top of page

ಅಂಬೇಡ್ಕರ್ ಮತ್ತು ಕುವೆಂಪು

ಪರಿವಿಡಿ
1.    ಪೀಠಿಕೆ
2.    ಅಂಬೇಡ್ಕರ್
3.    ಕುವೆಂಪು
4.    ಜಾತಿ: ಭ್ರಮೆ ಮತ್ತು ಅಹಂಕಾರ
5.    ಧರ್ಮ : ಸಂಕೀರ್ಣತೆ
6.    ಅಸಮಾನತೆ : ಪರಿಹಾರದ ಹಾದಿ
7.    ಬದ್ಧತೆಯ ಭಾವ
8.    ಕನಸು.... ಕನವರಿಕೆ....

 

ಪೀಠಿಕೆ

        ವೈಚಾರಿಕತೆ, ವಿಚಾರವಾದ ಎನ್ನುವ ಮಾತಿಗೆ ಆಶಾವಾದದ ನೆಲೆಯಿಂದಲೂ ಸಾಕಷ್ಟು ಉತ್ತರಗಳನ್ನು ಯೋಚಿಸಬಹುದು. ಮನುಷ್ಯ ಯೋಚಿಸಬಹುದಾದ ತನ್ಮೂಲಕ ಏನನ್ನಾದರೂ ಯೋಜಿಸಬಹುದಾದ ಗುಣವನ್ನು ‘ಅನನ್ಯತೆ’ಯ ಅಂಶವಾಗಿ ಪರಿಭಾವಿಸುವಲ್ಲಿಯೇ ಇತರ ಪ್ರಾಣಿಗಳಿಗಿಂತ ಭಿನ್ನವಾಗುವ ಸಾಧ್ಯತೆಯತ್ತ ದಾಪುಗಾಲಿಟ್ಟಿದ್ದಾನೆ. ಅದು ಜೈವಿಕ ಬದಲಾವಣೆಯ ವಿಕಾಸವಾದದ ಪಥವನ್ನಿಡಿದಂತೆ ಮಾನಸಿಕ ವಿಕಾಸವಾದದ ಅರ್ಥವೂ ಹೌದು.

        ವಿಸ್ತಾರವಾದ ಜಗತ್ತು, ವಿಪುಲವಾದ ನಿಸರ್ಗಸಂಪತ್ತು ಇರುವಷ್ಟು ಕಾಲ ಏನನ್ನಾದರೂ ಇಲ್ಲಿಂದಲೇ ದಕ್ಕಿಸಿಕೊಂಡು ಸಾರ್ಥಕವಾಗಿ ಬದುಕಬಹುದಾದ ಸಕಲ ಅವಕಾಶಗಳಿಗೂ ತೆರೆದುಕೊಂಡ ಜಗತ್ತಿನಲ್ಲಿ ಮನುಷ್ಯ ಇಂದು ದಕ್ಕಿಸಿಕೊಳ್ಳುವಿಕೆಯ, ಅದರೊಂದಿಗೆ ತಾನು ಏಕಮೇವ ಎಂದುಕೊಳ್ಳಬಹುದಾದ ಅನಂತತೆಗೆ ತನ್ನನ್ನು,  ತನ್ನ ಬೌದ್ಧಿಕಪ್ರಜ್ಞೆಯನ್ನು ವಿಸ್ತರಿಸಿಕೊಂಡಿದ್ದಾನೆ. ಮತ್ತಷ್ಟು ಸಾಧಿತನೆಲೆಯ ಕನಸುಗಳಿವೆ ಎಂಬಂತೆ ಕಸರತ್ತನ್ನು ನಡೆಸಿದ್ದಾನೆ. ಜ್ಞಾನದೊಂದಿಗಿನ ಮುಖಾ-ಮುಖಿ ಎಂದು ಭಾವಿಸುವಲ್ಲಿಯೇ ನಾಗರೀಕ, ಸುಸಂಸ್ಕೃತಿ ಎಂಬೆಲ್ಲಾ ಚಿಂತನೆಗಳ ವ್ಯಾಪ್ತಿಗೆ ಮನುಷ್ಯನನ್ನು ತರುವುದು ಸಾಧ್ಯವಾಗಿರುವುದು ಇಲ್ಲಿ ಸ್ಮರಣಾರ್ಹ. ಎಲ್ಲವೂ ಸರಿಯಿತ್ತೆ ಎನ್ನುವ ಪ್ರಶ್ನೆ ಲೋಕಾಭಿರಾಮವೆಂಬಂತೆ ಕೇಳಿಕೊಂಡರೂ ಉತ್ತರ ಸಮಾಧಾನಕರವಲ್ಲ. ಜ್ಞಾನ ವಿಕಾಸದ ಜೊತೆಜೊತೆಗೆ ಇನ್ನಿತರ ವಿಚಿತ್ರಕಾರಣಗಳಿಂದ ತರ-ತಮವನ್ನು ಸೃಷ್ಟಿಸಿಕೊಂಡ ಮನುಷ್ಯಪ್ರಜ್ಞೆಗೆ ಯಾವ ಹೆಸರಿಡಬಹುದಿತ್ತು ಸುಲಭವಿಲ್ಲ ಚಿಂತನೆ.
ಮನುಷ್ಯನ ತರ್ಕದ ವಿಚಿತ್ರತೆಗಳಿಗೆ ಯಾವ ಹೆಸರಿಡಬಹುದೋ ಗೊಂದಲ. ಎಲ್ಲ ಜ್ಞಾನಗಳನ್ನು ತನ್ನದಾಗಿಸಿಕೊಂಡ ಮನುಷ್ಯ ತಮ್ಮ ನಡುವೆಯೇ ಹೆಣ್ಣು-ಗಂಡು, ಕಪ್ಪು-ಬಿಳಿ, ಮೇಲು-ಕೀಳು ಎಂದು ಪ್ರತಿಪಾದಿಸಿಕೊಂಡದ್ದಕ್ಕೆ ಯಾವುದು ಸೂತ್ರ?. ಮನುಷ್ಯನ ಅಹಂಕಾರ ಮತ್ತು ಶ್ರೇಷ್ಠತೆಯ ಭ್ರಮೆಗಳು ಜಗತ್ತನ್ನು ಹೀಗೆ ತರ-ತಮವಾಗಿಸಿದ್ದು ಈ ಹೊತ್ತಿಗೆ ಸರಿಪಡಿಸಲಾರದಷ್ಟು ಆಳವನ್ನು ಸೃಜಿಸಿದ್ದಕ್ಕೆ ಯಾರನ್ನು? ಹೇಗೆ? ದೂಷಿಸಬಹುದು.

        ಭಾರತದಂತಹ ಸಾಂಪ್ರದಾಯಿಕ ಮನಸ್ಸಿನ ನೆಲಕ್ಕೆ ಇದೊಂದು ಮಹಾಶಾಪವೇ ಆಗಿದೆ. ಸಂಸ್ಕøತಿ, ಮೂಲನಿವಾಸಿಗಳ ಚರ್ಚೆಗಳು ಎಷ್ಟೇ ವೈಜ್ಞಾನಿಕವಾಗಿದ್ದರೂ ಸರಿತಪ್ಪುಗಳ ವಿಶ್ಲೇಷಣೆ ಸಹಜವಾಗಿ ಸಾಧ್ಯವಾಗುತ್ತಿದ್ದರೂ ಜಾತಿ-ಧರ್ಮಗಳು ಬಿಡಿಸಲಾರದ ಒಗಟಾಗಿ, ಮನುಷ್ಯ ನಾಗರಿಕನಾದಂತೆ, ಆಧುನಿಕಗೊಂಡಂತೆಲ್ಲಾ ಮತ್ತಷ್ಟು ಸಂಕೀರ್ಣಗೊಳ್ಳುತ್ತಿರುವ ದುರಂತವನ್ನು ಯಾವ ಹೆಸರಿನಿಂದ ಕರೆಯಬಹುದು?.

        ಮಾನವೀಯತೆಯ ಬಗೆಗೆ ಅಖಂಡವಾದ ಉಪದೇಶಗಳಿವೆ, ಚರ್ಚೆಗಳಿವೆ. ‘ಸರ್ವರಿಗೂ ಸುಖವಾಗಲಿ’ ಎಂಬ ಆದರ್ಶದ ಮಾದರಿಯ ಮಾತುಗಳಿವೆ. ‘ದೇವನೊಬ್ಬನೆ ನಾಮ ಹಲವು’ ‘ಎಲ್ಲರಲ್ಲೂ ಭಗವಂತನಿದ್ದಾನೆ’ ನಿಸರ್ಗದಲ್ಲಿ ಎಲ್ಲರೂ ಸಮಾನರು ಎಂಬೆಲ್ಲಾ ರೋಮಾಂಚನಗೊಳಿಸಬಲ್ಲ, ಅತ್ಯದ್ಭುತವಾದ ಶಬ್ದ-ಅರ್ಥಗಳಿವೆ. ಎಲ್ಲವೂ ಕೇಳುವ ಹಿತದಲ್ಲಿ, ಕಲ್ಪಿಸಿಕೊಳ್ಳಬಹುದಾದ ಸುಖದೊಳಗೆ ಮಾತ್ರ ಕರಗಿಹೋಗಿವೆ.

        ‘ಸಮಾಜ’ ‘ಸಾಮಾಜಿಕ ಜೀವನ’ ಎನ್ನುವುದು ಬದ್ಧತೆಯ ವಿಚಾರಗಳೇ ಆಗಿರುವ ಹೊತ್ತಿನಲ್ಲಿ ಸಾಮಾಜಿಕ ಅಸಮಾನತೆ, ಸಾಮಾಜಿಕ ಅನ್ಯಾಯಗಳು ಸಹ ಬದ್ಧತೆಯ ಭಾವಗಳು ಎಂಬಂತೆ ಅರಗಿಸಿಕೊಂಡು ಒಗ್ಗಿಕೊಂಡು ಬದುಕುವುದು ಅನಿವಾರ್ಯತೆಯ ರೂಪವೇ ಆದಂತಾಗಿದೆ. ‘ಭಾರತೀಯ ಸಮಾಜ’ ಎನ್ನುವ ಪರಿಕಲ್ಪನೆಯ ಮೊದಲಿಗೆ ‘ಜಾತಿ ವ್ಯವಸ್ಥೆ’ ಹಾಸು-ಹೊಕ್ಕಾದ ಸತ್ಯದಂತೆ ನಮ್ಮನ್ನು ಬಾಧಿಸುವುದು ಸಹಜ ಸಮಾನತೆಯ ಕುರಿತು ಯೋಚಿಸುವವರೆಲ್ಲರಲ್ಲಿ ನಿಜದ ಆತಂಕವೇ ಆಗಿದೆ.

        ಮಾನವೀಯತೆ ಎನ್ನುವುದು ಮೂಲತಃ ಸಮಾನತೆಯ ಆಶಯವನ್ನೇ ಒಳಗೊಳ್ಳುವಂತಹುದು. ಹುಟ್ಟು-ಬದುಕು-ಸಾವು ಎನ್ನುವ ಸಾಮಾನ್ಯ ಅರಿವನ್ನು ಯಾವುದೇ ಸಹಜ ತರ್ಕದ ನೆಲೆಯಿಂದ ಗಮನಿಸಿದರೂ ನಿಸರ್ಗ ಎಲ್ಲರೂ ಸಮಾನರು ಎಂದೇ ನೋಡುವ ಆಶಯವನ್ನು ಪ್ರತಿಪಾದಿಸಿರುವುದುಂಟು. ಮನುಷ್ಯನ ಗುಣದೊಳಗಿರುವ ಸಣ್ಣತನ ಅದಕ್ಕೆ ಬೆಂಬಲವಾಗುವ ಸ್ವಾರ್ಥ, ಒಳಸಂಚು, ಪಿತೂರಿ ಮೊದಲಾದ ಗುಣದಾರಿದ್ರ್ಯಗಳಿಂದ ಆತ ಅಸಮಾನತೆಯ ಹಾದಿಯನ್ನೇ ಮಹಾಮಾರ್ಗವಾಗಿಸಿಕೊಂಡಿರುವುದುಂಟು. ಅದಕ್ಕೆ ಹಲವು ಆಯಾಮಗಳನ್ನು, ತಾತ್ವಿಕತೆಯನ್ನು, ಸೈದ್ಧಾಂತಿಕವೆಂಬ ಭ್ರಮೆಯನ್ನು ಸೃಷ್ಟಿಸಿರುವಲ್ಲಿಯೇ ಇದೊಂದು ವ್ಯವಸ್ಥಿತವಾದ ಯೋಜನೆ ಎಂದೆನಿಸುತ್ತದೆ. ಇದನ್ನೆಲ್ಲಾ ಹೇಳಿದ ನಂತರವೂ ಇದಕ್ಕೊಂದು ದೈವೀಕವೆನ್ನುವ ಚೌಕಟ್ಟನ್ನು ಅಳವಡಿಸಿ ಧರ್ಮಸೂಕ್ಷ್ಮವಾಗಿಸಿರುವ ತಂತ್ರ ಮಾತ್ರ ಎಲ್ಲ ಮಾನವೀಯ ಭಾವಗಳಿಗೆ ಬಳಿದ ಮಸಿಯೇ ಹೌದು. ಎಂತಹದ್ದೇ ವೈಜ್ಞಾನಿಕ ಅರಿವಿನ ಉತ್ಕರ್ಷದ ಕಾಲದಲ್ಲಿಯೂ ಈ ನಿಲುವಿನಿಂದ ಪಾರಾಗಲಾರದ ವಿಪರ್ಯಾಸವೇ ಅದರ ಗಾಢತೆಯನ್ನು ಹೇಳುವಂತಹುದು.

        ಭಾರತದಂತಹ ನೆಲಕ್ಕೆ ಈ ಕುತಂತ್ರ ಒಂದು ದೈವೀಕ ಭಾವನೆಯ ರೂಪವಾಗಿ ಸನಾತನತೆಯ ರೂಪಕವಾದದ್ದು ವರ್ಣಾಶ್ರಮ ಪ್ರಜ್ಞೆಯೇ ಸತ್ಯವೆಂದು ವಾದಿಸಲ್ಪಟ್ಟದ್ದು ಈ ಕ್ಷಣಕ್ಕೆ ದೊಡ್ಡ ಆತಂಕವೇ ಆಗಿರುವುದನ್ನು ಯಾವ ಆಧಾರದಿಂದ ಅಲ್ಲಗಳೆಯಬಹುದು.

        ಭಾರತದೇಶದ ಸಾಮಾಜಿಕ ವ್ಯವಸ್ಥೆಯ ಮುಖ್ಯಲಕ್ಷಣಗಳು ಎಂದು ಪಟ್ಟಿಮಾಡುವಲ್ಲಿ ‘ಜಾತಿವ್ಯವಸ್ಥೆ’ಯೆ ಮೊದಲ ಲಕ್ಷಣವಾಗುವುದು ಹೆಮ್ಮೆಯ ಸಂಗತಿ ಆಗುವುದಾದರೂ ಹೇಗೆ ಸಾಧ್ಯ?. ವರ್ಣಾಶ್ರಮದ ತರತಮವನ್ನೇ ಭವ್ಯಬದುಕೆಂದು ವಾದಿಸಿದ ಸನಾತನವಾದಿಗಳಿಗೆ ಹೆಮ್ಮೆಯನ್ನುಂಟುಮಾಡಬಹುದು. ಅದು ಮತ್ತೆ ಕಲುಷಿತ ಮನಸ್ಸಿನ ಕಲರವವಲ್ಲದೆ ಬೇರಲ್ಲ ಆದರೆ ಜೀವಪರ ಚಿಂತನೆಯ ಯಾವ ಸಾಚಾ ಭಾವವಾದರೂ ಹೀಗೊಂದು ಜಾತಿವ್ಯವಸ್ಥೆಯು ನಮ್ಮ ಸಮಾಜದ ಮುಖ್ಯನೆಲೆಯಾದ ಬಗೆಗೆ ಸಂತಾಪ ವ್ಯಕ್ತಪಡಿಸದಿರುವಂತಿಲ್ಲ.

         ಅಂದಿನಿಂದ ಇಂದಿನವರೆಗೂ ಈ ಸಮಾಜ ಹೀಗೊಂದು ಅಸಮಾನತೆಯ ಅಂಶವನ್ನು ತನ್ನ ಒಡಲೊಳಗೆ ಇರಿಸಿಕೊಂಡಿರುವುದಕ್ಕೆ ಖಂಡಿತಾ ತಲೆತಗ್ಗಿಸಲೇಬೇಕು. ಆದರೆ ರೂಪ, ಆಕಾರವೇ ಇಲ್ಲದ ಈ ಸಮಾಜವನ್ನು ಒಪ್ಪಿಕೊಂಡು ಬದುಕಬೇಕಾದ ವಿಪರ್ಯಾಸವಾದರೂ ಯಾಕಾಗಿ ಮತ್ತು ಯಾರಿಗಾಗಿ ಎಂದರೆ ಸರಿ ಉತ್ತರ ನೀಡಬಹುದಾದವರು ಯಾರು?. ಹೀಗೆ ಈ ನೆಲದ ‘ಜಾತಿ’ ವ್ಯವಸ್ಥೆ ಬಹುಮುಖ್ಯವಾಗಿ ಉಂಟುಮಾಡಿದ ಮನುಷ್ಯ ಮನುಷ್ಯರ ನಡುವಿನ ತರತಮವನ್ನು ಇಂದಿಗೂ ಸರಿಪಡಿಸಲಾಗದಂತೆ ಒದ್ದಾಡುತ್ತಿರುವ ಸಂಕಟಗಳಿಗೆ ಯಾರು ಹೊಣೆ? ‘ಮೇಲು’ ಎನ್ನುವ ಅಹಂಕಾರ ‘ಕೀಳು’ ಎನ್ನುವ ಅವಮಾನಗಳಿಗೆ ಕಾಲ ಉತ್ತರ ನೀಡಬಹುದೆ?

        ಭವ್ಯ ಭಾರತವೆಂಬ ಶಬ್ದ-ವಾಕ್ಯಗಳೆಲ್ಲ ತಕ್ಷಣಕ್ಕೆ ತಳಮಳ ಉಂಟುಮಾಡಬಹುದಾದುದು. ಈ ಭವ್ಯ ಭಾರತದಲ್ಲಿ ಜಾತಿಪದ್ಧತಿಯೇ ಸಮಾಜದ ಬುನಾದಿಯಾಗಿದೆ ಎಂಬ ಅರಿವಿನೊಂದಿಗೆ ಈ ಬಗೆಯ ತಳಮಳ ಈ ದೇಶದ ಎಲ್ಲರಿಗೂ ಇದೆ ಎಂದು ಭಾವಿಸಿಬಿಡುವಷ್ಟು ಮೂರ್ಖತನ ಖಂಡಿತ ಬೇಕಿಲ್ಲ. ಹಾಗೊಂದು ವಿಚಿತ್ರ ಎನ್ನಬಹುದಾದ ಸತ್ಯವೊಂದು ಸಾಧ್ಯವಾಗಬಹುದಾಗಿದ್ದರೆ ಈ ದೇಶದ ಎಲ್ಲರೂ ಆದರ್ಶ ಜನರೇ ಆಗಿ ಜಾತಿ ಎನ್ನುವುದು ಯಾವುದೋ ಕ್ಷಣಕ್ಕೆ ತನ್ನಿಂದತಾನೇ ನಾಶವಾಗಿಬಿಡಬಹುದಿತ್ತು. ಈ ಹೊತ್ತಿನ ಈ ಬಗೆಯ ಚಿಂತನೆಗೆ ಖಂಡಿತ ಅವಕಾಶವಿರುತ್ತಿರಲಿಲ್ಲ ಮತ್ತು ಅದು ಹಾಗಾಗಿದ್ದರೆ ಅದಕ್ಕಿಂತ ಹರುಷದ ಸಂಗತಿ ಈ ನೆಲದಲ್ಲಿ ಬೇರೊಂದು ಇರಲಿಕ್ಕೆ ಸಾಧ್ಯವಿರುತ್ತಿರಲಿಲ್ಲ.

        ಸಂಸ್ಕೃತಿ, ನಾಗರೀಕತೆ, ಆಧುನಿಕತೆ ಎಂಬೆಲ್ಲಾ ಮಾತುಗಳಿವೆ, ವಾದಗಳಿವೆ. ಇವು ಮನುಷ್ಯನ ವಿಕಾಸದ ಹಾದಿಯನ್ನು ಕುರಿತೇ ಮಾತನಾಡುತ್ತವೆ. ಅಂದರೆ ಇದು ಕಾಲದಿಂದ ಕಾಲಕ್ಕೆ, ಪರಿಸರದಿಂದ ಪರಿಸರಕ್ಕೆ, ಪ್ರಜ್ಞೆಯಿಂದ ಪ್ರಜ್ಞೆಗೆ ಬೆಳೆಯುತ್ತಾ ಸಾಗುವ ಕ್ರಮ. ತನ್ಮೂಲಕ ವಾಸ್ತವಗಳಿಗೆ, ಸತ್ಯಕ್ಕೆ, ವೈಚಾರಿಕತೆಗೆ, ವಿಜ್ಞಾನಕ್ಕೆ ಮುಖಾ-ಮುಖಿಯಾಗುವ ಬಗೆ. ಉಳಿದಂತೆಲ್ಲಾ ಮಹಾ ನಾಗರೀಕ-ಆಧುನಿಕ ಅರಿವುಗಳೇ ಆದಂತೆ ನಿಂತು ಬೀಗುವ ನಮಗೆ ಜಾತಿ ಎನ್ನುವುದೊಂದು ಪ್ರತಿಗಾಮಿಯಾದ, ಅವ್ಯೆಜ್ಞಾನಿಕವಾದ, ಅತಾರ್ಕಿಕವಾದ ವಿಚಿತ್ರ ಸತ್ಯ ಎನ್ನುವುದು ಯಾಕೆ ಅರಗಿಸಿಕೊಳ್ಳುವುದಾಗುತ್ತಿಲ್ಲ? ಪ್ರತೀಕ್ಷಣಕ್ಕೂ ತನ್ನ ಜಾತಿಯೇ ಶ್ರೇಷ್ಠ ಎಂಬ ಪರಿಭಾವನೆಗಳಾದರೂ ಯಾಕೆ? ಜಾತಿರಹಿತವಾದ ಸಮ-ಸಮಾಜವೊಂದನ್ನು ಈ ನೆಲ ವಾಸ್ತವವಾಗಬಹುದು ಎಂದು ಕನವರಿಸುವುದೇ ಅಸಾಧ್ಯವೆ? ಬಹುಶಃ ಈ ದೇಶ ಹೀಗೆ ‘ಜಾತಿ’ ಎಂಬ ಸಂಗತಿಯನ್ನು ಕುರಿತು ಪರ-ವಿರೋಧವಾಗಿ ಚರ್ಚಿಸಿದಷ್ಟು, ಚಿಂತಿಸಿದಷ್ಟು ವ್ಯಾಪಕವಾಗಿ ಮತ್ತಾವ ಸಂಗತಿಯನ್ನು ಕುರಿತು ಚಿಂತಿಸಿಲ್ಲವೆನ್ನುವಲ್ಲಿಯೇ ಇದರ ವಿಶ್ವರೂಪವನ್ನು ಕಲ್ಪಿಸಿಕೊಳ್ಳ ಬಹುದು.

        ಭಾರತದಲ್ಲಿ ಮಾನವೀಯತೆಯ ಮಾತುಗಳು ಬಂದಾಗೆಲ್ಲ ಸಮಾನತೆಯ ಆಶಯ ತಾನೇ ತಾನಾಗಿ ಮುಂದಾಗುತ್ತದೆ. ಅಂತಲ್ಲಿ ತಕ್ಷಣಕ್ಕೆ, ಜಾತಿ ವಿೂರಲೇಬೇಕಾದ ಕನಸು ಕುಡಿಯೊಡೆಯುತ್ತದೆ. ಪ್ರಾಮಾಣಿಕ ಕಳಕಳಿಯುಳ್ಳ ಜನರು ಈ ನಿಟ್ಟಿನಲ್ಲಿ ಗಂಭೀರವಾಗಿ ಸುಧಾರಣೆಯ ಪ್ರಯತ್ನಗಳನ್ನು ನಡೆಸಿದ್ದಾರೆ, ನಡೆಸುತ್ತಲೂ ಇದ್ದಾರೆ.

        ಮತ್ತೂ ವಿಚಿತ್ರವೆಂದರೆ ಇನ್ನೊಂದು ನೆಲೆಯಲ್ಲಿ ಐಕ್ಯತೆಯ, ಸಂಸ್ಕøತಿಯ, ಆದರ್ಶದ ಮಾತುಗಳನ್ನು ಆಡುತ್ತಲೇ ಜಾತಿ ವ್ಯವಸ್ಥೆಯ ಪರವಾಗಿ ಮಾತನಾಡುವ ಧರ್ಮ, ರಾಜಕೀಯ, ಸಾಮಾಜಿಕ ನೇತಾರರಿದ್ದಾರೆ. ಒಗ್ಗಟ್ಟು ಎನ್ನುತ್ತಲೇ ಪ್ರತ್ಯೇಕತೆಯ ಅರ್ಥವನ್ನು ಪ್ರತಿಪಾದಿಸುವ ಈ ಬಗೆಯ ಚಾಪಲ್ಯವನ್ನು ಅರ್ಥೈಸಿಕೊಳ್ಳುವಲ್ಲಿಯೇ ಕುತಂತ್ರವನ್ನು ಗ್ರಹಿಸಬೇಕಾದ ತುರ್ತಿದೆ.

        ‘ಆಧುನಿಕತೆ’ಯ ಮಾತುಗಳನ್ನು ಪದೇ ಪದೇ ಪ್ರಸ್ತಾಪಿಸುವ ಸಂದರ್ಭಕ್ಕೂ ವಿಶ್ವಗ್ರಾಮದ ಪರಿಕಲ್ಪನೆಯ ವ್ಯಾಪ್ತಿಯೊಳಗಿದ್ದು ಮತ್ತೆ ಮತ್ತೆ ಜಾತಿ ವ್ಯವಸ್ಥೆಯನ್ನು ಸಂಕೀರ್ಣಗೊಳಿಸುವ ಮೂಲಕ ಅವುಗಳಿಗೊಂದು ಮಠಮಾನ್ಯ, ಗುರುಪೀಠವೇ ಮೊದಲಾದ ಸನಾತನತೆಯ ನೆರಳನ್ನು ಚಾಚುವ ಪರಿಕಲ್ಪನೆಯನ್ನು ಪೋಷಿಸುವ ಕೆಲಸ ಈ ದೇಶದ ರಾಜಕಾರಣದ ಬಹುಮುಖ್ಯ ಲಕ್ಷಣವಾಗಿದೆ.
ಮೇಲ್ನೋಟಕ್ಕೆ ಬಹು ಆಕರ್ಷಕವಾಗಿ ಕಾಣಿಸುವ ಈ ಬಗೆಯ ವ್ಯವಸ್ಥಿತ ಯೋಜನೆಗಳನ್ನು ಜನರು ಸುಲಭವಾಗಿ ನಂಬುವಂತಾಗುವುದು ಸಹ ಮತ್ತೊಮ್ಮೆ ವ್ಯವಸ್ಥೆಯ ದುರಂತವೆಂದೇ ಹೇಳಬಹುದು ಮತ್ತೂ ವಿಪರ್ಯಾಸವೆಂದರೆ ವಿದ್ಯಾವಂತರೆನಿಸಿಕೊಂಡವರೂ ಈ ಬಗೆಯ ಯೋಜನೆಗಳಲ್ಲಿ ಪಾಲುದಾರರಾಗುತ್ತಿದ್ದಾರೆ. ಇಂತಲ್ಲಿ ಆದರ್ಶದ, ಸಮಾನತೆಯ ಭಾರತವನ್ನು ಕನವರಿಸುವುದಾದರೂ ಸುಲಭಸಾಧ್ಯವೆ?

         ಹಾಗೆಂದು ಆದರ್ಶದ ಹಾದಿಯನ್ನು, ಮಾದರಿಯ ನೆಲೆಗಳನ್ನು ಬಿಟ್ಟು ಬದುಕುವುದಾದರೂ ಸಾಧ್ಯವೆ? ಅಂತಹ ಪ್ರಯತ್ನಗಳು ಮತ್ತೆ ಮತ್ತೆ ಪುನರ್ ರೂಪುಗೊಳ್ಳುವಲ್ಲಿಯೇ ಕ್ರಿಯಾಶೀಲತೆಗೆ ಅರ್ಥವನ್ನು ಕಂಡುಕೊಳ್ಳಬೇಕಿದೆ.

        ‘ಸಾಮಾಜಿಕ ಸಮಾನತೆ’ ಬಹುಶಃ ಜಗತ್ತಿನ ಎಲ್ಲ ಪ್ರಗತಿಪರ ಚಳುವಳಿಗಳ ಬಹುಮುಖ್ಯ ಲಕ್ಷಣವಾಗಿದೆ. ‘ವರ್ಗ’ ಚಳುವಳಿಗಳು ವಿಭಿನ್ನ ನೆಲೆಯಲ್ಲಿ ಆಯಾಯ ರಾಷ್ಟ್ರಗಳಲ್ಲಿ ಬದಲಾದ ಕಾಲಮಾನಗಳಲ್ಲಿ ಹೇಗೆಲ್ಲಾ ಫಲಿತವನ್ನು ಕಂಡಿರಬಹುದು. ಅದು ‘ಕಾರ್ಲ್‍ಮಾಕ್ರ್ಸ್’ರಂತಹ ವಿಶ್ವ ಮಾದರಿಯ ಸಮಾನತೆಯ ಆಶಯವಾಗಿರಬಹುದು. ಕೆಲವೆಡೆ ನಿರೀಕ್ಷೆ ವಿೂರಿದ ಸಾಧನೆಯಾಗಿದ್ದಿರಬಹುದು. ಆದರೆ ‘ವರ್ಣ’ ತರತಮದ ವಿಷಯದಲ್ಲಿ ಈ ಮಾತನ್ನು ಸುಲಭವಾಗಿ ಹೇಳಲು ಬರುವುದಿಲ್ಲ. ಮುಖ್ಯವಾಗಿ ಭಾರತದಂತಹ ನೆಲದಲ್ಲಿಯಂತೂ ತುಂಬಾ ಆಶಾದಾಯಕವೆನ್ನುವ ಬೆಳವಣಿಗೆ ನಡೆದಿಲ್ಲ. ಅಲ್ಲಿ-ಇಲ್ಲಿ ಕೆಲವು ಪ್ರಗತಿಪರ ಆಶಯಗಳು ಕಂಡರೂ ಅವು ಪರಂಪರೆಯಾಗುವಷ್ಟು ಬೆಳೆಯದಿದ್ದದ್ದು ಮತ್ತೆ ದುರಂತವೇ ಹೌದು. ಬದಲಾವಣೆ ಎನ್ನುವುದಕ್ಕೆ ಹಲವು ನೆಲೆಗಳಿವೆ ಮತ್ತು ಅವು ವಿಷಯದಿಂದ ವಿಷಯಕ್ಕೆ ವಿಭಿನ್ನವೂ ಆಗಿವೆ.

        ಭಾರತೀಯ ಜಾತಿವ್ಯವಸ್ಥೆಯನ್ನು ಯಾವ ನೆಲೆಯಲ್ಲಿ ಸರಿಪಡಿಸಬಹುದು ಎನ್ನುವುದು ಬಗೆಹರಿಯಲಾಗದ ಪ್ರಶ್ನೆಯಾಗಿರುವುದಕ್ಕೆ ಮುಖ್ಯಕಾರಣವೇ ಅದನ್ನು ಕುರಿತು ಯೋಚಿಸಬೇಕಾದವರು ಯೋಚಿಸುತ್ತಿಲ್ಲ ಎನ್ನುವುದೇ ಆಗಿದೆ. ಜಾತಿಯ ಶ್ರೇಷ್ಠತೆಯ ಅಹಂಕಾರದಲ್ಲಿರುವವರೇ ಉಳಿದ ಜಾತಿ ಸೃಷ್ಟಿಗೆ ಕಾರಣವಾಗಿರುವುದು ಸೂರ್ಯಸತ್ಯ. ಅದರೊಂದಿಗೆ ಪ್ರತೀ ಜಾತಿಗೂ ತಮಗಿಂತ ಕೆಳಗೊಂದು ಜಾತಿ ಎನ್ನುವುದಿರುವಂತೆ ನೋಡಿಕೊಳ್ಳುವಲ್ಲಿ ದೊಡ್ಡ ಕುತಂತ್ರ ಅಡಗಿದೆ. ಹಾಗಾಗಿ ಶೋಷಣೆಯ ಸ್ವರೂಪವೂ ಮೇಲಿನಿಂದ ಕೆಳಕ್ಕೆ ಚಲಿಸಿದಂತೆಲ್ಲ ತೀವ್ರವಾಗುತ್ತಿದೆ. ಹಾಗಾಗಿ ಪ್ರತೀ ಜಾತಿಗೂ ತನಗಿಂತ ಕೆಳಜಾತಿ ಕುರಿತಂತಹ ಅಸಡ್ಡೆಯೊಂದು ತಾನೇ ತಾನಾಗಿ ಉಳಿದು-ಬೆಳೆದು ಮತ್ತೊಂದು ಶ್ರೇಷ್ಠತೆಯ ಭ್ರಮೆಯು ಕವಿದುಕೊಳ್ಳುವುದಾಗಿದೆ.

       ‘ಜಾತಿ’ ಎನ್ನುವುದು ಬೌದ್ಧಿಕ ಕಸರತ್ತಿನ ಕ್ರಿಯೆಯೂ ಆಗಿರುವುದರಿಂದ ಅದೊಂದು ಮಾನಸಿಕ ಸಿದ್ಧತೆಯ ಪ್ರತಿಫಲ. ‘ಮೇಲು’ ಎನ್ನುವ ಅಹಂಕಾರ ನಾಶವಾಗದ ಹೊರತು ಸುಲಭವಾಗಿ ಸಮಾನತೆ ಸಾಧ್ಯವಾಗುತ್ತಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಆದರೆ ಯಾರು ಆದರ್ಶದ ನಿಜದ ದಾರಿಯಲ್ಲಿ ಹೆಜ್ಜೆ ಇಡಲು ಸಿದ್ಧರಿದ್ದಂತಿಲ್ಲ. ಅಂದರೆ ಈ ಸಮಸ್ಯೆ, ಈ ದೇಶದಲ್ಲಿ ಖಂಡಿತಾ ಬಗೆಹರಿಯುವುದಿಲ್ಲ ಹಾಗಾಗಿ ಮಾನವತೆಯ ಬಗೆಗೆ, ಜೀವಪ್ರೀತಿಯ ಬಗೆಗೆ ಭವ್ಯ-ದಿವ್ಯತೆಯ ಯಾವ ಪರಿಕಲ್ಪನೆಗಳ ಬಗೆಗೂ ‘ಬದ್ಧತೆ’ಯಿಂದ ಪರಿಭಾವಿಸುವುದು ಭಾರತದ ವಿಚಿತ್ರವಾದವಾಗಿಬಿಡಬಹುದು. ಇದೊಂದು ಗ್ರಹಿಸಿಕೊಳ್ಳಲೇಬೇಕಾದ ಅರಿವು. ಮತ್ತು ಪರಂಪರೆಯೊಂದಿಗಿನ ನಿಜದ ಮುಖಾ-ಮುಖಿ.

        ಜೈವಿಕ ಸತ್ಯ ಪ್ರತಿಪಾದಿಸುವ ಮನುಷ್ಯನಲ್ಲಿ ಮೊದಲನೆ ಅಂಶವೇ ಸಮಾನತೆ. ಹಾಗಾಗಿಯೇ ಆತ ಪ್ರಾಣಿಯಾಗಿಯೂ ಇತರ ಪ್ರಾಣಿಗಳಿಗಿಂತ ಭಿನ್ನ ಆದರೆ ಸ್ವಾರ್ಥ, ಪ್ರತಿಷ್ಠೆ, ಅಹಂಕಾರ ಇತ್ಯಾದಿ ಗುಣ-ಸ್ವಭಾವಗಳು ಅವನನ್ನು ಏನೆಲ್ಲಾ ಮಾಡಿವೆ. ಅದರಲ್ಲಿ ಈ ಸಾಮಾಜಿಕ ಅಸಮಾನತೆಯ ಸ್ವರೂಪವೂ ಮುಖ್ಯವಾದುದು. ಹಾಗಾಗಿಯೇ ಇದನ್ನು ತಪ್ಪು ಎಂದು, ದೂರಬೇಕು ಎಂದು ಮತ್ತೆ ಮತ್ತೆ ಹಲವು ಮಹಾನುಭಾವರು ಜ್ಞಾನ, ಸತ್ಯ, ತರ್ಕ, ಚಿಂತನೆ, ಚರ್ಚೆಗಳೊಂದಿಗೆ ಮತ್ತೆ ಮತ್ತೆ ಸಾಂಸ್ಕೃತಿಕ ಪ್ರಜ್ಞೆಗಳಾಗಿ ಹಾಜರಾಗುತ್ತಲೇ ಇದ್ದಾರೆ ಮತ್ತು ತಮ್ಮಿಂದಾಚೆಗೂ ತಾವು ಹಚ್ಚಿದ ಬೆಳಕು ಪ್ರಸರಿಸಲಿ ಎಂದು ಹಾರೈಸಿದ್ದಾರೆ. ಅಂತಹ ಇಬ್ಬರು ಮಹನೀಯರ ‘ಸಾಮಾಜಿಕ ನ್ಯಾಯ’ದ, ತನ್ಮೂಲಕ ಸಮಾನತೆಯ ಆಶಯದ ಯೋಚನೆಗಳನ್ನು ಪರಿಶೀಲಿಸುವ ಪ್ರಯತ್ನವನ್ನಿಲ್ಲಿ ಮಾಡಲಾಗುತ್ತಿದೆ.

        ಅಂಬೇಡ್ಕರ್ ಭಾರತದೇಶ ಕಂಡ ಅಪ್ರತಿಮ ಚಿಂತಕ. ಈ ನೆಲದ ಜಾತಿವ್ಯವಸ್ಥೆಯ ತೀವ್ರ ಶೋಷಣೆಯ ನಡುವೆಯೂ ಸ್ವಾಭಿಮಾನದ ಸಂಕೇತವಾಗಿ ಅಕ್ಷರ ಸತ್ಯ ಕಂಡು ವಿಶ್ವಸತ್ಯಕ್ಕೆ ಮುಖಾ-ಮುಖಿಯಾದ ಮಹಾನುಭಾವ. ಮುಂದೆ ತನ್ನ ಇಡೀ ಬದುಕನ್ನು ಈ ನೆಲದ ಬಹುಸಂಖ್ಯಾತ ಶೋಷಿತರ ಪರವಾದ ದನಿ ಎತ್ತುವುದಕ್ಕಾಗಿಯೇ ವಿೂಸಲಿರಿಸಿದಂತೆ ದುಡಿದವರು ಸಂವಿಧಾನ ಶಿಲ್ಪಿ ಎಂದೇ ನಾಡಿನ ರೂಪಕವಾದವರು.

        ಕುವೆಂಪು ಕನ್ನಡದ ಸಾರ್ವಕಾಲಿಕ ಸಾಂಸ್ಕೃತಿಕ ಶಕ್ತಿ. ವಿಶ್ವಮಾನವತೆಯನ್ನು ಬದುಕಿನ ಆದರ್ಶವೆಂದುಕೊಂಡೇ ಪ್ರತಿಪಾದಿಸಿದ ಮಹಾಕವಿ, ದಾರ್ಶನಿಕ. ತಮ್ಮ ಬರಹದ ಆರಂಭದಿಂದ ಕೊನೆಯವರೆವಿಗೂ ‘ಸಮಾನತೆ’ಯ ಆಶಯಕ್ಕೆ ಬದ್ಧವಾದ ಚಿಂತನೆಗಳನ್ನು ಈ ನೆಲಕ್ಕೆ ಕೊಡುಗೆಯಾಗಿ ನೀಡಿದ ವೈಚಾರಿಕ ಪ್ರಜ್ಞೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ನಡೆಸಿದ ಈ ಮಹಾಕವಿ ತನ್ನ ಕಾಲದ ಮಡಿವಂತಿಕೆಯ ಜಾತಿ ಶ್ರೇಷ್ಠತೆಯ ಅಹಂಕಾರಗಳ ಜ್ಞಾನಕೋಟೆಯನ್ನು ಮುರಿದು ತನ್ನತನವನ್ನು ಪ್ರತಿಷ್ಠಾಪಿಸಿಕೊಂಡ ರಾಷ್ಟ್ರಕವಿ.

        ಎರಡು ವಿಭಿನ್ನ ಪರಿಸರ, ಪ್ರದೇಶ, ಭಾಷೆ, ಸಾಮಾಜಿಕ ನೆಲೆಗಳೇ ಮೊದಲಾದ ಸಂಗತಿಗಳಿಂದ ಭಿನ್ನವಾದರೂ ಈ ನೆಲದ ಅಸಮಾನತೆಯನ್ನು ಕಂಡು ಇಬ್ಬರೂ ಮಿಡುಕಿದವರು. ಸಮಾನತೆಯ ಆಶಯವನ್ನು ಕುರಿತು ಗಂಭೀರವಾಗಿ ಚಿಂತಿಸಿದವರು ಮತ್ತು ಬಹಳ ಮುಖ್ಯವಾಗಿ ತಮ್ಮ ಆಲೋಚನೆ, ಚಿಂತನೆಗಳನ್ನು ಅಕ್ಷರಗಳನ್ನಾಗಿಸಿ ಈ ನೆಲಕ್ಕೆ ಜ್ಞಾನದ ನಿಜ ಬೆಳಕನ್ನು ಚೆಲ್ಲಲು ತುಂಬಾ ಪ್ರಾಮಾಣಿಕವಾಗಿ ಶ್ರಮಿಸಿದವರು. ಚಿಂತನೆ-ಕಾವ್ಯ ಎಂಬ ಭಿನ್ನ ನೆಲೆಗಳಲ್ಲಿ ಒಂದೇ ಸತ್ಯವನ್ನು ಎದುರಾಗುವ ಹಂಬಲವುಳ್ಳವರು. ಅವರನ್ನು ಒಟ್ಟಾಗಿ ಒಂದೆಡೆ ಚಿಂತಿಸುವ ತುರ್ತು ಎಂದಿಗಿಂತ ಇಂದು ಹೆಚ್ಚು ಅನಿವಾರ್ಯವಾಗಿದೆ ಎಂಬ ಅರಿವಿನಲ್ಲಿ ಒಂದು ಪುಟ್ಟ ಪ್ರಯತ್ನ, ‘ಅಂಬೇಡ್ಕರ್ ಮತ್ತು ಕುವೆಂಪು’.


 
bottom of page