top of page
CamScanner 07-17-2020 12.03.37_4.jpg

ವಚನಕಾರರು ಮತ್ತು ಅಂಬೇಡ್ಕರ್ 

ಪರಿವಿಡಿ
1.    ಪೀಠಿಕೆ
2.    ವಚನಕಾರರು – ವಚನಸಾಹಿತ್ಯ
3.    ಅಂಬೇಡ್ಕರ್ ಮತ್ತು ವೈಚಾರಿಕತೆ
4.    ಭಾರತೀಯ ಸಮಾಜ ಮತ್ತು ಜಾತಿ
5.    ಬಸವಣ್ಣ ಮತ್ತು ಅಂಬೇಡ್ಕರ್ 
6.    ಇತರ ವಚನಕಾರರು ಮತ್ತು ಅಂಬೇಡ್ಕರ್


 

ಪೀಠಿಕೆ

        ಜಗತ್ತು ಬದಲಾಗುತ್ತಿದೆ ಎನ್ನುವ ಮಾತುಗಳನ್ನು ಮತ್ತೆ ಮತ್ತೆ ಆಡುತ್ತಿದ್ದೇವೆ. ಮನನಮಾಡುತ್ತಿದ್ದೇವೆ. ಸಾಕಷ್ಟು ಉದಾಹರಣೆಗಳನ್ನು ನೀಡುತ್ತಿದ್ದೇವೆ. ಈ ನೆಲಬಿಟ್ಟು ಬೇರೆ ಯಾವ ಗ್ರಹಗಳಲ್ಲಿ ಬದುಕಬಹುದು ಎಂದೆಲ್ಲಾ ಹುಡುಕಾಡುತ್ತಿದ್ದೇವೆ. ಪ್ರತೀಕ್ಷಣವೂ ಆಧುನಿಕತೆಯ ಹೆಸರಿನಲ್ಲಿ ಯಾವ್ಯಾವುದೋ ಹೊಸತನಕ್ಕೆ ತೆರೆದುಕೊಂಡು ಹೀಗೂ ಉಂಟೆ? ಇದೂ ಸಾಧ್ಯವೆ? ಎನ್ನುತ್ತಲೇ ಹೊಸತನ್ನು ಒಪ್ಪಿಕೊಳ್ಳುತ್ತಿದ್ದೇವೆ. ಅಭಿವೃದ್ಧಿ ಬಗೆಗೆ ನೂರಾರು ಮಾತುಗಳನ್ನಾಡುತ್ತಿದ್ದೇವೆ. ಭಾರತೀಯರು ಮತ್ತಷ್ಟು ಆಶಾವಾದಿಗಳು ಮತ್ತು ಸದಾ ಹೊಸತನಕ್ಕೆ ತೆರೆದುಕೊಳ್ಳುವವರು ಎಂದೆಲ್ಲಾ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಸರಕಾರಗಳಿಂದ ಸರಕಾರಕ್ಕೆ ಹೊಸತಾದ ನೂರಾರು ಯೋಜನೆಗಳು, ಎಲ್ಲವನ್ನು ಬೆಳಕಾಗಿಸಿಬಿಡುವ ಮಾತುಗಳು, ಭರವಸೆಗಳು ಎಲ್ಲವೂ ಸೊಗಸಾಗಿದೆ ಬದುಕು ಸೊಗಸಾಗಿದೆ ಎಂದುಕೊಳ್ಳುತ್ತಿದ್ದೇವೆ. ‘ಮೇರಾ ಭಾರತ್ ಮಹಾನ್’ ಏಕಕಂಠದಿಂದ ಕೂಗುವ ಆಸೆಯಾಗುತ್ತಿದೆ. ಜಾಹಿರಾತುಗಳಲ್ಲಿ ಧ್ವನಿ ಎತ್ತುತ್ತಿದ್ದೇವೆ ಎಲ್ಲವೂ ಅತ್ಯದ್ಭುತ, ಅನನ್ಯ....

      ಹೀಗೆ ಮೇಲೆಲ್ಲಾ ಮಾತನಾಡಿದ್ದು ಒಂದು ಕನಸೇ, ಆದರ್ಶವೇ. .....ಸೊಗಸು, ಅದ್ಭುತ, ಅನನ್ಯ ಎಂಬ ಮಾತುಗಳೆಲ್ಲಾ ವಾಸ್ತವವೇ ಎಂದುಕೊಂಡರೆ ಇದನ್ನು ಇಡಿಯಾಗಿ ಬಳಸಬೇಕೆ? ಮಿತಿಯಾಗಿ ಬಳಸಬೇಕೆ ಎಂಬ ಅನುಮಾನವೊಂದು ತುಂಬಾ ಗಂಭೀರವಾಗಿ ಕಾಡತೊಡಗುತ್ತದೆ. 

       ‘ಭಾರತೀಯ ಸಮಾಜ’ ಎಂದು ಯೋಚಿಸುವ ಹೊತ್ತಿಗೆ ತತ್‍ಕ್ಷಣಕ್ಕೆ ಸಾಕಷ್ಟು ತಕರಾರು ದ್ವಂದ್ವ. ಅಸಮಗ್ರತೆ ಸಂಕೀರ್ಣತೆ ಇತ್ಯಾದಿಗಳು ಕಾಣತೊಡಗುತ್ತವೆ. ‘ಸಮಾಜ’ ಮೂರ್ತವೇ ಅಮೂರ್ತವೇ ಈಗ ಬೇಡವಾದ ಚರ್ಚೆ. ಅದರ ಅನಿವಾರ್ಯತೆ ಎಷ್ಟು? ಯಾಕೆ? ಹೇಗೆ? ಸುಲಭವಿಲ್ಲ ಉತ್ತರ. ಆದರೆ ಸಮಾಜ, ಸಮಾಜಜೀವಿ, ಸಂಘಜೀವಿ ಎಂದುಕೊಂಡೆಲ್ಲಾ ಬದುಕುವ ಅನಿವಾರ್ಯತೆಯಂತು ಇದೆ ಎಂಬ ನಂಬಿಕೆಯೊಂದಿದೆ. ಆರಂಭಕ್ಕೆ ಜಗತ್ತು ಬದಲಾಗುತ್ತಿದೆ ಎನ್ನುವ ಮಾತನಾಡಿದ್ದು ಈ ಹಿನ್ನೆಲೆಯಿಂದಲೇ. ಸಮಾಜವೂ ಬದಲಾಗುತ್ತಿದೆ, ಅಂದರೆ ಜನಜೀವನದೊಂದಿಗೆ ಅದು ತನ್ನನ್ನು ಕಂಡುಕೊಳ್ಳಲೇಬೇಕಿದೆ ಎನ್ನುವುದನ್ನು ಮೀರಿದಂತೆ ಮಾತನಾಡುವುದಾದರೂ ಹೇಗೆ? ‘ಸಮಾಜ’ವನ್ನು ಒಂದೇ ಸ್ವರೂಪ ಎನ್ನುವಂತೆ ಎಲ್ಲಕ್ಕೂ ಸೇರಿದಂತೆ ಗ್ರಹಿಸುವುದು ಸಾಧ್ಯವೆ? ಖಂಡಿತ ಇಲ್ಲ.
 
         ಭಾರತೀಯ ಸಮಾಜ ಎನ್ನುವ ಸ್ಥೂಲ ಗ್ರಹಿಕೆ ಬೇರೆ ಅದರೊಳಗಿನ ಕವಲು ನೂರು ಸಾವಿರಾರಿವೆ. ಅದು ಆಯಾಯ ಪ್ರದೇಶ, ಪರಿಸರ, ಸಮುದಾಯ, ಆಚರಣೆ ಎಂದೆಲ್ಲಾ ಹಲವು ನೆಲೆಗಳಲ್ಲಿ ಭಿನ್ನವಾಗುವ ಅವಕಾಶವನ್ನು ಮುಕ್ತವಾಗಿರಿಸಿಕೊಂಡಂತಿದೆ. ನಗರಸಮಾಜ, ಗ್ರಾಮೀಣಸಮಾಜ, ಬುಡಕಟ್ಟು ಸಮಾಜ -ಹೀಗೆಲ್ಲಾ ಮಾತನಾಡುವುದು ವ್ಯತ್ಯಾಸಗಳನ್ನು ಗುರುತಿಸುವಂತಾಗುವುದು ಈ ಬಗೆಯ ಕಾರಣದಿಂದಲೇ ಎನ್ನಬಹುದು.

        ವಿಭಿನ್ನತೆಯ ಸಾಧ್ಯತೆಗಳನ್ನು ಗಮನಿಸುವಾಗಲೂ ಅದರ ಸ್ವರೂಪ ಯಾವ ಬಗೆಯದ್ದು? ಅಂದರೆ ಅದು ಮತ್ತೆ ಒಳಗಿನ ಅವಕಾಶಗಳನ್ನು ಕಾಯ್ದುಕೊಂಡಂತದ್ದೇ ಆಗಿರುತ್ತದೆ.  ಹಾಗಾಗಿ ‘ಭಾರತೀಯ’ ಎನ್ನುವ ವಿಸ್ತøತ ನೆಲೆಯಲ್ಲಿರುವ ಲಕ್ಷಣಗಳಲ್ಲಿ ಬಹಳ ಮುಖ್ಯ ಎನಿಸಿದ್ದನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯು ನಿರಂತರವಾಗಿ ಕ್ರಿಯಾಶೀಲವಾಗಿರುತ್ತದೆ. ಅಂತಹ ಬಹುಮುಖ್ಯವಾದ ಲಕ್ಷಣವೇ ‘ಜಾತಿ’. ಭಾರತೀಯ ಸಮಾಜವು ಜಾತಿವ್ಯವಸ್ಥೆಯನ್ನು ಒಳಗೊಂಡಿದೆ. ಇದು ಇಡೀ ಜಗತ್ತು ಭಾರತವನ್ನು ಅಧ್ಯಯನಮಾಡುವ ಹೊತ್ತಿಗೆ ಗಮನಿಸುವ ಬಹುಮುಖ್ಯ ಸಂಗತಿ. ಅದು ಕಾಕತಾಳೀಯ ಎಂಬಂತಲ್ಲ ಇದೊಂದು ವಿಷಮ ವಿಷಕಾರಿ ಸತ್ಯ ಅದನ್ನು ಬಹಳ ವ್ಯವಸ್ಥಿತವಾಗಿಯೇ ಕಾಯ್ದುಕೊಂಡು ಬರಲಾಗಿದೆ. ಹಿಂದೆ ಇರುವವರು ಯಾರು ಎಂದು ಒಂದೋ ಎರಡೋ ಸಂಖ್ಯೆಯಿಂದ ವ್ಯಕ್ತಿಗಳನ್ನಾಗಲಿ, ಗುಂಪನ್ನಾಗಲೀ ಸರಳವಾಗಿ ಗುರುತಿಸುವುದು ಸಾಧ್ಯವಿಲ್ಲ. ಆದರೆ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದಂತೂ ಸತ್ಯ. ಜೀವವಿಜ್ಞಾನ ಅಭ್ಯಾಸಿಸುವ ಹೊತ್ತಿಗೆ ಮನುಷ್ಯನನ್ನು ಒಂದು ಪ್ರಾಣಿ ಎಂದೇ ಪರಿಗಣಿಸಿದ್ದು ಸ್ಮರಣಾರ್ಹ. ನಂತರಕ್ಕೆ ಆತ ವಿಕಾಸವಾದದ ರೂಪವಾದದ್ದು ಮುಂದೆ ನಾಗರೀಕವಾದದ್ದು ಪರಂಪರೆ ಮತ್ತು ಇತಿಹಾಸ ಆದರೆ ದುರಂತವೂ ಇದರೊಂದಿಗೆ ಘಟಿಸಿದ್ದೆಂದರೆ ಅದು ‘ಅಸಮಾನತೆ’. ನಾಗರೀಕವಾದಂತೆಲ್ಲಾ ಮಾನಸಿಕವಾಗಿ ತರತಮಗಳೂ ಬೆಳೆದದ್ದು ಬೇಡವಾದ ಆದರೆ ಆಗಿಯೇ ಹೋದ ಸತ್ಯ.

        ಭಾರತೀಯ ಸಮಾಜದೊಳಗೆ ಧರ್ಮ ಹಾಸುಹೊಕ್ಕಾದಂತೆ, ಕ್ರಮೇಣ ಅದರ ತಾತ್ವಿಕತೆಗಳು ಬದುಕಿನ ಕ್ರಮವಾದಂತೆ ಒಪ್ಪಿತ ನೆಲೆಯಲ್ಲಿ ಸ್ವೀಕರಿಸಿದ ಕಾರಣ ಚಿತ್ರ-ವಿಚಿತ್ರವಾದ ವಿಪರ್ಯಾಸಗಳು ತೆರೆದುಕೊಂಡವು ಎನ್ನಬಹುದು. ‘ವರ್ಣಾಶ್ರಮ ಧರ್ಮ’ದ ನಿಯಮಗಳು ಸಮಾಜದ ಮೂಲಾಂಶವಾದದ್ದು ಯಾವ ಕಾಲದಲ್ಲಿ ಘಟಿಸಿತ್ತೋ ಅಲ್ಲಿಂದಲೇ ಅಸಮಾನತೆಯ ಅಪಾಯವೂ ತೆರೆದುಕೊಂಡಿತೆನ್ನ ಬಹುದು. ವೇದಪೂರ್ವ ಸಮಾಜವು ಹೀಗಿರಲಿಲ್ಲ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ದ್ರಾವಿಡರನ್ನು ಭಾರತದ ಮೂಲನಿವಾಸಿಗಳು ಎನ್ನುವಲ್ಲಿ ಅವರ ಬದುಕಿನ ಪ್ರಜ್ಞೆಗಳನ್ನು ಗಮನಿಸುವಲ್ಲಿಯೂ ಒಂದಷ್ಟು ಆರೋಗ್ಯಕರವಾದ ಜೀವನ ಕ್ರಮವಿತ್ತು ಎನ್ನುವುದು ಉಲ್ಲೇಖಾರ್ಹ.

      ವೈದಿಕತ್ವದ ಮುಖ್ಯ ಸೂತ್ರವೆಂಬಂತೆ ವರ್ಣಾಶ್ರಮ ಪ್ರತಿಪಾದಿಸಲ್ಪಟ್ಟ ಕ್ಷಣದಿಂದ ಭಾರತೀಯ ಸಮಾಜ ತರತಮಗಳ ಮೂಲವಾಯಿತು. ಈ ಹೊತ್ತಿಗೂ ಅದರಿಂದ ಪಾರಾಗಲಾರದ ದುರಂತವೇ ಅದರ ಅಪಾಯವನ್ನು ಮತ್ತೆ ಮತ್ತೆ ಅರಿವುಮಾಡಿಸುತ್ತಿದೆ. ಮಾನವೀಯತೆ ಎನ್ನುವುದಕ್ಕೆ ಸರಿಪಡಿಸಿಕೊಳ್ಳಲಾಗದಷ್ಟು ಶಿಥಿಲತೆಯನ್ನು ಉಂಟುಮಾಡಿಬಿಟ್ಟಿದೆ. ನಾಗರೀಕ ಎಂದುಕೊಳ್ಳುವಲ್ಲೆಲ್ಲಾ ನಾವು ನಾಚಬಹುದಾದ ಸ್ಥಿತಿಯನ್ನು ರೂಪಿಸಿಬಿಟ್ಟಿದೆ. ಭಾರತೀಯತೆಗೆ ಸಾಧ್ಯವಾಗಬಹುದಾದ ಎಷ್ಟೇ ಶ್ರೇಷ್ಠತೆಗಳಿದ್ದಾಗ್ಯೂ ವರ್ಣಾಶ್ರಮದ ಭೂತವೊಂದೆ ಸಾಕು ಎಲ್ಲವನ್ನು ನುಂಗಿಹಾಕಿಬಿಡಲು ಎನ್ನುವಂತಾಗಿದೆ.

        ಮನುಷ್ಯ ಮನುಷ್ಯರ ನಡುವೆ ಹುಟ್ಟಿನ ಕಾರಣಕ್ಕಾಗಿಯೇ ಒಂದು ತರತಮವನು ಸೃಷ್ಟಿಸಬಹುದು ಎನ್ನುವುದನ್ನು ಅರಗಿಸಿಕೊಳ್ಳುವುದಾದರೂ ಹೇಗೆ. ಜಗತ್ತಿನ ಸಂದರ್ಭದ ವರ್ಣದ್ವೇಷವೂ ಇದೇ ತೆರನಾದದ್ದು ಆದರೆ ಭಾರತದ ವರ್ಣಾಶ್ರಮ ವ್ಯವಸ್ಥೆ ಮನುಷ್ಯರನ್ನು ಜಾತಿ ಸ್ವರೂಪದಲ್ಲಿ ಒಬ್ಬರಿಗಿಂತ ಒಬ್ಬರು ಕೆಳಗೆ ಎನ್ನುತ್ತಲೇ ಶ್ರೇಣೀಕರಣ ಆಯಾಮವನ್ನು ಸೃಷ್ಟಿಸಿ ಕೊನೆಗೆ ಮುಟ್ಟಿಸಿಕೊಳ್ಳಲಾಗದವರು ಎನ್ನುವ ವಿಂಗಡಣೆತನಕ ಹೋದದನ್ನು ಅತಿರೇಕ ವೆನ್ನದಿರಲಾದೀತೆ? ಒಂದು ನಿರ್ದಿಷ್ಟ ಕಾರಣ ನೀಡಲಾಗದಂತೆ ತಾವು ಶ್ರೇಷ್ಠ ಎನ್ನುವ ಭ್ರಮೆಯನ್ನು ಸಾರ್ವತ್ರೀಕರಣಗೊಳಿಸಿದಂತೆ ಶೋಷಣೆಮಾಡುವುದೇ ತಮ್ಮ ಹಕ್ಕು ಎನ್ನುವಂತೆ ಪ್ರತಿಷ್ಠಾಪಿಸಿಕೊಂಡದ್ದು ಯಾವ ಕಾರಣಕ್ಕಾಗಿ ಸಮರ್ಥನೀಯ ಎನ್ನುವುದಕ್ಕೆ ತರತಮ ಸೃಷ್ಟಿಸಿದವರೇ ಉತ್ತರ ನೀಡಬೇಕು.

         ಜಗತ್ತನ್ನು, ಜನರನ್ನು ಆರೋಗ್ಯಕರವಾದ, ಸಹಜವಾದ ದೃಷ್ಟಿಯಿಂದ ನೋಡಿದವರೆಲ್ಲರು ಮಾನವೀಯವಾಗಿ ಜೀವನಪ್ರೀತಿಯನ್ನು ಜತನಮಾಡಿಕೊಳ್ಳುವ ನೆಲೆಯಲ್ಲಿಯೇ ಚಿಂತಿಸಿದ್ದಾರೆ. ಅವರೆಲ್ಲರಿಗೂ ಈ ಸಾಮಾಜಿಕ ಅಸಮಾನತೆಯ ಪ್ರಶ್ನೆಗಳು ಮತ್ತೆ ಮತ್ತೆ ಕಾಡಿವೆ. ಇದರ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಲ್ಲದೆ ಬೇರಾವುದೇ ಪ್ರಾಕೃತಿಕ ಕಾರಣಗಳಿಲ್ಲ ಎನ್ನುವುದನ್ನು ಅರ್ಥೈಸಿಕೊಂಡಿದ್ದಾರೆ. ಪಲಾಯನವಾದಗಳು ಜಗತ್ತನ್ನಾಗಲೀ, ಜಾಗೃತಿಯನ್ನಾಗಲೀ, ಸಹಜತೆಯನ್ನಾಗಲೀ ಸೃಷ್ಟಿಸಲಾರವು ಇದಕ್ಕೆ ಜಗತ್ತಿನಾದ್ಯಂತ ಸಾಕಷ್ಟು ಉದಾಹರಣೆಗಳಿವೆ. ಆದರೆ ಎಂದೋ ಯಾರೋ ಹೀಗೆ ಒಂದು ಅಮಾನವೀಯವಾದ ತರತಮವೊಂದನ್ನು ಸೃಷ್ಟಿಸಿದ್ದು ಇಂದಿಗೂ ಸರಿಪಡಿಸಲಾಗದಂತೆ ಸಂಕೀರ್ಣಗೊಂಡು ದೇಶದ ಅಂತಃಸತ್ವವನ್ನೇ ಶಿಥಿಲಗೊಳಿಸುತ್ತಿರುವುದು ದೊಡ್ಡ ದುರಂತ. 
ಇಡೀ ದೇಶಾದ್ಯಂತ ಜಾತಿವ್ಯವಸ್ಥೆ ಒಂದು ಸಾಮಾಜಿಕ ಪಿಡುಗಾಗಿ ಅಗತ್ಯವಿದ್ದವರೆಲ್ಲ ಅದರ ಪರ-ವಿರೋಧಗಳ ಚರ್ಚೆಯನ್ನು, ವಾದವನ್ನು ತಮ್ಮ ತಮ್ಮ ನೋಟದಂತೆ ವ್ಯಾಖ್ಯಾನಿಸುತ್ತಿರುವ ಹೊತ್ತಿಗೂ ಬಹಳಷ್ಟು ಸಂತರು, ದಾರ್ಶನಿಕರು, ಚಿಂತಕರು, ಪ್ರಾಮಾಣಿಕವಾಗಿ ಈ ಅಸಮಾನತೆಯನ್ನು ದೂರೀಕರಿಸಲು ಅಹರ್ನಿಶಿಯಾಗಿ ದುಡಿದ ಆರೋಗ್ಯಕರವಾದ ಪರಂಪರೆಯೊಂದು ಕಾಣಸಿಗುತ್ತದೆ. ಅಂತಹದ್ದೊಂದು ಮುಖ್ಯವಾಹಿನಿಯನ್ನು ಕರ್ನಾಟಕದಲ್ಲಿಯೂ ಕಾಣಬಹುದು. ಆ ನಿಟ್ಟಿನಲ್ಲಿ ಮುಖ್ಯವಾದ ಸೆಲೆಯನ್ನು ವಚನಕಾರರಲ್ಲಿ ಕಾಣಬಹುದು.

         ಹನ್ನೆರಡನೆಯ ಶತಮಾನ ಕನ್ನಡದ ಭಾಷೆ, ಸಂಸ್ಕøತಿ ಮತ್ತು ಕರ್ನಾಟಕ ಚಾರಿತ್ರಿಕ ಪ್ರಜ್ಞೆಯ ಸಂದರ್ಭದಲ್ಲಿ ಬಹಳ ಮುಖ್ಯವಾದ ಘಟ್ಟ, ವಚನಕಾರರು, ವಚನಸಾಹಿತ್ಯ, ವಚನ ಚಳುವಳಿ ಎನ್ನುವ ಅನನ್ಯತೆಯೊಂದು ಅಪರೂಪವೆನ್ನುವಂತೆ ಕರ್ನಾಟಕದ ಕಲ್ಯಾಣವನ್ನು ಕೇಂದ್ರೀಕರಿಸಿಕೊಂಡು ರೂಪುಗೊಂಡದ್ದು ಈ ಹೊತ್ತಿಗೂ ಅಪೂರ್ವವಾದ ಸಾಂಸ್ಕøತಿಕ ಚಾರಿತ್ರಿಕ ಘಟನೆಯಾಗಿರುವುದು ಉಲ್ಲೇಖಾರ್ಹ.

         ವಚನವನ್ನು ಸಾಹಿತ್ಯವೆನ್ನಬೇಕೆ? ಬೇಡವೆ? ಎನ್ನುವುದೊಂದು ಚರ್ಚೆ ವಿಸ್ತøತವಾಗಿಯೇ ನಮ್ಮಲ್ಲಿ ನಡೆದಿದೆ. ಅದಕ್ಕೆ ಮುಖ್ಯ ಕಾರಣ ‘ವಚನ’ ಸಾಂಪ್ರದಾಯಿಕವಾದ ಸಾಹಿತ್ಯದ ಅರ್ಥಕ್ಕಿಂತ ಭಿನ್ನವಾಗುವುದು ಸಮಾಜ ಮತ್ತು ಅದರೊಳಗಿನ ನ್ಯೂನತೆಗಳನ್ನೇ ಕೇಂದ್ರೀಕರಿಸಿಕೊಂಡಂತೆ ಸುಧಾರಣೆಯೆಡೆಗೆ ದಿಟ್ಟ ಹೆಜ್ಜೆ ಇಟ್ಟದ್ದು ಮುಖ್ಯವಾಗಿತ್ತು. ಇಲ್ಲಿ ಸಮಾಜದ ಶೋಷಿತರು ಮುಖ್ಯವಾಹಿನಿಗೆ ಬಂದರು. ಬಸವಣ್ಣ ಶ್ರೇಣೀಕೃತ ಸಮಾಜದ ಮೇಲಿನ ಸ್ತರದಿಂದ ಬಂದು ಸಮಾನತೆಯ ಆಶಯಕ್ಕೆ ಬದ್ಧರಾಗಿದ್ದದ್ದು ಒಂದು ವಿಶಿಷ್ಟವಾದ ಸಾಧನೆಯಾಗಿತ್ತು.

         ಭಾರತೀಯ ಸಮಾಜ ಅಸಮಾನತೆಯ ತವರಾಗಿತ್ತು, ಧರ್ಮವು ನೆಮ್ಮದಿಯ ಬದಲು ಜಾಲದಂತಾಗಿತ್ತು ಆ ಕಾರಣಕ್ಕೆ ಮೌಢ್ಯತೆಯನ್ನು ಬಿತ್ತುವುದು ವ್ಯವಸ್ಥಿತ ಸಂಚಿಗೊಂದು ಅಸ್ತ್ರವಾಗಿತ್ತು ಈ ನೆಲದ ಮುಗ್ಧ ಜನರನ್ನು ಅಕ್ಷರದಿಂದ, ಜ್ಞಾನದಿಂದ ವಂಚಿತರನ್ನಾಗಿಸುವುದು ಸಹ ವರ್ಣಾಶ್ರಮದ ಮುಖ್ಯಗುರಿಯಾಗಿತ್ತು. ಈ ಬಗೆಯ ನೂರಾರು ಸಮಸ್ಯೆಗಳನ್ನು ಅದರ ಹಿಂದಿನ ಒಳಸಂಚನ್ನು ಭೇದಿಸುವುದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಬಸವಣ್ಣನ ನೇತೃತ್ವದ ಬಹುಜನ ಶರಣರಿಗೊಂದು ಸವಾಲಾಗಿತ್ತು. ಹಾಗೆಯೇ ಈ ನೆಲದಲ್ಲಿ ಇದೊಂದು ಸಂಘಟಿತವಾದ ಈ ನೆಲದ ಮೊದಲ ಸಾಮಾಜಿಕ ಚಳುವಳಿಯೂ ಆಗಿತ್ತೆನ್ನಬಹುದು.
 
         ಶರಣರ ಚಳುವಳಿ ಎಂದರದು ಹೋರಾಟದ ಒಂದು ಉತ್ಕರ್ಷ. ಬದಲಾವಣೆಯ ಅರ್ಥ ಮತ್ತು ಹೊಸತನದ ನಿರೀಕ್ಷೆ, ಈ ವಚನ ಚಳುವಳಿಗೆ ಅಥವಾ ಶರಣರ ಚಳುವಳಿಗೆ ಒದಗುವ ವಿಶೇಷತೆ ಎಂದರೆ ಅಲ್ಲಿ ಎಲ್ಲರೂ ಮುಖ್ಯರಾಗುತ್ತಾರೆ. ಅಂದರೆ ಮುಕ್ತತೆ ಮತ್ತು ಸ್ವಾತಂತ್ರ್ಯ ಇಲ್ಲಿ ಮೂಲಗುಣವಾಗುತ್ತದೆ. ಭಾರತದಂತ ವರ್ಣಾಶ್ರಮ ನಂಬಿಕೆಯ ನೆಲದಲ್ಲಿ ಇಂತಹದ್ದೊಂದು ಯೋಚನೆ ಕ್ರಾಂತಿಯೂ ಹೌದು. ಹಾಗೆಯೇ ಮಾನವೀಯ ಎನ್ನಬಹುದಾದ ಮೊದಲ ಹೆಜ್ಜೆಗಳೂ ಹೌದು. ‘ಇಲ್ಲಿ ಯಾರೂ ಮುಖ್ಯರಲ್ಲ’ ಎನ್ನುವಾಗಲೇ ‘ಯಾರೂ ಅಮುಖ್ಯರಲ್ಲ’ ಎನ್ನುವುದೂ ಇಲ್ಲಿನ ಅರಿವು. ಮುಕ್ತವಾದ ಚರ್ಚೆ, ಸಂವಾದಗಳ ಅವಕಾಶವೇ ಹೊಸತನ್ನು ಚಿಂತಿಸಲು ಅನುವಾಗುವಂತಹ ಪರಿಸ್ಥಿತಿಯನ್ನು ನಿರ್ಮಿಸಬಹುದು ವಚನಚಳುವಳಿಯಲ್ಲಿ ಇಂತಹ ಜೀವಪರ ಚಿಂತನೆಗಳು ಚಾಲನೆ ಪಡೆದಿವೆ. ಸಮಾನತೆ ಎನ್ನುವುದು ಹಕ್ಕಿನ ಆಶಯವಾಗಿಯೇ ಚಳುವಳಿಯ ರೂಪಕ್ಕೆ ತೀವ್ರತೆಯು ಒದಗಿಬಂದಿದೆ ಎನ್ನಬಹುದು. ಇದು ಸ್ವಯಂನಾಯಕತ್ವ ಮತ್ತು ಬಹುಜನನಾಯಕತ್ವದ ವಿಶಿಷ್ಟ ಮಿಶ್ರಣದ ಯೋಜಿತ ಪರಿಕಲ್ಪನೆ. ತನ್ನನ್ನು ತಾನು ಶುದ್ಧಗೊಳಿಸಿಕೊಳ್ಳುತ್ತಾ ಅಂದರೆ ಸಮರ್ಪಕ ಗೊಳಿಸಿಕೊಳ್ಳುತ್ತಲೇ ಸಮಾಜ ಸುಧಾರಣೆಯೆಡೆಗೆ ಸಾಗುವ ಕ್ರಮವಿಲ್ಲಿತ್ತು, ಬಹುಮುಖ್ಯವಾದ ನಿರೀಕ್ಷೆಯೂ ಇದಾಗಿತ್ತು. ಬದ್ಧತೆ ಎನ್ನುವುದು ಪ್ರಧಾನವಾದದ್ದು ಈ ಕಾರಣಕ್ಕಾಗಿಯೇ. ಮಾತು, ನಡವಳಿಕೆ, ಬುದ್ಧಿ, ಭಾವ, ಆಲೋಚನೆ ಹೀಗೇ ಸಾಧ್ಯವಿರುವ ಎಲ್ಲಾ ಕ್ರಿಯಾಶೀಲತೆಗಳಲ್ಲಿಯೂ ಬದ್ಧತೆಯ ಹುಡುಕಾಟವೇ ಪ್ರಧಾನವಾಗಿತ್ತು, ವೈಚಾರಿಕತೆಯ ದಿಟ್ಟಹೆಜ್ಜೆ ಎಂದೇ ಇದನ್ನು ಗುರುತಿಸಬಹುದು. 
         
          ಸ್ವಾತಂತ್ರ್ಯ ಆದ್ಯತೆಯಾದರೂ ಅದು ಸಾರ್ಥಕವಾಗುವಲ್ಲಿ ಸಮಾನತೆ ಮುಖ್ಯವಾಗುತ್ತದೆ ಎಂದು ಯೋಚಿಸುವ ಈ ಚಳುವಳಿಯಲ್ಲಿ ಪ್ರತಿಯೊಬ್ಬರಿಗೂ ಮಾನ್ಯತೆಯಿತ್ತೆನ್ನುವುದು ಗಮನಾರ್ಹ. ಇಂತಲ್ಲಿ ಪ್ರತಿಯೊಬ್ಬರೂ ಒಂದೊಂದು ಶಕ್ತಿಯಾಗುತ್ತಲೇ ಸಾಮುದಾಯಿಕವಾಗುವ ಎಚ್ಚರವೂ ಪ್ರಧಾನವಾಗುತ್ತದೆ. ಇದು ಭಾರತೀಯ ಸಮಾಜಕ್ಕೆ ಸುಲಭಕ್ಕೆ ಒಗ್ಗದ ವಿಷಯ. ತರತಮವೇ ಮುಖ್ಯ ಎನ್ನುವ ನಿಲುವಿಗೆ ಸುಲಭಕ್ಕೆ ಧಕ್ಕೆಯಾಗುವುದನ್ನು ಸಹಿಸುವ ಮನಸ್ಥಿತಿ ಇಲ್ಲಿ ಸುಲಭವಿಲ್ಲ. ತಳಸಮುದಾಯಗಳು ತಮ್ಮ ಹಕ್ಕನ್ನು ಪ್ರತಿಪಾದಿಸುವುದು ಅಪರಾಧ ಎನ್ನುವ ಮನಸ್ಥಿತಿಯನ್ನು ವ್ಯವಸ್ಥಿತವಾಗಿಯೇ ಉಳಿಸಿ ಬೆಳಸುವ ಸಂಚು ಯಶಸ್ವಿಯಾಗಿ ನಡೆದುಬಿಟ್ಟಿದೆ. ಹಾಗಾಗಿಯೇ ವಚನ ಚಳುವಳಿಯಲ್ಲಿ ಬಹುಸಂಖ್ಯಾತರು ಎಚ್ಚರಗೊಂಡ ತಳಸಮುದಾಯದವರೇ ಆಗಿರುವುದು ಗಮನಾರ್ಹ. ಡಾ. ಎಲ್. ಬಸವರಾಜು ಅವರ ಮಾತಿನಲ್ಲಿ ಹೇಳುವುದಾದರೆ “ಕೆಳವರ್ಗದವರ ಉದ್ಧಾರಕ್ಕಾಗಿ ಕೆಳವರ್ಗದವರೇ ಕೈಗೊಂಡ ಒಂದು ಜಾಗೃತಿ ಸಮರೋದ್ಯೋಗ” ಎಂದೇ ವಚನ ಚಳುವಳಿಯನ್ನು ಅರ್ಥಪೂರ್ಣವಾಗಿ ವ್ಯಾಖ್ಯಾನಿಸುತ್ತಾರೆ. ಇದು ವಚನಕಾರರ ಚಳುವಳಿಯ ಮಹತ್ವವನ್ನು ಹೇಳುವಂತಹುದು. ಚಳುವಳಿಗೊಂದು ವ್ಯಾಪಕತೆ ಮತ್ತು ಯಶಸ್ಸು ಲಭ್ಯವಾದದ್ದು ಈ ಕಾರಣಕ್ಕಾಗಿಯೇ. ಇದು ನಿಜವಾಗಿ ‘ಸಾಮಾಜಿಕ ಜಿಜ್ಞಾಸೆಯಾಗಿತ್ತು’ ಹಾಗಾಗಿಯೇ ಸಹಜವಾಗಿ ಚಿಕಿತ್ಸಕ ದೃಷ್ಟಿಯಿತ್ತು. ಇದು ನಮ್ಮ ದೇಶದ ಸಾಮಾಜಿಕ ಸಂದರ್ಭಕ್ಕೆ ಅತ್ಯಗತ್ಯವೇ ಆಗಿತ್ತೆನ್ನಬಹುದು.

         ಒಟ್ಟಾರೆಯಾಗಿ ವಚನ ಚಳುವಳಿಯ ಮೂಲಕ ವಚನಕಾರರು ಸಾಮಾಜಿಕ ಅಸಮಾನತೆಯ ವಿರುದ್ಧ, ಮೌಢ್ಯಗಳ ವಿರುದ್ಧ, ಅಮಾನುಷ ನಿಲುವುಗಳ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಿದರು. ಇದು ಈ ಹೊತ್ತಿಗೂ ಅನ್ವಯಗೊಂಡೇ ಮಾದರಿಯಾಗುವಷ್ಟು ಗಟ್ಟಿಯಾದದಾಗಿತ್ತು ಮತ್ತು ಮುಖ್ಯವಾಗಿ ಸತ್ಯದ ಒಳನೋಟವೂ ಆಗಿತ್ತು. ಸಮಾಜ ಮತ್ತು ಜಾತಿವ್ಯವಸ್ಥೆಯ ಕುರಿತ ವೈಚಾರಿಕ ಚರ್ಚೆಯೂ ಇಲ್ಲಿಂದಲೇ ಚಾಲನೆ ಪಡೆಯಿತೆನ್ನಬಹುದು.

        ಭಾರತದಲ್ಲಿ ಮಾನವೀಯತೆಯ ಬಗೆಗಿನ ಚಿಂತನೆಗಳು ಮಾತುಗಳು ಬಂದಲೆಲ್ಲಾ ಸಮಾನತೆಯ ಪರಿಕಲ್ಪನೆ ಅನಿವಾರ್ಯವಾಗಿಯೇ ಮುಂದಾಗುತ್ತದೆ. ಹಾಗಿರುವಾಗ ತಕ್ಷಣಕ್ಕೆ ಜಾತಿಮೀರಲೇಬೇಕಿರುವ ಕನಸು ಕುಡಿಯೊಡೆಯುತ್ತದೆ. ಪ್ರಾಮಾಣಿಕ ಕಳಕಳಿಯುಳ್ಳ ಜನರು ಈ ನಿಟ್ಟಿನಲ್ಲಿ ಬಹಳ ಗಂಭೀರವಾಗಿಯೇ ಸುಧಾರಣೆಯ ಪ್ರಯತ್ನಗಳನ್ನು ನಡೆಸಿದ್ದಾರೆ, ನಡೆಸುತ್ತಲೂ ಇದ್ದಾರೆ. ಮತ್ತೂ ವಿಚಿತ್ರವೆಂದರೆ ಮತ್ತೊಂದು ನೆಲೆಯಿಂದ ಐಕ್ಯತೆ, ಸಂಸ್ಕøತಿ, ಆದರ್ಶದ ಬಗೆಗೆ ಮಾತನ್ನಾಡುತ್ತಲೇ ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ಧರ್ಮ, ರಾಜಕೀಯ, ಸಾಮಾಜಿಕ ನಾಯಕರೆನಿಸಿಕೊಂಡವರಿದ್ದಾರೆ. ಒಗ್ಗಟ್ಟಿನ ಪ್ರತಿಪಾದನೆ ಮಾಡುತ್ತಲೇ ಪ್ರತ್ಯೇಕತೆಯ ಒಳಸುಳಿಗಳನ್ನು ಅರಿತವರ ಬಗೆಗೆ ಎಚ್ಚರವಿರಬೇಕಿದೆ. ಅವರ ಮಾತುಗಳ ಚಾಪಲ್ಯವನ್ನು, ಅದರ ಕುತಂತ್ರವನ್ನು ಗ್ರಹಿಸಬೇಕಾದ ಅವಶ್ಯಕತೆಯಿದೆ. 

        ಮೇಲ್ನೋಟಕ್ಕೆ ಬಹು ಆಕರ್ಷಕವಾಗಿ ಕಾಣಿಸುವ ಈ ತೆರನಾದ ಮಾತುಗಳನ್ನು ವ್ಯವಸ್ಥಿತ ಯೋಜನೆಗಳನ್ನು ಜನರು ಸುಲಭವಾಗಿ ನಂಬುವಂತಾಗುವುದು ಸಹ ಮತ್ತೊಮ್ಮೆ ವ್ಯವಸ್ಥೆಯ ದುರಂತವೆಂದೇ ಹೇಳಬಹುದು. ಮತ್ತೂ ವಿಪರ್ಯಾಸವೆಂದರೆ ವಿದ್ಯಾವಂತರೆನಿಸಿಕೊಂಡವರೂ ಈ ರೀತಿಯ ಯೋಚನೆ, ಯೋಜನೆಗಳಲ್ಲಿ ಪಾಲುದಾರರಾಗಿಬಿಡುತ್ತಾರೆ. ಇಂತಲ್ಲಿ ಆದರ್ಶದ ಸಮಾನತೆಯ ಭಾರತವನ್ನು ಕನವರಿಸುವುದು ಹೇಗೆ ಸಾಧ್ಯ? ಈ ಕಾರಣಕ್ಕೆ ನಿರಾಶೆಯಲ್ಲಿಯೂ ಬದುಕುವುದಾಗುವುದಿಲ್ಲ. ಅಂತಹ ಪ್ರಯತ್ನಗಳನ್ನು ಪುನರ್‍ರೂಪಿಸುವಲ್ಲಿಯೇ ಕ್ರಿಯಾಶೀಲತೆಗಾದರೂ ಅರ್ಥವನ್ನು ಕಂಡುಕೊಳ್ಳಬೇಕಿದೆ.
ಸಾಮಾಜಿಕ ಸಮಾನತೆ ಎನ್ನುವುದು ಜಗತ್ತಿನ ಮಾನವೀಯ ಅಂತಃಕರಣದ ಪ್ರಗತಿಪರ ಚಳುವಳಿಗಳ ಬಹುಮುಖ್ಯವಾದ ಲಕ್ಷಣ. ವಚನ ಚಳುವಳಿಯಲ್ಲಿ ಕಾಣುವ ಮುಖ್ಯ ಆಯಾಮವೇ ಈ ತೆರನಾದದ್ದು.
 
         ಕಾರ್ಲ್‍ಮಾಕ್ರ್ಸ್‍ನ ವರ್ಗ ಚಳುವಳಿಯು ವಿಶ್ವಮಾದರಿಯ ಸಮಾನತೆಯ ಆಶಯವಾಗಿರಬಹುದು. ಆದರೆ ವರ್ಣತರತಮದ ವಿಷಯದಲ್ಲಿ ಈ ಮಾತನ್ನು ಸಲೀಸಾಗಿ ಹೇಳುವುದಾಗುವುದಿಲ್ಲ. ಮುಖ್ಯವಾಗಿ ಭಾರತದ ನೆಲದಲ್ಲಿ ಈ ‘ಜಾತಿ’ಯ ತರತಮದ ವಿಷಯದಲ್ಲಿ ಸುಲಭವಾಗಿ ಸುಧಾರಣೆಯ ನಿರೀಕ್ಷೆಯನ್ನು ಹೊಂದುವುದಾಗುವುದಿಲ್ಲ. ಈ ಕುರಿತಂತೆ ತುಂಬಾ ಆಶಾದಾಯಕವಾದ, ಸಾಧಿತವಾಗಿಬಿಟ್ಟಿತೆನ್ನುವಂತಹ ಬೆಳವಣಿಗೆಯೊಂದು ನಡೆದಿಲ್ಲ. ಅಲ್ಲಿ-ಇಲ್ಲಿ ಕೆಲವು ಪ್ರಗತಿಪರವಾದ ಆಶಯಗಳು ಕಾಣಸಿಕ್ಕರೂ ಅವು ಪರಂಪರೆಯಾಗಿಬಿಡುವಷ್ಟು ವ್ಯಾಪಕಗೊಳ್ಳದಿರುವುದು ದುರಂತ. ಬದಲಾವಣೆ ಎನ್ನುವುದಕ್ಕಾದರೂ ಎಲ್ಲಾ ವಿಷಯಗಳಲ್ಲಿ, ಎಲ್ಲಾ ಸಂದರ್ಭಗಳಲ್ಲಿ ಒಂದೇ ರೀತಿಯಾದ ಅರ್ಥವಿರುವುದು ಸಾಧ್ಯವಿಲ್ಲ. ಆದರೆ ಕರ್ನಾಟಕದ ವಚನ ಚಳುವಳಿ ಒಂದಿಷ್ಟು ಆಶಾವಾದವನ್ನು ಉಂಟುಮಾಡಿದ್ದು ಸುಳ್ಳಲ್ಲ ಅದಕ್ಕೆ ಮುಖ್ಯ ಕಾರಣ ಅದು ಸಾಮುದಾಯಿಕವಾಗಿತ್ತು ಎನ್ನುವುದೇ ಆಗಿದೆ.

          ಭಾರತೀಯ ಜಾತಿವ್ಯವಸ್ಥೆಯನ್ನು ಬಗೆಹರಿಸಬಹುದೆ? ಯಾವ ನೆಲೆಯಲ್ಲಿ ಸರಿಪಡಿಸಬಹುದು ಎನ್ನುವುದಕ್ಕೆ ಉತ್ತರ ದೊರೆಯಲಾರದಕ್ಕೆ ಸುಲಭವಾದ ಕಾರಣವೆಂದರೆ ಇದನ್ನು ಕುರಿತು ಯೋಚಿಸಬೇಕಾದವರೇ ಪ್ರಾಮಾಣಿಕತೆಯಿಂದ ಯೋಚಿಸುತ್ತಿಲ್ಲ ಎನ್ನುವುದೇ ಆಗಿದೆ. ಜಾತಿಯ ಶ್ರೇಷ್ಠತೆಯ ಅಹಂಕಾರದಲ್ಲಿರುವವರೇ ಉಳಿದ ಜಾತಿ ಸೃಷ್ಟಿಗೆ ಕಾರಣವಾಗಿರುವುದು ಸಾರ್ವಕಾಲಿಕ ಸತ್ಯ. ಸಾಲದ್ದಕ್ಕೆ ತಮ್ಮ ನಂತರಕ್ಕೆ ಪ್ರತೀ ಜಾತಿಗೂ ತಮಗಿಂತ ಕೆಳಗೊಂದು ಜಾತಿ ಎನ್ನುವುದನ್ನು ಇರುವಂತೆ ನೋಡಿಕೊಂಡಿರುವುದರಲ್ಲಿಯೂ ಒಂದು ದೊಡ್ಡ ಕುತಂತ್ರವಿದೆ. ಇದರ ಜೊತೆಗೆ ಶೋಷಣೆಯ ಸ್ವರೂಪವೂ ಮೇಲಿನಿಂದ ಕೆಳಕ್ಕೆ ಚಲಿಸಿದಂತೆಲ್ಲಾ ತೀವ್ರವಾಗುತ್ತಿದೆ ಹಾಗಾಗಿ ಪ್ರತೀ ಜಾತಿಗೂ ತನಗಿಂತ ಕೆಳಜಾತಿಯನ್ನು ಕುರಿತಂತಹ ಅಸಡ್ಡೆಯೊಂದು ತಾನೇ ತಾನಾಗಿ ಉಳಿದು-ಬೆಳೆದು ಶ್ರೇಷ್ಠತೆಯ ಭ್ರಮೆಯೊಂದು ಆವರಿಸಿಕೊಳ್ಳುವುದಾಗಿದೆ.

         ಜಾತಿ ಎನ್ನುವುದು ಮೂಲತಃ ಬೌದ್ಧಿಕ ಕಸರತ್ತಿನ ಕ್ರಿಯಾಯಾಗಿದೆ. ಹಾಗಾಗಿಯೂ ಇದೊಂದು ಮಾನಸಿಕ ಸಿದ್ಧತೆಯ ಪ್ರತಿಫಲ. ಮೇಲರಿಮೆಯ ಅಹಂಕಾರ ನಾಶವಾಗದ ಹೊರತು ಸಮಾನತೆ ಸುಲಭಕ್ಕೆ ಸಾಧ್ಯವಾಗುವುದಿಲ್ಲ. ಇದು ಎಲ್ಲರಿಗೂ ಅರಿವಿರುವ ಸಂಗತಿ ಆದರೆ ಈ ಕುರಿತಂತೆ ಯಾರೂ ಆದರ್ಶದ ಸಾಧಿತವಾಗಬಹುದಾದ ನಿಜದ ಹಾದಿಯಲ್ಲಿ ಹೆಜ್ಜೆಹಾಕಲು ಸಿದ್ಧರಿಲ್ಲ ಅದರರ್ಥ ಈ ಸಮಸ್ಯೆ ಸುಲಭಕ್ಕೆ ಈ ದೇಶದಲ್ಲಿ ಬಗೆಹರಿಯುವಂತಿಲ್ಲ ಎನ್ನುವುದೇ ಆಗಿದೆ. ಇದು ಮೊದಲಿಗೆ ಸ್ಪಷ್ಟಪಡಿಸಿಕೊಳ್ಳಬೇಕಾದ ಅರಿವು ಮತ್ತು ಪರಂಪರೆಯೊಂದಿಗಿನ ನಿಜದ ಮುಖಾ-ಮುಖಿ.  

        ಕನ್ನಡ ನೆಲದ ಅನನ್ಯತೆಯ ರೂಪಕವೇ ಆದ ವಚನ ಚಳುವಳಿ ಮತ್ತು ವಚನಕಾರರು ಸಾಮಾಜಿಕ ಅಸಮಾನತೆಯ ಮುಖ್ಯ ಕಾರಣವಾದ ಜಾತಿಯ ವ್ಯವಸ್ಥೆಯನ್ನು ಗುರುತಿಸಿ ಅದರೊಂದಿಗೆ ಉಳಿದ ಸಂಗತಿಗಳು ಹೇಗೆಲ್ಲಾ ಹೆಣೆದುಕೊಂಡವು ಎನ್ನುವುದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಿಂತು ವಿವರಿಸಿ ವಿಶ್ಲೇಷಿಸಿದ್ದು ದೇಶಕ್ಕೆ ಮಾದರಿಯಾದಂತದ್ದು ಅಂತಹ ಪ್ರಯತ್ನಗಳು ಅವರ ಅನುಭವದ ಸ್ವರೂಪವನ್ನು ಆಧುನಿಕ ಭಾರತದ ಸಮಾನತೆಯ, ಶ್ರೇಷ್ಠ ಹರಿಕಾರರಾದ ಬಾಬಾಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳೊಂದಿಗೆ ತುಲನೆಮಾಡಿ ದಾಖಲಿಸುವುದು ಮಹತ್ವದ ಮತ್ತು ಜರೂರತ್ತಿನ ಸಂಗತಿ. ಅಂತಹ ಪ್ರಯತ್ನವಿಲ್ಲಿ ನಡೆದಿದೆ.

       ಅಂಬೇಡ್ಕರ್ ಈ ದೇಶ ಕಂಡ ಅಪ್ರತಿಮ ಮೇಧಾವಿ, ಶ್ರೇಷ್ಠ ಚಿಂತಕ. ಈ ನೆಲದ ಅಮಾನವೀಯವಾದ ಜಾತಿವ್ಯವಸ್ಥೆಯ ನಡುವೆ ನಲುಗಿ, ಶೋಷಣೆಗೆ ಒಳಗಾದ ಸಮುದಾಯದೊಳಗಿದ್ದು, ಕಷ್ಟ ಸಂಕಟಗಳ ಪರಂಪರೆಗೆ ಸಾಕ್ಷಿಯಾದವರು ಇತರರಂತೆ ಮೌನವಾಗಿ ಅನುಭವಿಸಿ ಉಳಿಯದೇ ಅದರೊಳಗಿನಿಂದಲೇ ಉತ್ತರಕ್ಕಾಗಿ ಮಿಡುಕಾಡಿದವರು, ಸ್ವಾಭಿಮಾನದ ಸಂಕೇತವಾಗಿ ಬದ್ಧತೆಯನ್ನು ಆಸ್ತಿಯಾಗಿಸಿಕೊಂಡವರು. ಜ್ಞಾನಮೂಲವಾದ ಅಕ್ಷರದ ಸತ್ಯವನ್ನು ಅರ್ಥೈಸಿಕೊಂಡು ಹಠಕ್ಕೆಬಿದ್ದು ಛಲದಿಂದ ದಕ್ಕಿಸಿಕೊಂಡು ವಿಶ್ವಸತ್ಯಕ್ಕೆ ಮುಖಾ-ಮುಖಿಯಾದ ಮಹಾನುಭಾವ. 

        ಇಲ್ಲಿಂದ ಮುಂದಕ್ಕೆ ತನ್ನ ಇಡೀ ಬದುಕನ್ನು ಈ ನೆಲದ ಬಹುಸಂಖ್ಯಾತ ಶೋಷಿತರ ಪರವಾಗಿ ಧ್ವನಿಯಾಗುವುದಕ್ಕೆ, ಶಕ್ತಿಯಾಗುವುದಕ್ಕೆ ಮೀಸಲಾಗಿರಿಸಿ ದುಡಿದವರು ಮುಂದೆ ಸಂವಿಧಾನ ಶಿಲ್ಪಿ ಎಂದೇ ನಾಡಿನ ರೂಪಕವಾದವರು. ಬದುಕೇ ಪ್ರಯೋಗಶಾಲೆಯಂತಾಗಿಸಿಕೊಂಡ ಬಾಬಾಸಾಹೇಬರು ಈ ನೆಲದ ಜಾತಿವ್ಯವಸ್ಥೆಯ ವಿರುದ್ಧ ಸಮರ್ಥವಾಗಿ ಜ್ಞಾನ ಮತ್ತು ಸತ್ಯಗಳ ಮೂಲಕವೇ ಮುಖಾ-ಮುಖಿಯಾದವರು. ತಮ್ಮ ಇಡೀ ಬದುಕನ್ನು ಈ ನೆಲದ ಬಹುಸಂಖ್ಯಾತರ ಪರವಾದ ದನಿ ಎತ್ತುವುದಕ್ಕಾಗಿಯೇ ಮೀಸಲಿರಿಸಿದಂತೆ ದುಡಿದ ಬಾಬಾಸಾಹೇಬರು ಸಂವಿಧಾನಶಿಲ್ಪಿ ಎಂದೇ ದೇಶದ ರೂಪಕವಾದವರು.

        ಕರ್ನಾಟಕದ ನೆಲ-ಸಂಸ್ಕøತಿ-ಸಾಮಾಜಿಕನೆಲೆ ಎಲ್ಲವೂ ಇತರ ಸಂದರ್ಭಕ್ಕಿಂತ ಭಿನ್ನ ಎನ್ನುವುದು ಸಹಜ ಹಾಗೆಯೇ ಬಾಬಾಸಾಹೇಬರ ಪರಿಸರವೂ ಭಿನ್ನ. ಆದರೆ ಅಸಮಾನತೆಯ ವಿಚಾರದಲ್ಲಿ ವಚನಕಾರರು ಬಾಬಾಸಾಹೇಬರು ಒಂದೇ ತೆರನಾಗಿ ಯೋಚಿಸಿದವರು ಮತ್ತು ಬಹಳ ಮುಖ್ಯವಾಗಿ ತಮ್ಮ ಆಲೋಚನೆ, ಚಿಂತನೆಗಳನ್ನು ಅಕ್ಷರಗಳನ್ನಾಗಿಸಿ ದಾಖಲಿಸಿ ಈ ನೆಲಕ್ಕೆ ಜ್ಞಾನದ ನಿಜ ಬೆಳಕನ್ನು ಚಲ್ಲಲು ತುಂಬಾ ಪ್ರಾಮಾಣಿಕವಾಗಿ ಶ್ರಮಿಸಿದವರು. ವಚನ-ಚಿಂತನೆ ಎಂಬ ಭಿನ್ನ ನೆಲೆಗಳಲ್ಲಿ ಒಂದೇ ಗುರಿ ಮತ್ತು ಸತ್ಯವನ್ನು ಎದುರಾಗುವ ಹಂಬಲವುಳ್ಳವರು. ಅವರ ಜ್ಞಾನ ಮತ್ತು ಅರಿವುಗಳನ್ನು ಸಾಮಾಜಿಕ ಸಮಾನತೆ ಕುರಿತ ನಿಲುವುಗಳನ್ನು ಒಟ್ಟಾಗಿರಿಸಿ ಒಂದೆಡೆ ಚಿಂತಿಸುವ ತುರ್ತು ಎಂದಿಗಿಂತ ಇಂದು ಹೆಚ್ಚು ಅನಿವಾರ್ಯವಾಗಿದೆ ಎನ್ನುವುದು ಗಮನಾರ್ಹ. ಆ ನಿಟ್ಟಿನಲ್ಲಿ ಒಂದು ಪ್ರಯತ್ನ, ವಚನಕಾರರು ಮತ್ತು ಅಂಬೇಡ್ಕರ್. 
bottom of page