರಕೇಂದ್ರಿತವಾದಂತೆಲ್ಲ, ಅದು ನೇರವಾಗಿ ಎಲ್ಲರನ್ನು ತಲುಪುವ ಮುಖ್ಯ ಮಾಧ್ಯಮವಾಗಿ ಇದರಾಚೆಗೆ ಬೇರೊಂದು ಅವಕಾಶವಿಲ್ಲ ಎಂಬಷ್ಟು ಗಟ್ಟಿಯಾಗಿ ದಾಖಲಾಗಿದೆ. ‘ದೃಶ್ಯ’ ರೂಪವೇ ಸಾರ್ವಕಾಲಿಕ ಖಚಿತವೂ ಅರ್ಥಪೂರ್ಣವೂ ಆದ ಅಂಶವಾಗುವುದಿಲ್ಲಿ ಗಮನಾರ್ಹ.

        ಆರಂಭಕ್ಕೆ ದೂರದರ್ಶನವೆನ್ನುವುದು ಇಲ್ಲಿನ ಜನರ ಕನಸಾಗಿತ್ತು. ದೊಡ್ಡವರ, ಶ್ರೀಮಂತರ ಮನೆಗಳಲ್ಲಿ ಪ್ರತಿಷ್ಠೆಯ ಸಂಗತಿಯಾಗಿಯೇ ಇದು ಪರಿಗಣಿಸಲ್ಪಟ್ಟಿತ್ತು. ‘ರಾಷ್ಟ್ರೀಯ ಜಾಲದಲ್ಲಿ’ ಕೇಂದ್ರ ಮತ್ತು ರಾಜ್ಯದ ರಾಜಧಾನಿಗಳಲ್ಲಿ ಪ್ರಸರಣ ಕೇಂದ್ರಗಳು ಸ್ಥಾಪಿಸಲ್ಪಟ್ಟು, ಮರುಪ್ರಸರಣ ಕೇಂದ್ರಗಳ ಮೂಲಕವೇ ಮುಖ್ಯ ಸ್ಥಳಗಳಲ್ಲಷ್ಟೇ ಇದರ ಲಭ್ಯತೆಯಿತ್ತು. ಹಾಗಾಗಿ ಇದು ಉಳ್ಳವರನ್ನು ಮಾತ್ರ ತಲುಪುವ ಸಾಧನವಾಯಿತು. ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಎತ್ತರಕ್ಕೆ ಅಳವಡಿಸಲ್ಪಟ್ಟ ಅಂಟೆನಾಗಳು ಸಾಮಾನ್ಯರ ಕಣ್ಣಿನಲ್ಲಿ ಆ ಮನೆಯವರ ಹಿರಿತನದ ವೈಭವವನ್ನು ಅಚ್ಚರಿಯಿಂದ ಕಲ್ಪಿಸಿಕೊಳ್ಳುವಂತಿತ್ತು. ಕೆಲವೇ ವರ್ಷಗಳಲ್ಲಿ ಅದು ಶ್ರೀಸಾಮಾನ್ಯ ಎನಿಸಿಕೊಂಡ ಕಟ್ಟಕಡೆಯ ಮನುಷ್ಯನನ್ನು ತಲುಪುವಂತಾಯ್ತು ಇದು ದೂರದರ್ಶನದ ಯಶಸ್ಸಿನ ಕ್ರಾಂತಿಯೆಂದೇ ಹೇಳಬಹುದು....
 
         ಆಧುನಿಕತೆ ಎನ್ನುವುದು ಅಭಿವೃದ್ಧಿಯ ಅನಿವಾರ್ಯತೆಯ ಅಂಶವೇ ಹೌದು. ತಂತ್ರಜ್ಞಾನದ ಉತ್ಕರ್ಷವಾದಂತೆಲ್ಲ ಅದು ಮಾಹಿತಿ ವಿಜ್ಞಾನದ ರೂಪವೂ ಆಗುವುದು ಗಮನಾರ್ಹ. ಎಲ್ಲರಿಗೂ ಎಲ್ಲ ಬಗೆಯ ಅರಿವುಗಳು ದಕ್ಕಬೇಕಿರುವುದು ಆಧುನಿಕ ಬದುಕಿನ, ಸಮಾಜದ, ದೇಶದ, ಅತ್ಯವಶ್ಯಕ ಅಂಶವೆಂದೇ ಪರಿಗಣಿಸಲ್ಪಟ್ಟಿದೆ ಹಾಗಾಗಿಯೂ ‘ಮಾಧ್ಯಮ’ ಲೋಕದಲ್ಲಿ ದೃಶ್ಯಮಾಧ್ಯಮವಾದ ದೂರದರ್ಶನ(ಟಿ.ವಿ) ಸಹಜವಾಗಿಯೇ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದೆ. ದೃಶ್ಯ ಮತ್ತು ಶ್ರವ್ಯ ಆಯಾಮಗಳೆರಡನ್ನು ಬಳಸಿಕೊಂಡ ದೂರದರ್ಶನ ಸಹಜವಾಗಿಯೇ ಎಲ್ಲರನ್ನು ತಲುಪಬಹುದಾದ ಸಾಧನವಾಯ್ತು. ಆದ್ದರಿಂದಲೇ ಕ್ರಾಂತಿಕಾರಕ ಸ್ವರೂಪದಲ್ಲಿ ಅದರ ಯಶಸ್ಸು ಸುಲಭ ಮತ್ತು ಸರಳ ಎನಿಸುವಂತಾಯ್ತು. ಪ್ರಯೋಗದ ಮೊದಲ ಹಂತದಲ್ಲಿ ಆಡಳಿತದ ನೆಲೆಯಲ್ಲಿದ್ದದ್ದು ನಂತರ ನಿಧಾನವಾಗಿ ವಿಲಾಸಿತನದ ರೂಪವಾಗಿ ಉಳ್ಳವರ ಹೆಮ್ಮೆಯಾಗುತ್ತಲೇ ಕ್ರಮೇಣ ಅನಿವಾರ್ಯತೆಯ ಅರ್ಥದಲ್ಲಿ ಎಲ್ಲ ಸಾಮಾನ್ಯರ ಬದುಕಿನ ಅವಿಭಾಜ್ಯತೆಯ ಅಂಶವಾಗಿಯೇ ಪರಿಗಣಿತವಾಗಿದೆ. ಇದು ಮೊದಲಲ್ಲಿ ಗಮನಿಸಿದಂತೆ ‘ದೃಶ್ಯ’ ಎನ್ನುವುದಕ್ಕಿದ್ದ ಪರಿಣಾಮಕಾರಿಯಾದ ಪ್ರಭಾವವೇ ಆಗಿದೆ ಎನ್ನಬಹುದು.

        ಭಾರತದಂತಹ ದೇಶದಲ್ಲಿ ಕಿರುತೆರೆ ಈ ಹೊತ್ತಿಗೆ ಉಂಟುಮಾಡಿರುವ ಕಲರವ ಅಷ್ಟು ಸುಲಭದ ಮಾತುಗಳಲ್ಲಿ ಹೇಳಬಹುದಾದುದಲ್ಲ. ಇದರಾಚೆಗೆ ಮನರಂಜನೆ ಎನ್ನುವುದನ್ನು ಸಮಗ್ರತೆಯ ರೂಪದಲ್ಲಿ ಗ್ರಹಿಸುವುದಾಗದು ಕಿರುತೆರೆ ಬಿಟ್ಟಂತೆ ಬಹುಜನರಿಗೆ ಬದುಕುವುದು ಸಾಧ್ಯವೇ ಇಲ್ಲವೇನೋ ಎಂಬ ವಿಚಿತ್ರ ಮತ್ತು ವಿಷಮ ಪರಿಸ್ಥಿತಿಯೊಂದು ನಿರ್ಮಾಣವಾಗಿರುವಲ್ಲಿಯೇ ಅದರ ವ್ಯಾಪಕತೆಯನ್ನು ಗ್ರಹಿಸಬಹುದಾಗಿದೆ.

       ಕಿರುತೆರೆಯ ಮೊದಲ ದಿನಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿಯೇ ರೂಪುಗೊಂಡಿತು. ಆಕಾಶವಾಣಿಯಂತೆಯೇ ಒಂದು ವಿಶಿಷ್ಟ ಅಸ್ತಿತ್ವದೊಂದಿಗೆ ಆರಂಭಗೊಂಡ ‘ದೂರದರ್ಶನ’ ತನ್ನ ಮೊದಲ ದಿನಗಳಿಂದಲೇ ಅಭಿವೃದ್ಧಿಯ ಹಾದಿಯಲ್ಲಿ ದಾಪುಗಾಲಿಟ್ಟಿತೆಂದೇ ಹೇಳಬಹುದು. ರಾಷ್ಟ್ರೀಯವಾಹಿನಿ ಆದ ಕಾರಣದಿಂದಲೂ ನಿಗದಿತ ಸಮಯಗಳ ಕಾರ್ಯಕ್ರಮಕ್ಕೆ ಒತ್ತುನೀಡಿದಂತೆ ಜ್ಞಾನ, ವಿಜ್ಞಾನ, ಕೃಷಿ, ಸಮಾಚಾರ, ಸಂಸ್ಕøತಿ -ಹೀಗೆ ಒಂದಿಷ್ಟು ಆರೋಗ್ಯಕರವಾದ ಕಾರ್ಯಕ್ರಮಗಳನ್ನು ಜನರಿಗೆ ನೀಡುವ ಮೂಲಕ ಯಶಸ್ವಿ ನಡೆಯೇ ಆಗಿತ್ತೆನ್ನಬಹುದು. ಸಿನಿಮಾ, ನಾಟಕ, ಧಾರಾವಾಹಿ -ಹೀಗೆ ಮನರಂಜನೆಯ ಅಂಶಗಳನ್ನು ಮುಖ್ಯವಾಗಿಸಿಕೊಂಡು ನಿಗದಿತ ಸಮಯ, ದಿನ ಎಂಬೆಲ್ಲಾ ಚೌಕಟ್ಟಿನೊಂದಿಗೆ ಗಂಭೀರವಾದ ಪ್ರಯತ್ನಗಳನ್ನು ಜವಾಬ್ದಾರಿಯಿಂದಲೇ ನಿರ್ವಹಿಸುವುದಾಗಿತ್ತೆನ್ನುವುದು ಸ್ಮರಣಾರ್ಹ.

        ಹೀಗೊಂದು ರಾಷ್ಟ್ರೀಯ ಪ್ರಜ್ಞೆಯ ನೆರಳಲ್ಲಿ ಕೆಲಸ ನಿರ್ವಹಿಸುವ ಪ್ರತೀ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ, ಸಾಮಾಜಿಕ ಕಳಕಳಿ, ಸಾರ್ವತ್ರಿಕ ಬದ್ಧತೆಗಳೇ ಮೊದಲಾದ ಕೆಲವು ಅಂಶಗಳ ಕಡೆಗೆ ಒಂದಿಷ್ಟು ಎಚ್ಚರದಿಂದ ಗಮನಿಸುವುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ದೂರದರ್ಶನದ ಆರಂಭದ ಹೆಜ್ಜೆಗಳು ಖಂಡಿತಾ ಮಹತ್ವಪೂರ್ಣವೇ ಆಗಿದ್ದವೆನ್ನುವುದು ನಿರ್ವಿವಾದ. ರಾಷ್ಟ್ರೀಯ ಜಾಲದ ಕಾರ್ಯಕ್ರಮಗಳು ಹಿಂದಿಯಂತಹ ಭಾಷೆಯನ್ನು ಸಾಮಾನ್ಯರಿಗೂ ಸಂವಹಿಸುವಷ್ಟರ ಮಟ್ಟಿಗೆ ಕಲಿಸುವ ಕೆಲಸವನ್ನು ತೀರಾ ಸಹಜವಾದ ನೆಲೆಯಲ್ಲಿಯೇ ನಿರ್ವಹಿಸಿತ್ತೆನ್ನುವುದು ಗಮನಾರ್ಹವಾದುದು.

        ಕಾರ್ಯಕ್ರಮಗಳ ಪ್ರಸಾರದಲ್ಲಿ, ಅವುಗಳ ಆಯ್ಕೆಯ ವಿಚಾರದಲ್ಲಿ ಒಂದು ನಿರ್ದಿಷ್ಟಮಾನದಂಡವನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುವಾಗ ಅಲ್ಲಿ ಸಹಜವಾಗಿಯೇ ಎಚ್ಚರಿಕೆಯೊಂದು ಕೆಲಸಮಾಡುತ್ತಿರುತ್ತದೆ. ಹಾಗೆಯೇ ಅದು ಪ್ರೇಕ್ಷಕರಿಂದಲೂ ಪ್ರತಿಕ್ರಿಯೆ ಪಡೆದು  ಅದರ ಹಿನ್ನೆಲೆಯಲ್ಲಿ ಯಶಸ್ಸನ್ನು, ಒಳಿತು-ಕೆಡುಕಿನ ನಿಲುವುಗಳನ್ನು ಪರಿಶೀಲಿಸುವುದರಿಂದ ಜವಾಬ್ದಾರಿಯೆನ್ನುವುದು ಪರಸ್ಪರರ ನೆಲೆಯಿಂದಲೂ ವ್ಯಕ್ತವಾಗುವಂತಿರುತ್ತದೆ. ಇಂದಿಗೂ ಆ ಮೊದಲ ದಿನದ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುವ ಸಾಧ್ಯತೆಗಳಿರುವಲ್ಲಿಯೇ ಅದರ ಯಶಸ್ಸನ್ನು ಊಹಿಸಬಹುದು. ಪ್ರೇಕ್ಷಕರ ಜ್ಞಾನವರ್ಧನೆಯ ನೆಲೆಯಲ್ಲಿಯೇ ದೂರದರ್ಶನ ಕೆಲಸ ನಿರ್ವಹಿಸಿತ್ತೆನ್ನುವುದು ಮುಖ್ಯವಾದುದು, ವಿದ್ಯಾರ್ಥಿಗಳು, ಉದ್ಯೋಗಿಗಳು, ಕೃಷಿಕರು, ಗೃಹಿಣಿಯರು, ವೃದ್ಧರು -ಎಂಬೆಲ್ಲಾ ವರ್ಗಗಳನ್ನು ಆಧರಿಸಿಯೂ ಕಾರ್ಯಕ್ರಮಗಳು ರೂಪುಗೊಂಡಿದ್ದವೆನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು.

          ಮೊದಲಿಗೆ ರಾಷ್ಟ್ರೀಯ ಜಾಲದಲ್ಲಿ ಇಡೀ ದೇಶದಲ್ಲಿ ಮರು ಪ್ರಸಾರಣ ಕೇಂದ್ರಗಳು ಸ್ಥಾಪನೆಗೊಂಡು ಕಾರ್ಯನಿರ್ವಹಿಸಿದವು. ಅದರ ಯಶಸ್ಸು ಮತ್ತು ಅವಶ್ಯಕತೆಯ ಸ್ವರೂಪವನ್ನು ಮನಗಂಡ ನಂತರಕ್ಕೆ ಪ್ರಾದೇಶಿಕವಾಹಿನಿಗಳನ್ನು ರೂಪಿಸುವ ತುರ್ತನ್ನು ಅರ್ಥೈಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದದ್ದು ಈ ನೆಲದ ಕ್ರಾಂತಿ ಎಂದೇ ಪರಿಗಣಿಸಬಹುದಾದುದು.

          ಇಂದಿಗೂ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಆಕಾಶವಾಣಿ ಆಧುನಿಕತೆಯ, ಜಾಗತೀಕರಣದ ಎಲ್ಲ ಸ್ಪರ್ಧೆಯ ಆತಂಕಗಳ ನಡುವೆಯೂ ತನ್ನ ಅಸ್ತಿತ್ವವನ್ನು ಆರೋಗ್ಯಕರವಾಗಿಯೇ ಕಾಪಾಡಿಕೊಂಡಿರುವುದಿಲ್ಲಿ ಉಲ್ಲೇಖನೀಯ. ಅಂತೆಯೇ ದೂರದರ್ಶನವು ನಿಜಕ್ಕೂ ತನ್ನ ಘನತೆಯನ್ನು ಕಾಯ್ದುಕೊಂಡಿರುವುದು ಈ ದೇಶದ ಪ್ರಜೆಗಳ ಅಭಿಮಾನದ ರೂಪವೆಂದೇ ಭಾವಿಸಬಹುದು.
ಪ್ರತೀ ರಾಜ್ಯ ಮತ್ತು ರಾಜ್ಯಭಾಷೆಗಳನ್ನು ಗಮನದಲ್ಲಿರಿಸಿಕೊಂಡಂತೆ ಪ್ರಾದೇಶಿಕ ಜಾಲದಲ್ಲಿ ಕಾರ್ಯಕ್ರಮಗಳು ರೂಪುಗೊಂಡು ಅದಕ್ಕೆ ಪೂರಕವಾದ ಪ್ರಾದೇಶಿಕ ಕೇಂದ್ರಗಳು ಕಾರ್ಯನಿರ್ವಹಿಸತೊಡಗಿದಾಗ ಅವುಗಳ ನಿರ್ದಿಷ್ಟವಾದ ಗುರಿ ಮತ್ತು ಉದ್ದೇಶಗಳೊಂದಿಗೆ ಸಾಗಿದವು.
       
         ಕೇಂದ್ರದೂರದರ್ಶನದ ಅಂಗಸಂಸ್ಥೆಗಳಾಗಿ ಪ್ರಾಂತೀಯ ಕೇಂದ್ರಗಳು ಪ್ರಾದೇಶಿಕ-ಪರಿಸರ ಮತ್ತು ಪ್ರಜ್ಞೆಗಳಿಗನುಗುಣವಾಗಿ ಕಾರ್ಯನಿರ್ವಹಿಸುತ್ತಲೇ ಪ್ರೇಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕ್ರಮ ಅನುಕರಣೀಯವೇ ಆಗಿತ್ತು. ದೇಶಿಯ ಭಾಷೆ, ಸಂಸ್ಕೃತಿ, ಕಲೆ ಎಂಬೆಲ್ಲಾ ಅರಿವುಗಳೊಂದಿಗೆ ಅನುಸಂಧಾನ ನಡೆಸುವಂತಹ ಮಹತ್ಕಾರ್ಯವನ್ನು ಪ್ರಾದೇಶಿಕ ಕೇಂದ್ರಗಳು ನಡೆಸಿದವು ಎನ್ನುವುದು ಗಮನಾರ್ಹ. ಇದರೊಂದಿಗೆ ರಾಷ್ಟ್ರೀಯ ಜಾಲವೂ ಪ್ರಾದೇಶಿಕ ಕಾರ್ಯಕ್ರಮಗಳೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡದ್ದು, ಏಕಕಾಲಕ್ಕೆ ರಾಜ್ಯ ಮತ್ತು ರಾಷ್ಟ್ರಗಳೆರಡನ್ನು ಭಾವೈಕ್ಯತೆ ಮತ್ತು ರಾಷ್ಟ್ರೀಯತೆಯ ನೆಲೆಯಲ್ಲಿ ಅರ್ಥೈಸಿದ್ದು ಅಪರೂಪದ ಸಂಗತಿಯೇ ಹೌದು.

         ಕೇವಲ ರಾಷ್ಟ್ರೀಯ ಜಾಲವೇ ಇದ್ದ ಕಾಲದಲ್ಲಿಯೂ ಪ್ರಾದೇಶಿಕ ನೆಲೆಯಲ್ಲಿಯೂ ವಿಶೇಷಕಾರ್ಯಕ್ರಮಗಳು ಎಲ್ಲರನ್ನು ಮುಟ್ಟುವ ಗಂಭೀರ ಪ್ರಯತ್ನ ನಡೆಸಿದ್ದನ್ನಿಲ್ಲಿ ನೆನೆಯಬಹುದು. ಇಂತಹ ಕಾರ್ಯಕ್ರಮ ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ನಡೆದರೂ ಅದಕ್ಕಾಗಿ ಬಹುನಿರೀಕ್ಷೆಯಿಂದ ಕಾಯ್ದು ಕುಳಿತಿರುತ್ತಿದ್ದ ಸಹೃದಯರು ಅದನ್ನು ಅಭಿಮಾನವಾಗಿಯೂ ಪರಿಭಾವಿಸುತ್ತಿದ್ದರು, ಇಂದು ಇಷ್ಟರಮಟ್ಟಿಗೆ ಕಿರುತೆರೆ, ನೂರಾರು ವಾಹಿನಿಗಳ ರೂಪದಲ್ಲಿ ಇಡೀ ದೇಶವನ್ನು ಹೆಚ್ಚೇ ಎನ್ನಿಸುವಷ್ಟು ಪ್ರಭಾವಿಸಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾದ ಪಾಲು ಅಂದಿಗೆ ‘ದೂರದರ್ಶನ’ ಉಂಟುಮಾಡಿದ ಪ್ರಭಾವಕ್ಕೆ ಸಲ್ಲಬೇಕು ಎನ್ನುವುದಿಲ್ಲಿ ನಿರ್ವಿವಾದ.

        ‘ರಾಷ್ಟ್ರೀಯತೆ’ ಎನ್ನುವುದು ಒಂದು ದೇಶದ ಅತ್ಯಗತ್ಯವಾದ ನಂಬಿಕೆ ಮತ್ತು ಮೌಲ್ಯ ಎನ್ನುವುದಾದರೆ ಅಂತಹದ್ದನ್ನು ಗಟ್ಟಿಗೊಳಿಸುವಲ್ಲಿ ದೃಶ್ಯಮಾಧ್ಯಮವಾಗಿ ‘ದೂರದರ್ಶನ’ ಯಶಸ್ವಿಯಾದ ಕಾರ್ಯವನ್ನೇ ನಿರ್ವಹಿಸಿದೆ. ‘ದೂರದರ್ಶನ’ದ ಮೊದಲ ದಿನಗಳಲ್ಲಿ ‘ಹಿಂದಿ’ ಭಾಷೆಯನ್ನು ಕೇಂದ್ರವಾಗಿಸಿಕೊಂಡೇ ಕಾರ್ಯಕ್ರಮಗಳನ್ನು ಬಿತ್ತರಿಸುವ ಕಾಲಕ್ಕೆ ಜನರು ಅದನ್ನು ಕುತೂಹಲ ಮತ್ತು ಪ್ರೀತಿಯಿಂದಲೇ ನೋಡಿದ್ದರಲ್ಲಿ ‘ಭಾರತೀಯತೆ’ ಎನ್ನುವುದೇ ಮುಖ್ಯವಾಗಿತ್ತೆನ್ನುವುದು ಗಮನಾರ್ಹ. ನಿಧಾನವಾಗಿ ಪ್ರಭಾವಶಾಲಿ ಮಾಧ್ಯಮವಾಗುವತ್ತ ಚಲಿಸುತ್ತಿದ್ದ ‘ದೂರದರ್ಶನ’ ನಿರೀಕ್ಷೆ ಮೀರಿಯೇ ಭಾರತದಲ್ಲಿ ಸಂಚಲನವನ್ನುಂಟುಮಾಡಿ ಅದು ಮನ-ಮನೆಗಳಲ್ಲಿ ಪ್ರತಿಷ್ಠೆಯ ಸಂಗತಿಯಾಗಿಯೇ ತನ್ನನ್ನು ಗುರುತಿಸಿಕೊಂಡಿತು.

         ಮೊದಲಲ್ಲಿ ಗಮನಿಸಿದ ಹಾಗೆ ಅದು ಶ್ರೀಮಂತರ ವಿಲಾಸಿತನ ಎನ್ನುವುದನ್ನು ಮೀರಿ ಶ್ರೀಸಾಮಾನ್ಯರ ಅಗತ್ಯತೆಯ ರೂಪವಾಗಿಯೇ ಪರಿಭಾವಿಸಲ್ಪಟ್ಟಿತು.

        ಅಂದಿಗೆ ಹೀಗೊಂದು ದೃಶ್ಯಮಾಧ್ಯಮವೆನ್ನುವುದು ನೇರವಾಗಿ ‘ನಾಟಕ’ ಎನ್ನುವುದಾಗಿದ್ದರೆ ಅದರಾಚೆಗೆ ಆಧುನಿಕತೆಯ ಫಲಿತವಾಗಿ ‘ಹಿರಿತೆರೆ’ ಸಿನಿಮಾದ ಹೆಸರಿನಲ್ಲಿ ಜನಪ್ರಿಯವಾಗಿತ್ತು. ಅಂದರೆ ಮನರಂಜನೆ ಎನ್ನುವುದು ಅನ್ನಿಸಿದ ಕೂಡಲೇ ಒದಗುವ ವಿಚಾರವಾಗಿರಲಿಲ್ಲ ಅದಕ್ಕಾಗಿ ಒಂದಿಷ್ಟು ಕಸರತ್ತಿನ ಅವಶ್ಯಕತೆಯಿತ್ತು ಅದು ವೈಯಕ್ತಿಕವಾದ ಕೆಲವು ಶ್ರಮವನ್ನು ಕೇಳುತ್ತಿತ್ತು, ಒಂದು ಸಣ್ಣ ಮಾನಸಿಕ ಸಿದ್ಧತೆಯಂತು ಖಂಡಿತಾ ಅನಿವಾರ್ಯವೇ ಆಗಿತ್ತು. ಹಾಗಿರುವಾಗ ಮನೆಯೊಳಗೆ ಹೀಗೊಂದು ‘ಕಿರುತೆರೆ’ ತಮ್ಮದ್ದೇ ಆಗಿ ಕೈಗೆಟುಕುವಂತೆ ಮನರಂಜನೆ, ಜ್ಞಾನ-ಮಾಹಿತಿಗಳ ಆಕರವಾಗುವುದು ಒಂದು ಅಚ್ಚರಿ ಮತ್ತು ಸಾರ್ಥಕ ಭಾವವೇ ಆಗಿತ್ತು. ತನ್ನ ಅನುಕೂಲತೆಯ ಸಾಧ್ಯತೆಯನ್ನು ತೀರಾ ಸರಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮನುಷ್ಯ ಹೀಗೆ ಯಾವುದೇ ವಸ್ತು ಆಪ್ತ ಎನಿಸುವಾಗಲೂ ಅದರ ಪರವಾಗಿ ನಿಲ್ಲುವುದು ಮೂಲಭೂತಗುಣಗಳಲ್ಲಿ ಒಂದೆನ್ನಬಹುದು.

        ಪ್ರಜಾಪ್ರಭುತ್ವದಂತಹ ನಮ್ಮ ರಾಷ್ಟ್ರದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ವಿಚಾರಗಳಿಗೆ ಸಂಬಂಧಿಸಿದಂತೆ ಅರಿವುಮಾಡಿಕೊಳ್ಳುವ ಹಕ್ಕು ಎಲ್ಲರದ್ದು ಆಗಿರುತ್ತದೆ. ಇದು ಸಹಜವಾಗಿಯೇ ‘ದೂರದರ್ಶನ’ದ ಮೂಲಕ ಎಲ್ಲರಿಗೂ ಮತ್ತಷ್ಟು ಹತ್ತಿರವಾದ ಅರಿವಾಗಿತ್ತು. ಈ ಮೊದಲು ಗಮನಿಸಿದಂತೆ ದಿನೇ ದಿನೇ ಈ ಕಿರುತೆರೆಯ ವ್ಯಾಪ್ತಿ ಹಿರಿದಾಗತೊಡಗಿತು. ಅದು ತನ್ನ ಕಾರ್ಯಕ್ರಮ ವೈವಿಧ್ಯತೆಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿತು. ‘ಮನರಂಜನೆ’ ಎನ್ನುವುದಕ್ಕೆ ತುಂಬಾ ಸುಲಭವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಕೈಗೆಟುಕುವ ಅವಕಾಶ ಮುಕ್ತವಾಯಿತು.
 
          ಮುಂದುವರಿದಂತೆ ಪ್ರೇಕ್ಷಕರ ಅಭಿರುಚಿ ಮತ್ತು ಮನೋಭಾವವನ್ನು ಗುರುತಿಸಿದಂತೆ ಕಾರ್ಯಕ್ರಮಗಳು ರೂಪಿಸಲ್ಪಟ್ಟವು. ಹೀಗೆ ಕಾರ್ಯಕ್ರಮಗಳ ಸ್ವರೂಪದ ಹಿನ್ನೆಲೆಯಲ್ಲಿ ‘ದೂರದರ್ಶನ’ವನ್ನು ಗಮನಿಸಿದರೆ ಅದು ನಿಜಕ್ಕೂ ಒಂದು ಸಾಂಸ್ಕೃತಿಕ ರಾಯಭಾರಿಯಂತೆಯೇ ಕೆಲಸ ನಿರ್ವಹಿಸಿತೆನ್ನುವುದು ನಿರ್ವಿವಾದ ಎಲ್ಲಾ ವಯೋಮಾನದವರನ್ನು ಗಮನದಲ್ಲಿರಿಸಿಕೊಂಡೇ ಸಾಮಾಜಿಕ ಸ್ವಾಸ್ಥ್ಯವನ್ನು ಎಚ್ಚರದಿಂದ ಕಾಯ್ದುಕೊಳ್ಳುವ ಗಂಭೀರ ಪ್ರಯತ್ನಗಳಿಲ್ಲಿ ನಡೆದವು. ಬಹುಪಾಲು ಎಲ್ಲಾ ಕಾರ್ಯಕ್ರಮಗಳು ಒಂದಿಲ್ಲೊಂದು ಅರಿವಿನ ಭಾಗವಾಗಿ, ಶುದ್ಧಮನರಂಜನೆಯ ರೂಪಗಳಾಗಿಯೇ ಪ್ರಾಯೋಜಿಸಲ್ಪಟ್ಟವು. ಒಟ್ಟಾರೆಯಾಗಿ ದೂರದರ್ಶನ ಪ್ರತೀ ಮನೆ-ಮನೆಗಳಲ್ಲಿ ಒಂದು ವಿಶಿಷ್ಟವಾದ ‘ಪಾತ್ರ’ವಾಗಿಯೇ ಕಾರ್ಯನಿರ್ವಹಿಸತೊಡಗಿತು. ನಿಜವಾದ ನೆಲೆಯಲ್ಲಿ ‘ದೂರದರ್ಶನ’ ಕಡಿಮೆ ಅವಧಿಯಲ್ಲಿ ಹೆಚ್ಚನ್ನು ಸಾಧಿಸಿದ ಹಿರಿಮೆಗೂ ಪಾತ್ರವಾಯಿತು.

        ಸಮಸ್ಯೆಗಳು ಆರಂಭವಾದದ್ದು, ಕಿರುತೆರೆಯು ಸರ್ಕಾರಿಸ್ವಾಮ್ಯದ ಮಿತಿಯನ್ನು ದಾಟಿದಂತೆ ಖಾಸಗಿಯಾಗಿ ಸ್ಥಾಪನೆಗೊಳ್ಳುವಾಗ ಮುಕ್ತನೀತಿ ಎಲ್ಲಾ ಪರಿಸರವನ್ನು ಆವರಿಸಿಕೊಂಡಂತೆ ಮನೆ-ಮನೆಗಳ ಮನರಂಜನೆ ಲೋಕವನ್ನೂ ಆವರಿಸಿಕೊಂಡವು. ಜಾಗತೀಕರಣ-ಮುಕ್ತಮಾರುಕಟ್ಟೆಯ ಪ್ರಭಾವ ಕಿರುತೆರೆಯನ್ನು ತುಸುಹೆಚ್ಚೇ ಎನ್ನಿಸುವಂತೆ ಆವರಿಸಿಕೊಂಡಂತಾಯ್ತು ‘ಖಾಸಗಿ’ ಎನ್ನುವುದು ಬಹುಪಾಲು ನೂರಕ್ಕೆ ನೂರು ವ್ಯವಹಾರವಲ್ಲದೆ ಬೇರೇನು? ‘ಕಿರುತೆರೆ’ಯೂ ಬಹುಬೇಗ ಉದ್ಯಮವಾಗುವತ್ತ ದಾಪುಗಾಲಿಟ್ಟಿತು.

         ಸಾಮಾನ್ಯವಾಗಿ ಯಾವುದೇ ‘ಖಾಸಗಿ’ ಎನ್ನುವ ಸಂಸ್ಥೆಗಳು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದಾಗ ಸರ್ಕಾರಗಳು ಅವುಗಳಿಗೆ ಮಾನ್ಯತೆ ನೀಡುವಲ್ಲಿ ಎಚ್ಚರವನ್ನು ವಹಿಸುವುದು ಸಹಜ. ಅದು ತನ್ನ ನಾಗರೀಕರ ಹಿತಾಸಕ್ತಿಯನ್ನು ಖಂಡಿತಾ ಗಮನದಲ್ಲಿರಿಸಿಕೊಂಡೇ ಇರುತ್ತದೆ. ಅದು ಕಿರುತೆರೆಯ ಸಂದರ್ಭದಲ್ಲಿಯೂ ಆಗಿರಲಿಕ್ಕೇಬೇಕು. ಆದರೆ ಆ ನಿಯಂತ್ರಣದ ನೆಲೆ ಎಷ್ಟರಮಟ್ಟಿಗೆ ಗಟ್ಟಿಯಾಗಿರುತ್ತದೆ? ಇದು ಎಲ್ಲಾ ಸಂದರ್ಭಗಳಲ್ಲಿಯೂ ಎತ್ತಬಹುದಾದ ಒಂದು ಗಂಭೀರ ಪ್ರಶ್ನೆ. ‘ಮನರಂಜನೆ’ ಎನ್ನುವುದರ ವ್ಯಾಖ್ಯಾನವೂ ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಉಂಟುಮಾಡುತ್ತದೆ. ಈ ಬಗೆಯ ಗೊಂದಲಗಳು ದಿನೇ ದಿನೇ ಗಟ್ಟಿಯಾಗತೊಡಗಿವೆ, ಕಿರುತೆರೆಯ ವಾಹಿನಿಗಳ ಸಂಖ್ಯೆ ನೂರಾರು ಸಂಖ್ಯೆಯನ್ನು ದಾಟಿರುವ ಈ ವರ್ತಮಾನದಲ್ಲಿ ಖಾಸಗಿವಾಹಿನಿಗಳು ಕಾರ್ಯಕ್ರಮ ರೂಪಿಸುವಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ -ಹೀಗೆ ಏನೇ ಹೆಸರಿಸಿದರೂ ‘ಮೌಲ್ಯ’ಪರವಾದ ಎಷ್ಟೇ ಮಾತುಗಳನ್ನಾಡಿದರೂ ಅದರ ಬೆನ್ನಿಗೆ ಕೆಲಸಮಾಡುವುದು ಜನಪ್ರಿಯತೆ ಎನ್ನುವ ನಿರೀಕ್ಷೆ, ಜನಪ್ರಿಯತೆ ಎನ್ನುವುದು ಸಹ ಕಿರುತೆರೆಯ ಪ್ರಪಂಚಕ್ಕೆ ವ್ಯವಹಾರವಲ್ಲದೆ ಬೇರಲ್ಲ, ಅಂದರೆ ಲಾಭ-ನಷ್ಟದ ಲೆಕ್ಕಾಚಾರವೇ ಇಲ್ಲಿ ಮುಖ್ಯವಾಗುವುದುಂಟು. ಅವರಿಗೆ ಅವರದ್ದೇ ಆದ ಜನಪ್ರಿಯತೆಯ ಮಾನದಂಡವೊಂದಿರುತ್ತದೆ. ಅದನ್ನು ನಂಬಿಯೇ ಅವರ ಕಾರ್ಯಕ್ರಮಗಳು ರೂಪಿಸಲ್ಪಡುತ್ತವೆ. ಸ್ಪರ್ಧೆ ಅವರಿಗೆ ಅನಿವಾರ್ಯವಾಗುವಾಗ ಅಲ್ಲಿ ಅಳಿವು-ಉಳಿವಿನ ಪ್ರಶ್ನೆ ಎದುರಾಗುವುದರಿಂದಲೂ ಅದನ್ನು ನಿಭಾಯಿಸಲು ವ್ಯವಹಾರದ ತಂತ್ರ-ಪ್ರತಿತಂತ್ರಗಳು ಹೆಣೆಯಲ್ಪಡುತ್ತವೆ. ಅಂದರೆ ‘ಮನರಂಜನೆ’ ಎನ್ನುವುದರ ಸ್ವರೂಪ, ಸಾಧ್ಯತೆಗಳು ಬದಲಾಗುತ್ತವೆ ಅದಕ್ಕಿರುವ ಸಾಂಸ್ಕೃತಿಕ-ಸಹಜ ಅರ್ಥವನ್ನು ಪುನರ್ ಪರಿಶೀಲಿಸಲೇಬೇಕಾದ ತುರ್ತು ಸೃಷ್ಟಿಯಾಗುತ್ತದೆ, ಇಂದು ಅಂತಹ ಸಂಕೀರ್ಣ ಸ್ಥಿತಿ ನಮ್ಮೆದುರಿಗಿದೆ.

        ತೊಂಬತ್ತರ ದಶಕದ ಕೊನೆಯಲ್ಲಿ ‘ದೂರದರ್ಶನ’ ತನ್ನ ಕಾರ್ಯಕ್ರಮವನ್ನು ವೈವಿಧ್ಯಪೂರ್ಣವಾಗಿಸಿಕೊಳ್ಳಲು ಯತ್ನಿಸಿದಾಗ ಕರ್ನಾಟಕದಲ್ಲಿ ಮಧ್ಯಾಹ್ನದ ಹೊತ್ತಿಗೆ ‘ಮಹಾಸರಣಿ’ಯ ಧಾರಾವಾಹಿಗಳು ಆರಂಭವಾದವು. ಇಲ್ಲಿ ಉಲ್ಲೇಖಿಸಲೇಬಹುದಾದ ಎರಡು ಮಹಾಧಾರಾವಾಹಿಗಳಲ್ಲಿ ಮೊದಲನೆಯದು ‘ಮನೆತನ’ ನಂತರದ್ದು, ‘ಜನನಿ’. ಮಧ್ಯಾಹ್ನ ಸಾಮಾನ್ಯವಾಗಿ ಊಟದ ನಂತರದ ಸಮಯ ಗೃಹಿಣಿಯರದ್ದು ಮತ್ತು ಮನೆಯಲ್ಲಿರಬಹುದಾದ ಹಿರಿಯರದ್ದು, ಇಂತಹ ಹೊತ್ತನ್ನು ಗಮನಿಸಿಕೊಂಡಂತೆ ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಮಹಾಧಾರಾವಾಹಿಯ ಪರಂಪರೆ ಆರಂಭಗೊಂಡಿತು. ಕನ್ನಡ ಸಿನಿಮಾದ ಬಹುಜನಪ್ರಿಯ ನಟಿ ಮತ್ತು ತನ್ನ ವ್ಯಕ್ತಿತ್ವದ ಹಿರಿತನದಿಂದಲೇ ಆದರ್ಶವಾಗಿದ್ದ ‘ಪಂಡರಿಬಾಯಿ’ ಮುಖ್ಯಪಾತ್ರದಲ್ಲಿದ್ದ ‘ಮನೆತನ’ ಒಂದು ವಿಶಿಷ್ಟ ಯಶಸ್ಸನ್ನು ಗಳಿಸಿಕೊಂಡಿತು. ಬಹುಪಾಲು ಮಧ್ಯಾಹ್ನದ ವೇಳೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿತು. ನಂತರ ಇದನ್ನು ಅನುಸರಿಸಿ ‘ಜನನಿ’ ಎಂಬ ಮಹಾಧಾರಾವಾಹಿ ಪ್ರಸಾರವಾಯಿತು. ಇಲ್ಲಿಯೂ ಮುಖ್ಯಭೂಮಿಕೆಯಲ್ಲಿದ್ದದ್ದು ಕನ್ನಡದ ಮತ್ತೊಬ್ಬ ಜನಪ್ರಿಯ ನಟಿ ಭಾರತಿ ವಿಷ್ಣುವರ್ಧನ್. ಈ ಧಾರಾವಾಹಿಗಳ ಯಶಸ್ಸು ಮುಂದೆ ಮಧ್ಯಾಹ್ನದ ಸಮಯವನ್ನು ಧಾರಾವಾಹಿಗಳಿಗೊಂದು ಆಪ್ತವಾದ, ಆಕರ್ಷಕವಾದ ಸಮಯವನ್ನಾಗಿಸಿತು.

         ಈ ಸಮಯದಲ್ಲಿ ಪ್ರಸಾರಗೊಳ್ಳುತ್ತಿದ್ದ ಕಾರ್ಯಕ್ರಮಗಳು ಮುಖ್ಯವಾಗಿ ಮನೆಯಲ್ಲಿದ್ದ ಮಹಿಳೆಯರನ್ನೇ ತನ್ನ ಪ್ರೇಕ್ಷಕರನ್ನಾಗಿಸಿಕೊಂಡಿದ್ದ ಕಾರಣದಿಂದಲೂ ಕಾರ್ಯಕ್ರಮಗಳು ಮಹಿಳೆಯರನ್ನೇ ಕೇಂದ್ರೀಕರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿಯೇ ‘ಮನೆತನ’, ‘ಜನನಿ’ ಎಂಬಂತಹ ಶೀರ್ಷಿಕೆಗಳೇ ಮಹಿಳೆಯನ್ನು ಮುಖ್ಯವಾಗಿಸಿಕೊಂಡ ಕಥನವಾಗಿದ್ದನ್ನು ಸ್ಪಷ್ಟಪಡಿಸಿದ್ದವು. ಅಂದರೆ ಮನೆಯಲ್ಲಿದ್ದ ಮಹಿಳೆಯರ ಭಾವನೆಗಳನ್ನು ಧಾರಾವಾಹಿಗಳು ತಮ್ಮ ಪರವಾಗಿಸಿಕೊಳ್ಳುವ ಯತ್ನದಲ್ಲಿ ಯಶಸ್ಸಾದವು. ಅಲ್ಲಿಂದಾಚೆಗೆ ಈ ಹೊತ್ತಿಗೂ ಈ ಸಮಯದ ಧಾರಾವಾಹಿಗಳಲ್ಲಿರುವ ಮುಖ್ಯಭೂಮಿಕೆ ಮಹಿಳೆಯದ್ದೇ ಆಗಿರುವುದು ಗಮನಾರ್ಹ.

         ಹೀಗೆ ‘ಕಿರುತೆರೆ’ಗಳು ಮನೆ-ಮನೆಗಳಲ್ಲೂ ತಮ್ಮ ಗಟ್ಟಿಯಾದ ಅಸ್ತಿತ್ವವನ್ನು ಪ್ರತಿಪಾದಿಸಿಕೊಳ್ಳುವ ಮೊದಲು ಅಕ್ಷರಸ್ಥ ಗೃಹಿಣಿಯರು ತಮ್ಮ ಸಮಯವನ್ನು ಕಾದಂಬರಿಗಳನ್ನು, ಪತ್ರಿಕೆಗಳ ಧಾರಾವಾಹಿಗಳನ್ನು ಓದುವುದಕ್ಕೆ ಮೀಸಲಿಟ್ಟಿದ್ದರೆಂಬುದು ಗಮನಾರ್ಹ. ಇದು ಅಂದಿಗೆ ಪ್ರತೀ ಊರುಗಳಲ್ಲಿಯೂ ಗ್ರಂಥಾಲಯಗಳು ಇರಲೇಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿತು. ನಗರಪ್ರದೇಶಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳೇ ಅಲ್ಲದೆ ಹೀಗೆ ಮಹಿಳಾ ಓದುಗರನ್ನು ಕೇಂದ್ರವಾಗಿರಿಸಿಕೊಂಡ ಪುಸ್ತಕಗಳನ್ನು ದಿನದ ಬಾಡಿಗೆಗೆ ನೀಡುವ ವ್ಯವಹಾರವೂ ನಡೆಯುತ್ತಿತ್ತು. ಇದೊಂದು ಹವ್ಯಾಸವಾಗಿಯೂ ಅಂದಿನ ಕುಟುಂಬಗಳಲ್ಲಿದ್ದದ್ದು ಗಮನಾರ್ಹ. ಮನೆಯ ಗಂಡಸರಿಗೆ ಹೀಗೆ ಕಾದಂಬರಿ, ಕತೆ ಪುಸ್ತಕಗಳನ್ನು ಹೆಣ್ಣುಮಕ್ಕಳಿಗೆ ಒದಗಿಸಿಕೊಡುವುದೇ ಒಂದು ಸವಾಲಾಗಿತ್ತೆನ್ನಬಹುದು.

         ಮಹಿಳಾ ಓದುಗರ ಸಂಖ್ಯೆ ಹೀಗೆ ದಿನೇ ದಿನೇ ಹೆಚ್ಚಾಗುತ್ತಿದ್ದುದ್ದರಿಂದ ಸಹಜವಾಗಿಯೇ ಕಾದಂಬರಿಕಾರರ ಸಂಖ್ಯೆಯಲ್ಲಿಯೂ ಗಮನಾರ್ಹ ಹೆಚ್ಚಳ ಕಂಡುಬಂದಿತು ಮತ್ತೂ ವಿಶೇಷವೆಂದರೆ ಲೇಖಕಿಯರು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡರು ಜನಪ್ರಿಯವಾದ ವಸ್ತುಕೇಂದ್ರಿತ ಪ್ರಜ್ಞೆ ಕಾದಂಬರಿಗಳ ಹೂರಣವಾಯಿತು. ಕುಟುಂಬ, ದಾಂಪತ್ಯ, ಪ್ರೇಮ-ಪ್ರೀತಿ, ಸಮಾಜ ಇತ್ಯಾದಿ ಸಾಮಾನ್ಯವಾದ ಸಂಗತಿಗಳನ್ನು ಕುರಿತು ಕುತೂಹಲದ ನೆಲೆಯಲ್ಲಿ ನಿರೂಪಿಸುವ ಕ್ರಮವೊಂದು ಚಾಲ್ತಿಗೆ ಬಂತು. ಮುಖ್ಯವಾಗಿ ಹೆಣ್ಣುಮಕ್ಕಳ ಆಸಕ್ತಿಯನ್ನು ಕುರಿತು ಗಮನಹರಿಸಿ ಕತೆ ರೂಪಿಸುವ ಸಿದ್ಧಮಾದರಿ ರೂಪುಗೊಳ್ಳುವಂತಾಯ್ತು.

        ತ್ರಿವೇಣಿ, ಎಂ.ಕೆ.ಇಂದಿರಾ, ಸಾಯಿಸುತೆ, ಉಷಾನವರತ್ನರಾಂ, ವಾಣಿ, ಅನಸೂಯಾಸಂಪತ್, ರಾಧಾದೇವಿ, ವಿಜಯಶ್ರೀ ಹೀಗೆ ಹಲವಾರು ಕಾದಂಬರಿಗಾರ್ತಿಯರು ಅಂದು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಜನಪ್ರಿಯ ಮಾಲಿಕೆಯೊಂದು ರೂಪುಗೊಳ್ಳಲು ಕಾರಣರಾದರು. ಇದು ಅಂದಿನ ಮಧ್ಯಮವರ್ಗದ ಮಹಿಳಾ ಓದುಗರಿಂದಲೇ ಆದ ಒಂದು ಜನಪ್ರಿಯ ಕ್ರಾಂತಿ ಎನ್ನಬಹುದು. ಈ ಜನಪ್ರಿಯತೆಯ ಸ್ವರೂಪವನ್ನೇ ಅಂದಿನ ಕನ್ನಡ ಸಿನಿಮಾಮಂದಿ ಅರ್ಥೈಸಿಕೊಂಡು ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ಮಿಸಿ ಲಾಭಮಾಡಿಕೊಂಡದ್ದು ಈಗ ಇತಿಹಾಸ.

        ಇಂತಹ ಮಹಿಳಾ ಪ್ರೇಕ್ಷಕವರ್ಗವನ್ನು, ಅವರ ಬಿಡುವಿನ ಸಮಯವನ್ನು ಅರ್ಥೈಸಿಕೊಂಡು ದೂರದರ್ಶನ ಸಹ ಕಾರ್ಯಕ್ರಮ ರೂಪಿಸಲು ಯತ್ನಿಸಿದ್ದು ಮತ್ತು ಯಶಸ್ಸಾದದ್ದು ಇತಿಹಾಸವಷ್ಟೇ ಅಲ್ಲ, ವರ್ತಮಾನವೂ ಹೌದು. ‘ದೃಶ್ಯಮಾಧ್ಯಮ’ ಎಲ್ಲಾ ಕಾಲ ಸಂದರ್ಭದಲ್ಲಿಯು ತುಂಬಾ ಪ್ರಭಾವಶಾಲಿಯಾದ ಮಾಧ್ಯಮವೇ ಹೌದು. ಅದು ಏಕಕಾಲಕ್ಕೆ ಕಣ್ಣು ಕಿವಿಗಳೆರಡರ ಮೇಲೆಯೂ ಅಧಿಪತ್ಯ ಸ್ಥಾಪಿಸಿಬಿಡುತ್ತದೆ. ಕಾಣುವಿಕೆಗಿರುವ ‘ಸತ್ಯ’ದ ಸ್ವರೂಪವೇ ಬೇರೆಯಾದದ್ದು ಪಂಚೇಂದ್ರಿಯಗಳಲ್ಲಿ ‘ಕಣ್ಣು’ ಶ್ರೇಷ್ಠ ಎನ್ನುವುದು ಒಂದು ಮಾಮೂಲಿಯಾದ ವಾದವೇನಲ್ಲ, ಅದು ಸಾರ್ವಕಾಲಿಕವಾದ ಸಾರ್ವತ್ರಿಕ ಸತ್ಯವೂ ಹೌದು. ‘ನೋಡುವ’ ಕ್ರಿಯೆಯಲ್ಲಿ ಶ್ರಮ ಕಡಿಮೆ, ಓದುವಂತಹ ಪ್ರಯತ್ನಗಳಿಗೆ ಅಕ್ಷರದ ಅರಿವಾದರೂ ಬೇಕು ಆದರೆ ದೃಶ್ಯರೂಪವಾಗುವಾಗ, ಅದು ಕೇಳಲ್ಪಡುವಾಗ ಅರ್ಥೈಸಿಕೊಳ್ಳಬಹುದಾದ ಸಾಧ್ಯತೆಯೇ ಬೇರೆ ಬಗೆಯದ್ದಾಗಿಬಿಡುತ್ತದೆ. ಏಕಕಾಲಕ್ಕೆ ಎಲ್ಲರೂ ಅಕ್ಷರಸ್ಥರು, ಅನಕ್ಷರಸ್ಥರುಗಳೆಲ್ಲ ಒಂದೇ ನೆಲೆಯಲ್ಲಿ ಪ್ರೇಕ್ಷಕರಾಗಿಬಿಡುತ್ತಾರೆ. ಸಂವೇದನಾ ಸಾಧ್ಯತೆಗಳಿಗೆ ಮಿತಿ-ವ್ಯಾಪ್ತಿಗಳಿರುವುದಿಲ್ಲ. ಮೂಲತಃ ವಾಹಿನಿಗಳಾದರೂ ನೇರವಾಗಿ ಬಹುಜನರನ್ನು ತಲುಪುವ ಉದ್ದೇಶ ಹೊಂದುವುದರಿಂದಲೂ ಸರಳವಾಗಿಯೇ ತಮ್ಮನ್ನು ಗುರುತಿಸಿಕೊಂಡುಬಿಡುತ್ತವೆ. ಒಟ್ಟಾರೆಯಾಗಿ ಉದ್ದೇಶ ಸ್ಪಷ್ಟ, ಗುರಿಯೂ ನೇರ.

        ಮನೆಯಲ್ಲಿ ಮನರಂಜನೆ ಎನ್ನುವುದಕ್ಕೆ ಹೊಸ ವ್ಯಾಖ್ಯಾನ ಬರೆದು ತನ್ನದು ಎನ್ನುವ ನೆಲೆಯೊಂದನ್ನು ಕಂಡುಕೊಂಡು, ತನ್ನದೇ ಪ್ರಭಾವಲಯವನ್ನು ನಿರ್ಮಿಸಿಕೊಂಡ ‘ದೂರದರ್ಶನ’ದ ಹೆಸರಿನ ಸಾಧನವೊಂದು ಮನೆಯ ಬಹುಮುಖ್ಯ ಪಾತ್ರವೇ ಆದಂತಾದದ್ದು ಭಾರತದ ಸಂದರ್ಭಕ್ಕೆ ಸಹಜವೇ ಆಗಿದ್ದರೂ ದಿನೇ ದಿನೇ ಅದರ ಪ್ರಭಾವ ತನ್ನ ವ್ಯಾಪ್ತಿ ಮೀರುತ್ತಿದೆಯೇನೋ ಎನ್ನುವ ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಸರ್ಕಾರಿ ಸ್ವಾಮ್ಯದಲ್ಲಿರುವ ಹೊತ್ತಿಗೆ ಪ್ರತಿಯೊಂದು ವಿಚಾರಕ್ಕೂ ಕಾರ್ಯಕ್ರಮಕ್ಕೂ ಅದರದ್ದೇ ಆದ ಮಿತಿಯೆನ್ನುವುದು ಅನಿವಾರ್ಯವಾಗಿತ್ತು. ಮೊದಲಲ್ಲೇ ಗಮನಿಸಿದ ಹಾಗೆ ಅದಕ್ಕೊಂದು ಶೀಲವಂತಿಕೆಯ ಚೌಕಟ್ಟಿತ್ತು, ಮನುಷ್ಯಭಾವ-ಸಂಬಂಧ ಪರವಾದ ಕೆಲವು ಮೌಲ್ಯಗಳೂ ಇದ್ದವು. ಹಾಗಾಗಿಯೇ ಧಾರಾವಾಹಿಗಳಲ್ಲಿಯೂ ಇದೇ ಬಗೆಯದ್ದಾದ ಒಂದು ಚೌಕಟ್ಟಿನ ಸಂವಾದಗಳಿದ್ದವು, ಒಂದು ಆರೋಗ್ಯಕರ ಭಾವ, ಸಂಬಂಧ, ಸಮಾಜ ಮತ್ತು ನಾಡು-ದೇಶಗಳ ಹಿನ್ನೆಲೆಯಲ್ಲಿ ಜವಾಬ್ದಾರಿಯುತವಾದ ಕೆಲವು ಸಾಂಸ್ಕøತಿಕ, ನೈತಿಕಪ್ರಜ್ಞೆಗಳು ಕೆಲಸಮಾಡುತ್ತಿದ್ದವು. ತನ್ನ ಕಾರ್ಯಕ್ರಮಗಳು ಜನರ ಮೇಲೆ ಯಾವ ಬಗೆಯ ಪ್ರಭಾವ ಬೀರಬಲ್ಲದು ಎನ್ನುವುದರ ಬಗೆಗೊಂದು ನಿರಂತರವಾದ ಎಚ್ಚರ ಅನಿವಾರ್ಯವೇ ಆಗಿತ್ತು. ಹಾಗಾಗಿಯೂ ಪ್ರೇಕ್ಷಕರು ಮತ್ತು ಕಿರುತೆರೆಯ ನಡುವೆ ಒಂದು ವಿಶಿಷ್ಟವಾದ ಬಾಂಧವ್ಯವೂ ಸಾಧ್ಯವಾಗಿತ್ತು.

         ಪ್ರಸಾರಮಾಡುವ ಕಾರ್ಯಕ್ರಮಗಳು, ಧಾರಾವಾಹಿಗಳು, ಚಲನಚಿತ್ರಗಳು, ಚಿತ್ರಗೀತೆಗಳು, ಆರೋಗ್ಯವಿಚಾರಗಳು, ಕೃಷಿ-ವೃತ್ತಿಪರ ಕಾರ್ಯಕ್ರಮಗಳು, ಶೈಕ್ಷಣಿಕ ಕಾರ್ಯಕ್ರಮಗಳು, ಮಕ್ಕಳನ್ನೆ ಕೇಂದ್ರೀಕರಿಸಿಕೊಂಡ ಯೋಜನೆಗಳು, ಕ್ರೀಡೆ -ಹೀಗೆ ಎಲ್ಲವೂ ತಮ್ಮ ತಮ್ಮ ಪ್ರಾಧಾನ್ಯತೆಯ ನೆಲೆಯಲ್ಲಿ ಪ್ರಸಾರವಾಗುತ್ತಿದ್ದವು.

        ಈ ದೇಶದಲ್ಲಿ ವಾರ್ತಾಪತ್ರಿಕೆಗಳು ಅಕ್ಷರಸ್ಥರ ನಡುವೆ ಒಂದು ಸಂಚಲನವನ್ನೇ ಉಂಟುಮಾಡಿರುವುದನ್ನು ಮರೆಯುವಂತಿಲ್ಲ ಕೊನೆಗೆ ಅನಕ್ಷರಸ್ಥರು ಕೂಡ ಅಕ್ಷರಸ್ಥರಿಂದ ಪತ್ರಿಕೆ ಓದಿಸಿಕೊಂಡು ಅರಿವು ಮಾಡಿಕೊಳ್ಳುವವರೆಗೆ ಅದು ಪ್ರಭಾವಬೀರಿತು. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಭಾರತದಂತಹ ದೇಶಕ್ಕೆ ಇದು ಸಹಜವಾಗಿತ್ತು, ಆಚೀಚೆ ಎನ್ನುವಂತೆ ಸಾಮಾನ್ಯಪ್ರಜೆಯೂ ತಮ್ಮದು ಎನ್ನುವ ಸರ್ಕಾರಗಳ ಬಗೆಗೆ ತಿಳಿದುಕೊಳ್ಳಲು, ಆಗು-ಹೋಗುಗಳ ಬಗೆಗೆ ಪ್ರತಿಕ್ರಿಯಿಸಲು ಬಯಸುತ್ತಿದ್ದ.
 
         ಪತ್ರಿಕೆಯಷ್ಟೇ ಪ್ರಭಾವ ಅಥವಾ ಅದಕ್ಕಿಂತ ತುಸು ಹೆಚ್ಚು ಎನ್ನಿಸುವಂತೆ ‘ಆಕಾಶವಾಣಿ’ ರೂಪದಲ್ಲಿ ರೇಡಿಯೋಗಳು ತುಂಬಾ ಗಂಭೀರವಾದ ಪ್ರಭಾವವನ್ನು ಬೀರಿದ್ದವು. ರೇಡಿಯೋ ಸಮಯ ಮತ್ತು ಕಾರ್ಯಕ್ರಮಗಳಿಗನುಗುಣವಾಗಿಯೇ ದೈನಂದಿನ ಬದುಕನ್ನು ನಡೆಸುವ ಸಾಧ್ಯತೆಗೂ ಈ ನೆಲದ ಸಾಮಾನ್ಯ ಮನುಷ್ಯ ತನ್ನನ್ನು ಒಗ್ಗಿಸಿಕೊಂಡಿದ್ದ ಎನ್ನುವುದಿಲ್ಲಿ ಸ್ಮರಣಾರ್ಹ. ಇದು ಅವನ ಆರೋಗ್ಯಕರವಾದ ಹವ್ಯಾಸವೇ ಆಗಿತ್ತೆನ್ನಬಹುದು. ‘ರೇಡಿಯೋ’ ಕೈನಲ್ಲಿ ಹಿಡಿದು ನಡೆಯುವುದೂ ಅಂದಿಗೆ ಸಾಮಾನ್ಯ ಮನುಷ್ಯನಿಗೊಂದು ಪ್ರತಿಷ್ಠೆಯ ಅಭ್ಯಾಸವಾಗಿತ್ತೆನ್ನುವುದು ಅದರ ಗಟ್ಟಿಯಾದ ಸಾರ್ಥಕ ಯಶಸ್ಸಿನ ಫಲಿತವಲ್ಲದೆ ಬೇರೇನು? ಅಂದರೆ ಇದೊಂದು ಹವ್ಯಾಸದಂತೆ ಪರಿಭಾವಿಸಲ್ಪಡುವಾಗಲೂ ಅದು ಅವನ ಕ್ರಿಯಾಶೀಲತೆಯನ್ನು ಹಾಳುಮಾಡುವಂತಾಗಿರದೆ ಉತ್ತೇಜಕದಂತೆಯೂ ಕೆಲಸಮಾಡಿತ್ತೆನ್ನುವುದು ಮಹತ್ವದ ಸಂಗತಿ. ಇಂತಹದ್ದೇ ಒಂದು ಪ್ರಭಾವವನ್ನು ಸರ್ಕಾರಿ ಸ್ವಾಮ್ಯದ ‘ದೂರದರ್ಶನ’ವು ಉಂಟುಮಾಡಿತ್ತೆನ್ನುವುದಕ್ಕೆ ಪೂರಕವಾಗಿ ಈ ಮೇಲಿನ ಉದಾಹರಣೆಯನ್ನು ಗಮನಿಸುವುದಾಯಿತು.
 
        ನಿರ್ದಿಷ್ಟ ಸಮಯಾಧಾರಿತ, ವಿಷಯಾಧಾರಿತವಾದ ಕಾರ್ಯಕ್ರಮಗಳು ಸಹಜವಾಗಿಯೇ ಸಮಾಜದ ಮೇಲೆ ಬೀರಿದ ಪ್ರಭಾವ ಆರೋಗ್ಯಕರವೇ ಆಗಿತ್ತು. ಎಲ್ಲರೂ ಎಲ್ಲಾ ಕಾರ್ಯಕ್ರಮವನ್ನು ನೋಡುವುದಿಲ್ಲ ಎನ್ನುವುದಾದರೂ ಅವರವರ ಭಾವಕ್ಕೆ ಬದುಕಿಗೆ ಸಂಬಂಧಿಸಿದ ಭಿನ್ನವಾದ ಕಾರ್ಯಕ್ರಮಗಳು ಭಿನ್ನಸಮಯದಲ್ಲಿ ಪ್ರಸಾರಗೊಳ್ಳುತ್ತಿದ್ದವು ಎನ್ನುವುದನ್ನು ನಾವಿಲ್ಲಿ ಅವಶ್ಯ ನೆನೆಯಬಹುದು. ಹಾಗಲ್ಲದೆ ತುಂಬಾ ವಿಶೇಷ, ಮಹತ್ವ, ಶ್ರೇಷ್ಠ ಎನ್ನಿಸುವ ಕಾರ್ಯಕ್ರಮಗಳ ಸಮಯವಾದರೂ ಬಹುಜನರ ಅನುಕೂಲವನ್ನೇ ಅವಲಂಬಿಸಿತ್ತು ಎನ್ನುವುದು ಒಂದು ಸಮೂಹಮಾಧ್ಯಮ ಜವಾಬ್ದಾರಿಯುತವಾಗಿ ವರ್ತಿಸಬಹುದಾದ ಸಾಧ್ಯತೆಯನ್ನೇ ಪ್ರಸ್ತಾಪಿಸುವಂತಹುದು. ಇಂತಹದ್ದೊಂದು ಕಾರ್ಯಕ್ರಮಕ್ಕೆ ಉದಾಹರಣೆ ರಾಷ್ಟ್ರೀಯ ಜಾಲದಲ್ಲಿ ಪ್ರಸಾರವಾದ ಎರಡು ಮುಖ್ಯ ಧಾರಾವಾಹಿಗಳಾದ ರಾಮಾಯಣ ಮತ್ತು ಮಹಾಭಾರತ.

         ಬಹುಶಃ ಭಾರತದ ನೆಲದಲ್ಲಿ ಹೀಗೆ ಈ ಎರಡು ಧಾರಾವಾಹಿಗಳು ಉಂಟುಮಾಡಿದ ಪ್ರೇಕ್ಷಕಕ್ರಾಂತಿಯನ್ನು ಮತ್ತಾವ ಕಾರ್ಯಕ್ರಮಗಳು ಇಂದಿನವರೆವಿಗೂ ಉಂಟುಮಾಡಿಲ್ಲ ಎಂದರದು ಉತ್ಪ್ರೇಕ್ಷೆಯಾಗಬೇಕಿಲ್ಲ. ರಾಮಾಯಣ ಮತ್ತು ಮಹಾಭಾರತ ನಮ್ಮ ನೆಲದ ಎರಡು ಮಹಾಕಾವ್ಯಗಳು. ಸಹಜವಾಗಿಯೇ ಶ್ರೀಸಾಮಾನ್ಯರ ಬದುಕಿನೊಂದಿಗೆ ತಾಳೆನೋಡಬಹುದಾದ ರೀತಿಯಲ್ಲಿ ಈ ಎರಡೂ ಕಾವ್ಯದ ವಸ್ತು-ಪಾತ್ರಗಳು ಇಲ್ಲಿ ಪ್ರಭಾವಬೀರಿವೆ. ದೇಶದ ಪ್ರತೀ ಹಳ್ಳಿಗಳಲ್ಲೂ ಈ ಕಾವ್ಯದ ಘಟನೆಯೊಂದು ಪ್ರತಿಮಾತ್ಮಕವಾಗಿ ಬೆಸುಗೆ ಹಾಕಿಕೊಂಡದ್ದಿದೆ. ಹಾಗಾಗಿಯೂ ಪ್ರತೀ ನೆಲವು ಪುಣ್ಯಭೂಮಿಯಾಗುವುದು ಈ ದೇಶದಲ್ಲಿ ಸಾಮಾನ್ಯತೆಯ ರೂಪವಾಗಿಯೇ ಕಾಣಸಿಗುತ್ತದೆ ಮತ್ತು ಪ್ರತೀ ಭಾವಕ್ಕೆ ಒಂದು ಭಿನ್ನವಾದ ವ್ಯಾಖ್ಯಾನವೂ ದೊರೆಯುತ್ತದೆ.

         ಹಾಗಾಗಿ ಕತೆ ಎಂದಲೆಲ್ಲಾ ಅದು ರಾಮಾಯಣ ಅಥವಾ ಮಹಾಭಾರತದ ಮೂಲವೋ ಪ್ರೇರಣೆಯೋ ಆಗಿರುವುದು ಅನಿವಾರ್ಯ ಎನ್ನುವಂತಾಗಿದೆ. ಇಂತಹ ಮಹಾಕಾವ್ಯಗಳನ್ನು ಕಿರುತೆರೆಗೆ ತಂದದ್ದು ಖಂಡಿತವಾಗಿ ಒಂದು ಅಪರೂಪದ ಸಾಧನೆಯೇ ಹೌದು. ಅದು ಸಾಧಿಸಿದ ಯಶಸ್ಸಂತೂ ಮತ್ತೂ ಅಭೂತಪೂರ್ವವಾದುದೆಂದೇ ಹೇಳಬಹುದು.

        ರಾಷ್ಟ್ರೀಯ ವಾಹಿನಿಯಲ್ಲಿ ಹಿಂದಿಭಾಷೆಯಲ್ಲಿ ಪ್ರಸಾರವಾದ ಮೊದಲ ಕೀರ್ತಿ ರಾಮಾಯಣದ್ದು, ಅದು ಇಡೀ ದೇಶವನ್ನು ಯಾವುದೇ ಸಂಕುಚಿತ, ಭಾಷಿಕ-ಪ್ರಾದೇಶಿಕ ಭಾವಗಳಿಂದ ದೂರವಾಗಿ ಇಡೀ ದೇಶವೇ ಸಂಭ್ರಮಿಸುವಂತೆ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿತು. ಭಾನುವಾರದಂದು ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಕ್ರಮೇಣ ಇಡೀ ದೇಶವನ್ನೇ ತನ್ನ ನೋಡುಗರನ್ನಾಗಿಸಿಕೊಂಡದ್ದು ಬಹುಶಃ ಜಗತ್ತಿನ ಕಿರುತೆರೆಯ ಇತಿಹಾಸದಲ್ಲಿಯೇ ಮೊದಲನೆಯದ್ದಾಗಿರಬಹುದು. ಇದೇ ಯಶಸ್ಸಿನ ಹಿನ್ನೆಲೆಯಲ್ಲಿ ಮಹಾಭಾರತವು ಕಿರುತೆರೆಯನ್ನು ಆಕ್ರಮಿಸಿಕೊಂಡದ್ದು ಮತ್ತೂ ಮಿಂಚಿನ ಸಂಚಲನವನ್ನೇ ಸೃಷ್ಟಿಸಿತೆನ್ನಬಹುದು. ರಾಮಾಯಣಕ್ಕಿಂತ ತುಸು ರಂಜಿತವಾದ, ವಿಸ್ತಾರವಾದ ಬಹುಪಾತ್ರ-ಭಾವಗಳಿಂದ ಕೇಂದ್ರಿತವಾದ ಮಹಾಭಾರತ ಭಾರತದಲ್ಲಿ ಮುಂದೆಂದೂ ಅಳಿಸಲಾಗದ ಇತಿಹಾಸವನ್ನೇ ಸೃಷ್ಟಿಸಿತು. ಭಾನುವಾರದಂದು ಮಹಾಭಾರತ ಪ್ರಸಾರವಾಗುವ ವೇಳೆಯಲ್ಲಿ ಇಡೀ ದೇಶವೇ ಸ್ವಯಂ ಘೋಷಿತ ಬಂದ್ ಆಚರಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಮುಂದುವರಿದಂತೆ ಆ ಸಮಯದಲ್ಲಿ ಯಾವುದೇ ಕಾರ್ಯಕ್ರಮವನ್ನು ಯಾರೂ ಏರ್ಪಡಿಸದಂತಹ ಸ್ಥಿತಿಯು ನಿರ್ಮಾಣವಾಯಿತು, ಮದುವೆಯಂತಹ ಶುಭಕಾರ್ಯಗಳು ಈ ಧಾರಾವಾಹಿ ಮುಗಿದ ನಂತರಕ್ಕೆ ತಮ್ಮ ಮುಹೂರ್ತವನ್ನು ನಿಗದಿಪಡಿಸಿಕೊಳ್ಳುವಂತಾಯ್ತು. ಕೆಲವು ಕಾರ್ಯಕ್ರಮಗಳಲ್ಲಿ ಈ ಧಾರಾವಾಹಿ ಪ್ರಸಾರದ ವ್ಯವಸ್ಥೆಯನ್ನು ಆ ಸಮಯಕ್ಕೆ ಏರ್ಪಡಿಸುವುದು ಕೆಲವು ಸಂದರ್ಭದಲ್ಲಾಯಿತು. ಈ ಧಾರಾವಾಹಿಯ ಪ್ರಸಾರದ ವೇಳೆಯಲ್ಲಿ ಯಾವ ಅತಿಥಿಯೂ ತಮ್ಮ ಬಂಧುಬಾಂಧವರ ಮನೆಗೆ ಬಂದು ಸಹಜ ಆದರಾತಿಥ್ಯವನ್ನು ಬಯಸದಂತಾಯಿತು. ಈ ಹೊತ್ತಿಗೆ ಈ ಎಲ್ಲಾ ಸಂಗತಿಗಳು ಕೇಳುಗರಿಗೆ ಅಸಹಜವೆನಿಸಬಹುದು ಕಥಾನಕವೆಂದೆನಿಸಬಹುದು ಆದರೆ ಇದು ಉತ್ಪ್ರೇಕ್ಷೆ ಖಂಡಿತಾ ಅಲ್ಲ ಇದು ಸಮಕಾಲೀನತೆಯಲ್ಲಿ ನಾವು ಎದುರಾದ ಸತ್ಯ. ಬಹುಶಃ ‘ಕಿರುತೆರೆ’ ಈ ಮಟ್ಟಿನ ಗಂಭೀರ ಪ್ರಭಾವ ಬೀರಬಹುದಾದುದನ್ನು ಯಾರೂ ನಿರೀಕ್ಷಿಸಲಿಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಅಪರೂಪದ ಘಟನೆಯೊಂದು ಭಾರತೀಯ ದೂರದರ್ಶನದ ಕಾರ್ಯಕ್ರಮಗಳ ಸಂದರ್ಭದಲ್ಲಿ ನಡೆದೇ ಹೋಗಿದೆ. ನಂತರ ಈ ಯಶಸ್ಸನ್ನು ಅನುಸರಿಸಿಯೇ, ಕೃಷ್ಣಕತೆ, ವಿಶ್ವಾಮಿತ್ರಕತೆ ಇತ್ಯಾದಿ ಪುರಾಣಾಧಾರಿತ ಧಾರಾವಾಹಿಗಳು ಬಂದು ವೀಕ್ಷಕರಲ್ಲಿ ತಮ್ಮ ಪ್ರಯೋಗಗಳಿಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸಿವೆ. ಇಂದಿಗೂ ಈ ಬಗೆಯ ಪ್ರಯೋಗ ಅಲ್ಲಲ್ಲಿ ನಡೆಯುತ್ತಿರುವುದನ್ನು ನಾವು ಸ್ಮರಿಸಬಹುದು.

      ಇಂತಹದ್ದೊಂದು ವಿಶಿಷ್ಟವಾದ ಘಟನೆಯೊಂದನ್ನು ನೆನೆಯುವಲ್ಲಿ ಒಂದು ಸಾಂಸ್ಕೃತಿಕ ಎನಿಸಬಹುದಾದ ತುರ್ತು ಇದ್ದೇ ಇದೆ. ಅಂದರೆ ಒಂದು ಕಾರ್ಯಕ್ರಮ ತನ್ನ ಗುಣಮಟ್ಟವನ್ನು ಕಾಯ್ದುಕೊಂಡರೆ ಎಷ್ಟು ದೊಡ್ಡ ಸಂಚಲನವನ್ನು ಸೃಷ್ಟಿಸಬಹುದು ಮತ್ತು ಅದಕ್ಕಿಂತ ಮುಖ್ಯವಾಗಿ ಒಂದು ಶ್ರೇಷ್ಠ ನೈತಿಕವಾದ ಉತ್ಕರ್ಷವನ್ನು ಉಂಟುಮಾಡಬಹುದು ಎನ್ನುವುದಕ್ಕೆ ಇದು ಸಾಕ್ಷಿ. ಇಂತಹದ್ದೊಂದು ಧಾರಾವಾಹಿಯನ್ನು ಅಂದಿಗೆ ಈ ನೆಲದ ಜನರೇನು ಒತ್ತಾಯದಿಂದ ಕೇಳಿದ್ದಾಗಿರಲಿಲ್ಲ. ಒಂದು ಆರೋಗ್ಯಕರ ಸಂಸ್ಥೆ ತನ್ನ ಸಮಾಜ, ತನ್ನ ದೇಶ, ತನ್ನ ಜನ ಎನ್ನುವುದನ್ನು ಕಾಳಜಿಯಿಂದ, ಬದ್ಧತೆಯಿಂದ, ನಿರ್ವಂಚನೆಯಿಂದ ಅಭಿಮಾನಿಸಿಕೊಂಡಾಗ ಇಂತಹ ಅಪರೂಪದ, ಶ್ರೇಷ್ಠವಾದ ಸಾರ್ವಕಾಲಿಕ ಎನ್ನಬಹುದಾದ ಫಲಿತಾಂಶವೊಂದು ಸಾಧ್ಯವಾಗುತ್ತದೆ. ಇಂತಹದ್ದೊಂದು ಸಾಮಾನ್ಯ ಪ್ರಯತ್ನವು ಈ ದಿನಗಳಲ್ಲಿ ಯಾವುದೇ ಖಾಸಗಿ ವಾಹಿನಿಗಳಿಗೆ ಸಾಧ್ಯವಾಗದು ಎನ್ನುವುದಕ್ಕೆ ಕಾರಣ ಯಾರಲ್ಲಿ ಹುಡುಕಬಹುದು? ಭಾವಗಳೆಲ್ಲವೂ ವ್ಯವಹಾರವೇ ಆದರೆ ಈ ಬಗೆಯ ಶೂನ್ಯತೆಯಾಚೆಗೆ ಬೇರೇನನ್ನು ನಿರೀಕ್ಷಿಸಲಾಗದು ಎನ್ನುವುದು ಅರಿವುಮಾಡಿಕೊಳ್ಳಬೇಕಾದ ಸತ್ಯ. ಇಂದಿನ ಸಾಮಾಜಿಕ ನೈತಿಕ ಅಧಃಪತನದಲ್ಲಿ ದೃಶ್ಯಮಾಧ್ಯಮದ್ದೇ ಸಿಂಹಪಾಲು ಎನ್ನುವ ವಾದಗಳು ಗಟ್ಟಿಯಾಗುತ್ತಿರುವ ಹೊತ್ತಿನಲ್ಲಿ ಅವಲೋಕನ ಅನಿವಾರ್ಯವೇ ಹೌದು.

        ಕ್ರೀಡೆಯಂತಹ ವಿಚಾರವನ್ನೂ ‘ದೂರದರ್ಶನ’ ನಿರ್ವಹಿಸಿದ ಬಗೆ ಅನುಕರಣೀಯ. ಜನಪ್ರಿಯ ಕ್ರೀಡೆಗಳಾದ ಕ್ರಿಕೆಟ್, ಹಾಕಿ, ಟೆನಿಸ್ ಮುಂತಾದವುಗಳನ್ನು ನೇರಪ್ರಸಾರ ಮಾಡುವ ಪ್ರಯೋಗದ ಮೂಲಕ ಎಲ್ಲೋ ನಡೆಯುವ ಆಟಗಳನ್ನು ನೇರವಾಗಿ ಮನೆಯ ಅಂಗಳಕ್ಕೆ ತಂದ ಹಿರಿಮೆಯೊಂದಿಗೆ ಕ್ರೀಡಾಮನೋಭಾವವನ್ನು ಉಳಿಸಿ ಬೆಳೆಸಿದ ಕೀರ್ತಿ, ಭಿನ್ನವೇ ಆಗಿತ್ತು. ದೇಶದ ಕ್ರೀಡೆಗಳ ಕುರಿತ ಅಭಿಮಾನ ರಾಷ್ಟ್ರೀಯತೆಯ ಅರ್ಥವೂ ಆಗಬಹುದಾದುದನ್ನು ಅಂದಿಗೆ ಕಿರುತೆರೆ ಅರ್ಥಪೂರ್ಣವಾಗಿಯೇ ಸಂಯೋಜಿಸಿತ್ತು. ಇಂದು ಎಲ್ಲವೂ ಪಂದ್ಯಗಳ ರೂಪದಲ್ಲಿ ಜೂಜಿನ ದಂಧೆಗಳಾಗುವ ವ್ಯಾಪ್ತಿಗೆ ಚಾಚಿಕೊಂಡದ್ದು ಕಿರುತೆರೆಯ ಸಭ್ಯತೆಯನ್ನು ಪ್ರಶ್ನಿಸುವಂತಾದ ದುರಂತವನ್ನು ಸೃಷ್ಟಿಸಿದ್ದು ಅರಗಿಸಿಕೊಳ್ಳಲಾಗದ ಸತ್ಯವಾಗಿರುವಲ್ಲಿ ಮತ್ತೆ ಪ್ರಶ್ನೆ ಒಂದೆ, ಯಾರು ಹೊಣೆ?.

        ಚಲನಚಿತ್ರ ಅಥವಾ ಆ ಸಂಬಂಧಿಯಾದ ಯಾವುದೇ ಕಾರ್ಯಕ್ರಮಗಳನ್ನು ‘ದೂರದರ್ಶನ’ ನಿರ್ವಹಿಸುವ ಹೊತ್ತಿಗೆ ಕೆಲವು ಮಾನದಂಡಗಳನ್ನು ಅನುಸರಿಸಿದ್ದರಿಂದಲೇ ಶೀಲಾಶ್ಲೀಲದ ಪ್ರಶ್ನೆ ಮುಖ್ಯವಾಗಿತ್ತು. ಆಯ್ಕೆಯನ್ನು ಮುಕ್ತವಾಗಿಸಿಕೊಂಡ ಎಚ್ಚರದಿಂದಲೂ ಸಂದೇಶಪರವಾದ, ಮೌಲ್ಯಪರವಾದ, ಚಿಂತನೀಯವಾದ, ಮನರಂಜನೀಯವಾದ ಆದರೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸದಂತಹ ಚಿತ್ರಗಳ ಆಯ್ಕೆಗೆ ಒತ್ತುನೀಡಿತ್ತು. ಮನೆಮಂದಿ ಕುಳಿತು ನಿರಾಳವಾಗಿ ವೀಕ್ಷಿಸಬಹುದಾದ, ಚಲನಚಿತ್ರಗಳು, ಚಿತ್ರಗೀತೆಗಳು, ಸಂದರ್ಶನವೇ ಮೊದಲಾದ ಕಾರ್ಯಕ್ರಮಗಳು ಭಿತ್ತರವಾಗುವುದು ಸಾಧ್ಯವಾಗಿತ್ತು. ರಾಷ್ಟ್ರ, ರಾಜ್ಯ, ಅಂತರರಾಷ್ಟ್ರೀಯ ಪ್ರಶಸ್ತಿವಿಜೇತ ಚಿತ್ರಗಳು ಹೊಸ ಚಿಂತನೆಯನ್ನು ಹುಟ್ಟಿಸುವಲ್ಲಿ ಸಹಕಾರಿಯಾಗಿದ್ದವು. ಇಂದು ಏನಾಗಿದೆ? ಈ ಪ್ರಶ್ನೆಗೆ ಉತ್ತರ ತುಂಬಾ ಸಂಕಟವೂ ಆತಂಕವೂ ದುರಂತವೂ ಆಗುವುದಕ್ಕೆ ಯಾರು ಹೊಣೆ?

         ಇಂದಿಗೂ ಸರ್ಕಾರಿಸ್ವಾಮ್ಯದ ವಾಹಿನಿಗಳು ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನ ನಡೆಸುತ್ತಿವೆ. ವಿಚಾರಪೂರಿತವಾದ ಚರ್ಚೆ-ಸಂವಾದ, ಸ್ವಾಸ್ಥ್ಯಪೂರ್ಣವಾದ ಧಾರಾವಾಹಿಗಳು, ಜ್ಞಾನ-ವಿಜ್ಞಾನಪರ ಕಾರ್ಯಕ್ರಮಗಳು, ರಸಪ್ರಶ್ನೆಯಂತಹ ಕಾರ್ಯಕ್ರಮಗಳು ಇಂದಿಗೆ ಅತ್ಯಂತ ಜನಪ್ರಿಯವಾಗಿರುವ ಮಧುರ ಮಧುರವೀ ಮಂಜುಳಗಾನ ಎನ್ನುವ ವಿನೂತನ ಕಾರ್ಯಕ್ರಮಗಳು ಕರ್ನಾಟಕದ ದೂರದರ್ಶನವಾಹಿನಿ ‘ಚಂದನ’ವನ್ನು ವಿಶಿಷ್ಟ ಮತ್ತು ವಿನೂತನ ಎಂಬಂತೆಯೇ ಪ್ರತಿಬಿಂಬಿಸುತ್ತಿದೆ. ಒಂದು ಸಾಂಸ್ಕøತಿಕ ಜವಾಬ್ದಾರಿ ನಿಭಾಯಿಸಬಹುದಾದ ಬಗೆಗೊಂದು ಉತ್ತಮ ಉದಾಹರಣೆಯಾಗಿಯೇ ದೂರದರ್ಶನವನ್ನು ಉಲ್ಲೇಖಿಸಬಹುದು. ಈ ಹೊತ್ತಿಗೆ ಆತಂಕದಿಂದ ಪರಿಶೀಲಿಸಬೇಕಿರುವುದು ಖಾಸಗಿವಾಹಿನಿಗಳ ಭರಾಟೆಯನ್ನು ಎನ್ನುವುದಿಲ್ಲಿ ಮುಖ್ಯವಾದುದು.

         ಇಷ್ಟವಿರಲಿ ಇಲ್ಲದಿರಲಿ ಜಾಗತೀಕರಣದ ಹೆಸರಿನಲ್ಲಿ ಮುಕ್ತಮಾರುಕಟ್ಟೆ ನಮ್ಮನ್ನು ಆಕ್ರಮಿಸಿಕೊಂಡದ್ದಾಗಿದೆ. ‘ಮುಕ್ತ ಜಗತ್ತು’ ಎನ್ನುವುದು ಅನಾವರಣಗೊಂಡುಬಿಟ್ಟಿದೆ. ನಿರಾಕರಿಸುವ ಪ್ರಶ್ನೆ ಇಲ್ಲ. ನಮ್ಮತನವನ್ನು ಉಳಿಸಿಕೊಳ್ಳುವುದಷ್ಟೆ ನಮ್ಮ ಮುಂದಿರುವ ಸವಾಲು ಆದರೆ ಅದು ಅಷ್ಟು ಸುಲಭವೆಂದೇನೂ ಎನಿಸುತ್ತಿಲ್ಲ. ಇಡೀ ಜಗತ್ತು ಆರ್ಥಿಕವ್ಯವಸ್ಥೆಯನ್ನು ಪ್ರಧಾನವಾಗಿ ಕೇಂದ್ರೀಕರಿಸಿಕೊಂಡೇ ಎಲ್ಲವನ್ನು ವ್ಯವಹಾರವಾಗಿ ನೋಡುವ ಹೊತ್ತಿನಲ್ಲಿ ನಮ್ಮತನಗಳನ್ನು ಉಳಿಸಿಕೊಳ್ಳುವುದು ವಿಪರೀತದ ಸಂಗತಿಯೇ ಹೌದು. ಮುಕ್ತತೆಗೆ ಆಧುನಿಕತೆಯ ಮುಖವಾಡವನ್ನು ಹಾಕಿರುವುದರಿಂದ, ಆಧುನಿಕತೆ ಎನ್ನುವುದು ಕ್ಷಣ ಕ್ಷಣದ ಹೊಸ ಫಲಿತವಾಗುವುದರಿಂದ ಪ್ರತಿಯೊಬ್ಬರಿಗೂ ತನ್ನನ್ನು ಒಡ್ಡಿಕೊಳ್ಳಲೇಬೇಕಾದ ತುರ್ತಿದೆ. ಇಂತಹ ತುರ್ತಿನ ರೂಪವಾಗಿಯೇ ಇಂದಿನ ದೃಶ್ಯಮಾಧ್ಯಮವನ್ನು ವಿಶೇಷವಾಗಿ, ಕಿರುತೆರೆಯನ್ನು ಗಮನಿಸಬೇಕಿದೆ. ಸ್ವಲ್ಪ ಹಿಂದಿನ ನಿನ್ನೆ ಮೊನ್ನೆಯವರೆಗೆ ಸಿನಿಮಾ ಇಡೀ ದೇಶವನ್ನು ಗಂಭೀರವಾಗಿ ಪ್ರಭಾವಿಸಿದ್ದ ನೆಲೆ ತುಸು ಸಡಿಲವಾದಂತಾಯ್ತೆ ಎನಿಸುವಲ್ಲಿಯೇ ಅದನ್ನು ಮೀರಿದಂತೆ ಕಿರುತೆರೆ ತನ್ನ ಹಿಡಿತವನ್ನು ಮನೆ ಮನೆಯಲ್ಲಿಯೂ ಗಟ್ಟಿಮಾಡಿಕೊಂಡಿದೆ. ಹೀಗೊಂದು ಮಾಧ್ಯಮ ಇಲ್ಲವಾದರೆ ಬದುಕೇ ಸಾಧ್ಯವಿಲ್ಲ ಎನಿಸುವಷ್ಟರ ಮಟ್ಟಿನ ಪ್ರಭಾವವನ್ನು ಸಂಪೂರ್ಣ ಆರೋಗ್ಯಪೂರ್ಣ ಎನ್ನಲಾದೀತೆ?.

        ‘ಮಾಹಿತಿ ತಂತ್ರಜ್ಞಾನದ ಯುಗ’ ಎನ್ನುವ ಮಾತು ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಎಲ್ಲರೂ ಇದರ ಹಿಂದೆಯೇ ಹೊರಟವರಾಗಿದ್ದಾರೆ. ‘ಸ್ಪರ್ಧೆ’ ಎನ್ನುವುದು ದೇಶ-ದೇಶಗಳ ನಡುವೆ ಮೀರಲಾರದಷ್ಟು ಬೃಹತ್ತಾಗಿ ಬೆಳೆದುನಿಂತಿದೆ. ಇಲ್ಲೆಲ್ಲಾ ಪ್ರಬಲಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವುದು, ಈ ಮನೆಮನೆಯ ಕಿರುತೆರೆಯೇ ಎನ್ನುವುದು ಗಮನಾರ್ಹ.

         ಈ ಮೊದಲಲ್ಲಿ ಗಮನಿಸಿದ ಹಾಗೆ ದೂರದರ್ಶನವೇ ಒಂದು ಹೊಸ ಜಗತ್ತು ಎಂದುಕೊಂಡು ಅನುಭವಿಸಿದ್ದ ಸಂಭ್ರಮ ಕಾಲಕಳೆದಂತೆ ‘ಆಧುನಿಕತೆ’ಯ ರೂಪಕವಾಗುವ ಹೊತ್ತಿಗೆ ವಿವಿಧ ವಾಹಿನಿಗಳ ಮೂಲಕ ಮತ್ತಷ್ಟು ವರ್ಣರಂಜಿತವಾಗಿ ತೆರೆದುಕೊಂಡಿತು. ಸಾಮಾನ್ಯವಾಗಿ ವ್ಯಾಪಾರಿ ಮನೋಧರ್ಮವೇ ಹಾಗೆ, ವ್ಯವಹಾರಕ್ಕಾಗಿ ಅದು ಅಸ್ತಿತ್ವಕ್ಕೆ ಹಲವು ಆಯಾಮಗಳನ್ನು ಹುಡುಕುತ್ತದೆ. ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತದೆ. ನಿರ್ದಿಷ್ಟ ‘ಮೌಲ್ಯ’ವನ್ನು ಒಪ್ಪಿಕೊಂಡೇ ಬದುಕಬೇಕೆನ್ನುವಂತಿಲ್ಲ. ಬದ್ಧತೆಯ ತುಂಬಾ ದೊಡ್ಡಮಾತುಗಳನ್ನು ಹೇಳಿದರೂ ಗಮನವೆಲ್ಲ ಜನಪ್ರಿಯತೆಯ ಮಾನದಂಡವನ್ನು ಹುಡುಕುವಂತಹದ್ದೇ ಆಗಿರುತ್ತದೆ ಹಾಗಾಗಿ ‘ರಾಜಿ ಮನೋಭಾವ’ಕ್ಕೆ ಅಲ್ಲೊಂದು ಆದ್ಯತೆ ಎದ್ದು ಕಾಣುತ್ತಿರುತ್ತದೆ.

         ಒಂದೆರಡು ಕಾರ್ಯಕ್ರಮಗಳು ಒಂದು ರಾಷ್ಟ್ರೀಯ ಮತ್ತೊಂದು ಪ್ರಾದೇಶಿಕ ಎಂದು ಗೊತ್ತುಪಡಿಸಿಕೊಂಡು ಅಲ್ಲಿನ ಕಾರ್ಯಕ್ರಮಗಳಿಗೆ ಬದ್ಧವಾಗಿ ತನ್ನನ್ನು ಒಪ್ಪಿಸಿಕೊಂಡಿದ್ದ ಪ್ರೇಕ್ಷಕನಿಗೆ ದಿಢೀರನೆ ಅಚ್ಚರಿಯ ರೂಪದಲ್ಲಿ ಬಹುವಾಹಿನಿಗಳ ಲೋಕವೊಂದು ತೆರೆದುಕೊಂಡಿತು. ಮನೆಯ ಮೇಲೆ ಹಾಕಿದ್ದ ‘ಅಂಟೆನಾ’ದ ದಿಕ್ಕನ್ನು ಕಾಯ್ದುಕೊಂಡು, ಸರಿಪಡಿಸಿಕೊಂಡು ಕಿರುತೆರೆಯ ಚಿತ್ರಗಳೊಂದಿಗೆ ಮನರಂಜನೆಯನ್ನು ಕಂಡುಕೊಳ್ಳುತ್ತಿದ್ದ ಪ್ರೇಕ್ಷಕರಿಗೆ ಆ ಅಂಟೆನಾಗಳ ಹಂಗಿಲ್ಲದೆ ಅದನ್ನು ನಿಯಂತ್ರಿಸುವ ವ್ಯವಸ್ಥೆಯೊಂದು ‘ಕೇಬಲ್’ ಮೂಲಕ ಅವಕಾಶವಾಯ್ತು. ಇದು ಖಂಡಿತವಾಗಿ ಒಂದು ನಿರಾಳತೆಯ ಸಂಗತಿಯಾಗಿ ಆಕರ್ಷಕವಾದ ಲೋಕವು ಕಿರುತೆರೆಯಲ್ಲಿ ಅನಾವರಣವಾಯಿತು. ಒಂದೆರಡು ಕಾರ್ಯಕ್ರಮಗಳ ಮಿತಿದಾಟಿ ಏಕಕಾಲಕ್ಕೆ ಹತ್ತುಹಲವು ಭಿನ್ನವಾಹಿನಿಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಎನ್ನುವ ವ್ಯಾಪ್ತಿಯನ್ನು ದಾಟಿದಂತೆ ಕೈನಲಿದ್ದ ‘ರಿಮೋಟ್’ನೊಂದಿಗೆ ಚಿತ್ತಾಕರ್ಷಕವಾದ ಸಾಧ್ಯತೆಗಳು ತೆರೆದುಕೊಂಡವು. ಕಪ್ಪುಬಿಳುಪು-ಬಣ್ಣವಾಗಿತ್ತು, ಭಾವಕ್ಕೆ ಅನಂತತೆಯ ಸ್ವರೂಪ ಒದಗಿಬಂತು. ಮನೆಯ ಅಂಗಳ ಜಗತ್ತಿನ ಆವರಣಕ್ಕೆ ವಿಸ್ತಾರಗೊಂಡಿತು. ‘ದೂರದರ್ಶನ’ದ ಹೆಜ್ಜೆಗಳು ಹೀಗೊಂದು ಮುಕ್ತಜಗತ್ತಿನ ವ್ಯವಹಾರದ ವಾಹಿನಿಗಳೊಂದಿಗೆ ದಾಪುಗಾಲಿಟ್ಟ ಓಟವಾದವು.

         ಇಲ್ಲಿಂದಾಚೆಗೆ ಗಮನಿಸುವ ತುರ್ತು ದಿನೇ ದಿನೇ ಹೆಚ್ಚಾದದ್ದು, ವಾಹಿನಿಗಳ ಸಂಖ್ಯೆ, ಕಾರ್ಯಕ್ರಮ ಸ್ವರೂಪ, ಬದ್ಧತೆ ಅವುಗಳ ಮಾನದಂಡ ಹೀಗೆ ಹತ್ತಾರು ಕಾರಣಗಳಿಗಾಗಿ ಎನ್ನುವುದಿಲ್ಲಿ ಮುಖ್ಯ. ಆರಂಭಕ್ಕೆ ದೂರದರ್ಶನದ ಕಾರ್ಯಕ್ರಮಗಳನ್ನು ನೋಡುವಲ್ಲಿ ತಿಂಗಳ ವಂತಿಗೆ ನೀಡುವಂತಿರಲಿಲ್ಲ ಆದರೆ ವ್ಯಾಪಾರಿ ಮನೋಭಾವದೊಂದಿಗೆ ಆರಂಭವಾದ ವಾಹಿನಿಗಳನ್ನು ನೋಡುವ ಮೊದಲಿಗೆ ಇಂತಹದ್ದೊಂದು ಸಣ್ಣ ಬಾಡಿಗೆಯಿತ್ತು. ಜನರಿಗೆ ಅದು ವಿಶೇಷವೆನಿಸಲಿಲ್ಲ ಮತ್ತು ಇಷ್ಟರಲ್ಲಾಗಲೇ ‘ದೂರದರ್ಶನ’ದ ಮೂಲಕ ಕಿರುತೆರೆಯ ಹಿರಿತನಕ್ಕೆ ಪ್ರೇಕ್ಷಕ ಸೋತದ್ದಾಗಿತ್ತು. ಹೊಸತನಗಳ ನಿರೀಕ್ಷೆಗೆ ಅವನು ಸಿದ್ಧನಾಗಿದ್ದ.

         ಮುಖ್ಯವಾಗಿ ನಾವಿಲ್ಲ ಗಮನಿಸಬೇಕಾದದ್ದು, ಆರಂಭಕ್ಕೆ ದೂರದರ್ಶನ ದೇಶದ, ನಾಡಿನ ಸುದ್ದಿ-ಸಮಾಚಾರ, ಪೂರಕಜ್ಞಾನ ಇಂತಹವುಗಳನ್ನು ಮುಖ್ಯವಾಗಿರಿಸಿಕೊಂಡು ನಂತರಕ್ಕೆ ಮನರಂಜನೆಯಂತಹದ್ದಕ್ಕೆ ಒತ್ತುನೀಡಿತ್ತು. ಆದರೆ ‘ಮನರಂಜನೆ’ಯೇ ಮುಖ್ಯವಾದದ್ದು ಈ ನಾಗರೀಕ ಜಗತ್ತಿನ ಬಹುಜನರ ಆಸಕ್ತಿಯನ್ನು ಹೇಳುವಂತಹುದೇ ಆಗಿತ್ತು. ವಯೋಮಾನ, ವೃತ್ತಿ, ಪ್ರವೃತ್ತಿಗಳನ್ನು ಮೀರಿದಂತಹ ಒಂದು ಸಾರ್ವತ್ರಿಕ ಒಪ್ಪಿಗೆಯ ಅಂಶ ಮನರಂಜನೆ ಕಾರ್ಯಕ್ರಮಕ್ಕಿತ್ತು. ಹಾಗಾಗಿಯೇ ಖಾಸಗಿವಾಹಿನಿಗಳು ತಮ್ಮ ಅಸ್ತಿತ್ವದ ರೂಪಕ್ಕೆ, ಆಕರ್ಷಣೆಯ ಹಾದಿಗೆ ಸಿನಿಮಾಲೋಕವನ್ನೆ ಹೆಚ್ಚು ಅವಲಂಬಿಸುವಂತಾಗಿತ್ತು.

        ‘ಸಿನಿಮಾಲೋಕ’ ಇಡೀ ಜಗತ್ತನ್ನೇ ಪ್ರಭಾವಿಸಿದ ಒಂದು ಮಹತ್ವದ ದೃಶ್ಯಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿನ ಜಗತ್ತಿನಲ್ಲಿಯೂ ಬೃಹತ್ ಉದ್ಯಮವಾಗಿಯೇ ಗುರುತಿಸಲ್ಪಡುವ ಚಲನಚಿತ್ರ ಪ್ರಪಂಚ ತನ್ನ ಅಸ್ತಿತ್ವವನ್ನು ಎಷ್ಟರಮಟ್ಟಿಗೆ ಉಳಿಸಿಕೊಂಡು ಬೆಳೆಸಿತೆನ್ನುವುದಕ್ಕೆ ಸರಿಸಮಾನವಾದ ಮತ್ತೊಂದು ಅಂಶ ಹೇಳುವುದಾಗುತ್ತಿಲ್ಲ. ಬಹುಶಃ ಮನುಷ್ಯಲೋಕದ ಅತ್ಯುತ್ತಮ ಕಲೆಗಳಲ್ಲಿ ಒಂದೆಂದು ಗುರುತಿಸಿಕೊಂಡು ವಿಶ್ವಸಂಸ್ಕೃತಿಯನ್ನೇ ನಿಯಂತ್ರಿಸುವಷ್ಟು ಉತ್ಕರ್ಷಕ್ಕೇರಿದ ‘ನಾಟಕ’ಗಳ ಪರಂಪರೆಯೇ ಒಂದು ವಿಸ್ಮಯ. ಎಲ್ಲ ಕಲೆಗಳಲ್ಲಿ ಶ್ರೇಷ್ಠ ಎನ್ನುವ ಸ್ಥಾನವನ್ನು ಪಡೆದುಕೊಂಡ ಅನನ್ಯ ಹೆಗ್ಗಳಿಕೆ ನಾಟಕದ್ದು. ಕಣ್ಣೆದುರೇ ತೆರೆದುಕೊಳ್ಳುವ ಜೀವಂತಿಕೆಯ ದೃಶ್ಯಕಾವ್ಯವಾದ ನಾಟಕಗಳು ಪ್ರತಿಭಾ ಸಂಭ್ರಮಗಳಾದದ್ದು ಸಹಜವೇ ಆಗಿತ್ತು. ಕಾವ್ಯಸ್ವರೂಪಗಳೆಲ್ಲ, ಪುರಾಣ, ಪುಣ್ಯಕತೆಗಳೆಲ್ಲಾ ಕಣ್ಮುಂದೆ ತೆರೆದುಕೊಳ್ಳುವ ಒಂದು ವಿಶಿಷ್ಟ ಪ್ರಯೋಗವಾಗುತ್ತಲೇ ಅಕ್ಷರಸ್ಥ ಅನಕ್ಷರಸ್ಥರ ಭೇದಗಳಿಲ್ಲದಂತೆ ಸರ್ವರನ್ನು ಮುಟ್ಟಬಹುದಾದ ಸಾಧ್ಯತೆಯೂ ನಾಟಕದ ಜನಪ್ರಿಯತೆಗೆ ಮುಖ್ಯಕಾರಣವಾಗಿತ್ತು. ಇದು ಮುಂದೆ ಸಿನಿಮಾದ ಕಲ್ಪನೆಗೂ ಮೂಲವಾಯಿತೇನೋ ಎನ್ನುವುದನ್ನು ಯಾರು ಸುಲಭವಾಗಿ ನಿರಾಕರಿಸುವಂತಿಲ್ಲ. ಹಾಗಾಗಿಯೂ ನಾಟಕಗಳು ಬೇರೆ ಯಾವ ಕಲೆಯಿಂದಲೂ ಎದುರಿಸಲಾಗದ ಸವಾಲನ್ನು ಎದುರಿಸುವುದಾಯಿತು, ಅಷ್ಟಲ್ಲದೆ ಆಧುನಿಕತೆಯ ಉನ್ನತಿಯನ್ನು ದಿನೇ ದಿನೇ ಗಳಿಸಿಕೊಂಡ ಸಿನಿಮಾಗಳ ಜನಪ್ರಿಯತೆಯ ಹೊಡೆತದಲ್ಲಿ ನಾಟಕಗಳು ಕ್ರಮೇಣ ಕಳೆದೇಹೋದವು ಎಂಬ ವಿಪರ್ಯಾಸವೂ ಸೃಷ್ಟಿಯಾಯಿತು.

         ಹೊಸತನ, ಆಧುನಿಕತೆ, ತಂತ್ರಜ್ಞಾನ, ಜೀವಂತಿಕೆ, ಅಖಂಡ ಪ್ರಪಂಚದರ್ಶನ, ಸಂಗೀತ, ಹಾಡು, ದೃಶ್ಯವೈಭವ -ಹೀಗೆ ಹತ್ತಾರು ವಿನೂತನ ಪ್ರಯೋಗಗಳು ಸಿನಿಮಾವನ್ನು ದಿನೇ ದಿನೇ ಮನರಂಜನೆಯ ಸಮಗ್ರ ಸಾಧ್ಯತೆಯ ಮುಖ್ಯರೂಪವಾಗಿಸಿಬಿಟ್ಟಿತು. ಈ ಕ್ಷಣಕ್ಕೂ ಹೊಸತನಕ್ಕೆ ಒಡ್ಡಿಕೊಳ್ಳುವುದನ್ನೇ ತನ್ನ ಅನಿವಾರ್ಯತೆಯ ಅಂಶವಾಗಿಸಿಕೊಂಡಂತೆ ‘ಸಿನಿಮಾ’ ಜಗತ್ತು ವಿಸ್ಮಯಗಳನ್ನು ಪ್ರೇಕ್ಷಕನಿಗೆ ಪರಿಚಯಿಸುತ್ತಲೇ ಇದೆ. ಎಲ್ಲಾಕಾಲಕ್ಕೂ ಹೀಗೆ ಸಿನಿಮಾಗಳು ಒಂದಿಲ್ಲೊಂದು ಕಾರಣಕ್ಕೆ ಜನರಿಗೆ ಆದರ್ಶದಂತೆಯೂ ಮಾದರಿಯಾಗಿದೆ. ಪ್ರಶ್ನೆಗಳಿರುವುದು, ಕೆಲವೊಮ್ಮೆ ಆತಂಕಗಳಿರುವುದು ಈ ಆದರ್ಶದ ಮಾದರಿಗಳಲ್ಲೇ ಎನ್ನುವುದನ್ನು ಮರೆಯುವಂತಿಲ್ಲ.

         ಇಂತಹ ಅತ್ಯಂತ ಪ್ರಭಾವಶಾಲಿಯಾದ ಪ್ರಪಂಚವನ್ನು ನಂಬಿಯೇ ಹಲವಾರು ವಾಹಿನಿಗಳು ಆರಂಭಕ್ಕೆ ಕಾರ್ಯಾರಂಭ ಮಾಡಿದವು, ಬಹುಪಾಲು ಕನ್ನಡದ ಎಲ್ಲಾ ವಾಹಿನಿಗಳೂ ‘ಚಲನಚಿತ್ರಗೀತೆ’ಗಳನ್ನು ಪ್ರಸಾರ ಮಾಡುತ್ತಲೇ ತಮ್ಮನ್ನು ಗುರುತಿಸಿಕೊಂಡು ಕ್ರಮೇಣ ನೆಲೆ ವಿಸ್ತರಿಸಿಕೊಂಡದ್ದನ್ನಿಲ್ಲಿ ನೆನೆಯಬಹುದು. ಸಿನಿಮಾದ ಮೂಲಕವೇ ಮನರಂಜನೆ ಎನ್ನುವುದಕ್ಕೆ ವಿಶೇಷ ಅರ್ಥವನ್ನು ಕಂಡುಕೊಂಡಿದ್ದ ಶ್ರೀಸಾಮಾನ್ಯರು ಹಣಕೊಟ್ಟೇ ಮನರಂಜನೆ ಪಡೆಯುತ್ತಿದ್ದರು. ಅಂದರೆ ಇದು ಅವರಿಗೆ ಅನಿವಾರ್ಯತೆಯ ರೂಪದಿಂದಲೂ ಕಾಡಿದ್ದಾಗಿತ್ತು. ‘ದೂರದರ್ಶನ’ವು ದೇಶದ ಜಾಲವಾಗಿ ಕಾರ್ಯನಿರ್ವಹಿಸುವ ಹೊತ್ತಿಗೂ ಅತೀ ಜನಪ್ರಿಯ ಕಾರ್ಯಕ್ರಮಗಳು ಸಿನಿಮಾಲೋಕವನ್ನೇ ಅವಲಂಬಿಸಿದ್ದಾಗಿತ್ತೆನ್ನುವುದು ಈಗಾಗಲೇ ಖಚಿತವಾಗಿತ್ತು. ಸುಲಭವಾಗಿ ಜನರನ್ನು ಆಕರ್ಷಿಸಬಹುದಾದ ಸಾಧ್ಯತೆಯಾಗಿತ್ತೆನ್ನುವ ಕಾರಣದಿಂದಲೇ ಖಾಸಗಿವಾಹಿನಿಗಳಿಗೂ ಸಿನಿಮಾ ಎನ್ನುವುದು, ಆ ಪರವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಸುಲಭದ ಹಾದಿಯಾಗಿತ್ತು.

         ಖಾಸಗಿಯವರ ಸಾರ್ವಜನಿಕ ಕ್ಷೇತ್ರದಲ್ಲಿ ಹಣಹೂಡಿಕೆ ಮಾಡುವ ಮುಖ್ಯ ಉದ್ದೇಶ ವ್ಯವಹಾರ ತನ್ಮೂಲಕ ಲಾಭ, ಅದರಾಚೆಗೆ ಉಳಿದದ್ದು, ಜೊತೆಗೆ ಬಹಳ ಮುಖ್ಯವಾಗಿ ಏಕಕಾಲಕ್ಕೆ ಅಪಾರ ಸಂಖ್ಯೆಯ ವೀಕ್ಷಕರನ್ನು ತಲುಪಬಲ್ಲ ಏಕೈಕ ಮಾಧ್ಯಮವಾಗಿರುವ ಕಿರುತೆರೆ ಜಾಹಿರಾತುಗಳಿಗೆ ಒಂದು ನೇರವಾದ ಸಾಧನವೂ ಆಗಿತ್ತು. ಹಾಗಾಗಿ ಕಿರುತೆರೆಯ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಪಡೆಯುವುದು ನೂರಕ್ಕೆ ನೂರು ವ್ಯಾಪಾರವಾಯಿತು ಇದನ್ನು ನಂಬಿಯೇ ಖಾಸಗಿವಾಹಿನಿಗಳು ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದವು. ಮುಂದೆ ರಾಜಕಾರಣಿಗಳು, ಉದ್ಯಮಿಗಳು, ಕೆಲವೊಮ್ಮೆ ಧಾರ್ಮಿಕ ಸಂಸ್ಥೆಗಳು ಕಿರುತೆರೆಯ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪಾಲುದಾರಿಕೆಯನ್ನು, ಯಜಮಾನತ್ವವನ್ನು ಪಡೆದವು. ಎಲ್ಲವೂ ವ್ಯವಹಾರ ಎಂದುಕೊಂಡ ಕೂಡಲೇ ಸಹಜವಾಗಿಯೇ ಆಕರ್ಷಣೆ, ಸ್ಪರ್ಧೆ, ಸವಾಲು ಎಂಬಿತ್ಯಾದಿ ವ್ಯವಹಾರದ ತಂತ್ರ-ಪ್ರತಿತಂತ್ರಗಳು ಇಲ್ಲಿ ಮೇಲಾಟಕ್ಕೆ ಕಾರಣವಾದವು.

         ಜಗತ್ತಿನಾದ್ಯಂತ ಇಂದು ಬಹುಶಃ ಸಾವಿರಾರು ವಾಹಿನಿಗಳಿವೆ. ಭಾರತದಲ್ಲಿಯೇ ಪ್ರಾದೇಶಿಕ ವಾಹಿನಿಗಳನ್ನೆಲ್ಲಾ ಗಮನಿಸಿದರೂ ನೂರಾರು ವಾಹಿನಿಗಳಿವೆ. ಕರ್ನಾಟಕದಲ್ಲಿಯೇ ಹತ್ತಕ್ಕೂ ಹೆಚ್ಚಿನ ಖಾಸಗಿವಾಹಿನಿಗಳು ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡು ನಿರಂತರತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿವೆ. ಒಟ್ಟಾರೆಯಾಗಿ ಪ್ರೇಕ್ಷಕರಾದವರು ಗುಣಾತ್ಮಕ ಮತ್ತು ನೇತ್ಯಾತ್ಮಕ ನೆಲೆಯಲ್ಲಿ ಫಲಾನುಭವಿಗಳಾಗಿದ್ದಾರೆ. ಕಿರುತೆರೆ ಇಂದು ಬೃಹತ್‍ಉದ್ಯಮವಾಗಿದೆ ಶ್ರೀಸಾಮಾನ್ಯರೇ ಅದರ ನೇರ ಗ್ರಾಹಕರಾಗಿದ್ದಾರೆ.

        ‘ಮಾಧ್ಯಮ’ ಎಂದು ಹೇಳಲಾಗುವ ಯಾವುದೇ ನೆಲೆಗಳಿದ್ದರೂ ಒಂದು ಸ್ಪಷ್ಟವಾದ ಉದ್ದೇಶ ಮತ್ತು ನಿಲುವು ಅನಿವಾರ್ಯ. ಇಡೀ ಜಗತ್ತು ತನ್ನನ್ನು ಅಸ್ತಿತ್ವದೊಂದಿಗೆ ಮುಖಾ-ಮುಖಿಯಾಗಿಸಿಕೊಳ್ಳುವ ಸಾಧ್ಯತೆಯ ಧ್ವನಿಯಾಗುವುದು ಮಾಧ್ಯಮಗಳ ಬಹುಮುಖ್ಯ ಜವಾಬ್ದಾರಿ ಹಾಗಾಗಿಯೇ ಅದನ್ನು ಸಮೂಹ ಮಾಧ್ಯಮವೆಂದೂ ಗುರುತಿಸಲಾಗಿದೆ. ಸಂಘಜೀವಿ, ಸಮಾಜಜೀವಿ ಎಂದೆನಿಸಿಕೊಳ್ಳುವ ಮನುಷ್ಯ ಅದರ ಮುಂದುವರಿದ ರೂಪವಾದ ಒಂದು ಆಡಳಿತವ್ಯವಸ್ಥೆಯಡಿಯಲ್ಲಿ ನಿರ್ದಿಷ್ಟ ಭೂಪ್ರದೇಶ ಒಂದರಲ್ಲಿ ಬದುಕುತ್ತಿರುತ್ತಾನೆ. ಅವನಿಗೆ ಬದುಕುವ ಹಕ್ಕಿನಂತೆ ತನ್ನನ್ನು ಒಳಗೊಳ್ಳುವ ಆಡಳಿತದ ಬಗೆಗೂ ತಿಳಿದುಕೊಳ್ಳಬೇಕಾದ ಅಗತ್ಯತೆಯಿರುತ್ತದೆ. ಬಹಳ ಸಲ ಅದು ಅನಿವಾರ್ಯತೆಯ ಅರ್ಥವೂ ಆಗಿರುವುದುಂಟು. ಇಂತಲ್ಲಿ ಅವನು ಆಶ್ರಯಿಸುವುದು ಹೀಗೆ ಸಮೂಹಮಾಧ್ಯಮವನ್ನೇ ಎನ್ನುವುದು ಮುಖ್ಯವಾದುದು.

         ಆರಂಭಕ್ಕೆ ಮುದ್ರಣಮಾಧ್ಯಮವೇ ಒಂದು ಕ್ರಾಂತಿಯಂತಾಗಿ, ‘ಸುದ್ದಿಪತ್ರಿಕೆ’ಗಳು ಮಹತ್ವದ ಕಾರ್ಯನಿರ್ವಹಿಸಿದವು. ಈ ಹೊತ್ತಿಗೂ ‘ಅಕ್ಷರಲೋಕ’ದ ಪತ್ರಿಕೆಗಳು ತಮ್ಮ ಮಹತ್ವವನ್ನು ಕಾಯ್ದುಕೊಂಡಿರುವುದು ಅದರ ಶ್ರೇಷ್ಠತೆಯ ಸಾಧ್ಯತೆಯನ್ನೆ ಹೇಳುವಂತಹುದು. ಅಕ್ಷರದ ಅರಿವಿದ್ದವರಿಗಷ್ಟೇ ಮೀಸಲಾಗಿದ್ದ ಪತ್ರಿಕೆಗಳು ಅವರ ಮೂಲಕವೆ ಇತರರಿಗೆ ತಲುಪುವ ಅವಕಾಶವನ್ನು ಕಾಯ್ದಿಟ್ಟುಕೊಂಡಿತ್ತು. ನಂತರ ಆಕಾಶವಾಣಿ, ‘ಹೇಳಿ-ಕೇಳುವ’ ಹೊಸತನಕ್ಕೆ ಚಾಚಿಕೊಂಡಾಗ ಅದು ಪತ್ರಿಕೆಗಳಿಗಿಂತ ವಿಭಿನ್ನವಾದ ಕಾರ್ಯಶೈಲಿಯನ್ನು, ಕಾರ್ಯವ್ಯಾಪ್ತಿಯನ್ನು ತನ್ನದಾಗಿಸಿಕೊಂಡಿತು. ಅದರ ನಿರ್ದಿಷ್ಟ ಸಮಯ ಮತ್ತು ನಿಖರ ಸುದ್ದಿ ಎನ್ನುವುದು ಜನರಿಗೊಂದು ಆಪ್ತವೂ ವಿಶ್ವಾಸಾರ್ಹವೂ ಆದ ಸಂಗತಿಯಾಗಿತ್ತು. ಈ ಎರಡೂ ವಿಶಿಷ್ಟವೂ ಜನಪ್ರಿಯವೂ ಆದ ಮಾಧ್ಯಮಗಳು ಈ ನೆಲದ ಅರಿವಿನ ಭಾಗವೇ ಆಗಿತ್ತೆನ್ನುವುದಿಲ್ಲಿ ಉಲ್ಲೇಖಾರ್ಹ. ಮುಂದುವರಿದಂತೆ ಹೀಗೆ ಸುದ್ದಿಮಾಧ್ಯಮಗಳ ಚೌಕಟ್ಟನ್ನು ವಿಸ್ತರಿಸಿಕೊಂಡಂತೆ ಇತರ ಜ್ಞಾನ-ವಿಚಾರ ಮನರಂಜನೆಯಂತಹ ಸಂಗತಿಗಳೂ ಮುಖ್ಯವಾದವು ಎನ್ನುವುದು ಬದಲಾದ ಅರಿವಿನಪ್ರಜ್ಞೆಯೂ ಆಗಿತ್ತೆನ್ನಬಹುದು.

        ‘ಪತ್ರಿಕೆ’ ಎನ್ನುವುದು ಬಹುಶಃ ಇಡೀ ಜಗತ್ತಿನ ಸಂದರ್ಭದಲ್ಲಿಯೇ ಅತ್ಯಂತ ಸ್ಪಷ್ಟವಾದ ನಿಖರಪ್ರಜ್ಞೆಯ ನೆಲೆ ಎಂದು ಗ್ರಹಿಸಲು ಯತ್ನಿಸಿದ್ದು ಈಗ ಇತಿಹಾಸ. ಈ ದೇಶದ ನಾಲ್ಕನೆಯ ಅಂಗ ಎಂತಲೂ ಆರಂಭಕ್ಕೆ ಪತ್ರಿಕಾ ಸ್ವಾತಂತ್ರ್ಯದ ಬಗೆಗೆ ಮಾತನಾಡಲಾಗಿದೆ. ಇದು ‘ಸರ್ಕಾರ’ ಎನ್ನುವ ವ್ಯಾಪ್ತಿಯಾಚೆಗೆ ಸಾರ್ವಜನಿಕರ ಹಕ್ಕಿನ ರೂಪದಲ್ಲಿಯೂ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿತೆನ್ನುವುದು ಗಮನಾರ್ಹ. ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಮೂಲಭೂತ ಹಕ್ಕಾಗಿರುವ ಭಾರತದಂತಹ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವೆನ್ನುವುದು ಸಹ ಅಂತಹದ್ದೇ ಅರ್ಥವನ್ನು ಧ್ವನಿಸುವಂತಹುದು. ಹಾಗಾಗಿಯೇ ಸ್ವಾತಂತ್ರ್ಯಪೂರ್ವದಲ್ಲಿಯೇ ತುಂಬಾ ವಿಶಿಷ್ಟ ಮತ್ತು ಮಹತ್ವ ಎನ್ನುವಂತೆ ಭಾರತೀಯ ಪತ್ರಿಕೆಗಳು ನಿರ್ಬಂಧಗಳ ನಡುವೆಯೂ ಕಟ್ಟುಪಾಡಿನ ನಡುವೆಯೂ ಗಂಭೀರವಾದ ಪಾತ್ರ ನಿರ್ವಹಿಸಿದ್ದಿದೆ, ಸಹಜವಾಗಿಯೇ ಸ್ವಾತಂತ್ರ್ಯಾ ನಂತರ ಇದರ ನೆಲೆ ಮತ್ತಷ್ಟು ಸೃಜನಶೀಲವಾಯಿತು.

         ಭಾರತದಲ್ಲಿ ಪತ್ರಿಕಾರಂಗದ್ದೇ ವಿಶಿಷ್ಟ ಮೈಲುಗಲ್ಲುಗಳಿವೆ ಅತ್ಯಂತ ಶ್ರೇಷ್ಠ ಪತ್ರಿಕೆಗಳು, ಪತ್ರಕರ್ತರು ನಮ್ಮ ನಡುವೆ ಆಗಿಹೋಗಿದ್ದಾರೆ. ಅಂತಹ ಪರಂಪರೆಯನ್ನು ಪ್ರತಿನಿಧಿಸುವ ಬದ್ಧತೆ ಇನ್ನೂ ಅಲ್ಲಲ್ಲಿ ಉಳಿದುಕೊಂಡದ್ದಿದೆ. ಕೇವಲ ಯಾಂತ್ರಿಕವಾದ ವರದಿ ನೀಡುವುದಷ್ಟೇ ಇಲ್ಲಿ ಉದ್ದೇಶವಾಗಿರಲಿಲ್ಲ. ಅದಕ್ಕೊಂದು ವ್ಯಾಖ್ಯಾನ, ಸಾಧಕ-ಬಾಧಕ, ಮಿತಿ-ವ್ಯಾಪ್ತಿಗಳ ಕುರಿತ ವಿಶ್ಲೇಷಣೆಯೂ ಪತ್ರಿಕಾ ಸ್ವಾತಂತ್ರ್ಯದ ವಿಶೇಷ ಶಕ್ತಿಯಾಗಿತ್ತು. ಇಂತಹ ಬದ್ಧತೆಯ ಕಾರಣದಿಂದಲೇ ದಿನೇ ದಿನೇ ಪತ್ರಿಕೆಗಳ ಪ್ರಸರಣದಲ್ಲಿ ಏರಿಕೆ ಕಂಡುಬಂದಿತು. ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಅವಕಾಶವೂ ಮುಕ್ತವಾಯಿತು.
 
         ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ‘ಪತ್ರಿಕೆ’ಯ ಅವಶ್ಯಕತೆ ಮತ್ತು ಅನಿವಾರ್ಯತೆ ಬಹುಶಃ ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚಾಗಿತ್ತು. ಎಂದರದು ಉತ್ಪ್ರೇಕ್ಷೆಯಾಗಬೇಕಿಲ್ಲ. ಜನರಿಂದ, ಜನರಿಗಾಗಿ, ಜನರೇ ಸರ್ಕಾರ ಎನ್ನುವ ಆದರ್ಶವನ್ನು ಹೊಂದಿರುವ ಕಾರಣದಿಂದಲೂ ಎಲ್ಲಾ ಸಂಗತಿಗಳು ಜನರಿಗೆ ನೇರವಾಗಿ, ನಿಖರವಾಗಿ ತಲುಪಲೇಬೇಕಿತ್ತು. ಅದನ್ನು ಆರಂಭದಿಂದ ಪತ್ರಿಕೆಗಳು, ದಿಟ್ಟ ಕರ್ತವ್ಯದಂತೆ ಯಶಸ್ವಿಯಾಗಿ ನಿರ್ವಹಿಸಿದವು ಕೂಡ. ಪತ್ರಿಕಾ ಜನಪ್ರಿಯತೆಯಲ್ಲಿಯೂ ಈ ಅಂಶವೇ ಮುಖ್ಯವಾಗಿದೆ.

        ಒಟ್ಟಾರೆಯಾಗಿ ಪತ್ರಿಕೆಗಳು ಈ ನೆಲದಲ್ಲಿ ಒಂದು ಮಾಧ್ಯಮ ಎನ್ನುವುದು ಹೇಗೆಲ್ಲಾ ಕೆಲಸ ನಿರ್ವಹಿಸಬಹುದು, ನಿರ್ವಹಿಸಬೇಕು ಎನ್ನುವುದಕ್ಕೆ ಮಾದರಿಯನ್ನು ರೂಪಿಸಿದಂತಿತ್ತು. ಈಗಾಗಲೇ ಗಮನಿಸಿದಂತೆ ಆಕಾಶವಾಣಿ ಸರ್ಕಾರದ ಅಧೀನದಲ್ಲಿದ್ದೂ ಸಾಧ್ಯವಾದಷ್ಟು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಯತ್ನಿಸಿತ್ತು. ಮತ್ತೆ ಮುಂದುವರೆದು ‘ದೂರದರ್ಶನ’ವೂ ಬದ್ಧತೆಯನ್ನು ಉಳಿಸಿಕೊಳ್ಳಲು ಯತ್ನಿಸಿತು.

        ಈಗ ವಿಶೇಷವಾಗಿ ಗಮನಿಸುವ ತುರ್ತು ಸೃಷ್ಟಿಯಾಗಿರುವುದು ಮುಕ್ತ ಜಗತ್ತಿನ, ಮಾರುಕಟ್ಟೆಯ ಮುಕ್ತಾವಾಹಿನಿಗಳ ಸಂದರ್ಭದಲ್ಲಿ ಎನ್ನುವುದು ಗಮನಾರ್ಹ. ಒಳಿತು-ಕೆಡುಕುಗಳ ನಡುವಿನ ಮುಖಾ-ಮುಖಿಯ ಅರ್ಥದಿಂದಲೇ ನಾವಿದನ್ನು ಅವಲೋಕಿಸುವ ತುರ್ತಿದೆ. ಎಂದಿಗಿಂತ ಇಂದು ಜಗತ್ತು ತುಂಬಾ ವೇಗವಾಗಿ ಬದಲಾವಣೆ ಮತ್ತು ಹೊಸತನ ಎನ್ನುವುದನ್ನು ಮೈಗೂಡಿಸಿಕೊಂಡು ಎಲ್ಲಕ್ಕೂ ಆಧುನಿಕತೆಯ ಮಂತ್ರವನ್ನೇ ಪಠಿಸುತ್ತಿದೆ. ಹಾಗಾಗಿ ಸಾಂಸ್ಕøತಿಕ ಜವಾಬ್ದಾರಿ ಎನ್ನುವುದಕ್ಕೆ ಹತ್ತಾರು ಅರ್ಥಗಳಿವೆ....

         ಹತ್ತಾರು ಸಂಸ್ಕøತಿಗಳು ಅನಂತ ಪರಿಸರ ವೈವಿಧ್ಯದ ನೂರಾರು ಭಾಷೆ, ಉಪಭಾಷೆಗಳು ಬದುಕಿರುವ ಈ ದೇಶ ತನ್ನದೇ ವ್ಯವಸ್ಥಿತವಾದ ನಂಬಿಕೆಯೊಂದಿಗೆ ಜಗತ್ತಿನಲ್ಲಿ ಅಸ್ತಿತ್ವವನ್ನು ಗುರುತಿಸಿಕೊಂಡಿದೆ. ಇಂತಹ ನೆಲದಲ್ಲಿ, ಪ್ರಜಾಪ್ರಭುತ್ವವೆನ್ನುವುದೇ ಈ ದೇಶಕ್ಕೆ ಪರ್ಯಾಯ ಎಂಬ ಸಾಧ್ಯತೆಯಲ್ಲಿ ಖಂಡಿತವಾಗಿಯೂ ಸಮೂಹಮಾಧ್ಯಮಗಳು, ಸಾರ್ವಜನಿಕ ವಲಯದಲ್ಲಿ ತುಂಬಾ ಜವಾಬ್ದಾರಿಯುತವಾಗಿ ಮತ್ತು ಎಂದಿಗೂ ಭ್ರಷ್ಟಗೊಳ್ಳದೆ ಬಹಳ ಎಚ್ಚರದಿಂದ ಎಲ್ಲಾ ವ್ಯಾಮೋಹಗಳನ್ನು ಮೀರಿದಂತೆ ಕರ್ತವ್ಯ ನಿರ್ವಹಿಸಿ ದೇಶ ಕಟ್ಟುವಲ್ಲಿ, ನಾಡು ಕಟ್ಟುವಲ್ಲಿ, ಸಮಾಜ ಕಟ್ಟುವಲ್ಲಿ ತುಂಬಾ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ.

         ‘ಆಧುನಿಕತೆ’ ಅನ್ನೋದು ಅನಿವಾರ್ಯತೆಯ ರೂಪ ಹಾಗಾಗಿ ‘ಪರಿವರ್ತನೆ ಜಗದ ನಿಯಮ’ ಇದರ ನಡುವೆಯೂ ಅಸ್ತಿತ್ವ, ಮೌಲ್ಯ ಮತ್ತು ಸಾರ್ವಜನಿಕ ಬದ್ಧತೆಗಳು ತಮ್ಮತನವನ್ನು ಕಾಯ್ದುಕೊಳ್ಳಬೇಕಿದೆ. ಇದು ‘ಸಮೂಹ ಮಾಧ್ಯಮ’ದ ಸಾರ್ವಕಾಲಿಕ ಎಚ್ಚರವಾಗಬೇಕಿದೆ. ಮೊದಲಿಗೆ ಗಮನಿಸಿದ ಹಾಗೆ, ಸುದ್ದಿಮಾಧ್ಯಮವೆಂದೇ ಮೊದಲಿಗೆ ಪ್ರಾಧಾನ್ಯತೆ ಗಳಿಸಿಕೊಂಡ ‘ದೂರದರ್ಶನ’ ಪರಿಕಲ್ಪನೆ ಕ್ರಮೇಣ ಅದು ಒಂದು ಅಂಶವೆಂದೇ ಪರಿಗಣಿಸಲ್ಪಟ್ಟು ಸಮಗ್ರತೆಯ ರೂಪದಲ್ಲಿ ಮನರಂಜನೆ ಎನ್ನುವುದನ್ನೇ ಪ್ರಧಾನವಾಗಿಸಿಕೊಂಡಿತು ಮತ್ತು ಈಗಾಗಲೇ ಮತ್ತೆ ಮತ್ತೆ ಗಮನಿಸಿದಂತೆ ‘ಖಾಸಗಿವಾಹಿನಿ’ಗಳಿಗೆ ಪ್ರಸಾರದ ಹಕ್ಕು ಲಭಿಸಿದ ಕೂಡಲೇ ಅವು ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯ ಭಾಗವಾಗಿಯೇ ‘ಜನಪ್ರಿಯತೆ’ಯನ್ನೇ ಒಂದಂಶದ ಗುರಿಯನ್ನಾಗಿಸಿಕೊಂಡು, ಎಲ್ಲವೂ ಮನರಂಜನೆಯ ವಾಹಿನಿಗಳಾಗಿಯೇ ತಮ್ಮನ್ನು ಗುರುತಿಸಿಕೊಂಡಿವೆ.

         ಪ್ರತೀ ವಾಹಿನಿಗಳು ಒಂದು ನಿರ್ದಿಷ್ಟ ಸಮಯವನ್ನನುಸರಿಸಿಕೊಂಡು ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿವೇಳೆಯಲ್ಲಿ ಸುದ್ದಿಪ್ರಸಾರವನ್ನು ತಮ್ಮ ಕಾರ್ಯಕ್ರಮದ ಭಾಗವಾಗಿಸಿಕೊಂಡದ್ದು ಒಂದು ಔಪಚಾರಿಕ ವ್ಯವಸ್ಥೆಯಂತೆಯೂ ತೋರುತ್ತದೆ. ಬಹುಪಾಲು ಇಡೀ ದಿನ ಕಾರ್ಯಕ್ರಮಗಳನ್ನು ಯೋಜಿಸಿಕೊಳ್ಳುವ ಈ ವಾಹಿನಿಗಳು ಒಮ್ಮೆಗೆ ಅರ್ಧಗಂಟೆಯ ಮಿತಿಯೊಂದಿಗೆ ಒಟ್ಟಾರೆಯಾಗಿ ಇಡೀ ದಿನದ ಲೆಕ್ಕಕ್ಕೆ ಸುಮಾರು ‘ಒಂದು ಗಂಟೆ ಮೂವತ್ತು ನಿಮಿಷ’ದ ಅವಧಿಯನ್ನು ಮಾತ್ರ ಪ್ರಚಲಿತವಿದ್ಯಮಾನಗಳ ಅಂದರೆ ದೇಶದ-ರಾಜ್ಯದ ಸುದ್ದಿಗಳಿಗೆ ಮೀಸಲಿಡುವಲ್ಲಿಯೇ ವಾಹಿನಿಗಳು ಬಹಳ ಸ್ಪಷ್ಟವಾಗಿ ಮನರಂಜನೆಗೇ ಮೀಸಲಾಗಿದೆ ಎನ್ನುವುದನ್ನು ತಿಳಿಯಬಹುದಾಗಿದೆ.

         ನಂತರಕ್ಕೆ ಮತ್ತೊಂದು ಮುಖ್ಯ ಬೆಳವಣಿಗೆಯೆಂದರೆ ಮನರಂಜನಾ ವಾಹಿನಿಗಳನ್ನು ಹೊರತುಪಡಿಸಿದಂತೆ ‘ಸುದ್ದಿವಾಹಿನಿ’ಗಳೇ ಪ್ರತ್ಯೇಕವಾಗಿ ಆರಂಭವಾದದ್ದು ಗಮನಾರ್ಹ. ಇಡೀ ದಿನ ಇಪ್ಪತ್ನಾಲ್ಕು ಗಂಟೆಯ ಲೆಕ್ಕಾಚಾರದಲ್ಲಿ ‘ಸುದ್ದಿವಾಹಿನಿ’ಗಳು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದು ಮತ್ತೂ ಕುತೂಹಲಕರ ಹಾಗೆಂದು ಇಡಿಯಾಗಿ ಗುಣಾತ್ಮಕ ಎನ್ನುವಂತೆ ಇದನ್ನು ಪರಿಭಾವಿಸಬೇಕಿಲ್ಲ ಮೇಲೆ ಕಂಡಂತೆ ಮನರಂಜನ ವಾಹಿನಿಗಳ ಅಲ್ಪಕಾಲದ ಸುದ್ದಿಗಳ ವಿಚಾರವನ್ನು ತುಂಬಾ ‘ಮಿತಿ’ಯದ್ದೆಂದು ಯೋಚಿಸಿದರೆ ಇಡೀ ದಿನದ ಸುದ್ದಿವಾಹಿನಿಗಳ ಪರಿಕಲ್ಪನೆಯನ್ನು ‘ಅತಿ’ ಎಂದೇ ಯೋಚಿಸಬಹುದು. ಕರ್ನಾಟಕದ ಸಂದರ್ಭಕ್ಕೆ ಇದು ಹೆಚ್ಚು ದೃಢೀಕರಿಸಬಹುದಾದುದೆಂದೇ ಪರಿಭಾವಿಸಬಹುದು.

        ಕರ್ನಾಟಕದ ಈ ಕಿರುತೆರೆಯ ವಾಹಿನಿಯ ಜಗತ್ತನ್ನು ಗಮನಿಸಿದರೆ ಮೊದಲಿಗೆ ‘ದೂರದರ್ಶನ’ದ ‘ಚಂದನ’ದ ನಂತರ ಉದಯ ಟಿ.ವಿ., ಈ ಟೀವಿ ಕನ್ನಡ, ಜೀ ವಾಹಿನಿ, ಸುವರ್ಣಟಿ.ವಿ., ಕಸ್ತೂರಿಕನ್ನಡಗಳನ್ನು ಮುಖ್ಯವಾದ ಮನರಂಜನಾ ವಾಹಿನಿಗಳೆಂದು ಗುರುತಿಸಬಹುದು. ನಂತರಕ್ಕೆ ಈಚೆಗೆ ಸುದ್ದಿಗಾಗಿಯೇ ಆರಂಭಗೊಂಡ ವಾಹಿನಿಗಳ ಸಂಖ್ಯೆ ಇತರ ಮನರಂಜನಾ ವಾಹಿನಿಗಳಿಗಿಂತ ಹೆಚ್ಚೇ ಇವೆ ಎನ್ನುವುದು ವಿಚಿತ್ರ ಸತ್ಯ. ಟಿ.ವಿ.9ಕನ್ನಡ, ಸುವರ್ಣನ್ಯೂಸ್ 24, ಸಮಯಟಿ.ವಿ., ಜನಶ್ರೀ, ಕಸ್ತೂರಿನ್ಯೂಸ್24, ಉದಯನ್ಯೂಸ್, ಪಬ್ಲಿಕ್‍ಟಿ.ವಿ., ರಾಜ್‍ನ್ಯೂಸ್‍ಕನ್ನಡ ಇತ್ಯಾದಿ ಸುದ್ದಿವಾಹಿನಿಗಳನ್ನು ಇಲ್ಲಿ ಉಲ್ಲೇಖಿಸಬಹುದು.

        ಸಂಗೀತವಾಹಿನಿಗಳೆನ್ನಬಹುದಾದ ಮ್ಯೂಸಿಕ್ ಚಾನೆಲ್‍ಗಳು ಬೇರೆಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ಉದಯಮ್ಯೂಸಿಕ್ ಮತ್ತು ರಾಜ್‍ಮ್ಯೂಸಿಕ್‍ಕನ್ನಡ ವಾಹಿನಿಗಳನ್ನು ಉಲ್ಲೇಖಿಸಬಹುದು. ಹಾಸ್ಯಕ್ಕೆಂದೇ ಮತ್ತೊಂದು ವಾಹಿನಿ ‘ಉದಯಕಾಮಿಡಿ’ ಹೆಸರಿನಲ್ಲಿಯೂ ಚಾಲನೆಯಲ್ಲಿದೆ. ಜೊತೆಗೆ ನಿರಂತರವಾಗಿ ಸಿನಿಮಾಗಳನ್ನು ಪ್ರಸಾರಮಾಡುವ ಉದ್ದೇಶಕ್ಕಾಗಿ ‘ಉದಯಮೂವೀಸ್’ ವಾಹಿನಿಯೂ ಚಾಲನೆಯಲ್ಲಿದೆ. ಅಲ್ಲದೆ ಮಕ್ಕಳಿಗೆಂದೆ ಮೀಸಲಾದ ‘ಚಿಂಟು ಟಿವಿ’ ಕೂಡ ಒಂದು ವಾಹಿನಿಯಾಗಿದೆ. ಇವು ಸಾಲದೆಂಬಂತೆ ಮತ್ತಷ್ಟು ವಾಹಿನಿಗಳು ತಮ್ಮ ಕಾರ್ಯವನ್ನು ಆರಂಭಿಸುವ ಸಿದ್ಧತೆಯಲ್ಲಿದ್ದು ಶೀಘ್ರದಲ್ಲಿ ಪ್ರಾರಂಭಗೊಳ್ಳುವ ಲಕ್ಷಣಗಳಿವೆ.

         ಈ ಮೇಲಿನ ವಾಹಿನಿಗಳನ್ನು ಗಮನಿಸಿದರೆ ಮನರಂಜನಾ ವಾಹಿನಿಗಳೇ ಕೆಲವು ಸುದ್ದಿವಾಹಿನಿಯ ಭಿನ್ನ ವಾಹಿನಿಯನ್ನು ಆರಂಭಿಸಿರುವುದು ಮಾಧ್ಯಮಕ್ಷೇತ್ರದಲ್ಲಿ ತಾವು ಹೊಂದಿರಬಹುದಾದ ಜ್ಞಾನದ ಭಾಗವಾಗಿಯೂ ಫಲಿತವಾಗಿಯೂ ಭಾವಿಸಬಹುದಾದುದು.

         ಬದುಕು, ಜಗತ್ತು, ವಿಸ್ತಾರಗೊಂಡ ಬಗೆಯನ್ನು ಒಪ್ಪುವ ಅನಿವಾರ್ಯತೆ ಒಂದು ಬಗೆಯದ್ದಾದರೆ ಅದರೊಂದಿಗೆ ಜಗತ್ತು ಸಂಕೀರ್ಣಗೊಳ್ಳುತ್ತಿರುವ ಸತ್ಯವೂ ಇನ್ನೊಂದು ನೆಲೆಯದ್ದು. ಮನುಷ್ಯ, ನಾಗರೀಕತೆ, ಆಧುನಿಕತೆ ಪರಸ್ಪರ ಒಂದನೊಂದು ಪೂರಕವಾಗಿಯೇ ಸಂಧಿಸಿದಂತಿರುವಾಗ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆ ಊಹಿಸಲಾರದಂತಾಗಿರುವುದು ಕಣ್ಣಮುಂದಿನ ವಾಸ್ತವ. ಕ್ಷಣ ಕ್ಷಣಕ್ಕೂ ವಿಶ್ವದ ಜ್ಞಾನ ಮತ್ತು ಆವಿಷ್ಕಾರಗಳ ಆಯಾಮ ಬದಲಾಗುತ್ತಲೇ ಇದೆ. ಕ್ಷಣಕ್ಕೆ, ದಿನಕ್ಕೆ, ತಿಂಗಳಿಗೆ, ವರ್ಷಕ್ಕೆ ಎಂದು ಲೆಕ್ಕ ಹಿಡಿವಂತೆ ಒಂದಕ್ಕಿಂತ ಒಂದು ಸಂಗತಿಗಳು ಹೊಸತೇ ಆಗಿಬಿಡುವಾಗ ಉನ್ನತಿಗೊಳ್ಳಬೇಕಾದ ತುರ್ತು ಮನುಷ್ಯನ ಪ್ರತೀಕ್ಷಣದ ಪ್ರಯತ್ನದಂತೆಯೇ ಕಾಣುತ್ತದೆ. ಇಂದಿಗೆ ‘ಜ್ಞಾನ’ ಎನ್ನುವುದು ಕೇವಲ ಅಕ್ಷರ, ಓದು, ಅರಿವು ಎನ್ನುವ ಮಿತಿಯಲ್ಲಿ ನಿಂತಿಲ್ಲ, ಪದವೀಧರ ಎನ್ನುವ ಕಾರಣದಿಂದಲೇ ಕೌಶಲ್ಯವನ್ನು ಅಳೆಯುವಂತಹ ಕಾಲವಿಲ್ಲ. ಬುದ್ಧಿವಂತಿಕೆ, ಜಾಣತನ ಮತ್ತು ನೈಪುಣ್ಯತೆಗಳೇ ಮೊದಲಾದ ಭಾವಗಳು ಅಭಿವೃದ್ಧಿಪರ ಪ್ರಜ್ಞೆಗಳಾಗಿ ‘ಬೌದ್ಧಿಕಆಸ್ತಿ’ಗಳಂತೆಯೇ ಕಾಣುತ್ತಿವೆ. ಸಾಮಾನ್ಯನೊಬ್ಬ ತನ್ನ ಬುದ್ಧಿಶಕ್ತಿಯಿಂದಲೇ ‘ಅಸಾಧಾರಣ’ ನೆಲೆ ತಲುಪಿದ್ದಕ್ಕೆ ಸಾಕಷ್ಟು ಉದಾಹರಣೆಗಳು ಇತಿಹಾಸ ಮತ್ತು ವರ್ತಮಾನದಲ್ಲಿವೆ. ಒಟ್ಟಾರೆಯಾಗಿ ಇಂದಿಗೆ ಯಾವುದೇ ಸಂಗತಿಯನ್ನು ಹಿಂದಿನ ಎನ್ನುವ ಅರಿವಿನ ‘ಮಿತಿ’ಯಲ್ಲಿ ಮಾತ್ರವೇ ಅರ್ಥಮಾಡಿಕೊಳ್ಳಬೇಕಿಲ್ಲ. ಅಂದರೆ ಅರಿವಿನ ಆಯಾಮಗಳಿಗೆ ಇಂದು ಆಧುನಿಕ ಜಗತ್ತು ನೀಡುತ್ತಿರುವ ವ್ಯಾಖ್ಯಾನಗಳಿಗೆ ಒಂದು ನಿರ್ದಿಷ್ಟ ಮಿತಿಯೆಂಬುದಿಲ್ಲ. ಅದು ಆಯಾ ವಿಚಾರಗಳ ಸಂದರ್ಭದಲ್ಲಿಯೂ ಭಿನ್ನವಾದ ಫಲಿತವನ್ನು ನೀಡುವ ಸಾಧ್ಯತೆಗೆ ಚಾಚಿಕೊಂಡಿದೆ. ಇಂತಲ್ಲಿ ಮನುಷ್ಯನ ಮನರಂಜನೆಯ ವ್ಯಾಖ್ಯಾನವೂ ಬದಲಾಗಿದೆ, ಬದಲಾಗುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಹೀಗೆ ಹತ್ತಾರು ವಾಹಿನಿಗಳಿರುವಾಗ ಜಗತ್ತಿನ ಸಂದರ್ಭದಲ್ಲಿ ಅದರ ವ್ಯಾಪಕತೆ ಮತ್ತೆಷ್ಟಿರಬಹುದು? ಹಾಗಲ್ಲದೆ ನಾವು ಈಗಾಗಲೇ ಗಮನಿಸಿರುವಂತೆ ಮಾಹಿತಿ-ತಂತ್ರಜ್ಞಾನದ ಈ ಯುಗದಲ್ಲಿ ಕರ್ನಾಟಕದವರು ಕನ್ನಡ ಕಾರ್ಯಕ್ರಮಗಳನ್ನಷ್ಟೇ ನೋಡುತ್ತಾರೆ. ನೋಡಬೇಕು ಎನ್ನುವ ಒತ್ತಡದಲ್ಲಿಲ್ಲ ಕೈನಲ್ಲಿರುವ ‘ರಿಮೋಟ್’ ಪ್ರೇಕ್ಷಕರನ್ನು ರಾಜ್ಯದಾಟಿ, ರಾಷ್ಟ್ರದಾಟಿ ವಿಶ್ವವ್ಯಾಪಕವಾಗಿಸುತ್ತದೆ. ನಿಜವಾದ ವಿಶ್ವಮಾನವತೆಯ ವಿಚಿತ್ರ ಸಾಕಾರ ಇದೇ ಇರಬಹುದು.

        ಸಾಮಾನ್ಯವಾಗಿ ಸಂಸ್ಕøತಿಗೆ ಸಂಬಂಧಿಸಿದ ಬದುಕಿದ ಸಾಧ್ಯತೆಗಳಾದರೆ ಅದರಲ್ಲಿ ಐಚ್ಚಿಕತೆಗಳಿರುತ್ತವೆ. ಇದರಷ್ಟು ಸರಳವಾದದ್ದು ಆಧುನಿಕತೆಯ ಸಂದರ್ಭದಲ್ಲಿ ಸುಲಭಸಾಧ್ಯವಾಗುವುದಿಲ್ಲ. ಅಂದರೆ ಆಧುನಿಕತೆ ಬದುಕಿನ ಆಕರ್ಷಣೆಯ ಭಾವವೂ ಆದಂತಾಗಿ ಅದು ಒಳಗೊಳ್ಳಲೇಬೇಕಾದ ತುರ್ತನ್ನೇ ಉಂಟುಮಾಡಿಬಿಡುತ್ತದೆ. ಸಾಮಾನ್ಯನಿಗೆ ಜೀವನಾವಶ್ಯಕ ಎನ್ನುವಂತಹ ಸ್ಥಿತಿಯೊಂದು ನಿರ್ಮಾಣವಾದಂತಾಗಿ ಆತ ಆಧುನಿಕಗೊಳ್ಳುವುದರ ಅನಿವಾರ್ಯತೆಗೆ ಒಳಗಾಗಿಬಿಡುತ್ತಾನೆ. ಯಾವುದೇ ಹೊರಗಿನ, ಹೊಸ ಭಾವವೆನ್ನುವುದು ಸಾಮಾನ್ಯವಾಗಿ ಆಕರ್ಷಣೆ ಮತ್ತು ಕುತೂಹಲದ ನೆಲೆಯಲ್ಲಿಯೇ ಅನಾವರಣಗೊಳ್ಳುತ್ತದೆ. ಅಂತಲ್ಲಿ ಸಾಮಾನ್ಯ ವಿವೇಚನೆಯೂ ಮಂಕಾಗಿಬಿಡುವ ಸಾಧ್ಯತೆಯುಂಟು, ಕ್ರಮೇಣ ಅದರ ಪ್ರಭಾವಕ್ಕೆ ಒಳಗಾದ ನಂತರಕ್ಕೆ ಹಿಂತಿರುಗಿ ನೋಡಿ ಸರಿ-ತಪ್ಪುಗಳನ್ನು ವಿಶ್ಲೇಷಿಸಿಕೊಳ್ಳುವಷ್ಟರಲ್ಲಿ ವ್ಯಸನಿಗಳಾಗಿಬಿಟ್ಟಿರುವ ಅಪಾಯವುಂಟಾಗುತ್ತದೆ. ‘ಹೊರಗಿನ’ ಎನ್ನುವ ಯಾವುದೇ ಭಾವವಾದರೂ ವಿವೇಚನೆಯಾಚೆಗೆ ಪ್ರಭಾವಿಸುವಲ್ಲಿಯೇ ಒಂದಿಷ್ಟು ಅಂತರ-ಅನುಮಾನಗಳು ಅಗತ್ಯವೆನ್ನುವುದನ್ನು ನೆನಪಿಡಬೇಕು. ಅವುಗಳನ್ನು ನಾವು ನಿಯಂತ್ರಿಸಬೇಕೇ ವಿನಃ ನಮ್ಮನ್ನು ಅವು ನಿಯಂತ್ರಿಸುವಂತಾಗಬಾರದು.

         ಇಂತಹ ಕೆಲವು ಮಾತುಗಳ ಹಿನ್ನೆಲೆ ಇಂದಿನ ದೃಶ್ಯಮಾಧ್ಯಮದ ವಿಶೇಷವಾಗಿ ‘ಕಿರುತೆರೆ’ಯ ವಿಚಾರದಲ್ಲಿ ಸಂದರ್ಭೋಚಿತವೆನಿಸುತ್ತದೆ ಹಾಗಾಗಿ ಆರಂಭದಲ್ಲಿ ‘ಕಿರುತೆರೆಯನ್ನು ಬಿಟ್ಟಿರುವುದು ಸಾಧ್ಯವೆ?’ ಎನ್ನುವ ಪ್ರಶ್ನೆಯನ್ನು ಗಂಭೀರದ ನೆಲೆಯಲ್ಲಿಯೇ ಗಮನಿಸಲಾಗಿದೆ.
ಸಿನಿಮಾವನ್ನು ತುಂಬಾ ಗಂಭೀರವಾದ ಪ್ರಭಾವಶಾಲಿಯಾದ ಮಾಧ್ಯಮವೆಂದು ಭಾವಿಸುವ ಕಾರಣದಿಂದಲೂ ಅದರ ಪ್ರಭಾವ ಹೆಚ್ಚು ನೇರವಾಗಿ ಯುವಜನತೆಯನ್ನು ಕೇಂದ್ರೀಕರಿಸಿಕೊಂಡದ್ದರಿಂದಲೂ ಆಗು-ಹೋಗುಗಳ ಫಲಿತ ತುಂಬಾ ವೇಗವಾಗಿಯೇ ಪ್ರತಿಫಲಿಸುತ್ತಿದೆ.
 
          ಒಂದು ನೆಲೆಯಲ್ಲಿ ನೇತ್ಯಾತ್ಮಕವಾದ ಪರಿಣಾಮಗಳು ಯುವಜನರ ಮನಸ್ಸಿನ ಮೇಲೆ ಉಳಿದು ಅದರಿಂದ ಅಪಾಯಕಾರಿಯಾದ ಫಲಿತಾಂಶಗಳೂ ಉಂಟಾಗುವುದು ನಿರಾಕರಿಸಬಹುದಾದುದಲ್ಲ. ‘ಸೆನ್ಸಾರ್‍ಮಂಡಳಿ’ಯಂತಹ ನಿಯಂತ್ರಣಗಳ ಪ್ರಯೋಗವಾದರೂ ಈ ಬಗೆಯ ಕಾರಣಕ್ಕಾಗಿಯೇ ಅನಿವಾರ್ಯವಾಯಿತು. ಆದರೂ ಇದನ್ನೆಲ್ಲಾ ಮೀರಿದಂತೆ ವಿಪರ್ಯಾಸದ ನೆಲೆಯಲ್ಲಿಯೇ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಕೆಲವು ಗಂಭೀರ ಪರಿಣಾಮಗಳೂ ಆಗಿರುವುದುಂಟು ಆದರೆ ಇಂದಿಗೆ ಒಂದು ಹಂತದಲ್ಲಿ ಸಿನಿಮಾದ ಪ್ರಭಾವದ ವ್ಯಾಪ್ತಿಯನ್ನು ಮೀರಿದಂತೆ ‘ಕಿರುತೆರೆ’ ವಿಸ್ತಾರಗೊಳ್ಳುತ್ತಿರುವುದನ್ನು ಸುಲಭಕ್ಕೆ ಅಲ್ಲಗಳೆಯಲಾಗುತ್ತಿಲ್ಲ.

          ಈ ಹಿನ್ನೆಲೆಯಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ಗಂಭೀರವಾದ ಚರ್ಚೆ, ಸಂವಾದ, ಅಧ್ಯಯನಗಳು ಕಿರುತೆರೆಯ ಕಾರ್ಯಕ್ರಮ ಮತ್ತು ಅವುಗಳ ಪರಿಣಾಮವನ್ನು ಕುರಿತ ಹಿನ್ನೆಲೆಯಲ್ಲಿ ಅಲ್ಲಲ್ಲಿ ನಡೆಯುತ್ತಿವೆ. ಇದು ಮತ್ತಷ್ಟು ವಿಸ್ತøತವಾಗಿ, ಗಂಭೀರವಾದ ಆಯಾಮಗಳಲ್ಲಿಯೇ ಚರ್ಚಿತಗೊಳ್ಳಬೇಕಾದ ಅನಿವಾರ್ಯತೆ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ.

         ‘ಅಭಿರುಚಿ’ ಎನ್ನುವುದು ವ್ಯಕ್ತಿನಿಷ್ಟನೆಲೆಯಿಂದ ಸಮಷ್ಟಿಯಾಗಿ ರೂಪುಗೊಳ್ಳುವಂತಹುದು. ಒಳಿತು, ಕೆಡುಕಿನ ಸಾಮಾನ್ಯ ಅರ್ಥವನ್ನು ಇಲ್ಲಿ ಸ್ಪಷ್ಟಪಡಿಸಬಹುದಾದರೂ ಅದನ್ನು ಕೇವಲ ಆ ಮಿತಿಯಲ್ಲೇ ಗ್ರಹಿಸುವಂತಿಲ್ಲ, ಮನಸ್ಸಿನ ಆರೋಗ್ಯ ಎನ್ನುವ ಮಾತನ್ನು ಒಪ್ಪುವುದಾದರೆ ಇದು ನೇರವಾಗಿ ಅಭಿರುಚಿ ಎನ್ನುವ ಭಾವವನ್ನೇ ಪ್ರತಿನಿಧಿಸುವಂತಹುದು. ‘ವ್ಯಕ್ತಿತ್ವ’ ಎನ್ನುವುದಕ್ಕಿರುವ ಮೂಲಸೆಲೆಯನ್ನು ಅಭಿರುಚಿಯಲ್ಲಿಯೇ ಗುರುತಿಸಬಹುದು. ‘ರುಚಿ’ ಎನ್ನುವ ಮಾತು ನೇರವಾಗಿ ನಾಲಗೆ, ಆಸ್ವಾದ ಎನ್ನುವ ಅರ್ಥವನ್ನು ಹೇಳುವಲ್ಲಿಯೇ ಇದರ ಮೂಲಕ ಇದು ಇಷ್ಟವಾಗುವಂತಹುದು- ಇಷ್ಟವಾಗದಿರುವಂತಹುದು, ಬೇಕಿರುವುದು-ಬೇಡವಾದುದು ಎನ್ನುವ ಒಪ್ಪುವ, ನಿರಾಕರಿಸುವ ಅವಕಾಶವನ್ನು ಮುಕ್ತವಾಗಿಸಿಕೊಳ್ಳುತ್ತದೆ. ಒಂದು ಕ್ರಿಯೆಗೆ ಉಂಟಾಗುವ ಪ್ರತಿಕ್ರಿಯೆಯ ಮೂಲಕ ಕ್ರಿಯೆಯ ‘ಮೌಲ್ಯ’ ನಿರ್ಣಯವೂ ನಡೆಯುವುದಾದರೆ ಆ ಮೌಲ್ಯ ನಿರ್ಣಯದ ‘ಮಾನದಂಡ’ವೂ ಗಮನಿಸಲ್ಪಡುವಂತಹುದೇ ಆಗಿರುತ್ತದೆ. ‘ಅಭಿರುಚಿ’ ಎನ್ನುವುದು ವೈಯಕ್ತಿಕ ನೆಲೆಯನ್ನು ಮೀರಿ ಸಾಮುದಾಯಿಕ ಪ್ರಜ್ಞೆಯನ್ನು ಪ್ರತಿನಿಧಿಸುವಾಗ ಅದಕ್ಕೊಂದು ಸಾಂಸ್ಕøತಿಕ ಆಯಾಮವೂ ಲಭ್ಯವಾಗಿಬಿಡುತ್ತದೆ. ತನ್ಮೂಲಕ ‘ಸಾಮಾಜಿಕ ಪ್ರಜ್ಞೆ’ ಸಾಮಾಜಿಕಸ್ವಾಸ್ಥ್ಯ ಮುಂತಾದ ಮಾತುಗಳು ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಎಲ್ಲರೂ ಎಲ್ಲರಿಗಾಗಿ, ಎಲ್ಲರೊಂದಿಗೆ, ಎಲ್ಲ ಅರಿವಿನ ಮೂಲಕ ಬದುಕಬೇಕಿರುವುದು ಈ ಹೊತ್ತಿನ ಸಾಮಾಜಿಕ ಬದುಕಿನ ಅನಿವಾರ್ಯವಾದ ಅಂಶ. ಅದರೊಂದಿಗೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ನಮ್ಮ ದೇಶದಲ್ಲಿ ಸ್ವಾತಂತ್ರ್ಯ-ಸಮಾನತೆಯ ಆಶಯಗಳಿಗೆ ಸಂವಿಧಾನವೂ ಒತ್ತಾಸೆಯಾಗಿರುವುದು ಮುಖ್ಯವಾದುದು. ಇಂತಲ್ಲಿ ಸಾರ್ವಜನಿಕ ರಂಗದಲ್ಲಿನ ಯಾವುದೇ ವ್ಯವಹಾರ, ಉದ್ಯಮ, ಮಾಧ್ಯಮ ಬಹಳ ಎಚ್ಚರದಿಂದಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಸಮೂಹ ಮಾಧ್ಯಮಗಳ ವಿಚಾರದಲ್ಲಿ ತುಸು ಹೆಚ್ಚೇ ಆಗಿರಬೇಕು ಎಂದರೆ ನಿರಾಕರಿಸುವಂತಿಲ್ಲ. ಆರಂಭಕ್ಕೆ ಮಾಧ್ಯಮಗಳು, ಮಾಹಿತಿ, ವರದಿ ಎಂಬಂತೆ ದಾಟಿಸುವ ಸಂವಹನಗಳಾಗಿಯಷ್ಟೇ ಕೆಲಸ ಮಾಡುತ್ತಿದ್ದ ಬಗೆ ಈಗ ನೂರಕ್ಕೆ ನೂರರಷ್ಟು ಬದಲಾಗಿಬಿಟ್ಟಿದೆ. ಬದಲಾದ ಕಾಲ, ಬದುಕು, ಅವಕಾಶ, ಜಗತ್ತು -ಹೀಗೆ ಬಹಳಷ್ಟು ಕಾರಣಗಳನ್ನು ಉದಾಹರಿಸಬಹುದಾಗಿದೆ.

          ಮೊದಲಿಗೆ ಗಮನಿಸಿದಂತೆ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಮಾಧ್ಯಮಗಳು ಸಹಜವಾಗಿಯೇ ಸಾರ್ವಜನಿಕ ಪ್ರಜೆಗಳಿಗೆ ತುಂಬಾ ಜವಾಬ್ದಾರಿಯಿಂದ ಉತ್ತರಿಸಬೇಕಾದ ಒತ್ತಡದಲ್ಲಿರುತ್ತವೆ. ಆದರೆ ‘ಖಾಸಗಿ’ ಎನ್ನುವುದು ನೇರವಾಗಿ ‘ವ್ಯವಹಾರ’ದ ಸ್ವರೂಪಕ್ಕೆ ಒಳಪಡುವುದರಿಂದ ಮತ್ತು ಅವುಗಳಿಗೆ ಅವುಗಳದ್ದೇ ಆದ ಸ್ವಾತಂತ್ರ್ಯದ ವ್ಯಾಪ್ತಿಯೂ ದಕ್ಕುವುದರಿಂದ ಅವುಗಳನ್ನು ನಿಯಂತ್ರಿಸಬಹುದಾದ ಸಾಧ್ಯತೆ, ಸಾರ್ವಜನಿಕ ಸಂಸ್ಥೆಗಳ ಸ್ವರೂಪದ್ದಾಗಿರುವುದಿಲ್ಲ. ‘ಕಲೆ-ಸಂಸ್ಕøತಿ-ಮನರಂಜನೆ’ ಎನ್ನುವುದನ್ನು ಕುರಿತ ಸಾರ್ವತ್ರಿಕವಾದ, ಮೌಲ್ಯಪರವಾದ ವ್ಯಾಖ್ಯಾನಗಳೇನೇ ಇದ್ದರೂ ಖಾಸಗಿ ಸಂಸ್ಥೆಗಳಿಗೆ ಲಾಭದ ಮೂಲಕವಾದ ಸ್ವ-ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಇದರಾಚೆಗೆ ಒಂದು ಮತ್ತೊಂದರ ನಡುವೆ ಅಸ್ತಿತ್ವಕ್ಕೆ ಸಂಬಂಧಿಸಿದ ಸವಾಲುಗಳಾಗಿಬಿಟ್ಟರೆ ಅದು ಮತ್ತಷ್ಟು ಗಂಭೀರವಾದ ನೆಲೆಯಲ್ಲಿ ಜನಾಕರ್ಷಣೆಗೆ, ಹತ್ತು-ಹಲವು ಕಸರತ್ತುಗಳಿಗೆ ಮುಂದಾಗಬೇಕಾಗುತ್ತದೆ.
 
          ಅವರೊಳಗೆ ಒಂದು ಮಾನದಂಡ ಸೃಷ್ಟಿಯಾಗುತ್ತದೆ. ‘ವ್ಯವಹಾರ’ಕೇಂದ್ರಿತವಾಗುವುದರಿಂದಲೂ ಎಷ್ಟೋ ಬಾರಿ ಕೆಲವು ಕಡೆ ರಾಜಿಯಾಗುವ ತುರ್ತುಗಳೂ ಈ ‘ಮಾಧ್ಯಮ’ಕ್ಕೆ ಅನಿವಾರ್ಯವಾಗುತ್ತದೆ. ಆರೋಗ್ಯಕರ, ಅನಾರೋಗ್ಯಕರ ಎನ್ನುವ ಅರಿವು ಸುಲಭವಾಗುವುದಿಲ್ಲ. ಇದು ಕನ್ನಡದ ಕಿರುತೆರೆಯ ಸಂದರ್ಭಕ್ಕೂ ಪ್ರಚಲಿತವಾದದ್ದೇ ಆಗಿದೆ. ಬದಲಾದ ಯುಗಕ್ಕೆ, ಕಾಲಕ್ಕೆ ಎನ್ನುವಂತೆ ಪ್ರತಿಯೊಂದು ವಿಚಾರವೂ ಈ ಬಗೆಯ ಅವಕಾಶವನ್ನೇ ಮುಕ್ತವಾಗಿರಿಸಿಕೊಂಡು ತನ್ನನ್ನು ವರ್ತಮಾನಕ್ಕೆ ಒಡ್ಡಿಕೊಳ್ಳಲು ಬಯಸುವುದು, ಒಂದು ಸಾಮಾನ್ಯ ಸಂಗತಿ. ಹಾಗಿರುವಾಗ ವ್ಯವಹಾರದ ನೆಲೆಯಲ್ಲಿ ಈ ಬಗೆಯ ಬದಲಾವಣೆ ಸಹಜವಾಗಿಯೇ ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆಯುಂಟು. ಕಾರ್ಯಕ್ರಮಗಳನ್ನೇ ನಂಬಿಕೊಂಡು ಮನರಂಜನೆಯ ವ್ಯಾಪ್ತಿಯನ್ನು ವಿಸ್ತರಿಸಬಯಸಿದ ಕಿರುತೆರೆಗಳು ದಿನೇ ದಿನೇ ತಮ್ಮ ಪ್ರಯೋಗದ ಹೊಸತನಕ್ಕಾಗಿಯೇ ಹಪ-ಹಪಿಸುವಂತಾದದ್ದು ಅದಕ್ಕೆ ಪ್ರೇಕ್ಷಕನೂ ಹೊಸತಿಗಾಗಿಯೇ ಹಾರೈಸುವಂತಾದದ್ದು ಪರಸ್ಪರಪೂರಕ ನೆಲೆಯಲ್ಲಿಯೇ ನಡೆದಿದೆ ಎನ್ನಬಹುದು. ಈ ನೆಲೆಯಿಂದಲೇ ಗಮನಿಸುವಾಗ ಇದು ಒಂದು ರೀತಿಯಲ್ಲಿ ಹುಲಿಯ ಮೇಲಿನ ಸವಾರಿಯಂತೆಯೇ ಸರಿ. ಉಳಿದುಕೊಳ್ಳಬೇಕು, ಇಲ್ಲವೆ ಹಾಳಾಗಬೇಕು ಎನ್ನುವುದಷ್ಟೇ ಉಳಿದಿರುವ ಸತ್ಯ.

         ಕನ್ನಡದ ಕಿರುತೆರೆಯ ಕಲರವವನ್ನು ಕುರಿತು ಯೋಚಿಸುವ ಹೊತ್ತಿಗೆ ಮೊದಲು ಎಲ್ಲಿಂದ ಆರಂಭಿಸಬಹುದು ಎನ್ನುವುದೂ ಗೊಂದಲದ ಸಂಗತಿಯೇ ಹೌದು. ಇದು ಕಿರುತೆರೆ ಜಗತ್ತಿನ ವ್ಯಾಪಕತೆಯನ್ನೆಂತೋ ಅಂತೆಯೇ ಅದರ ಸಂಕೀರ್ಣ ಸ್ಥಿತಿಯನ್ನು ಹೇಳುವಂತಹುದು.
ಮೊಟ್ಟಮೊದಲು ಸಹೃದಯತೆಯ ಪ್ರಶ್ನೆ ತುಂಬಾ ಸರಳವಾದುದು ನಮ್ಮ ಕನ್ನಡದ ಮನರಂಜನೆ ಎನ್ನುವ ಅವಕಾಶಕ್ಕೆ ಇಷ್ಟೊಂದು ವಾಹಿನಿಗಳ ಅಗತ್ಯವಿದೆಯೆ? ಇದಕ್ಕೆ ಸರ್ಕಾರ ಉತ್ತರಿಸಬೇಕೋ? ಸಹೃದಯ ಪ್ರೇಕ್ಷಕರೇ ಉತ್ತರಿಸಬೇಕೋ? ಅಥವಾ ಮುಕ್ತ ಜಗತ್ತಿನ ಅವಕಾಶಗಳು ಉತ್ತರಿಸಬೇಕೋ? ಯಾವ ಕಾಲಕ್ಕೂ ಈ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಏಕೆಂದರೆ ಈಗಾಗಲೇ ನಾವು, ನಮ್ಮ ‘ಕಲೆ’-‘ಸಂಸ್ಕೃತಿ’ ಎನ್ನುವ ಸಂಗತಿಗಳಿಗೆ ಮಾರುಕಟ್ಟೆಯ ಅವಕಾಶವನ್ನು ತೆರೆದಾಗಿದೆ ಮತ್ತು ಬಹಳ ಮುಖ್ಯವಾಗಿ ಮನರಂಜನೆಯ ಮಾಧ್ಯಮಗಳು ಸ್ಪಷ್ಟವಾಗಿ ಉದ್ಯಮವಾಗಿಬಿಟ್ಟಿವೆ. ಇಂದು ಚಲನಚಿತ್ರ ಈ ದೇಶದ ಬೃಹತ್ ಉದ್ಯಮವಾಗಿರುವುದನ್ನಿಲ್ಲಿ ನಾವು ಉದಾಹರಿಸಬಹುದು. ಉದ್ಯಮ ಎಂದ ತಕ್ಷಣ ಸಾಂ
ಸ್ಕೃತಿ ಪರವಾದ ಮೌಲ್ಯಗಳ ಮಾತನಾಡುವುದು ಅಷ್ಟು ಸುಲಭವಿಲ್ಲ. ಇಲ್ಲಿ ಲಾಭ-ನಷ್ಟಗಳ ಚರ್ಚೆಯೇ ಮುಖ್ಯವಾಗಿಬಿಡುತ್ತದೆ. ಮತ್ತೊಂದು ಮುಖ್ಯ ಪ್ರಶ್ನೆ ಇರುವುದು, ಮನರಂಜನೆಯ ಸಾಧ್ಯತೆಯಲ್ಲಿ.
 
         ‘ಮನರಂಜನೆ’ ಎನ್ನುವುದಕ್ಕಿರುವ ಮಿತಿಯೇನು? ಮತ್ತು ವ್ಯಾಪ್ತಿಯೇನು ಈ ಬಗೆಯ ಪ್ರಶ್ನೆಯೂ ಇಂದಿಗೆ ಅಪ್ರಸ್ತುತ ಎನಿಸಿಬಿಡಬಹುದು. ಕಾರ್ಯಭಾರದ ಒತ್ತಡಗಳ ನಡುವೆ, ಬಿಡುವನ್ನು ಬಯಸಿಕೊಂಡು ಅದನ್ನು ಸಾಧ್ಯವಾದಷ್ಟು ನಿರಾಳವಾದ ಭಾವದಲ್ಲಿ ಮನಸ್ಸಿನ ಆಹ್ಲಾದತೆಗಾಗಿ, ಉಲ್ಲಾಸದ ಹಾರೈಕೆಯಲ್ಲಿ ಅನುಭವಿಸಬಹುದಾದ ಕಲೆಯ ಯಾವುದೇ ಪ್ರಕಾರ ಮನರಂಜನೆ ಎನ್ನಿಸಬಹುದು. ಭಾರತೀಯ ಪ್ರಾಚೀನರು ಹೀಗೊಂದು ಕಲೆಯನ್ನು ಅನುಭವಿಸುವ ವ್ಯಕ್ತಿಯನ್ನು ಸಹೃದಯನೆಂದೂ ಅವನಿಗೆ ಉಂಟಾಗಬಹುದಾದ ಅನುಭೂತಿಯನ್ನು ರಸಾನುಭವವೆಂದೂ ಕರೆದರು. ಎಲ್ಲವನ್ನು ಅನುಭವಿಸುವ ಕಾಲಕ್ಕೆ ಒಂದು ಪೂರ್ವಸಿದ್ಧತೆಯಾದರೂ ಅತ್ಯವಶ್ಯಕ ಎಂದುಕೊಂಡ ನಿಲುವಾದರೂ ಮನರಂಜನೆಯ ಸೂಕ್ಷ್ಮತೆಯನ್ನು, ಸಾರ್ಥಕತೆಯನ್ನು ಸ್ಪಷ್ಟಪಡಿಸಿಕೊಳ್ಳುವಂತದ್ದೇ ಆಗಿತ್ತು. ಹಾಗಿರುವಲ್ಲಿ ಸಹಜವಾಗಿಯೇ ಒಂದು ಕಲಾಪ್ರಕಾರಕ್ಕೂ ಸಹೃದಯನಿಗೂ ಆರೋಗ್ಯಪೂರ್ಣವಾದ ಅನುಸಂಧಾನ ವಾದರೂ ಸುಲಭವೇ ಆಗುತ್ತಿತ್ತು. ಸಹೃದಯ ಖಚಿತವಾಗಿ ತಾನು ಏನು ಮಾಡಬೇಕು, ಏನು ಮಾಡುತ್ತಿದ್ದೇನೆ? ಏನು ನೋಡುತ್ತಿದ್ದೇನೆ? ಹೇಗೆ ಗ್ರಹಿಸುತ್ತಿದ್ದೇನೆ? ಎಂಬ ಬಗೆಗೆ ಬಹಳ ಸ್ಪಷ್ಟವಾಗಿರುತ್ತಿದ್ದ. ಅವನಿಗೆ ಅರಗಿಸಿಕೊಳ್ಳುವಲ್ಲಿ, ಪರಿಶೀಲಿಸುವಲ್ಲಿ ಮತ್ತು ಮುಖ್ಯವಾಗಿ ವಿಶ್ಲೇಷಿಸುವಲ್ಲಿ ಸಮಸ್ಯೆಗಳಿರಲಿಲ್ಲ.

         ಆರಂಭಕ್ಕೆ ಗಮನಿಸಿದಂತೆ ನಾಟಕಗಳು ಈ ದೇಶವನ್ನು, ಅಷ್ಟೇ ಏಕೆ ಇಡೀ ಜಗತ್ತನೇ ಪ್ರಭಾವಿಸಿದ್ದು ಇಂತಹದ್ದೇ ಕಾರಣಗಳಿಂದ ಎನ್ನಬಹುದು. ‘ಜೀವನವೇ’ ಹೀಗೊಂದು ಕಲಾಪ್ರಕಾರದ ವಸ್ತುವಾಗುವುದು ಹೀಗಾಗಿಯೇ ಸಾಧ್ಯವಾಗಿತ್ತು. ಇಂದಿನ ಕಾರ್ಯಕ್ರಮಗಳು ‘ಮನರಂಜನೆ’ ಎನ್ನುವುದಕ್ಕೆ ಹೀಗೆ ಎಷ್ಟರಮಟ್ಟಿಗೆ ಅರ್ಥಹೊಂದುವುದಾಗುತ್ತಿದೆ? ಪ್ರತೀ ಕಾರ್ಯಕ್ರಮಕ್ಕೂ ಸಾಮಾಜಿಕ, ಸಾಂಸ್ಕøತಿಕ ಎಂದೆಲ್ಲಾ ಚೌಕಟ್ಟನ್ನು ಇಟ್ಟಂತೆ ನೋಡುವುದು ಎಷ್ಟರಮಟ್ಟಿಗೆ ಪಕ್ವವಾದುದು? ಮತ್ತು ಬಹಳ ಮುಖ್ಯವಾಗಿ ಗಮನಿಸಬಹುದಾದ ವಿಚಾರವೆಂದರೆ ಮನರಂಜನೆ ಎನ್ನುವುದನ್ನು ಮಾಧ್ಯಮವೊಂದು ಹೀಗೆ ಕಾಲಾತೀತವಾಗಿ ಪ್ರಸಾರ ಮಾಡುವುದು ಎಷ್ಟರಮಟ್ಟಿಗೆ ಸಾರ್ವತ್ರಿಕ ಬದ್ಧತೆಯಾಗಬಲ್ಲದು?.

         ದಿನದ ಇಪ್ಪತ್ನಾಲ್ಕುಗಂಟೆಗಳ ಕಾಲ ಕಾರ್ಯಕ್ರಮವನ್ನು ಪ್ರಸಾರಮಾಡುವ ಜಗತ್ತಿನ ಕಿರುತೆರೆಗಳು ಯಾವ ಸಾಧನೆಯ ಹಾದಿಯಲ್ಲಿವೆ? ಈ ಮೂಲಕ ಇಡಿಯಾಗಿ ಬದುಕಿನ ಕ್ರಮವನ್ನೇ ಹೊಸ ನೆಲೆಯಲ್ಲಿ ಪರಿಶೀಲಿಸಬೇಕಿರುವುದು ಅನಿವಾರ್ಯವಾಗುತ್ತಿದೆಯೆ?

        ಕಾರ್ಯಕ್ರಮ ಪ್ರಸಾರಮಾಡುವುದು ನಮ್ಮ ಕೆಲಸ, ಸದಾ ನೋಡಲೇಬೇಕು ಎಂದವರಾರು? ನೋಡದೇ ಇರುವ ಹಕ್ಕಾದರೂ ಪ್ರೇಕ್ಷಕನದ್ದೇ ತಾನೆ? ಹೀಗೊಂದು ತುಂಬಾ ಸರಳ ಎನ್ನಿಸುವ ನೆಲೆಯಲ್ಲಿ ಒಂದು ಪ್ರಶ್ನೆಯನ್ನು, ಸಹೃದಯರ ಮೇಲೆಯೇ ಎಸೆದು ಸುಮ್ಮನಾಗಿಬಿಡಬಹುದು. ಅಂತಹದ್ದೊಂದು ಸಾಧ್ಯತೆಗೆ ಯಾರೂ ಉತ್ತರಿಸಬೇಕಿಲ್ಲ. ಹೀಗೆ ಎಲ್ಲಾ ಕಾಲವೂ ಬೇಜವಾಬ್ದಾರಿಯನ್ನು ಎದುರಿಸಿಯೇ ಬಂದದ್ದಿದೆ. ಇಂತಲ್ಲಿ ತರ್ಕಗಳೂ ಅಗತ್ಯವಿಲ್ಲ. ಈ ಪ್ರಶ್ನೆಗೆ ಉತ್ತರ ಸುಲಭವಿಲ್ಲ ಯಾಕೆಂದರೆ ಈ ನೆಲದ ಸಹೃದಯನೂ ಈಗಾಗಲೇ ಈ ದಿನದ ಇಪ್ಪತ್ನಾಲ್ಕುಗಂಟೆಗಳ ಕಾರ್ಯಕ್ರಮಕ್ಕೆ ತನ್ನನ್ನು ಒಗ್ಗಿಸಿಕೊಂಡಿದ್ದಾನೆ, ಏನು? ಎಂತು? ಎನ್ನುವ ಪ್ರಶ್ನೆಗಳನ್ನು ಮೀರಿಯೇ ಪ್ರೇಕ್ಷಕ ಸಹೃದಯತೆಯ ಸಾಧ್ಯತೆಯನ್ನು ಮೀರಿ ವ್ಯಸನಿಯಾಗುವತ್ತ ದಾಪುಗಾಲನ್ನು ಇಟ್ಟಾಗಿದೆ.

           ಕಾರ್ಯಕ್ರಮಗಳ ಸ್ವರೂಪವೇನು? ಹೀಗೊಂದು ಪ್ರಶ್ನೆ ಯಾವುದೇ ಕಾರ್ಯಕ್ರಮಕ್ಕೂ ಪೂರ್ವದಲ್ಲಿಯೇ ಯೋಚಿಸಬಹುದಾದದ್ದು ಮತ್ತು ಕ್ರಮವನ್ನೇ ಕುರಿತು ಪ್ರಸ್ತಾಪಿಸಿಕೊಂಡರೂ ಇಂತಹದ್ದೊಂದು ಯೋಚನೆಯಾದರೂ ಅನಿವಾರ್ಯ ಎಂದೆ ಎನಿಸುವಂತಹುದು. ಆರಂಭಕ್ಕೆ ಗಮನಿಸಿದಂತೆ ‘ದೂರದರ್ಶನ’ ರಾಷ್ಟ್ರೀಯ ಜಾಲವಾಗಿ, ನಂತರ ಪ್ರಾದೇಶಿಕ ಜಾಲವಾಗಿ ಕಾರ್ಯನಿರ್ವಹಿಸುವ ಹೊತ್ತಿಗೆ ಅದಕ್ಕೆ ನಿರ್ದಿಷ್ಟವಾದ ನೀತಿ-ನಿಯಮಗಳಿದ್ದವು. ಜನಾಭಿಪ್ರಾಯಕ್ಕೆ ಮನ್ನಣೆಯೂ ಸಹಜವಾಗಿಯೇ ಇತ್ತು. ಕಾರ್ಯಕ್ರಮಗಳ ಸ್ವರೂಪಕ್ಕೂ ಪ್ರಸಾರಕ್ಕೂ ಸಮಯಕ್ಕೂ ನಿರ್ದಿಷ್ಟವಾದ ಮಾನದಂಡಗಳಿದ್ದವು. ಯಾವುದೇ ಕಾರ್ಯಕ್ರಮ ರೂಪಿಸಿ, ಪ್ರಸಾರಮಾಡುವ ಸಂದರ್ಭಕ್ಕೆ ಸಾಮಾಜಿಕ, ಸಾಮುದಾಯಿಕ ಪರವಾದ ಕಾಳಜಿಗಳು ಪ್ರಧಾನವಾಗಿದ್ದವು, ಇಂತಹ ಮಾತುಗಳು ಪದೇ ಪದೇ ಕಾಡುವ ತುರ್ತು. ಈ ಹೊತ್ತಿನ ಕಿರುತೆರೆಯ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತುಂಬಾ ಗಂಭೀರವಾದುದ್ದೇ ಆಗಿದೆ.

          ಸಮಯಾಧಾರಿತ ಎಂದು ಯೋಚಿಸುವಾಗ ಸಹಜವಾಗಿ ಅದು ಕಾರ್ಯಕ್ರಮಗಳ ಸ್ವರೂಪವನ್ನು ಕುರಿತು ಹೇಳುವಂತಿರುತ್ತದೆ. ಅಂದರೆ ಮುಂಜಾನೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎನ್ನುವ ವಿಂಗಡಣೆಯ ಜೊತೆಗೆ ಅದು ಯಾರನ್ನು ಮತ್ತು ಮುಖ್ಯವಾಗಿ ಯಾವ ವಸ್ತುವನ್ನು ಕೇಂದ್ರೀಕರಿಸಿಕೊಂಡಿರಬೇಕು ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಇದು ಮಾಧ್ಯಮಗಳು ತಮ್ಮ ಅಸ್ತಿತ್ವ ಕಂಡುಕೊಂಡ ದಿನದಿಂದಲೂ ಸಹಜವಾಗಿ ಪರಂಪರೆಯಂತೆಯೇ ಚಾಲ್ತಿಯಲ್ಲಿರುವ ಬಗೆಯಾಗಿದೆ. ಅಂದರೆ ಒಂದು ನಿರ್ದಿಷ್ಟತೆ ಎನ್ನುವುದು ಎಲ್ಲವೂ ಹೊಂದಿಕೊಳ್ಳುವ ಸಾಧ್ಯತೆಯನ್ನು ಸಹ ಮುಕ್ತವಾಗಿರಿಸುವಂತಿರುತ್ತದೆ. ಕಾರ್ಯಕ್ರಮ ಯಾರಿಗೆ ಸಂಬಂಧಿಸಿರುತ್ತದೆ ಮತ್ತು ಯಾರು ಅದನ್ನು ಗಮನಿಸಬಹುದು ಎನ್ನುವುದು ಒಂದು ವೇಳಾಪಟ್ಟಿಯಂತೆ ದಾಖಲಾಗುವುದರಿಂದ ಅದರ ಲಾಭವನ್ನು ಸಹೃದಯರು ಪಡೆದುಕೊಳ್ಳುವುದು ಸುಲಭವಾಗುತ್ತದೆ.

          ಇಂತಹದ್ದೊಂದು ಅಲಿಖಿತವಾದ ಆದರೆ ಸಹಜ ಎನ್ನಿಸುವಂತೆ ತನ್ನಷ್ಟಕ್ಕೆ ಪಾಲನೆಯಾಗುತ್ತಿದ್ದ ಕಾರ್ಯಕ್ರಮಗಳು ಇಂದಿಗೆ ಕಾಲನಿಷ್ಠವಾಗಿಲ್ಲ. ಬಹುಶಃ ಅದು ಖಾಸಗಿ ವಾಹಿನಿಗಳ ಉದ್ದೇಶವೂ ಆದಂತಿಲ್ಲ. ಅವರ ಮಾನದಂಡಗಳೇ ಬೇರೆಯಾಗಿದೆ. ಅವರು ತಲುಪಬಯಸುವ ಗುರಿಯೇ ಒಂದಿಷ್ಟು ಅಸಹಜವೆನ್ನಿಸುವಂತೆಯೂ ತೋರುತ್ತದೆ. ಅಂತಿಮವಾಗಿ ಯಾವ ಬಗೆಯ ಮೌಲ್ಯವನ್ನು, ಹೇಳಹೊರಟಿವೆ ಎನ್ನುವ ಗ್ರಹಿಕೆಗೇ ಅಸ್ಪಷ್ಟತೆಗಳು ಕಾಡತೊಡಗುತ್ತವೆ. ಹತ್ತಾರು ವಾಹಿನಿಗಳು ಸ್ಪರ್ಧಾಮನೋಭಾವದಲ್ಲಿ ಕಾರ್ಯಕ್ರಮ ರೂಪಿಸುವುದರಿಂದಲೂ ಒಂದೇ ಸಮಯದಲ್ಲಿ ಒಂದೇ ತೆರನಾದ ಕಾರ್ಯಕ್ರಮಗಳನ್ನು ಪ್ರಸಾರಮಾಡತೊಡಗುತ್ತವೆ. ಅವುಗಳ ಉದ್ದೇಶವಾದರೂ ತಮ್ಮ ಕಾರ್ಯಕ್ರಮ ಇತರರಿಗಿಂತ ಹೇಗೆ ಭಿನ್ನ ಎನ್ನುವುದನ್ನು ಪ್ರತಿಪಾದಿಸುವ ಹಠಕ್ಕೆ ಬಿದ್ದಂತಿರುತ್ತದೆ. ಹೀಗೆ ಒಂದೇ ಸಮಯಕ್ಕೆ ಹಲವಾರು ವಾಹಿನಿಗಳು ಒಂದೇ ತೆರನಾದ ಕಾರ್ಯಕ್ರಮವನ್ನು ಪ್ರಸಾರಮಾಡುವಲ್ಲಿ ಪ್ರೇಕ್ಷಕ ಏಕತಾನತೆಯಲ್ಲಿ ಕಳೆದುಹೋಗುವ ಅಪಾಯವಿರುತ್ತದೆ. ಅದರೊಂದಿಗೆ ಎಲ್ಲಾ ವಾಹಿನಿಗಳನ್ನು ಬದಲಾಯಿಸಿ ನೋಡುತ್ತಾ ಒಂದು ಸಮಗ್ರತೆಯನ್ನು ದಕ್ಕಿಸಿಕೊಳ್ಳುವುದೂ ಅಸಾಧ್ಯವಾಗಬಹುದು. ಮುಕ್ತ ಜಗತ್ತಿನ ಫಲವಾಗಿ ಮತ್ತು ಮಾಹಿತಿ-ತಂತ್ರಜ್ಞಾನದ ಯುಗ ಎನ್ನುವ ಕಾರಣಕ್ಕೂ ಎಂಬಂತೆ ಕ್ರಿಯಾಶೀಲತೆಯ ಅರ್ಥ ಯಾಂತ್ರಿಕತೆಯ ಉತ್ಕರ್ಷವಾಯಿತು ಎನ್ನಿಸುವುದು ಉತ್ಪ್ರೇಕ್ಷೆಯಲ್ಲ. ತನ್ನ ಪಾಡಿಗೆ ತಾನು ಎಂಬಂತಹ ದೇಶ ಅಸ್ತಿತ್ವದ ಅರ್ಥಕ್ಕೆ ಸಂವಾದಿಯಾಗಲಾರದು ಎನ್ನುವುದು ವಿಚಿತ್ರ ಆದರೂ ಸತ್ಯ ಎನ್ನುವಂತೆ ಉಳಿದು, ಬೆಳೆದುಬಿಟ್ಟಿದೆ. ಹಾಗಾಗಿ ಇಂದು ಎಲ್ಲ ರಾಷ್ಟ್ರಗಳಿಗೂ ‘ಅಭಿವೃದ್ಧಿ’ ಎನ್ನುವುದೊಂದು ಮಂತ್ರವಾದಂತಿದೆ. ಇದರಿಂದ ಲಾಭವಾದದ್ದು ಯಾರಿಗೆ? ಕಳೆದುಹೋದದ್ದು ಏನು? ಮೌಲ್ಯಗಳ ಸ್ವರೂಪವೇನು? ಹೀಗೆ ಬಹಳಷ್ಟು ಪ್ರಶ್ನೆಗಳು ಇಲ್ಲಿ ಏಳುತ್ತವೆ. ಅದು ಬೇರೆಯದ್ದೇ ಆದ ಚರ್ಚೆ. ಆದರೆ ಹೀಗೆ ಕ್ರಿಯಾಶೀಲತೆಯ ಅರ್ಥ ನಿರಂತರ ಚಟುವಟಿಕೆಯನ್ನು ಕೇಂದ್ರೀಕರಿಸಿಕೊಂಡ ಕಾರಣಕ್ಕೂ ಎಂಬಂತೆ ಮನರಂಜನೆಯನ್ನೇ ಉದ್ದೇಶವಾಗಿರಿಸಿಕೊಂಡ ವಾಹಿನಿಗಳು ದಿನದ ಇಪ್ಪತ್ನಾಲ್ಕುಗಂಟೆಗಳೂ ಕಾರ್ಯಕ್ರಮ ಪ್ರಸಾರ ಮಾಡುವುದು ಅನಿವಾರ್ಯ ಎಂಬಂತಹ ಸ್ಥಿತಿಗೆ ತಲುಪಿದಂತಿವೆ. ಇದು ಭಾರತದೇಶದ ಸಂದರ್ಭದ ಮೊದಲಿನ ಆಯ್ಕೆಯಾಗಿರಲಿಲ್ಲ. ಎಲ್ಲಕ್ಕೂ ಪಾಶ್ಚಾತ್ಯರನ್ನ ಅನುಕರಿಸುವುದನ್ನು ‘ಆದರ್ಶ’ ಎಂದುಕೊಳ್ಳುವ ಅಪಾಯದ ಸ್ವರೂಪದಲ್ಲಿಯೇ ಕಿರುತೆರೆವಾಹಿನಿಗಳ ಕಾರ್ಯಕ್ರಮಗಳು ಇಪ್ಪತ್ನಾಲ್ಕುಗಂಟೆಗೆ ತಮ್ಮನ್ನು ವಿಸ್ತರಿಸಿಕೊಂಡಿವೆ. ‘ಸುದ್ದಿ ವಾಹಿನಿಗಳು’ ದಿನವಿಡೀ ಪ್ರಸಾರಕ್ಕೆ ಸಿದ್ಧವಾಗುವುದು ಎಷ್ಟರಮಟ್ಟಿಗೆ ಅನಿವಾರ್ಯ ಮತ್ತು ಆಧುನಿಕ ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರ ಖಂಡಿತಾ ಸಾಧ್ಯವಾಗಿರಲಿಕ್ಕಿಲ್ಲ. ಒಂದು ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದ ವಿಸ್ತøತಜಾಲದ ವಾಹಿನಿಯೊಂದು ದಿನವಿಡೀ ಕಾರ್ಯಕ್ರಮವನ್ನು, ಸುದ್ದಿಯನ್ನು ನೀಡುವ ಕಾರ್ಯಕ್ಕೆ ಬದ್ಧವಾಗುವುದಕ್ಕೆ ವಿಸ್ತøತವಾದ ಆಯಾಮಗಳಿವೆ, ಅವಕಾಶಗಳಿವೆ. ಆದರೆ ಅದೇ ಮಾದರಿಯನ್ನು ಬೆನ್ನುಹತ್ತುವ ದೇಸೀ ವಾಹಿನಿಗಳು ಏನನ್ನು ತಮ್ಮ ಗುರಿಯಾಗಿಸಿಕೊಂಡಿವೆ ಎನ್ನುವುದು ಸ್ಪಷ್ಟವಾಗಿಲ್ಲ. ಬಹುಶಃ ಈ ಸಮಸ್ಯೆ ಸುಲಭವಾಗಿ ಬಗೆಹರಿಸಬಹುದಾದದ್ದು ಎಂದೂ ಅನ್ನಿಸುವುದಿಲ್ಲ.

         ಈ ಬಗೆಯ ಪ್ರಶ್ನೆಗಳು ಬಹಳಷ್ಟು ಸಲ ಕಾಡಬಹುದಾದವೇ ಆಗಿವೆ. ಮತ್ತದೇ ಉತ್ತರಗಳ ಸಂದಿಗ್ಧತೆ. ಇಂತಹದ್ದರ ನಡುವೆಯೇ ಮತ್ತೆ, ಮತ್ತೆ ಸಾಂಸ್ಕೃತಿಕ ಪ್ರಜ್ಞೆಯ ಮಾತುಗಳು ಪುನರಾವರ್ತನೆಯಾಗುವುದು ವಿಚಿತ್ರ ಎನ್ನಿಸುವ ಸಾಧ್ಯತೆಯೂ ಹೌದು.

 
bottom of page