top of page

ನಾನಕ್ಕನೆನ್ ನಿನಗೆ, ತಂಗೆ!

ಪರಿವಿಡಿ
1.    ಮೂಲಸೆಲೆ....
2.    ಸೀತೆ : ಮೊದಲ ಮಾದರಿ 
3.    ನಲ್ಲನ ನೆರಳು....    
4.    ಮಾಯೆಯ ಮುಸುಕು....
5.    ಕದಡಿದ ಕನಸು....
6.    ಹಿರಿತನದ ದಾರಿ....  
7.    ತಲ್ಲಣದ ತರಂಗ....
8.    ಹಂಬಲದ ಹಾದಿ....
9.    ಅರಿವಿನ ಆಚೆಗೆ....
10.    ದರ್ಶನದೆಡೆಗೆ....
11.    ಸಾತ್ವಿಕ ಸಂಘರ್ಷ...
12.    ನಿರೀಕ್ಷಾ ಪರೀಕ್ಷೆ....
13.    ನಿಜದ ಗೆಲುವು....
14.    ಮಂಡೋದರಿ : ಜೀವನ ಪ್ರೀತಿ
15.    ಆತಂಕದ ನೆರಳು....
16.    ಮಹತ್ವಗಳ ಮಾದರಿ....
17.    ಭರವಸೆಯೇ ಬಾಳು....
18.    ಕನಸು ಕೊನರಿದಾಗ....
19.    ಪರಿತಾಪದ ಹೊನಲು....
20.    ಬೆಳಕಿನ ಬಯಲು....
21.    ನಿರೀಕ್ಷಿತ ಫಲಿತ....?

ಮೂಲಸೆಲೆ

         ಮಹಾಕಾವ್ಯ ಎನ್ನುವುದಕ್ಕಿರುವ ವ್ಯಾಪ್ತಿ ದೇಶ, ಜನಾಂಗ, ಸಮುದಾಯ, ಸಮಾಜ ಎಂಬೆಲ್ಲಾ ವಿಸ್ತೃತತೆಗೆ ಚಾಚಿಕೊಂಡಿರುತ್ತದೆ. ಅದು ಕವಿಕೃತವಾಗುವ ಹೊತ್ತಿಗೂ ಸಮುದಾಯಪ್ರಜ್ಞೆಯೇ ಇಡಿಯಾಗಿ ಕೆಲಸ ಮಾಡುತ್ತಿರುತ್ತದೆ. ಅದೊಂದು ಬಹುಮತ ಸಮುದಾಯದ ಅರಿವಾಗಿ, ಅನುಭವವಾಗಿ, ಒಪ್ಪಿತ ಪ್ರಜ್ಞೆಯಾಗಿಯೂ ದಾಖಲಾಗುತ್ತದೆ. ಬದಲಾದ ಕಾಲ, ಪರಿಸರ ಮತ್ತು ಎಚ್ಚರಗಳ ನಡುವೆಯೂ ಅದು ಮೂಲವಾಗಿದ್ದು ಪೂರಕ ಚರ್ಚೆಗಳು ನಡೆಯುವಷ್ಟು ಪ್ರಭಾವವಿರುವುದುಂಟು. ಜನಪದದಿಂದ ಶಿಷ್ಟ, ಶಿಷ್ಟದಿಂದ ಜನಪದ ಎಂಬಂತೆ ಅದರ ಹೂರಣದ ವ್ಯಾಖ್ಯಾನವೂ ನಡೆಯುವುದುಂಟು. ಬದುಕಿನ ಬಗೆಗಿನ ಕಥನ, ಪುರಾಣ-ಇತಿಹಾಸಗಳ ಅರ್ಥದಿಂದಲೂ ವಿವರಿಸಲ್ಪಡುವುದುಂಟು. ಭಾರತದ ಸಂದರ್ಭಕ್ಕೆ ಎರಡು ಮಹಾಕಾವ್ಯಗಳಿರುವುದೇ ವಿಶಿಷ್ಟವಾದುದು. ಮೊದಲನೆಯದು ರಾಮಾಯಣವಾದರೆ, ಎರಡನೆಯದು ಮಹಾಭಾರತ ಕೃತಿಗಳ ಸಂದರ್ಭದಲ್ಲಿ ವಸ್ತುವಿನಲ್ಲಿರುವ ವೈವಿಧ್ಯತೆಯೇ ಅನನ್ಯ. ಅದು ಈ ನೆಲದ ಸಂಸ್ಕೃತಿಗಳ ವೈವಿಧ್ಯತೆಯ, ನಂಬಿಕೆಗಳ ಪುನರ್‍ಮನನದ ರೂಪದಲ್ಲಿಯೂ ದಾಖಲಾಗುತ್ತದೆ. ವ್ಯಷ್ಟಿ-ಸಮಷ್ಟಿಪ್ರಜ್ಞೆಗಳ ಕುರಿತ ದಟ್ಟವಾದ ಜಿಜ್ಞಾಸೆಗಳಿಗೂ ಹಾದಿಮಾಡಿಕೊಡುತ್ತದೆ. ಏಕವ್ಯಕ್ತಿ, ಕುಟುಂಬಕೇಂದ್ರಿತವಾಗಿ ನಡೆವ ರಾಮಾಯಣ, ಮಹಾಭಾರತದ ಹೊತ್ತಿಗೆ ಬಹುವ್ಯಕ್ತಿ ನೆಲೆಗೂ ಚಾಚಿಕೊಂಡು ಕಾಲದೊಂದಿಗೆ ಬದಲಾಗುವ ಬದುಕಿನ ಕ್ರಮವನ್ನು, ಮೌಲ್ಯ-ನಂಬಿಕೆಗಳನ್ನು ದಾಖಲಿಸುತ್ತದೆ. ಇದು ಒಂದು ಕ್ರಿಯಾಶೀಲ ದೇಶದ ಹುಡುಕಾಟದ ಹಾದಿಯೂ ಇರಬಹುದೆ? ಎನ್ನಿಸದಿರುವುದಿಲ್ಲ.

        ಅಕ್ಷರ-ಜ್ಞಾನಗಳೆಲ್ಲಾ ಯಾವುದೋ ಒಂದು ವರ್ಗಗಳ ವ್ಯವಸ್ಥೆಯ ಹಿಡಿತದಲ್ಲಿದ್ದಾಗ ರಚಿತವಾಗುವ ಶಿಷ್ಟದಾಖಲೆಯಂತಹ ಕಾವ್ಯ, ಕೇಂದ್ರೀಕರಿಸಿಕೊಳ್ಳುವ ಬದುಕುಗಳಾದರೂ ಆಯಾಭಾವದ ಆಯ್ಕೆಯೂ ಆಗಿರುತ್ತದೆ. ಹಾಗಲ್ಲದೆ ಹೇಳಲೇಬೇಕಾದ ಅನಿವಾರ್ಯತೆಯ ಸತ್ಯಗಳು ಸಾಂಕೇತಿಕ ನೆಲೆಯಲ್ಲಿ ಸಣ್ಣ-ಪುಟ್ಟ ಪಾತ್ರವೋ ಘಟನೆಯೋ ಆಗಿ ದಾಖಲಾಗಿರುತ್ತದೆ. ಮುಂದೆಲ್ಲಾ ಇದು ಬದಲಾಗಿಯೂಬಿಡಬಹುದು. ಮಹಾಕಾವ್ಯಗಳಿಗಿರುವ ‘ಸ್ವತಂತ್ರ’ವೇ ಈ ಬಗೆಯದ್ದಿರಬಹುದು. ಹಾಗಾಗಿಯೇ ಈ ದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ರಾಮಾಯಣ-ಮಹಾಭಾರತಗಳು ದೊರೆಯುತ್ತವೆ. ಅದು ಅನಕ್ಷರ ಪ್ರಪಂಚದಿಂದ ಅಕ್ಷರ ಪ್ರಪಂಚದವರೆಗೂ ವಿಸ್ತರಿಸಿದೆ.... ಹಾಗಾಗಿ ಸಹಜವಾಗಿಯೇ ಮೂಲ ಮತ್ತು ನಂತರ ಸೇರ್ಪಡೆಯಾಗಿರಬಹುದಾದ ಭಾಗಗಳು, ಭಾವಗಳು, ಪಾತ್ರಗಳು ಸಾಕಷ್ಟಿದ್ದಿರಬಹುದು. ಕಾಲವೇ ಒಂದು ಪರಂಪರೆಯಂತಾದಾಗ ಕಾವ್ಯವೂ ಅದರದ್ದೇ ಒಂದು ಭಾಗವಾಗಿರುವ ಸಾಧ್ಯತೆಯಂತೂ ನಿರಾಕರಿಸುವುದಲ್ಲ.

        ಒಂದು ದೇಶದ ಮಹಾಕಾವ್ಯ ಇಡಿಯಾಗಿ ತನ್ನ ಒಟ್ಟಾರೆ ಸ್ವರೂಪದಿಂದಲೇ ಸಮಸ್ತ ಜನಸಮುದಾಯದ ಮೇಲೆ ಪ್ರಭಾವಬೀರಿರುತ್ತದೆ ಎನ್ನುವಂತಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ನಂಬಿಕೆ, ಬದುಕು, ಸಂವೇದನೆ, ಕ್ರಿಯೆ-ಪ್ರತಿಕ್ರಿಯೆಗಳೆಲ್ಲವೂ ಭಿನ್ನವಾಗಿರುತ್ತವೆ. ಅದಕ್ಕೆ ಪೂರಕವೆಂಬಂತೆ ಅವರು ಆ ದೇಶದ ಮಹಾಕಾವ್ಯಗಳೊಂದಿಗೆ ಅನುಸಂಧಾನ ನಡೆಸುತ್ತಿರುತ್ತಾರೆ. ರಾಮನನ್ನು ಪ್ರೀತಿಸುವಂತೆ, ಲಕ್ಷ್ಮಣನನ್ನೋ ಹನುಮನನ್ನೋ ರಾವಣನನ್ನೋ ಪ್ರೀತಿಸುವ ಸಾಧ್ಯತೆಗಳೂ ಅದಕ್ಕೆ ಅವರಲ್ಲೇ ಸಮರ್ಥವಾದ ಕಾರಣಗಳೂ ಇರುವುದುಂಟು. ಇವೆಲ್ಲವೂ ಆ ದೇಶದ ಮಹಾಕಾವ್ಯವನ್ನು ಜತನಮಾಡಿಕೊಳ್ಳುವಲ್ಲಿ ಸಹಕಾರಿಯಾಗಿರುತ್ತವೆ.

       ಮಹಾಕಾವ್ಯವೊಂದರ ಪುನರ್‍ಸೃಷ್ಟಿಗೆ ಒಬ್ಬ ಕವಿ ಯತ್ನಿಸುವಾಗ ಈ ಬಗೆಯ ಎಲ್ಲಾ ಅರಿವುಗಳೂ ಅವನೊಂದಿಗಿರುತ್ತವೆ. ಅವನ ಬೆನ್ನಿಗೆ ಅಪಾರವಾದ ಅರಿವು-ವರ್ತಮಾನಗಳೆಲ್ಲವೂ ನಿಲ್ಲುತ್ತವೆ. ಒಂದು ಗಟ್ಟಿಯಾದ ಸಮರ್ಥನೆಯಲ್ಲಿ ಆತ ಮಹಾಕಾವ್ಯವೊಂದರ ಮರುಚಿಂತನೆಗೆ ಅಣಿಯಾಗುತ್ತಾನೆ. ಅದೊಂದು ಸಾಂಸ್ಕೃತಿಕ ಜವಾಬ್ದಾರಿ ಎನ್ನುವುದನ್ನೂ ಆತ ಬಲ್ಲ. ಹಾಗೆಯೇ ತನ್ನ ಕಾವ್ಯಸೃಷ್ಟಿಯ ತುರ್ತನ್ನೂ ಆತ ಸ್ಪಷ್ಟಪಡಿಸಿಕೊಳ್ಳುತ್ತಾನೆ. ಅಂತಹ ಎಚ್ಚರವೇ ಆತನ ಕೃತಿಯ ಶ್ರೇಷ್ಠತೆಯನ್ನು ಕಾಪಾಡುತ್ತದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೃಷಿ ನಡೆಸಿ ಹೊಸತನದ ವ್ಯಾಖ್ಯಾನ ಬರೆದ ಕುವೆಂಪು ಮಹಾಕಾವ್ಯ ರಚಿಸುವ ಹೊತ್ತಿಗೆ ರಾಮಾಯಣವನ್ನು ಆಯ್ಕೆಮಾಡಿಕೊಂಡಾಗ ಸಹೃದಯರಿಗೆ ಎದ್ದಿರಬಹುದಾದ ಹಲವಾರು ಪ್ರಶ್ನೆಗಳಿಗೆ ಕೃತಿ ಪ್ರಕಟಗೊಂಡ ನಂತರ, ಓದಿ ಮನನಮಾಡಿಕೊಂಡಾಗ ಸ್ಪಷ್ಟ ಉತ್ತರಗಳು ದೊರೆತಿರಲೇಬೇಕು. ‘ಪೂರ್ಣದೃಷ್ಟಿ’ಯ ಕವಿಪ್ರಜ್ಞೆ ‘ಪಾಪಿಗುದ್ಧಾರವಿಹುದು ಈ ಮದ್‍ವ್ಯೂಹದೊಳ್’ ಎಂಬ ಸತ್ಯಕ್ಕೆ ಮುಖಾ-ಮುಖಿಯಾದ ಬಗೆ ನಿಸರ್ಗನ್ಯಾಯದ ಅರ್ಥದ ಹುಡುಕಾಟಕ್ಕೆ ತೊಡಗಿದಂತಹ ಅನನ್ಯತೆಯನ್ನು ಸ್ಪಷ್ಟಪಡಿಸುತ್ತದೆ. ‘ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’ ಎಂಬ ಚಿಂತನೆ ಮೂಡಿದ ನೆಲೆಯೇ ಇದು.

       ಮಹಾಕಾವ್ಯದ ಪಾತ್ರಗಳು ಕೇವಲ ತಮ್ಮನ್ನು ಮಾತ್ರ ಪ್ರತಿನಿಧಿಸಿಕೊಳ್ಳುವ ಭಾವಗಳೋ ಸಂವೇದನೆಗಳೋ ಪ್ರತಿಕ್ರಿಯೆಗಳೋ ಆಗುವುದಿಲ್ಲ. ಬದಲಾಗಿ ಆ ದೇಶ, ಪರಿಸರ, ಕಾಲ ಎಂಬೆಲ್ಲಾ ಅನಂತತೆಯ ಅರ್ಥವನ್ನು ಒಳಗೊಳ್ಳುತ್ತವೆ ತನ್ಮೂಲಕ ಬಹುಮತದ ನೆಲೆಯನ್ನು ಮುಟ್ಟುತ್ತವೆ. ಹಾಗಾಗಿಯೇ ಪರಿಶೀಲನೆ ಎನ್ನುವುದು ಹೊಸ ಗ್ರಹಿಕೆಯ ನೆಲೆಗೆ ಅನಿವಾರ್ಯವೇ ಆಗಿರುತ್ತದೆ. ಒಬ್ಬ ಮಹಾಕವಿ ಇದನ್ನು ವಿಸ್ತೃತವಾಗಿಯೇ ಪರಿಭಾವಿಸಿ ಚಿಂತಿಸಲು ಸಾಧ್ಯವಿದೆ. ಅದು ಕುವೆಂಪು ಅವರ ಶ್ರೀರಾಮಾಯಣ ದರ್ಶನಂನಲ್ಲಿ ನಿಚ್ಚಳವಾಗಿ ಅರ್ಥೈಸಲ್ಪಟ್ಟಿದೆ. ಕುವೆಂಪು ಅವರ ಮಾತನ್ನೇ ಉಲ್ಲೇಖಿಸುವುದಾದರೆ, “..... ಇಂತಹ ಮಹಾಕೃತಿ ಒಬ್ಬನ ಕೃತಿ ಎನ್ನುವುದು ನಮ್ಮ ಲೌಕಿಕದ ಒಂದು ಸಂಕೇತ. ಆದರೆ ವಾಸ್ತವವಾಗಿ ಅದು ಜನಮನದ ಅಭೀಷ್ಟೆ, ಹಾರೈಕೆಯ ಫಲ ಎಂಬುದು ಬ್ರಾಹ್ಮೀಸತ್ಯ” (ಶ್ರೀರಾಮಾಯಣದರ್ಶನದಲ್ಲಿ ದರ್ಶನಧ್ವನಿ).

       ರಾಮಾಯಣ ಕತೆಯಾಗಲಿ, ಅಲ್ಲಿನ ಪಾತ್ರಗಳಾಗಲಿ ಈ ನೆಲದ ಜನಮಾನಸದಲ್ಲಿ ಉಳಿದುಹೋದ ಬಗೆಯೇ ವಿಶಿಷ್ಟ. ತಮ್ಮ ತಮ್ಮ ಬದುಕಿನ ಸಾಮಾನ್ಯತೆಗೂ ಮಾದರಿಯಾಗಿಸಿಕೊಂಡು ಧೈರ್ಯವಾಗಿಸಿಕೊಂಡು ಬದುಕುವುದನ್ನು ಅತ್ಯಗತ್ಯವೆಂಬಂತೆಯೇ ಪರಿಕಲ್ಪಿಸಿಕೊಂಡಿದ್ದಾರೆ. ಅದು ಅವರಿಗೆ ಯಾವುದೇ ತಂತ್ರವಾಗಲಿ, ಪೂರ್ವಾಗ್ರಹವಾದ ಆಚರಣೆಯಂತಾಗಲಿ, ಒಂದು ನಿರ್ದಿಷ್ಟ ಧರ್ಮವೆಂದೇ ಆಗಲಿ ಅನ್ನಿಸಿದಂತಿಲ್ಲ. ತಮ್ಮ ನಡುವಿನ, ಮನೆಯ, ಕೇರಿಯ, ಊರಿನ, ದೇಶದ, ಸಮಾಜದ ಸಂವೇದನೆಗಳೂ ಆಗಿವೆ. ಆದ್ದರಿಂದಲೂ ಗಾದೆ, ನಾಣ್ಣುಡಿ, ಒಗಟುಗಳ ರೂಪದಲ್ಲಿಯೂ ಇಲ್ಲಿನ ಪಾತ್ರ ಕಥನಗಳೆಲ್ಲ ಅರಿವಿನ ಭಾಗವಾಗಿ ಉಳಿದು ಬೆಳೆದಿವೆ. ಕಾಲಕಾಲಕ್ಕೆ ಶಿಷ್ಟಪರಂಪರೆಯಲ್ಲಿಯೂ ನೂರಾರು ಕಥನಗಳು ಅವರವರ ಭಾವಕ್ಕೆಂಬಂತೆ ಮರುಸೃಷ್ಟಿಯಾಗುತ್ತಲೇ ಇವೆ....

       “ಕಲೆಯನಲ್ಲದೆ ಶಿಲ್ಪಿ ಶಿಲಿಯನೇಂ ಸೃಷ್ಟಿಪನೆ?” ಎನ್ನುವ ಕುವೆಂಪು ಅವರ ಮಾತು ಈ ನೆಲದ ವಾಲ್ಮೀಕಿ ವಿರಚಿತ ಮೂಲ ರಾಮಾಯಣದ ಪ್ರೇರಣೆಯನ್ನು ಸ್ಪಷ್ಟಪಡಿಸುತ್ತದೆ. ರಾಮಾಯಣದ ಸ್ವರೂಪದ ಯಾವುದೇ ಕಥಾನಕ ಇಲ್ಲಿಂದಲೇ ಆರಂಭಗೊಳ್ಳಬೇಕಾದ ಸತ್ಯವನ್ನು ಮನಗಾಣಿಸುತ್ತದೆ. ಆದರೆ ಒಂದು ಮಹಾಕಾವ್ಯದ ಯಶಸ್ಸಿರುವುದೇ ಅದು ಮತ್ತೆ ಮತ್ತೆ ಹೊಸತಾಗಿ ಸೃಷ್ಟಿಯಾಗುವುದರಲ್ಲಿ, ಪರಿಶೀಲನೆಗೊಳ್ಳುವುದರಲ್ಲಿ ಅಂತಹ ಪುನರ್‍ಸೃಷ್ಟಿಯ ಶ್ರೇಷ್ಠತೆಯ ಫಲಿತವೇ ಶ್ರೀರಾಮಾಯಣ ದರ್ಶನಂ.
   
“ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ,
ಕಥೆ ನಿನ್ನದಾದೊಡಂ, ನೀನೆ ಮೇಣಾಶೀರ್ವದಿಸಿ
ಮತಿಗೆ ಬೋಧವನಿತ್ತೊಡಂ, ಕೃತಿ ನನ್ನ ದರ್ಶನಂ
ಮೂರ್ತಿವೆತ್ತೊಂದಮರ ಕಾವ್ಯದಾಕೃತಿಯಲ್ತೆ?”

 ಒಂದು ಮಹಾಕಾವ್ಯ ಕೇವಲ ಸೃಜಿಸಿದ ಮಹಾಕವಿಯ ವೈಯಕ್ತಿಕ ಆಸ್ತಿಯಂತಲ್ಲ, ಅದು ಸಾರ್ವಜನಿಕಗೊಳ್ಳುವುದು ತನ್ನ ಸಮುದಾಯಪ್ರಜ್ಞೆಯ ಬದ್ಧತೆಯಿಂದ. ಹಾಗಾಗಿ ಮೂಲಕವಿಯ ಋಣವು ದೊಡ್ಡದಾಗಿಯೇ ಇರುತ್ತದೆ. ಆಕರದ ಹಕ್ಕು, ಯಶಸ್ಸುಗಳೆಲ್ಲವೂ ಅವನಿಗೇ ಸಲ್ಲುವಂತಹುದು. ಮೂಲ ಶ್ರೇಷ್ಠವೆಂದಾದಲ್ಲಿ ಪುನರಸೃಷ್ಟಿಯೂ ಮತ್ತೊಂದು ಶ್ರೇಷ್ಠ ರಚನೆಯೇ ಆಗಬೇಕೆಂಬುದು ಕವಿಯ ಆತ್ಮವಿಶ್ವಾಸದಂತೆ ಬದ್ಧತೆಯೂ ಹೌದು. ಕಾವ್ಯ ಸೃಜನಶೀಲ ಪ್ರಕ್ರಿಯೆ ಎಂದುಕೊಳ್ಳುವುದರ ಚರ್ಚೆಯ ಸ್ವರೂಪವೇ ಇದು. ಹಾಗಾಗಿಯೂ ತನ್ನ ಅರಿವಿನ ಇಡೀ ನಿನ್ನೆಗಳು ಈ ಹೊತ್ತಿನ ಎಚ್ಚರದೊಂದಿಗೆ ಭವಿಷ್ಯತ್ತನ್ನು ಗಮನವಿರಿಸಿಕೊಂಡಂತೆ ಮಹಾಕಾವ್ಯ ಸೃಷ್ಟಿಯೊಳಗೆ ಅವಿನಾಭಾವವಾಗುತ್ತವೆ. ಅದು ನಿಜದ ನೆಲೆಯಲ್ಲಿ ‘ದರ್ಶನ’ವೂ ಆಗುತ್ತದೆ. ಅದಕ್ಕೆಂದೇ ಕವಿ

“ಲೋಕಗುರು ಕೃಪೆಯಿರಲಿ; ಲೋಕಕವಿ ಕೃಪೆಬರಲಿ;
    ಲೋಕ ಹೃದಯದ ಬಯಕೆಯಾಶೀರ್ವಾದವೈತರಲಿ”.
 
       ಎಂದು ವಿನಯದಿಂದ ಎಲ್ಲ ಹಾರೈಕೆಗಳನ್ನು ಬಯಸುತ್ತಾರೆ. “ರಾಮಾಯಣ ಆದಿಕಾವ್ಯ; ಅದರ ಕವಿ ಆದಿಕವಿ. ಆತನು ಮಹರ್ಷಿಯೂ ಆಗಿರುವುದರಿಂದ ದ್ರಷ್ಟಾರನೂ ಅಹುದು. ಆತನ ಪೂರ್ಣದೃಷ್ಟಿ ಲೋಕಾತಿಕ್ರಾಂತಗೋಚರವು ಆಗಿರುವುದರಿಂದ ಆತನ ಕ್ರಾಂತದರ್ಶಿ ಮತ್ತು ಅವನ ಪ್ರತಿಭೆ ನಿತ್ಯಸತ್ಯ ಸಂಸ್ಪರ್ಶಿ. ಆ ಋಷಿಕವಿ ವಾಲ್ಮೀಕಿಯ ಸಮುದ್ರೋಪಮವಾದ ಮಹಾಗಾನಕ್ಕೆ ಜಗತ್ತು ಮಹಾಕಾವ್ಯದ ಪಟ್ಟಕಟ್ಟಿದೆ. ಏಕೆಂದರೆ ರಾಮಾಯಣವು ಪುರಾಣವಾದರೂ ಅದೊಂದು ಬೃಹದ್ ಭಾವಗೀತೆಯಂತಿದೆ. ಅದು ಏಕಕವಿ ಕೃತಿಯೂ ಆಗಿದೆ. ಬಹುಕಾಲದ ಸಂಸ್ಕøತಿಯ ಬಹುದೊಡ್ಡ ಜನಾಂಗದ ಮನಃಕೃತಿಯೂ ಆಗಿದೆ. ಮೊದಲನೆಯ ಕಾರಣಕ್ಕಾಗಿ ಅದು ಭಾವಗೀತೆಯಂತಿದ್ದರೆ, ಎರಡನೆಯ ಕಾರಣಕ್ಕಾಗಿ ಪುರಾಣದಂತಿದೆ. ಆದ್ದರಿಂದಲೇ ಅದಕ್ಕೆ ಮಹಾಕಾವ್ಯ ಎಂಬ ಬಿರುದು ಸರ್ವಾಂಗ ಸುಂದರವಾಗಿ ಒಪ್ಪುತ್ತದೆ. ಏಕಾಗ್ರತೆ, ಏಕಮುಖತೆ, ಐಕ್ಯತೆ, ರಾಗತೀಕ್ಷ್ಣತೆ, ಆದರ್ಶಪ್ರಿಯತೆ, ರಸಾವೇಶ ಇವುಗಳ ದೃಷ್ಟಿಯಿಂದ ಇದೊಂದು ಭಾವಗೀತೆ. ವಿಪುಲತೆ, ಬಹುಳತೆ, ವಿವಿಧತೆ, ದೇವತ್ವ, ದೈತತ್ವ, ಮಹತ್ವ ಇವುಗಳ ದೃಷ್ಟಿಯಿಂದ ಅದೊಂದು ಪುರಾಣ. ಅದರ ಸೂತ್ರಭಾವಗೀತೆಯದು; ಗಾತ್ರ ಪುರಾಣದ್ದು” (ಶ್ರೀರಾಮಾಯಣ ದಿವ್ಯಶಿಲ್ಪ).

       ರಾಮಾಯಣವನ್ನು ಕವಿ ಕುವೆಂಪು ಗ್ರಹಿಸಿದ ವಿಶಿಷ್ಟ ಬಗೆಯಿದು. ಇದು ಮಹಾಕಾವ್ಯವನ್ನು ಒಂದು ಸಾಹಿತ್ಯ ಸ್ವರೂಪವಾಗಿ ಗ್ರಹಿಸುತ್ತಲೇ ಅದೊಂದು ‘ಬದುಕಿನ’ ವ್ಯಾಖ್ಯಾನವೂ ಆದ ಬಗೆಯನ್ನು ಸ್ಪಷ್ಟವಾಗಿ ಗುರುತಿಸುತ್ತಾ ಯಶಸ್ಸಿನ ಅರ್ಥವನ್ನು ಪರಿಶೀಲಿಸುತ್ತಿದ್ದಾರೆ. ಇದು ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ರಚಿಸುವ ಹಿನ್ನೆಲೆಗೆ ಒಂದು ಅರ್ಥಪೂರ್ಣ ಮುನ್ನುಡಿಯು ಆಗಿದೆ. ರಾಮಾಯಣದಂತಹ ಕೃತಿ ಮತ್ತೆ ಮತ್ತೆ ಮಹಾಕಾವ್ಯವಾಗಿ ಸೃಷ್ಟಿಗೊಳ್ಳುವ ಅನಿವಾರ್ಯತೆಯನ್ನು ಕವಿ ಹೀಗೆ ಸ್ಪಷ್ಟಪಡಿಸುತ್ತಾರೆ. “ವಾಲ್ಮೀಕಿಯ ಕೃತಿ ಅದು ಹುಟ್ಟಿದಂದು ‘ಕವಿಕೃತಿ’ಯಾಗಿತ್ತು; ಇಂದು ‘ಪ್ರಕೃತಿ’ಯಾಗಿದೆ. ಭಾರತೀಯರ ಬಾಳುವೆಯ ಲೋಕದಲ್ಲಿ ಪರ್ವತ, ಅರಣ್ಯ, ಸಮುದ್ರ, ಆಕಾಶಗಳಿರುವಂತೆ ರಾಮಾಯಣವೂ ಇದೆ; ಬಹುಶಃ ಅವುಗಳಿಗಿಂತಲೂ ಸುಸ್ಥಿರವಾಗಿ, ಸಮಧಿಕವಾಗಿ, ಸತ್ಯತರವಾಗಿ, ಬಾಹ್ಯಾಭ್ಯಂತರಗಳನ್ನೂ ಲೋಕಾಲೋಕಗಳನ್ನೂ ಆಕ್ರಮಿಸಿ, ವ್ಯಾಪಿಸಿ ಸೃಷ್ಟಿಯ ವಿಕಾಸರೂಪವಾದ ಪರಿಣಾಮ ಪಥದಲ್ಲಿ ಒಂದು ಪರಿವರ್ತನಾ ಸಾಮರ್ಥವಾದ ಸಾರಥಿ-ಶಕ್ತಿಯಾಗಿದೆ. ಪ್ರಕೃತಿಯ ಪರ್ವತಾರಣ್ಯಗಳನ್ನು ಯಥಾಶಕ್ತಿಯಾಗಿ ಉಪಯೋಗಿಸಿಕೊಳ್ಳುವಂತೆ ರಾಮಾಯಣವನ್ನೂ ಉಪಯೋಗಿಸಿಕೊಳ್ಳಬಹುದು. ಆ ಪರ್ವತದ ಬಂಡೆಗಳಲ್ಲಿ ಸಾಮಥ್ರ್ಯವಿರುವವರು ಯಾರುಬೇಕಾದರೂ ತಮ್ಮ ತಮ್ಮ ಪ್ರತಿಭೆಯ ಕಲ್ಪನಾಕೃತಿಗಳನ್ನು ಕಾಣಬಹುದು, ಶಿಲ್ಪಕೃತಿಗಳನ್ನು ಕಡೆಯಬಹುದು. ಆ ಅರಣ್ಯದ ಅಂಶದಿಂದ ತಮ್ಮ ತಮ್ಮ ದರ್ಶನಕ್ಕೆ ಅನುರೂಪವಾಗಿ ಎಂತಹ ನಂದನೋದ್ಯಾನಗಳನ್ನು ಬೇಕಾದರೂ ರಚಿಸಿಕೊಳ್ಳಬಹುದು. ವಾಲ್ಮೀಕಿಯ ದಿವ್ಯ ಕೃತಿ ಪ್ರಕೃತಿಯ ಮೂಲಭೂತ ವಸ್ತುಗಳಂತೆ, ಶಕ್ತಿಗಳಂತೆ ಅಪೌರುಷೇಯವಾಗಿ ಹೋಗಿದೆ. ಆದ್ದರಿಂದಲೆ ಅದು ವೇದಮಟ್ಟಕ್ಕೂ ಏರಿದೆ.

       “ಕವಿಮಹರ್ಷಿ ಅಂದು ಹಾಡಿದ ರಾಮಾಯಣ ಇಂದು ಮತ್ತೊಮ್ಮೆ ನಮ್ಮಲ್ಲಿ ಮೂಡದ ಹೊರತು ಸಾರ್ಥಕವಾಗುವುದಿಲ್ಲ. ಏಕೆಂದರೆ ಕೃತಿಯ ರಸ ಸ್ವಾದನೆಯು ಕೃತಿರಚನೆಯಂತೆ ಒಂದು ಸೃಷ್ಟಿಕಾರ್ಯ. ಓದುವ ಅಥವಾ ಆಲಿಸುವ ನಮ್ಮ ಒಬ್ಬೊಬ್ಬರ ಹೃದಯದಲ್ಲಿಯೂ ರಾಮಾಯಣದ ಪುನಃಸೃಷ್ಟಿಯಾಗಬೇಕು. ಹಾಗೆ ಒಂದೊಂದು ಚೇತನದಲ್ಲಿಯೂ ರಾಮಾಯಣಾವತಾರವಾಗುವುದರಲ್ಲಿಯೇ ವಾಲ್ಮೀಕಿಯ ಕೃತಿ ಸಾರ್ಥಕತೆ ಪಡೆಯುತ್ತದೆ” (ಶ್ರೀರಾಮಾಯಣ ದಿವ್ಯಶಿಲ್ಪ).

       ಶ್ರೀರಾಮಾಯಣ ದರ್ಶನಂ ಕೃತಿ ರಚಿಸುವ ಬಗೆಗೆ ಕವಿ ಸ್ಪಷ್ಟವಾಗಿದ್ದಾರೆ. ರಚನೆಯ ಹಿಂದೆ ಮಹೋದ್ದೇಶವಿದೆ. ಮೊದಲ ರಾಮಾಯಣ, ನಂತರದ ರಾಮಾಯಣಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಶ್ರೀರಾಮಾಯಣ ದರ್ಶನಂನಲ್ಲಿ ಉತ್ತರವಿದೆ. ಪಾತ್ರಗಳು, ಘಟನೆಗಳು, ವರ್ಣನೆ, ಕ್ರಿಯೆ-ಪ್ರತಿಕ್ರಿಯೆ ಎಂಬೆಲ್ಲಾ ಆಯಾಮಗಳಲ್ಲಿ ವರ್ತಮಾನಕ್ಕೆ ಪ್ರತಿಸ್ಪಂದಿಸಿ ಉತ್ತರ ಕಂಡುಕೊಳ್ಳುವ ತಹತಹಿಕೆಗಳಿವೆ. ಮಹಾಕಾವ್ಯಗಳ ಕಾಲವಿನ್ನು ಮುಗಿದುಹೋಯಿತು ಎನ್ನುವ ಹೊತ್ತಿನಲ್ಲಿ ಸೃಷ್ಟಿಯಾದ ಶ್ರೀರಾಮಾಯಣ ದರ್ಶನಂ ಹಲವು ಅನನ್ಯತೆಗಳಿಗೆ ಆಕರವಾಗಿದೆ. ಮನುಷ್ಯತ್ವದ ವಿಭಿನ್ನ ಭಾವಗಳ ಸಂಘರ್ಷ, ಸಮನ್ವಯಗಳ ಹೊಸ ವ್ಯಾಖ್ಯಾನವಿದೆ. ಸಂಸ್ಕøತಿಯ ಅರಿವಿನ ಹೊಸ ಅರ್ಥವಿದೆ. ಮಾನವ, ವಾನರ, ದಾನವ ಎಂಬ ವಿಭಿನ್ನ ಸಮುದಾಯಗಳ ಮುಖಾ-ಮುಖಿಯೇ ಸಂಸ್ಕೃತಿಯ ವೈವಿಧ್ಯತೆಯ ಮೂಲವೆಂಬ ಹೊಸತಾದ ಅಷ್ಟೇ ಸಹಜವಾದ ವ್ಯಕ್ತಿಯಲ್ಲಿ ಸಮಷ್ಟಿ ಮುಖ್ಯ ಎಂಬ ಅರಿವಿನ ಪ್ರಜ್ಞೆಯು ಪ್ರಧಾನವಾಹಿನಿಯಾಗಿ ಕೆಲಸ ಮಾಡಿದೆ. ‘ದರ್ಶನ’ದ ಹೊಸ ಭಾಷ್ಯದೊಂದಿಗೆ ಮಹಾಕಾವ್ಯ ಮಹತ್ತರವಾದುದನ್ನು ಸಹೃದಯನಿಗೆ ತಲುಪಿಸುವ ಗುರಿಯೊಂದಿಗೆ ಚಲಿಸುತ್ತದೆ.

       “ಶ್ರೀರಾಮಾಯಣ ದರ್ಶನವನ್ನು ಬರೆಯುವುದಕ್ಕೆ ತೊಡಗಿದ ಪ್ರಾರಂಭದಲ್ಲಿ ಅದರ ಅರಿವು ನನಗಿರಲಿಲ್ಲ. ರಾಮಾಯಣ ದರ್ಶನವನ್ನು ಪೂರ್ತಿ ಪೂರೈಸಿದ ತರುವಾಯ ಹತ್ತುವರ್ಷಗಳ ನಂತರ ಮತ್ತೆ ಹಿಂದಕ್ಕೆ ಹೋಗಿ ಈ ಅಹಂಕಾರದ, ಅಜ್ಞಾನದ ಕಾಲದಲ್ಲಿ ಬರೆದ 5000 ಸಾಲುಗಳನ್ನು ಪೂರ್ತಿ ತೆಗೆದು, ಮುಂದೆ ಕಂಡ ದರ್ಶನಕ್ಕೆ ಅನುಗುಣವಾಗಿ ಅವುಗಳನ್ನು ಮತ್ತೆ ಒಂದು ರೀತಿಯಲ್ಲಿ ಬರೆಯಬೇಕಾಗಿ ಬಂತು. ಇದನ್ನು ಬರೆಯುವಾಗ ಸ್ವಲ್ಪದೂರ ಹೋಗುವುದರ ಒಳಗಾಗಿ ಇದು ತನಗೆ ತಾನೇ ಜೀವಂತವಾದದ್ದು, ಸೃಷ್ಟಿಯಾಗ ತಕ್ಕಂಥದ್ದು ಎಂಬುದು ಗೋಚರವಾಯಿತು....” “ಪ್ರಾರಂಭದಲ್ಲಿ ನಾನೂ, ತಾಯಿ ಮಗುವನ್ನು ಹೊತ್ತು ಪೊರೆಯುವಂತೆ ಈ ಕೃತಿಯನ್ನು ಪಡೆದಿರಬಹುದು. ಆದರೆ ಕೃತಿ ಬೆಳೆದಂತೆಲ್ಲ ಅದೇ ನನ್ನನ್ನು ಬೆಳೆಸಿತು.” (ಶ್ರೀರಾಮಾಯಣ ದರ್ಶನದಲ್ಲಿ ದರ್ಶನಧ್ವನಿ). ಇದು ಕೇವಲ ಮಾತಿಗಾಗಿ ಎಂಬಂತೆ ಆಡಬಹುದಾದ ಶಬ್ದಗಳಲ್ಲ. ಒಂದು ಕೃತಿಯ ರಚನೆ ಬಗೆಗಿರುವ ಬದ್ಧತೆ, ಪ್ರೀತಿ, ಸಾಧಿಸಿಯೇ ಸಿದ್ಧ ಎನ್ನುವ ವಿಶ್ವಾಸದಿಂದ ಉಂಟಾಗುವ ಸಾರ್ಥಕ್ಯಭಾವ. ಕೃತಿಯೊಳಗೆ ತನ್ನನ್ನು ತಾನು ಕಳೆದುಕೊಳ್ಳುವ ತನ್ಮೂಲಕ ಶ್ರೇಷ್ಠತೆಯೊಂದನ್ನು ಸಾಧಿಸುವ ಸಾಧ್ಯತೆಗೆ ಸಂಬಂಧಿಸಿದ್ದು....

       ಆಧುನಿಕ ಕಾವ್ಯಪರಂಪರೆಯ ಹೊತ್ತಿಗೆ ಪುರಾಣವೊಂದನ್ನು ಪುನರ್‍ರಚಿಸುವ ತುರ್ತು ಅಂದಿಗೆ ವಿಚಿತ್ರ ನೆಲೆಯಲ್ಲಿ ಪ್ರಶ್ನಾರ್ಹವಾಗಿತ್ತು. ಏಕೆ? ಹೇಗೆ? ಎಂಬೆಲ್ಲಾ ಹೊರಗಿನ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿದ್ದಿರಲಿಲ್ಲ. ರಾಮಾಯಣ ‘ದರ್ಶನ’ದ ಹೊಸ ಅರಿವಿನೊಂದಿಗೆ ಪುನರ್‍ಸೃಷ್ಟಿಯಾಯ್ತು ಅನುಸಂಧಾನಕ್ಕೆ ಹಲವು ಅವಕಾಶಗಳಿದ್ದವು. ಅದು ಕವಿಯ ಪ್ರತಿಭಾ ಕೌಶಲಕ್ಕೆ ಸವಾಲಾಗಿತ್ತು. ಸೂಕ್ಷ್ಮಹುಡುಕಾಟದ ಅನಂತ ಅವಕಾಶಗಳು ತೆರೆದುಕೊಂಡವು. ಕನ್ನಡದ ಸಂದರ್ಭಕ್ಕೆ ಪುರಾಣವನ್ನು ಹೊಸತಾಗಿ ನಮ್ಮೆಲ್ಲ ಭಾವಗಳೊಂದಿಗೆ ವರ್ತಮಾನದ ಪ್ರತಿಕ್ರಿಯೆಯಾಗಿಯು ನೋಡಬಹುದಾದ ವಿಶಿಷ್ಟಮಾರ್ಗವೊಂದನ್ನು ‘ಶ್ರೀ ರಾಮಾಯಣ ದರ್ಶನಂ’ ತೆರೆದುತೋರಿಸಿತು. ಹಾಗಾಗಿಯೇ ಕುವೆಂಪುವನ್ನೇ ಶ್ರೀರಾಮಾಯಣದರ್ಶನಂ ರೂಪಿಸಿತು ಎನ್ನುವ ಮಾತು ಕವಿಯಿಂದಲೇ ದಾಖಲಾಗುವುದು ಸಾಧ್ಯವಾಯಿತು.

       ಮಹಾಕಾವ್ಯವೆನ್ನುವುದು ಹಲವು ಘಟನೆಗಳ, ನೂರಾರು ಪಾತ್ರಗಳ ಸಂಯೋಗದ ಒಂದು ಫಲಿತ. ಕಥಾಸಂವಿಧಾನವಾದರೂ ಕೃತಿಕಾರನ ಗಂಭೀರ ಉದ್ದೇಶವನ್ನೇ ಗಮನದಲ್ಲಿರಿಸಿಕೊಂಡಿರುತ್ತದೆ. ಪ್ರಧಾನ, ಅಪ್ರಧಾನ, ವಿವರಣಾತ್ಮಕ ಸಂಕ್ಷಿಪ್ತತೆ ಹೀಗೆ ಹಲವು ಸ್ತರಗಳಲ್ಲಿ ಸಾಧ್ಯತೆಗಳು ಕೃತಿಕಾರನಿಂದಲೇ ನಿರ್ಧರಿಸಲ್ಪಡುತ್ತದೆ. ಮುಂದೆ ಸಹೃದಯನಲ್ಲಿ ಅದು ಉಂಟುಮಾಡಬಹುದಾದ ಪ್ರತಿಕ್ರಿಯೆಗಳು ವಿಭಿನ್ನವಿರಬಹುದು, ಸಮನ್ವಯವಿರಬಹುದು. ಮತ್ತದು ಪರಿಭಾವಿಸುವ ಹೊತ್ತಿಗೆ ವ್ಯಕ್ತಿನಿಷ್ಟವೂ ಆಗಿಬಿಡಬಹುದು. ಸಮುದಾಯದ ಸಂದರ್ಭಕ್ಕೆ ಮತ್ತೆ ಭಿನ್ನವೇ ಆಗಬಹುದು.

       ‘ಶ್ರೀರಾಮಾಯಣ ದರ್ಶನಂ’ನ ಪಾತ್ರ ಪ್ರಪಂಚವೇ ವಿಶಿಷ್ಟವಾದುದು. ಅವು ಕೇವಲ ಕಥನಕ್ಕೆ ನೆರವೀಯುವ ನೆಪಗಳಾಗುವುದಿಲ್ಲ. ತಮ್ಮ ನಿಜದ ಅಸ್ತಿತ್ವ ಕಂಡುಕೊಳ್ಳಲು ತುಡಿಯುತ್ತವೆ. ಸಹಜವಾದ ತಮ್ಮ ಗುಣ ಶೀಲಗಳಿಗನುಗುಣವಾಗಿ ಎಂಬಂತೆಯೂ ಪೂರ್ಣತೆಗೆ ಹಂಬಲಿಸುತ್ತವೆ. ತನ್ಮೂಲಕ ಸಹೃದಯರೊಳಗೆ ತಾನೂ ಒಂದಾಗುವ, ಭಾವವಾಗುವ, ಕನವರಿಕೆಗಳು ರೂಪಕಗಳೂ ಆಗಿಬಿಡುವ ಅವಕಾಶವನ್ನು ಮುಕ್ತವಾಗಿರಿಸಿಕೊಂಡೇ ವರ್ತಿಸುತ್ತವೆ. ಇದು ಕುವೆಂಪು ಅವರೇ ಹೇಳುವಂತೆ ‘ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎಂಬ ಚಿಂತನೆಯ ಪ್ರತಿಫಲಗಳೂ ಆಗುತ್ತಾ ತಮ್ಮ ತಮ್ಮಷ್ಟಕ್ಕೆ ಅವಕಾಶಗಳಿಗನುಗುಣವಾಗಿ ಸಲ್ಲಲು ಗಂಭೀರವಾಗಿಯೇ ಪ್ರಯತ್ನಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಚಿಂತನೆಯ ಉದ್ದೇಶಕ್ಕೆ ಸೀತೆ ಮತ್ತು ಮಂಡೋದರಿಯ ಪಾತ್ರಗಳನ್ನು ಕೇಂದ್ರೀಕರಿಸಿಕೊಳ್ಳಲಾಗಿದೆ.

       ಕುವೆಂಪು ಚಿತ್ರಿಸಿರುವ ಈ ಪಾತ್ರಗಳ ಅನನ್ಯತೆಯನ್ನು ಅರಿಯುವ ಬರಹಕ್ಕೆ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಒಳಗಿನಿಂದಲೇ ಉತ್ತರ ಹುಡುಕುವ ಹಂಬಲವಿದೆ. ಕಥಾವಸ್ತು, ಕಾಲ, ಪರಿಸರ, ಜನಾಂಗ ಮತ್ತು ಮುಖ್ಯವಾಗಿ ಪುರುಷ ಪ್ರಾಧಾನ್ಯತೆಯ ಸಂದರ್ಭಕ್ಕೆ ಈ ಪಾತ್ರಗಳು ಪ್ರತಿಕ್ರಿಯಿಸಿದ, ತಮ್ಮತನವನ್ನು ಕಂಡುಕೊಂಡ ಬಗೆಗಿನ ಕುತೂಹಲವೇ ಇಲ್ಲಿ ಸ್ಥಾಯಿಯಾಗಿದೆ....
ರಾಮಾಯಣ ಎಂಬ ಹೆಸರೇ ‘ರಾಮ’ನನ್ನು ಕೇಂದ್ರೀಕರಿಸಿಕೊಂಡ ಪುರುಷ ಪ್ರಜ್ಞೆಯನ್ನು ಪ್ರಸ್ತಾಪಿಸುವಂತಹುದು. ಅದು ರಾಮನ ಕತೆ ಎಂದು ಜನಜನಿತವಾಗುವಲ್ಲೇ ಉಳಿದ ಪಾತ್ರಗಳು ರಾಮನಿಂದ, ರಾಮನಿಗಾಗಿ ಎಂಬಂತೆ ಅವನನ್ನು ಆವರಿಸಿಕೊಳ್ಳುತ್ತವೆ. ಹಾಗಾಗಿಯೂ ರಾಮಾಯಣ ವ್ಯಷ್ಟಿಪ್ರಜ್ಞೆಯ ಕಾವ್ಯ. ರಾಮ ಸೌರವ್ಯೂಹದ ಸೂರ್ಯನಂತೆ ಕೇಂದ್ರವಾಗಿದ್ದರೆ ಉಳಿದ ಪಾತ್ರಗಳು ಅವನ ಸುತ್ತಲೇ ಸುತ್ತುವುದಾಗುತ್ತದೆ. ಆದರೆ ವಿಶಿಷ್ಟತೆಯಿರುವುದು ರಾಮನ ಕತೆಯ ಸಾರ್ಥಕತೆಯಾಗಿ ಸೀತೆ ಪಾತ್ರ ಮುಖ್ಯವಾಗುವಲ್ಲಿ ಎನ್ನುವುದು ಗಮನಾರ್ಹ. ಈ ನೆಲದಲ್ಲಿ ಪುರುಷ ಪ್ರಾಧಾನ್ಯತೆಯ ಮಾತು ಮೇಲಿಂದ ಮೇಲೆ ಹೇಳಲ್ಪಟ್ಟರು, ಹೇರಲ್ಪಟ್ಟರು ಸ್ತ್ರೀಯನ್ನು ಹೊರತುಪಡಿಸಿದಂತೆ ಯಾವ ಪುರುಷನೂ ಪರಿಪೂರ್ಣನಾಗಲಿಲ್ಲವೆನ್ನುವುದೇ ಅವಳ ವ್ಯಕ್ತಿತ್ವದ ಅನನ್ಯತೆಯನ್ನು ಹೇಳುವಂತಹುದು ‘ತಾಯಿ’ ಎನ್ನುವ ಅರಿವಷ್ಟೇ ಸಾಕು ಹೆಣ್ತನದ ಮಹತ್ವವನ್ನು ಅರಗಿಸಿಕೊಳ್ಳಲು....

       ಮೇಲೆ ಗಮನಿಸಿದಂತೆ ರಾಮಕೇಂದ್ರಿತವಾದ ಕಾವ್ಯದಲ್ಲಿ ಸಹಜವಾಗಿ ಅವನ ಸಂಗಾತಿಯಾಗಿ ಸೀತೆಯು ಮುಖ್ಯನೆಲೆಯಲ್ಲಿ ಕಾಣುತ್ತಾಳೆ. ಉಳಿದಂತೆ ಹಿರಿತನದ ಲೆಕ್ಕದಲ್ಲಿ ಮುಖ್ಯ ಪಾತ್ರಗಳಾಗಿ ಕೌಸಲ್ಯ, ಸುಮಿತ್ರಾ, ಕೈಕೆಯಿ, ಮಂಥರೆ, ಊರ್ಮಿಳ, ಮಾಂಡವಿ, ಶ್ರುತಕೀರ್ತಿ ರಾಮನನ್ನು ಒಳಗೊಂಡ ಅರಮನೆಯ ಕುಟುಂಬದ ಮುಖ್ಯ ಸದಸ್ಯರಾಗುತ್ತಾರೆ. ಕಿಷ್ಕಿಂಧೆಯ ಪ್ರಪಂಚದಲ್ಲಿ ಮುಖ್ಯರಾಗಿ ತಾರಾ, ರುಮೆಯರು ಕಾಣಸಿಕ್ಕರೆ, ರಾವಣನ ಲಂಕಾಪ್ರಪಂಚದಲ್ಲಿ ಮಂಡೋದರಿ, ಶೂರ್ಪನಖಿಯರಿಗೆ ಮುಖ್ಯಸ್ಥಾನವಿದೆ. ಉಳಿದಂತೆ ಅಗತ್ಯಬಿದ್ದಲ್ಲೆಲ್ಲಾ ನೂರಾರು ಮಹಿಳಾ ಪಾತ್ರಗಳು ಕಾಣಸಿಗುತ್ತವೆ. ‘ಅಹಲ್ಯೆ’ಯಂತಹ ಮುಖ್ಯ ಪಾತ್ರವೂ ಅವುಗಳಲ್ಲಿ ಒಂದು. ಪೂರಕಪಾತ್ರಗಳಂತೆ ಕಾಣಸಿಗುವ ಬಹುಪಾಲು ಮಹಿಳಾ ಪಾತ್ರಗಳು ತಮ್ಮ ತಮ್ಮ ಸ್ಥಾನವನ್ನು ಗುರುತಿಸಿಕೊಂಡಂತೆ ಭಾಗವಹಿಸಿ ಸಂಚಾರಿಭಾವಗಳಂತೆ ಸರಿದುಬಿಡುತ್ತವೆ. ಕಥಾಸಂವಿಧಾನದ ವಿಶ್ಲೇಷಣೆಯ ಅರ್ಥವಾದರೂ ಹೀಗೆಯೇ ಸಹಜವಾದುದು. ಇದು ಪ್ರಧಾನ, ಅಪ್ರಧಾನ ಸ್ವರೂಪವನ್ನು ಗುರುತಿಸಿಕೊಂಡೇ ಮುಂದುವರಿಯುವಂತಿರುತ್ತದೆ.

       ಕಾವ್ಯದ-ಕವಿಯ ಅಗತ್ಯಕ್ಕನುಗುಣವಾಗಿ ಎಂಬಂತೆ ಪಾತ್ರಗಳ ಸೃಷ್ಟಿ ಮತ್ತು ಚಲನೆಗಳಿದ್ದಾಗ್ಯೂ ಸಹೃದಯನ ಮುಖ್ಯ-ಅಮುಖ್ಯ ನೆಲೆಗಳೂ ಮತ್ತೂ ಭಿನ್ನವೇ ಆಗಿಬಿಡಬಹುದು. ಈ ಬಗೆಯ ಚಿಂತನೆ ಮೂಡುವ ನೆಲೆಯಾದರೂ ಕಾವ್ಯದ ಸಾರ್ಥಕತೆಯೂ ಹೌದು.

       ಈ ಮೇಲೆ ಗಮನಿಸಿದಂತೆ ರಾಮಕೇಂದ್ರೀಕೃತ ಕತೆಯೊಳಗೆ ಸಹಜವಾಗಿಯೇ ‘ಸೀತೆ’ ಪ್ರಾಧಾನ್ಯತೆ ಪಡೆದುಕೊಳ್ಳುತ್ತಾಳೆ. ರಾಮಾಯಣವನ್ನು ‘ಸೀತಾಯಣ’ವೆನ್ನಬೇಕಿತ್ತು ಎಂಬ ಪೋಲಂಕಿ ರಾಮಮೂರ್ತಿಯವರ ವಾದ ಒಂದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದನ್ನಿಲ್ಲಿ ಸ್ಮರಿಸಬಹುದು. ಶ್ರೀ ರವೀಂದ್ರನಾಥ ಟಾಗೂರ್ ಅವರು ರಾಮಾಯಣ ಕೃತಿ ಕುರಿತು ಪ್ರತಿಕ್ರಿಯಿಸುವಾಗ ಮಹರ್ಷಿ ವಾಲ್ಮೀಕಿ ಊರ್ಮಿಳೆಯ ಪಾತ್ರವನ್ನು ಮರೆತುಬಿಟ್ಟನೆ? ಎನ್ನುವಂತಹ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಆ ಪಾತ್ರಕ್ಕೂ ಶ್ರೇಷ್ಠತೆಯ ಎತ್ತರಕ್ಕೆ ಏರುವ ಅವಕಾಶವಿತ್ತು ಎಂಬ ಧ್ವನಿಯನ್ನೇ ಪ್ರತಿನಿಧಿಸುತ್ತಿದೆ. ಮಹಾಕಾವ್ಯ ಮುಂದೆ ಪರಂಪರೆಯಂತೆ ನಿರಂತರಗೊಳ್ಳುವುದೇ ಈ ಬಗೆಯ ಸಾಧ್ಯತೆಗಳಲ್ಲಿ ಎನ್ನಬಹುದು. ನಮ್ಮಲ್ಲಿ ಹೀಗೆ ಒಂದೊಂದು ಪಾತ್ರಗಳೇ ಮುಖ್ಯನೆಲೆಯಲ್ಲಿ ಚರ್ಚಿತಗೊಂಡು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ರೂಪುಗೊಂಡ ಸಾಕಷ್ಟು ಉದಾಹರಣೆಗಳಿವೆ.

       ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿಡುತ್ತದೆ. ಕೆಲವು ಅಲಕ್ಷ ಪಾತ್ರಗಳು ತಮ್ಮ ವ್ಯಕ್ತಿತ್ವಕ್ಕೆ ಹೊಸತನವನ್ನು ಕಂಡುಕೊಂಡು ಸಹೃದಯನನ್ನು ಕಾಡುತ್ತವೆ. ಕುವೆಂಪು ಅವರು ಕಂಡರಿಸಿದ ಸೀತೆ ಮತ್ತು ಮಂಡೋದರಿ ಪಾತ್ರಗಳನ್ನು ಚರ್ಚಿಸುವುದು ಇಲ್ಲಿನ ಉದ್ದೇಶ. ತನ್ಮೂಲಕ ಬಿಡಿ-ಬಿಡಿಯಾಗಿ ಅವರಿಬ್ಬರನ್ನು ಅವಲೋಕಿಸುವ ಪ್ರಯತ್ನ ಇಲ್ಲಿನ ಬರಹಕ್ಕಿದೆ.
bottom of page