top of page

ಕನ್ನಡ ಭಾಷೆ ಮತ್ತು ಸಮಕಾಲೀನ ಸಮಸ್ಯೆಗಳು

ಕನ್ನಡ ಭಾಷೆ ಮತ್ತು ಸಮಕಾಲೀನ ಸಮಸ್ಯೆಗಳು

       ‘ಕರ್ನಾಟಕ-ಕನ್ನಡ-ಕನ್ನಡಿಗರು’ ಹೀಗೆಂದಕೂಡಲೇ ಅದೊಂದು ನಾಡು, ನುಡಿ ಮತ್ತು ಅಲ್ಲಿನ ಜನರು ಎಂಬ ಸಾಮಾನ್ಯ ಅರ್ಥ ಅರಿವಾಗುವುದುಂಟು. ಪ್ರಜ್ಞೆಯ ಭಾಗವಾಗಿ ಭಾವಿಸಿದರೆ ಇದನ್ನು ‘ಸಂಸ್ಕೃತಿ’ ಎಂದು ಕರೆಯಬಹುದು. ಒಂದು ನಾಡು ಅಥವಾ ಸಮುದಾಯ ಎನ್ನುವ ಅರ್ಥಕ್ಕೆ ಹಲವಾರು ಆಯಾಮಗಳಿರುತ್ತವೆ. ಮುಖ್ಯವಾಗಿ ಅದರ ಭೌಗೋಳಿಕ ಪರಿಸರ, ಐತಿಹಾಸಿಕತೆ, ವರ್ತಮಾನ, ಸಾಮುದಾಯಿಕ ಆಚರಣೆ, ಸಾಮಾಜಿಕ ನಂಬಿಕೆ, ಕಲೆ, ಸಾಹಿತ್ಯ ಇವೇ ಮೊದಲಾದವುಗಳು ಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ಹಾಗಾಗಿಯೂ ಭಾವುಕವಾಗಿ ನನ್ನನಾಡು, ನನ್ನಜನ, ನನ್ನಭಾಷೆ ಎನ್ನುವ ಬಗೆಗೊಂದು ಆತ್ಮೀಯ ಆಪ್ತತೆಯ ಸಂಬಂಧವೊಂದು ಸಾಧ್ಯವಾಗಿ ಭಾವುಕವಾದ ಪ್ರತಿಕ್ರಿಯೆ ಸಹಜವೆನ್ನುವುದಾಗುತ್ತದೆ. ‘ಜನನಿ ಜನ್ಮಭೂಮಿ ಸ್ವರ್ಗಕ್ಕಿಂತ ಹಿರಿದು’ ಎನ್ನುವ ಮಾತಿಗಾದರೂ ಇಂತಲ್ಲಿಯೇ ವಿಶೇಷತೆಯೊಂದು ಸಾಧ್ಯವಾಗುತ್ತದೆ. ‘ಮುಕ್ಕೋಟಿ ಕನ್ನಡಿಗರು’ ಎನ್ನುವ ಮಾತು ಕಳೆದ ದಶಕದ ಹಿಂದೆ ನಮ್ಮ ಸಾಮಾನ್ಯ ಸಾಮುದಾಯಿಕ ಹೆಮ್ಮೆಯಾಗಿತ್ತು ಇವತ್ತು ಅದು ಎರಡುಪಟ್ಟು ಹೆಚ್ಚಾಗಿ ಜನಸಂಖ್ಯೆ ಆರುಕೋಟಿಯ ಅಂಕಿಗೆ ಬಂದು ನಿಂತಿದೆ. ಅಂದರೆ ಬದಲಾವಣೆಯ ನೀರು ಸಾಕಷ್ಟು ಈ ನೆಲದಲ್ಲಿ ಹರಿದುಹೋಗಿದೆ. ‘ಪರಿವರ್ತನೆ ಜಗದ ನಿಯಮ’ ಎನ್ನುವ ಗೀತೆಯ ಮಾತಿಗೆ ನಿರಂತರತೆಯ ಅರ್ಥದಲ್ಲಿ ಉದಾಹರಣೆಗಳು ಸಾಕಷ್ಟಿವೆ.

       ‘ಕರ್ನಾಟಕದಲ್ಲಿ ಕನ್ನಡವೇ ಕಡ್ಡಾಯ’ ಎನ್ನುವುದೊಂದು ಮಾತು ಚಾಲ್ತಿಯಲ್ಲಿದೆ ಎಂದರೆ ಅದು ಒಂದು ನಿಯಮವಾಗಿ, ಕಾನೂನಾಗಿ ರೂಪುಗೊಳ್ಳಬೇಕೆಂದರೂ ಸಹಜವಾಗಿ ಯಾರೂ ಅದರ ವಿರುದ್ಧ ಧ್ವನಿಎತ್ತಬೇಕಿಲ್ಲ, ನಿರಾಕರಿಸಬೇಕಿಲ್ಲ, ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ತಕ್ಷಣಕ್ಕೆ ವಾಗ್ವಾದಗಳನ್ನು ಆರಂಭಿಸಬೇಕೆಂದಿಲ್ಲ. ಸರ್ವಸ್ವತಂತ್ರವಾದ, ವಿಶ್ವಮಾನ್ಯತೆ ಪಡೆದ ಭಾರತದೇಶದೊಳಗೆ ಕರ್ನಾಟಕಕ್ಕೆ ರಾಜ್ಯವೆಂಬ ಸ್ವತಂತ್ರ ಅಸ್ತಿತ್ವವಿ ರುವುದು ಸ್ಪಷ್ಟ ಮತ್ತದು ಸಂವಿಧಾನಾತ್ಮಕ. ಹಾಗಾದಕೂಡಲೇ ಆ ರಾಜ್ಯದ ಒಂದು ಭಾಷೆಯನ್ನು ಗುರುತಿಸುವುದಾದರೂ ಅಷ್ಟೇ ಅನಿವಾರ್ಯ. ಕರ್ನಾಟಕದ ರಾಜ್ಯ ಭಾಷೆ ಕನ್ನಡ ಇದನ್ನು ಭೌಗೋಳಿಕ, ಪ್ರಾದೇಶಿಕ, ರಾಜಕೀಯ ಇತ್ಯಾದಿ ನೆಲೆಗಳಿಂದಷ್ಟೇ ನೋಡಬೇಕಿಲ್ಲ, ನೋಡುವಂತಿಲ್ಲ.

       ‘ಮಾತೃಭಾಷೆ’ ಎನ್ನುವ ಮಾತೊಂದನ್ನು ಎಲ್ಲರೂ ಸರಳವಾಗಿ ಮತ್ತು ಸಹಜವಾಗಿ ಬಳಸುತ್ತೇವೆ ಇದರ ಅರ್ಥ ‘ತಾಯಿಭಾಷೆ’ ಎಂದಾಗುತ್ತದೆ, ಇದು ಕೌಟುಂಬಿಕ ಎಂಬ ಅರ್ಥವನ್ನು ಪ್ರತಿನಿಧಿಸುತ್ತದೆ. ‘ಮಾತೃಭೂಮಿ’ ಎನ್ನುವ ಮತ್ತೊಂದು ಮಾತು ನನ್ನ ಜನ್ಮಭೂಮಿ ಎಂಬ ಅರ್ಥಕ್ಕೆ ಸಂವಾದಿಯಾಗುತ್ತದೆ ಅಂದರೆ ತಾನು ಹುಟ್ಟಿದ, ಬೆಳೆದ ಮತ್ತು ಮುಖ್ಯವಾಗಿ ನಿಜದ ಅರ್ಥದಲ್ಲಿ ಅಸ್ತಿತ್ವವನ್ನು ಕಂಡುಕೊಂಡ ನೆಲ ಎನ್ನುವ ಅಭಿಮಾನವನ್ನು ಪ್ರತಿನಿಧಿಸುತ್ತದೆ. ಅಂತಹ ಭೂಮಿಗೆ, ನಾಡಿಗೆ ಋಣವಾಗುವುದು ಸಾಮಾನ್ಯಮನುಷ್ಯತ್ವ ಎನ್ನುವುದಾದರೆ ಅದೇ ನೆಲದಲ್ಲಿ ಸಾಮುದಾಯಿಕ, ಸಾರ್ವಜನಿಕವಾದ ಬದುಕು ಕೇಂದ್ರೀಕೃತಗೊಂಡ ಭಾಷೆಯೂ ಒಂದಿರುತ್ತದೆ ಅದು ಮಾತೃಭಾಷೆ. ಇದು ಆ ನಾಡಿನ ಅಧಿಕೃತ ಭಾಷೆ. ಮೇಲೆ ನೋಡಿದಂತೆ ಮನೆಯಲ್ಲಿನ ಕೌಟುಂಬಿಕವೆನ್ನುವ ಪರಿಸರದ ಭಾಷೆ ತಾಯಿಭಾಷೆಯ ಅರ್ಥವಾಗುವುದಾದರೂ ಅದು ಸಾಮಾನ್ಯ ರೂಪ ಆದರೆ ನಾಡಿನಲ್ಲಿ ಬದುಕು ಕಟ್ಟಿಕೊಂಡು ಋಣವಾಗಿರುವಲ್ಲಿ ಅಲ್ಲಿಯದ್ದೇ ಭಾಷೆಯನ್ನು ಗೌರವಿಸುವ, ಪ್ರೀತಿಸುವ, ಅಭಿವೃದ್ಧಿಗಾಗಿ ದುಡಿಯುವ ಅರ್ಥದಲ್ಲಿ ನಾಡಿನ ಭಾಷೆಗೆ ವಿಶೇಷತೆಯ ಅರ್ಥವಿಸ್ತಾರವಿದೆ.

       ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸಂಯುಕ್ತ ರಾಜ್ಯಗಳ ಆಳ್ವಿಕೆಯ ಹಿರಿಮೆಯಲ್ಲಿದೆ. ಸುಮಾರು ಹದಿನೈದು ರಾಷ್ಟ್ರ ಭಾಷೆಗಳನ್ನು ಗುರುತಿಸಲಾಗಿದೆ. ಅಂದರೆ ಸಂಸ್ಕøತಿಯ ವೈವಿಧ್ಯತೆಯಂತೆಯೇ ಭಾಷಾ ವೈವಿಧ್ಯತೆ ಎನ್ನುವುದು ಸಹ ಭಾರತದ ಅನನ್ಯತೆಗಳಲ್ಲಿ ಒಂದು ಮಹತ್ವದ ಲಕ್ಷಣ.

       ಮಾನವನ ವಿಶಿಷ್ಟತೆ, ನಾಗರೀಕತೆ, ಜ್ಞಾನದ ವಿಸ್ತಾರವಿದ್ದದ್ದೇ ಅವನ ವಿಕಾಸದ ಅನಂತ ಸಾಧ್ಯತೆÉಗಳಲ್ಲಿ. ಈ ವಿಕಾಸ ಎನ್ನುವುದು ಕೇವಲ ದೈಹಿಕವಾದುದಲ್ಲ ಅದು ಬೌದ್ಧಿಕವೂ ಮಾನಸಿಕವೂ ಆದುದು. ಅಂದರೆ ಬುದ್ಧಿಭಾವಗಳ ವಿಕಾಸ ಏನೆಲ್ಲಾ ಸಾಧ್ಯತೆಗಳನ್ನು ಸಾಧಿಸಿತ್ತು. ಅದರಲ್ಲಿ ಸಂವಹನದ ಕಾರಣಕ್ಕೆಂದೇ ಪ್ರಯತ್ನಿಸಲಾದ ಸನ್ನೆಗಳು ಕ್ರಮೇಣ ಶಬ್ದಗಳ ರೂಪವಾಗಿ ಮುಂದೆ ಭಾಷೆಯಾಗಿ ಮನುಷ್ಯನ ಸಾಂಸ್ಕøತಿಕ ನಾಗರೀಕ ಆಯಾಮಗಳಲ್ಲಿ ಮಹತ್ವ ಸಾಧಿಸಿದ್ದು ಈಗ ಚರಿತ್ರೆ. ಇಂತಹ ಭಾಷೆಯೊಂದಿಗೆ ನಾವು ಎಷ್ಟೆಲ್ಲಾ ಅಪಾರವಾದುದನ್ನು ಸಾಧಿಸಿ ಬೆಳೆಸಿದ್ದೇವೆ! ಒಂದರೆ ಕ್ಷಣ ಈ ಭಾಷೆ ಇಲ್ಲದಿದ್ದರೆ ಏನಾಗುತ್ತಿತ್ತು? ನಾವು ಏನಾಗುತ್ತಿದ್ದೆವು? ಎಂದು ಯೋಚಿಸಿದರೆ ಆತಂಕವೆ, ಅಂಧತೆಯೆ, ಶೂನ್ಯತೆಯೆ ಎದುರಾಗಬಹುದು.

        ವಿಸ್ತಾರವಾದ ಈ ಜಗತ್ತು ಕಾಲ, ಪ್ರದೇಶ, ಪರಿಸರಗಳಿಂದ ತುಂಬಾ ವಿಭಿನ್ನವಾಗಿದೆ. ಪ್ರಕೃತಿಯ ಹಲವು ಅದ್ಭುತತೆಗಳಿಗೆ ಸಾಕ್ಷಿಯಾಗಿದೆ. ಅದರೊಂದಿಗೆ ಒಂದಾಗಿ ಅದರ ಭಾಗವೇ ಆಗಿ ಬದುಕಿದ ಜನರಾದರೂ ಅಷ್ಟೇ ವಿಭಿನ್ನವಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ ಇಂತಲ್ಲಿ ಭಾಷೆಯಾದರೂ ವಿಭಿನ್ನವೂ ಅರ್ಥಪೂರ್ಣವೂ ಶಕ್ತಿಯುತವೂ ಆಗಿರಲೇಬೇಕಿತ್ತು. ಇಂತಹ ಗುಣಗಳಿದ್ದ ಭಾಷೆಗಳು ಸಹಜವಾಗಿಯೇ ಜನರೊಂದಿಗೆ ಉಳಿದಿವೆ, ಬೆಳೆದಿವೆ. ಇಂದಿಗೆ ಸಾಕಷ್ಟು ಎನಿಸುವಷ್ಟು ಶ್ರೀಮಂತವೂ ಆಗಿವೆ, ದುರಂತವೆಂದರೆ ಕೆಲವು ಮತ್ತಷ್ಟು ಶಿಥಿಲವೂ ಆಗಿವೆ. ಕೆಲವಂತೂ ನಾಶವಾಗಿಹೋಗಿವೆ. ಭಾರತದಲ್ಲಿಯೇ ಒಂದು ಕಾಲಕ್ಕೆ ಅದ್ಭುತ ಎನಿಸುವಂತೆ ಸಾಹಿತ್ಯ ಸೃಷ್ಟಿಸಿದ ಪ್ರಾಕೃತ, ಪಾಲಿ, ಸಂಸ್ಕೃತಿದಂತಹ ಭಾಷೆಗಳು ಅವಸಾನದ ಅಂಚನ್ನು ತಲುಪಿದ್ದು ನಮ್ಮೆದುರಿಗಿರುವ ಇತಿಹಾಸ. ಜೀವಂತ ಭಾಷೆಗಳು ಮತ್ತು ಮಾತೃಭಾಷೆಗಳು ಎನ್ನುವ ಅಧ್ಯಯನ ಕ್ರಮವಾದರೂ ಈ ಬಗೆಯ ಹಿನ್ನಲೆಯಿಂದಲೇ ಸಾಧ್ಯವಾಗುವಂತಹುದು.

       ಒಂದು ಭಾಷೆಯನ್ನು ಕುರಿತು ಆತಂಕದಿಂದ ಯೋಚಿಸುವಂತಹ ಸ್ಥಿತಿಯೊಂದು ನಿರ್ಮಾಣವಾಗಿದೆ ಎಂದರದು ವಿಪರ್ಯಾಸದ ಉತ್ಕರ್ಷವೆಂದೆ ಹೇಳಬಹುದು. ಇಂದು ಈ ಬಗೆಯ ಆತಂಕಗಳು ದೇಸೀ ಭಾಷೆಯ ಸಂದರ್ಭದಲ್ಲಿ ಎದುರಾಗಿವೆ ಇಂತಲ್ಲಿ ಮಾತೃಭಾಷಾಚಿಂತನೆಯು ಕದಲತೊಡಗುತ್ತದೆ.
ಮನುಷ್ಯ ಪ್ರಕೃತಿಯೊಳಗೆ ಜೀವಂತವಾಗಿದ್ದು, ಎಲ್ಲವನ್ನು ಪಡೆದುಕೊಂಡದ್ದೇ ಪ್ರಕೃತಿಯೊಳಗಿಂದ ಹಾಗಾಗಿಯೂ ಅನುಕರಣಶೀಲತೆ ಎನ್ನುವುದೇ ಅವನ ಮುಖ್ಯ ಲಕ್ಷಣ ಮತ್ತು ಶಕ್ತಿ. ಭಾಷೆಯೇ ಇದಕ್ಕೆ ಅತ್ಯುತ್ತಮವಾದ ಉದಾಹರಣೆ. ಮನೆಯಲ್ಲಿ ಮಗುವೊಂದು ಬೆಳೆದಂತೆಲ್ಲಾ ಅಲ್ಲಿನ ಪರಿಸರ, ಸಂಸ್ಕಾರ, ಸಂಸ್ಕೃತಿ, ಪ್ರಜ್ಞೆ ಇತ್ಯಾದಿಗಳನ್ನು ರೂಪಿಸಿಕೊಳ್ಳುವ ಬಗೆಯಾದರೂ ಹೀಗೆಯೇ. ಈ ಕುಟುಂಬದ ಭಾಷೆಯೇ ಸಾಮಾನ್ಯ ಅರ್ಥದಲ್ಲಿ ಮಾತೃಭಾಷೆ.

        ನಮ್ಮ ದೇಶದ ಸ್ವಾತಂತ್ರ್ಯಾನಂತರದಲ್ಲಿ ಪ್ರಜಾಪ್ರಭುತ್ವ ಆಡಳಿತದ ಆಯ್ಕೆಯಾದಾಗ ಆದ್ಯತೆಯ ಸಂಗತಿಯಾದದ್ದು, ಭಾಷಾವಾರು ಪ್ರಾಂತಗಳ ವಿಂಗಡಣೆ. ಹೆಸರೇ ಸೂಚಿಸುವಂತೆ ಭಾಷೆಯನ್ನಾಧರಿಸಿಯೇ ರಾಜ್ಯಗಳ ವಿಂಗಡಣೆಗೆ ಮಹತ್ವನೀಡಿದ್ದು ವೈಜ್ಞಾನಿಕವಾದ ಕ್ರಮವೇ ಆಗಿತ್ತು. ಆರಂಭಕ್ಕೆ ಗಮನಿಸಿದ ಹಾಗೆ ಭಾಷೆ ಎನ್ನುವುದು ಅಸ್ತಿತ್ವದ ರೂಪ ಎನ್ನುವ ಕಾರಣದಿಂದಲೂ ಇದಕ್ಕೆ ಮಹತ್ವವಿದೆ. ಭಾಷಾಧಾರಿತ ರಾಜ್ಯ ವಿಂಗಡಣೆಯ ಸಂದರ್ಭಕ್ಕೆ ಇಡೀ ರಾಜ್ಯದ ಪ್ರತೀಕುಟುಂಬವೂ ಆಯಾ ರಾಜ್ಯದ ಭಾಷೆಯನ್ನು ಮಾತ್ರ ಆಡುತ್ತಿವೆ, ಆಡಲೇಬೇಕು ಎಂಬ ಅರ್ಥವೂ ಇದಲ್ಲ. ಇತರ ಭಾಷೆಯ, ವಲಯದ ನಾಡಿನ ಜನರು ಬೇರೆ ರಾಜ್ಯಗಳಲ್ಲಿಯೂ ಬದುಕು ಕಟ್ಟಿಕೊಂಡಿರುವುದುಂಟು ಅವರಲ್ಲಿ ಬಹುಪಾಲು ಜನರಿಗೆ ಆ ನಾಡಿನ ಭಾಷೆಯನ್ನು ಕಲಿಯುವಂತದ್ದು ಸಾರ್ವಜನಿಕ ಜೀವನದ ಕಾರಣಕ್ಕೆ ಅನಿವಾರ್ಯವಾಗಿರುವುದುಂಟು, ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂಬ ಮಾತಿನ ಅರ್ಥವಾದರೂ ಈ ಹಿನ್ನೆಲೆಯಿಂದಲೇ ಎನ್ನಬಹುದು.
ಒಂದು ನಾಡು ತನ್ನ ಅಸ್ತಿತ್ವವನ್ನು ಒಂದು ಭಾಷೆಯೊಂದಿಗೆ ರೂಪಿಸಿಕೊಂಡಿದೆ ಎಂದರೆ ಅದು ಆ ಭಾಷೆಗಿರುವ ಸಾಂಸ್ಕೃತಿ ಮಹತ್ವವನ್ನು, ಶ್ರೇಷ್ಠತೆಯನ್ನು ಧ್ವನಿಸಿದೆ ಎಂದೇ ಅರ್ಥ. ಆ ಭಾಷೆಗೆ ಲಿಪಿ, ಅರ್ಥ, ಜೀವಂತಿಕೆ, ಸೃಜನಶೀಲತೆ, ಸ್ವಂತಿಕೆ ಮತ್ತು ಮುಖ್ಯವಾಗಿ ಕ್ರಿಯಾಶೀಲತೆಗಳು ಇದ್ದೇ ಇರುತ್ತವೆ. ನೂರಾರು ವರ್ಷಗಳಿಂದ ಈ ನಾಡಿನ ಜನ ಆ ಭಾಷೆಯೊಂದಿಗೆ ಬದುಕಿರುತ್ತಾರೆ ಅವರ ಭಾಷೆ ಎನ್ನುವುದು ಅವರಿಗೆ ಸಹಜವಾದದ್ದೇ ವಿನಃ ಅನ್ಯವಾಗಿರುವುದಿಲ್ಲ. ಕಲಿಯುವ ಕಷ್ಟವನ್ನು ಅದು ಎಂದಿಗೂ ತಂದೊಡ್ಡಿರುವುದಿಲ್ಲ ಹುಟ್ಟು-ಬೆಳವಣಿಗೆಯಷ್ಟೇ ಸಹಜವಾಗಿರುತ್ತದೆ. ಆ ಕಾರಣಕ್ಕಾಗಿಯೂ ಭಾಷೆಗೆ ತಾಯಿಯ ಸ್ಥಾನ ನೀಡುವುದಾಗಿದೆ, ಅಭಿಮಾನಿಸುವುದೂ ಸಹಜವಾಗಿರುತ್ತದೆ.

      ವೈಜ್ಞಾನಿಕ ಸತ್ಯಗಳು ಪ್ರತಿಪಾದಿಸಿರುವಂತೆ ಮಾತೃಭಾಷೆ ಎನ್ನುವುದು ಆ ನೆಲದ ಸತ್ಯವೂ ಸತ್ವವೂ ಹೌದು. ಅದರೊಂದಿಗೆ ಎಂತದ್ದೇ ಸಂವಹನವಾದರೂ ಸುಲಭವಾಗಿರುತ್ತದೆ. ಕನ್ನಡವನ್ನೇ ಗಮನಿಸಿದರೂ ಸಾವಿರಾರು ವರ್ಷಗಳ ಇತಿಹಾಸವಿರುವ ಈ ಭಾಷೆ ಎಲ್ಲಾ ಕಾಲಾಂತರ ಗಳಲ್ಲಿ, ಅವಸ್ಥಾಂತರಗಳಲ್ಲಿ ತನ್ನನ್ನು ತಾನು ಜತನಮಾಡಿ ಕೊಂಡಿದೆ. ಇದು ಸಾಮಾನ್ಯ ಸಂಗತಿಯಲ್ಲ ಇಂತಲ್ಲಿಯೇ ಅದರ ಶ್ರೇಷ್ಠತೆಯನ್ನು ಗುರುತಿಸುವುದು ಸಾಧ್ಯ. ‘ಪರಿವರ್ತನೆ ಜಗದ ನಿಯಮ’ ಎಂಬ ಮಾತನ್ನು ಸರಳವಾಗಿ ಸೃಜನವೂ ಕ್ರಿಯಾಶೀಲವೂ ಆದ ಎಲ್ಲಾ ಸಾಧ್ಯತೆಗಳಿಗೂ ಆರೋಪಿಸಬಹುದೆಂದಾದರೆ ಅದು ಭಾಷೆಯ ಸಂದರ್ಭಕ್ಕೂ ಹೆಚ್ಚು ಪ್ರಸ್ತುತವಾಗುತ್ತದೆ. ಆರಂಭದಿಂದಲೂ ಸಂಸ್ಕøತ, ಪ್ರಾಕೃತ, ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್‍ನಂತಹ ಪ್ರಭಾವಶಾಲಿ ಭಾಷೆಗಳ ನಡುವೆಯೇ ಸಂಘರ್ಷ ಮತ್ತು ಸಮನ್ವಯಗಳನ್ನು ಸಾಧಿಸಿಕೊಂಡು ತನ್ನತನವನ್ನು ಉಳಿಸಿಕೊಂಡಿರುವಲ್ಲಿಯೇ ‘ಮಾತೃಭಾಷೆ’ ಎನ್ನುವುದಕ್ಕೆ ಇದ್ದಿರಬಹುದಾದ ವಿಶಿಷ್ಟತೆಯನ್ನು ಗುರುತಿಸಬಹುದು.

         ಎಲ್ಲಾ ಕಾಲವೂ ಮುಖ್ಯವಾಗಿ ಮನುಷ್ಯನ ಅವಶ್ಯಕತೆಯನ್ನು ಅವಲಂಬಿಸಿಯೇ ಬದಲಾಗುತ್ತದೆ ಎನ್ನುವುದು ಸಹಜವಾದುದು. ಆದರೆ ಅದನ್ನು ಮೀರಿ ಕಾಲವೇ ಬದಲಾಯ್ತು, ಕೆಟ್ಟಿತು ಎಂಬೆಲ್ಲಾ ಮಾತುಗಳನ್ನು ರೂಢಿಗೆಂಬಂತೆ ಬಳಸುತ್ತಿರುವುದು ಅರಿವಿರುವ ಸಂಗತಿ. ‘ಮಾತೃಭಾಷೆ’ಯ ವರ್ತಮಾನದ ಅಸ್ತಿತ್ವಗಳ ಸಂದರ್ಭದಲ್ಲಿಯೂ ಇದೇ ಮಾತನ್ನಾಡ ಬಹುದು. ಆಧುನಿಕಗೊಂಡ, ನಿರಂತರ ಅದೇ ಪ್ರಕ್ರಿಯೆಯಲ್ಲಿರುವ ಜಗತ್ತು ತನ್ನನ್ನು ಜಾಗತಿಕ ಗ್ರಾಮವನ್ನಾಗಿಸಿಕೊಳ್ಳುವ ಕನಸನ್ನು ಹೊತ್ತಿದೆ. ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲಿಡುವುದಾದರೂ ಮತ್ತದೇ ಸ್ವಾರ್ಥ ಮತ್ತು ಸ್ವ-ಅಭಿವೃದ್ಧಿ ಆಶಯದ ಕಾರಣದಿಂದಲೇ ಎನ್ನುವುದು ಸೂರ್ಯಸತ್ಯ. ಇದು ಆರಂಭದ ಮಾತುಗಳಂತೆ ಕೇವಲ ಮಾರುಕಟ್ಟೆಯ ರೂಪದಿಂದಷ್ಟೇ ಉಳಿದಿಲ್ಲ ಅದೊಂದು ಸಂಸ್ಕೃತಿಯೇ ಆಗತೊಡಗಿದೆ. ಅದು ತನಗೆ ಅಗತ್ಯವೆನ್ನುವಂತೆ ಮಾತೃಭಾಷೆಯನ್ನು ಹುಡುಕತೊಡಗಿದೆ. ಅದು ಈಗಾಗಲೇ ತನ್ನ ಸ್ವಾಮ್ಯಸಾಧಿಸಿಕೊಂಡು ವಿಶ್ವಭಾಷೆ ಎನಿಸಿಕೊಳ್ಳುತ್ತಿರುವ ವಿಪರ್ಯಾಸದಲ್ಲಿ ಜಾಗತಿಕ ಮಾರುಕಟ್ಟೆಯ ಭಾಷೆಯಾಗಿಬಿಡುತ್ತಿದೆ.

       ಈಗಾಗಲೇ ವಸಾಹತುಶಾಹಿಯ ದುರಂತದೊಂದಿಗೆ ಇಂಗ್ಲಿಷ್ ನಮ್ಮನ್ನಾಳುತ್ತಿದೆ ಈ ನೆಲದ ದೊಡ್ಡ ಭ್ರಮೆಯಾಗಿ, ಆತಂಕವಾಗಿ ದಾಖಲಾಗಿಬಿಟ್ಟಿದೆ. ಇನ್ನು ಇದರ ಆಟಾಟೋಪ ನೇರವಾಗಿ ಈ ಪ್ರಾದೇಶಿಕ ಎನ್ನುವ ‘ಮಾತೃಭಾಷೆ’ಗಳ ಮೇಲೆ ಆಕ್ರಮಣಶೀಲವಾಗಿಯೇ ಎರಗುತ್ತಿದೆ. ನಿಜವಾದ ಕರಾಳ ತಲ್ಲಣಗಳು ಆರಂಭವಾಗಿರುವುದೇ ಇಲ್ಲಿಂದ.

        ಭಾರತದಲ್ಲಿಯೂ ಆರಂಭದಿಂದಲೇ ಈ ಬಗೆಯ ಅನ್ಯಭಾಷಾ ಪ್ರಭಾವದ ಒಂದಿಷ್ಟು ತಕರಾರುಗಳು ನಡೆದೇ ಇವೆ. ಮಹಾತ್ಮಗಾಂಧಿ, ಲೋಹಿಯಾ ಅವರಂತಹ ಚಿಂತಕರೂ ಅಕ್ಷರ-ಅರಿವುಗಳ ಸಂದರ್ಭಕ್ಕೆ ಮಾತೃಭಾಷೆಯನ್ನೇ ಮುಖ್ಯ ನೆಲೆಯಲ್ಲಿ ಗಮನಿಸಿರುವುದುಂಟು ಮತ್ತು ಆ ಪರವಾಗಿ ಗಂಭೀರ ಚರ್ಚೆಯನ್ನು ಎತ್ತಿದ್ದಾರೆ. ವಸಾಹತುಶಾಹಿ ಆಡಳಿತ ಬ್ರಿಟಿಷರೊಂದಿಗೆ ಹೊರಟುಹೋಗಿ ಸ್ವಾತಂತ್ರ್ಯವೆನ್ನುವುದು ನಮಗೆ ದೊರೆತ ಕ್ಷಣಕ್ಕೂ ಅವರ ಭಾಷೆ ನಮ್ಮನ್ನು ಬಿಡಲಿಲ್ಲ. ಅಗತ್ಯಕ್ಕಿಂತ ಹೆಚ್ಚು ಎನ್ನುವಂತೆ ಅದು ಆವರಿಸಿಕೊಂಡಿತು. ಹಾಗಾಗಿ ಅಂದಿನಿಂದಲೇ ನಿಜದ ಭಾಷಾ ಆಕ್ರಮಣ ಈ ದೇಶದ ಎಲ್ಲಾ ಇತರ ಭಾಷೆಗಳನ್ನು ಕಾಡತೊಡಗಿತು. ಕನ್ನಡಕ್ಕೂ ಇದು ದೊಡ್ಡ ಸಮಸ್ಯೆಯೇ ಆಗತೊಡಗಿತು.
 
       ‘ಕನ್ನಡದಲ್ಲೇನಿದೆ’? ಎನ್ನುವುದೊಂದು ಸಂವಾದವಾಗಿಯೇ ರೂಪುಗೊಂಡಿತು. ಬಾಲಿಶ ಎನ್ನುವಂತಾದರೂ ಅದೊಂದು ಉತ್ತರನೀಡಲೇಬೇಕಾದ ತುರ್ತನ್ನು ಸೃಷ್ಟಿಸಿತು. ‘ಕನ್ನಡ’ ಎನ್ನುವುದನ್ನು ಶಕ್ತಿಯ ಅರ್ಥವಾಗಿಯೇ ಪ್ರತಿಪಾದಿಸ ಲ್ಪಡಬೇಕಾದ ಅನಿವಾರ್ಯತೆಯೂ ಸವಾಲಾಯಿತು.
ಹೊರದೇಶದ ಸಮಸ್ಯೆ ಒಂದು ಬಗೆಯದ್ದಾದರೆ ಒಳಗಿನದ್ದು ಮತ್ತೊಂದು ವಿಧದ ಸಮಸ್ಯೆಯಾಗಿತ್ತು ‘ರಾಷ್ಟ್ರಭಾಷೆ’ ಎನ್ನುವುದರೊಂದಿಗೆ ಹಿಂದಿಯನ್ನು ಹೇರುವ ಪ್ರಯತ್ನಗಳೂ ಗಂಭೀರವಾಗಿಯೇ ನಡೆದವು.    
        ‘ತ್ರಿಭಾಷಾಸೂತ್ರ’ ಎನ್ನುತ್ತಾ ಇಂಗ್ಲಿಷ್-ಹಿಂದಿ-ಕನ್ನಡವನ್ನು ಒಳಗೊಂಡಂತಹ ನಿಯಮಗಳು ಚಾಲ್ತಿಗೆ ಬಂದವು. ಇದು ಮತ್ತಷ್ಟು ಕೇಡನ್ನೇ ಉಂಟುಮಾಡಿತು ಮೊದಲೇ ಕಲಿತವರ ನಡುವೆ ಅವಜ್ಞೆಗೆ ಗುರಿಯಾಗಿದ್ದ ಭಾಷೆ ಮತ್ತಷ್ಟು ಆತಂಕವನ್ನು ಎದುರಿಸುವುದಾಯಿತು. ದೇಶೀಭಾಷೆಗೆ, ಮಾತೃಭಾಷೆಗೆ ಕಡ್ಡಾಯಗೊಳಿಸುವ ಕಾನೂನುಗಳನ್ನು ರೂಪಿಸಬೇಕಾದ ವಿಪರ್ಯಾಸ ಸೃಷ್ಟಿಯಾಯ್ತು.

        ನಿಜವಾಗಿಯೂ ಭಾರತದ ವೈಶಿಷ್ಟ್ಯತೆಯಿರುವುದೇ ವೈವಿಧ್ಯತೆ ಯಲ್ಲಿ. ಇಲ್ಲಿ ವಿಭಿನ್ನವಾದ ಹಲವಾರು ಸಂಸ್ಕøತಿಗಳಿವೆ, ಅವುಗಳಿಗೆ ವಿಶಿಷ್ಟ ಆಯಾಮಗಳಿವೆ. ಅದು ಭಾಷೆಯನ್ನು ಒಳಗೊಂಡ ವೈವಿಧ್ಯತೆ. ನೂರಾರು ವರ್ಷಗಳಿಂದ ಒಂದು ನಿರ್ದಿಷ್ಟ ಭೌಗೋಳಿಕ ವಲಯದಲ್ಲಿ ಚೌಕಟ್ಟನ್ನು ರೂಪಿಸಿಕೊಂಡಂತೆ, ಭಾಷಾವಾರು ಹಿನ್ನೆಲೆಯಲ್ಲಿಯೂ ಕೆಲವೊಂದು ಸಾಮಾನ್ಯ ರೂಪುರೇಷೆಗಳಲ್ಲಿ ಬದುಕಿರುವ ಹಿರಿಮೆಗಳಿವೆ. ಆ ಹಿರಿಮೆಗೆ ಅದರದ್ದೇ ಆದ ಪರಂಪರೆ, ಇತಿಹಾಸ, ಸಾಮಾಜಿಕ, ಧಾರ್ಮಿಕ ಹಿನ್ನೆಲೆಗಳು ಇವೆ. ಬಹಳ ಸಲ ಭಾವುಕ ಎನ್ನಬಹುದಾದ ಗ್ರಹಿಕೆಯೂ ಅವುಗಳಿಗಿರುವುದುಂಟು.

        ಬದಲಾವಣೆ ನಿಸರ್ಗ ನಿಯಮವಾದಂತೆ ಜಗತ್ತಿನ ನಿಯಮವೂ ಹೌದು. ಅದು ಕ್ರಿಯಾಶೀಲತೆಯ ಸಂಕೇತ. ಮನುಷ್ಯನ ಬೌದ್ಧಿಕ-ಮಾನಸಿಕ ವಿಕಾಸಶೀಲತೆಗೆ ತನ್ನನ್ನು ತಾನು ಅನಿವಾರ್ಯವೆನ್ನುವಂತೆ ಒಡ್ಡಿಕೊಳ್ಳಲೇ ಬೇಕು. ಇದು ಭಾಷೆಗೂ ಅನ್ವಯಿಸುವಂತಹುದು ಆದರೆ ಭಾಷೆಯನ್ನು ಹೀಗೆ ಅನ್ವಯಗೊಳಿಸುವ, ಉನ್ನತಿಗೊಳಿಸುವ ಪ್ರಜ್ಞೆಯಾದರೂ ಆ ನೆಲದ ಭಾಷೆಯ ಋಣದ ಮನುಷ್ಯನದ್ದೇ ಆಗಬೇಕು. ಜ್ಞಾನ, ಅರಿವುಗಳ ಸಂವಹನವೇ ಭಾಷೆ ಅಂತಹ ಭಾಷೆಯ ಮೂಲಕವೇ ಎಲ್ಲವನ್ನು ಪಡೆದುಕೊಂಡವರು ಅದನ್ನು ಉಳಿಸಿ-ಬೆಳಸುವ ಬಗೆಗೂ ಅಷ್ಟೇ ಪ್ರಾಮಾಣಿಕವಾದ ಕಳಕಳಿಯೊಂದಿಗೆ ಕರ್ತವ್ಯವೆನ್ನುವಂತೆ ತೊಡಗಿಸಿಕೊಳ್ಳ ಬೇಕು ಇದು ಖಂಡಿತಾ ಅಸಾಧ್ಯವಾದ ಸಂಗತಿಯಲ್ಲ.

        ಮಾತೃಭಾಷೆ ಎನ್ನುವುದು ಖಂಡಿತವಾಗಿಯೂ ಅಸ್ತಿತ್ವದ ಅರ್ಥವೇ ಹೌದು. ಇಂದು ಜಗತ್ತು ಬೇರೆ-ಬೇರೆ ಕಾರಣಗಳನ್ನು ಮುಂದೊಡ್ಡಿ, ಬೇರೆಯದ್ದೇ ಪ್ರಭಾವಗಳಲ್ಲಿ ಪರಭಾಷೆಯನ್ನು ಹೇರಿದಂತೆಯೂ ಅನಿವಾರ್ಯತೆಯನ್ನು ಸೃಷ್ಟ್ಟಿಸಬಹುದು. ಈಗ ಆಗುತ್ತಿರುವುದೂ ಅದೇ. ಇಂತಲ್ಲಿ ನಮ್ಮ ಸಾಮಾನ್ಯ ಜ್ಞಾನದ ನಿಲುವಿನಿಂದಲೂ ತೀರ್ಮಾನಗಳನ್ನು ತೆಗೆದುಕೊಳ್ಳಲೇಬೇಕು ನಮ್ಮದಲ್ಲದ ಭಾಷೆ ಎನ್ನುವುದು ಎಲ್ಲದರಂತೆ ಒಂದು ಜ್ಞಾನವಾಗಿ ನಮ್ಮನ್ನು ಒಳಗೊಂಡು ಬೆಳೆಸಬೇಕು. ಅದು ನಮ್ಮತನವನ್ನು ದ್ವೇಷಿಸುವಂತೆ ಕಣ್ಣುಮುಚ್ಚಿಸುವುದಾಗಬಾರದು ಇಂತಾದಲ್ಲಿ ಅದು ಕೊಂದುಕೊಂಡು ಬದುಕುವ ದುರಂತವಾಗಿಬಿಡಬಹುದು.....

       ಈ ಮೇಲಿನ ಮಾತುಗಳನ್ನು ಸಮಗ್ರತೆಯ ರೂಪದಲ್ಲಿ ಯಾವುದೇಭಾಷೆಯ ಸಮಸ್ಯೆ-ಸವಾಲುಗಳ ಹಿನ್ನೆಲೆಯಲ್ಲಿಯೂ ಗಮನಿಸ ಬಹುದು. ‘ದೇಸಿ’ ಎನ್ನುವ ರೂಪದಲ್ಲಿ ಗಮನಿಸುವ ಹೊತ್ತಿಗೂ ಅದು ಶತಮಾನಗಳ ಇತಿಹಾಸ-ಪರಂಪರೆಯಿಂದಲೇ ಅಪಾರವಾದದ್ದನ್ನು ಕಟ್ಟಿ-ಬೆಳಸಿದ್ದೂ ಆಗಿರುತ್ತದೆ. ಆದರೆ ಈ ದಿನಗಳಲ್ಲಿ ಆಧುನಿಕತೆ, ಹೊಸ ಹೊಸ ಅನ್ವೇಷಣೆಗಳ ಅರ್ಥದಲ್ಲಿ ಬದುಕನ್ನು ದಿನೇ ದಿನೇ ಸರಳತೆಯ, ಸಂವಹನದ ಅರ್ಥದಿಂದ ಒಳಗೊಂಡಂತೆ ಕಾಣುತ್ತಿದ್ದರೂ ಸಾಕಷ್ಟು ಅಪಾಯಗಳನ್ನು ಸೃಷ್ಟಿಸುತ್ತಿದೆ. ಜಾಗತೀಕರಣ-ಖಾಸಗೀಕರಣ ಎಂಬ ಮಾತುಗಳು ಎಲ್ಲಾ ಸಂದರ್ಭದಲ್ಲಿ ತನ್ನ ವ್ಯಾಪ್ತಿಯಾಚೆಗೂ ಪ್ರಭಾವ ಬೀರುವ ವಿಪರ್ಯಾಸ ನಡೆದಿದೆ. ಎಚ್ಚರಿಕೆ ಎನ್ನುವುದು ಅನಿವಾರ್ಯ ಎಂಬ ಹಿನ್ನೆಲೆಯಲ್ಲಿ ಸವಾಲುಗಳ ಸ್ವರೂಪವನ್ನೇ ಅವಲೋಕಿಸಬಹುದು.

        ಈ ದೇಶಕ್ಕೆ ಅಪರೂಪವೆನ್ನುವ, ಶ್ರೀಮಂತ, ಅದ್ಭುತ ಎನ್ನುವ ಸಾಹಿತ್ಯವನ್ನು ನೀಡಿ ಸಂಸ್ಕøತ-ಪ್ರಾಕೃತಗಳನ್ನು ಇಂದು ಅಧ್ಯಯನದ ಹೊತ್ತಿಗೆ ಮಾತೃಭಾಷೆ ಎನ್ನಲಾಗುತ್ತದೆ. ಒಂದು ಕಾಲದ ಶ್ರೇಷ್ಠತೆ ಎನ್ನುವ ಸನಾತನ ನಂಬಿಕೆ ಜೀವಂತವಾಗಿ ನಿರಂತರ ಎನ್ನುವಂತೆ ವಾಸ್ತವದಲ್ಲಿ ಪ್ರಚಲಿತವಾಗಲಿಲ್ಲವೆನ್ನುವುದೇ ಭಾಷೆಯ ಮಿತಿಯನ್ನು ಹೇಳುವಂತಹುದು ಇಂದಿಗೂ ಅದನ್ನು ಉಳಿಸಿ-ಬೆಳಸುವ ಹೋರಾಟವೊಂದು ಹಕ್ಕಿನ ರೂಪದಲ್ಲಿ ನಡೆಯುತ್ತಿರುವುದು ಗಮನಾರ್ಹ. ‘ಕನ್ನಡ ಭಾಷೆ’ಯ ಸಂದರ್ಭಕ್ಕೆ ಈ ಬಗೆಯ ವಿಪರ್ಯಾಸ ಒದಗಿಲ್ಲ ಅಂದರೆ ಕನ್ನಡ ಇಂದು ಒಂದು ಖಚಿತವಾದ ಜೀವಂತ ಭಾಷೆ. ಅದರೊಂದಿಗೆ ಒಂದು ನಾಡು, ಕಾಲ-ಜನಾಂಗವೆನ್ನುವ ಬಹುನೆಲೆಯ ಜೊತೆಗೆ ಗಟ್ಟಿಯಾದ ಸಂಸ್ಕøತಿಯೊಂದು ದಟ್ಟವಾದ ರೂಪದಲ್ಲಿ ಸಿಗುತ್ತದೆ. ಪರಂಪರೆ ಎನ್ನುವ ಮಾತು ಕೇವಲ ಪ್ರಾಚೀನತೆಯ ರೂಪಕ್ಕಷ್ಟೇ ಸಲ್ಲುವುದಿಲ್ಲ ಬದಲಾಗಿ ಅದರ ಮಹತ್ವವನ್ನು ಪ್ರತಿನಿಧಿಸುತ್ತದೆ.

       ಈ ದೇಶದ ಮೂಲನಿವಾಸಿಗಳ ವಾದದಲ್ಲಿ ದ್ರಾವಿಡರ ಜನಾಂಗ ಗಟ್ಟಿಯಾಗಿ ಉಳಿಯಿತೆನ್ನುವುದು ಇತಿಹಾಸ. ಇದು ಇಡೀ ದೇಶದ ತುಂಬೆಲ್ಲಾ ತನ್ನ ಬದುಕನ್ನು ಕಟ್ಟಿಕೊಂಡದ್ದಕ್ಕೆ ಪುರಾವೆಗಳಿವೆ. ಹಾಗೆಯೇ ನಿಸರ್ಗ ಪ್ರೀತಿಯ ನಾಗರೀಕವೆನ್ನುವ ಶ್ರಮದ ಬದುಕು ಇವರದಾಗಿತ್ತು ಎನ್ನುವುದೇ ಅವರ ಜೀವನ ಪ್ರೀತಿಯ ಗಾಢತೆಯನ್ನು ಹೇಳುವಂತಹುದು. ಇಂತಹ ಪ್ರಾಚೀನ ದ್ರಾವಿಡರ ಮೂಲಭಾಷೆಗಳಲ್ಲಿ ಕನ್ನಡವೂ ಒಂದು ಎನ್ನುವುದು ಮುಖ್ಯವಾದ ಸಂಗತಿ. ಕ್ರಿ.ಪೂ. ಹಿಂದಕ್ಕೆ ಕನ್ನಡ, ಕನ್ನಡಿಗರ ಅಸ್ತಿತ್ವವಿತ್ತು ಎಂಬ ವಾದಗಳು ನಮ್ಮೊಂದಿಗಿವೆ. ಅಂದರೆ ಪ್ರಾಚೀನತೆಯ ಸಂದರ್ಭದ ಹಿರಿತನದಲ್ಲಿ ಕನ್ನಡದ್ದು ಮೊದಲಸಾಲಿನ ಹಿರಿಮೆ. ಅಂದರೆ ಒಂದು ಜನಾಂಗವೊಂದು ವಿಶಿಷ್ಟವೆನ್ನುವ ಭಾಷೆಯೊಂದನ್ನು ತನ್ನ ಸಂವಹನದ ಸಾಧ್ಯತೆಯನ್ನಾಗಿಸಿಕೊಂಡು ಅದನ್ನೇ ಬದುಕಾಗಿಸಿಕೊಂಡು, ಅದನ್ನೇ ಒಂದು ಅದ್ಭುತ ಸಂಸ್ಕೃತಿಯನ್ನಾಗಿ ರೂಪಿಸಿದ್ದು ಈಗ ಇತಿಹಾಸ. ಈಚೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದ್ದು ಕೂಡ ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಸಮೃದ್ಧಿಗೆ ದೊರಕಿದ ಒಂದು ದೃಢೀಕರಣವೆನ್ನಬಹುದು.

        ಉತ್ತರ ಭಾರತವನ್ನು ಆಕ್ರಮಿಸಿಕೊಂಡು ಆಳಿದ್ದ ರಾಜ ಮನೆತನಗಳು, ಸುವರ್ಣಯುಗವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದ್ದ ಸಾಮ್ರಾಜ್ಯಗಳು, ಇಡೀ ದೇಶವನ್ನು ಪ್ರಭಾವಿಸಿದ ಭಕ್ತಿ ಚಳುವಳಿಗಳು, ದ್ವೈತ, ಅದ್ವೈತ, ವಿಶಿಷ್ಟಾದ್ವೈತದ ಅಸ್ತಿತ್ವಗಳಿಗೆ ನೆಲೆ ನೀಡಿದ ಹಿರಿಮೆಗಳೆಲ್ಲ ಕನ್ನಡನಾಡು-ನುಡಿಗಿದೆ. ಇಲ್ಲಿ ಕನ್ನಡ, ಕರ್ನಾಟಕವೆನ್ನುವುದು ಒಂದು ಸಮುದಾಯವಾಗಿ, ಆ ಕಾರಣಕ್ಕೆ ಶಕ್ತಿಯಾಗಿಯೇ ದಾಖಲಾಗಿತ್ತೆನ್ನುವುದು ಗಮನಾರ್ಹ. ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ ಹೀಗೆ ಅನಂತ ಸಾಧ್ಯತೆಗಳಲೆಲ್ಲಾ ತನ್ನ ಅತ್ಯುತ್ಕøಷ್ಟ ಎನ್ನುವಂತಹ ಸಾಧನೆಗಳನ್ನ ಸಾಧಿಸಿದ್ದು ಇತಿಹಾಸ.

        ಈ ಮೊದಲಲ್ಲಿ ನಾವು ಗಮನಿಸಿದಂತೆ ಎಲ್ಲಾ ದೇಸೀ ಭಾಷೆಗಳಂತೆ ಕನ್ನಡವೂ ಹೀಗೆ ತನ್ನ ಅನನ್ಯತೆಗಳನ್ನು ಉಳಿಸಿಕೊಳ್ಳುವಲ್ಲಿ ಸಾಕಷ್ಟು ಹೋರಾಟಗಳನ್ನು, ಸವಾಲನ್ನು ಎದುರಿಸಿದೆ. ತನ್ನ ಗಟ್ಟಿತನದ ಕಾರಣದಿಂದಲೇ ಅದು ತನ್ನ ಅಸ್ಮಿತತೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗಿದೆ. ನಾಡಿನ ಸುತ್ತಲ ಭಾಷೆ, ಸಂಸ್ಕøತಿ, ಹೊರ ನಾಡಿನ ಆಕ್ರಮಣಶೀಲತೆಯ ಧಾಳಿಗಳು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನೆಲೆಯಲ್ಲಿಯೂ ಸಂಘಟಿತವಾಗಿವೆ. ಒಳಿತಿದ್ದಲ್ಲಿ ಅದನ್ನು ಒಪ್ಪಿಕೊಂಡು, ಇಲ್ಲವಾದಲ್ಲಿ ಧಿಕ್ಕರಿಸಿಕೊಂಡು ಸರಿತಪ್ಪುಗಳ ನಡುವಿನ ಸಂಘರ್ಷದಲ್ಲಿ ತನ್ನತನವನ್ನು ಕಾಯ್ದುಕೊಂಡದ್ದು ಸಾಮಾನ್ಯವಾದ ಸಂಗತಿಯಲ್ಲ.

       “ಕಾವೇರಿಯಿಂದ ಗೋದಾವರಿವರೆಗೂ ಇದ್ದ ನಾಡು ಕನ್ನಡ ನಾಡು” ಎನ್ನುವ ಕವಿರಾಜಮಾರ್ಗಕಾರ ಅಲ್ಲಿನ ಜನರ ಶ್ರೇಷ್ಠತೆ ಗಳನ್ನು ಪಟ್ಟಿಮಾಡುತ್ತಾನೆ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎನ್ನುವ ಮೂಲಕ ಈ ನಾಡಿನ ಜನರ ಜ್ಞಾನ-ಕಾವ್ಯ ಪ್ರಯೋಗದ ಶಕ್ತಿ-ಪ್ರತಿಭೆಗಳನ್ನು ಕುರಿತು ಮಾತನಾಡುತ್ತಾನೆ. “ಸಾಧುಗೆ ಸಾಧು ಮಾಧುರ್ಯಂಗೆಮಾಧುರ್ಯಂ ಬಾಧಿಪ್ಪಕಲಿಗೆ ಕಲಿಯುಗ ವಿಪರೀತನ್” ಎಂಬಂತೆ ಹೃದಯವಂತಿಕೆ ಎಂತೋ ಅಷ್ಟೇ ಸ್ವಾಭಿಮಾನಿಯಾಗಿ ಯೋಧನಂತೆಯೂ ಬದುಕಿದ ಹಿರಿಮೆಯನ್ನು ಶಾಸನಗಳು ದಾಖಲಿಸಿವೆ. ‘ಮಾತೆಂಬುದು ಜ್ಯೋತಿರ್ಲಿಂಗ’ವೆನ್ನುತ್ತಲೇ ಶುದ್ಧಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ ಶರಣರು ‘ಕಾಯಕವೇ ಕೈಲಾಸ’ ಎನ್ನುವ ತತ್ವವನ್ನು ಬದುಕನ್ನಾಗಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ದಾಸೋಹದಂತಹ ವಿಶಿಷ್ಟ ಪರಿಕಲ್ಪನೆಯಲ್ಲಿ ಜಗತ್ತಿಗೆ ಸಮಾನತೆಯ ಹರಿಕಾರರಾಗಲು ಯತ್ನಿಸಿದ್ದಾರೆ.

        ಬಹುಶಃ ಈ ದೇಶದ ಮತ್ತೆಲ್ಲಿಯೂ ಕಾಣಲಾಗದಷ್ಟು ವೈಚಾರಿಕತೆ ಯನ್ನು ನಮ್ಮ ನೆಲವು ತನ್ನದಾಗಿಸಿಕೊಂಡು ಮಾದರಿಯಾಗಿ ತ್ತೆನ್ನುವುದು ದಾಖಲಾರ್ಹ. ಇಂತಹ ಪರಿವರ್ತನೆ ಅಥವಾ ಸಾಮಾಜಿಕ ಕ್ರಾಂತಿ ದಿಢೀರನೆ ನಡೆದದ್ದಾಗಿರಲಿಲ್ಲ. ಈ ಬಗೆಯ ಗುಣವನ್ನು ಈ ನೆಲದ ಸತ್ಯದಲ್ಲಿಯೂ ಇದ್ದಿತೇನೋ ಎಂಬಂತೆ ಅನಿಸುವುದಾದರೂ ಜನರ ಬದುಕಿನ ಆಶೋತ್ತರಗಳಿಗೆ ಪ್ರತಿಕ್ರಿಯೆಯ ಸ್ವರೂಪದಂತಾಗಿತ್ತು, ಬದುಕಿನ ಪ್ರೀತಿಯೇ ದೊಡ್ಡದಾಗಿತ್ತು ಎಂದುಕೊಂಡಿದ್ದ ಜನರ ಮನಸ್ಥಿತಿಯನ್ನು ಹೇಳುವಂತಾಗಿತ್ತು. ಇದು ಒಂದು ಕಾಲಕ್ಕೆ ಮಿತಿಗೊಂಡದ್ದಾಗಲಿಲ್ಲ ಮುಂದೆ ಕನಕದಾಸನಂತಹ ಸಂತನೂ ಕುಲವೆಂದು ಹೊಡೆದಾಡುವ ಜನರನ್ನು ‘ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ” ಎಂದು ಪ್ರಶ್ನಿಸುವುದು ಸಾಧ್ಯವಾಯಿತು. ಅದು ಆಧುನಿಕತೆಯ ಹೊತ್ತಿಗೂ ಒಂದು ಚಳುವಳಿಯ ರೂಪವೇ ಆಗುವುದಕ್ಕೆ ಪೂರಕವೂ ಆಗಿತ್ತೆನ್ನಬಹುದು.

        ಈ ಮೇಲಿನ ಸೂಚ್ಯ ಸಂಗತಿಗಳೆಲ್ಲದರ ಹಿಂದೆ ಇರುವ ಸಂಗತಿ ಸ್ಪಷ್ಟ. ನಿರಂತರವಾದ ಕ್ರಿಯಾಶೀಲತೆ ಎನ್ನುವುದು ನಾಡಿನ ಮುಖ್ಯ ಲಕ್ಷಣವೇ ಆಗಿತ್ತು ಅದು ಎಲ್ಲಾ ಸವಾಲು-ಸಂಘರ್ಷಗಳ ನಡುವೆಯೂ ತನ್ನತನವನ್ನು ಉಳಿಸಿಕೊಳ್ಳುವ ಬದ್ಧತೆಗೂ ಸಂಬಂಧಿಸಿದ್ದಾಗಿತ್ತು. ಹಾಗಾಗಿಯೇ ಸುದೀರ್ಘವಾದ, ಅಷ್ಟೇ ಶ್ರೇಷ್ಠವಾದ, ಸಾರ್ವಕಾಲಿಕ ಗಟ್ಟಿತನವನ್ನೇ ಪ್ರತಿಪಾದಿಸಿಕೊಳ್ಳಬಹುದಾದ ಶಕ್ತಿಯು ಕನ್ನಡ-ಕರ್ನಾಟಕಕ್ಕೆ ಇತ್ತು ಎನ್ನಬಹುದು.

        ಒಂದು ಭಾಷೆ ಅಸ್ತಿತ್ವ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿಂಹಪಾಲನ್ನು ‘ಸಾಹಿತ್ಯ’ವೇ ಹೊಂದಿರುತ್ತದೆ ಎನ್ನುವ ಮಾತಾದರೂ ಸರಳವಾಗಿ ಮೇಲ್ನೋಟಕ್ಕೆ ನಿಜ ಎನಿಸುವುದುಂಟು. ಸಂವಹನ ಎನ್ನುವುದು ಇಡಿಯಾದ ಅರ್ಥವಾದರೂ ಅದರ ಮುಂದುವರಿದ ರೂಪವಾಗಿಯೇ ಸಾಹಿತ್ಯವನ್ನು ಪರಿಭಾವಿಸಬಹುದು. ಇದರಲ್ಲಿ ಜಾನಪದ ಮತ್ತು ಶಿಷ್ಟ ಎಂದೂ ವಿಂಗಡಿಸಿಕೊಳ್ಳಲು ಅವಕಾಶವಿದೆ. ‘ಜಾನಪದ’ ಎನ್ನುವಲ್ಲಿ ‘ಮೌಖಿಕ’ ಪರಂಪರೆಗೆ ಹೆಚ್ಚಿನ ಒತ್ತು ನೀಡಬಹುದು ‘ಶಿಷ್ಟ’ ಎಂಬಲ್ಲಿ ‘ಅಕ್ಷರ’ ದಾಖಲೆಗಳನ್ನು ಮಹತ್ವವಾಗಿ ಗಮನಿಸಬಹುದು. ಜಾನಪದ ಎನ್ನುವಲ್ಲಿನ ಅನುಭವಗಳು ಅನ್ನಿಸಿದ ತೀವ್ರತೆಯಲ್ಲಿಯೇ ಹಾಡು, ಕತೆ, ಒಗಟು, ಒಡಪು ಇತ್ಯಾದಿಯಾಗಿ ಸೃಷ್ಟಿಯಾಗುತ್ತದೆ. ಇಲ್ಲಿ ಸೃಷ್ಟಿಕರ್ತ ಮುಖ್ಯವಾಗಿ ಅಕ್ಷರಸ್ಥನೇ ಆಗಬೇಕೆಂದಿಲ್ಲ. ಅವನ ಮಾತುಗಳು ‘ಗಟ್ಟಿ’ ಎನಿಸಿದಲ್ಲಿ ಅದು ಅವನಿಂದ ಸುತ್ತಮುತ್ತಲಿಗೆ, ಸಮುದಾಯಕ್ಕೆ, ಸಮಾಜಕ್ಕೆ ಎಂಬಂತೆ ಹರಡಿಕೊಳ್ಳಬಹುದು ಅಂದರೆ ಬಾಯಿಂದ ಬಾಯಿಗೆ ಹರಡುವ ಸಾಹಿತ್ಯದ ಬಗೆಯಿದು. ಬಹುಪಾಲು ಒಂದು ಗಟ್ಟಿಯಾದ, ಸಾರ್ಥಕ ಬದುಕು ಸಾಧ್ಯವಾಗಿರುವ ನೆಲದಲ್ಲಿ ಹೀಗೆ ‘ಜನಪದ’ ಎನ್ನುವುದು ಉತ್ತಮ ಸಾಹಿತ್ಯವಾಗಿ ಮೌಖಿಕ ದಾಖಲೆಯಾಗಿರುವುದು ಸಾಧ್ಯ. ಅನುಭವ ತಕ್ಷಣಕ್ಕೆ ಕಾವ್ಯವಾಗುವ ಬಗೆ ಯಾವುದೇ ಶಿಷ್ಟ ಪರಂಪರೆಯ ಸಾಹಿತ್ಯದ ‘ಸ್ಫೂರ್ತಿ’ ತತ್ವಕ್ಕಿಂತ ಕಡಿಮೆಯದಲ್ಲವೆಂದೇ ಹೇಳಬಹುದು.

         ಇವು ಬದುಕಿನ ಹಿಂದಿನ ದಾಖಲೆಗಳಾಗಬಹುದು, ಅವರದ್ದೇ ಸಮಕಾಲೀನ ಸಂಗತಿಗಳಾಗಬಹುದು, ನಿನ್ನೆ-ಇಂದುಗಳ ಅರಿವಿನಲ್ಲಿ ನಾಳೆಗಳನ್ನು ಕಲ್ಪಿಸುವ ಬಗೆಗೂ ಆಗಬಹುದು. ಈ ನೆಲದ ಮಹಾ ಕಾವ್ಯಗಳೇ ಮೂಲದಲ್ಲಿ ‘ಜನಪದ’ವಾಗಿತ್ತೆನ್ನುವ ಮಾತೇ ಇದರ ಮಹತ್ವ ಮತ್ತು ಶ್ರೇಷ್ಠತೆಯನ್ನು ಹೇಳುವಂತಹುದು. ಕರ್ನಾಟಕ ಜನಪದವು ಅತ್ಯಂತ ಹಳೆಯ ಜನಪದಗಳಲ್ಲಿ ಒಂದೆಂಬ ಸತ್ಯವೇ ಅದರ ಹಿರಿಮೆ-ಗರಿಮೆಯನ್ನು ಪ್ರಸ್ತುತಪಡಿಸುತ್ತಿದೆ.

         ನಮ್ಮ ಜನಪದದ ವಕ್ತøಗಳಲ್ಲಿ ಗಂಡು-ಹೆಣ್ಣೆಂಬ ತರತಮದ ದೊಡ್ಡ ಭೇದಗಳಿಲ್ಲ ಆಧುನಿಕತೆಯ ಉತ್ಕರ್ಷವೆನ್ನುವ ಈ ಹೊತ್ತಿಗೂ ಸಾಧ್ಯವಾಗದಷ್ಟು ಅಭಿವ್ಯಕ್ತಿಯ ಅನಂತತೆ ನಮ್ಮ ಜಾನಪದ ಮಹಿಳೆಯರಿಗಿತ್ತು ಅವರು ತಮ್ಮ ನಡೆ-ನುಡಿ, ಕ್ರಿಯೆ, ಸಮಾಜ, ಸಂಬಂಧ, ಪ್ರಕೃತಿ-ದೇವರು ಎಂಬ ಎಲ್ಲಾ ನೆಲೆಗಳಲ್ಲೂ ತಮ್ಮ ಅನುಭವಗಳನ್ನು ಸಹಜವೆನ್ನುವಂತೆಯೇ ಹಾಡಿಕೊಂಡರು, ಆಡಿಕೊಂಡರು. ಅವು ಗಟ್ಟಿಯಾದ ಸಾಹಿತ್ಯ ಪ್ರಕಾರಗಳಾದ್ದರಿಂದಲೇ ತಮ್ಮ ನಿರಂತರತೆಯನ್ನು ಕಾಯ್ದುಕೊಂಡು ನೆನಪುಗಳ ಆಸ್ತಿಯಾಗಿಯೇ ಉಳಿದು ಬಂದದ್ದು ಗಮನಾರ್ಹ. ಹೀಗೆ ಬದುಕಿನ ಎಲ್ಲಾ ನೆಲೆಗಳನ್ನು ನಮ್ಮ ಜನಪದರು ಸ್ಪರ್ಶಿಸಿದ್ದು, ಹಾಡಿಕೊಂಡದ್ದು, ಕತೆಗಳಾಗಿಸಿದ್ದು ಕನ್ನಡಭಾಷೆಯಿಂದಲೇ.... ಎನ್ನುವುದು ಗಮನಾರ್ಹ. ಇದರ ಮೂಲಕವೇ ಬದುಕಿನ ಕಷ್ಟ ಸುಖಗಳನ್ನು ಅನುಭವಿಸಿದ್ದು ಖಚಿತವಾಗಿ ನಿಲ್ಲುವುದು ಇತರರಿಗೆ ಮಾದರಿಯಾಗುವುದು ‘ಕನ್ನಡ’ ಎನ್ನುವುದನ್ನೇ ಒಂದು ಸಂಸ್ಕøತಿಯಾಗಿ ರೂಪಿಸುವುದು ಅವರಿಂದ ಸಾಧ್ಯವಾಯಿತು. ಇಂತಲ್ಲಿ ನಮಗೆ ಕಾಡುವ ಮುಖ್ಯ ಪ್ರಶ್ನೆ ಎಂದರೆ ಈ ಹೊತ್ತಿಗೆ ಏಕೆ ಸಾಧ್ಯವಾಗುತ್ತಿಲ್ಲ? ಕನ್ನಡಭಾಷೆಗೆ ಸಾಕಷ್ಟು ಸಮಸ್ಯೆಗಳಿವೆ ಎನಿಸುತ್ತಿರುವುದು ಯಾಕೆ?.

         ಕನ್ನಡ ಭಾಷೆಯ, ಸಾಹಿತ್ಯದ, ಸಂಸ್ಕೃತಿಯ ಪ್ರಾಚೀನತೆಯನ್ನು, ಘನತೆಯನ್ನು, ವೈಭವದ ಇತಿಹಾಸವನ್ನು ಕುರಿತು ಇಂದಿಗೆ ಮಾತನಾಡುವುದು ಒಂದು ‘ಭಾವುಕಸ್ಥಿತಿ’ ಜೊತೆಗೆ ಅದೊಂದು ಅಪರಿಮಿತ ಹೆಮ್ಮೆ. ನಾವು ಸಮೃದ್ಧ ಪರಂಪರೆಯ ವಕ್ತಾರರೆನ್ನುವುದು ಎಲ್ಲಾ ಕಾಲಕ್ಕೂ ಸಂಭ್ರಮ ತರುವ ಸಂಗತಿಯೇ ಹೌದು. ಆದರೆ ಅಷ್ಟರಿಂದಲೇ ಒಂದು ಭಾಷೆ, ನಾಡು ಉದ್ಧಾರವಾಗಿಹೋಗುವುದಿಲ್ಲ ಕಾಲ-ಪ್ರಜ್ಞೆ ಬದಲಾಗಿದೆ ಎನ್ನುವುದರೊಂದಿಗೆ ಎಲ್ಲವೂ ಉನ್ನತೀಕರಣಗೊಂಡೇ ಮುಖಾ-ಮುಖಿ ಯಾಗುವುದು ತುರ್ತು ಹೌದು. ಹಾಗೆಂದು ಜವಾಬ್ದಾರಿಯ ಅರ್ಥವನ್ನು ಯಾರಿಗೋ ವರ್ಗಾಯಿಸಿ ಕುಳಿತುಕೊಳ್ಳಬೇಕಿಲ್ಲ. ವಾಸ್ತವದ ಸಾಧ್ಯತೆಯೇ ಬೇರೆಯಾಗಿರುತ್ತದೆ. ಬರಗೂರು ರಾಮಚಂದ್ರಪ್ಪನವರು ಹೇಳುವಂತೆ “ಕನ್ನಡ ಮತ್ತು ಕರ್ನಾಟಕವನ್ನು ಕುರಿತ ಅಭಿಮಾನದ ಅಭಿವ್ಯಕ್ತಿಗೆ ದೊಡ್ಡ ಇತಿಹಾಸವಿದೆ. ಯಾವುದೇ ನಾಡು-ನುಡಿಗಳ ಬಗ್ಗೆ ಮೂಡಬಹುದಾದ ಮತ್ತು ಮೂಡಿಸಬಹುದಾದ ಅಭಿಮಾನದ ಅಂಶಗಳು ನಮ್ಮಲ್ಲೂ ಕೆಲಸಮಾಡಿವೆ. ಆದರೆ ಎಲ್ಲಾ ಕಾಲಘಟ್ಟಗಳಲ್ಲೂ ಭಾಷಾಭಿಮಾನವೆನ್ನುವುದು ಒಂದೇ ಮಾದರಿಯಲ್ಲಿ ಇರುತ್ತದೆಯೆ? ಒಂದೇ ಮಾದರಿಯಲ್ಲಿ ಇರಲು ಸಾಧ್ಯವೇ? ಅಂದಂದಿನ ಚಲನಶೀಲತೆಗ ನುಗುಣವಾಗಿ ಚಿಂತನಶೀಲತೆಯ ಸ್ವರೂಪವೂ ನಿರ್ಧಾರವಾಗುವುದಿಲ್ಲವೆ? ಭಾಷಾಭಿಮಾನವು ತನ್ನ ಮೂಲನೆಲೆಗಳನ್ನು ಬಿಟ್ಟುಕೊಡದೆ ಬದಲಾ ಗುತ್ತಿರುವ ಸನ್ನಿವೇಶಕ್ಕನುಗುಣವಾಗಿ ಹೊಸ ಸವಾಲುಗಳಿಗೆ ಉತ್ತರ ಹುಡುಕುವ ಮತ್ತು ಕೊಡುವ ತಾತ್ವಿಕ ಗಟ್ಟಿತನವನ್ನು ಪಡೆಯಬೇಕಲ್ಲವೆ? ಈ ರೀತಿಯ ಅನೇಕ ಪ್ರಶ್ನೆಗಳನ್ನು ಹಾಕಿಕೊಳ್ಳ್ಳುವುದು ಇಂದಿನ ಅಗತ್ಯವೆಂದು ಕಾಣುತ್ತದೆ. ಯಾಕೆಂದರೆ ಪ್ರಶ್ನೆಗಳಿಗೆ ಮುಖಾಮುಖಿಯಾಗದೆ ಸೈದ್ಧಾಂತಿಕ ಸ್ಪಷ್ಟತೆ ಲಭ್ಯವಾಗುವುದು ಕಷ್ಟ” (ಕನ್ನಡಾಭಿಮಾನ, ಕನ್ನಡಪ್ರಜ್ಞೆ. ಪು. 1).

         ಇದು ಎಲ್ಲಾ ದೇಸೀ ಭಾಷೆಗಳೂ ಎದುರಿಸುವ ಗಂಭೀರವಾದ ಸವಾಲು ಒಬ್ಬ ಸಾಮಾನ್ಯ ಪ್ರಜೆಯಿಂದ ಹಿಡಿದು ಅಧಿಕಾರದ ಉನ್ನತ ಪೀಠದಲ್ಲಿ ಕುಳಿತವರಿಗೆಲ್ಲಾ ಇದು ಸಂಬಂಧಿಸಿರುತ್ತದೆ. ಪಲಾಯನವಾದಗಳು ಸಮಸ್ಯೆಯನ್ನು ಬಿಡಿಸುವುದಿಲ್ಲ.

        ಈ ಚರ್ಚೆಯ ಆರಂಭಕ್ಕೆ ಗಮನಿಸಿದಂತ ಕನ್ನಡಭಾಷೆ ತನ್ನ ಸಾಹಿತ್ಯಾರಂಭ ಕಾಲದಲ್ಲಿ ಅಂದರೆ ಪ್ರಾಚೀನ ಕಾಲಕ್ಕೂ ಸಮಸ್ಯೆಯನ್ನು ಎದುರಿಸಿದ್ದಿದೆ. ಸಂಸ್ಕøತ, ಪ್ರಾಕೃತ ಇವೇ ಮೊದಲಾದ ಭಾಷೆಗಳ ದಟ್ಟ ಪ್ರಭಾವದಿಂದ ಪಾರಾಗಿ ಸೃಜನಶೀಲ ಸಾಹಿತ್ಯ ರಚನೆಗೆ ತೊಡಗಿಸಿ ಕೊಂಡದ್ದು ಸಾಮಾನ್ಯ ಸಂಗತಿಯಲ್ಲ. ಕವಿರಾಜಮಾರ್ಗಕಾರ ತನ್ನ ಲಕ್ಷಣ ಗ್ರಂಥದಲ್ಲಿ ನಾಡು, ನುಡಿ, ಜನರನ್ನು ಕುರಿತು ವಿಸ್ತøತವಾಗಿಯೇ ಪ್ರಸ್ತಾಪಿಸುತ್ತಾನೆ ಅವನ ಒಂದು ಮಾತು ಗಮನಾರ್ಹವಾದುದು. ‘ಪೊಲಗೆಡಿಸಿನುಡಿವರ್ ಪಳಗನ್ನಡವ’ ಎನ್ನುತ್ತಾನೆ ಅವನು. ಹಳಗನ್ನಡ ವನ್ನು ಹಾಳುಮಾಡಿ ಮಾತನಾಡುತ್ತಾರೆ ಎಂಬ ಅರ್ಥದಲ್ಲಿ ಅವನಿಗೂ ಹಿಂದೆ ‘ಹಳಗನ್ನಡ’ ಎಂಬ ಪ್ರಸ್ತಾಪವಿದೆ. ನಮ್ಮಲ್ಲಿನ ಪೂರ್ವದಹಳಗನ್ನಡ ಎಂಬ ಮಾತನ್ನು ಈ ಹಿನ್ನೆಲೆಯಲ್ಲಿ ಸ್ಮರಿಸಬಹುದು.  ಕವಿರಾಜಮಾರ್ಗ ಕಾರನಿಗೂ ತನ್ನ ಹಿಂದಿನ ಭಾಷೆಯನ್ನು ಕೆಡಿಸಿಮಾತನಾಡುತ್ತಾರೆ ಎಂಬ ಬೇಸರವಿದೆ, ಆಕ್ಷೇಪಣೆಗಳಿವೆ. ಅಂದರೆ ಭಾಷೆಗೆ ಎಲ್ಲಾಕಾಲಕ್ಕೂ ಸಮಸ್ಯೆಗಳಿವೆ. ಆದರೆ ಸ್ವರೂಪ ಬೇರೆ ಇರಬಹುದು.

        ಭಾಷೆಯ ಮುಖ್ಯ ಗುರಿಯೇ ಇನ್ನೊಬ್ಬರೊಂದಿಗೆ ಸಂವಹನ ನಡೆಸುವುದು ಎನ್ನುವುದಾದರೆ ಅದು ಅರ್ಥೈಸುವ ಬಗೆಗೆ ಸಂಬಂಧಿಸಿ ದ್ದಾಗಿರುತ್ತದೆ. ಅಂದರೆ ಇದಕ್ಕೊಂದು ನಿರಂತರತೆ, ಇತರ ಒಡನಾಟ, ಪ್ರಾದೇಶಿಕತೆ, ವ್ಯಕ್ತಿವಿಶಿಷ್ಟತೆ –ಇತ್ಯಾದಿಯಾದ ಅವಕಾಶ ಗಳಿರುತ್ತವೆ. ಇದು ಒಂದಷ್ಟು ಆಚೀಚೆ ಎನ್ನಬಹುದಾದ ಬದಲಾವಣೆಗೂ ಕಾರಣವಾಗಬಹುದು. ಮೂಲತಃ ಮನುಷ್ಯನ ಮೂಲಗುಣವೆ ಅನುಕೂಲ ಸಿಂಧುವಾದುದು. ಆತ ತನ್ನ ಸರಳತೆಗೆ ಏನನ್ನಾದರೂ ಮಾಡಬಲ್ಲ ಎನ್ನುವುದನ್ನು ಭಾಷೆಯ ಸಂದರ್ಭಕ್ಕೂ ಗಮನಿಸಬಹುದು.

        ಇಂದಿಗೂ ಗ್ರಾಮ್ಯ, ಅನಕ್ಷರಸ್ಥ, ಅಕ್ಷರಸ್ಥ, ಪದವೀಧರ -ಹೀಗೆ ವಿಭಿನ್ನ ನೆಲೆಗಳಲ್ಲಿ ಭಾಷಾಸ್ವರೂಪದ ಅಂತರವನ್ನು ಸೂಕ್ಷ್ಮವಾಗಿ ಗುರುತಿಸಬಹುದು. ಅದು ಪ್ರಾದೇಶಿಕತೆ, ಸುತ್ತಮುತ್ತಲ ಪರಿಸರ ಇತ್ಯಾದಿ ಅಂಶಗಳಿಂದಲೂ ಸಹ ಪ್ರಭಾವಿಸಲ್ಪಡುವ ಸಾಧ್ಯತೆಯಿರುತ್ತದೆ. ಇದು ಬಹುಶಃ ಕವಿರಾಜಮಾರ್ಗಕಾರನ ಕಾಲದಲ್ಲಿಯೂ ತೀರಾ ಭಿನ್ನವಾಗಿರಲಿಕ್ಕಿಲ್ಲ.

        ಮುಂದೆ ಆದಿಕವಿಯಾದ ಪಂಪನು ತನ್ನ ಕಾವ್ಯಕ್ಕೆ ‘ಚಂಪೂ’ವನ್ನು ಪ್ರಕಾರವಾಗಿಸಿಕೊಂಡಾಗ ಅದರ ನಿಷ್ಪತ್ತಿಯಲ್ಲಿಯೂ ದೇಸೀ ಪರವಾದ ಕೆಲವು ಚರ್ಚೆಗಳು ಚಾಲ್ತಿಯಲ್ಲಿರುವುದು ಗಮನಾರ್ಹ. ಸಂಸ್ಕೃತ ಭೂಯಿಷ್ಟವೆನ್ನುವ ಮಾರ್ಗಪರಂಪರೆಯನ್ನು ಅವಲಂಬಿಸಿದರೂ ಪಂಪನಿಗಿದ್ದ ದೇಸೀ ತುಡಿತ ಆಸಕ್ತಿಕರವಾದದ್ದು, ಅವಕಾಶವಿದ್ದಲೆಲ್ಲಾ ಆತ ಕನ್ನಡದ ಪರವಾಗಿಯೇ ನಿಲ್ಲುತ್ತಾನೆ. ಇದು ರನ್ನನಲ್ಲಿ ಮತ್ತಷ್ಟು ವಿಸ್ತೃತವೂ ಗಟ್ಟಿಧ್ವನಿಯೂ ಆಗುತ್ತದೆನ್ನಬಹುದು. ಪಂಪನಿಗಿಂತ ಸರಳವಾಗುವ ರನ್ನನ ಹಿನ್ನೆಲೆ-ಸಾಧನೆ, ಫಲಿತಗಳೂ ಇದಕ್ಕೆ ಪೂರಕವಾಗಿದ್ದವು. ಪೊನ್ನನಲ್ಲಿಯೂ ಈ ಬಗೆಯ ಸಾಮಾನ್ಯ ಲಕ್ಷಣಗಳು ಗುರುತಿಸಬಹುದಾದವು.

         ಮುಂದೆ ಕನ್ನಡದ ಮೊದಲ ಗದ್ಯವೆನ್ನಬಹುದಾದ ವಡ್ಡಾರಾಧನೆಯೊಂದಿಗೆ ಭಾಷೆಯ ಮತ್ತೊಂದು ಮಜಲು ದಾಖಲಾಗುತ್ತದೆ. ಕತೆ ಎನ್ನುವ ಪ್ರಕಾರವೇ ಸರಳವಾಗಿ ದೇಸೀತನವನ್ನು ಪ್ರತಿನಿಧಿಸುವುದರಿಂದಲೂ ಇಡೀ ಕೃತಿ ಕಥೆಯ ರೂಪದಲ್ಲಿ ಸಾಮಾಜಿಕತೆ ಕಾಲಿಕ ಪ್ರತಿಕ್ರಿಯೆಯಂತೆ ಕಂಡುಬರುವುದರಿಂದಲೂ ಸಾಮಾನ್ಯತೆಯ ಮಹತ್ವ ಪಡೆಯುತ್ತಾ ಕನ್ನಡದ ಬದುಕಿನ ವಿವಿಧ ಆಯಾಮಗಳ ಚಿತ್ರಣಕ್ಕೆ ವಡ್ಡಾರಾಧನೆ ಮುಂದಾದಂತಿದೆ.

        ನಂತರಕ್ಕೆ ಬಹಳ ಮುಖ್ಯವಾದ ದೇಸೀ ಚಿಂತನೆಗೆ-ಚರ್ಚೆಗೆ ಭಾಷಿಕ ಪ್ರಜ್ಞೆಗೆ ಚಾಲನೆ ಕೊಟ್ಟವನು ನಯಸೇನ. ಅವನ ಏಕೈಕ ಕೃತಿ ‘ಧರ್ಮಾಮೃತ’ ಜೈನ ಧರ್ಮದ ಶ್ರೇಷ್ಠತೆಯ ಪ್ರತಿಪಾದನೆಗೆ ಹೊರಟ ಕವಿಗೆ ಜನರಿಗೆ ತಲುಪಲೇಬೇಕಾದ ಕಾವ್ಯರಚನೆಯ ತುರ್ತು ಅನಿವಾರ್ಯವಾಗಿತ್ತು. ವೀರಶೈವ ಜನರಲ್ಲಿ ಬೇರೂರತೊಡಗಿದ್ದ ಕಾಲವದಾಗಿತ್ತು. ಜನಸಾಮಾನ್ಯರಲ್ಲಿ ರೂಢಿಯಾಗಿದ್ದ ನಾಣ್ಣುಡಿ, ಜಾಣ್ಣುಡಿ, ಉಪಮೆ, ಪ್ರತಿಮೆಗಳೇ ಮೊದಲಾದವನ್ನು ಸಾಕಷ್ಟು ಎನ್ನುವಂತೆಯೇ ಬಳಸುವ ನಯಸೇನ ಆ ಕಾರಣಕ್ಕೆ ಜನಸಾಮಾನ್ಯರ ಭಾಷೆಯೆಡೆಗೆ ಚಲಿಸುವ ಅನಿವಾರ್ಯತೆಯನ್ನು ಎದುರುಗೊಂಡನು. ನಯಸೇನನಲ್ಲಿ ಸ್ಪಷ್ಟವಾದ ಕನ್ನಡಿಗನಿದ್ದಾನೆ, ಸಹಜ ಭಾಷಾಭಿಮಾನಿ ಅವನೊಳಗೆ ಎಚ್ಚರವಾಗಿದ್ದಾನೆ. ಕತೆ, ಉಪಕತೆ, ಗಾದೆ, ನಾಣ್ಣುಡಿಗಳನ್ನು ತಂತ್ರದಂತೆಯೇ ಬಳಸಿಕೊಳ್ಳಲು ಜನರಿಗೆ ಆಪ್ತವಾಗಿ ಕತೆ ಹೇಳಲು ಬಯಸುತ್ತಾನೆ. ಪಂಪನಲ್ಲಿದ್ದ ಮಾರ್ಗ-ದೇಸೀ ಸಮನ್ವಯತೆಯ ರೂಪ ಇವನಲ್ಲಿ ಮತ್ತಷ್ಟು ಸರಳವಾಗಿ ದೇಸೀಯತೆಯೇ ಪ್ರಧಾನವೆನ್ನುವಂತೆ ಚಲಿಸುತ್ತದೆ. ಎಲ್ಲರಿಗೂ ಸ್ಪಷ್ಟವಾಗಬೇಕು ಎಂಬ ಆಶಯವೇ ಅವನಿಗೆ ಪ್ರಧಾನವಾದ್ದರಿಂದಲೂ ಕನ್ನಡ ಭಾಷೆ, ಸಮಾಜ, ಸಂಸ್ಕøತಿ ನಯಸೇನನ ಕಾವ್ಯದ ನೆರಳಾಗುತ್ತದೆ ಅಂದರೆ ಭಾಷಿಕ ಅನಿವಾರ್ಯತೆಯನ್ನು ನಯಸೇನ ಸ್ಪಷ್ಟವಾಗಿ ಮನಗಂಡಿದ್ದಾನೆನ್ನಬಹುದು.

        ಮಾರ್ಗಪರಂಪರೆಯ ಬಗೆಗೆ, ಅದನ್ನು ದೇಸೀತನದೊಂದಿಗೆ ಮಿಳಿತಗೊಳಿಸುವುದರ ಬಗೆಗೆ ಅಂದರೆ ಸಂಸ್ಕೃತದೊಂದಿಗೆ ಕನ್ನಡ ಮಿಳಿತಗೊಳಿಸುವುದರ ಬಗೆಗೆ ಅವನಿಗೆ ಸ್ಪಷ್ಟವಾದ ವಿರೋಧವಿದೆ. ಸಂಸ್ಕೃತವಾದರೆ ಪೂರ್ಣ ಸಂಸ್ಕøತವೇ ಆಗಲಿ ಇಲ್ಲವಾದರೆ ಶುದ್ಧ ಕನ್ನಡವಾಗಲಿ ಎನ್ನುವುದವನ ವಾದ. ಸಂಸ್ಕೃತ ಮತ್ತು ಕನ್ನಡಗಳ ಮಿಶ್ರಣವನ್ನು ಎಣ್ಣೆ-ತುಪ್ಪಗಳ ಮಿಶ್ರಣವೆಂದು ಅದೊಂದು ಅಸಹಜ ಸಂಬಂಧವೆಂದೂ ನಿರಾಕರಿಸುತ್ತಾನೆ. ನಯಸೇನನ ಈ ಉಪಮೆ ಕನ್ನಡದ ದೇಸೀ ತುಡಿತದ ಸಂದರ್ಭದಲೆಲ್ಲ ಮುಖ್ಯ ನೆಲೆಯಾಗಿ ಚರ್ಚೆಗೆ ಬಂದಿರುವುದು ಗಮನಾರ್ಹ. ನಯಸೇನನ ಈ ಮಾತು ಇಂದಿಗೂ ಹೆಚ್ಚು ಅನ್ವಯಗೊಳ್ಳುವಂತಹುದು. ನಮ್ಮ ಭಾಷೆಯಲ್ಲಿಯೇ ಹೇಳುವುದೆಲ್ಲ ಸಾಧ್ಯವಿದ್ದಾಗ ಮತ್ತೊಂದು ಭಾಷೆಯ ಅಗತ್ಯವಾದರೂ ಏನು? ಭಾಷೆ, ಮಾಧ್ಯಮ, ನಾಗರೀಕತೆ, ಆಧುನಿಕತೆ, ಆಡಳಿತ ಇತ್ಯಾದಿ ಎಲ್ಲಾ ವಿಚಾರಗಳ ಸಂದರ್ಭದಲ್ಲಿಯೂ ಈ ಪ್ರಶ್ನೆಯನ್ನು ನಿಕಟಗೊಳಿಸಿಯೇ ಚಿಂತಿಸಬಹುದು. ಅಂದರೆ ಇತರ ಭಾಷೆಯೋ ಸಂಸ್ಕøತಿಯೋ ನಮ್ಮೊಳಗೆ ಸೇರುವಂತಲ್ಲಿ ಅದು ನಮ್ಮದಾಗಬೇಕು. ಅಂದರೆ ಭಾಷೆ ಶ್ರೀಮಂತಗೊಳ್ಳಬೇಕು. ನಮ್ಮತನಕ್ಕ್ಕೆ ಸಂವಾದಿಯಾಗಬೇಕು. ಅದು ಪರಕೀಯವೋ ಶಿಥಿಲವೋ ಆಗುವ ದುರಂತವನ್ನು ಎದುರಾಗಬಾರದು. ನಯಸೇನನ ಉದ್ದೇಶ ಧರ್ಮ ಶ್ರೇಷ್ಠತೆಯ ಪ್ರಚಾರವೇ ಇದ್ದಿರಬಹುದಾದರೂ ಅವನು ಕನ್ನಡಭಾಷಾಪರ ತಳೆದ ಧೋರಣೆ ಮಾತ್ರ ಪ್ರಶ್ನಾತೀತ.

         ಇಲ್ಲಿಯೇ ನೆನೆಯಬಹುದಾದ ಮತ್ತೊಬ್ಬ ಕವಿ ಆಂಡಯ್ಯ. ಸುಮಾರು 10ನೇ ಶತಮಾನದ ಆಸುಪಾಸಿನಲ್ಲಿ ಕನ್ನಡದಲ್ಲಿ ಕಾವ್ಯ ರಚಿಸಿದ ಬಹುಪಾಲು ಕವಿಗಳಿಗೆ ಸಂಸ್ಕøತ ಮುಖ್ಯವಾದ ಆಕರವಾಗಿತ್ತು. ‘ಚಂಪೂ’ ಪ್ರಕಾರ ಪ್ರಧಾನವಾಗಿತ್ತು. ಸಂಸ್ಕøತದ ಸಹಾಯ ಮತ್ತು ಪ್ರಭಾವದಿಂದಾಚೆಗೆ ಕಾವ್ಯ ರಚನೆ ಸುಲಭವಲ್ಲ ಎನ್ನುವುದು ಅಂದಿನ ಮನಸ್ಥಿತಿಯಾಗಿತ್ತು ಹಾಗಾಗಿ ಕನ್ನಡ-ಸಂಸ್ಕೃತ ಸಮನ್ವಯದ ಹಾದಿ ಬಹಳಷ್ಟು ಜನರಿಗೆ ಸರಳವಾದ ಹಾದಿಯಾಗಿತ್ತು. ಇಂತಹ ಹೊತ್ತಿನಲ್ಲಿಯೇ ಕಾಣಿಸಿಕೊಂಡ ಆಂಡಯ್ಯ ವಿಶಿಷ್ಟವಾಗಿ ತನ್ನ ಕಾವ್ಯದ ಅಸ್ತಿತ್ವದ ಅರ್ಥಕ್ಕೆ ಸಂವಾದಿ ಯಾಗಲು ಬಯಸುತ್ತಾನೆ. ‘ಅಚ್ಚಗನ್ನಡದಲ್ಲಿಯೇ’ ಕಾವ್ಯ ಬರೆಯುತ್ತೇನೆ ಎನ್ನುವುದು ಅವನ ಹಠ ಅದರ ಪ್ರತಿಕ್ರಿಯೆ ಎಂಬಂತೆ ‘ಕಬ್ಬಿಗರ ಕಾವ’ ಎಂಬ ಕೃತಿಯನ್ನು ರಚಿಸುತ್ತಾನೆ. ಆ ಹೊತ್ತಿಗೆ ಖಂಡಿತಾ ಇದು ಸಾಮಾನ್ಯವಾದ ಕಾರ್ಯವಾಗಿರಲಿಲ್ಲ. ಅನೇಕ ಎಡರು-ತೊಡರುಗಳನ್ನು ಕಾವ್ಯರಚನೆಯ ಸಂದರ್ಭದಲ್ಲಿ ಎದುರಿಸಿದರೂ ಕನ್ನಡದ ಅಭಿಮಾನದ ವಿಚಾರದಲ್ಲಿ ಅವನಿಗಿದ್ದ ಹಠ ಗಮನಾರ್ಹ. ಸಂಸ್ಕೃತದ ಶಬ್ದಗಳನ್ನು ತರುವಲ್ಲಿಯೂ ಅವುಗಳನ್ನು ಕನ್ನಡಕ್ಕೆ ತದ್ಭವಗಳನ್ನಾಗಿಸಿಕೊಳ್ಳುವ ಅವನ ಪ್ರಯತ್ನ ಅಭಿನಂದನೀಯ. ಮನಸ್ಸಿದ್ದಲ್ಲಿ ಏನೆಲ್ಲಾ ಪ್ರಯೋಗವೂ ಸಾಧ್ಯ ಎನ್ನುವ ಮಾತಿಗೆ ಆಂಡಯ್ಯ ಅತ್ಯುತ್ತಮ ಉದಾಹರಣೆಯಾಗಿದ್ದಾನೆ. ಅಂದರೆ ಸಂಸ್ಕøತ ಪ್ರಾಕೃತಗಳು ತಮ್ಮ ಪ್ರಾಚೀನ ಪ್ರಭಾವವನ್ನು ಕನ್ನಡದ ಮೇಲೆ ಬೀರುವ ಸಂಗತಿ ಕನ್ನಡಕ್ಕೆ ಸಮಸ್ಯೆಯಾಗಬಹುದೆ? ಎಂಬ ಚಿಂತನೆ ಮತ್ತು ಕಳಕಳಿ ಆಂಡಯ್ಯನಲ್ಲಿ ಸವಾಲಾಗಿ ಕೆಲಸಮಾಡಿದ್ದು ಉಲ್ಲೇಖನೀಯ.

         ಆಂಡಯ್ಯನ ‘ಕಬ್ಬಿಗರ ಕಾವ’ ಹತ್ತು-ಹಲವು ಸಾಂಸ್ಕøತಿಕ, ದೇಸೀ ಅಭಿಮಾನದ ಕಾರಣಕ್ಕೆ ತುಂಬಾ ಮುಖ್ಯವಾಗುತ್ತದೆ. ಸಂಸ್ಕೃತ  ಪ್ರಭಾವದಿಂದ ಬಿಡಿಸಿಕೊಳ್ಳುವ ಪ್ರಯತ್ನ ಮೊದಲಿನದ್ದು. ವಸ್ತುವನ್ನು ಸಂಸ್ಕೃತದಿಂದಲೇ ತಂದರೂ ಅದನ್ನು ಕನ್ನಡನಾಡಿನದನ್ನಾಗಿಸುವ ತಂತ್ರ ಮತ್ತೂ ಮುಖ್ಯವಾಗಿ ಪಾತ್ರಗಳನ್ನೆ ಕನ್ನಡೀಕರಣಗೊಳಿಸುವ ಕುಶಲತೆ ಆಂಡಯ್ಯನ ಭಾಷಾ ಬದ್ಧತೆಯನ್ನು ನಿಖರಗೊಳಿಸಿದೆ. ಆ ಹೊತ್ತಿನ ಸಮಕಾಲೀನ ಸಂದರ್ಭದ ಆದರ್ಶ, ಚಿಂತನೆ, ಮೌಲ್ಯಗಳೇ ಮೊದಲಾದವುಗಳ ಬಗೆಗೊಂದು ವಿವರನೋಟ ಇಡೀ ಕಾವ್ಯದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಾವ್ಯ, ಧರ್ಮಗಳನ್ನು ಮೀರಿಯೂ ಆಂಡಯ್ಯ ಕನ್ನಡ ಪರವಾದ ಕಳಕಳಿಯನ್ನು ಹೊಂದುವುದು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನುಕರಣೀಯ.

         ಪಂಪ, ರನ್ನರೇ ಮೊದಲಾದ ಹಲವು ಶ್ರೇಷ್ಠ ಕವಿಗಳು ಮಾರ್ಗ ಸಾಹಿತ್ಯವನ್ನೇ ರಚಿಸಿ ಅದನ್ನೇ ‘ಮಹಾಮಾರ್ಗ’ ಮಾಡಿದ್ದ ಹೊತ್ತಿಗೂ ನಯಸೇನ, ಆಂಡಯ್ಯನಂತಹ ಕವಿಗಳು ಸ್ವಂತಿಕೆಯನ್ನೆ ಕಾಯ್ದುಕೊಳ್ಳುವ ರೂಪವಾಗಿ ಕನ್ನಡವನ್ನೇ ಪ್ರಧಾನಧಾರೆಯಲ್ಲಿಟ್ಟು ಚಿಂತಿಸುವ ಯತ್ನ ಮಾಡಿದ್ದು ಮತ್ತು ಅದು ಸಾರ್ಥಕ ಯಶಸ್ಸಿನ ರೂಪವಾಗಿಯೂ ಕಂಡದ್ದು ಗಮನಾರ್ಹ. ಇದು ಮುಂದಿನವರಲ್ಲಿಯೂ ಅರಿವು-ಎಚ್ಚರವನ್ನು ಉಂಟು ಮಾಡಿತೆಂದರೆ ಉತ್ಪ್ರೇಕ್ಷೆಯಲ್ಲ.

         ಕನ್ನಡ ಎನ್ನುವ ಭಾಷೆ ಸಂಸ್ಕøತ ಮೂಲದ್ದು ಎನ್ನುವ ವಾದ ಆರಂಭದ ಕಾಲಕ್ಕಿದ್ದದ್ದಾದರೂ ಸಹಜವೇ ಆಗಿತ್ತು, ಅಷ್ಟರ ಮಟ್ಟಿನ ಪ್ರಭಾವವೂ ಕನ್ನಡದ ಮೇಲೆ ಸಂಸ್ಕೃತದ್ದಾಗಿತ್ತು. ಕನ್ನಡದ ಮೊದಲ ಶಾಸ್ತ್ರಕಾರರು, ವ್ಯಾಕರಣಕಾರರು, ಕವಿಗಳೂ ಹೀಗೆ ಭಾವಿಸಿದ್ದಾಗಿತ್ತು.ಸಂಸ್ಕೃತದ ಪ್ರಭಾವವೇ ಪುಣ್ಯವೆನ್ನುವ ಅತೀ ರಂಜಿತಭಾವವೂ ಆ ಹೊತ್ತಿನಲ್ಲಿತ್ತು. ಇಂತಹ ಹಲವು ಭ್ರಮೆಗಳು ಸಂಸ್ಕøತವನ್ನು ‘ದೇವರಭಾಷೆ’ ಎಂದೂ ಉನ್ನತಿಗೇರಿಸಲು ಸಾಧ್ಯವಾಗಿತ್ತು. ಇಂದಿನ ಅರಿವಿನ ಯುಗ ದಲ್ಲಿಯೂ ಇದು ಸಂಪೂರ್ಣವಾಗಿ ಅಳಿದುಹೋಗಿದೆ ಎಂದು ಭಾವಿಸಲಾ ಗುವುದಿಲ್ಲ. ಆದರೆ ಕನ್ನಡವು ಆ ಹೊತ್ತಿಗೆ ಇತರ ಭಾಷೆಗಳಂತೆ ಸಂಸ್ಕøತದಿಂದ ಅಪಾರವಾದುದನ್ನು ಪಡೆದುಕೊಂಡಿತೆನ್ನುವುದನ್ನು ಯಾರೂ, ಯಾವ ಕಾರಣಕ್ಕ್ಕೂ ಅಲ್ಲಗಳೆಯಲಾಗದು.

        ಇಲ್ಲಿ ಕನ್ನಡ ತನ್ನತನವನ್ನೇ ಕಳೆದುಕೊಳ್ಳಬಹುದಾದ ಅಪಾಯವೂ ಇತ್ತು ಅದು ಮತ್ತೆ ಸಂಸ್ಕೃತ ಭಾಷೆಯ ಗಾಢ ಪ್ರಭಾವವನ್ನೂ ಅದರ ಬಗೆಗಿನ ಪಾಂಡಿತ್ಯಪರ ನಂಬಿಕೆಯ ನೆಲೆಗಳನ್ನು ಧ್ವನಿಸುವಂತಹುದು. ಆದರೆ ಕನ್ನಡತನ ಉಳಿದು-ಬೆಳೆಯಿತು, ‘ಜೀವಂತಭಾಷೆಯ’ ಅರ್ಥಕ್ಕೆ ಸಂವಾದಿಯಾಗಿಯೇ ಅಸ್ತಿತ್ವವನ್ನು ಜತನಮಾಡಿಕೊಂಡದ್ದು ಗಟ್ಟಿತನದ ಫಲಿತ.

        ಒಂದು ಭಾಷೆ, ಸಮುದಾಯ, ನಾಡು ಎನ್ನುವುದು ಒಂದು ನಿರ್ದಿಷ್ಟ ಚೌಕಟ್ಟು ಅಥವಾ ಪರಿಮಿತಿಗಳ ಒಳಗೆ ನಿಲ್ಲಿಸಿ ಚಿಂತಿಸುವಂತಹುದಲ್ಲ. ಅದೊಂದು ಪರಂಪರೆ ಹಾಗಾಗಿ ನಿರಂತರವಾದ ಕ್ರಿಯಾಶೀಲತೆಯೆನ್ನುವುದೇ ಇಲ್ಲಿನ ಮೂಲ ಲಕ್ಷಣ. ಪಂಪನಿಂದ ಆರಂಭಗೊಂಡ ಭಾಷೆಯ ಸ್ವರೂಪ ನಿರಂತರವಾಗಿ ಪ್ರಯೋಗಶೀಲತೆಗೆ ಒಡ್ಡಿಕೊಂಡೇ ಬಂದಿದೆ. ಇದು ಜೀವಂತ ಭಾಷೆಯ ಮುಖ್ಯ ಲಕ್ಷಣವೂ ಹೌದು. ನಯಸೇನ, ಆಂಡಯ್ಯರ ಪ್ರಯತ್ನಗಳೂ ಇದರದ್ದೇ ಭಾಗ. ಇದು ಮತ್ತಷ್ಟು ಫಲಿತವಾಗಲು ಆದರ್ಶದ ಹಾದಿಯಂತೂ ತೆರೆಯಿತೆಂದೇ ಅರ್ಥ. ಮುಂದೆ ಸಾರ್ಥಕ ಎನ್ನುವಂತೆ, ಫಲಿತದ ಉತ್ಕರ್ಷವೆನ್ನುವಂತೆ ಇನ್ನೂ ಇದಕ್ಕಿಂತಲೂ ಹೆಚ್ಚು ಸಾಧ್ಯವಿತ್ತೆ? ಎನ್ನುವಂತೆ, ಒಂದು ಚಳುವಳಿಯ ರೂಪದಿಂದಲೇ ಭಾಷೆಯನ್ನು ಒಳಗೊಂಡು ಯಶಸ್ಸಿನೆಡೆಗೆ ಚಲಿಸಿದ್ದು ವಚನ ಚಳುವಳಿ.

        ಸಾಮಾಜಿಕ, ರಾಜಕೀಯ, ಧಾರ್ಮಿಕ, ಭಾಷಿಕ, ಸಾಂಸ್ಕೃತಿಕ ಎಂಬೆಲ್ಲಾ ಆಯಾಮಗಳಲ್ಲೂ ಹೊಸಬಗೆಯ ಚಿಂತನೆಗಳು ಸಾಧ್ಯವಾದದ್ದು ಸನಾತನತೆಯನ್ನು ಮೀರಿ ವರ್ತಮಾನಕ್ಕೆ ಮುಖಾಮುಖಿಯಾಗಲು ಹಂಬಲಿಸಿದ್ದು ವಚನ ಚಳುವಳಿಯ ಮುಖ್ಯ ಆಶಯವೂ ಗುರಿಯೂ ಆಗಿತ್ತು ‘ವಚನ’ಗಳನ್ನೇ ಸಾಹಿತ್ಯವೆನ್ನಬೇಕೆ? ಬೇಡವೆ? ಎಂಬ ಗಂಭೀರವಾದ ಚರ್ಚೆಯೇ ನಡೆದದ್ದು ‘ವಚನ’ಗಳ ವಿಶಿಷ್ಟತೆಯನ್ನು ಹೇಳುವಂತಾಗಿತ್ತು. ಅನುಭವ-ಅನುಭಾವಗಳ ನಡುವಿನ ವಿಭಿನ್ನ ಅರಿವುಗಳು ‘ವಚನ’ಗಳ ಸಾಂಸ್ಕೃತಿಕ ಒಳನೋಟಗಳನ್ನು ಬೇರೆಯಾಗಿಯೇ ಗ್ರಹಿಸಲು ಒತ್ತಾಯಿಸಿದಂತಿತ್ತು. ಮಧ್ಯಕಾಲೀನ ಸಾಹಿತ್ಯದ ಮೊದಲ ಹಂತವೆಂದು ಚರ್ಚಿಸುವ ವಚನ ಸಾಹಿತ್ಯದ ಸೃಜನಶೀಲತೆ ನಿಜವಾಗಿ ಹಿಂದಿನ ಹಳತು ಮತ್ತು ಮುಂದಿನ ಹೊಸತುಗಳ ನಡುವೆ ಒಂದು ಸೇತುವೆಯಂತೆ ಅನ್ವರ್ಥವಾದದ್ದು ಮಹತ್ವದ ಸಂಗತಿಯೇ ಆಗಿತ್ತು.

         ಪಾಂಡಿತ್ಯ ವಿದ್ವತ್ತುಗಳಾಚೆಗೆ ಭಾಷಾಸ್ವರೂಪ ಇಡೀ ದೇಶಕ್ಕೆ ಹೊಸತು ಎನ್ನುವಂತೆ ಬಹುಜನರ ಪರವಾಗಿ, ಸರಳತೆಯಲ್ಲಿಯೂ ಸಾಹಿತ್ಯದ ರೂಪವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿತೆನ್ನುವುದೇ ಅನನ್ಯವಾದ ವಿಚಾರವಾಯಿತು. “ಆನು ಒಲಿದಂತೆ ಆಡುವೆನು” “ಮಾತೆಂಬುದು ಜ್ಯೋತಿರ್ಲಿಂಗ” ಎಂದೆಲ್ಲಾ ಬದುಕೇ ಅಕ್ಷರಗಳಾಗಿ ಸಾಹಿತ್ಯಿಕ ರೂಪವಾಗಿ ದಾಖಲಾಗುವ ಬದ್ಧತೆಯ ಸಂಗತಿಯಾಯ್ತು. ಮಾರ್ಗ-ದೇಸಿಯಂತಹ ಶಿಷ್ಟ ಪರಿಭಾಷೆಗಳಿಲ್ಲಿ ಮುಖ್ಯವೇ ಆಗಲಿಲ್ಲ. ಸಹಜವಾದ ಮಾತೇ ಸಾಹಿತ್ಯವಾಗುವ ತನ್ಮೂಲಕ ಅಂತಹ ಪ್ರಯೋಗಕ್ಕೆ ಬಹುಜನರನ್ನು ಪ್ರಚೋದಿಸುವ, ಒಳಗೊಳ್ಳುವ ಕೆಲಸ ಸರಳವಾಗಿಯೇ ನಡೆದುಹೋಯಿತು.

         ಬಹುಪಾಲು ವಚನಕಾರರು ತಾವು ಸಾಹಿತ್ಯ ಸೃಷ್ಟಿಸುತ್ತೇವೆ ಎಂದು ಹೊರಟವರಲ್ಲಿ ಸಮಾಜಕ್ಕೆ ಮುಖಾಮುಖಿಯಾದ ಅನುಭವಗಳನ್ನು ಹಾಡಿ ಕೊಂಡದ್ದೇ ‘ವಚನ’ಗಳಾದವು. ಅದು ಅದುವರೆಗೂ ಅವರಿಗೆ ತಮ್ಮನ್ನು ಹೇಳಿಕೊಳ್ಳಲಾಗದ ಬಂಧನದಿಂದ ಬಿಡಿಸಿಕೊಂಡ ಸ್ವಾತಂತ್ರ್ಯದ ಸಂಭ್ರಮ ವಾಗಿತ್ತು. ತಮಗೂ ಭಾವವಿದೆ-ಭಾಷೆಯಿದೆ ಎಂಬ ಅನಿಸಿಕೆಗೆ ದೊರೆತ ಒಂದು ಮಾಧ್ಯಮವಾಗಿತ್ತು. ಏಕಕಾಲಕ್ಕೆ ನೂರಾರು ಜನ ಸಾವಿರಾರು ಜನರನ್ನು ಪ್ರತಿನಿಧಿಸುವ ಅವಕಾಶವನ್ನು ಮುಕ್ತವಾಗಿ ಬಳಸಿಕೊಂಡು ಹಗುರಾಗುವ ಅವಕಾಶವೂ ಇದಾಗಿತ್ತು. ಸಾಮಾಜಿಕ ಕ್ರಾಂತಿ, ರಾಜಕೀಯ ತಲ್ಲಣ ಎಂಬೆಲ್ಲಾ ಸಾಧ್ಯತೆಗಳಿಗೂ ಈ ಕಾಲ ಸಾಕ್ಷಿಯಾಯಿತು. ಬಸವಣ್ಣನನ್ನು ಕೇಂದ್ರೀಕರಿಸಿಕೊಂಡ ಈ ಸಮಗ್ರ ಪರಿವರ್ತನೆ ಭಾಷಿಕ ದೃಷ್ಟಿಯಿಂದಲೇ ತುಂಬಾ ಮಹತ್ವವಾದದ್ದು ಕರ್ನಾಟಕ, ಕನ್ನಡಿಗ-ಕನ್ನಡ ಎಂಬ ನೆಲೆಯಿಂದಲೇ ಮುಖ್ಯವಾದುದು.

          ವಚನ ಚಳುವಳಿಯ ಕಾಲಕ್ಕೆ ಜೈನ ಸಾಹಿತ್ಯದ ಉತ್ಕರ್ಷ ಇಳಿವಿನೆಡೆಗೆ ಸಾಗುತ್ತಿತ್ತು. ಸಾಹಿತ್ಯ ಸೃಷ್ಟಿಯ ಆವೇಶವೂ ತಗ್ಗಿದಂತಿತ್ತು. ಅಂತಲ್ಲಿ ಸಹಜವಾಗಿಯೇ ಕನ್ನಡ ಭಾಷೆಯ ಪ್ರಭಾವವೂ ಕಡಿಮೆಯಾಗುವ ಅಪಾಯವಿತ್ತು. ನಾವು ಈ ಮೊದಲೇ ಗಮನಿಸಿದಂತೆ ಕನ್ನಡವನ್ನು ಪುರೋಹಿತಶಾಹಿ ಅಥವಾ ಮೇಲುವರ್ಗ ಸಂಸ್ಕøತಕ್ಕೆ ಸಮನಾಗಿ, ಪರ್ಯಾಯವಾಗಿ ನೋಡಲು ಸಿದ್ಧವಿರಲಿಲ್ಲ, ಸಾಧ್ಯವೂ ಇರಲಿಲ್ಲ. ಕಾಕತಾಳೀಯವೆಂಬಂತೆ ವಚನಕಾರರು ಆಶಾವಾದಿಗಳಾಗಿ ಕಾಣಿಸಿಕೊಂಡರು.

         ಅಲ್ಲಿಯವರೆಗಿನ ಸಾಹಿತ್ಯ ಸಂದರ್ಭ ಸಂಸ್ಕೃತ ಪ್ರಭಾವ ಅಥವಾ ಒಂದಿಷ್ಟು ಶಿಷ್ಟ ನೆಲೆಯಲ್ಲೆ ಇದ್ದದ್ದನ್ನು ‘ತಿಳಿಗನ್ನಡದಲ್ಲಿ’ ಪ್ರಚುರಪಡಿಸುವ ಸಂಕಲ್ಪಕ್ಕೆ ಸಹಜವಾಗಿಯೇ ಬದ್ಧರಾದವರು ವಚನಕಾರರು. ಬಸವಣ್ಣ ನಂತಹ ಬಹುಭಾಷೆಬಲ್ಲ ಮಾರ್ಗ ಸಾಹಿತ್ಯದ ಶಕ್ತಿಯೂ ಇದ್ದ ವ್ಯಕ್ತಿ ಸರಳವಾದ ಕನ್ನಡದಲ್ಲಿ ಇಡೀ ಸಮಾಜ ಮತ್ತು ಬದುಕನ್ನು ಕಟ್ಟಬಯಸಿದ್ದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಅದು ಒಂದು ತಪಸ್ಸಿನಂತಹ ಹಠವೇ ಸರಿ. ಅದರ ಫಲಿತವಂತೂ ಕಣ್ಣೆದುರೇ ಇದೆ. ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಏಕಕಾಲಕ್ಕೆ ನೂರಾರು ಜನರು ವಚನಕಾರರಾದರು. ತಮ್ಮ ಸಾಚಾ ಬದುಕಿನ ಅನಾವರಣದ ಮೂಲಕ ಬಹುಜನರ ಬದುಕನ್ನು ಪ್ರತಿಫಲಿಸುವ ಪ್ರತಿನಿಧಿಗಳಾದರು. ಸಹಜವಾಗಿಯೇ ಸಾಕಷ್ಟು ಜನರನ್ನು ಚಿಂತನೆಗಳು ತಲುಪುವಂತಾಯ್ತು. ಅಲ್ಲಿಯವರೆಗೆ ಮೂಕವಾದಂತೆ ‘ಶಿಷ್ಟ’ರ ಪ್ರಜ್ಞೆಯನ್ನು ಗಮನಿಸುತ್ತಿದ್ದ ಜನ ಅರ್ಥೈಸಿಕೊಂಡು ತಾವೂ ಪ್ರತಿಕ್ರಿಯಿಸುವ ಮಟ್ಟಕ್ಕೆ ತಲುಪಿದರು. ಇಲ್ಲಿ ಬಹುಮುಖ್ಯವಾಗಿ ಚರ್ಚಿಸಬೇಕಾದ ಸಂಗತಿಯೊಂದಿದೆ. ಅದು ‘ಸಾಹಿತ್ಯ’ದ ಮಿತಿ-ವ್ಯಾಪ್ತಿಯ ನೆಲೆಗಳನ್ನು ಕುರಿತಂತದ್ದು. ಪ್ರಾಚೀನ ಸಾಹಿತ್ಯದ ರಚನೆಯ-ಅಭಿವ್ಯಕ್ತಿಯ ಮೂಲ ನೆಲೆಗಳು ಸಾಮಾನ್ಯವಾಗಿ ಅರಮನೆ ಮತ್ತು ಗುರುಕುಲವನ್ನು ಪ್ರತಿನಿಧಿ ಸುತ್ತಿದ್ದವು. ವಿದ್ವತ್ತು ಮತ್ತು ರಾಜಾಶ್ರಯವೆನ್ನುವುದು ಪರಸ್ಪರ ಪೂರಕ ವಿಚಾರಗಳಾಗಿದ್ದಿತು. ತನ್ಮೂಲಕ ಒಂದು ವರ್ಗದ, ಕುಲದ ಸ್ವತ್ತಾಗಿಯೂ ಸಾಹಿತ್ಯ ನಿರ್ಬಂಧಿಸಲ್ಪಟ್ಟಿತೆಂದೇ ಹೇಳಬಹುದಾದ ಭ್ರಮೆಯನ್ನು ವಚನಕಾರರು ಊಹಿಸಲಾಗದಷ್ಟು ತೀವ್ರವಾಗಿ ಒಡೆದುಹಾಕಿದರು.

         ಕಾವ್ಯವೆನ್ನುವುದು ಯಾರೊಬ್ಬರ ಸ್ವತ್ತಲ್ಲ ಹಾಗೆ ಅನುಭವವೂ ಯಾರ ಆಸ್ತಿಯಲ್ಲ ಎನ್ನುವುದನ್ನು ವಚನಕಾರರು ತಮ್ಮ ಬದುಕಿನ ಮೂಲಕ ಸಾಧಿಸಿಯೇ ತೋರಿಸಿದರು. ರಾಜಾಶ್ರಯದ ಹಿಡಿತದಿಂದ ಸಾಹಿತ್ಯವನ್ನು ತಪ್ಪಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದರೆಂದೇ ಹೇಳಬಹುದು. ಜನರನ್ನು ಮುಟ್ಟುವ ಬಿಡಿ-ಬಿಡಿ ರಚನೆಗಳ ಮೂಲಕ ಸಾಹಿತ್ಯದ ಸಾರ-ಸತ್ವದ ಅರ್ಥವನ್ನು ಮನಗಾಣಿಸಲು ಯತ್ನಿಸಿದರು.

         ದೇವಭಾಷೆ ಎಂದುಕೊಂಡು ಒಂದು ವರ್ಗಕ್ಕೆ, ಸಮುದಾಯಕ್ಕೆ ಮೀಸಲುಗೊಂಡಂತಿದ್ದ ಮಡಿವಂತಿಕೆಯನ್ನೇ ಈ ನೆಲದ ಭಾಷೆಯಾದ ಕನ್ನಡವು ಮುರಿಯಿತೆನ್ನುವುದು ಗಮನಾರ್ಹ. ತನ್ಮೂಲಕ ಸಂಸ್ಕøತಕ್ಕಿಂತ ಹೆಚ್ಚಿನ ವ್ಯಾಪಕತೆಯೊಂದಿಗೆ ಅಪಾರವಾದುದನ್ನು ಮಣ್ಣಿನ ಭಾಷೆಯಾದ ಕನ್ನಡ ಸಾಧಿಸಿತು. ಸಹಜವಾಗಿಯೇ ‘ತಮ್ಮದು’ ಎನ್ನುವ ಅಭಿಮಾನದಿಂದ, ಪ್ರೀತಿಯಿಂದ ಜನರು ಈ ಸಾಹಿತ್ಯವನ್ನು ಆಸ್ವಾದಿಸಿ ಹೆಮ್ಮೆಪಟ್ಟರು. ಶಿ.ಶಿ.ಬಸವನಾಳರು ಹೇಳುವ ಮಾತನ್ನಿಲ್ಲಿ ಪೂರಕವಾಗಿ ಉಲ್ಲೇಖಿಸ ಬಹುದು “ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ, ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೇರಿಸಿದ ಪವಾಡ ಕನ್ನಡ ವೀರಶೈವ ವಚನಕಾರರದು”. ಪವಾಡವೆನ್ನುವ ಮಾತೇ ಇಲ್ಲಿ ಮುಖ್ಯ ಅಂದರೆ ಇದು ಅಂದಿನ ಸವಾಲನ್ನೆ ಕುರಿತು ಹೇಳುತ್ತದೆ. ಕನ್ನಡ ಅದನ್ನು ಯಶಸ್ವಿಯಾಗಿ ದಾಖಲಿಸಿತೆನ್ನುವುದೇ ಭಾಷೆಯ ಗಟ್ಟಿತನವನ್ನು ಹೇಳುತ್ತಿದೆ. ಸವಾಲು ಎನ್ನುವುದು ಯಾವುದೇ ಒಂದು ನಿರ್ದಿಷ್ಟ ಕಾಲದ ಮಿತಿಯಲ್ಲ, ವ್ಯಾಪ್ತಿಯೂ ಅಲ್ಲ ನಿರಂತರ ಜೀವಂತಿಕೆಯ, ಯಾವುದೇ ಕ್ರಿಯಾಶೀಲ ವ್ಯವಸ್ಥೆಯ ಸಂದರ್ಭದಲ್ಲಾದರೂ ಹೀಗೆ ಸಾಂಸ್ಕøತಿಕ ಸವಾಲುಗಳ ಪರಿಸ್ಥಿತಿ ಸಹಜವೆನ್ನುವಂತೆ ಉಂಟಾಗುತ್ತದೆ ಅಂತಲ್ಲೆಲ್ಲಾ ಸೃಜನಶೀಲವಾದ ಭಾಷೆ ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಹೋರಾಟವನ್ನೇ ನಡೆಸಬೇಕಾದ ಅನಿವಾರ್ಯತೆಯನ್ನು ಎದುರಿಸಿದೆ, ಯಶಸ್ವ್ವಿಯೂ ಆಗಿದೆ ಇದು ಇತಿಹಾಸ. ವಚನಕಾಲದಿಂದ ಮುಂದೆ ದಾಸಸಾಹಿತ್ಯದ ಮುಖ್ಯ ರೂಪವಾದ ಕೀರ್ತನೆಯಲ್ಲಿಯೂ ‘ಜನವಾಣಿ’ಯ ಸ್ವರೂಪವೇ ಪ್ರಧಾನವಾಯಿತೆನ್ನು ವುದು ಗಮನಾರ್ಹ. ಸಂಸ್ಕೃತಿ ಪ್ರಭಾವದ ಶಿಷ್ಟ ಸಾಹಿತ್ಯದ ಅಧ್ಯಯನ ಅರಿವಿನ ಹಿನ್ನೆಲೆಯಿದ್ದಾಗ್ಯೂ ಕೀರ್ತನೆಕಾರರಿಗೆ, ದಾಸರಿಗೆ ಸರಳ ಕನ್ನಡವೆನ್ನುವುದು ಜನರನ್ನು ತಲುಪಲೇಬೇಕಾದ ಅನಿವಾರ್ಯತೆಯೂ ಆಗಿತ್ತು. ಈ ಮಧ್ಯ ಕನ್ನಡ ಕವಿಗಳು ದೇಸೀ ಛಂದಸ್ಸಿನಲ್ಲಿ ಕಾವ್ಯರಚಿಸಿದ್ದು, ಅದು ಹಾಡುಗಬ್ಬದ ರೂಪದಲ್ಲಿ ಜನರ ನಾಲಗೆಗಳ ಮೇಲೆ ನಲಿದದ್ದು ಕನ್ನಡ ಭಾಷೆಯ ಅಸ್ತಿತ್ವ, ಉಳಿವು-ಬೆಳವಿನ ರೂಪವೇ ಆಗಿತ್ತು. ಸಾಕಷ್ಟು ಎನ್ನುವಂತೆ ಸ್ವಂತಿಕೆಯ ಕಾವ್ಯ ಪರಂಪರೆಯೇ ನಮ್ಮಲ್ಲಿ ಕಾಣಿಸಿಕೊಂಡು ಮಧ್ಯಕಾಲೀನ ಸಾಹಿತ್ಯ ಸಂದರ್ಭವೇ ವಿಶಿಷ್ಟವಾದ ಕನ್ನಡದ ಶ್ರೇಷ್ಠ ದಾಖಲೆಯನ್ನೆ ತನ್ನೊಳಗಿಟ್ಟುಕೊಂಡಿತೆನ್ನಬಹುದು. ಇದು ಕವಿ-ಕಾವ್ಯ-ಸಹೃದಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ, ತನ್ಮೂಲಕ ಶ್ರೀಸಾಮಾನ್ಯರೂ ಮುಖ್ಯವಾಹಿನಿಯಲ್ಲಿ ನಿಂತು ತನ್ನ ಭಾಷಾ ಸಮೃದ್ಧತೆಗೆ ಹೆಮ್ಮೆಪಡುವ, ಸಾಹಿತ್ಯವನ್ನು ಅರ್ಥೈಸಿಕೊಂಡು, ಓದಿಯೋ ಕೇಳಿಯೋ ಆಸ್ವಾದಿಸುವ ಅನುಭವ ವೈವಿಧ್ಯತೆಯೂ ಸುಲಭ ಸಾಧ್ಯವಾಯಿತು.
ಇಂತಹದ್ದೊಂದು ಸ್ಥಿತಿ ಯಾವುದೇ ಸಾಹಿತ್ಯ ಸಂಸ್ಕøತಿಯ ಸಂದರ್ಭ ಕ್ಕಾದರೂ ಐತಿಹಾಸಿಕ ದಾಖಲೆಯೇ ಹೌದು. ಅಂದರೆ ಆ ಹೊತ್ತಿಗೆ ಎಲ್ಲವೂ ಸೊಗಸಾಗಿತ್ತು.

         ಮತ್ತೆ ಸಮಸ್ಯೆ ಎನ್ನುವುದು ಆರಂಭವಾದ ಕಾಲ ‘ಹೊಸಗನ್ನಡದ ಕಾಲ’. ಅಂದರೆ ಪ್ರತೀ ಘಟ್ಟದ ಆರಂಭವೂ ಹೀಗೆ ಸಮಸ್ಯೆಗಳನ್ನೇ ಎದುರಿಸಿರಬಹುದೆ? ಎನಿಸುವುದಕ್ಕೆ ಕಾರಣಗಳಿವೆ ಅದೊಂದು ಪರಿವರ್ತನೆಯ ಘಟ್ಟವೂ ಆಗಿರುತ್ತದೆ. ಆದರೆ ಆಧುನಿಕ ಭಾರತದ ಸಂದರ್ಭಕ್ಕೆ ಹಿನ್ನೆಲೆ-ಆಯಾಮಗಳೇ ಬೇರೆಯಾಗಿದ್ದವು. ವಸಾಹತು ಶಾಹಿಯ ಆಳ್ವಿಕೆಯಲ್ಲಿ ಭಾರತವನ್ನು ಪ್ರಭಾವಿಸಿದ ಇಂಗ್ಲೆಂಡ್ ಮತ್ತು ಇಂಗ್ಲಿಷ್ ನಮ್ಮ ದೇಶೀಯ ಬದುಕು, ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಮೇಲೂ ‘ಒತ್ತಡ’ವಾಗಿಯೇ ಕಾಣಿಸಿಕೊಂಡಿತು, ಈ ಹಿಂದೆ ಇತರ ಭಾಷೆಗಳು ಉಂಟುಮಾಡಿರದಷ್ಟು ತೊಡಕುಗಳನ್ನು, ಸವಾಲುಗಳನ್ನು ಇಂಗ್ಲಿಷ್ ಸೃಷ್ಟಿಸಿತು. ಪರಕೀಯರ ಆಕ್ರಮಣಶೀಲತೆಯೇ ಆಡಳಿತದ ಯಜಮಾನಿಕೆಯನ್ನೆ ಅವರಿಗೆ ತಂದುಕೊಟ್ಟಾಗ ದೇಶೀಯತೆಯ ಕಲ್ಪನೆ ಹೊಸ ಬಗೆಯ ಸವಾಲುಗಳನ್ನು ಎದುರಿಸಿತು. ಆರಂಭಕ್ಕೆ ಧರ್ಮ ಪ್ರಸಾರದ ಉದ್ದೇಶ ಅವರಿಗಿದ್ದದ್ದರಿಂದ ದೇಶೀ ಭಾಷೆಗಳನ್ನೇ ಕಲಿಯುವಲ್ಲಿ ಅವರು ತೋರಿದ ಉತ್ಸಾಹ, ನಿಷ್ಠೆ ವಿಶಿಷ್ಟವಾಗಿದ್ದವು ಮತ್ತು ಅವರಿಗೆ ಅದು ಪ್ರಾಮಾಣಿಕ ಕಲಿಕೆಯ ರೂಪವೂ ಆಗಿತ್ತು. ಅದರಿಂದ ಅವರು ಸಾಧಿಸಿದ್ದು ಸಾಮಾನ್ಯವಲ್ಲ, ಧರ್ಮ-ರಾಜಕಾರಣದ ಗಾಢ ವಾಸನೆಯೂ ಅದರ ಹಿನ್ನೆಲೆಗಿತ್ತು. ಇದು ಒಂದಷ್ಟು ಲಾಭವನ್ನು ದೇಸೀಭಾಷೆಗಳ ಸಂದರ್ಭದಲ್ಲಿ ಉಂಟುಮಾಡಿದ್ದನ್ನು ನಾವು ಅಲ್ಲಗಳೆಯುವಂತಿಲ್ಲ.

         ರಾಜಕೀಯ-ಸಾಮಾಜಿಕ ಬದುಕುಗಳ ಮೇಲೆ ಗಾಢವಾದ ಪ್ರಭಾವ ವಸಾಹತುಶಾಹಿಯಿಂದಾಯಿತು. ಸಾಮಾನ್ಯ ಜನರ ಬದುಕಿನಲ್ಲಿ ಅದರ ಸ್ಪಷ್ಟವಾದ ನೆರಳು ಕಾಣುತ್ತದೆ. ಅಲ್ಲಿಯವರೆಗೆ ಒಳನಾಡಿನಲ್ಲಿ ಅಧಿಕಾರಕ್ಕಾಗಿ ನಡೆದ ಅವೆಷ್ಟೋ ದೇಶಿ ರಾಜರ ಯುದ್ಧಗಳು ಅವರ ವಿಭಿನ್ನವಾದ ಮನೋಭಾವಗಳು, ಆಡಳಿತ ರೀತಿ-ನೀತಿಗಳು ಜನರನ್ನು ತುಂಬಾ ಸಹಜವಾಗಿ ನೆಮ್ಮದಿಯಂದೆ ಬಹುಕಾಲ ಬದುಕುವ ಅವಕಾಶ ವನ್ನಂತು ನೀಡಿರಲಿಲ್ಲ ಆದರೆ ಕ್ರಮೇಣ ಏಕಚಕ್ರಾಧಿಪತ್ಯದತ್ತ ಚಲಿಸಿದ ಬ್ರಿಟಿಷ್ ಆಡಳಿತ ಜನಸಾಮಾನ್ಯರಿಗೆ ದಾಸ್ಯದಸ್ಥಿತಿ ನಿರ್ಮಿಸಿದರೂ ಒಂದಿಷ್ಟು ನೆಮ್ಮದಿ ಒದಗಿಸಿದ್ದಂತೂ ಸುಳ್ಳಲ್ಲ.
 
         ಆಧುನಿಕತೆಯ ಜಗತ್ತಿನ, ಸೌಲಭ್ಯದ ಸಾಧ್ಯತೆಯ ಅನುಭವ-ಅವಕಾಶಗಳು ತೆರೆದುಕೊಂಡವು.
ಜ್ಞಾನದ-ವಿದ್ಯೆಯ ಮಾರ್ಗ ನಮ್ಮಲ್ಲಿ  ಆ ಹೊತ್ತಿಗಿದ್ದ ಸಾಂಪ್ರದಾಯಿಕ ನಂಬಿಕೆ, ಭ್ರಮೆಗಳನ್ನು ಮೀರಿ ಒಂದಿಷ್ಟು ಮುಕ್ತತೆಯೆಡೆಗೆ ಚಲಿಸಿದ್ದು ಗಮನಾರ್ಹ. ಶಿಕ್ಷಣ ಕ್ರಮದಲ್ಲಾದ ಬದಲಾವಣೆ ಕ್ರಾಂತಿಕಾರಕ ವಾದುದು. ಅದು ಸಾಮಾನ್ಯನಿಗೆ ಅಸಾಮಾನ್ಯತೆಯೆಡೆಗೆ ಚಲಿಸಲು ನೀಡಿದ ಮಾಧ್ಯಮವಾಗಿತ್ತು. ಇದು ಕ್ರಮೇಣ ಇಂಗ್ಲಿಷ್ ಭಾಷೆ ಕಲಿಸುವ ನೆಲೆಯಾದದ್ದು ಇಂಗ್ಲಿಷ್‍ನ್ನು ಆಧುನಿಕ ಜ್ಞಾನದ ಬಾಗಿಲು ಎಂದು ಪರಿಭಾವಿಸುವಷ್ಟು ಗಾಢವಾದ ಪ್ರಭಾವವನ್ನು ಸೃಷ್ಟಿಸಿತು. ಆ ಭ್ರಮೆ ಈ ಹೊತ್ತಿಗೂ ಭೂತಾಕಾರವಾಗಿ ಬೆಳೆದುನಿಂತು ಸಮಸ್ಯೆಯಾದದ್ದು ಮಾತ್ರ ವಿಪರ್ಯಾಸ. ಇಂಗ್ಲಿಷ್ ಕಲಿತವರು ಅಷ್ಟೋ ಇಷ್ಟೋ ಅರಿತವರು ‘ಕನ್ನಡದಲ್ಲೇನಿದೆ’ ಎನ್ನುವಂತೆ ಪರಮ ಧಾಷ್ಟ್ರ್ಯದ ಪ್ರಶ್ನೆ ಎತ್ತಿದ್ದು ನಮ್ಮ ನಡುವಿನ ದೊಡ್ಡ ದುರಂತವೇ ಆಗಿತ್ತು ಎನ್ನಬಹುದು.

         ‘ಕನ್ನಡದ ಕಣ್ವ’ ಎನಿಸಿಕೊಂಡಿದ್ದ ಬಿ.ಎಂ.ಶ್ರೀ. ಅವರು ಇಂಗ್ಲಿಷ್‍ನಲ್ಲಿ ಪಾಂಡಿತ್ಯ ಸಂಪಾದಿಸಿದ್ದರೂ ‘ಕನ್ನಡ’ದ ಬಗೆಗಿನ ಬದ್ಧತೆಯಿಂದ “ಅದರಲ್ಲೇನಿದೆ?” ಎಂಬ ಪ್ರಶ್ನೆಗೆ ತುಂಬಾ ಖಚಿತವಾಗಿ, ಸ್ವಾಭಿಮಾನದ ರೂಪದಿಂದಲೇ ಉತ್ತರಿಸಲು ಪ್ರಯತ್ನಿಸಿದ್ದು ಐತಿಹಾಸಿಕ ಸಂಗತಿ. ಪರಸ್ಪರ ಪಡೆದು-ನೀಡಿ ಬೆಳೆಯಬಹುದಾದ ಸಾಧ್ಯತೆಯ ಬಗೆಗೆ ಚಿಂತಿಸಿ ಇಂಗ್ಲಿಷ್-ಕನ್ನಡದ ಸಂಬಂಧವನ್ನು ರೂಪಿಸಿಕೊಳ್ಳಬಹುದಾದ ಸಮನ್ವಯದ ಹಾದಿಯೆನ್ನವರು ತೆರೆದರು. ಹಾಗಿರುವಾಗ್ಯೂ ಕನ್ನಡವೇ ನೆಲದ ಭಾಷೆಯಾಗಿ, ಬದುಕಿನ ಭಾಷೆಯಾಗಿ ಸಂವಹನದ ರೂಪವೂ ಆಗಿರಲೇಬೇಕಿದ್ದ ಸತ್ಯವನ್ನು ಅವರು ಬಹಳ ಸ್ಪಷ್ಟವಾಗಿಯೇ ಪ್ರತಿಪಾದಿ ಸಿದರು. ಇದು ಒಂದು ಸಾಂಸ್ಕೃತಿಕ ಚಳುವಳಿಯಾಗಿಯೇ ನಿರಂತರತೆ ಯನ್ನು ಕಾಯ್ದುಕೊಂಡದ್ದು ಈ ಹೊತ್ತಿಗೂ ಸೂಕ್ಷ್ಮವಾಗಿ ಗಮನಿಸಬಹುದು. ಕುವೆಂಪು ಅವರಂತಹ ಮಹಾಕವಿಯು ತಮ್ಮ ಮೊದಲ ಸಾಹಿತ್ಯ ಸೃಷ್ಟಿಗೆ ಇಂಗ್ಲಿಷ್‍ನ್ನು ಆಯ್ಕೆಮಾಡಿಕೊಂಡದ್ದನ್ನಿಲ್ಲಿ ಸ್ಮರಿಸಬಹುದು. ಅವರು ಆ ಪ್ರಭಾವದಿಂದ ಹೊರಬಂದದ್ದು ನಾಡು-ನುಡಿ-ಸಾಹಿತ್ಯ-ಸಂಸ್ಕೃತಿಗೆ ಎಷ್ಟೆಲ್ಲ ಲಾಭವಾಯ್ತು ಎನ್ನುವ ಅರಿವೇ ‘ಕನ್ನಡ ಭಾಷೆ’ಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವಂತಹುದು. ಕುವೆಂಪು ಮಹಾಕವಿಯಾಗಿ ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಯಾದದ್ದೇ ಒಂದು ಮಹಾ ಬದ್ಧತೆಯ ಸಂಕೇತ.

        ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿಯೂ ಕನ್ನಡದ ಸಾಹಿತ್ಯ ಹಾಡಾಗಿ, ಕಾವ್ಯವಾಗಿ, ನಾಟಕವಾಗಿ, ಕಾದಂಬರಿಗಳಾಗಿ ಹೇಗೆಲ್ಲಾ ಹೋರಾಟದ ಕಿಚ್ಚು ಹಚ್ಚಿತೆನ್ನುವುದು ಈಗ ಇತಿಹಾಸ. ಅಂದರೆ ಒಂದು ಜೀವಂತ ಭಾಷೆಯು ಜನರ ಬದುಕೇ ಆಗುವ ಕ್ರಮದ ಅವಲೋಕನವನ್ನು ನಾವಿಲ್ಲಿ ನಡೆಸಿದ್ದಾಗಿದೆ. ನಾವು ಆರಂಭದಲ್ಲಿ ಗಮನಿಸಿದಂತೆ ಪ್ರತೀ ಸಂಸ್ಕೃತಿಯು ಒಂದಲ್ಲ ಒಂದು ಕಾಲ ಸಂದರ್ಭದಲ್ಲಿ ತೊಡಕುಗಳನ್ನು, ಸಮಸ್ಯೆಯನ್ನು ಎದುರಿಸಿದ್ದಿದೆ. ಅದು ಕನ್ನಡದ ಸಂದರ್ಭದಲ್ಲಿಯೂ ಆಗಾಗ ಕಾಡಿದ್ದಿದೆ, ಕೆಲವು ನಮ್ಮೆದುರಿನ ಸಾರ್ವತ್ರಿಕ ಸಮಸ್ಯೆಗಳಾಗಿಯೂ ಸವಾಲಾಗಿಯೂ ನಿರಂತರವಾಗಿರುವುದುಂಟು ಇದನ್ನೆಲ್ಲಾ ಗೆದ್ದು ನಿಲ್ಲಬೇಕಿರುವುದೇ ನಮ್ಮ ಈ ಹೊತ್ತಿನ ತುರ್ತು. ಆ ಕೆಲವು ಸಮಸ್ಯೆಗಳನ್ನೆ ಮುಂದೆ ಗಮನಿಸಬಹುದು.
 
bottom of page