top of page

ಪರಿವಿಡಿ
1.    ಮೊದಲ ಜ್ಞಾನ        (ವಾಲ್ಮೀಕಿ)
2.    ಮಾತೃ ಹಿರಿಮೆ        (ಕೌಸಲ್ಯೆ)
3.    ಮೌನ ತಾಯ್ತನ         (ಸುಮಿತ್ರ)
4.    ಅಸ್ಪಷ್ಟ ತಾಯ್ತನ          (ಕೈಕೆಯಿ)
5.    ವ್ಯಾಮೋಹ ವ್ಯಥೆ         (ದಶರಥ)
6.    ಒಳಬಂಡಾಯ         (ಸೀತೆ)
7.    ಪ್ರಜಾಪ್ರಜ್ಞೆ         (ರಾಮ)
8.    ನಿರೀಕ್ಷಾನೆಲೆ         (ಊರ್ಮಿಳಾ)
9.    ಆದರ್ಶಹಾದಿ         (ಲಕ್ಷ್ಮಣ)
10.    ಬದ್ಧತೆಯ ಬಲ        (ಮಾಂಡವಿ)
11.    ನಂಬಿಕೆಗಳ ನಡುವೆ     (ಭರತ)
12.    ಭಾವಬಿಕ್ಕಳಿಕೆ         (ಅಹಲ್ಯೆ)
13.    ಮಾಯಾಮುಸುಕು     (ಗೌತಮ)
14.    ಅಲ್ಲೋಲ ಕಲ್ಲೋಲ     (ಶಚಿ)
15.    ದಾಹದ ದಾರಿ         (ಇಂದ್ರ)
16.    ವಾತ್ಸಲ್ಯ ನಂಜು         (ಮಂಥರೆ)
17.    ದುಡುಕುತಾಪ         (ಶೂರ್ಪನಖಿ)
18.    ಗೆಲುವೆಗುರಿ         (ಶಬರಿ)
19.    ಅನರ್ಥ ಪ್ರೀತಿ         (ಮಂಡೋದರಿ)
20.    ಪೌರುಷಭ್ರಮೆ         (ರಾವಣ)
21.    ಮಹಾಬದುಕು         (ವ್ಯಾಸ)
22.    ಬದುಕು ಬೆಂಗಾಡು           (ಮೇನಕಾ)
23.    ಮನುಜೋತ್ಕರ್ಷ            (ವಿಶ್ವಾಮಿತ್ರ)
24.    ಕದಡಿದ ಕನಸು            (ಶಾಕುಂತಲ)
25.    ಬಯಲಾದ ಬದುಕು      (ದುಷ್ಯಂತ)
26.    ಗಂಧಮಾರ್ಗ            (ಸತ್ಯವತಿ)
27.    ಮೋಹಯಾತ್ರೆ            (ಶಂತನು)
28.    ದುಡುಕು ದುರಂತ        (ಭೀಷ್ಮ)
29.    ಪ್ರೇಮಜ್ವಾಲೆ            (ಅಂಬಾ)
30.    ಬೆಳಕಿನ ಕತ್ತಲು            (ಗಾಂಧಾರಿ)
31.    ಕಪ್ಪುಕರುಳು            (ಧೃತರಾಷ್ಟ್ರ)
32.    ದಿಟ್ಟ ದಟ್ಟತೆ            (ಕುಂತಿ)

   ಹೀಗಿದ್ದೆವು ನಾವು. . . .

   1. ಮೊದಲ ಜ್ಞಾನ

     ಆದಿಮ ಕವಿ, ಮೊದಲ ಕಾವ್ಯ
ನನ್ನ ಹಿರಿಮೆಯೆ? ವಾಲ್ಮೀಕಿ ಅಭಿಧಾನ.
ನನ್ನದಲ್ಲದ ಹೆಸರು ನಾನು ಗಳಿಸಿದ್ದು.
ಬೇಟೆ, ಕಾಡು, ಸಂಘರ್ಷ ಪೂರ್ವಾಶ್ರಮ
ಅರಿವಿನ ಹಂಬಲ, ಜ್ಞಾನ ಶ್ರಮದ ಆಸ್ತಿ,
ಕಾಲ, ದೇಶಗಳ ಪರಿವೆಯಲ್ಲ ಮೈತುಂಬ ಮಣ್ಣು
ಎದ್ದು ಬಂದಾಗ ಒಳ, ಹೊರಗೆ ಬೆಳಕು.
ಬದುಕ ಬರೆದದ್ದು, ಮಹಾಕಾವ್ಯದ ಹಾದಿ.
ತುಂಬುಹೆಣ್ಣು, ಒಡಲೊಳಗೆ ಜೀವ ಅನಾಥಭಾವ
ಎತ್ತಲೋ ನಡೆದು ಬಿಡುವ ಅಪಾಯ
ರಾಮನರ್ಧಾಂಗಿ, ಕರ್ತವ್ಯದಂತೆ ರಕ್ಷಣೆ,
ರಾಜಕಾರ್ಯ, ಸ್ವ-ಸಂಬಂಧ ಅಂತರವಿತ್ತು
ತಿಳಿವಾಗಬೇಕಿತ್ತು, ಹಾಗಾಗಲಿಲ್ಲ
ಕಾಪಾಡುವಾ ಹೊತ್ತಿಗೆ ಮೌನ, ಸಂಘರ್ಷ
ಲವ-ಕುಶ ಜನನ.... ಸೀತೆಯ ಧನ್ಯತೆ
ಬರೆವವನೆ ಪಾತ್ರವಾಗುವ ವಿಚಿತ್ರ.
ಕಲಿಸಿದ ಹಾಡು ಕಲ್ಪನೆಯಲ್ಲ, ಸತ್ಯ.
ಹಾಡ ಹೊರಟವರೆ, ಕಾವ್ಯದ ಭವ್ಯ ಭವಿಷ್ಯ
ರಾಮನನ್ನು ಗೆದ್ದು, ಒಪ್ಪುವ ಬಾಲರು
ಹೇಳಿದ್ದು, ಹಾಗಾಗಿ, ಅಕ್ಷರ....
ಈ ನೆಲದ ಶ್ರಮದ, ಮಣ್ಣಿನಮಗ
ಬೇಟೆಯಿಂದ ಬರಹದೆಡೆಗೆ....
ಕಾಲದೊಂದಿಗೆ ಎಲ್ಲ ಚಲನೆ,
ರಾಮ, ಸೀತೆ, ರಾವಣ....  ಲವ, ಕುಶ....
ವಾಲ್ಮೀಕಿ ಎಂದರೆ ಆದಿಮ ಅಕ್ಷರ....
                             . . . .ವಾಲ್ಮೀಕಿ
 

2. ಒಳ ಬಂಡಾಯ

   ತಿರುಗಿ ನೋಡಿದೆನೊಮ್ಮೆ,
ಇದು ಕೊನೆಯಬಾರಿ, ಅರಿವುನನಗಿತ್ತು.
ಬಿಗಿದ ಮುಖದಲ್ಲಿದ್ದ, ನಗು ಮರೆತಿದ್ದ
ಕೆದಕಿ ನೋಡುವ ಭ್ರಮೆ, ನೆನಪುಗಳ
ಎಂದೆಂದಿಗೂ ನನ್ನರಾಮನಾಗಲೇ ಇಲ್ಲ....
ಮನೆತನ, ಮೌಲ್ಯ, ರಾಜತ್ವ
ಬರೀ ಶಬ್ದಗಳ ಗಾರುಡಿ, ಕಳೆದುಹೋಗಿದ್ದ
ಅಶೋಕವನ.... ಆ ಏಕಾಂತ,
ಕೆರಳಿಸಿತ್ತು, ಒಂದಷ್ಟು ಕನಸುಗಳ
ಎಲ್ಲವ ನುಂಗಿಹಾಕಿತ್ತು, ಅಗ್ನಿ ಪ್ರವೇಶ....
ಕಾಡಿನೊಳಗೆ ನಾ ಹುಡುಕಿದ್ದು ನನ್ನನ್ನೆ....
ತಿಳಿದುಕೊಂಡೆ ಎಂದುಕೊಂಡು ನಿರಾಳ
ಮತ್ತೆ ಬಂದ, ನಿಂತ, ಪರೀಕ್ಷೆ ಎಂದ
ಇಲ್ಲ, ಇವ ಬದಲಾಗುವುದಿಲ್ಲ.
ನಿತ್ಯ ಒಪ್ಪಿಸುವ, ನಂಬಿಸುವ ಕಾಯಕ,
ನನ್ನಿಂದಾಗುವುದಿಲ್ಲ, ಆಗಬೇಕಿಲ್ಲ.
ಸುತಾರಾಂ ಒಲ್ಲೆ, ಸುವರ್ಣ ಚೌಕಟ್ಟು
ನರಳಬೇಕು, ತನ್ನೊಳಗೆ ಕೊರಗಬೇಕು, ಇವ
ನನ್ನೆಲ್ಲಾ ಬೇಗುದಿಗಳಿಗೆ ಅರ್ಥ ಅರಿವಾಗಬೇಕು
ಹೇ, ತಾಯಿ, ಭುವಿಯೇ,
ಬಾಯ್ತೆರೆಯೆ, ಒಂದಿಷ್ಟು ಸುಖನಿದ್ರೆಬೇಕು.
                              . . . .ಸೀತೆ
 

3. ಪ್ರಜಾ ಪ್ರಜ್ಞೆ

    ಆ ನೋಟದಲ್ಲಿ ಉತ್ತರಿಸಲಾಗದ ಪ್ರಶ್ನೆಗಳು
ಎಷ್ಟೋ ಬಾರಿ, ಹೀಗೆ.... ಮತ್ತೆ ಮತ್ತೆ....
ಭಾವಗಳೆಲ್ಲಾ ಅದುಮಿ ಹೋದವೇ....?
ಅವಳ ಬಯಕೆ ತೀರಾ ಸಹಜವಿತ್ತು, ಅರಿವಿತ್ತು.
ನಾನು ಅವಳವನಾಗಲೇ ಇಲ್ಲ. ಬರೀ ಪ್ರಶ್ನೆ.
ರಾಮನೆಂದರೆ ಏನು? ಸಮುದಾಯ ಚಿತ್ರ.
ಅಪ್ಪ, ರಾಜ, ಪ್ರಜೆಗಳು ಆದರ್ಶದ ಹಾದಿ
ಹುಟ್ಟಿನೊಂದಿಗೇ ಅಂಟಿಕೊಂಡಂತೆ,
ಕದಲಿದ್ದಾ ಕನಸೆಲ್ಲಾ ಪ್ರಜಾಸಂಹಿತೆ
ವೀರತ್ವದ ಅರ್ಥವೆಲ್ಲಾ ಪರಂಪರೆಯ ಹಾದಿ
ಶಿವಧನುವಿನೊಂದಿಗೆ ಸೀತೆ ಗೆಲುವು
ವಿಜಯೋತ್ಸಾಹವಷ್ಟೇ ತುಂಬಿತ್ತೆ?
ಕನಸು, ಆಸೆ, ನಿರೀಕ್ಷೆಗಳ ಹಾದಿ, ಸೀತೆಗೆ
ಅಪ್ಪ-ಚಿಕ್ಕಮ್ಮನ ನಡುವೆ ಕಾನನವಾಸ
ಒಬ್ಬ ಹೊರಟಿದ್ದಾಗಲಿಲ್ಲ, ತಮ್ಮ ಅನಿವಾರ್ಯ.
ಹಠಹಿಡಿದ ಸತಿ, ಇಲ್ಲವೆನ್ನಲಾಗಲಿಲ್ಲ....
ಕಾಡು ಕಾಡಷ್ಟೇ ಅಲ್ಲ. ಶೌರ್ಯಶೋಧ
ರಾವಣತ್ವದ ಬೆದರು ಬೊಂಬೆ, ಗೆದ್ದಿದ್ದೆ....
ನ್ಯಾಯಾನ್ಯಾಯ, ಧರ್ಮಾಧರ್ಮಗಳ ಸಂಘರ್ಷವೆ?
ಬೆಂಕಿ ಪರೀಕ್ಷೆ, ಜಗಕೆಂದೆ ನಾನು, ನನಗಲ್ಲವೆ?
ಗೆದ್ದುನಿಂತವಳು, ಮತ್ತೆ ಜನರನುಮಾನ
ಸೋತವನು ನಾನು ತಾನೆ,.... ನಾನೇ ತಾನೆ?
                                   . . . .ರಾಮ


4. ನಂಬಿಕೆಗಳ ನಡುವೆ

   ಅಯೋಧ್ಯ, ದಶರಥ ಹೆಸರುಗಳೇ ದಿವ್ಯ
ಆ ಮಡಿಲುಗಳ ಜನ್ಮ, ಅಕ್ಕರೆ, ಪುಣ್ಯ
ಬೆಳೆದಂತೆ ಸಂಭ್ರಮ, ಭದ್ರತೆಗಳ ಭಾವ
ಶ್ರೀರಾಮನ ಅನುಜ, ಜಗದ ಅಸ್ತಿತ್ವ,
ಸೊಗಸಿತ್ತು. ಪ್ರೀತಿ-ವಾತ್ಸಲ್ಯ, ಜನಾನುರಾಗ
ಸ್ವಚ್ಛಂದ ಹಕ್ಕಿಯ ಸ್ವಾತಂತ್ರ್ಯ ಹರಕೆ
ನನ್ನಷ್ಟಕ್ಕೆ ನಾನು, ನನ್ನೊಂದಿಗೆ ಶತ್ರುಘ್ನ
ಬದುಕೆಂದರೆ ಹೀಗೇನಾ.... ಸೊಗಸು!
ಹರೆಯದ ಉತ್ಸಾಹ, ಸಾರ್ಥಕ ಸತಿ
ತಾಯ್ತನಕ್ಕೆ ಕೈಕೆ ಮಂಥರೆ....
ಪ್ರೀತಿಗೆ ಸ್ವಾರ್ಥ ಮತ್ತೊಂದು ಮುಖವೆ?
ಹಾಲು ಹಾಲಾಹಲವಾದಗಳಿಗೆ ಘೋರ
ಯಾವ ಅರಿವಿರಲಿಲ್ಲ, ವಾತ್ಸಲ್ಯ ವಿಷವಾಯ್ತೆ?
ನಾನಿಲ್ಲ, ನನ್ನ ಬದುಕಿನ ತೀರ್ಮಾನ
ಪ್ರಜಾನುರಾಗಿಗೆ ವನವಾಸವಂತೆ!
ಸ್ವತಂತ್ರ ಹಕ್ಕಿ ನಾನು, ರಾಜನಂತೆ....
ನರಕವೆಂದರೆ ಮತ್ತೇನು? ಕಳಂಕ, ನಿಂದನೆ
ಅಣ್ಣನಿಲ್ಲದ ಬದುಕೆಂತು? ಭಾವವೆಂತು?
ಬರಲಿಲ್ಲ, ಪಾದುಕೆಗಳೇ ಭರವಸೆ
ಅವನೊಡನೆ ಹೊರಟ ಭಾಗ್ಯವಿಲ್ಲ....
ಬದುಕಲಾದೀತೆ ಅವನಂತೆ. . . . ಯತ್ನ.
ನಂದೀಗ್ರಾಮ, ಆರೋಪಿತ ಜೀವನ
ಕಾಯುತ್ತೇನೆ ಹದಿನಾಲ್ಕು ವರ್ಷ....  ಸತತ
ಅರೆಕ್ಷಣವೂ ಆಚೀಚೆಯಾಗುವಂತಿಲ್ಲ
ಬಂಧಮುಕ್ತನಾಗಬೇಕು....
ಜನ-ಜಗತ್ತು ನಗಬೇಕು....
                         . . . .ಭರತ


5. ಆದರ್ಶ ಹಾದಿ

   ಹೀಗೆ ಕಾಡಬಹುದೆ ಅವಳು....
ಹಾಗೆಂದುಕೊಂಡಿರಲಿಲ್ಲ, ಹೊರಡುವಾ ಮುನ್ನ
ಅಣ್ಣನ ನೆರಳೇ ಬದುಕೆಂದಾ ಪ್ರೀತಿ
ಸೊಗಸಿತ್ತು ಮಿಂದೆದ್ದೆ, ವಾತ್ಸಲ್ಯ, ಪುಣ್ಯ
ಅವನಿಗಾಗಿಯೇ ಏನೆಲ್ಲಾ-ಬದುಕು, ಪ್ರಾಣ
ಅನುಜನಲ್ಲಿಯ ಅಕ್ಕರೆ ಅಸದಳ....
ಪರಸ್ಪರ-ವಾತ್ಸಲ್ಯ-ಬಂಧನ, ಬದ್ಧತೆ
ಅತ್ತಿಗೆಯ ನೆರಳಾಗಿ ನನ್ನ ಸತಿಯಾಗಿ ಬಂದವಳು
ಮುಗ್ಧ ಚೆಲುವು, ಒಲವು, ಸುಖದ ಗೆಲುವು
ಸಾರ್ಥಕವಾಯಿತು, ಇನ್ನೇನಿದೆ ಸಾಕು....
ಆದರ್ಶದ ಪಿತೃವಾಕ್ಯದ ಹೆದ್ದಾರಿ....
ಕಾನನದ ಹಾದಿ ತುಳಿಯುವಾ ಹೊತ್ತು....
ನನಗೇನೂ ಚಿಂತಿಸುವಂತಿಲ್ಲ,
ನೆರಳು, ಹೊರಡಲೇಬೇಕಿತ್ತು, ಹೊರಟುನಿಂತೆ....
ನನ್ನದೇ ನಿಲುವು, ಬದುಕಿದ್ದದ್ದೇ ಹೀಗೆ....
ಯಾರಲ್ಲೂ ಮಾತುಗಳಿಲ್ಲ,.... ಆದರೆ.... ಊರ್ಮಿಳಾ....
ಕಣ್ತುಂಬ ಅಕ್ಷರ, ಪದ, ವಾಕ್ಯಗಳು
ಮೌನದಲ್ಲೇ ಒಪ್ಪಿದ ನಗುವೂ ಬೆಂಬಲ
ಇದ್ದರಿರಬೇಕು ಇಂತಹಾ ಸಂಗಾತಿ
ಎದೆತುಂಬ ಬೆಳದಿಂಗಳು, ನಿತ್ಯತಂಪು
ಹದಿನಾಲ್ಕು ವರ್ಷ, ಸರಳ ಸಂಗತಿಯಲ್ಲ
ಅರಿವಾದ ಸತ್ಯ.... ವಿಶಿಷ್ಟ, ಅನನ್ಯ
ಅವಳ ಪ್ರೇಮವೇ ತಪ, ನನ್ನ ಗೆಲುವು
                               . . . .ಲಕ್ಷ್ಮಣ


6. ನಿರೀಕ್ಷಾ ನೆಲೆ

   ಸರಯೂ ನದೀ ತೀರ....
ಕಾಯುವುದು, ಕಣ್ಮುಚ್ಚಿ ಮನತೆರದು,
ಹದಿನಾಲ್ಕುವರ್ಷ, ನನ್ನದಲ್ಲದ ಕಾಲ
ಮೌಲ್ಯ-ತ್ಯಾಗಗಳ ಬೆನ್ನು ಹತ್ತಿ, ನಲ್ಲ
ಬೇಡವೆನ್ನಲಾಗುತ್ತಿತ್ತೆ?
ನನ್ನಂತೆ ಹತ್ತುಹಲವು ಹೆಣ್ಣುಮನಸ್ಸು
ಯಾರಿಂದ ಯಾರು, ಯಾರಿಗಾಗಿ ಯಾರು?
ಕೈಕೆ, ಕೌಸಲ್ಯ, ಸುಮಿತ್ರೆ, ಸೀತೆ....
ಬರೀ ಪರಂಪರೆ, ನಂಬಿಕೆ ಸಂತಾನ
ತಪಸ್ಸು ಭ್ರಮೆ, ಅನಿವಾರ್ಯ ವಾಸ್ತವ
ಕನಸುಗಳು ಕೆನೆಗಟ್ಟುವ ಹೊತ್ತು
ಹೊರಟೇ ಬಿಟ್ಟ ಅಣ್ಣನ ನೆರಳು
ನಾನಾದರೋ ಅವನ ನೆರಳು
ಸಾಗಲಾಗಲಿಲ್ಲವೇಕೆ? ವೈರುಧ್ಯಗಳ ಪ್ರಶ್ನೆ
ಉತ್ತರಕ್ಕೆ ಕಾಯಬೇಕು ಮತ್ತೆ
ರಾಜತ್ವ, ಸಂಚು, ನೂರು ಒಳಸುಳಿ
ಮುಗ್ಧ ಪ್ರೇಮದ ಹಂಬಲವಷ್ಟೆ ನನ್ನದು
ಫಲದ ಹೊತ್ತಿಗೆ ನಿರೀಕ್ಷೆಯ ತುರ್ತು
ಹಿಡಿ-ಹಿಡಿಯಾಗಿ ಸಿಕ್ಕಿಬಿಡಲಿ ನಲ್ಲ
ಬೊಗಸೆ ತುಂಬ ಬೆಚ್ಚನೆ ಪ್ರೇಮ
ಹಕ್ಕು-ಅರ್ಹತೆಗಳೆಲ್ಲ ನನ್ನವು
ಅವನು ಎಲ್ಲದರಾಚೆಗೂ
ನನ್ನವನೇ ಆಗಬೇಕು, ನಿಜ.
ನನ್ನನ್ನೇ ಕನವರಿಸಬೇಕು.
                            . . . .ಊರ್ಮಿಳಾ


7. ಪೌರುಷ ಭ್ರಮೆ

    ತನ್ನದೇ ಬಾಹುಬಲ, ಶೌರ್ಯ
ಅಸೀಮ ವರ, ದಾನವೇಂದ್ರ
ಹೊಸ ವ್ಯಾಖ್ಯಾನ, ಮುನ್ನುಡಿಗಳ ಬದುಕು
ತುಂಬು ಕುಟುಂಬ, ಸಾರ್ಥಕಭಾವ
ಆ ದಿನ ಬಂದದ್ದು ಹೇಗೆ? ಏಕೆ?
ಕದಲಿಸಿದ ಕ್ಷಣ, ಶೂರ್ಪನಖಿ ಸಾಕ್ಷಿ
ಸೀತೆಯ  ಕನಸು, ಅಹಂಕಾರದ ಕ್ಷಾತ್ರತ್ವ
ಎಷ್ಟು ಹೆಣಗಾಟ, ಏನೆಲ್ಲಾ ತಂತ್ರ
ಮಾರೀಚ ಒಪ್ಪಿದಾ ಹೊತ್ತು, ಸುವರ್ಣ ಜಿಂಕೆ
ಅಸಹಜ, ಪ್ರಕೃತಿಯ ಸಂಘರ್ಷ
ಹೊತ್ತು ತಂದದ್ದು ಯಾರನ್ನು? ಏನನ್ನು?
ಹೆಣ್ಣು ಮಾಯೆಯೆ? ಮೋಹವೆ?
ಎಲ್ಲಗೆದ್ದವ, ಜಿತೇಂದ್ರಿಯನಾಗಬೇಕಿತ್ತು....
ಜಗಕ್ಕೆ ಕಿವುಡಾದ ಕ್ಷಣ, ಮೌನ ಮಂಡೋದರಿ
ನೂರಾರು ಪ್ರಶ್ನೆ, ಆ ಕಣ್ಗಳಲಿ, ಕಣ್ಣೀರಿನಲಿ
ನಿತ್ಯ ಪಲಾಯನ, ಪುರುಷತ್ವ ಅಹಂಕಾರ
ಗೆದ್ದಳವಳು ದಿನೇ ದಿನೇ ಪರಸ್ತ್ರೀ....
ಸೋಲಿನ ಸಂಚಾರ ಸಾವಿನ ಪರಂಪರೆಯೆ?
ಉತ್ತರ ನನ್ನೊಳಗೇ ಇತ್ತು, ಅಹಂಕಾರ....
ಗೆಲ್ಲುವ ಹುಚ್ಚುತನದ ಕನಸು,
ಕಾಡುತ್ತಿದೆ.... ಮಂಡೋದರಿಯ ಮುಗ್ಧ ಪ್ರೇಮ
ಹೆಣ್ಣಾಗಲಿಲ್ಲ, ಸೌಂದರ್ಯವಲ್ಲ ಸೀತೆ....
ಇದು ಆರಂಭವಲ್ಲದ ಅಂತ್ಯವೆ?
                              . . . .ರಾವಣ


8. ಮಹಾ ಬದುಕು

    ಹುಟ್ಟಿಗಿದ್ದ ಅರ್ಥ ಆ ಕ್ಷಣದ ಅರಿವಲ್ಲ
ಅಪ್ಪ ಪರಾಶರ, ಅಮ್ಮ ಸತ್ಯವತಿ,
ಸಂಬಂಧದ ಹೆಸರಲ್ಲ ಫಲಿತ ನಾನು
ಬದುಕು ಹುಡುಕಾಟವೇ ಇದ್ದೀತು....
ಜ್ಞಾನ, ಜೀವನ, ಸಂಘರ್ಷ, ಸಮನ್ವಯ
ಜನ್ಮದಾತರ ಆಶೀರ್ವಾದ, ಸಾರ್ಥಕಭಾವ
ನನ್ನಂತೆ ನಾನು, ಬಂದಂತೆ ಬದುಕು
ಕಾಲದ ಅರಿವಿನ ಆಚೆಗೆ
ಎಂದೋ ಜನ್ಮವಿತ್ತವಳ ಕರೆ
ಎದುರು ನಿಂತಿದ್ದೆ. ಮಾತುಗಳು ವಿನಂತಿ, ಅಪ್ಪಣೆ
ಅಳಿದುಹೋದ ರಾಜತ್ವದ ನಂಬಿಕೆ
ವಾರಸುದಾರಿಕೆಯ ಅನಿವಾರ್ಯತೆ
ಅಮ್ಮನ ಮಾತು, ಕ್ಷಾತ್ರಧರ್ಮ
ಒಪ್ಪಿದ್ದೆ, ಸಂಸಾರಿಯಾಗಲಿಲ್ಲ
ಹೊಸ ಜೀವದ ಫಲವಂತಿಕೆಗೆ
ಸನ್ಯಾಸಿ, ಶೃಂಗಾರಿಯಾಗುವಂತಿಲ್ಲ
ಕರ್ತವ್ಯ, ಜವಾಬ್ದಾರಿ, ನಿಯಮ
ಯಾರೆಂಬ ಅರಿವಲ್ಲ, ಅಗತ್ಯವಿಲ್ಲ
ಕಣ್ಮುಚ್ಚಿದ ಹೆಣ್ಣೊಬ್ಬಳು ನಿರ್ಲಿಪ್ತೆ
ಬೆದರಿ, ಬಿಳಿಚಿದವಳು ಮತ್ತೊಬ್ಬಳು
ರಾಜತ್ವದ ವಿಲಾಸಿತನದ ಸುಖ ನೋಟ
ದಾಸಿಯೊಬ್ಬಳ ಸೇವೆ, ಸಮಾಧಾನ
ಪರಂಪರೆಯ ಬದುಕು, ಕಥನ
ಮಹಾಭಾರತ, ಪಾತ್ರವೂ ನಾನು
ಕರ್ತೃವೂ ನಾನೆ.... ಅನಿವಾರ್ಯತೆಯೆ?
                               . . . .ವ್ಯಾಸ


9. ಮನುಜೋತ್ಕರ್ಷ

   ಮನುಷ್ಯತ್ವವೇ ಜಯದ ಉತ್ಕರ್ಷ
ಎಲ್ಲಿಂದೆಲ್ಲಿಗೋ ಇದರ ಹಾದಿ
ರಾಜನಾಗಿದ್ದ ಹೊತ್ತು ವಸಿಷ್ಠ ಸಂಘರ್ಷ
ಕಾಮಧೇನು ನೆಪ ನನ್ನದಾಗಬೇಕು, ಹಕ್ಕು
ಮುನಿತನವೆಂದರೆ ರಾಜತ್ವಕ್ಕು ಮಿಗಿಲೆ?
ಪರೀಕ್ಷಿಸಿಯೇ ಬದ್ಧ, ಹಠವೇ ಸಾಧನೆ
ಗೆದ್ದೇ ಗೆಲ್ಲಬೇಕು, ಸ್ವಾಭಿಮಾನದ ಹುಡುಕಾಟ
ಅರಮನೆ, ಐಶ್ವರ್ಯ, ಪಕ್ಕಕ್ಕಿರಲಿ
ಅರಣ್ಯವಾಸದ ತಪಸ್ಸು, ಒಂದಿಷ್ಟು ಹೊಸತು
ಸುಲಭವಲ್ಲ ಗೆಲುವು, ನಿಸರ್ಗ ದೊಡ್ಡದು
ಮತ್ತಷ್ಟು ದೊಡ್ಡದು ಬಯಕೆ, ದಾಹ....
ಪರವಶತೆಯ ಒಂದು ದಿನ, ಅಪ್ಸರೆ
ಎಲ್ಲರಾ ಕನಸಿನಾ ಮೇನಕೆ ‘ಸುಳಿ’ದಾಟ
ಅನುಭವಿಸುವುದೇ ಸರಿ.... ನಿರ್ಧಾರ
ಅರಿವು.... ಎಚ್ಚರ.... ಅವಳಂತೆ ನಾನೂ
ಎಲ್ಲಾ ಬಿಟ್ಟೆ.... ಅವಳನ್ನೂ....
ಮತ್ತೆ ತಪಸ್ಸು.... ಬ್ರಹ್ಮರ್ಷಿ ಹಂಬಲ
ತ್ರಿಶಂಕು ನಿಂತಾ ಹೊತ್ತು, ಫಲ
ಪರ್ಯಾಯದ ಸ್ವರ್ಗ, ಪ್ರತಿಭಟನೆ
ಸೋಲುವ ಮಾತಲ್ಲ, ಗೆಲ್ಲುವ ಪ್ರಶ್ನೆಯಲ್ಲ
ನಾನೆಂದರೆ ನಾನಲ್ಲ
ವಿಶ್ವಾಮಿತ್ರ.... ಜಗದೆಲ್ಲ ‘ಧೀರತ್ವ’
ಹುಡುಕಾಟಗಳ ‘ಹೊಸಅರ್ಥ’.
                             . . . .ವಿಶ್ವಾಮಿತ್ರ


10. ಗಂಧ ಮಾರ್ಗ

   ಬಾ, ಎಂದ, ಕೈಹಿಡಿದು
ಯಾರಿವನು? ಧಿಮಾಕು, ಅಧಿಕಾರ
ವಯಸ್ಸಿನ ಮದವೂ ಅಲ್ಲ, ಮಾಗಿದದೇಹ
ಚಪಲತೀರಿದಂತಿಲ್ಲ, ಹಾಗೆಂಬ ಹಠ
ತಣ್ಣಗೆನಿಸಿತು, ಅಪ್ಪನೆಡೆಗೆ ನನ್ನ ಬೆರಳು
ಕುಗ್ಗಿದಂತೆ ಕಂಡ, ಸಾಗಿದ ಗೆಲ್ಲಲು
ನಗು ಉಕ್ಕಿತು ವ್ಯಂಗ್ಯ? ಸಂಭ್ರಮ?
ಅಂದು, ತೆಪ್ಪ ಏರಿದ್ದ ಆ ಆತ
ಅರಿವಿನ ಒಳಗೇ ತಾನೇ ನಾನಾಗಿದ್ದ
ಕನಸುಗಳಿಗೆಲ್ಲ ಕಸುವು ತುಂಬಿ
ಗಂಧವತಿಯನ್ನಾಗಿಸಿಬಿಟ್ಟ....
ನನಗದು ಬೇಕಿತ್ತೆ? ಉತ್ತರ ಸಿಕ್ಕಿಲ್ಲ
ಕಾಡುತ್ತಾನೆ ಹಸಿಯಾಗಿ, ನೆನಪಾಗಿ
ಆಪ್ತವಾಗಿದ್ದ, ಬೆಚ್ಚಗಿದ್ದ
ನೋವುಗಳೊಂದಿಗೇ ಮತ್ತೆ
ಹೊಸತಾಗಿಸಿ, ಬದಲಾಯಿಸಿದ ಹಾದಿ
ಮತ್ತೆ ಕನ್ಯೆ-ಹಾಗೆಂದು ಕಾಣಿಸಿದ್ದೇನೆ
ಅವನು ಬರುವುದಿಲ್ಲ ಇನ್ನು
ಬಂದಿದ್ದಾನೆ ಇವನು
ಮೋಹದ ಬಲೆಯೊಳಗಿನ ಮಿಕ
ದಾಹ ಹಸಿವು ಗೆಲ್ಲಲಾಗದವ
ಏನು ಕೊಡಬಲ್ಲ?
ಅವನೊಳಗೇ ಏನೂ ಇಲ್ಲ....
                         . . . .ಸತ್ಯವತಿ


11. ದುಡುಕು ದುರಂತ

ಹೀಗಾದೀತೆನಿಸಿತ್ತೆ ತನಗೆ?
ಕಾಡುತ್ತಲಿವೆ ನಿತ್ಯವೂ, ಎತ್ತಿಂದೆತ್ತ ಬದುಕು
ಹರೆಯಕ್ಕೆ ಬಂದ ಬದುಕು, ಪಟ್ಟದ ಸಾಮೀಪ್ಯ
ಹಕ್ಕುಗಾರಿಕೆ, ಕರ್ತವ್ಯ, ಬದ್ಧತೆ, ಪ್ರಜ್ಞೆ
ಎಲ್ಲವೂ ಕಲಿತಾಗಿತ್ತು, ಸಾಧನೆಯ ಹಾದಿ
ಅಪ್ಪ ಹಪಹಪಿಸಿ, ಒದ್ದಾಡಿದ್ದ ವಿಚಿತ್ರ
ಸತ್ಯ ಶೋಧದ ಅಚ್ಚರಿ ಕಾಮನೆಯ ಪ್ರೀತಿ
ಅಂಬಿಗರ ಕನ್ಯೆಯ ಬಯಸಿ ಬೇಡಿದ್ದ
ಷರತ್ತು, ಕಟ್ಟಳೆಯ ಚಡಪಡಿಕೆ
ಮಗ ನಾನು, ತಂದೆಯ ಕತ್ತಲೆಯಬೆಳಕು
ಅವನ ಆಸೆ ಹಾದಿ ಹಿಡಿದುಹೊರಟೆ
ದೂರಾಲೋಚನೆಯ ಮಗಳು-ಅಪ್ಪ
ದೊಡ್ಡ ತ್ಯಾಗ ಬೇಡುವ ಸಂಬಂಧ
ಆ ಕ್ಷಣಕ್ಕೆ ಒಪ್ಪಿಯೇ ಬಿಟ್ಟಿದ್ದು ಉತ್ಸಾಹವೆ?
ದೇಹ ವಾಂಚಲ್ಯದ ಹಿರಿತನ, ಚಾಪಲ್ಯ?
ಸಹಜ ಆಸೆಯ ಹಂಬಲಕೆ ಬಂಧನ
ಆಜನ್ಮ ಬ್ರಹ್ಮಚರ್ಯದ ಘೋಷಣೆ, ಕ್ಷಣದ ನಿಲುವು
ಭವಿಷ್ಯತ್ತಿಗೆ ಕರಾಳವಾಗಬಹುದೆ? ಗೊತ್ತಿಲ್ಲ
ನಡೆದೇ ಹೋಯಿತು ಅಪ್ಪನ ವಿವಾಹ
ಬೆನ್ನು ಅಟ್ಟಿದಂತೆ ಬಂತು ಚಿಕ್ಕಮ್ಮನ ವೈಧವ್ಯ
ಬಿಡಿಸಿಕೊಳ್ಳುವಂತಿಲ್ಲ. ಬಾಂಧವ್ಯ, ಕರ್ತವ್ಯ
ಅಂಬೆಯ ಶಾಪ, ಶಿಖಂಡಿ ಕನಸು
ದಾಯಾದಿಕಲಹದ ಕದಲುವಿಕೆಯ ನೋಟ
ಇಚ್ಛಾಮರಣ ವರವೆ? ಶಾಪವೆ?
ಉತ್ತರ ಮಾತ್ರ ಬಾಣಗಳ ಮಂಚದಲಿ.
ಇರಿಯುವ ಮೊನಚುಗಳಲಿ....
                           . . . .ಭೀಷ್ಮ

12. ಪ್ರೇಮೋತ್ಕರ್ಷ

    ಕಾಡುತ್ತಾನೆ ಮನದೊಳಗೆ ಕೆಣಕಿ
ಕರೆದು ಬಿಡಲೆ, ಬಂದೇಬಿಡುತ್ತಾನೆ
ಎಷ್ಟೊಂದು ನಿರೀಕ್ಷೆಗಳಿತ್ತು ಆ ಹೊತ್ತು
ಹೋಗಲೇಬೇಕೆ? ಕೇಳಿದ್ದವು ಕಣ್ಗಳು
ಅನಿವಾರ್ಯವಾಗಿತ್ತು ವಾಸ್ತವ
ಜಗತ್ತಿನ ದೇವ, ಮಗು ಎನಿಸಿದ್ದ
ಅವನಿದ್ದದ್ದೆ ಹಾಗೆ, ಕಳ್ಳ
ಎಲ್ಲೆಲ್ಲಿಯೂ ಅವನು ಎನ್ನುವ ಕಣ್ಕಟ್ಟು
ಗೋಕುಲವೇ ತುಂಬಿಕೊಂಡ ಸಂಭ್ರಮ
ನಗುತ್ತಿದ್ದ ನನ್ನ ಬಳಿ ಇದ್ದು ಮಾತ್ರ
ನಗು ಅವನ ಆಸ್ತಿ, ಗೋಪಿಕೆಯರ ಕೇಂದ್ರ
ಬೆಳೆದದ್ದು ತನ್ನ ಕೈಯಳತೆ
ಮುರಳಿ, ನಾದ ಪಲುಕು ನೀನೆಂದ
ಕರ, ಉಸಿರು ಸೋಕಿಗೆ ಹಸಿರು
ನಿತ್ಯ ಭಾವ-ರಾಗಗಳ ಪಲ್ಲವ
ಪಡೆದವರಾರು? ಕೊಟ್ಟವರಾರು?
ಉಳಿದದ್ದೇನು? ಅಳಿದದ್ದೇನು?
ಲೆಕ್ಕಣಿಕೆಯ ಸೂತ್ರವೂ ಇಲ್ಲ
ನಿಂತ ನಿಲುವೆಲ್ಲಾ ಭಾವಭಂಗಿ
ನಾಳೆಗಳಿಗೆ ಮಾದರಿಯು ಮಾತ್ರ
ಪರಿಪೂರ್ಣನಾದ ಆ ಹೊತ್ತು, ಹೋಗಲೇಬೇಕಿತ್ತು
ನೋಡುತ್ತ ನಿಂತಿದ್ದೆ ನಾನು ರಾಧೆ
ಆಕಾರ ಕರಗುತ್ತಿತ್ತು ಹೊರಗೆ
ನಗುತಲಿದ್ದ ನಿಜದ ಕೃಷ್ಣ ನನ್ನೊಳಗೆ....
                            . . . .ರಾಧೆ
 

13. ಅಮರ ಪ್ರೇಮ

    ಕಾಲ ಕಾಯುವುದಿಲ್ಲ. ಅರಿವಾಗಿತ್ತು.
ಮಾತಿನಂತೆ ಮೌನವೂ ಮೌನವಾಗಿತ್ತು.
ಹೊರಟು ನಿಂತಿದ್ದೆ, ನನ್ನದಲ್ಲದ ಆಸೆ
ಚೆಲುವು, ಒಲವು, ನಲಿವಿದ್ದ ನೆಲ ಗೋಕುಲ
ಬೆಣ್ಣೆ, ಸಖೀಜನ, ಗೋವು, ಕೊಳಲು
ನನ್ನದೇ ಲೋಕ.... ಜೀವ-ಜೀವನ ರಾಧಾ
ಎದುರು ನಿಂತ ಈ ಗಳಿಗೆ, ಕೊನೆಯಾ....?
ಸಖಿ, ಗೆಳತಿ, ಪ್ರಿಯೆ, ಗುರು, ತಾಯಿ....
ಒಂದೆರಡಲ್ಲ ಹೆಣ್ಣೆನ್ನುವ ಎಲ್ಲಾ ಅವಳೇ ಅವಳು
ಕೊಳಲಿನ ಉಸಿರಾಗಿ ಕೊರಳಾದವಳು
ಗೆಳೆತನಕೆ ಅನುರಾಗದ ಅರ್ಥ ತಂದವಳು
ಭಾವ, ಮನಸು, ಆತ್ಮಗಳ ರೂಪವಾದವಳು
ಕರ್ತವ್ಯದ ಕರೆ ಊರಾಚೆಗೆ
ಧರ್ಮಸಂಸ್ಥಾಪನೆಯ ಅಸ್ಪಷ್ಟ ಕನಸು
ನಿಜ ಮುಗ್ಧ ಬಯಸಿದಾ ನನ್ನ ಬದುಕು
ಚಂದವಿದ್ದದ್ದು ಇಂದಿಗೆ ಪೂರ್ಣವೆ?
ಹೇಳಲಿ ಸಖಿ, ಏನಾದರೂ.... ಮಾತಲ್ಲ ಆಜ್ಞೆ....
ಮಾತಿಲ್ಲ, ಕಾಲದ ನಡೆಯೂ ನಿಧಾನ
ನೋಡುತ್ತಾಳೆ, ಕಂಪಿಸುತ್ತಾಳೆ, ಸರಿಯುತ್ತಾಳೆ
ವಿದಾಯದ ನೆರಳು ಭಾವದ ತುಂಬಾ
ಮೆಲ್ಲನೆ ಕೊಳಲು ಹಿಡಿದು ನಿಂತವಳು
ಕಣ್ಣಲ್ಲೆ ಹೊರಡು ಎಂದಳು....
ಮತ್ತೆ ಬರುವ ಹಾದಿ ಇಲ್ಲವೆ....?
                          . . . .ಕೃಷ್ಣ


 14. ಅತೃಪ್ತ ಅರಿವು

    ಅರಿವು ಬಂದ ದಿನದಿಂದ ಕನಸು
ಜಗದದ್ವಿತೀಯ ಬಿಲ್ಗಾರನಾಗಬೇಕು
ನಾನೆಂದರೆ ನಾನೇ! ಅರ್ಜುನನಾಚೆಗೆ ಏನಿಲ್ಲ
ಕನಸುಗಳಿಗೆ ನೀರೆರೆವ ಪಿತಾಮಹ
ಗುರುದ್ರೋಣ, ಹಂಬಲದ ಹಾದಿಗೆ ಆಸರೆ
ಕಲಿಕೆ, ಏಕಾಗ್ರತೆ, ಸಾಧನೆ ಪ್ರತೀಕ್ಷಣ
ತಪ್ಪದು, ತಪ್ಪಬಾರದು ಇಟ್ಟಗುರಿ
ನಾಳೆ ಏನೋ, ಹೇಗೋ, ಬೇಕು ಮಹಾಯುದ್ಧ
ತುಂಬಿ ತುಳುಕಬೇಕು ಮೂರೂಲೋಕ
ಸವ್ಯಸಾಚಿ, ಗಾಂಡೀವಿ, ಪಾಶುಪತಾಸ್ತ್ರ
ಹೆಸರೆಂದರೆ, ಧ್ವನಿ, ನೆನಪು, ಕೀರ್ತಿ
ಮಧ್ಯಮ ಪಾಂಡವ, ಶೌರ್ಯದ ಅಗ್ರಗಣ್ಯ
ದ್ರೌಪತಿಯ ಮಾಲಿಕೆ ಗೆಲುವು, ಪರಂಪರೆ,
ಮುರಿದು ದಹಿಸಬಹುದಿತ್ತು ಕೌರವನ
ಧರ್ಮದನೆರಳು, ಅಗ್ರಜನ ಗೌರವ ಪ್ರೀತಿ
ನಾಳೆಗಳು ನನ್ನವೇ.... ಇರಲಿ ಕಾದುಬಿಡುವೆ
ಊಲೂಪಿ, ಚಿತ್ರಾಂಗದಾ, ಸುಭದ್ರಾ ಗೆಲುವು
ಸಂಭ್ರಮಕೆ ಹಲವು ಹಾದಿ ಅಭಿಮನ್ಯು....
ಮಹಾಯುದ್ಧ, ಕುರುಕ್ಷೇತ್ರ ಹದಿನೆಂಟು ದಿನ
ಭೀಷ್ಮ, ದ್ರೋಣ, ಕರ್ಣ, ಸಂಘರ್ಷ
ಗೆದ್ದದ್ದು ಗೆಲುವೆ? ಸೋತದ್ದು ಸಾವೆ?
ಕಾಡುವಾಗ ಬರೀ ಅಸ್ಪಷ್ಟ ನೆರಳು
ನಿರಾಳತೆಯ ಆಳ-ಅರಿವು ಸುಲಭವಿಲ್ಲ
ಸುಳಿಯುತ್ತದೆ ನೆನಪು, ಕೃಷ್ಣ
ನಾನೂ.... ನಾನೇ ಆದೆನೇ.... ಪ್ರಶ್ನೆ....
                               . . . .ಅರ್ಜುನ


. ವೀರ ಚಕ್ರ

    ಕೊನೆಯಾ ಕ್ಷಣ ಚಕ್ರವ್ಯೂಹದ ಕಪಟ
ವೀರಾಧಿ ವೀರರೆಲ್ಲಾ ಸೋತವರೆ!
ಭೂಮಿ ಅಪ್ಪಿ ಬಿದ್ದಗಳಿಗೆ, ಸಾವಿನ ಸತ್ಯ
ಕದಲಿ ಹೋದಾಳು ಸಂಗಾತಿ....
ಆರತಿ ಎತ್ತುವಾಹೊತ್ತು ಉತ್ತರೆಯ ಕಣ್ಗಳಲಿ ಪ್ರಶ್ನೆ....
ವೀರಾಧಿವೀರರಾಚೆಗೆ, ಸಂಚುಗಳು
ದ್ರೋಣರ ಚಕ್ರ ಶಪಥ.... ತನಗೆ ಗರ್ವ
ಅವೆಷ್ಟೋ ಸಡಗರದ ಆಶಯ
ಆ ಹೊತ್ತು, ಬರೀ ಯುದ್ಧ ಕನವರಿಕೆ
ತಿರುಗಿ ನೋಡಲಾಗಲಿಲ್ಲ, ಸಂಜೆ ಕಾಲಕ್ಕೂ....
ಭರವಸೆಯಾಚೆಗೆ ಏನಿದ್ದೀತು ಬೇರೆ?
ಒಳ ಭೇದಿಸಿ, ನುಗ್ಗಿದಷ್ಟೇ ಅರಿವು....
ಯುದ್ಧವೆಂದರೆ ಅದೆಷ್ಟು ಅದ್ಭುತ,
ಮೈತುಂಬ ಅಪ್ಪನದೇ ನೆರಳು.... ರಕ್ತ
ಬೀಸಿದ್ದು, ಬಡಿದದ್ದು, ಕೊಂದದ್ದು
ಲೆಕ್ಕವಿಲ್ಲ....?  ಕಣ್ಗಳು, ವಿಸ್ಮಯ ಪರಿಧಿ
ದ್ರೋಣ, ಕೌರವ, ಕರ್ಣ, ದುಶ್ಯಾಸನ....
ಬಾಲಕನೆಂದುಕೊಂಡರೆ? ಸುಳ್ಳಾಗಿತ್ತು ಕಲ್ಪನೆ
ಕನಲಿ ಹೋದವರು, ಜಾಲ ಹೆಣೆದರು
ಅಸಹಾಯಕವೆನಿಸಲಿಲ್ಲ.... ಸುಮ್ಮನೇ ಕೊಂದರೆ?
ಮುಚ್ಚಿಹೋಗುತ್ತಿವೆ ಕಂಗಳು....
ಅಲ್ಲಿ.... ಅಲ್ಲಿ ಕಾಣುತ್ತಾಳೆ ತುಂಬು ಬಸಿರಿನ ಸತಿ....
                                  . . . .ಅಭಿಮನ್ಯು


55. ಭಾವದ ಕುದುರೆ

    ಅಪ್ಪ, ನಹುಷ, ವಂಶದೊಡೆಯ ಚಂದ್ರ
ಬಾಲ್ಯದಿಂದಾಚೆಗೆ ಯವ್ವನವೆ?
ನೂರಾರು ಕನಸು, ಹುಚ್ಚೆಂಬ ಭಾವ
ಬೆಂಕಿ, ಕಲ್ಲು, ಶಿಲೆ ಶಿಲ್ಪ.... ರೋಮಾಂಚ
ಮೈತುಂಬ ಅರಳಿದ ಕಂಪು ಹೆಸರೇನು?
ಅನುಭವಿಸಬೇಕು, ಅರಿಯಬೇಕು....
ಅರಿತಷ್ಟೂ ಅರಿತರಿತೂ ಶೃಂಗಾರ, ರಸರಾಗ
ಕನಸಿನ ಕನವರಿಕೆ, ನಡೆದತ್ತ ದಾರಿ
ಹಾಳು ಭಾವಿ, ಮಧುರ ಧ್ವನಿ, ಕರೆದದ್ದು ಯಾರಿಗೆ?
ಕೈ ನೀಡಿದ್ದೆ, ಉಳಿಸುವುದಷ್ಟೇ. . . ಗುರಿ
ಮೇಲೆ ಬಂದವಳು, ಹೆಣ್ಣು, ಯವ್ವನ
ಅಸ್ತವ್ಯಸ್ತ ಬಟ್ಟೆ, ಭಾವ, ಬಯಕೆ
ದೇವಯಾನಿ, ಅಪ್ಪ ಸಂಜೀವ ಆಚಾರ್ಯ
ಒಪ್ಪಿದರೆ ಲಾಭವಿತ್ತು. ಕನಸುಗಳ ಯಾತ್ರೆ
ಅರ್ಧಾಂಗಿ, ಆ ಕ್ಷಣದಿಂದ ಪಟ್ಟದರಸಿ
ಸುಖವಿತ್ತೆ? ಒಂದಷ್ಟು ಗೊಂದಲ
ಕಣ್ಗಳಲಿ, ಮಾತಿನಲಿ, ಅಪ್ಪನ ಅಹಂಕಾರ
ಬೇಕಿತ್ತೋ ಬೇರೇನೋ.... ಹುಡುಕಾಟ....
ಕಂಡಿತ್ತು ಕನವರಿಕೆ, ಪುಳಕ....
ಬೇಕಿದ್ದರಾಚೆಗೆ, ಸಾಕಷ್ಟು ನೀಡಿ-ಪಡೆದು ಗೆದ್ದಳು
ಪ್ರೇಮ, ಶೃಂಗಾರ, ನವಿರು, ನಲಿವು, ಶರ್ಮಿಷ್ಠೆ
ಅರಿಯುವಾ ಹೊತ್ತಿನಲಿ, ಮೈಮರೆತಗಳಿಗೆಗೆ
ಶಾಪ, ಉಗ್ರ, ಕಠೋರ.... ಮುಗಿದಿಲ್ಲ
ಬದುಕು, ತುಂಬು ಆಸೆಗಳ ಆದರ್ಶ....
ನನಗೆ ಬೇಕು, ನನ್ನ ಯವ್ವನ... ಯವ್ವನ
ಉತ್ತರ... ಪುರು ಮಾತ್ರವೆ?....
                                . . . .ಯಯಾತಿ


56. ನಿಜದ ನಲ್ಲೆ

    ಒಮ್ಮೆ ಒಂದಿಷ್ಟು ದುಡುಕು
ಬದುಕು ಹಂಚಿಹೋಗಬಹುದೆ?
ಎಂದಿಗೂ ತಾನು, ಹಾಗಲ್ಲ, ಅರಿವಿರಲಿಲ್ಲ
ದೊರೆತನ, ಅಪ್ಪನ ಮಗಳು ನಿಜ,
ವ್ಯಕ್ತಿತ್ವ ತನ್ನದೆ ಮಾದರಿಯ ಹಾದಿ
ಮಂದಿ ಮೆಚ್ಚಿ ಹರಸುವ ಹೆಸರು-ಶರ್ಮಿಷ್ಟೆ
ಅಂತಸ್ತು-ಅಹಂಕಾರ ಸರಿಸಿ ಗೆಳೆತನ
ಸಹಿಸಿ, ಸಲಹಿ,ನಡೆವ ನಿತ್ಯ ಕಾಯಕ
ಅಪ್ಪನ ನೆರಳಿನ ಅಹಂಕಾರ ದೇವಯಾನಿ
ಹಂಗಿಸುವುದೇ ದರ್ಪದ ಆಹಾರವೆ?
ದೂಡಬೇಕೆಂದಿರಲಿಲ್ಲ, ಅಚಾತುರ್ಯ,
ಕ್ಷಮಿಸಬಹುದಾದದ್ದು, ಸಾಧ್ಯವಾಗದು ಅವಳಿಗೆ
ರಾಜತ್ವ ಉತ್ಕರ್ಷದಿಂದ-ಅಧಃಪತನ
ಅರಿವಿರದ ಕರ್ಮದಲಿ ಬೆನ್ನುಹಿಡಿವ ದಾಸಿ
ಅದೆಂತಾ ಗೆಲುವು, ಅದೆಷ್ಟು ಅಟ್ಟಹಾಸ....?
ಕನಸುಗಳೆಲ್ಲಾ ಅನಾಥವಾಗುವಾ ಹೊತ್ತು
ಮಾರ್ದವ ಪ್ರೀತಿ ತಂದ ಮಹಾರಾಜ
ಹೊಸ ಹಾದಿ ಗೆಲುವಿಗೆ ತೆರೆದದ್ದೆ?
ತಿಳಿವಿನ ಸಂಘರ್ಷದಲ್ಲೇ ಮಾಗಿ, ಸೋತಿದ್ದೆ
ಅಂದಿನ ತಪ್ಪು- ಹೀಗೊಂದು ಪರಿಹಾರ
ನಲುಗುವ ನಲ್ಲನಿಗೂ ನಿಜ ಪ್ರೇಮದ ಆಸರೆ
ದಿಟ್ಟವಾಗಬೇಕಿತ್ತು, ದಟ್ಟವಾದ ಬದುಕಿಗೆ
ನಾನು ನಾನಾಗಿ ಉಳಿದಾಗ ನನ್ನಷ್ಟಕೆ,
ಅವಳು ಅವಳಾಗದೆ ಅಳಿದಳು ತನ್ನಷ್ಟಕೆ.
                                  . . . .ಶರ್ಮಿಷ್ಠೆ

 

 

33.    ನತದೃಷ್ಟ ನಡೆ          (ಪಾಂಡು)
34.    ಮೂರ್ಖ ಮೃತ್ಯು       (ಮಾದ್ರಿ)
35.    ವಾತ್ಸಲ್ಯ ಕಂಪನ        (ದೇವಕಿ)
36.    ಬಯಸದ ಭಾಗ್ಯ       (ಯಶೋಧೆ)
37.    ಪ್ರೇಮೋತ್ಕರ್ಷ        (ರಾಧೆ)
38.    ಅಮರ ಪ್ರೇಮ        (ಕೃಷ್ಣ)
39.    ಪ್ರೇಮಾಲಾಪ         (ರುಕ್ಮಿಣಿ)
40.    ಅರೆ ಅಸ್ತಿತ್ವ          (ಸತ್ಯಭಾಮೆ)
41.    ಅಗ್ನಿಅಬ್ಬರ              (ದ್ರೌಪತಿ)
42.    ಸತ್ಯ ಸಂಕಟ         (ಧರ್ಮರಾಯ)
43.    ಬಲಿತ ಬಲ             (ಭೀಮ)
44.    ಅತೃಪ್ತ ಅರಿವು           (ಅರ್ಜುನ)
45.    ಸುತ ಸಂಕಟ            (ಚಿತ್ರಾಂಗದೆ)
46.    ದೈವವ್ಯೂಹ             (ಸುಭದ್ರೆ)
47.    ವೀರಚಕ್ರ              (ಅಭಿಮನ್ಯು)
48.    ವೀರ ನೋವು          (ಉತ್ತರೆ)
49.    ಆತಂಕದ ನೆರಳು        (ಭಾನುಮತಿ)
50.    ಹಟ್ಟಹಾಸದ ಆಟ     (ದುರ್ಯೋಧನ)
51.    ವಾತ್ಸಲ್ಯ ಕಂಪನ         (ಕರ್ಣ)
52.    ಅಪ್ಸರಾಬಂಧ         (ಊರ್ವಶಿ)
53.    ಕದಡಿದ ಕನಸು         (ಪುರೂರವ)
54.    ದುರಂತ ಪ್ರತಿಷ್ಠೆ         (ದೇವಯಾನಿ)
55.    ಭಾವದ ಕುದುರೆ         (ಯಯಾತಿ)
56.    ನಿಜದ ನಲ್ಲೆ         (ಶರ್ಮಿಷ್ಠೆ)
57.    ಪ್ರಣಯ ಮಥನ         (ಅಮೃತಮತಿ)
58.    ಕುಸಿದ ಬದುಕು         (ಯಶೋಧರ)
59.    ಅಮೃತವಂತ         (ಅಷ್ಟಾವಂಕ)
60.    ಸಾತ್ವಿಕ ಸಂಘರ್ಷ     (ಚಂದ್ರಮತಿ)
61.    ಆತ್ಮಾನುಸಂಧಾನ         (ಹರಿಶ್ಚಂದ್ರ)


 

bottom of page