top of page

ಬೆಳಕಿನ ಬಯಲು. . . .

   ಪರಿವಿಡಿ
1. ಜನ್ನನ ಯಶೋಧರ ಚರಿತೆ ಮತ್ತು ದಲಿತ ಸಂವೇದನೆ
2. ಕನ್ನಡಿ ಕಾಯಕದ ಅಮ್ಮಿದೇವ ಹಾಗೂ ರೇವಮ್ಮ
3. ದಾಸ ಸಾಹಿತ್ಯ ಮತ್ತು ಕನಕದಾಸರು
4. ಸಿದ್ಧಾಶ್ರಮ ಅವರ ವಚನಗಳು
5. ಕಾಡುವ ಕವಿ ಕುವೆಂಪು. . . .
6. ಕುವೆಂಪು ಅವರ ‘ಜಲಗಾರ’ : ಒಂದು ಅವಲೋಕನ
7. ನಾಡಗೀತೆ : ಸಾಂಸ್ಕೃತಿಕ ಅನನ್ಯತೆ
8. ಜಿ.ಎಸ್.ಎಸ್. : ಪ್ರವಾಸ ಕಥನ
9. ಡಾ. ರಾಗೌ ಕಾವ್ಯ: ಕಲಾತ್ಮಕತೆ ಮತ್ತು ಸಾಮಾಜಿಕತೆ
10. ಮಲ್ಲಿಕಾಘಂಟಿ ಅವರ ವಿಮರ್ಶಾಕೃತಿಗಳು
11. ಬಿ.ಟಿ. ಲಲಿತಾನಾಯಕ್ ಅವರ ಕಾವ್ಯ ಮತ್ತು ಸ್ತ್ರೀ ಸಂವೇದನೆ
12. ಭಾರತೀಯ ಮಹಿಳೆ: ವಿಭಿನ್ನ ಮಾದರಿಗಳು
13. ಅಂಬೇಡ್ಕರ್ ಮತ್ತು ನಾಯಕತ್ವ
14. ಕನ್ನಡ ಸಾಹಿತ್ಯ ಮತ್ತು ಸಿನಿಮಾ
15. ಕನ್ನಡ ಸಿನಿಮಾಲೋಕ : ಒಂದಿಷ್ಟು ಅವಲೋಕನ

 

ನಾಡಗೀತೆ : ಸಾಂಸ್ಕೃತಿಕ ಅನನ್ಯತೆ

       ಸ್ವತಂತ್ರ ಭಾರತದ ಕಲ್ಪನೆಯ ಜೊತೆ-ಜೊತೆಗೆ ಕನಸು-ಕನವರಿಕೆಗಳು ರಾಜ್ಯದ ಅಸ್ತಿತ್ವವನ್ನು ಕುರಿತಂತೆ ಕಾಡಿದ್ದು ಈ ದೇಶದ ವೈವಿಧ್ಯತೆಯಲ್ಲಿ ಏಕತೆ ಎನ್ನುವ ವಿಶಿಷ್ಟತೆಯನ್ನೇ ಪ್ರತಿಪಾದಿಸುವುದಾಗಿತ್ತು. ಒಂದು ಜೀವಂತಿಕೆಯ ಅರ್ಥವಾದರೂ ಹೀಗೆ ಒಂದರೊಡನೊಂದು ಬೆಸುಗೆಯಾದಂತೆಯೆ ಪರಂಪರೆಯ ರೂಪಕವಾಗಿರುತ್ತವೆ. ರಾಜತ್ವವೇ ಅಸ್ತಿತ್ವದ ಅರ್ಥವೆನ್ನುವಂತಹ ಭಾರತದ ನೆಲದಲ್ಲಿ ಹೀಗೊಂದು ಪ್ರಜಾಪ್ರಭುತ್ವದ ಸಾರ್ವಭೌಮತೆಯ ಕನಸು ಕದಲಿದ್ದು ಪ್ರತೀ ವ್ಯಕ್ತಿಗೌರವಗಳಿಗಿದ್ದ ವಿಶಿಷ್ಟತೆಯನ್ನೇ ಹೇಳುವಂತಹುದ್ದಾಗಿರುತ್ತದೆ. ‘ಭಾರತ’ ಎನ್ನುವುದಕ್ಕೆ ಭೌಗೋಳಿಕ ವೈವಿಧ್ಯತೆ, ನಿಸರ್ಗದ ಅನನ್ಯತೆ, ಭಾಷಾನೆಲೆಗಳು, ಪರಿಸರ-ಪ್ರಜ್ಞೆ, ಭಿನ್ನ-ವಿಭಿನ್ನವಾದ ಜೀವನಕ್ರಮಗಳೆಲ್ಲವೂ ಒಂದರೊಡನೊಂದು ಸೇರಿಕೊಂಡೇ ಸಮಗ್ರತೆಯ ಅರ್ಥವನ್ನು ಪ್ರತಿಮಿಸುತ್ತವೆ. ಇಂತಲ್ಲಿ ವಿಶ್ವದ ಸಂದರ್ಭದಲ್ಲಿ ‘ಭಾರತ’ ಒಂದು ರಾಷ್ಟ್ರವಾಗಿ ಸ್ವಾತಂತ್ರ್ಯವನ್ನು ಪ್ರತಿಫಲಿಸುವಂತೆ, ಭಾರತದೊಳಗೆ ‘ಭಾಷಾ’ ನೆಲೆಯನ್ನೇ ಮುಖ್ಯವಾಗಿಸಿಕೊಂಡ ವಿವಿಧ ರಾಜ್ಯಗಳೂ ಸ್ವತಂತ್ರವನ್ನು ಮತ್ತೂ ವಿಸ್ತೃತವಾದ ಅರ್ಥದಲ್ಲಿ ಅನುಭವಿಸಿ ಪ್ರಜಾಪ್ರಭುತ್ವಕ್ಕೆ ತನ್ಮೂಲಕ ಭಾರತದ ಅಖಂಡತೆಗೆ ಧ್ವನಿ ತುಂಬುತ್ತಿರುತ್ತದೆ.

       ‘ರಾಷ್ಟ್ರೀಯತೆ’ ಎನ್ನುವುದು ಐಕ್ಯತೆಯ ಒಂದು ರೂಪ ಅಂತೆಯೇ ಅದು ಒಂದಿಷ್ಟು ಭಾವುಕ ಎನ್ನುವ ನೆಲೆಯಲ್ಲಿ ‘ಭಾವೈಕ್ಯತೆ’ಯ ಅರ್ಥವನ್ನು ಒಳಗೊಳ್ಳುತ್ತಿರುತ್ತದೆ. ‘ಜನನಿ ಜನ್ಮಭೂಮಿ’ ಸ್ವರ್ಗಕ್ಕಿಂತ ಹಿರಿದು ಎನ್ನುವ ನಂಬಿಕೆಗಳೆಲ್ಲಾ ಇಂತಲ್ಲಿಯೇ ದೃಢಗೊಳ್ಳತೊಡಗುತ್ತವೆ. ‘ಭಾರತಮಾತೆ’ ಎನ್ನುವುದು ಒಂದು ಶಕ್ತಿಯ ಅರ್ಥವೇ ಆಗುವುದನ್ನಿಲ್ಲಿ ಸ್ಮರಿಸಬಹುದು. ‘ಭಾರತ’ ಪಾರತಂತ್ರ್ಯದಿಂದ ಪಾರಾದ ಹೋರಾಟದ ನಂತರದ ಸವಾಲು ಸಾಮಾನ್ಯವಾದುದಾಗಿರಲಿಲ್ಲವೆನ್ನುವುದು ಇತಿಹಾಸ. ಇದು ಏಕಕಾಲಕ್ಕೆ ಈ ನೆಲದಲ್ಲಿ ಭಾಷಾವಾರು ಪ್ರಾಂತ್ಯದ ವಿಂಗಡಣೆಯೊಂದಿಗೇ ಸ್ವಾತಂತ್ರ್ಯವೆನ್ನುವುದು ವೈಜ್ಞಾನಿಕವಾಗಿಯೇ ಸಂವಿಧಾನಾತ್ಮಕ ನೆಲೆಯಲ್ಲೇ ರೂಪಿಸಿಕೊಂಡದ್ದು ಅದ್ಭುತವೆಂದೇ ಪರಿಭಾವಿಸಬಹುದು. ಇಂದಿಗೂ ಭಾರತದ ಪ್ರಜಾಪ್ರಭುತ್ವಕ್ಕಿರುವ ವಿಶಿಷ್ಟತೆಯ ಹಿನ್ನೆಲೆಯೇ ಇದು ಎನ್ನಬಹುದು.

       ಭಾರತದ ಅಸ್ತಿತ್ವದೊಂದಿಗೆ ‘ಕನ್ನಡ-ಕರ್ನಾಟಕ’ದ ಕನಸು ಏಕೀಕರಣದ ಭಾವವಾಗಿ ಕಾಡಿದ್ದು, ಅದು ಸಾಕಾರಗೊಂಡು ‘ಕರ್ನಾಟಕ’ ಒಂದು ರಾಜ್ಯವಾಗಿ, ಬದುಕಾಗಿ, ಸಂಸ್ಕೃತಿಯಾಗಿ ರೂಪುಗೊಂಡದ್ದು ಈಗ ಇತಿಹಾಸ. ಕ್ರಮೇಣ ಅಸ್ತಿತ್ವಕ್ಕೆ ಹಲವಾರು ಅರ್ಥಗಳು ಕಾಡಿದ್ದಿವೆ. ಅದು ಸದಾ ‘ನಾಡು-ನುಡಿ-ಜನ’ ಎಂಬ ಹಿನ್ನೆಲೆಯಲ್ಲಿ ಅನನ್ಯತೆಯನ್ನು ಸಾಧಿಸಿಕೊಳ್ಳುವುದಾಗಿದೆ. ಹಾಗೆಂದ ಮಾತ್ರಕ್ಕೆ ಇದು ತೀರಾ ಭಾವುಕ ಎಂಬಂತೆ ತಾನಷ್ಟೇ ಅಖಂಡವೆಂದು ‘ಭಾರತ’ದ ಕೇಂದ್ರಪ್ರಜ್ಞೆಗೆ ಎರವಾಗದೆ ಅದರ ವ್ಯಾಪಕತೆಯಲ್ಲಿಯೇ ತನ್ನ ಅನಂತತೆಯನ್ನು ಉಳಿಸಿಕೊಳ್ಳಲು ಹಪ-ಹಪಿಸಿದ್ದು ಈ ನೆಲದ ಮಣ್ಣಿನ ಸತ್ವವೆಂದೇ ಹೇಳಬಹುದು. ಅಲ್ಲಲ್ಲಿ ಕೆಲವು ಪ್ರತ್ಯೇಕತೆಯ ಧ್ವನಿಗಳು ಎದ್ದಿರುವುದನ್ನು ಉಲ್ಲೇಖಿಸಿಕೊಂಡೇ ಅದು ಗಟ್ಟಿಯಾಗಲಾರದ ‘ಸತ್ಯ’ವನ್ನು ‘ಭಾರತೀಯತೆ’ಯ ಶಕ್ತಿಯಾಗಿಯೇ ಅರ್ಥೈಸಿಕೊಳ್ಳಬಹುದು.

       ಇಂತಲ್ಲಿಯೇ ನಮ್ಮದು ಎನ್ನುವ ‘ನಾಡಿನ’ ಪ್ರೀತಿ-ಅಭಿಮಾನ-ಭಾವದ ರೂಪಕವಾಗಿಯೇ ‘ನಾಡಗೀತೆ’ಯೊಂದನ್ನು ಗುರುತಿಸಿಕೊಂಡದ್ದು ರಾಜ್ಯದ ಅಸ್ತಿತ್ವದ ಅರ್ಥದಲ್ಲಿ ಒಂದು ಐತಿಹಾಸಿಕ ಘಟನೆಯೇ ಸರಿ. ಪ್ರತೀ ರಾಜ್ಯವೂ ತನ್ನ ವಿಶಿಷ್ಟತೆಯನ್ನು ಗುರುತಿಸಿಕೊಂಡು, ಅದರ ಕನವರಿಕೆಯಲ್ಲಿ ಸಂಭ್ರಮಿಸುವುದು ಒಂದು ಸಹಜಗುಣವೇ ಹೌದು. ಇದು ತನ್ನ ಸೀಮೆ, ಪ್ರಕೃತಿ, ಇತಿಹಾಸ, ಸಂಸ್ಕೃತಿ, ಭಾಷೆ, ಆಹಾರ, ಆಚರಣೆ, ಕಲೆ ಇತ್ಯಾದಿ ನೆಲೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅಂತಹ ನೂರಾರು ಆಯಾಮಗಳಲ್ಲಿ ಅಲ್ಲಿನ ಕವಿ-ಸಹೃದಯರು ‘ನೂರಾರು’ ಕವಿತೆಗಳನ್ನು ರಚಿಸಿರಲೇಬೇಕು ಮತ್ತೆ ಇದು ಜೀವಂತಿಕೆಯ ಸಂಸ್ಕೃತಿಯ ಕ್ರಮವೆಂದೇ ಹೇಳಬಹುದು.

      ಕನ್ನಡನಾಡು-ನುಡಿ-ಜನರನ್ನು ಕುರಿತ ಅಭಿಮಾನದ ಅವೆಷ್ಟೋ ಹಾಡುಗಳು ಈ ನೆಲದ ಬಗೆಗಿನ ಅನನ್ಯತೆಯ ದಾಖಲೆಗಳಾಗಿವೆ. ಕೇಳುವಾಗ ನಮ್ಮೊಳಗೆ ನಾವೇ ಗುನುಗಿಕೊಂಡಾಗ ಅರಿವಿನಾಚೆಗಿನ ಸಂಭ್ರಮವನ್ನು ತಂದದ್ದಿವೆ. ಇಂತಲ್ಲಿ ನಾಡಗೀತೆ ಎನ್ನುವುದನ್ನು ಅಧಿಕೃತಗೊಳಿಸಿಕೊಳ್ಳುವುದು ಸವಾಲಿನ, ಜವಾಬ್ದಾರಿಯ ಕೆಲಸವೇ ಹೌದು. ಅದಕ್ಕೊಂದು ದೃಢೀಕರಣ, ಒಪ್ಪಿತಸ್ಥಿತಿ, ಸಮಗ್ರತೆಯ ಫಲಿತವಾಗಿರಬೇಕಾಗುತ್ತದೆ. ಅದು ನಾಡಿನಲ್ಲಿ ಬದುಕುವ ಬಹುಮಂದಿಯನ್ನು ‘ಇದು ಸರಿ’ ಎಂಬ ಅರ್ಥದಲ್ಲಿ ಪ್ರಭಾವಿಸುವುದೂ ಆಗಿರುತ್ತದೆ. ‘ಕುವೆಂಪು’ ಈ ನೆಲದ-ಸಾಹಿತ್ಯ-ಸಂಸ್ಕøತಿಯ ಬಹುದೊಡ್ಡ ಪ್ರತಿನಿಧಿ ಎನ್ನುವುದನ್ನು ತನ್ಮೂಲಕ ಕನ್ನಡದ ಹೆಮ್ಮೆ ಎನ್ನುವುದನ್ನು ಯಾರೂ ಸುಲಭಕ್ಕೆ ನಿರಾಕರಿಸಬಹುದಾದುದಲ್ಲ. ಬದುಕಿನ ಜೊತೆಗೆ ಬದ್ಧತೆಗೆ ಮುಖಾ-ಮುಖಿಯಾಗುತ್ತಲೇ ‘ಕರ್ನಾಟಕ ರತ್ನ’ವೇ ಆಗಿಹೋದ ಕುವೆಂಪು ಸಾಧಿಸಿಕೊಂಡ ಹಿರಿಮೆಗೆ ಹಲವು ಆಯಾಮಗಳೂ-ಅರ್ಥಗಳೂ ಇವೆ. ಅದು ‘ವಿಶ್ವಮಾನವತೆ’ಯ ಕಲ್ಪನೆಗೆ ಕನವರಿಸಿದ ಹಾದಿ. ಅಂತಹ ಕವಿ “ಜಯ ಹೇ ಕರ್ಣಾಟಕ ಮಾತೆ!” ಎಂದು ಹಾಡಿದ ಕವಿತೆಯೇ ನಾಡಗೀತೆಯಾದದ್ದು ಸರ್ವದೃಷ್ಟಿಯಿಂದಲೂ ಸಮರ್ಥನೀಯ, ಸಂಭ್ರಮದ ಸಾರ್ಥಕರೂಪ. ಇದೆ ಯಾಕೆ? ಎಂಬ ಪ್ರಶ್ನೆಯೂ ಅಲ್ಲಲ್ಲಿ ಕ್ಷೀಣಧ್ವನಿಯಾಗಿ ಕೇಳಿದ್ದೂ ಇದೆ. ದೀರ್ಘವಾಯಿತು ಎನ್ನುವ ನಿಲುವುಗಳೂ ಅಲ್ಲಲ್ಲಿ ವ್ಯಕ್ತವಾಗುತ್ತಲೇ ಇವೆ. ಇದೆಲ್ಲವೂ ಮತ್ತೆ ಬಹಳ ಖಚಿತವಾಗಿ, ಗಟ್ಟಿಯಾಗಿ ಈ ಕಾರಣಕ್ಕೆ ಎಂದು ವಾದಿಸುವಂತಲ್ಲ. ಒಟ್ಟಾರೆ ಏನೋ ಹೇಳುತ್ತಿದ್ದೇವೆ ಎಂಬ ಅವರವರ ಕಾರಣಗಳನ್ನು ಪ್ರತಿನಿಧಿಸುವಂತಹದ್ದು ಆದರೆ ಎಲ್ಲವನ್ನು ಮೀರಿ ‘ನಾಡಗೀತೆ’ ಈ ನೆಲದ ಅಭಿಮಾನವಾಗಿ ಮೊಳಗುತ್ತಲೇ ಇದೆ. ಕೇಳುವ-ಹೇಳುವ ನಾಲಗೆಗಳಲ್ಲಿ, ಮನಸುಗಳಲ್ಲಿ ಸುಮಧುರಕಂಪನವನ್ನಂತೂ ಉಂಟುಮಾಡುತ್ತಿದೆ. ಶ್ರೇಷ್ಠತೆಯ ಕಲಾಕೃತಿಗಳು ಉಳಿದು-ಬೆಳೆವ ಬಗೆಯೇ ಇಂತಹದು.
 
       ಆರಂಭಕ್ಕೆ ಗಮನಿಸಿದಂತೆ ನಮ್ಮದು ಭಾರತದೊಳಗಿನ ಕರ್ನಾಟಕದ ಅಭೇದದ ಪ್ರಜ್ಞೆ ಇಂತಹ ಅಖಂಡತೆಯ ಪ್ರತಿಪಾದನೆಯೇ ಒಂದು ಸವಾಲು ಅದನ್ನು ಕುವೆಂಪು ಅವರು ಅದ್ಭುತವಾಗಿ ಸಂಯೋಜಿಸುವುದು ಅನನ್ಯ. ಮೊದಲ ಸಾಲುಗಳಲ್ಲಿಯೇ ಆ ಪುಳಕ ಗಮನಿಸಬಹುದು.

    “ಜಯಭಾರತ ಜನನಿಯ ತನುಜಾತೆ,
ಜಯಹೇ ಕರ್ಣಾಟಕ ಮಾತೆ,”

       ಇದೊಂದು ಅದ್ಭುತ. ಭಾರತಮಾತೆಯ ಮಗಳಾಗಿರುವ ಕರ್ನಾಟಕ ನಮ್ಮ ಮಾತೆಯಾಗುವಲ್ಲಿ ಇರುವ ಕಲ್ಪನೆಯ ಸಮಗ್ರತೆಯೇ ಹೃದಯದೊಳಗೆ ಉಳಿದುಹೋಗುತ್ತದೆ. ಭಾರತ ಮತ್ತು ಕರ್ನಾಟಕ ಎರಡರ ಸಾದೃಶ್ಯ ಮತ್ತು ವೈವಿಧ್ಯತೆಯ ರೂಪಕಗಳು ಜೊತೆ ಜೊತೆಯಾಗಿ ವ್ಯಾಖ್ಯಾನಿಸಲ್ಪಡುವಲ್ಲಿ ಕವಿಯ ದರ್ಶನ ವಿಸ್ಮಿತಗೊಳಿಸುವಂತಹುದು. “ಸುಂದರ ನದಿವನಗಳ ನಾಡು, ರಸಋಷಿಗಳಬೀಡು” ಎರಡೂ ನೆಲೆಯಲ್ಲಿಯೂ ಅನ್ವಯಗೊಳ್ಳುತ್ತಲೇ ದೇಶ-ನಾಡಿನ ವಿಶಿಷ್ಟತೆಯನ್ನು ಧ್ವನಿಸುತ್ತದೆ. “ಗಂಧದ ಚಂದದ ಹೊನ್ನಿನ ಗಣಿ”ಯಾದ ಕರ್ನಾಟಕ, ‘ರಾಘವ ಮಧುಸೂದನರವತರಿಸಿದ’ ಭಾರತ ಪರಸ್ಪರ ಅಭಿನಂದನೀಯ ನೆಲೆಯಲ್ಲಿದ್ದು ತಮ್ಮದು ಎಂಬ ಭಾವೈಕ್ಯತೆಗೆ ಒಳಗಾಗುವಂತಿವೆ. ‘ಜನನಿಯ ಜೋಗುಳ ವೇದದ ಘೋಷ’ವಾಗುವ ಕಲ್ಪನೆಯಂತೂ ಅನುಪಮ. ತಾಯಿ-ತಾಯಿನಾಡಿನ ಪ್ರಜ್ಞೆಯನ್ನು ದೇಸಿ-ಶಿಷ್ಟನೆಲೆಯಲ್ಲಿ ಪರಿಭಾವಿಸುವ ಬಗೆಯ ಅತ್ಯುತ್ತಮ ಮಾದರಿಯಿದು. ‘ಹಸುರಿನ ಗಿರಿ’ ಸಮೃದ್ಧಿಯಾಗುತ್ತಲೇ ‘ಕಪಿಲಪತಂಜಲಗೌತಮಜಿನ’ರು ಸರ್ವೋದಯದ ಪ್ರತಿಪಾದಕರಾಗಿದ್ದಾರೆ.

       “ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರ”ರು ತಮ್ಮ ಹೆಸರುಗಳಿಂದಲೇ ಸಂಸ್ಕೃತಿಯ ರೂಪಕಗಳಾದರೆ, ‘ರನ್ನ ಷಡಕ್ಷರಿ ಪೊನ್ನ ಪಂಪ ಲಕುಮಿಪತಿ ಜನ್ನ’ ನಾಡನ್ನು ಮಂಗಳಧಾಮವಾಗಿಸಿದ ಮಹನೀಯರಾಗಿ ಪ್ರಾತಃಸ್ಮರಣೀಯರಾಗಿದ್ದಾರೆ. ಒಂದು ನಾಡು ತನ್ನ ಇತಿಹಾಸದಿಂದ ವರ್ತಮಾನ ಭವಿಷ್ಯತ್ತಿಗೂ ಬಂಧ ಬೆಸೆದು ಆ ಪರಂಪರೆಯ ಜನರಿಗೆ ಹೆಮ್ಮೆಯಾಗುವ, ಆದರ್ಶವಾಗುವ ಸೂತ್ರವನ್ನಿಲ್ಲಿ ಹಿಡಿದಿಡಲಾಗಿದೆ. “ನಾನಕ ರಾಮಾನಂದ ಕಬೀರರು” ಅದರದ್ದೇ ವಿಸ್ತೃತ ನೆಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಆದರ್ಶ ಎನ್ನುವ ಅರ್ಥಕ್ಕೆ ಒಂದೊಂದು ಹೆಸರಾಗುವ ತನ್ಮೂಲಕ ವ್ಯಕ್ತಿತ್ವಗಳಾಗುವ ಈ ಬಗೆಯ ಜೀವಗಳು ಎಲ್ಲ ಮಾನವತೆಯ ಆಸ್ತಿಯಾಗುವರೆಂಬ ಭಾವೈಕ್ಯ ಪ್ರಜ್ಞೆಯಿಲ್ಲಿ ಗಮನಾರ್ಹ.

       ಇತಿಹಾಸವೆನ್ನುವುದಕ್ಕಿರುವ ಆಯಾಮಗಳು ಹಲವು. ಅದನ್ನು ರಾಜತ್ವದ ನೆಲೆಯಲ್ಲಿಯೂ ಗುರುತಿಸುವಾಗ “ತೈಲಪ ಹೊಯ್ಸಳರು” ಆದರ್ಶವಾದಂತೆ “ಕೃಷ್ಣ ಶರಾವತಿ ತುಂಗಾ ಕಾವೇರಿಯವರ ರಂಗ”ವಾದ ನಾಡು ಸಮೃದ್ಧಗೊಂಡ ಸಹಜವಾದ ಬಗೆಗಿನ ಅರಿವು ಇಲ್ಲಿ ಜಾಗೃತಗೊಂಡು ಋಣವಾಗಿದೆ. ಈ ಜೀವಂತಿಕೆಗೂ “ಚೈತನ್ಯಪರಮಹಂಸ ವಿವೇಕರ” ನೆಲವಾದ ನಾಡು ಪುಣ್ಯದ ರೂಪವಾಗುವುದಕ್ಕೂ ಸಂಬಂಧ ವಿದೆ. ಇಡೀ ಕವಿತೆಯ ಶಕ್ತಿ ಕವಿತೆಯ ಮುಂದಿನ ಸಾಲುಗಳಲ್ಲಿದೆ.  

        “ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ”

       ಈ ಕವಿತೆಯೇ ನಾಡಗೀತೆ ಆಗಬೇಕು ಯಾಕೆ ಎನ್ನುವ ಪ್ರಶ್ನೆಗಳಿಗೆ ಸಮರ್ಪಕವಾದ, ಸಮರ್ಥವಾದ ಉತ್ತರವಿದು. ಭಾರತ ಮತ್ತು ಕರ್ನಾಟಕ ಎನ್ನುವುದು ಜಗತ್ತಿನ ಮಾನ್ಯತೆಯ ನೆಲೆಯಾಗುವುದಾದರೆ ಇಂತದ್ದೇ ಜಾತ್ಯಾತೀತ ಅರ್ಥದ ಕಾರಣಕ್ಕೆ ಇದು ‘ವಿಶ್ವಮಾನವತೆ’ಯನ್ನು ಪ್ರತಿಪಾದಿಸಿ ಹೆಮ್ಮೆಪಡುವ ಕ್ರಮ ಮತ್ತು ಆ ಬಗೆಯ ‘ಸರ್ವೋದಯದ’ ಕನಸನ್ನು ಬದ್ಧವಾಗಿಸಿಕೊಳ್ಳುವ ಬಗೆ. “ಸರ್ವಜನಾಂಗದ ಶಾಂತಿಯ ತೋಟ” ಎಂಬ ಮಾತು ಭಾರತವನ್ನು ಇತರ ರಾಷ್ಟ್ರಗಳನ್ನು ಮೀರಿಸಿ ಅನನ್ಯವಾಗಿಸಿ ಕೊಳ್ಳುವ ನಂಬಿಕೆ. ಎಲ್ಲಧರ್ಮಗಳು ‘ವ್ಯಷ್ಟಿ’ ಭಾವವಾಗುತ್ತಲೆ ಮಾನವೀಯ ತೆಯೇ ‘ಸಮಷ್ಟಿ’ಯ ಶಕ್ತಿಯಾಗುವ ಈ ನೆಲದ ಬಹುಜನರ ಹಂಬಲವೇ ಅಕ್ಷರವಾಗಿರುವ ಸಿದ್ಧಿಯಿದು. ಇಂತಹ ಆಶಯಕ್ಕೆ “ಜನಕನ ಹೋಲುವ ದೊರೆಗಳ ಧಾಮ”ವಾಗುವುದೇ ಎಲ್ಲಾ ಕಾಲದ ನಿರೀಕ್ಷೆ.

        ಇಡೀ ಕವಿತೆ ನಿಂತದ್ದು ಕಲ್ಪನೆಯಲ್ಲಲ್ಲ, ಕನಸಿನಲ್ಲಲ್ಲ ನಮ್ಮ ನಿನ್ನೆಗಳ ಬದುಕಿನ ಸಾರ್ಥಕತೆಯನ್ನು ಸ್ಮರಿಸುತ್ತಲೇ, ಆ ಕಾರಣಕ್ಕೆ ಶ್ರೇಷ್ಠತೆಯ ಪಕ್ವರೂಪವಾದ ನೆಲವನ್ನು ಅಭಿನಂದಿಸಿಕೊಂಡು, ಇಂತಹ ನೆಲದಲ್ಲಿ ಹುಟ್ಟಿದ ಭಾಗ್ಯಕ್ಕೆ ಪುಳಕಗೊಂಡೇ ಅದನ್ನು ಉಳಿಸಿಕೊಳ್ಳುವ ಶಪಥಕ್ಕೂ ಮುಂದಾಗಬೇಕಿರುವ ತುರ್ತಿನ ಪ್ರತಿಪಾದನೆಯಿದೆ. ಕನ್ನಡ ಎನ್ನುವುದು ಬರೀ ಶಬ್ದವಲ್ಲ ಭಾಷೆಯಲ್ಲ, ನಾಡು ಕೇವಲ ಭೌಗೋಳಿಕ ನೆಲವಲ್ಲ ಅದು “ತಾಯಿ”.

        ದಿನಾಂಕ 07-12-1928ರಲ್ಲಿ ರಚನೆಯಾದ ಈ ಕವಿತೆ ಸ್ವಾತಂತ್ರ್ಯಪೂರ್ವದಿಂದಲೇ ನಿನ್ನೆ ನಾಳೆಗಳನ್ನು ‘ದರ್ಶನ’ದ ನೆಲೆಯಲ್ಲಿ ಕಂಡುಕೊಂಡ ವರ್ತಮಾನದ ಸಂಭ್ರಮವಾಗಿತ್ತು. ಅದು ಇಂದಿಗೂ ಮತ್ತೆ ಈ ಕ್ಷಣದ ಪ್ರಸ್ತುತತೆ ಎನಿಸುವಲ್ಲಿಯೇ ಕವಿತೆಯ ಸಾರ್ಥಕತೆಯಿದೆ. ಕೇವಲ ಭಾವುಕತೆಗಳು ಭದ್ರವಾದ ನಾಡನ್ನು ಕಟ್ಟುವುದಿಲ್ಲಿ ಇತಿಹಾಸ-ಸಂಸ್ಕೃತಿಯ ಅರ್ಥಗಳು ವರ್ತಮಾನದ ಸಾರ್ಥಕತೆಗಳಾದಾಗ ಮಾತ್ರ ‘ನಾಳಿನ’ ಮತ್ತಷ್ಟು ಗಟ್ಟಿತನಗಳ ನಿರೀಕ್ಷೆಯ ಅರ್ಥವಾಗಬಲ್ಲದು. ಇದು ಕವನದ ಸಾರ್ವಕಾಲಿಕ ಸತ್ವ, ನಾಡಗೀತೆ ಹೀಗೇ ಇರಬೇಕು ಎನ್ನುವುದರ ಸತ್ಯ....
bottom of page