top of page

ಬದುಕು ಭಾವಗೀತೆ....

ಪರಿವಿಡಿ
1. ಬದುಕೆಂದರೆ....
2. ಬಾಲ್ಯವೆಂಬ ಮಾಧುರ್ಯ....
3. ಮಾತು.... ಮಾತಾಗಬೇಕು....
4. ಹರೆಯದಾ ಹೊಸಿಲು....
5. ವ್ಯಕ್ತಿತ್ವವನ್ನರಸುತ್ತಾ....
6. ಸ್ನೇಹ ಸಂಪದ....
7. ಜನ... ಗಣ... ಮನ...
8. ಅಕ್ಷರ ಕಲಿಸಿದ ಅಕ್ಕರೆಗೆ... ನಮನ....
9. ಹಬ್ಬಗಳೆಂದರೆ.... ಅರಿವು.... ಎಚ್ಚರ.... ಬೆಳಕು....
10. ಕಾಡುವ ಕನವರಿಕೆಯಾಗಲಿ... ಮಹಾತ್ಮ....
11. ನೆನೆನೆನೆ ಮನವೇ... ನಮ್ಮ ಆದಿಕವಿಯ
12. ಅಂದುಕೊಂಡದ್ದರಾಚೆಗಿದೆ ಬದುಕು....
13. ನಿನ್ನೆಗಳು.... ನಮ್ಮವಾಗಲೇ ಇಲ್ಲ....
14. ಭಾಷೆಯೆಂದರೆ....  ಬದುಕು, ನಾಡೆಂದರೆ.... ಅಸ್ತಿತ್ವ
15. ಸಿನಿಮಾ ಎಂಬ ಮಾಯೆ.... ಕನ್ನಡವೆಂಬ ಕನವರಿಕೆ....
16. ರಾಜ್ ಎಂದರೆ ಅಸಾಮಾನ್ಯ ಬದುಕು
17. ಆತ್ಮವಿಶ್ವಾಸವೆಂಬ.... ವಿಶ್ವಾಸ....
18. ಹೊಸತನವೆಂದರೆ.... ನಮ್ಮತನ....
19. ಗೆಲುವು-ಸೋಲುಗಳೆಂಬ ಅರಿವುಗಳ ನಡುವೆ....
20. ಅಹಂಕಾರವೆಂಬ ಅನಾರೋಗ್ಯ....
21. ಚಲುವಿನ... ಚಂದ....
22. ಸಂಬಂಧಗಳೆಂಬ ಸಡಗರ...
23. ಸಣ್ಣತನವೆಂಬ ಸಂಕಟ....
24. ಸಾಂಸ್ಕೃತಿಕ ಜವಾಬ್ದಾರಿಯೆಂಬ ಸತ್ಯ....
25. ಹೆಣ್ಣೆಂಬ ನೀನು ಜೀವಕೇಂದ್ರ ತಾಯಿ....
26. ದೇವರೆಂಬ ನಂಬಿಕೆ....
27. ಶ್ರೀ ಸಾಮಾನ್ಯನೆಂದರೆ....
28. ಅಮ್ಮಾ ಎಂದರೆ.... ಅಸ್ತಿತ್ವ
29. ಅಪ್ಪನೆಂದರೆ.... ಭರವಸೆ
30. ಆಧುನಿಕತೆ ಎಂಬ.... ತಳಮಳ
31. ಜೈಭಾರತ ಜನನಿ...
32. ಶಿಕ್ಷಕರೆಂದರೆ ಬದ್ಧತೆಯ ಭಾವಗಳು
33. ಜ್ಞಾನ ಎಂಬ ಸಾಮಾನ್ಯತೆಯ ಸುತ್ತಾ....
34. ವಾಲ್ಮೀಕಿ ಮತ್ತು ಗಾಂಧಿಯನ್ನು ನೆನೆ.. ನೆನೆದು.....
35. ಯುವಜನತೆ, ಧರ್ಮ ಮತ್ತು ಸಂಸ್ಕೃತಿ
36. ಕನ್ನಡವೆಂದರೆ ಬರೀ ನುಡಿಯಲ್ಲ, ನಾಡಲ್ಲ.......
37. ಮೌಲ್ಯದ ಮೌಲ್ಯವೆಂದರೆ...?
38. ಬೆಳಕೆಂಬ ಜ್ಞಾನ....

ಬದುಕೆಂದರೆ....
  
      ‘ಬದುಕು’ ಹಾಗೆಂದರೇನು ಎಂದುಕೊಳ್ಳುತ್ತಲೇ ಬದುಕುತ್ತಿದ್ದೇವೆ. ಹುಟ್ಟು-ಸಾವಿನ ಸತ್ಯಗಳ ನಡುವಿನ ‘ಬೆಳವಣಿಗೆ’ ಎನ್ನುವ ಸಾಧ್ಯತೆಯೇ ಬದುಕೆ? ಜೀವನದ ಅರ್ಥವನ್ನು ಹಾಗೆ ಭಾವಿಸಿಕೊಳ್ಳುವುದೇ ಸರಳವಾದ ಒಂದು ಗ್ರಹಿಕೆ. ಜೀವರಾಶಿಗಳಲ್ಲಿ ಮಾನವ ಉತ್ತಮ ಎಂದುಕೊಂಡದ್ದಕ್ಕೆ ಹಲವು ಕಾರಣಗಳಿವೆ. ಹಾಗಾಗಿ ಮನುಷ್ಯನ ಜನ್ಮಕ್ಕೆ ಶ್ರೇಷ್ಠತೆಯ ಹಲವು ಆಯಾಮಗಳು ಹುಟ್ಟಿನೊಂದಿಗೆ ಬೆಸೆದುಕೊಂಡಿವೆ.

       ಹೀಗೊಂದು ಚರ್ಚೆಯ ಹಾದಿ ತೆರೆದುಕೊಂಡ ತಕ್ಷಣಕ್ಕೆ ಒಂದು ಗಂಭೀರ ತಾತ್ವಿಕತೆ ಕಾಡಿಬಿಟ್ಟಿತೆ? ಎನಿಸಿಬಿಡಬಹುದು. ಆದರೆ ಬದುಕುತ್ತಿದ್ದೇವೆ ಎಂಬ ಸತ್ಯದ ಸಹಜತೆಗೂ ಯಾವುದಾದರೂ ಒಂದು ನೆಲೆಗಟ್ಟು ಇರಲೇಬೇಕಲ್ಲವೆ? ಏನೆಲ್ಲವು ಸರಿ ಇರಬಹುದು ಆದರೆ ಪರಿಪೂರ್ಣತೆ ಎಂದರೇನು ಎನ್ನುವುದನ್ನು ಈ ಹೊತ್ತಿಗೆ ‘ಆಧುನಿಕತೆ’ ಎನ್ನುವುದರೊಂದಿಗೆ ಮುಖಾ-ಮುಖಿಯಾಗಿಸಿಕೊಂಡರೆ ವರ್ತಮಾನದಲ್ಲಿ ನಿಂತು ಇತಿಹಾಸ ನೋಡುವುದು ಅನಿವಾರ್ಯ....

      ‘ನಿನ್ನೆಗಳು ಸೊಗಸಾಗಿತ್ತು’ ಹೀಗೆನ್ನುವುದೊಂದು ಸಹಜವಾದ ಹಿರಿತನದ ನೆಲೆಯಿಂದ ಬಹುಮತದ ಧ್ವನಿಯಂತೆ ಕೇಳಿಬಂದರೆ ಅದು ಒಂದು ಆ ಬಗೆಯ ಪರಂಪರೆಯನ್ನೇ ಪ್ರತಿನಿಧಿಸುತ್ತಿದೆಯೇ ಎನಿಸದಿರುವುದಿಲ್ಲ. ಸಾಮಾನ್ಯವಾಗಿ ಕಾಲದ ಕಾರಣದಿಂದ ಹಿರಿತನವನ್ನು ಲೆಕ್ಕಕ್ಕಿಡಿಯುವಾಗ ಎಲ್ಲಾ ಕಾಲದಲ್ಲೂ ಇಂತಹದ್ದೊಂದು ತಕರಾರು ಇದ್ದದ್ದೆ. ಅಂದರೆ ಅದು ಈ ಕಾಲ-ವರ್ತಮಾನ ಸರಿಯಿಲ್ಲ ಎನ್ನುವುದನ್ನೇ ಧ್ವನಿಸಿಬಿಡುತ್ತದೆ....

       ‘ಮಾನವ ಜನ್ಮ ದೊಡ್ಡದು ಹಾನಿಮಾಡಿಕೊಳ್ಳಬೇಡಿರ ಹುಚ್ಚಪ್ಪಗಳಿರಾ’ -ಹೀಗೆಂದರು ದಾಸರು. ಇಲ್ಲಿ ಹಾನಿ ಎನ್ನುವುದು ಸಾವಿನ ಅರ್ಥವನ್ನು ಧ್ವನಿಸುವುದಲ್ಲ ಬದಲಾಗಿ ಸಾರ್ಥಕವಾಗಿ ಬದುಕಲೇಬೇಕಾದ ಅಗತ್ಯತೆಯನ್ನು ಒತ್ತಿಹೇಳುತ್ತಿದೆ. ಇದು ಪರಿಪೂರ್ಣತೆಯ ಹುಡುಕಾಟದ ರೂಪವೂ ಹೌದು. ಇಂತಲ್ಲಿಯೇ ಮಾದರಿಯ ಪ್ರಶ್ನೆಯೂ ಉದ್ಭವವಾಗುತ್ತದೆ. ಹೇಗೆ? ಏನು? ಎಷ್ಟು? ಯಾರು? ಎಲ್ಲಿ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿಯೇ ಸಾರ್ಥಕ್ಯದ ಅರ್ಥ ಹುಡುಕುವ ಪ್ರಯತ್ನ ಸಾಗಬಹುದು.

       ಖಂಡಿತಾ ಉತ್ತರಗಳು ಸುಲಭವಿಲ್ಲ. ಯಾವುದರಿಂದ ಯಾವುದು ಎಂಬಲ್ಲಿಯೇ ಮತ್ತಷ್ಟು ತೊಡಕುಗಳಿವೆ. ಆ ನಡುವೆಯೇ ಬದುಕು ಕಾಲದೊಂದಿಗೆ ಹೊಂದಿಕೊಂಡಂತೆ ಸಾಗಿಯೇಬಿಡುತ್ತದೆ. ಕಾಲ ಯಾರನ್ನು ಕಾಯುವುದೇ ಇಲ್ಲ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ ಅಡಿಗರು ಎತ್ತುವ ಪ್ರಶ್ನೆಯೊಳಗೆ ಉತ್ತರವೂ ಇದ್ದಂತಿದೆ. ಬಂದ ಹಾಗೆ ಸ್ವೀಕರಿಸಬೇಕೆ? ಹೋರಾಟ ಅನಿವಾರ್ಯವೆ? ನಿರ್ಲಿಪ್ತತೆಯೆ ಹಾದಿಯೆ? ಸಮಗ್ರತೆಯ ರೂಪದಲ್ಲಿ ಉತ್ತರವಿಲ್ಲ. ಆದರೆ ಬದುಕಿನ ಹಪಾಹಪಿ ಸಾಮಾನ್ಯವಾದುದಲ್ಲ. ‘ಹಾವಬಾಯೊಳಗಣಕಪ್ಪೆ ಹೊರಗಾರುವ ನೊಣಕಾಶಿಸುವಂತೆ’ ಎನ್ನುತ್ತಾರೆ ವಚನಕಾರರು.
 
       ಅಂದರೆ ಅಂದುಕೊಂಡದ್ದರಾಚೆಗಿದೆ ಬದುಕು ಎನ್ನುವುದು ಸ್ಪಷ್ಟ. ಹಾಗಾಗಿ ನಿರಂತರವಾದ ಸೆಣಸಾಟ, ಮೊದಲು ಅಸ್ತಿತ್ವ, ನಂತರ ಪೂರ್ಣತೆ.... ಮತ್ತೆ ಈ ಎರಡೂ ಸಂಗತಿಗಳಲ್ಲಿ ಅತಿರೇಕದ ಗೊಂದಲ... ಅರ್ಜಿಹಾಕಿಕೊಂಡು ಹುಟ್ಟಿದವರಲ್ಲ ನಾವು. ಆಕಸ್ಮಿಕತೆಯೇ ಸತ್ಯ. ಅಂದರೆ ಜನ್ಮದ ಅರ್ಥ ಪ್ರಯತ್ನದಿಂದಲೇ ಹೊರತು ಫಲದ ರೂಪವಲ್ಲ. ಸುತ್ತಮುತ್ತ ಬೆಸೆದುಕೊಳ್ಳುವ ಬಂಧಗಳೊಂದಿಗೇ ಹೊಂದಿಕೊಳ್ಳುತ್ತಲೇ ಬಡಿದಾಟವೆ?. ‘ಸರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಬೇಂದ್ರೆಯ ಅನುಭವದ ಮಾತು. ಹೊಂದಿಕೊಳ್ಳಲೇಬೇಕು, ಇಲ್ಲವಾದರೆ ಹಾಳಾಗಿಬಿಡಬಹುದು ಎರಡೇ ದಾರಿಗಳು. ಉಳಿದುಕೊಳ್ಳುವ ಹಠಗಳಿಗೆ ಹಲವು ಆಯಾಮಗಳು. ಇದು ಕೊನೆಯ ಉಸಿರಿನವರೆವಿಗೂ ಸಾಗಿದ್ದೇ ಸತ್ಯ.

       ಹಿರಿತನ-ಕಿರಿತನಗಳ ನಡುವೆ ಸಂಘರ್ಷ ಹುಟ್ಟಿದರೆ ಮತ್ತದು ಬದುಕಿನ ಕ್ರಮದಿಂದಲೇ ಇದ್ದೀತು ಈ ಕ್ಷಣದಾಟಿದ ಮರುಕ್ಷಣವೇ ಹೊಸತನ ಎಂದುಕೊಂಡರೆ ಅದು ಆಧುನಿಕತೆ, ಕಿರಿತನಕ್ಕೆ ಅದರೊಂದಿಗಿನ ಅನುಸಂಧಾನದ ತುಡಿತ, ಹಿರಿತನಕ್ಕೆ ಅದೊಂದು ಆತಂಕ. ತಮ್ಮೊಂದಿಗೆ ಯಾರು ಯಾರನ್ನು ಸೆಳೆಯಬಹುದು ಮತ್ತೆ ಸಂಬಂಧಗಳ ಸಂಘರ್ಷ ಮತ್ತೆ ಮತ್ತೆ ಸಂಕೀರ್ಣ. ‘ಬಂದ ದಾರಿಯ ಕಡೆಗೆ ಕಣ್ಣ ಹೊರಳಿಸಬೇಡ’ ಎನ್ನುವುದೊಂದು ಉಪದೇಶ. ‘ನಿನ್ನೆಗಳ ಮರೆತವರು ನಾಳೆ ಕಟ್ಟಲಾರರು’ ಮತ್ತೊಂದು ಎಚ್ಚರಿಕೆ. ಒಂದು ತನ್ನ ದಾರಿ ತನ್ನದೆನ್ನುವ ಅಭಿಮಾನದಂತಾದರೆ ಮತ್ತೊಂದು ಬದುಕುವ ದಾರಿಗೆ ವಿನಯವೇ ಭೂಷಣವೆಂಬ ಮೌಲ್ಯ. ಸಾಗುತ್ತದೆ ಬದುಕು....

      ‘ಬಾಲ್ಯ, ಯೌವನ, ವೃದ್ಧಾಪ್ಯ’ ಜೀವ-ಜೀವನವನ್ನು ಕಾಲರೂಪದಲ್ಲಿ ವ್ಯಾಖ್ಯಾನಿಸಬಹುದಾದ ಬಗೆ. ಒಂದು ಆರಂಭವಾದರೆ ಮತ್ತೊಂದು ಬೆಳವಣಿಗೆ, ಕೊನೆಗೆ ಮುಕ್ತಾಯ. ಇದು ಪರಂಪರೆಯ ಪ್ರತಿಮೆ. ಬೆಳೆದಂತೆ-ಬದುಕಿನ ಅರಿವೂ ಬೇರಾಗಲೇಬೇಕಿದೆ. ಅವರವರ ಮಿತಿ-ವ್ಯಾಪ್ತಿಯಲ್ಲೇ ಬದುಕಿನ ಕಲರವ. ಹಾಗಾಗಿ ಇದು ಮೊದಲಿಗೆ ವ್ಯಷ್ಟಿ-ನಂತರಕ್ಕೆ ಸಮಷ್ಟಿ.

      ಬಂಧನ, ಸಂಬಂಧ, ಭಾವನೆ, ಸಮಾಜ ಇವೆಲ್ಲವೂ ಬದುಕಿನ ಮುಖ್ಯಭಾಗಗಳೇ ಆಗಿಬಿಡುತ್ತವೆ. ಪ್ರತಿಯೊಬ್ಬನು ತೀರಾ ಖಾಸಗಿ ಎನ್ನುವಂತೆ ವ್ಯಕ್ತಿನಿಷ್ಟನೇ ಆಗುತ್ತಾ ಸಮುದಾಯವನ್ನು ಪ್ರತಿನಿಧಿಸುತ್ತಾನೆ. ಹಾಗಾಗಿಯೂ ‘ಬದುಕು’ ಎನ್ನುವುದಕ್ಕೊಂದು ವೈವಿಧ್ಯತೆಯೂ ಒದಗಿಬರುತ್ತದೆ.

      ಸಮಾಜ ನೈತಿಕವಾದ ಒಂದು ಚೌಕಟ್ಟಾದರೆ, ಕಾನೂನು ನಿಯಂತ್ರಣದ ರಕ್ಷಣೆಯಾಗುತ್ತದೆ. ಧರ್ಮ ಇವುಗಳಾಚೆಗೆ ಸಾತ್ವಿಕ ಪ್ರಜ್ಞೆಯ ಮೂಲವಾಗುತ್ತದೆ. ರಾಜಕಾರಣ ಆಡಳಿತವಾದರೆ, ವೃತ್ತಿ ಬದುಕಿನ ಅಪೇಕ್ಷೆಯಾಗಿದೆ, ದುಡಿಮೆಯ ಅವಕಾಶವೂ ಬದುಕಿನ ಏರಿಳಿತ, ಸಾರ್ಥಕತೆ-ವಿಪರ್ಯಾಸ ಎಂಬೆಲ್ಲಾ ಫಲಿತಗಳಿಗೆ ಕಾರಣವಾಗುತ್ತದೆ. ಇದೆಲ್ಲಾ ಹೊರಮೈನ ರೂಪಗಳು. ಒಳಗಿರುವ ಅರ್ಥಗಳಿಗೆ ಕುಟುಂಬ ಎಂಬ ಮಿತಿ-ವ್ಯಾಪ್ತಿ ಅದರೊಳಗೆ ವ್ಯಕ್ತಿಗತ ಪ್ರಾಧಾನ್ಯತೆಯ ನೆಲೆ- ಹೀಗೆ ಭಿನ್ನ-ವಿಭಿನ್ನ ಸಾಧ್ಯತೆಗಳ ಕ್ರಿಯಾಶೀಲತೆ.

      ಪುರಾಣ, ಚರಿತ್ರೆ, ಕಾವ್ಯ ಹೀಗೆಲ್ಲಾ ಅಕ್ಷರದ ದಾಖಲೆಗಳು, ಮತ್ತವು ಹೊಸತಲ್ಲ ಹಳೆಯ ರೂಪಗಳು, ಇದ್ದಂತೆ, ಇರಬಹುದಾದಂತೆ, ಇರಲೇಬೇಕಾದಂತೆ ಮತ್ತೆ ಚರ್ಚೆ-ಸಂವಾದ-ವಿಶ್ಲೇಷಣೆ ಮತ್ತು ಮುಖ್ಯವಾಗಿ ಮೌಲ್ಯಮಾಪನ. ನಮ್ಮದು ಎನ್ನುವ ಅಭಿಮಾನ ಯಾರಪರ, ಯಾವುದರಪರ ಎಂಬಲ್ಲಿ ದ್ವಂದ್ವ ಅಗತ್ಯಕ್ಕೆ, ಅನುಕೂಲಕ್ಕೆ ಅನುಸಾರಿಯಾದ ನಿಲುವು. ‘ಇದೇ ಜೀವನ’ ಎನ್ನುವ ವಾದ, ಸಮರ್ಥನೆ.

      ಪರಿಸರದ ಭಾಗವಾದಂತೆ ಪ್ರಜ್ಞೆಯನ್ನು ರೂಪಿಸಿಕೊಳ್ಳುವಲ್ಲಿಯೇ ಜೀವದ-ಜೀವನದ ಅನನ್ಯತೆ ತೆರೆದುಕೊಳ್ಳುತ್ತದೆ ಎಂದಾದರೂ ಅದು ವ್ಯಕ್ತಿಯಿಂದ-ವ್ಯಕ್ತಿಗೆ ಭಿನ್ನವಾಗುವಲ್ಲಿಯೇ ನಿರಂತರವಾದ ಕುತೂಹಲವನ್ನು ಕಾಯ್ದುಕೊಳ್ಳುವುದಾಗುತ್ತದೆ. ಅದು ‘ಮಹತ್ವ’ ಎನಿಸಿದಾಗಲು, ‘ಕೆಡುಕು’ ಎನಿಸಿದಾಗಲೂ ವ್ಯಕ್ತಿಯ ಕುಟುಂಬವನ್ನು, ಕೆಲವೊಮ್ಮೆ ಸಮಾಜವನ್ನು ಮತ್ತೆ ಕೆಲವೊಮ್ಮೆ ಇವೆಲ್ಲವನ್ನು ಮೀರಿದಂತೆ ವಿಶ್ವವ್ಯಾಪಕವಾಗಬಹುದಾದ ಗುಣವನ್ನು ಪಡೆದುಬಿಡಬಹುದು. ಮತ್ತೆ ಮತ್ತೆ ಇತಿಹಾಸವನ್ನು ನೆನಪಿಸಿಕೊಳ್ಳಬೇಕಾದ ತುರ್ತು ಇರುವುದೇ ಇಂತಲ್ಲಿ. ಮಹಾನುಭಾವರು, ಮಹಿಮರು, ಶ್ರೇಷ್ಠರು ಎಂಬೆಲ್ಲಾ ಮಾದರಿಗಳು ಉಳಿದು-ಬೆಳೆದು-ಬದುಕಿನ ಭಾಗವೇ ಆಗಿಬಿಡುತ್ತದೆ. ಜಗತ್ತಿನಾದ್ಯಂತ ಪ್ರತೀ ಸಮಾಜಕ್ಕು-ದೇಶಕ್ಕು ಸಂಭ್ರಮಗಳಿರುವುದೇ ಇಂತಲ್ಲಿ ಎನ್ನಬಹುದು. ಹಾಗಾಗಿಯೇ ಬದುಕು ಎನ್ನುವುದು ಸಾಂಸ್ಕೃತಿಕ ಎಂಬ ವಿಶಾಲ ನೆಲೆಗೆ ತನ್ನನ್ನು ವಿಸ್ತರಿಸಿಕೊಳ್ಳುತ್ತದೆ. ದೊಡ್ಡ ಸಂಗತಿಯೇ ಆಗಿಬಿಡುತ್ತದೆ.

      ಸಂಭ್ರಮಗಳಿರಬೇಕಿತ್ತು, ಇರಬೇಕು. ಜೀವನಕ್ಕಿರುವ ಸೌಂದರ್ಯದ ವಿಶೇಷತೆಯೇ ಅಂತಹದ್ದು ಮಲಗಿ ಎದ್ದ ಕ್ಷಣದಿಂದಲೇ ಎದ್ದಕ್ರಿಯೆಗೆ ಸಂಭ್ರಮವಾಗಬೇಕಿತ್ತು. ಮತ್ತೊಂದಷ್ಟು ಸೃಜನವಾದ ಬದುಕಿನ ಸಾಧ್ಯತೆ ಎಂಬ ಅರಿವೇ ಜಾಗೃತಿಯಾಗಿ ಮತ್ತೆ ಮಲಗುವವರೆಗೆ ತುಂಬಾ ಬದ್ಧ ಬದುಕನ್ನು ಬದುಕುವುದಾಗಬೇಕಿತ್ತು. ಅಂತಹ ಇತಿಹಾಸದ ವರ್ತಮಾನದ ಉದಾಹರಣೆಗಳು ಆಕರವಾಗಿದ್ದವು, ಅಂತಲ್ಲಿ ಸಾರ್ಥಕತೆಯೂ ಇತ್ತು. ಎಲ್ಲದರ ಅರಿವಿದ್ದೂ ನಾವು ಸಾಗಿದ್ದು ಎತ್ತ? ಎನ್ನುವಲ್ಲಿಯೇ ಅವಲೋಕನದ ವಿಪರ್ಯಾಸ ತೆರೆದುಕೊಳ್ಳುತ್ತದೆ. ತುಂಬಾ ಸರಳ, ಸಹಜ ಮತ್ತು ಸಂತಸ ಎಂಬಂತೆ ಉತ್ತರಿಸಲಾಗುತ್ತಿಲ್ಲ.

      ಇಂದಿನ ಬದುಕಿಗೆ ತಾಜಾತನದ ನಂಬಿಕೆ ಇಲ್ಲ, ಖಚಿತತೆಯಂತೂ ಮೊದಲೇ ಇಲ್ಲ. ಈ ಹೊತ್ತಿನ ಸಮಾಜ, ರಾಜಕಾರಣ, ಧರ್ಮ, ಆರ್ಥಿಕತೆ, ಸಂಸ್ಕೃತಿ ಹೀಗೆ ಯಾವುದರಲ್ಲೂ ನಿರಾಳತೆಯನ್ನು ಕ್ಷಣಿಕವಾಗಿಯೂ ಆರೋಪಿಸಿಕೊಳ್ಳಲಾಗದ ಸ್ಥಿತಿ ಎಲ್ಲವನ್ನು ಅರಾಜಕಗೊಳಿಸಿಬಿಡುತ್ತಿದೆ.

      ಸಂಬಂಧಗಳು ಸಂಕೀರ್ಣ, ಕೌಟುಂಬಿಕ ಶಿಥಿಲತೆ, ಭಾವಗಳ ಯಾಂತ್ರೀಕತೆ, ಸಾಮಾಜಿಕ ಅಸಮಾನತೆಯ ಸಂಘರ್ಷ, ಸ್ವಾರ್ಥ ಉತ್ಕರ್ಷದ ರಾಜಕಾರಣ, ಭ್ರಷ್ಟಾಚಾರದ ಆಡಳಿತ, ಸಮಯಸಾಧಕ ಧಾರ್ಮಿಕತೆ -ಹೀಗೆ ಎಲ್ಲವೂ ಕಲುಷಿತ, ರಾಡಿ –ಎಲ್ಲರೂ ಅಧಃಪತನವನ್ನೇ ಬದುಕೆಂದು ವಾದಿಸಿದಂತೆ, ಮೌನವೂ ರೂಪವಾದಂತೆ ಸಾಗುತ್ತಿರುವ ವಿಪರ್ಯಾಸಕ್ಕೆ ಎಲ್ಲರೂ ವಾರಸುದಾರರೇ....

      ಸಹಜ ಎಂದರೆ ಯಾವುದು ಏನಾಗಿರಬೇಕೋ ಅದು ಅಷ್ಟೇ ಆಗಿರಬೇಕು. ಬಾಲ್ಯವೇ ಯೌವನವಾಗುವುದು, ಯೌವನ ಮುಪ್ಪಾಗುವುದು ಅಸಹಜ. ಸ್ನೇಹ-ಪ್ರೀತಿ-ಭಾವಗಳು ವ್ಯವಹಾರವಾಗುವುದು, ಹಕ್ಕು-ಕರ್ತವ್ಯಗಳು ಮೋಸವಾಗುವುದು ರಾಜಕಾರಣ ದುರಾಸೆಯಾಗುವುದು, ಧರ್ಮ ಮತ್ತದೇ ಜಾತಿಕೂಪವಾಗುವುದು –ಇತ್ಯಾದಿಗಳೆಲ್ಲವೂ ಅಸಹಜಗಳೇ.... ಯಾರೂ ಇಲ್ಲಿ ಶಾಶ್ವತವಲ್ಲ, ಯಾರೂ ಯಾವುದೂ ಉಳಿಯುವುದಿಲ್ಲ ಎಂಬ ಅರಿವಿದ್ದೂ ಮತ್ತೆ ಕಾದಾಡುತ್ತಲೇ ಇರುತ್ತೇವೆ. ‘ಅಲೆಕ್ಸಾಂಡರ್ ಖಾಲಿಕೈನಲ್ಲಿ ಸತ್ತದ್ದು’, ‘ಬುದ್ಧ ಸಕಲವನ್ನು ಧಿಕ್ಕರಿಸಿ ಹೊರಟದ್ದು’, ‘ಮಹಾವೀರ ಎಲ್ಲ ಬಂಧನ ಕಳಚಿ ನಗ್ನವಾಗಿ ನಿಂತದ್ದು’ –ಯಾವುದೂ ಬದುಕಿನ ವಿಷಣ್ಣತೆಗಳಿಗೆ ಉದಾಹರಣೆಯೇ ಆಗುವುದಿಲ್ಲ.

      ಆಧುನಿಕತೆಯ ಯಾವ ಉತ್ಕರ್ಷವು ಕಾಲವನ್ನು ಗೆಲ್ಲುವುದಾಗಲೇ ಇಲ್ಲ. ಕೊಳೆಯುವ, ಮಣ್ಣಾಗುವ ಈ ಶರೀರ ಶುದ್ಧವಾಗಬೇಕು, ಮನಸುಮಾಗಬೇಕು ಎಂದಾಗಲೇ ಇಲ್ಲ. ಜ್ಞಾನ ಎನ್ನುವುದು ವ್ಯಂಗ್ಯವಾದಂತೆ ಬದುಕಿದ್ದೇವೆ, ಬದುಕುತ್ತಲೇ ಇದ್ದೇವೆ.... ಹಾಗೆಂದು ನಶ್ವರತೆಯ ಅರ್ಥವನ್ನೆ ಜಪಿಸಿ ಜಡವಾಗಬೇಕೆ? ಖಂಡಿತಾ ಇಲ್ಲ. ಆದರೆ ‘ಹಾನಿಮಾಡಿಕೊಳ್ಳುವ ಹುಚ್ಚಪ್ಪಗಳಾಗದಂತೆ ಎಚ್ಚರವಹಿಸಬೇಕು’ ‘ಯಾರು ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’ ಎಂಬ ಅರಿವು ಸತ್ಯದರ್ಶನದ ದಾರಿಯಾಗಲೇಬೇಕು. ಹುಟ್ಟಿದ ಸತ್ಯದ ಬೆಳೆಯುವ ವಾಸ್ತವದ ಹಾದಿಗೆ ಒಂದಿಷ್ಟು ಸಹನೀಯವೂ ಮನನೀಯವು, ಅನುಕರಣೀಯವೂ ಆದ ಭಾವ-ಪ್ರಜ್ಞೆಗಳು ಎಲ್ಲರ ಬದುಕನ್ನು ಕಾಡಲೇಬೇಕು....

      ಆದರ್ಶ ಎನ್ನುವುದೊಂದು ದಾರಿ, ಎಲ್ಲರೂ ಗುರಿಮುಟ್ಟಲಾಗುವುದಿಲ್ಲ ಆದರೆ ಆ ಹಾದಿಯಲ್ಲಿ ನಡೆಯುವ ಪ್ರಾಮಾಣಿಕತೆಯಂತೂ ಸಾಧ್ಯ. ಇದಾಗಬೇಕು. ನಾವು ಜಗತ್ತನ್ನು ನೋಡುವ ಕ್ರಮದಲ್ಲೇ ತಪ್ಪಿದೆ. ‘ಜಗತ್ತು ಸರಿಯಿಲ್ಲ’ ಎನ್ನುವುದರಿಂದ ನಮ್ಮ ದಿನಗಳು ಆರಂಭವಾಗಬೇಕಿಲ್ಲ, ‘ನಾನು ಸರಿಯಾಗಬೇಕು’ ಎಂಬ ಸಹಜ-ನಿಜದ ವಾಸ್ತವದಿಂದಲೇ ಜಗತ್ತಿನೆಡೆಗೆ ನೋಡಬೇಕು. ‘ನಿಮ್ಮ ನಿಮ್ಮ ಮನವ-ತನುವ ಸಂತೈಸಿಕೊಳ್ಳಿ’ ಎಂದ ಭಾವವೇ ಇದು.... ‘ನಡೆದದ್ದೇ ಹಾದಿ’ ಎಂಬಂತೆ ಎಲ್ಲಾ ನಡೆದಿದ್ದೇವೆ. ಎಲ್ಲ ಸರಿತಪ್ಪುಗಳಿಗೂ ಸಮರ್ಥನೆಗಳನ್ನು ಹುಡುಕಿಟ್ಟಿದ್ದೇವೆ. ಇದು ಜೀವನದ ಮೋಸವೇ ಹೌದು. ಜಗತ್ತನ್ನು, ಜನರನ್ನು ಪ್ರೀತಿಸಬೇಕು, ಆಗದಿದ್ದರೆ ಚಿಂತೆಯಿಲ್ಲ ಆದರೆ ದ್ವೇಷಿಸುವುದು ಯಾಕೆಬೇಕು....? ಕಟ್ಟಲಾರದವರಿಗೆ ಹಾಳುಮಾಡುವ ಅರ್ಹತೆಯಾದರೂ ಏನು?....

      ಈ ಸಾಮಾನ್ಯ ಜ್ಞಾನದಿಂದಲೇ ಬದುಕಿನ ಮೊದಲ ಹೆಜ್ಜೆ ಆರಂಭವಾಗಬೇಕು.... ಈ ಕೇಂದ್ರದಲ್ಲಿ ನಿಂತೇ ಇತರ, ಭಾವ-ಬಾಂಧವ್ಯಗಳ ಜೊತೆಯಲ್ಲೇ ಜಗತ್ತಿಗೆ ಮುಖಾ-ಮುಖಿಯಾಗೋಣ. ಈ ಅಂಕಣದಲ್ಲಿ ಇಂತಹದ್ದೇ ಕಳೆದುಕೊಂಡ, ಉಳಿಸಿಕೊಂಡ, ಉಳಿಯಬೇಕಾದ್ದರ ಕುರಿತೇ ಒಂದಿಷ್ಟು ಮಾತು-ಮಂಥನ. ಬರಹ ನೆಪ ಮಾತ್ರ ಪಾತ್ರಗಳು ಎಲ್ಲರೂ ಮತ್ತು ಎಲ್ಲವೂ....  ಬದುಕೆಂದರೆ ಅನಿವಾರ್ಯ ಎಂಬುದೆಷ್ಟ್ಟು ಸತ್ಯ? ಸತ್ಯ-ಶಿವ-ಸುಂದರವಾಗಿಸಿಕೊಳ್ಳಬೇಕೆಂಬುದು ಎದುರಿರುವ ಸಾರ್ವಕಾಲಿಕ ಜವಾಬ್ದಾರಿ....  ಬದುಕೆಂದರೆ...  ಭಾವಗೀತೆ.... 
bottom of page