top of page
CamScanner 07-17-2020 12.03.37_5.jpg

ದಾರ್ಶನಿಕರ ದಾರಿ 

ಪರಿವಿಡಿ
1.    ಆರಂಭದ ಹಾದಿ.....
2.    ದಾರ್ಶನಿಕತೆಯ ದಾರಿ..........
3.    ವಚನಕಾರರು : ಬಸವಣ್ಣ
4.    ಬಸವಣ್ಣ 
5.    ಕನಕದಾಸರು
6.    ಅಂಬೇಡ್ಕರ್ 
7.    ಕುವೆಂಪು

 

 ಆರಂಭದ ಹಾದಿ

        ಆಧುನಿಕತೆಯ ಉತ್ಕರ್ಷದಲ್ಲಿ ನಾವಿದ್ದೇವೆ. ನಾಗರೀಕತೆ ಎನ್ನುವುದನ್ನು ಮನುಷ್ಯನ ವಿಕಾಸವಾದದ ಶ್ರೇಷ್ಠತೆಯ ಪರಿಭಾವನೆ ಎಂದೇ ನಾವಂದುಕೊಂಡು ಅದರ ಮೂಲದಿಂದಲೇ ಹೊರಟು ಇವತ್ತು ನಾನೇ ಸಕಲ ಸೂತ್ರಧಾರ, ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎನ್ನುವ ಸ್ಥಿತಿಯನ್ನು ಸಹಜ ಎಂಬಂತೆ ಮುಟ್ಟಿದ್ದೇವೆ. ಜ್ಞಾನ-ವಿಜ್ಞಾನಗಳ ನಿಜದ ಫಲಿತವಿದು. ಮಂಗನಿಂದ ಮಾನವನಾಗಿದ್ದೇವೆ ಎನ್ನುವುದು ಹಳೆಯ ಮಾತು. ಮನುಷ್ಯ ತನ್ನ ವಿಕಾಸವಾದದ ಫಲಿತದಲ್ಲಿ ಇತರ ಜೀವರಾಶಿಗಿಂತ ಉನ್ನತವಾದ ಪ್ರಾಣಿ ಎನ್ನುವಂತೆ ಬೆಳೆದಿದ್ದಾನೆ, ಹೊಸತನದ ಹಲವು ಆಯಾಮಗಳಲ್ಲಿ ಅವಿರತವಾಗಿ ವಿಕಾಸಶೀಲತೆಯನ್ನು ಕ್ರಿಯಾಶೀಲತೆಯನ್ನು ಸಾಧಿಸುತ್ತಲೇ ಈ ಮಟ್ಟಕ್ಕೆ ಒಂದು ತಲುಪಿದ್ದಾಗಿದೆ. ‘ಜ್ಞಾನಕ್ಕೆ ಸಮಾನವಾದುದು ಮತ್ತೊಂದಿಲ್ಲ’ ಎನ್ನುವುದೊಂದು ಮಾತಿದೆ. ಅದು ಸರಿ ಆದರೆ ಪ್ರಶ್ನೆಯಿರುವುದು ಈ ಜ್ಞಾನ ಎನ್ನುವುದರ ಅರ್ಥವಿಸ್ತಾರವನ್ನು ಕುರಿತು.

       ಯಾವುದು ಜ್ಞಾನ? ತೋಚಿದಂತೆಲ್ಲಾ ಇದನ್ನು ಪರಿಶೀಲಿಸಲಾಗಿದೆ. ಅಲ್ಲೆಲ್ಲಾ ವ್ಯಕ್ತಿನಿಷ್ಠೆ, ಸಮುದಾಯ ನಿಷ್ಟವಾದ ಅವೆಷ್ಟೋ ರೂಪಗಳಿವೆ ಸ್ವಾರ್ಥಪರತೆ, ವ್ಯವಸ್ಥಿತಪ್ರಜ್ಞೆ, ಇತ್ಯಾದಿಯಾಗಿಯೂ ಜ್ಞಾನವನ್ನು ವಿವರಿಸಲಾಗಿದೆ. ಅಂದರೆ ಜ್ಞಾನ ಎನ್ನುವುದು ಒಂದು ಸಷ್ಟ ರೂಪವಾಗಿ ಹೀಗೇ ಎಂಬಂತೆ ವಿವರಿಸಲಾಗಿಲ್ಲ. ನನ್ನ ಅರಿವಿನ ಆಚೆಗಿನ ಹೊಸ ಬಗೆಯ ತಿಳಿವನ್ನು ಅನುಭವವನ್ನು ಅರಿವನ್ನು ಜ್ಞಾನ ಎಂದು ಸರಳೀಕರಿಸಬಹುದು. ಬಹುಶಃ ಹೀಗೆ ಸರಳತೆಯಿಂದಲೇ ಇದನ್ನು ಸ್ಪಷ್ಟಪಡಿಸಿಕೊಂಡು ಸಾಗುವುದು ಸಾಮುದಾಯಿಕ, ಬಹುಜನರ ನಂಬಿಕೆಯಾಗಬೇಕು ಸದಾ ಹೊಸ ಬಗೆಯ ತಿಳಿವಿನ ಬಗೆಗೆ, ನಿಜದ ಅರಿವಿನ ಬಗೆಗೆ, ಸಹಜ ಎಚ್ಚರದ ಬಗೆಗೆ ಮುಕ್ತವಾಗಿ ತೆರೆದುಕೊಳ್ಳುವ ನಂಬಿಕೆಯೊಂದು ನಮ್ಮೊಳಗಿನ ಅಂತಃಸತ್ವವಾದರೆ ಅದು ಜ್ಞಾನದ ರೂಪಕವಾಗಬಹುದು.

       ಇಂದು ನಮಗೆ ಕಾಲಿಕ ತುರ್ತು ಎನ್ನಿಸುವುದಾದರೂ ಇದೇ ಬಗೆಯ ಸಹಜ ಜ್ಞಾನದೊಂದಿಗಿನ ಮುಖಾ-ಮುಖಿ ಎನ್ನಬಹುದು. ‘ನಿನಗೆ ನೀನೇ ಬೆಳಕು’ ಎನ್ನುತ್ತಾರೆ. ಬುದ್ಧ ಭಗವಾನ್ ‘ನಿನ್ನರಿವೆ ನಿನಗೆ ಗುರು’ ಎನ್ನುತ್ತಾರೆ ವಚನಕಾರರು, ಈ ಮಾತುಗಳು ಮತ್ತೆ ಸ್ವಯಂ ಎನ್ನುವ ವ್ಯಕ್ತಿನಿಷ್ಠತೆಯನ್ನು ಗೌರವಿಸುತ್ತಲೇ ಅದರೊಂದಿಗಿನ ಅರಿವಿನ ಮುಖಾ-ಮುಖಿಯನ್ನೇ ಸತ್ಯವೆಂದು ಗ್ರಹಿಸುವ ಸರಳವಾದ ಬಗೆಯಾಗಿದೆ. ಆದರೆ ಇದು ಜಗತ್ತಿನಾದ್ಯಂತ ಇಷ್ಟು ಸರಳವಾಗಲಿಲ್ಲ ಅದು ದುರಂತ.

       ಭಾರತದ ಸಂದರ್ಭಕ್ಕಂತು ಇದು ಮತ್ತು ದುರಂತವೆನ್ನಬಹುದು. ಎಲ್ಲವೂ ಎಲ್ಲವನ್ನು ವಿಚಿತ್ರವಾದ ನೆಲೆಯಲ್ಲಿ ನಿಯಂತ್ರಿಸಿ ಅವೆಲ್ಲವನ್ನು ಧರ್ಮ ಮತ್ತು ದೈವಪ್ರಜ್ಞೆಯನ್ನಾಗಿಸಿತ್ತು. ಹೊಸಬಗೆಯ ಪ್ರಶ್ನೆ ತಕರಾರುಗಳಿಗೂ ಆಸ್ಪದವಿಲ್ಲದಂತೆ ನಿಜವಾದ ವ್ಯಕ್ತಿಸ್ವಾತಂತ್ರ್ಯವನ್ನು ಇಲ್ಲವಾಗಿಸಿ ವ್ಯವಸ್ಥಿತ ಪ್ರಜ್ಞೆಯೊಂದು ಕೆಲಸ ಮಾಡಿದ್ದು ಚರಿತ್ರೆ. ಈ ಚರಿತ್ರೆಯಾದರೂ ಯಾವ ಬಗೆಯದು? ಮೂಲತಃ ಈ ನೆಲದ ಮನುಷ್ಯರನ್ನು ಮೊದಲು ಅಸಮಾನತೆಯ ರೂಪದಲ್ಲಿ ವಿಂಗಡಿಸಿದ್ದು ಅದನ್ನು ‘ವರ್ಣಾಶ್ರಮದ ಮುಖ್ಯ ನೆಲೆಯಲ್ಲಿ ಪರಿಗಣಿಸಿದ್ದು, ಅದು ಮುಂದೆ ಜಾತಿರೂಪಕವಾಗಿ ಈ ನೆಲವನ್ನು ಅಸಮಾನತೆಯ ಬಹುದೊಡ್ಡ ತೌರನ್ನಾಗಿಸಿದ್ದು. ಈ ವಿಷಮವಾದ ಅಸಮಾನತೆಯ ವಿಷ ಎಂದಿಗೆ ಈ ಗಾಳಿಗೆ ತುಂಬಲ್ಪಟ್ಟಿತ್ತೋ ಎನ್ನುವುದಕ್ಕೆ ನಿರ್ದಿಷ್ಟವಾದ ದಿನ-ದಿನಾಂಕಗಳಿಲ್ಲ, ಆದರೆ ಅದನ್ನು ತುಂಬಾ ವ್ಯವಸ್ಥಿತವಾಗಿ ಬೆಳೆಸಿ, ಕಾಪಾಡಿ, ನಿಯಂತ್ರಿಸಲಾದದ್ದು ಮಾತ್ರ ವಿಪರ್ಯಾಸ ಮತ್ತು ಒಂದು ಸೂಕ್ಷ್ಮವಾದ ವ್ಯವಸ್ಥಿತವಾದ ಉಪಾಯ. ಈ ನೆಲದಲ್ಲಿ ಬೇರು ಎಷ್ಟು ಆಳಕ್ಕಿಳಿದಿದೆ ಎಂದರೆ ನೂರಾರು ಜನ ದಾರ್ಶನಿಕರು ಈ ನೆಲದಲ್ಲಿ ಬೆಳೆದು ಬದುಕಿ ಸತ್ಯಗಳಿಗೆ ಮುಖಾಮುಖಿಯಾಗಿ ಈ ಸಾಮಾಜಿಕ ಅಸಮಾನತೆ ಎನ್ನುವುದೊಂದು ಸುಳ್ಳು, ಮೋಸ, ವಂಚನೆ, ಪ್ರತಿಗಾಮಿ, ಅವೈಜ್ಞಾನಿಕ ಎಂದೆಲ್ಲಾ ವಾದಿಸಿದರು ಕೇಳಿ ತಲೆದೂಗುವ ಜನ ಮೆಚ್ಚಿದಂತೆ ಮಾಡಿ ಮತ್ತೆ ಹಳೆಯ ನಂಬಿಕೆಯನ್ನೇ ಪೋಷಿಸುವಂತಾದದ್ದು ನಮ್ಮ ಸಾರ್ವಕಾಲಿಕ ಬದುಕಿನ ಬಹುದೊಡ್ಡ ದುರಂತವಲ್ಲದೆ ಬೇರಲ್ಲ.

        ಮನುಷ್ಯನ ಹುಟ್ಟಿಗಿರುವ ಅರ್ಥ ಒಂದೇ. ಅದೊಂದು ಜೀವಜಾಲದ ಸಹಜವಾದ ಮಾಮೂಲಿಕ್ರಿಯೆ ಮನುಷ್ಯನ ಹುಟ್ಟಿಗೆ ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮವಾದ ಆದರೆ ಒಂದೇ ಸತ್ಯವಾದ ನಿಯಮವಿದೆ. ಆದರೆ ಹುಟ್ಟಿನೊಂದಿಗೆ ಅವೆಷ್ಟೋ ಮೌಢ್ಯಗಳು, ಜಾತಿ-ವರ್ಗದ ಅಪಚಾರಗಳು, ಪಾಪ-ಪುಣ್ಯದ ಕರ್ಮಗಳು ಅಂಟಿಕೊಳ್ಳುವುದು ಆಧುನಿಕತೆಯ ಯುಗದಲ್ಲಿಯೂ ತನ್ನ ಕಬಂಧ ಬಾಹುವನ್ನು ಚಾಚಿ ಎಲ್ಲ ನಾಗರೀಕ, ಆಧುನಿಕ, ವೈಜ್ಞಾನಿಕ ಸತ್ಯಗಳಿಗೆ ಅವಮಾನ ಮಾಡುವಂತಾಗುವುದು ಮಾತ್ರ ನಮ್ಮನ್ನು ನಾವೇ ಅವಮಾನಿಸಿಕೊಳ್ಳುವ ಪರಿಯಲ್ಲದೆ ಬೇರೇನು?

        ಈ ದೇಶದಲ್ಲಿ ಈಗ ಮತ್ತೆ ಮತ್ತೆ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದೇವೆ. ಈ ಅಭಿವೃದ್ಧಿಯ ಕಲ್ಪನೆಯಾದರು ಮತ್ತದೇ ಭೌತಿಕ ಪ್ರಜ್ಞೆಯ ರೂಪಕಗಳಷ್ಟೇ ಆಗಿವೆ. ಇವು ಅಗತ್ಯವೆನ್ನುವುದು ಹೌದು ಮತ್ತದು ನಮ್ಮ ನಾಗರೀಕ ಬದುಕಿನ ಅನಿವಾರ್ಯತೆ ಆದರೆ ಎಲ್ಲವನ್ನು ಸಿಮೆಂಟು, ಇಟ್ಟಿಗೆ ಕಲ್ಲುಗಳಿಂದಲೇ ಕಟ್ಟಲು ಆಗುವುದಿಲ್ಲ. ನಿಜವಾದ ಮನುಷ್ಯರನ್ನು ನಿರ್ಮಿಸಲು ಒಳ್ಳೆತನಗಳು ಬೇಕು ಸಾಚಾಸಂವೇದನೆಗಳು ಬೇಕು ನಿಜವಾದ ಜ್ಞಾನ-ವಿಜ್ಞಾನಗಳು ಬೇಕು, ಮೌಢ್ಯ ಮೀರುವ ವೈಚಾರಿಕತೆಯ ಅರಿವುಗಳು ಬೇಕು ಮನಸ್ಸುಗಳನ್ನು ಕಟ್ಟಬೇಕು ಸಮಾನತೆಯ ಆಶಯಬೇಕು. ಸಮ-ಸಮಾಜದ ಕನಸುಗಳು ಬೇಕು. ನಮ್ಮನ್ನು ನಾವೇ ಕಂಡುಕೊಂಡು, ಇತರರನ್ನು ಗೌರವಿಸುತ್ತಾ ಸಾಧ್ಯವಾದರೆ ಪ್ರೀತಿಸುತ್ತಾ, ಅಖಂಡ ಜೀವನ ಪ್ರೀತಿಯಿಂದ ಸಮಾಜವನ್ನು ನಾಡನ್ನು ಕಟ್ಟುವುದಾಗಬೇಕು.

        ಮಾನಸಿಕ ಪ್ರಬುದ್ಧತೆಯ ಅರ್ಥವೆಂದರೆ ಇದೆ. ಬೌದ್ಧಿಕತೆಯ ಉತ್ಕರ್ಷವೆಂದರೇ ಇದೇ ಆಗಬೇಕು. ‘ಸರ್ವೇಜನೋ ಸುಖಿನೋಭವಂತಿ’ ಎಲ್ಲರೂ ಸುಖವಾಗಿರಬೇಕು. ಹೀಗೆನ್ನುವ ಘೋಷಣೆ ಬಹು ಸೊಗಸು ಮತ್ತು ಕೇಳಲು ಮಧುರ, ಆದರೆ ಅದರ ಒಳಗೇ ವಿಚಿತ್ರ ವಿಂಗಡಣೆಗಳು ಕಾಡುವುದಾಗಬಾರದು. ಇವತ್ತು ನಮ್ಮದೆನ್ನುವ ಸುಂದರ ದೇಶಕ್ಕೆ ಸಾಂಸ್ಕøತಿಕ ನಾಡಿಗೆ, ವಿವಿಧತೆಯಲ್ಲಿ ಏಕತೆ ಎನ್ನುವುದನ್ನು ಸಂವಿಧಾನ ಮಾಡಿಕೊಂಡ ‘ಭವ್ಯತೆ’ ‘ದಿವ್ಯತೆ’ ಎಂದೆಲ್ಲಾ ಕನವರಿಸುವ ನಾಡಿಗೆ ವಿಚಿತ್ರ ಭ್ರಮೆಯ, ಆತಂಕದ ಮೌಢ್ಯತೆಯನ್ನೇ ಸತ್ಯ ಎನ್ನುವ ಕಳಂಕವೊಂದು ಅಂಟಿಕೊಂಡು, ಆ ಕಳಂಕವನ್ನೇ ಬಣ್ಣವೆಂದು ಭಾವಿಸಿ ಅದನ್ನೇ ಒಪ್ಪಿಸಿ ನಂಬಿಸುವ ವಿಷಮತೆ ಸೂಕ್ಷ್ಮವಾಗಿ ಕೆಲವೊಮ್ಮೆ ರಾಜಾರೋಷವಾಗಿಯೂ ನಡೆದೇ ಇದೆ. ಒಂದಿಷ್ಟು ಸರಿಯಾಗಬೇಕು ನಿಜದ ನೆಲೆಗೆ ನಾವು ಮುಖಾ-ಮುಖಿಯಾಗಬೇಕು ಜೀವ ಶಾಶ್ವತವಲ್ಲ. ಆದರೆ ಜೀವನಕ್ಕೊಂದು ನಿರಂತರತೆಯಿದೆ. ಅದು ಪರಂಪರೆಯ ರೂಪಕ ಆ ಪರಂಪರೆ ಕಲುಷಿತವಾಗಬಾರದು ನಮಗೆ ನಮ್ಮ ಹಿರಿಯರು ಜತನ ಮಾಡಿಕೊಟ್ಟ ನಾಡನ್ನು ನಾವು ಮತ್ತಷ್ಟು ಸುಧಾರಿಸಿ ಪೂರ್ಣತೆಯ ಅರ್ಥದ ಹಾದಿಯಲ್ಲಿ ತಂದು ನಿಲ್ಲಿಸುವುದಾಗಬೇಕು. ಅದೊಂದು ಸಣ್ಣಹೆಜ್ಜೆಯಾದರೂ ಚಿಂತೆಯಿಲ್ಲ ನಾಳೆಗಳಲ್ಲಿ ಅದು ನೂರಾದೀತು, ಸಾವಿರವಾದೀತು ಲಕ್ಷವಾದೀತು ದಿಟ್ಟತೆಯಿಂದ, ಸುಂದರ ಕನಸಿನೊಂದಿಗೆ ಸಾಗಲೇಬೇಕು.

         ಈ ನೆಲದ ನೂರಾರು ದಾರ್ಶನಿಕರು ಮಾಡಿದ್ದು ಇದನ್ನೇ ಅಲ್ಲವೆ? ಒಂದು ಹಣತೆಯ ಜ್ಯೋತಿ ಹಚ್ಚಿದಂತೆಲ್ಲಾ ಲಕ್ಷಾಂತರವಾಗಬಹುದು, ಆಗಬೇಕು, ಆಧುನಿಕತೆ ಎನ್ನುವುದು ಏನನ್ನೆಲ್ಲಾ ಸಾಧಿಸಿದೆ ಅವೆಷ್ಟೋ ದೈಹಿಕ, ನ್ಯೂನ್ಯತೆ, ರೋಗಗಳು, ಆತಂಕಗಳು ಎಲ್ಲವನ್ನು ಗೆದ್ದಿದೆ ಎಲ್ಲವೂ ವಿಸ್ಮಯ ಮತ್ತು ಮನುಷ್ಯನ ಜ್ಞಾನದ ಉತ್ಕರ್ಷ ಆದರೆ ಸಾವನ್ನು ಗೆಲ್ಲಲಾದೀತೆ, ಕಾಲವನ್ನು ನಿಯಂತ್ರಿಸಲಾದೀತೆ ಇದನ್ನು ಯಾವುದೇ ತಾಂತ್ರಿಕತೆಯ ದೊಡ್ಡ ಚರ್ಚೆಯೊಂದು ನಾವು ಭಾವಿಸಬೇಕಿಲ್ಲ. ಇದೊಂದು ನಿಸರ್ಗ ಸತ್ಯ, ಪ್ರಾಕೃತಿಕ ನಿಯಮ ಅಂದರೆ ಹುಟ್ಟಿನ ಆಕಸ್ಮಿಕತೆಯ ಜೊತೆಗೆ ಬೆಳವಣಿಗೆಯ ಸತ್ಯದ ಜೊತೆಗೆ ಅಶಾಶ್ವತತೆಯೊಂದು ಜೊತೆಯಾಗಿ ಬಿಡುತ್ತದೆ. ಅದು ಜೀವನ ಎನ್ನುವ ವಾಸ್ತವ್ಯಕ್ಕೆ ಅಂಟಿದ ಎಚ್ಚರಿಕೆಯ ನೆರಳು. ಹೀಗೆ ತೀರಾ ಅನಿಶ್ಚಿತವಾದ ಬದುಕಿನಲ್ಲಿ ಅದೆಷ್ಟು ಆರ್ಭಟ ಅಹಂಕಾರ, ವಿಚಿತ್ರವಾದ ರಾಗ-ಭಾವ–ದ್ವೇಷಗಳು ಇದನ್ನೆಲ್ಲಾ ಬದುಕು ಎಂದೇ ವಾದಿಸುವವರಿಗೆ ನಿಜಕ್ಕೂ ಯಾಕೆ ಎನ್ನುವ ಉತ್ತರ ಖಂಡಿತಾ ಗೊತ್ತಿರಲಿಲ್ಲ. ಹೀಗೆ ಉತ್ತರಗಳೇ ಗೊತ್ತಿಲ್ಲದೆ ಅವೆಷ್ಟೋ ವಿಷಮತೆಗಳಿಗೆ ವಿಚಿತ್ರತೆಗಳಿಗೆ ನಾವು ಹೀಗೆ ಅಸ್ಪಷ್ಟತೆಯಿಂದಲೇ ಎದುರಾಗಿದ್ದೇವೆ ಬರೀ ಸಣ್ಣತನಗಳಲ್ಲ, ಅಜ್ಞಾನಗಳ ಉತ್ತರದಲ್ಲೇ ಸುಖಪಡುವ ವಿಪರ್ಯಾಸದಲ್ಲಿದ್ದೇವೆ. ಜಗತ್ತನ್ನೇ ತನ್ನದಾಗಿಸುವ ಹುಚ್ಚುತನದ ಹಿಟ್ಲರ್ ತನ್ನವರಿಂದಲೇ ಹಿಂಸಿಸಲ್ಪಟ್ಟಿದ್ದು ಜಗತ್ತನ್ನೇ ಗೆಲ್ಲುವ ಹುಮ್ಮಸ್ಸಿನ ಅಲೆಗ್ಸ್ಯಾಂಡರ್ ಖಾಲಿ ಕೈಗಳಲ್ಲಿ ಮಣ್ಣಾದದ್ದು ನಮಗೆ ಉದಾಹರಣೆಯಾಗುತ್ತಿಲ್ಲ. ಎಚ್ಚರವಂತೂ ಸಾಧ್ಯವೇ ಆಗುತ್ತಿಲ್ಲ ಮಡಿದು ಹೋದ ಮಹನೀಯರನ್ನು, ಅವರ ಬದುಕಿನ ಧಾರೆಗಳನ್ನು ಮತ್ತೆ ನಮ್ಮ ಕ್ಷುಲ್ಲಕತನ ಸಣ್ಣತನಗಳಿಗೆ ಅಸ್ತ್ರ ಮಾಡಿಕೊಂಡು ಬಡಿದಾಡಿ ಸಾಯುತ್ತಿದ್ದೇವೆ. ಬಹುಶಃ ಇಂತಹವರ ಎಲ್ಲರೊಳಗೂ ತಾವು ಅಮೃತ ಕುಡಿದ ಚಿರಂಜೀವಿಗಳು ಎನ್ನುವ ಭ್ರಮೆಯೇ ಬದುಕಾಗಿರಬಹುದು ಕಾಲ ಎನ್ನುವುದು ಎಲ್ಲದಕ್ಕಿಂತಲೂ ದೊಡ್ಡದು. ಅದು ಯಾರನ್ನು, ಕಾಯುವುದಿಲ್ಲ ಅಲ್ಲೊಂದು ಸರ್ವಸಮಾನತೆಯ ಆಶಯವಿದೆ.

        ಎಂದಿಗಿಂತ ಇಂದು ನಾವು ಹೆಚ್ಚು ಕ್ಷುಲ್ಲಕರಾಗಿದ್ದೇವೆ. ಸಣ್ಣತನಗಳೇ ನಮ್ಮ ಪ್ರತೀ ಭಾವಗಳನ್ನು ನಿಯಂತ್ರಿಸುತ್ತಿದೆ. ನೆಲ, ಸಮಾಜ, ನಂಬಿಕೆ, ಧರ್ಮ, ರಾಜಕಾರಣಗಳು ಸ್ವಾರ್ಥಪ್ರಜ್ಞೆಯ ಉನ್ನತ ಶಿಖರಗಳಾಗಿವೆ. ‘ಜಾತಿ’ಎನ್ನುವುದು ವಿಚಿತ್ರವಾದ ಅಹಂಕಾರವಾಗಿ ಆವರಿಸಿಕೊಂಡಿವೆ. ಸ್ವಾರ್ಥತೆ ಎನ್ನುವುದು ಕುಟುಂಬವನ್ನು ಬಿಟ್ಟಿಲ್ಲ. ಎಂದಿಗಿಂತ ಇಂದು ಈ ನೆಲದ ಮನುಷ್ಯ ಸಂಬಂಧಗಳು ಹೆಚ್ಚು ಜಟಿಲವಾಗಿವೆ ಅನುಮಾನದ ಉತ್ಕರ್ಷದಲ್ಲಿ ಸ್ವಂತಿಕೆಯನ್ನು ಕಳೆದುಕೊಂಡು ಬದುಕಿನ ನಿಜದ ಅಂತಃಸತ್ವವನ್ನೇ ಕಳೆದುಕೊಂಡಿದ್ದೇವೆ. ಮೌಢ್ಯತೆ ನಮ್ಮ ಜ್ಞಾನ, ವಿದ್ಯೆ, ವಿಜ್ಞಾನ, ಪರೀಕ್ಷೆ ಎಲ್ಲವನ್ನು ಮೀರಿ ಕತ್ತಲಿನ ಕ್ರಮಕ್ಕೆ ಮುಖ ಮಾಡಿಸಿದೆ ಇಂತಹ ಹೊತ್ತಿನಲ್ಲಿ ಎಚ್ಚರ ಎನ್ನುವುದನ್ನು, ಬೆಳಕು ಎನ್ನುವುದನ್ನು ಎಲ್ಲಿಂದಲೋ ನಿರೀಕ್ಷಿಸಿ ಕಾಯುವಂತಿಲ್ಲ ನನ್ನನ್ನು ನಾನು ಸುಧಾರಿಸಿಕೊಂಡೇ ಒಂದಿಷ್ಟು ಸಮಾಧಾನ ತಾಳುತ್ತಾ ಆತ್ಮವಿಶ್ವಾಸವನ್ನು ತಾಳಬೇಕಿದೆ. ತನ್ಮೂಲಕ ಹುಟ್ಟಿನ ಆಕಸ್ಮಿಕತೆಗೊಂದು ಗೌರವವನ್ನು ತಂದುಕೊಡಬೇಕಿದೆ. ಅಲ್ಲಮ ‘ಕಣ್ಣೊಳಗಿನ ಕತ್ತಲೆ’ ಎನ್ನುತ್ತಾನೆ. ಕತ್ತಲೆಯೊಳಗೆ ಬೆಳಕಿದೆ ಎನ್ನುವ ನಿಜವನ್ನು ಅರ್ಥೈಸಿಕೊಂಡು ಇಲ್ಲೇ ಕಳೆದುಕೊಂಡಲ್ಲೇ ನಾವು ಹುಡುಕಬೇಕಿದೆ.

         ‘ಮಾನವ ಬಂಧುತ್ವ’ ಇದು ಈ ಹೊತ್ತಿನ ತುರ್ತು, ಮನುಕುಲ ಎಂಬ ಮಾತಿಗೆ ಏನೆಲ್ಲಾ ಆಯಾಮವಿದ್ದರೂ ‘ಮನುಷ್ಯಪ್ರಾಣಿ’ ಎನ್ನುವ ಒಂದು ಸತ್ಯವನ್ನು ಅರ್ಥೈಸಿಕೊಂಡು ಮೊದಲಿಗೊಂದು ಸಮಾನತೆಯನ್ನು ತಳೆಯುವುದು ಸದ್ಯದ ತುರ್ತು ಇದು ಇಂದಿಗೆ ಖಂಡಿತವಾಗಿ ಹೊಸತಲ್ಲ ಮೊನ್ನೆ ನೆನ್ನೆಗಳಲ್ಲಿ ಬುದ್ಧ, ಮಹಾವೀರ, ವಚನಕಾರರು, ಬಸವ, ಕನಕ, ತತ್ವಪದಕಾರರು, ಅಂಬೇಡ್ಕರ್, ಕುವೆಂಪು ಮೊದಲಾದವರೆಲ್ಲಾ ಇದನ್ನೇ ಮಾತನಾಡಿದ್ದು, ಎಲ್ಲರನ್ನು ಓದಿ, ಕೇಳಿ, ಅಭಿನಂದಿಸಿ ನಮ್ಮಷ್ಟಕ್ಕೆ ನಾವು ಸುಮ್ಮನಾಗಿದ್ದೇವೆ. ಅವರ ಅನುಭವಗಳನ್ನು ಬದುಕಿನ ಸತ್ಯಗಳನ್ನು ಭಾಷಣಗಳ, ಉಪನ್ಯಾಸಗಳ ಸರಕನ್ನಾಗಿಸಿಕೊಂಡು, ಸುಮ್ಮನಾಗಿದ್ದೇವೆ. ಆಯಾಯ ಮಾತಿಗೆ, ಸಂದರ್ಭಕ್ಕೆ ಬೇಕಾದ ಮಾತುಗಳನ್ನು ಕತ್ತರಿಸಿಕೊಂಡು ಉಲ್ಲೇಖಿಸಿಕೊಂಡು, ಸಂಭ್ರಮಿಸಿ, ಅರಿವಿನ ಮುಖವಾಡ ತೊಟ್ಟಿದ್ದೇವೆ.

         ವೈಚಾರಿಕತೆ, ವಿಚಾರವಾದ, ಪ್ರಗತಿಪರತೆ ಎನ್ನುವ ಈ ಮೊದಲಾದ ಮಾತುಗಳಿಗೆ ಆಶಾವಾದದ ನೆಲೆಯಿಂದಲೇ ಯೋಚಿಸಬೇಕಾದ ತುರ್ತು ನಮ್ಮ ಕಣ್ಣಮುಂದಿದೆ. ಅವೈಚಾರಿಕತೆ, ಅನ್ಯಾಯ, ಅಪರಾಧ, ಅಸಮಾನತೆಗಳನ್ನು ಭ್ರಷ್ಠತೆಯನ್ನು ಕುರಿತು ಚಿಂತಿಸುವ ಮನುಷ್ಯನೇ ಗುಣಾತ್ಮಕವಾದ ಆಲೋಚನೆಗಳನ್ನು ಮಾಡಬಹುದು ಎನ್ನುವುದು ಸಹಜವಾದ ಆದರೆ ಈ ಹೊತ್ತಿಗೆ ಇದನ್ನು ವಿಶೇಷವೆಂದೇ ಭಾವಿಸಿ ಚಿಂತಿಸಬಹುದಾದ ಸಂಗತಿ. ಇಂತಲ್ಲಿಯೇ ಮನುಷ್ಯ ಇತರ ಪ್ರಾಣಿಗಳಿಗಿಂತ ಭಿನ್ನ ಎಂದು ಬದುಕುವ ಸಾಧ್ಯತೆಯಾದರೂ ತರೆದುಕೊಳ್ಳುತ್ತದೆ.

        ಮೊದಲಲ್ಲಿ ಗಮನಿಸಿದಾಗ ಹಾಗೆ ಇದು ಮನುಷ್ಯನ ಯುಗ, ವಿಸ್ತಾರವಾದ ಬದುಕಬಹುದಾದ ಈ ಭೌಗೋಳಿಕ ನೆಲೆಯಲ್ಲಿ ಅಪಾರವಾದ ಪ್ರಾಕೃತಿಕ ಸಂಪತ್ತು ಇರುವಷ್ಟರಲ್ಲಿ ಬೇಕಾದುದನ್ನೆಲ್ಲಾ ದಕ್ಕಿಸಿಕೊಂಡು ಆದರ್ಶವೆಂಬಂತೆ ಸಾರ್ಥಕವಾಗಿ ಸಾಧ್ಯವಾದಷ್ಟು ಪರಿಪೂರ್ಣವಾಗಿ ಬದುಕಬಹುದಾದದ್ದು ಮನುಷ್ಯರಿಗೆ ಸಾಧ್ಯವಿದೆ. ತನ್ಮೂಲಕ ತಾನೇ ಅಂತಿಮ, ಏಕಮೇವ ಎಂದುಕೊಂಡದ್ದು ಈಗಾಗಲೇ ಅರ್ಥವಾಗಿರುವ ಸಂಗತಿಯೂ ಹೌದು. ಈ ಹಿನ್ನೆಲೆಯಲ್ಲಿಯೇ ಆತ ಬೌದ್ಧಿಕ ಪ್ರಜ್ಞೆಯ ಅನಂತವಾದ ಲೋಕವನ್ನು ಮುಟ್ಟಿದ್ದಾನೆ. ಮತ್ತೇನೇನೋ ಸಾಧಿಸಬೇಕೆಂಬ ಕನಸಿನೊಂದಿಗೆ ಮುಂದೆ ಮುಂದೆ ಸಾಗುತ್ತಲೂ ಇದ್ದಾನೆ. ಇದು ಜ್ಞಾನ-ವಿಜ್ಞಾನ ಸಾಧನೆಗಳೊಂದಿಗಿನ ಸವಾಲಿನ ಮುಖಾ-ಮುಖಿ ಇಲ್ಲಿಯೇ ಸಂಸ್ಕøತಿ, ನಾಗರೀಕತೆ, ಆಧುನಿಕತೆ ಎಂಬೆಲ್ಲಾ ವಿವಿಧ ಫಲಿತಗಳು ದಕ್ಕಿದ್ದಿವೆ. ಹಾಗೆಂದ ಮಾತ್ರಕ್ಕೆ ಎಲ್ಲವೂ ಸರಿ ಇದೆಯೇ? ಅಥವಾ ನಿನ್ನೆಗಳ ಎಲ್ಲವೂ ಸರಿಯಿತ್ತೆ ಎಂದರೆ ಉತ್ತರ ಕಷ್ಟ. ಜ್ಞಾನದ ಹಾದಿಯಲ್ಲಿ ದಾಪುಗಾಲಿಟ್ಟ ಮನುಷ್ಯ ಜೊತೆ ಜೊತೆಗೆ ವಿಚಿತ್ರ ಅಹಂಕಾರದಲ್ಲಿ ತನ್ನತನವನ್ನು ಪ್ರತಿಷ್ಠಾಪಿಸುವ ಹಠದಲ್ಲಿ ತರತಮವನ್ನು ಸೃಷ್ಟಿಸಿಕೊಂಡದ್ದು ಮಾನವ ಕುಲಕ್ಕೆ ಮಾಡಿದ ಅನ್ಯಾಯವೇ ಹೌದು ಅದೊಂದು ಪ್ರಕೃತಿಗೆ ವಿರುದ್ಧವಾದ ನಡೆ.

         ಮನುಷ್ಯನ ಈ ಬಗೆಯ ಚಿಂತನೆಗೆ ತರ್ಕಕ್ಕೆ ಯಾವ ಹೆಸರಿಡಬಹುದು? ಉತ್ತರ ಸುಲಭವಿಲ್ಲ ಎಲ್ಲಾ ಜ್ಞಾನಗಳನ್ನು ಹಠಕ್ಕೆ ಬಿದ್ದಂತೆ ತನ್ನದಾಗಿಸಿಕೊಂಡ ಮನುಷ್ಯ ಅದನ್ನು ತನ್ನಂತಹ ಎಲ್ಲರೊಂದಿಗೆ ಸಮ ಆಶಯ, ಸಮಕನಸು, ಸಮಜೀವನದಂತೆ ಹಂಚಿಕೊಂಡದ್ದಾಗಿದ್ದರೆ ಸ್ವರ್ಗ ಎನ್ನುವುದರನ್ನು ಬೇರೆಲ್ಲೋ ಕಲ್ಪಿಸಬೇಕಿರಲಿಲ್ಲ. ತಮ್ಮದೇ ಕುಲದ ಮಧ್ಯ ಜೀವರಾಶಿಯ ವಿಶಿಷ್ಟತೆಯ ಮಧ್ಯ, ಹೆಣ್ಣು-ಗಂಡು, ಕಪ್ಪು-ಬಿಳಿ-ಮೇಲು-ಕೀಳು ಮುಂತಾಗಿ ಪ್ರತಿಪಾದಿಸಿಕೊಂಡು ಅದನ್ನೊಂದು ನಿಯಮದಂತೆ ರೂಪಿಸಿಕೊಂಡು ಅದಕ್ಕೆ ಮತ್ತಷ್ಟು ಕಟ್ಟುಪಾಡುಗಳನ್ನು ರೂಪಿಸಿ ‘ಧರ್ಮ’ದ ಹೆಸರಿನಿಂದಲೂ ನಿಯಂತ್ರಿಸಿದ್ದಕ್ಕೆ ಯಾವ ವೈಜ್ಞಾನಿಕ ಸೂತ್ರವಿತ್ತು? ಈ ಬಗೆಯ ಅಹಂಕಾರ ಮತ್ತು ಶ್ರೇಷ್ಠತೆಯ ಭ್ರಮೆಗಳು ಇಂದು ಈ ನೆಲದ ಪ್ರಜ್ಞಾವಂತ ನಂಬಿಕೆಗಳಿಗೆ, ಭರವಸೆಗಳಿಗೆ ಆದರ್ಶಗಳಿಗೆ ವಾಸಿಯಾಗಲಾರದ ಗಾಯಗಳನ್ನು ಮಾಡಿದ್ದಕ್ಕೆ ಯಾರನ್ನು ಶಿಕ್ಷಿಸಬೇಕು? ಯಾರಿಗೆ ಹೊಣೆ ಹೊರಿಸಬೇಕು......? 

        ಅಸಮಾನತೆ ಎನ್ನುವುದು ಭಾರತೀಯ ನೆಲಕ್ಕೆ, ಸಾಂಪ್ರದಾಯಿಕ ಚಿಂತನೆಯ ಮನಸ್ಸುಗಳಿಗೆ ಒಂದು ಮಹಾಶಾಪವೇ ಆದಂತಿದೆ. ಮೂಲನಿವಾಸಿಗಳ ಚಾರಿತ್ರಿಕ ಸತ್ಯ, ಸಾಂಸ್ಕøತಿಕ ಇತಿಹಾಸ, ಏನೇ ಆಗಿದ್ದರೂ ಎಷ್ಟೇ ವೈಜ್ಞಾನಿಕವಾಗಿದ್ದರೂ ಇದು ಸರಿ, ಇದು ತಪ್ಪು ಎನ್ನುವ ವಿಶ್ಲೇಷಣೆಗಳು ತುಂಬಾ ಸಹಜವೆನ್ನುವಂತೆ  ಸಾಧ್ಯವಾಗುತ್ತಲಿದ್ದರೂ ಜಾತಿ-ಧರ್ಮದಂತಹ ಸಂಗತಿಗಳು ದಿನೇ ದಿನೇ ಒಗಟಾಗಿ ಸಂಕೀರ್ಣಗೊಳ್ಳುತ್ತಿದೆ. ನಾಗರೀಕತೆ ಎನ್ನುವುದನ್ನು ಹೀಗೆ ನಿಜಕ್ಕೂ ಬೇಕಾದ ಕಡೆಗಳಲ್ಲಿ ಬಳಸಿಕೊಳ್ಳಲಾಗದಂತಹ ವಿಪರ್ಯಾಸಗಳಿಗೆ ಎಡೆಮಾಡಲಾಗುತ್ತಿದೆ.

        ಮಾನವೀಯತೆಯ ಬಗೆಗೆ ಬೇರೆಲ್ಲೂ ಇರಲಾರದಷ್ಟು ಮಾತುಗಳು ನಮ್ಮಲ್ಲಿವೆ. ಚರ್ಚೆಗಳಿವೆ. ವಿಚಿತ್ರವಾದ ಸಾಕಷ್ಟು ಉಪದೇಶಗಳೂ ಇವೆ. ಸರ್ವರಿಗೂ ಸುಖವಾಗಲಿ ಎಂಬ ಆದರ್ಶದ ಸ್ವರೂಪದ ಹಲವು ಮಾತುಗಳಿಲ್ಲಿವೆ. ದೇವನೊಬ್ಬ ನಾಮ ಹಲವು; ಎಲ್ಲರಲ್ಲೂ ಭಗವಂತನಿದ್ದಾನೆ ಎಂಬೆಲ್ಲಾ ಅನಂತತೆಯ ಶಬ್ದಗಳೂ ವಾಕ್ಯಗಳಿವೆ. ಈ ಪ್ರಕೃತಿಯಲ್ಲಿ ಎಲ್ಲರೂ ಸಮಾನರೆ ಎನ್ನುವ ವಾದಗಳಿಗೂ ಇಲ್ಲಿ ಬರಗಾಲವಿಲ್ಲ. ಇವೆಲ್ಲವು ಸಾಮಾನ್ಯತೆಯ ಸಂದರ್ಭಕ್ಕೆ ಬಹಳ ರೋಮಾಂಚನಗೊಳಿಸಬಲ್ಲ ಅದ್ಭುತವಾದ ಮಾತುಗಳೇ ಎನ್ನಬಹುದಾದರೂ ಇವು ಕೇಳಿ ಕಲ್ಪಿಸಿಕೊಂಡು ಸುಖ ಪಡುವಷ್ಟರಲ್ಲೇ ಒಡೆದು ಹೋಗಿಬಿಡುತ್ತವೆ.

        ಸಮಾಜ ಎನ್ನುವುದು, ಆ ಕಾರಣಕ್ಕೆ ಸಾಮಾಜಿಕ ಜೀವನ ಎನ್ನುವುದೂ ನಮ್ಮೊಳಗಿನ ಬದುಕಿನ ಬದ್ಧತೆಯ ಸಂಗತಿ ಎಂದುಕೊಳ್ಳುತ್ತಿರುವಲ್ಲಿಯೇ ಎದುರಿಗಿರುವ ಸತ್ಯ ಬೇರೆಯದ್ದೇ ಆಗಿದೆ. ಸಾಮಾಜಿಕ ಅಸಮಾನತೆ, ಸಾಮಾಜಿಕ ಅನ್ಯಾಯಗಳು ಸಾರ್ವತ್ರಿಕ ಕ್ರಮವಾಗಿವೆ ಇದನ್ನು ನಿಜದ ನೆಲೆಗಳೆಂದು ಅರಗಿಸಿಕೊಂಡು, ಅವುಗಳಿಗೆ ಒಗ್ಗಿಕೊಂಡಂತೆ ಬದುಕುವುದು ಈಚಿನ ಅನಿವಾರ್ಯತೆಯೂ ಆಗಿರುವುದು ಸ್ಪಷ್ಟ. ‘ಭಾರತೀಯ ಸಮಾಜ’ ಎಂದುಕೊಂಡ ಕೂಡಲೇ ‘ಜಾತಿವ್ಯವಸ್ಥೆ’ ಇದರ ಮುಖ್ಯ ಲಕ್ಷಣ ಎನ್ನುವಂತೆ ಅರ್ಥಮಾಡಿಕೊಂಡೇ ಮುಂದುವರಿಯಬೇಕಿರುವ ಸಂಕಟ ಸಾಮಾನ್ಯವಲ್ಲ, ಸಹಜ ಸಮಾನತೆಯ ಆಶಯ ಮತ್ತು ಪ್ರೀತಿಯಿಂದ ಹೊರಟವರಿಗೆಲ್ಲಾ ಇದೊಂದು ನಿಜದ ಆತಂಕವೇ ಆಗಿದೆ.

        ಮಾನವೀಯತೆ ಎನ್ನುವ ಪದದ ಮೂಲವೇ ಅಸಮಾನತೆಯನ್ನು ಮೀರುವಂತಹುದು. ಅಂತಃಕರಣದೊಂದಿಗಿನ ಭಾವವೇ ಇದರ ಶಕ್ತಿ ಸಮಾನತೆ ಎನ್ನುವುದು ಇಲ್ಲಿ ಸರಳವಾಗುವ ಆಶಯ. ಇದು ಹುಟ್ಟು-ಬದುಕು-ಸಾವು ಎನ್ನುವ ಸಾಮಾನ್ಯ ಅರಿವನ್ನು ಯಾವುದೇ ಸಹಜ ರೀತಿಯ ತರ್ಕಗಳಿಂದ ಆ ಬಗೆಯ ವಾದಗಳಿಂದ ಗಮನಿಸಿದರೂ ನಿಸರ್ಗ ಎಲ್ಲರನ್ನು ಸಮಾನ ನೆಲೆಯಲ್ಲಿಯೇ ಗಮನಿಸಿರುವುದುಂಟು. ಆದರೆ ಅದಕ್ಕೆ ವಿರುದ್ಧವಾಗಿ ಮನುಷ್ಯ ತನ್ನ ಸಣ್ಣತನ, ಪಿತೂರಿ, ಸ್ವಾರ್ಥ, ಒಳಸಂಚು, ಮೊದಲಾದ ಭಾವದಾರಿದ್ರ್ಯ ಗುಣದಿಂದ ಹಲವು ನೆಲೆಯಲ್ಲಿ ಅಸಮಾನತೆಯನ್ನೇ ಅದನ್ನು ಪುಷ್ಠಿಗೊಳಿಸುವ ಹಾದಿಯನ್ನೇ ಮಹಾಮಾರ್ಗವಾಗಿಸಿಕೊಂಡಿರುವುದು ವಿಪರ್ಯಾಸ. ಸಾಲದೆಂಬಂತೆ ಇದಕ್ಕೆ ಪೂರಕವಾಗಿಯೇ ಹಲವು ಆಯಾಮಗಳನ್ನು, ಜೊತೆಗೆ ತಾಂತ್ರಿಕತೆಗಳನ್ನು, ಮುಂದುವರೆದು ಸೈದ್ಧಾಂತಿಕ ಭ್ರಮೆಗಳನ್ನು ಸೃಷ್ಟಿಸಿಕೊಂಡಿರುವಲ್ಲಿಯೇ ಇದೊಂದು ವ್ಯವಸ್ಥಿತವಾದ ಯೋಜನೆ ಎನ್ನುವುದು ಸ್ಪಷ್ಟವಾಗುವಂತಹುದು. ಇಷ್ಟೆಲ್ಲಾ ಯೋಜಿತ ನೆಲೆಯಾದಾಗ್ಯೂ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಇದನ್ನು ಧಾರ್ಮಿಕ ಚೌಕಟ್ಟಿಗೆ ಅಳವಡಿಸಿ ಧರ್ಮಸೂಕ್ಷ್ಮದಂತೆಯೂ ಮಾಡುವಲ್ಲಿಯೇ ಒಂದು ದೊಡ್ಡ ತಂತ್ರವಿದೆ. ಇದೊಂದು ಎಲ್ಲ ಮಾನವೀಯ ಭಾವಗಳಿಗೂ ಮುಸುಕು ಹಾಕಿದ ಭಾವವೇ ಹೌದು. ಎಂತಹದ್ದೇ ವೈಜ್ಞಾನಿಕ ಚಿಂತನೆಯ ಎಚ್ಚರದ ಕಾಲದಲ್ಲಿದ್ದು ಈ ಬಗೆಯ ನಿಲುವಿನಿಂದ ಪಾರಾಗಲಾರದ ವಿಪರ್ಯಾಸವೇ ಈ ವ್ಯವಸ್ಥಿತ ತಂತ್ರದ ಗಾಢತೆಯನ್ನು ಹೇಳುವಂತಹುದು. ಭಾರತದಂತಹ ನೆಲದಲ್ಲಿ ಈ ಕುತಂತ್ರವನ್ನು ಒಂದು ದೈವಿಕ ಭಾವನೆಯ ರೂಪಕವನ್ನಾಗಿಸಿ ಅದಕ್ಕೊಂದು ಸನಾತನೆಯ ಮೌಲ್ಯವನ್ನು ಆರೋಪಿಸಿದ್ದು, ವರ್ಣಶ್ರಮವನ್ನೇ ಸತ್ಯವೆಂದು ವಾದಿಸಿದ್ದು ಈ ಕ್ಷಣಕ್ಕೂ ದೊಡ್ಡ ತೊಡಕಾಗಿರುವುದನ್ನು ಯಾವ ಆಧಾರದಿಂದ ಅಲ್ಲಗಳೆಯಲಾದೀತು?

         ಅಂದಿನ ದಿನದಿಂದ ಇಂದಿನವರೆಗಿಗೂ ಈ ಸಮಾಜ ಹೀಗೊಂದು ಅಸಮಾನತೆಯ ಅಂಶವನ್ನು ತನ್ನ ಒಡಲೊಳಗೆ ಇರಿಸಿಕೊಂಡು, ಅದನ್ನೇ ಸಾಧಿಸುತ್ತಿರುವುದಾದರೆ, ಆ ಬಗೆಗೆ ಖಂಡಿತಾ ಅವಮಾನದಿಂದ ತಲೆ ತಗ್ಗಿಸಲೇಬೇಕು. ರೂಪ, ಆಕಾರವೇ ಇಲ್ಲದ ಈ ತೆರನಾದ ಸಮಾಜವನ್ನು ಒಪ್ಪಿಕೊಂಡು ಬದುಕಬೇಕಾದ ವಿಪರ್ಯಾಸ ಯಾಕೆ? ಮತ್ತು ಯಾರಿಗಾಗಿ ಎಂದರೆ ಸರಿ ಉತ್ತರ ಕೊಡಬಹುದಾದವರು ಯಾರು? ಹೀಗೊಂದು ಸಾಮಾಜಿಕ ನಂಬಿಕೆ ಮಹಾ ಸಮಸ್ಯೆಯಾಗಿ ಮನುಷ್ಯ-ಮನುಷ್ಯರ ನಡುವೆ ಉಂಟು ಮಾಡಿರುವ ತರತಮವನ್ನು ಇನ್ನೂ ಸರಿಪಡಿಸಲಿಕ್ಕಾದ ಒದ್ದಾಟಗಳಿಗೆ ಕರ್ಮಗಳಿಗೆ ಯಾರು ಹೊಣೆ? ‘ಮೇಲು’ ಎನ್ನುವ ಅಹಂಕಾರಗಳಿಗೆ’, ‘ಕೀಳು’ ಎನ್ನುವ ಅವಮಾನಗಳಿಗೆ ಕಾಲ ಉತ್ತರ ನೀಡಬಹುದೆ?
ಭವ್ಯ ಭಾರತವೆಂಬ ಶಬ್ದ-ವಾಕ್ಯ-ಮಾತುಗಳೆಲ್ಲ ತಕ್ಷಣಕ್ಕೆ ತಳಮಳ ಉಂಟು ಮಾಡುವಂತಹವು. ಈ ಭವ್ಯ ಭಾರತದಲ್ಲಿ ಜಾತಿಪದ್ಧತಿಯೇ ಸಮಾಜದ ಬುನಾದಿಯಾಗಿದೆ ಎನ್ನುವ ಅರಿವು ಈ ನಿಜದ ಆತಂಕಕ್ಕೆ ಕಾರಣ ಎನ್ನುವುದನ್ನು ಎಷ್ಟು ಮಂದಿ ಅರ್ಥಮಾಡಿಕೊಳ್ಳಬಲ್ಲರು? ಇಂತಹದ್ದೊಂದು ತಳಮಳ ಈ ನೆಲದ ಬಹುಜನರಿಗಿದ್ದು ಬಿಟ್ಟಿದ್ದರೆ, ಎಲ್ಲರೂ ಆದರ್ಶ ಭಾವದ ವಾರಸುದಾರರಾಗಿದ್ದರೆ, ‘ಜಾತಿ’ ಎನ್ನುವುದು ಯಾವುದೋ ಕ್ಷಣಕ್ಕೆ ತನ್ನಿಂತಾನೇ ನಾಶವಾಗಿಬಿಡಬಹುದಿತ್ತು. ಈ ಬಗೆಯ ಹಪಹಪಿಗಳಿಗೆ ಜಾಗವಿರುತ್ತಿರಲಿಲ್ಲ. ಹರುಷಕ್ಕೆ ಬೇರೆ ಕಾರಣಗಳೇ ಬೇಕಿರುತ್ತಿರಲಿಲ್ಲ.

        ಸಂಸ್ಕøತಿ, ನಾಗರೀಕತೆ, ಆಧುನಿಕತೆ ಎಂಬೆಲ್ಲಾ ಸಾಕಷ್ಟು ಮಾತುಗಳು, ವಾದಗಳು, ಸಿದ್ಧಾಂತಗಳು ಈ ನೆಲದಲ್ಲಿವೆ. ಇವು ಮೂಲತಃ ಮನುಷ್ಯ ಪರಿವಾರದ ವಿಕಾಸದ ಹಾದಿಯನ್ನೇ ಕುರಿತು ಪ್ರಸ್ತಾಪಿಸುವಂತಹವು ಅಂದರೆ ಇದು ಕಾಲ ಸಂಬಂಧಿಯೂ ಆದದ್ದು, ಕಾಲದಿಂದ ಕಾಲಕ್ಕೆ ಪರಿಸರದಿಂದ ಪರಿಸರಕ್ಕೆ ಪ್ರಜ್ಞೆಯಿಂದ ಪ್ರಜ್ಞೆಗೆ ಬೆಳೆಯುತ್ತಾ ಸಾಗುವ ಕ್ರಮ ತನ್ಮೂಲಕ ವಾಸ್ತವಗಳಿಗೆ ಸತ್ಯಕ್ಕೆ ವೈಚಾರಿಕತೆಗೆ ವಿಜ್ಞಾನಕ್ಕೆ ಮುಖಾ-ಮುಖಿಯಾಗುವ ಬಗೆಯಿದು. ಉಳಿದಂತೆಲ್ಲಾ ಮಹಾನಾಗರೀಕ-ಆಧುನಿಕ, ಪ್ರಗತಿಶೀಲ ಎಂದೆಲ್ಲಾ ಬೀಗುವ ನಮ್ಮೊಳಗಿನ ನಿಜವಾದ ತೊಡಕು ‘ಜಾತಿ’ಎಂಬ ಆಚರಣೆ, ಇದೊಂದು ಪ್ರತಿಗಾಮಿಯಾದ, ಅವೈಜ್ಞಾನಿಕವಾದ, ಅತಾರ್ಕಿತವಾದ ವಿಚಿತ್ರ ಸತ್ಯ ಎನ್ನುವುದು ನಮ್ಮ ಬಹುಮಂದಿಗೆ ಅರ್ಥವಾಗುತ್ತಿಲ್ಲವೆ? ಪ್ರತೀಕ್ಷಣಕ್ಕೂ ಜಾತಿಯೇ ಶ್ರೇಷ್ಠ ಎಂಬ ಪರಿಭಾವನೆಗಳಾದರೂ ಯಾಕೆ? ಜಾತಿರಹಿತವಾದ ಸಮಸಮಾಜವನ್ನು ‘ವಾಸ್ತವ’ತೆಯ ಆಧಾರದಲ್ಲಿ ಕಲ್ಪಿಸಿ, ಬದುಕಲಾಗುವುದಿಲ್ಲವೆ? ಹೀಗೆಲ್ಲಾ ಸಾಕಷ್ಟು ಪ್ರಶ್ನೆಗಳುಂಟಾದಾಗಲೂ ಉತ್ತರವಾದರೂ ಮತ್ತದೇ ನಿರಾಶೆ ಬಹುಶಃ ಈ ದೇಶದಲ್ಲಿ ಹೀಗೆ ‘ಜಾತಿ’ ಎನ್ನುವ ವಿಚಾರವನ್ನು ಕುರಿತು ಪರ-ವಿರೋಧವಾಗಿ ನಡೆದಿರುವ ಚರ್ಚೆಗಳು ವ್ಯಾಪಕವಾಗಿ ಮತ್ತಾವ ಸಂಗತಿಯನ್ನು ಕುರಿತಂತೆಯೂ ಆಗಿಲ್ಲ ಎನ್ನುವುದಾದರೆ ಅದು ಉತ್ಪ್ರೇಕ್ಷೆಯಾಗಬೇಕಿಲ್ಲ. ಈ ವಿಚಾರದಿಂದಲೇ ನಾವು ಈ ನೆಲದ ಜಾತಿಯ ವಿಶ್ವರೂಪವನ್ನು ಕಲ್ಪಿಸಿಕೊಳ್ಳಬಹುದು.

         ಈ ನೆಲದಲ್ಲಿ ನಾವು ಮಾನವೀಯತೆಯ ಮಾತುಗಳನ್ನು ಆಡಿಕೊಂಡಾಗಲೆಲ್ಲಾ ಸಮಾನತೆಯ ಆಶಯ ತಾನೇ ತಾನಾಗಿ ಮುಂದಾಗುತ್ತದೆ. ಆ ಕ್ಷಣಕ್ಕೆ ಜಾತಿ ಮೀರಲೇಬೇಕಾದ ಆದರ್ಶದ ಕನಸೊಂದು ಕುಡಿಯೊಡೆಯುತ್ತದೆ. ಈ ಬಗೆಯ ಕನಸಿನೊಂದಿಗೆ ನೂರಾರು ದಾರ್ಶನಿಕರು, ಹಲವಾರು ಜೀವಪರ ಅಂತಃಕರಣಿಗಳು ತುಂಬಾ ಗಂಭೀರವಾಗಿಯೇ ಸುಧಾರಣೆಯ ಪ್ರಯತ್ನಗಳನ್ನು ನಡೆಸಿದ್ದಾರೆ, ನಡೆಸುತ್ತಲೇ ಇದ್ದಾರೆ. ಇವೇ ಈ ಹೊತ್ತಿಗೂ ಒಂದಿಷ್ಟು ಆಶಾವಾದ, ಬೆಳಕಿನ ಕಿಂಡಿ, ಮತ್ತೂ ವಿಚಿತ್ರವೆಂದರೆ ಮತ್ತೊಂದು ನೆಲೆಯಲ್ಲಿ ಐಕ್ಯತೆ, ಸಂಸ್ಕøತಿ, ಆದರ್ಶದ ಮಾತುಗಳನ್ನು ಆಡುತ್ತಲೇ ಒಳಗಿಂದೊಳಗೇ ಜಾತಿವ್ಯವಸ್ಥೆ ಪರ ಮಾತನಾಡಿ ಅದನ್ನು ಗಟ್ಟಿಗೊಳಿಸುವ ಧರ್ಮ, ರಾಜಕೀಯ, ಸಾಮಾಜಿಕ ನೇತಾರರು ನಮ್ಮೊಳಗೆ ಇದ್ದಾರೆ. ಒಗ್ಗಟ್ಟು ಎನ್ನುತ್ತಲೇ ಪ್ರತ್ಯೇಕತೆಯ ಅರ್ಥವನ್ನು ಪ್ರತಿಪಾದಿಸುವ ಈ ಬಗೆಯ ಚಾಪಲ್ಯವನ್ನು ಸಂಕುಚಿತ ಭಾವವನ್ನು ಅರ್ಥೈಸಿಕೊಂಡು ಹಿಂದಿರುವ ಕುತಂತ್ರವನ್ನು ಗ್ರಹಿಸಬೇಕಾದ ತುರ್ತಿದೆ ‘ಆಧುನಿಕತೆ’ಯ ಮಾತುಗಳನ್ನು ಪದೇ ಪದೇ ಪ್ರಸ್ತಾಪಿಸುವ ಸಂದರ್ಭಕ್ಕೂ ವಿಶ್ವಗ್ರಾಮದ ಪರಿಕಲ್ಪನೆಯ ವ್ಯಾಪ್ತಿಯೊಳಗಿದ್ದೂ ಮತ್ತೆ ಮತ್ತೆ ಜಾತಿಗಳನ್ನು ವಿವಿಧ ಆಯಾಮಗಳಲ್ಲಿ ಸಂಘಟಿಸಿ ಅದಕ್ಕೆ ಮತ್ತೆ ಸಂಕುಚಿತತೆಯ ನೆರಳನ್ನೇ ಚಾಚಿಸಿ, ಪೋಷಿಸುವ ಕೆಲಸ ಈ ದೇಶದ ರಾಜಕಾರಣದ ಮುಖ್ಯ ಲಕ್ಷಣವಾಗಿ ಬಿಡುವುದನ್ನು ಅರಗಿಸಿಕೊಳ್ಳುವುದು ಹೇಗೆ? ಈ ಬಗೆಯ ಯೋಚನೆ-ಯೋಜನೆಗಳಿಗೊಂದು ವ್ಯವಸ್ಥಿತವಾದ ಕ್ರಮವಿರುತ್ತವೆ. ಹಾಗೂ ಅವರದ್ದೇ ತರ್ಕಗಳಿರುತ್ತವೆ. ಈ ಬಗೆ ವಾದಗಳನ್ನು ಶ್ರೀಸಾಮಾನ್ಯರು ಸುಲಭವಾಗಿ ನಂಬುವಂತಾಗುವುದು ಸಹ ಮತ್ತೊಮ್ಮೆ ವ್ಯವಸ್ಥೆಯ ದುರಂತವೆಂದೇ ಹೇಳಬಹುದು. ವಿದ್ಯಾವಂತರೆನಿಸಿಕೊಂಡವರೂ ಈ ತಂತ್ರಗಳ ಸಾಲುದಾರರಾಗಿ ಬಿಡುವುದು ಮತ್ತಷ್ಟು ವಿಪರ್ಯಾಸ. ಇಂತಲ್ಲಿ ಸಮಾನತೆಯ ಭಾರತವನ್ನು ಕನವರಿಸುವುದಾದರೂ ಸುಲಭ ಸಾಧ್ಯವೆ? ಹಾಗೆಂದು ಆದರ್ಶದ ಹಾದಿಯನ್ನಾಗಲೀ ಮಾದರಿಯ ರೂಪಕಗಳನ್ನಾಗಲೀ ಬಿಟ್ಟು ಬದುಕುವುದು ಸಾಧ್ಯವೇ? ಅಂತಹ ಪ್ರಯತ್ನಗಳು ಮತ್ತೆ ಮತ್ತೆ ಪುನರ್ ರೂಪುಗೊಳ್ಳುವಲ್ಲಿಯೇ ನಿಜವಾದ ಕ್ರಿಯಾಶೀಲತೆಗೆ ಅರ್ಥವನ್ನು ಕಂಡುಕೊಳ್ಳುವ ಅಗತ್ಯವಿದೆ.

        ‘ಸಾಮಾಜಿಕ ಸಮಾನತೆ’ ಎನ್ನುವುದು ಬಹುಶಃ ಈ ಜಗತ್ತಿನ ಎಲ್ಲಾ ಬಗೆಯ ಪ್ರಗತಿಪರ ಚಳುವಳಿಗಳ ಬಹುಮುಖ್ಯ ಲಕ್ಷಣವೆನ್ನಬಹುದು. ವರ್ಗ ಚಳುವಳಿಗಳ ಸ್ವರೂಪ ತುಸು ಭಿನ್ನವಿರಬಹುದು. ಆಯಾಯ ರಾಷ್ಟ್ರಗಳಲ್ಲಿ ಬದಲಾದ ಕಾಲಮಾನಗಳಲ್ಲಿ ಅದು ಬೇರೆಯದ್ದೇ ಫಲಿತವನ್ನು ಕಂಡಿರಬಹುದು. ಆದರೆ ‘ವರ್ಣ’ತರತಮದ ವಿಷಯದಲ್ಲಿ ಈ ಬಗೆಯ ಮಾತನ್ನು ಸುಲಭವಾಗಿ ಹೇಳಲು ಬರುವುದಿಲ್ಲ. ಮುಖ್ಯವಾಗಿ ಭಾರತದ ನೆಲದಲ್ಲಿ ‘ಜಾತಿ’ ವಿಚಾರದಲ್ಲಿ ತುಂಬಾ ಗಂಭೀರವೆನ್ನುವಂತೆ ತುಂಬಾ ಆಶಾವಾದದ ಘಟನೆಗಳು ಪರಿಣಾಮಕಾರಿಯಾಗಿ ನಡೆದಿದೆ ಎಂದು ಗಟ್ಟಿಯಾಗಿ ಹೇಳುವಂತಿಲ್ಲ. ಅಲ್ಲಲ್ಲಿ ಕೆಲವು ಪ್ರಗತಿಪರವಾದ ಆಶಯಗಳು ಕಂಡರೂ ಅವು ಪರಂಪರೆಯಂತೆ ಬೆಳೆಯಲಾಗದಿದ್ದದ್ದು ಮತ್ತು ದುರಂತವೇ ಹೌದು. ಬದಲಾವಣೆ ಎನ್ನುವುದಕ್ಕೆ ಹತ್ತು ಹಲವು ಆಯಾಮಗಳಿವೆ ಮತ್ತು ಅವು ವಿಷಯದಿಂದ ವಿಷಯಕ್ಕೆ ವಿಭಿನ್ನವೂ ಆಗಿರುವ ಸಾಧ್ಯತೆಯುಂಟು. ವರ್ಣದ್ವೇಷ ನೀತಿಯ ಅಮೇರಿಕಾದಂತಹ ದೇಶದಲ್ಲಿ ಅದನ್ನು ದಾಟಿ ಕಪ್ಪು ವರ್ಣೀಯರು ಅಧಿಕಾರದ ಉನ್ನತ ಗದ್ದುಗೆಗೆ ಏರುವುದು ಸಾಧ್ಯವಾಗುತ್ತದೆ. ಆದರೆ ಮಾನವೀಯತೆಯ ಬಹಳಷ್ಟು ಮಾತುಗಳನ್ನಾಡುವ ಭಾರತದಲ್ಲಿ ಇಂತಹದ್ದೊಂದು ಪವಾಡ ಘಟಿಸುವುದು ಸುಲಭ ಸಾಧ್ಯವಾಗುವುದಿಲ್ಲ.

        ಭಾರತೀಯ ಜಾತಿ ವ್ಯವಸ್ಥೆಯನ್ನು ಯಾವ ನೆಲೆಯಲ್ಲಿ ಹೇಗೆ? ಸರಿಪಡಿಸಬಹುದು ಎನ್ನುವುದು ಬಗೆಹರಿಯಲಾಗದ ಸಮಸ್ಯೆಯಾಗಿರುವುದಕ್ಕೆ ಮುಖ್ಯ ಕಾರಣ ಒಳಗೇ ಇದೆ ಅಂದರೆ ಯಾರು ಅದನ್ನು ಕುರಿತು ಯೋಚಿಸಬೇಕೋ ಅವರು ಅದನ್ನು ಕುರಿತು ಯೋಚಿಸದಿರುವುದೇ ಇಲ್ಲಿನ ಮುಖ್ಯ ಮಿತಿಯೂ ಆಗಿದೆ. ಜಾತಿಯನ್ನು ಶ್ರೇಷ್ಠತೆಯ ಭಾವದಲ್ಲಿ ಚಿಂತಿಸಿ ಅದನ್ನು ಅಹಂಕಾರವಾಗಿಸಿಕೊಂಡವರೇ ಉಳಿದ ಜಾತಿಗಳನ್ನು ಸೃಷ್ಟಿಸಿ ವಿಭಿನ್ನ ಆಯಾಮಗಳಲ್ಲಿ ಪೋಷಿಸುತ್ತಿದ್ದಾರೆನ್ನುವುದು ಸೂರ್ಯಸತ್ಯ. ಅದರೊಂದಿಗೆ ಪ್ರತೀ ಜಾತಿಗೂ ತಮಗಿಂತ ಕೆಳಗೊಂದು ಜಾತಿ ಎನ್ನುವುದಿರುವಂತೆ ನೋಡಿಕೊಳ್ಳುವಲ್ಲಿ ದೊಡ್ಡ ಕುತಂತ್ರವು ಅಡಗಿದೆ. ಹಾಗಾಗಿಯೂ ಪ್ರತೀ ಜಾತಿಗೂ ತನಗಿಂತ ಕೆಳಜಾತಿ ಚಲಿಸಿದಂತೆಲ್ಲಾ ತೀವ್ರವಾಗುತ್ತಿದೆ. ಹಾಗಾಗಿಯೂ ಪ್ರತಿ ಜಾತಿಗೂ ತನಗಿಂತ ಕೆಳಜತಿ ಕುರಿತಂತಹ ಅಸಡ್ಡೆಯೊಂದು ತಾನೇ ತಾನಾಗಿ ಉಳಿದು-ಬೆಳೆದು ಮತ್ತೊಂದು ಶ್ರೇಷ್ಠತೆಯ ಭ್ರಮೆಯು ಆವರಿಸಿಕೊಳ್ಳುವುದಾಗಿದೆ.

        ಜಾತಿ ಎನ್ನುವುದು ಬೌದ್ಧಿಕ ಕಸರತ್ತಿನ ಕ್ರಿಯೆಯೂ ಆಗಿರುವುದರಿಂದ ಅದೊಂದು ಮಾನಸಿಕ ಸಿದ್ಧತೆಯ ಪ್ರತಿಫಲ. ‘ಮೇಲು’ ಎನ್ನುವುದೇ ಒಂದು ಬಹುದೊಡ್ಡದಾದ ಅಹಂಕಾರ ಇದಕ್ಕೂ ಪರಂಪರೆಯ ನಂಟಿದೆ. ಈ ಬಗೆಯ ಅಹಂಕಾರ ನಾಶವಾಗದೇ ಹೋದರೆ ಸಮಾನತೆ ಎನ್ನುವುದು ಸುಲಭವಾಗಿ ಸಾಧ್ಯವಾಗುವುದಿಲ್ಲ. ಇದು ಬಹುಪಾಲು ಇಲ್ಲಿನ ಎಲ್ಲರಿಗೂ ಅರಿವಿರುವ ಸಂಗತಿಯೇ ಆಗಿದೆ. ಆದರೆ ಯಾರೊಬ್ಬರು ಗಟ್ಟಿಯಾಗಿ ಈ ಆದರ್ಶದ ಹಾದಿಯಲ್ಲಿ ಹೆಜ್ಜೆ ಇಡಲು ಸಂಪೂರ್ಣವಾಗಿ ಸಿದ್ಧರಿದ್ದಂತಿಲ್ಲ, ಅದರರ್ಥ ಈ ಸಮಸ್ಯೆಯಿಂದ ಈ ದೇಶವನ್ನು ಪಾರು ಮಾಡುವುದು ಸುಲಭ ಸಾಧ್ಯವಿಲ್ಲ ಹಾಗಾಗಿಯೂ ಮಾನವತೆಯ ಬಗಗೆ ಜೀವ ಪ್ರೀತಿಯ ಬಗೆಗೆ ಭವ್ಯ ದಿವ್ಯತೆಯ ಯಾವುದೇ ಪರಿಕಲ್ಪನೆಗಳ ಬಗೆಗೂ ‘ಬದ್ಧತೆ’ಯಿಂದ ಪರಿಭಾವಿಸಬಹುದಾದ ಸಾಧ್ಯತೆಗಳು ವಿಚಿತ್ರವಾದ ವಾದಗಳಾಗಿರಬಹುದು. ಇದು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಗ್ರಹಿಸಬೇಕಾದ ಅರಿವು ಮತ್ತು ಈ ಬಗೆಯ ವಿಚಿತ್ರ ನಂಬಿಕೆಯ ಪರಂಪರೆಯೊಂದಿಗಿನ ನಿಜದ ಮುಖಾ-ಮುಖಿ.

        ಜೈವಿಕ ಸತ್ಯವನ್ನು ಅರ್ಥೈಸಿಕೊಳ್ಳುವಾಗ ಮನುಷ್ಯನನ್ನು ಕೇಂದ್ರ ಪ್ರಜ್ಞೆಗೆ ತಂದು ಚರ್ಚಿಸುವುದಾದರೆ ಅಲ್ಲಿ ಕಾಣುವ ಮುಖ್ಯವಾದ ಮೊದಲಿನ ಅಂಶವೇ ಸಮಾನತೆ ಹಾಗಾಗಿಯೇ ಆತ ಜೀವಿಯಾಗಿಯೂ ಇತರ ಪ್ರಾಣಿಗಳಿಗಿಂತ ಭಿನ್ನವಾಗುತ್ತಾನೆ. ಆದರೆ ಮನಸ್ಸಿನಲ್ಲಿ ತುಂಬಿದ ಭಾವವಿಕಾರಗಳು, ಅಂದರೆ ಸ್ವಾರ್ಥ, ಪ್ರತಿಷ್ಠೆ, ಅಹಂಕಾರ, ಸಣ್ಣತನ ಇತ್ಯಾದಿಯಾದ ಗುಣ ಸ್ವಭಾವಗಳು ಅವನನ್ನು ಏನೆಲ್ಲಾ ಮಾಡಿಬಿಟ್ಟಿವೆ. ಅದರಲ್ಲಿ ಬಹಳ ಮುಖ್ಯವಾದದ್ದೇ ಈ ಸಾಮಾಜಿಕ ಅಸಮಾನತೆಯ ಭಾವ ಹಾಗಾಗಿಯೇ ಮೊದಲು ಈ ತಪ್ಪನ್ನು ಮಹಾಪ್ರಮಾದವನ್ನು ಸರಿ ಮಾಡಬೇಕು ಈ ನೆಲೆಯಲ್ಲಿ ಮಹಾನುಭಾವರು ಬಹಳಷ್ಟು ಜನ ಬದುಕನ್ನು ಪ್ರಯೋಗಶಾಲೆ ಮಾಡಿಕೊಂಡು ನಿಜ ಸತ್ವಕ್ಕೆ ಮುಖಾ-ಮುಖಿಯಾಗಿ ಕಂಡುಕೊಂಡ ಜ್ಞಾನ, ಸತ್ಯ, ತರ್ಕ, ಚಿಂತನೆ, ಚರ್ಚೆ, ಸಂವಾದಗಳೊಂದಿಗೆ ಮತ್ತೆ-ಮತ್ತೆ ಸಾಂಸ್ಕøತಿಕ ಪ್ರಜ್ಞೆಗಳಾಗಿ ಹಾಜರಾಗುತ್ತಲೇ ಇದ್ದಾರೆ. ತಮ್ಮ ಜ್ಞಾನದ ಬೆಳಕು ತಮ್ಮಿಂದಾಚೆಗೆ ಪ್ರಸರಿಸಲಿ ಎಂದು ಹಾರೈಸಿದ್ದಾರೆ.

         ಸಂಸ್ಕøತಿ ಎನ್ನುವುದು ಈಚೆಗೆ ಬಹುಚರ್ಚಿತವಾದ ವಿಷಯ ಈ ಕುರಿತು ಸಾಕಷ್ಟು ಸಿದ್ಧಾಂತಗಳೇ ಒಡಮೂಡಿವೆ. ಹತ್ತು ಹಲವು ಆಯಾಮಗಳಲ್ಲಿ ಸಂಸ್ಕøತಿಯನ್ನು ಅರ್ಥೈಸುವ ವ್ಯಾಖ್ಯಾನಿಸುವ ಕೆಲಸ ನಿರಂತರವಾಗಿ ನಡೆದಿದೆ.ಎಲ್ಲದರಾಚೆಗೆ ಸಂಸ್ಕøತಿಯನ್ನು ಸರಳೀಕರಿಸಿ ಹೇಳುವುದಾದರೆ ಅದೊಂದು ಜೀವನ ವಿಧಾನ ಅವು ವ್ಯಷ್ಟಿ ನೆಲೆಯಿಂದ ಸಮಷ್ಟಿಯವರೆವಿಗೂ ವಿಸ್ತರಿಸಿಕೊಳ್ಳಬಹುದಾದುದು. ಇದು ಪರಿಸರವನ್ನು ಆವರಿಸಿಕೊಂಡಾಗ, ನಾಡು-ನುಡಿ, ದೇಶ-ಭಾಷೆ ಎಂದೆಲ್ಲಾ ವಿಸ್ತರಿಸಿಕೊಳ್ಳುತ್ತಾ ಹೋಗಬಹುದು. ಹಾಗಾಗಿಯೇ ಇಂದು ನಾವು ಸಂಸ್ಕøತಿ ಎನ್ನುವುದನ್ನು ಬಹುಪಾಲು ಎಲ್ಲಾ ಸಂದರ್ಭಗಳಲ್ಲಿಯೂ ಸಹಜ ಎನ್ನುವಂತೆಯೇ ಬಳಸುತ್ತಿದ್ದೇವೆ. ಸಂಸ್ಕøತಿ ಬದುಕಿನ ಎಲ್ಲ ಬಗೆಯ ಸಾಧ್ಯತೆಗಳನ್ನು ಶಿಸ್ತನ್ನು ಒಳಗೊಳ್ಳಬಹುದಾದದ್ದು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

        ಸಂಸ್ಕøತಿಯನ್ನು ತೀರಾ ಸೂಕ್ಷ್ಮವಾಗಿ ಅವಲೋಕಿಸುವಾಗ ಅದಕ್ಕಿರುವ ವೈವಿಧ್ಯತೆಯನ್ನು ಗಮನಿಸುವ ಹೊತ್ತಿಗು ಒಂದು ದೇಶ ಎನ್ನುವಾಗಲಾಗಲೀ, ಜನಾಂಗ ಎನ್ನುವಾಗಲಾಗಲೀ ಒಟ್ಟಂದದಲ್ಲಿ ಸಮಗ್ರತೆಯ ಫಲಿತದಲ್ಲಿ ಸಂಸ್ಕøತಿಯನ್ನು ಪ್ರಸ್ತಾಪಿಸುವುದು ಸಾಧ್ಯವಾಗುವುದಿಲ್ಲ. ಸಂಸ್ಕøತಿ ಎನ್ನುವ ಅರ್ಥದೊಳಗೆ ಹಲವು ವೈವಿಧ್ಯತೆಯ ರೂಪಕಗಳಿರುವ ಹೊತ್ತಿಗೆ ‘ಒಂದೇ’ ಎಂಬ ಅರ್ಥದಲ್ಲಿ ಏನನ್ನಾದರೂ ಗ್ರಹಿಸುವುದು ಸಹ ಸುಲಭವಾದ ಸಂಗತಿಯಾಗುವುದಿಲ್ಲ ಎನ್ನುವುದು ಗಮನಾರ್ಹ. ಭಾರತದಂತಹ ಸಂದರ್ಭಕ್ಕೆ ಹೀಗೆ ಒಂದು ಸಂಸ್ಕøತಿ ಎನ್ನುವುದು ಸಹ ಈ ಕಾರಣಕ್ಕೆ ಸಾಧ್ಯವಾಗುವುದಿಲ್ಲ.

       ಭಾರತದಲ್ಲಿ ಅಪಾರವಾದ ಚರಿತ್ರೆಯಿದೆ ಆದರೆ ಚಾರಿತ್ರಿಕ ಪ್ರಜ್ಞೆಯಿಲ್ಲ ಎನ್ನುವುದೊಂದು ಮಾತಿದೆ ಇದು ನಮ್ಮನ್ನು ಕುರಿತ ಪಾಶ್ಚಾತ್ಯರ ವ್ಯಾಖ್ಯಾನ ಇದು ನಮ್ಮ ಜನರಿಗೆ ಸಾಧ್ಯವಾಗದೇ ಹೋದ ವಸ್ತುನಿಷ್ಠತೆಯನ್ನು ಕುರಿತಂತಹ ಅಭಿಪ್ರಾಯವೂ ಆಗಿರಬಹುದು. ನಾವು ಚರಿತ್ರೆಯ ಸತ್ಯಗಳಿಗೆ ಭಾವುಕತೆಯಿಂದ, ವರ್ಣರಂಜಿತ ನೆಲೆಯಲ್ಲಿ ಬೇಕಾದ ಬಗೆಯಲ್ಲಿ ತೆಗೆದುಕೊಂಡು ಶೂರತ್ವ ಪ್ರದರ್ಶನಕ್ಕೆ ಮುಂದಾದ ಕಾರಣಕ್ಕೂ ಈ ಅಪವಾದ ಸಹಜವೆನಿಸಬಹುದು. ಭಾರತದ ಮೂಲ ನಿವಾಸಿಗಳನ್ನು ಕುರಿತ ಚರ್ಚೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು ಹಲವು ಜನಾಂಗಗಳ ಮೂಲ ಈ ದೇಶಕ್ಕಿದ್ದರು ಕೊನೆಗೆ ಗಟ್ಟಿಯಾಗಿ ಉಳಿದವರು ‘ದ್ರಾವಿಡರು’ ಎನ್ನುವುದು ಮುಖ್ಯ ಅಂದರೆ ಪ್ರಾಚೀನತೆಯ ಅರ್ಥದಲ್ಲಿ ಸನಾತನ ಅಥವಾ ಆರ್ಷೆಯದ ಪದಗಳನ್ನು ಬಳಸುವುದಾದರೆ ಅದು ದ್ರಾವಿಡರ ಕುರಿತದ್ದೇ ಆಗಬೇಕಲ್ಲವೇ? ಈ ನೆಲದ ನಿಜ ಸಂಸ್ಕøತಿಯ ಮೂಲ ಪ್ರತಿಪಾದಕರು ದ್ರಾವಿಡರೆನ್ನುವ ನಂಬಿಕೆಯಿಂದ ಈ ಅರಿವನ್ನು ಒಪ್ಪಬೇಕಿದೆ. ಇದು ನಿಜವಾದ ಚಾರಿತ್ರಿಕವಾದ ಅರಿವಿನ ಅನುಸಂಧಾನ.

        ಭಾರತೀಯ ಸಂಸ್ಕøತಿಯನ್ನು ಕುರಿತಂತೆ ಮೊದಲಿಗಿದ್ದ ಪೂರ್ವಗ್ರಹಗಳು ದೂರಾದದ್ದು ‘ಹರಪ್ಪಾ ಮೊಹೆಂಜೊದಾರೊ’ವಿನ ಪ್ರಾಕ್ತನ ಸಂಶೋಧನೆಗಳ ನಂತರ ಎನ್ನುವುದು ಗಮನಾರ್ಹ. ಸಿಂಧೂನದಿ ಬಯಲಿನ ನಾಗರೀಕತೆಯ ಅನ್ವೇಷಣೆ ಭಾರತವನ್ನು ನಿಜದ ನೆಲೆಯಲ್ಲಿ ಅರ್ಥೈಸಿಕೊಳ್ಳುವ ತುರ್ತಿನೆಡೆಗೆ ತಂದು ನಿಲ್ಲಿಸಿದ್ದು ನಿಜ. ಭಾರತಖಂಡದ ಸಂಸ್ಕøತಿ ಸಾವಿರಾರು ವರ್ಷಗಳ ಹಿಂದಕ್ಕೆ ಸರಿದುಹೋಯಿತು ನಿಜವಾದ ಭಾರತೀಯ ಸಂಸ್ಕøತಿ ವಿಕಾಸದ ಬಗೆಯನ್ನು ಮತ್ತಷ್ಟು ವಿಶಿಷ್ಟವಾಗಿ ಮತ್ತು ಸಹಜವಾಗಿ ನಿಜದ ನೆಲೆಯಲ್ಲಿ ಗಮನಿಸುವ ಸಾಧ್ಯತೆ ಇಲ್ಲಿ ಮುಖ್ಯವಾಯಿತು. ವಿದ್ವಾಂಸರ ಬಹುಮತದ ಪ್ರಕಾರ ಸುಮಾರು ಕ್ರಿ.ಪೂ 2500 ರವರೆಗೆ ಈ ಸಂಸ್ಕøತಿ ತನ್ನ ಸಾಧಿತ ಪ್ರಜ್ಞೆಯ ಉತ್ಕರ್ಷಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಈ ಕಾಲದಲ್ಲಿ ಬದುಕಿದ್ದ ಜನರು ತಮ್ಮ ಆ ಕಾಲದ ಹೊತ್ತಿಗಿನ ಇತರ ಸಂಸ್ಕøತಿಯ ಜನರಿಗಿಂತ ಜೀವನಕ್ರಮದಲ್ಲಿ ಉತ್ತಮವಾಗಿದ್ದರೂ ವ್ಯವಸ್ಥಿತವಾಗಿದ್ದರು ಎನ್ನುವ ತಿಳಿವು ಅತ್ಯಂತ ಮುಖ್ಯವಾದುದು.
 
       ಕೃಷಿಯನ್ನು ಪ್ರಧಾನ ಕಸುಬನ್ನಾಗಿ ಹೊಂದಿದ್ದ ಈ ಜನರು ಪ್ರಾಣಿಗಳನ್ನು ಸಲಹುತ್ತಿದ್ದರು ಎನ್ನುವುದು ತಿಳಿದು ಬರುತ್ತದೆ. ಮಾತೃದೇವತಾರಾಧನೆಯ ಸುಳಿವುಗಳಿವೆ. ಶಿವನರೂಪ, ಮುದ್ರೆಗಳನ್ನು ಕಾಣಲಾಗಿದೆ. ಲಿಂಗರೂಪದ ಪೂಜೆಯು ಚಾಲ್ತಿಯಲ್ಲಿದ್ದ ಬಗೆಗೆ ದಾಖಲೆಗಳಿವೆ. ಈ ಸಂಸ್ಕøತಿಯನ್ನೇ ದ್ರಾವಿಡರದ್ದು ಎಂದು ವಿದ್ವಾಂಸರು ಸಾಧಿಸಿದ್ದಾರೆ. ಹಲವು ಬುಡಕಟ್ಟುಗಳಿಂದ ಹೀಗೊಂದು ಗಟ್ಟಿಯಾದ ಸಂಸ್ಕøತಿ ರೂಪುಗೊಂಡಿರುವುದು ಸಾಧ್ಯ ಎಂಬ ವಾದವೂ ಇದೆ. ಅಂದರೆ ಒಟ್ಟಾರೆಯಾಗಿ ನಿಜದ ಭಾರತೀಯ ಸಂಸ್ಕøತಿ ಎನ್ನುವುದು ಮೂಲದಲ್ಲಿ ರೂಪುಗೊಂಡಿದ್ದರೆ ಅದಕ್ಕೆ ದ್ರಾವಿಡರು ಕಾರಣ ಅವರು ಈ ನೆಲದ ಮೂಲನಿವಾಸಿಗಳಾಗಿ ನಿಜದ ಹಕ್ಕುದಾರರು ಎನ್ನುವ ಅರಿವೇ ಇಲ್ಲಿ ಅತ್ಯಂತ ಮುಖ್ಯ. ಈ ಬಗೆಯ ಜನಸಮುದಾಯದ ಸಂಸ್ಕøತಿಯೊಂದು ಶಿಥಿಲವಾದದಕ್ಕೆ ಹಲವಾರು ಕಾರಣಗಳಿವೆ. ಪ್ರಕೃತಿ ವಿಕೋಪ, ರಾಜಕೀಯ, ಆರ್ಥಿಕ ಸಾಮಾಜಿಕ ಎಂಬ ಏನೆಲ್ಲಾ ಸಾಮಾನ್ಯ ಕಾರಣಗಳಿದ್ದಾಗ್ಯೂ ಮತ್ತೊಂದು ಮುಖ್ಯಕಾರಣ ಹೊರಗಡೆಯ ಶತ್ರುಗಳ ದಾಳಿ. ಇದಕ್ಕೆ ಇತಿಹಾಸಜ್ಞರು ಸಾಕಷ್ಟು ಪುರಾವೆಗಳನ್ನು ಒದಗಿಸಿದ್ದಾರೆ. ಈ ಶತ್ರುಗಳನ್ನು ಆರ್ಯರು ಎಂದೇ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

        ಮುಂದೇ ಇದೇ ಜನರು ದ್ರಾವಿಡರ ಮೇಲೆ ಸತತ ಆಕ್ರಮಣವೆಸಗಿ, ವಶಪಡಿಸಿಕೊಂಡು ಆಳ್ವಿಕೆ ನಡೆಸಿ ಅವರ ಮೇಲೆ ಹಿಡಿತಸಾಧಿಸಿರಬಹುದೆಂದೂ, ಅವರನ್ನೇ ದಸ್ಯುಗಳೆಂದು ಕರೆದಿರಬಹುದಾದ ಸಂಗತಿಯನ್ನು ಚರಿತ್ರೆಯು ಗ್ರಹಿಸುತ್ತದೆ. ಮುಂದೆ ಧರ್ಮದ ಹೆಸರಿನಲ್ಲಿ ಆಳುವ, ಪುರೋಹಿತಶಾಹಿಯ ಬೆಳವಣಿಗೆಗೂ ಕಾರಣವಾಗಿರಬಹುದು ಆ ಬಗೆಯ ಪ್ರಭಾವ ಇಂದಿಗೂ ತನ್ನ ಬಲಿಷ್ಠವಾದ ಹಿಡಿತವನ್ನು ಹೊಂದಿರುವಲ್ಲಿಯೇ ವ್ಯವಸ್ಥಿತವಾದ ಸಂಚನ್ನು ಗ್ರಹಿಸುವುದು ಸಾಧ್ಯವಿದೆ.

        ಭಾರತೀಯ ಸಂಸ್ಕøತಿಯ ಅರಿವಿಗೆ ‘ವೇದಗಳನ್ನೇ’ ಪ್ರಮಾಣವಾಗಿಸುವ ಯೋಜನೆಯೂ ಇದರೊಂದಿಗೆ ರೂಪುಗೊಂಡಂತಿದೆ. ಜೊತೆಗೆ ಜ್ಞಾನವನ್ನು ವರ್ಣದೊಂದಿಗೆ ಬೆರೆಸಿ ಶ್ರೇಷ್ಠತೆಯ ಪರಿಭಾವನೆ ತರಲು ಹೊರಟಿದ್ದು ಮತ್ತಷ್ಟು ವಿಪರ್ಯಾಸದ ಸಂಗತಿ. ಈ ಅರಿವನ್ನೇ ಪ್ರಮಾಣವಾಗಿಸಿ ದೇಶವನ್ನು ಆಳುವ, ಹಿಡಿತದಲ್ಲಿಟ್ಟುಕೊಳ್ಳುವ ಉಪಾಯವನ್ನು ಬಲು ಎಚ್ಚರದಿಂದಲೇ ನಡೆಸಿದ್ದು ಈ ನೆಲದ ನಿಜದ ಅನ್ಯಾಯ. ದೇಶವನ್ನು ನಿರಂತರವಾಗಿ ಆಳುವ ನೀತಿಯ ರೂಪಕನಾಗಿಯೇ ‘ವರ್ಣಾಶ್ರಮ’ ವೂ ಪೋಷಿಸಲ್ಪಟ್ಟಿದ್ದು ಮತ್ತೊಂದು ಬಗೆಯ ವ್ಯಂಗ್ಯದ ಉತ್ಕರ್ಷ.

        “ಮುಖದಿಂದ ಬ್ರಾಹ್ಮಣರು ತೋಳುಗಳಿಂದ ಕ್ಷತ್ರಿಯರು, ತೊಡೆಗಳಿಂದ ವೈಶ್ಯರು, ಕಾಲುಗಳಿಂದ ಶೂದ್ರರು ಹುಟ್ಟಿದರು” ಎನ್ನುವ ಮಾತು ಮಂತ್ರದಂತಾಯಿತು. ಬಹುಶಃ ನಿಜವಾದ ಸಮಸ್ಯೆ ಆರಂಭವಾದದ್ದೇ ಇಲ್ಲಿಂದ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲಾಗದ ಈ ಅವೈಜ್ಞಾನಿಕವಾದ ನಿಲುವಿಗೆ ಯಾವ ಸಮರ್ಥನೆಗಳು ಸಾಧ್ಯವಿತ್ತು? ಏಕಕಾಲಕ್ಕೆ ಇದು ‘ಮನುಷ್ಯ’ ಎನ್ನುವ ಶ್ರೇಷ್ಠ ಸಂಭಾವನೆಯ ಸಾಧ್ಯತೆಯನ್ನು ಒಡೆದು ಹಾಕಿ, ಅಸಮಾನತೆಯ ಬೆಂಕಿ ಹಚ್ಚುವುದಾಯ್ತು ಜೊತೆ-ಜೊತೆಗೆ ಈ ನೆಲದ ಸ್ತ್ರೀಯರನ್ನು ನಿಕೃಷ್ಟಗೊಳಿಸುವ ಕೆಲಸವನ್ನು ಜೊತೆ-ಜೊತೆಗೆ ನಡೆಸಿತೆನ್ನಬಹುದು. ಮತ್ತೆ ಮತ್ತೆ ಈ ಬಗೆಯ ಚರ್ಚೆ ಬಂದಾಗಲೆಲ್ಲಾ ಜಾತಿಯನ್ನು ಮತ್ತಷ್ಟು ಗಂಭೀರಗೊಳಿಸಿ ಮನುಷ್ಯನ ಹುಟ್ಟು ಮತ್ತು ಕರ್ಮಗಳ ಹಿನ್ನೆಲೆಯಲ್ಲಿ ಅಗತ್ಯಕ್ಕೆ ಅನುಗುಣ ಎನ್ನುವಂತೆ ಅನ್ನಿಸಿದಂತೆಲ್ಲಾ ವಿಂಗಡಿಸುವ, ಚೂರಾಗಿಸುವ ಕೆಲಸವನ್ನು ವ್ಯವಸ್ಥಿವಾಗಿಯೇ ನಿರಂತರತೆಯ, ಪರಂಪರೆಯ ರೂಪದಲ್ಲಿ ನಡೆಸಲಾಯಿತು. ಈ ಹಿನ್ನೆಲೆಗೆ ಜ್ಞಾನವನ್ನು ಅಸ್ತ್ರವಾಗಿಯೇ ಬಳಸಿಕೊಳ್ಳಲಾಯಿತು. ವಿದ್ಯೆಯನ್ನು, ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ, ಏಕಸ್ವಾಮ್ಯಗೊಳಿಸುವ ಚರ್ಚೆಗಳು ನಡೆದವು. ಅದನು ಬಹುಜನರು ಒಪ್ಪುವಂತೆ ಮಾಡುವ ಅಪಾಯವೂ ಈ ನೆಲದಲ್ಲಿ ನಡೆದೇ ಹೋಯಿತು.

        ವೇದಗಳ ಕಾಲಕ್ಕೆ ಈ ಬಗೆಯ ಜಾತಿ ವ್ಯವಸ್ಥೆಯ ಪ್ರತಿಪಾದನೆ ಗಂಭೀರವಾಗಿದ್ದಂತೆ ತೋರುವುದಿಲ್ಲ ಎನ್ನುವ ವಾದಗಳಲ್ಲಿ ಒಂದಿಷ್ಟು ವಾಸ್ತವ ಇರಬಹುದಾದರೂ ಮುಂದೆ ಪುರುಷ ಸೂಕ್ತಗಳು ಇವೇ ವೇದಗಳನ್ನು ಆಧರಿಸಿಯೇ ರೂಪುಗೊಂಡದ್ದನ್ನು ಅಲ್ಲಗಳೆಯುವುದು ಹೇಗೆ? ಗುಣವಾಚಕಗಳಾಗಬಹುದಾದ ಸಂಗತಿಗಳು, ಜಾತಿಗಳಾದದ್ದು ವ್ಯವಸ್ಥಿತವಾದ ತಂತ್ರವಲ್ಲದೆ ಬೇರೇನು ಭಾವಿಸಬಹುದು.

        ಧರ್ಮ ಸೂತ್ರಗಳೆಂದು ಕರೆಯಲ್ಪಟ್ಟವುಗಳು ಮತ್ತಷ್ಟು ಗಂಭೀರವಾಗಿಯೇ ವರ್ಣ ವ್ಯವಸ್ಥೆಯನ್ನು ಹಕ್ಕುಗಾರಿಕೆಯ ನೆಲೆಯಲ್ಲಿ ಪ್ರತಿಪಾದಿಸಿದ್ದು ಮತ್ತಷ್ಟು ದುರಂತ. ಈ ನಡುವೆಯೇ ‘ಹಿಂದೂ’ ಎನ್ನುವುದು ‘ಧರ್ಮ’ ಎಂಬಂತೆಯೂ ಪರಿಭಾವಿಸಲ್ಪಟ್ಟು ಪ್ರತಿಪಾದಿಸುವ ವಿಪರ್ಯಾಸವೂ ನಡೆದೇ ಹೋಗಿತ್ತು. ಅದನ್ನು ಆಳುವ ಅಸ್ತ್ರವನ್ನಾಗಿಯೇ ರೂಪಿಸುವುದಾಯ್ತು. ವಿಚಿತ್ರವೆಂದರೆ ಹೀಗೊಂದು ತನ್ನತನದಲ್ಲಿ ಶ್ರೇಷ್ಠತೆಯ ‘ಧರ್ಮ’ವೆಂದು ಪೋಷಿಸಿಕೊಳ್ಳುವಲ್ಲಿಯೇ, ತನಗೆ ಅಗತ್ಯವಾದ ತತ್ವಗಳನ್ನೂ, ಮಾರ್ಗಗಳನ್ನು ರೂಪಿಸಿಕೊಳ್ಳುವಲ್ಲಿಯೇ ಅಸಮಾನತೆಯನ್ನು ಈ ನೆಲದ ಬಹುಜನರು ಗುರುತಿಸಿದಂತಿದೆ. ಇದಕ್ಕೆ ಪರ್ಯಾಯ ಎನ್ನುವ ನೆಲೆಯಲ್ಲಿಯೇ ಜೈನ ಮತ್ತು ಬೌದ್ಧ ಧರ್ಮ ರೂಪುಗೊಂಡವು ಮೂಲತಃ ಚಾತುವರ್ಣದ ಅಸಮಾನತೆಯ ವಿರುದ್ಧವೇ ಹೊರಟ ಮಹಾಮಾರ್ಗ ಇವುಗಳಿಗಿತ್ತು.

        ‘ಸರ್ವಸಮಾನತೆ’ ಯನ್ನು ಮುಖ್ಯ ನೆಲೆಯಾಗಿಸಿಕೊಂಡ ಕಾರಣಕ್ಕೂ ಈ ಎರಡೂ ಮಾರ್ಗಗಳು ಈ ದೇಶದ ಜನರ ಮೇಲೆ ಅಪಾರ ಪ್ರಭಾವವನ್ನು ಬೀರಿದವು. ಮಹಾವೀರ ಮತ್ತು ಬುದ್ಧ ಈ ನೆಲದ ಬಹುಜನರ ಪ್ರಜ್ಞೆಯೋಪಾದಿಯಲ್ಲಿ ಕಾಣಿಸಿಕೊಂಡರು. ‘ಹಿಂದೂ’ ಎನ್ನುವ ಧರ್ಮದ ಮೂಲವಾದ ಯಜ್ಞವು ಹಿಂಸೆಯನ್ನೇ ತನ್ನ ಮೂಲ ಆಕರವಾಗಿಸಿಕೊಂಡು ಪ್ರಚೋದಕವಾದಲ್ಲೇ ಹಿಂಸೆಯನ್ನು ಸ್ಪಷ್ಟವಾಗಿ ವಿರೋಧಿಸುವ ಜೈನಧರ್ಮ “ಅಹಿಂಸಾ ಪರಮೋಧರ್ಮ” ವೆಂಬ ಹೊಸ ಪರಿಭಾಷೆಯನ್ನು ಬರೆದದ್ದು ಗಮನಾರ್ಹ.

         “ಅಹಿಂಸಾ ಪರಮೋಧರ್ಮ” ಎಂಬುದನ್ನು ನಿಷ್ಠುರವಾದ ನಿಷ್ಠೆಯಿಂದ ಆಚರಿಸಿ ತೋರಿಸಿದ ಧರ್ಮ ಇದು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಈ ಪಂಚಾಣುವ್ರತಗಳು ಈ ಧರ್ಮದ ನೈತಿಕ ಸಾಧನೆಯ ನೆಲೆಗಟ್ಟಾದವು. ಸಮತೆಯ ಪೀಠದ ಮೇಲೆ ಅಹಿಂಸೆಯ ಪ್ರತಿಷ್ಠಾಪನೆಯಾಯಿತು. ಎಲ್ಲ ಜೀವನಗಳು ಸಮಾನವಾದವು ಅವುಗಳಲ್ಲಿ ಉಚ್ಛ ನೀಚವೆಂಬ ಕಲ್ಪನೆಯೇ ಹಿಂಸೆಯ ಮೂಲ ಎಲ್ಲರಿಗೂ ತಮ್ಮ ತಮ್ಮ ಜೀವನ ಪ್ರಿಯವಾಗಿದೆ. ಎಲ್ಲರೂ ಸುಖವಾಗಿರಲು ಬಯಸುತ್ತಾರೆ. ಅದಕ್ಕಾಗಿ ಯಾವ ಪ್ರಾಣಿಗಳಿಗೂ ಕಷ್ಟವನ್ನು ಕೊಡುವುದು ಸರಿಯಲ್ಲ ಎಂದು ಮಹಾವೀರ ಬೋಧಿಸಿದ.” (ಪ್ರೊ ಎಚ್.ತಿಪ್ಪೇರುದ್ರಸ್ವಾಮಿ ಕರ್ಣಾಟಕ ಸಂಸ್ಕøತಿ ಸಮೀಕ್ಷೆ ಪು 06)

         ಇಲ್ಲಿ ಎಲ್ಲರೂ ಎನ್ನುವುದು ಮಾವನರೆಲ್ಲರನ್ನು ಒಳಗೊಂಡದ್ದಾಗಿತ್ತು. ಕೇವಲ ಘೋಷಣೆಯ ಮಿತಿಯೂ ಇದಕ್ಕಿರಲಿಲ್ಲ. ‘ಹಿಂದೂ’ ಎನ್ನುವುದು ಹೇಳುವ ಹಾಗೆ ಶ್ರೇಣಿಯಾಧಾರಿತವಾದ ಕೆಲವೇ ಜನರನ್ನು ಕೇಂದ್ರೀಕರಿಸಿಕೊಂಡದ್ದು ಆಗಿರಲಿಲ್ಲ. ಅಹಿಂಸೆ ಮತ್ತು ಸಮತೆಯನ್ನು ಮುಖ್ಯವಾಗಿರಿಸಿಕೊಂಡ ಈ ಧರ್ಮ ಜಾತಿ-ಮತಗಳ ಯಾವುದೇ ಅಂತರಗಳನ್ನು ಪ್ರಚೋದಿಸದೆ ಎಲ್ಲಾ ಮಾನವ ಜೀವಿಗಳೂ ಕರ್ಮಬಂಧವನ್ನು ಪರಿಹರಿಸುವ ಮಾರ್ಗವನ್ನು ಬೋಧಿಸಲು ಯತ್ನಿಸಿತು. ಒಂದು ಸಮಗ್ರತೆಯ ನಂಬಿಕೆಯಿಂದ ಹೊರಟ ‘ಹಿಂದೂ’ ಎನ್ನುವ ಧರ್ಮದ ಒಳಗಿನ ಪೊಳ್ಳುತನಗಳು ಎದ್ದು ಕಾಣುವಂತಾದದ್ದು. ಇದೇ ನೆಲದಲ್ಲಿ ಪರ್ಯಾಯವೊಂದು ರೂಪುಗೊಂಡಾಗ ಅಂದರೆ ಅದು ನಿರಂತರ ಶೋಷಣೆಯನ್ನು ಕುರಿತ ಪ್ರತಿಭಟನೆಯೂ ಆಗಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಹೀಗೆ ಜೈನ ಧರ್ಮದ ಆಸು-ಪಾಸು ಎನ್ನುವಂತೆ ಪ್ರಭಾವಶಾಲಿಯಾಗಿ ಬೆಲೆದ ಬೌದ್ಧ ಧರ್ಮವು ಹಿಂದೂವಿನ ವಿರುದ್ಧದ ಪ್ರತಿಭಟನೆಯೇ ಆಗಿತ್ತೆನ್ನುವುದು ಮುಖ್ಯ.

           “ಜೈನ ಧರ್ಮಕ್ಕಿಂತ ಹೆಚ್ಚಿನ ಪ್ರಭಾವವನ್ನು ಬೀರಲು ಶಕ್ತವಾಯಿತು ಬೌದ್ಧಧರ್ಮ, ಮಹಾವೀರನೂ ಸ್ವಲ್ಪ ಹೆಚ್ಚು ಕಡಿಮೆ ಬುದ್ಧನ ಕಾಲದಲ್ಲಿಯೇ ಇದ್ದವನು. ಅನೇಕ ಅಂಶಗಳು ಇಬ್ಬರಿಗೂ ಸಮಾನವಾಗಿದ್ದವು. ವೇದದ ಪರಮ ಪ್ರಾಮಾಣ್ಯವನ್ನು ಪ್ರತಿಭಟಿಸಿದರು, ಯಜ್ಞಯಾಗಾದಿಗಳನ್ನು ಖಂಡಿಸಿದರು; ಚತುವರ್ಣಗಳನ್ನು ಮೇಲು-ಕೀಳುಗಳನ್ನು ತಳ್ಳಿಹಾಕಿದರು. ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಮತ್ತು ನೈತಿಕ ಜೀವನಕ್ಕೆ ಹೆಚ್ಚು ಗಮನಕೊಟ್ಟರು.” (ಪ್ರೊ.ಎಲ್.ತಿಪ್ಪೇರುದ್ರಸ್ವಾಮಿ ಕ.ಸಂ.ಸಮೀಕ್ಷೆ)

        ಧರ್ಮವೆಂದರೆ ಒಳ್ಳೆಯತನ ಎನ್ನುತ್ತಾರೆ ವಿವೇಕಾನಂದ ಈ ಒಳ್ಳೆಯತನದ ಒಳಗೆ ಎಲ್ಲವೂ ಇರಬೇಕು ಅದು ಮನುಷ್ಯ ಎನ್ನುವ ಉನ್ನತಿಯನ್ನಷ್ಟೇ ಗಮನಿಸಿ ಅದನ್ನು ಸದಾ ಗೌರವಿಸುವಂತಾಗಬೇಕು. ಮಹಾವೀರ, ಗೌತಮಬುದ್ಧರ ವಿಚಾರಧಾರೆಯಲ್ಲಿದ್ದ ಜೀವಂತಿಕೆಯಾದರು ಇದೇ ಬಗೆಯದಾಗಿತ್ತು.

        ಹಾಗಾಗಿಯೇ ಬುದ್ಧನ ಮಾತುಗಳು ಜನರಿಗೆ ಬದುಕಿನ ಸಾಮಿಪ್ಯದ ಅರ್ಥವಂತಿಕೆಯನ್ನು ದರ್ಶನ ಮಾಡಿಸಿದ್ದವು. ಆತನ ಮಾತುಗಳಲ್ಲಿದ್ದ ಸಹಜತೆ ಮುಖ್ಯವಾಗಿತ್ತು. “ಅಂದಿನ ಜನತೆಗೆ ಆತನ ಸರಳವಾದ ಸಂದೇಶವಾಣಿ ಸಂಜೀವಿನಿಯಂತೆ ಗೋಚರಿಸಿತು ಆತನ ಒಂದೊಂದು ಮಾತೂ ಅನುಭವದಿಂದ ಶ್ರೀಮಂತವಾಗಿ, ಅನುಕಂಪೆಯಿಂದ ಆದ್ರ್ರವಾಗಿತ್ತು. ಹೃದಯವನ್ನು ನೇರವಾಗಿ ನಾಟುವಂತಿತ್ತು. ಮುಖ್ಯವಾಗಿ ಆತನು ಹೇಳಿದುದು; ನೇರವಾದ ಆಚರಣೆ, ಪರಿಶುದ್ಧಜೀವನ, ಉದಾತ್ತವಾದ ಆಲೋಚನೆಗಳು. ವಿಚಾರ ಪ್ರಧಾನವಾದ ಆತನ ಮಾರ್ಗ ಅಂದು ಸಮಾಜದಲ್ಲಿ ಪ್ರಚಲಿತವಾಗಿದ್ದ ಅರ್ಥಹೀನ ಕರ್ಮಗಳನ್ನು ತಿರಸ್ಕರಿಸಿತು ವೇದಗಳು ಅಪೌರುಷೆಗಳೆಂದು ಬುದ್ಧ ಒಪ್ಪಿಕೊಳ್ಳಲಿಲ್ಲ. ಅದರಲ್ಲಿಯೂ ಹಿಂಸಾಮಯವಾದ ಯಜ್ಞಗಳನ್ನು ಕಟುವಾಗಿ ಖಂಡಿಸಿದನು. ಪ್ರತಿಭಟಿಸಿ ನಿಂತನು. ಅಂತರಂಗದ ಶುದ್ಧಿಯೇ ಧಾರ್ಮಿಕ ಆರಾಧನೆಯ ಫಲ; ಅದೇ ಆನಂದದ ಮೂಲ ದುಃಖಮಯವಾದ ಈ ಜಗತ್ತಿನ ನಿರಸನಕ್ಕೆ ಅದೇ ದಾರಿ; ಅದನ್ನು ಕೈಗೂಡಿಸಿಕೊಡಲಾರದ ಕರ್ಮಗಳೆಲ್ಲ ವ್ಯರ್ಥ ಎಂದು ಸಾರಿದನು ಬುದ್ಧ” (ಪ್ರೊ ಎಚ್.ತಿಪ್ಪೇರುದ್ರಸ್ವಾಮಿ, ಕರ್ಣಾಟಕ ಸಂ ಸಮೀಕ್ಷೆ)

         ಜೈನ, ಬೌದ್ಧಗಳು ನಿಜದ ಅರ್ಥದಲ್ಲಿ ಧರ್ಮಗಳಾಗಿದ್ದವು. ಇವು ಹೆಚ್ಚು ಮಾನವೀಯವಾಗಿದ್ದವು. ಜೀವನಪ್ರೀತಿಯೇ ಅವುಗಳ ಆಧಾರವಾಗಿದ್ದವು.ಈ ಧರ್ಮಗಳಿಂದ ಆಧ್ಯಾತ್ಮವೆನ್ನುವುದಕ್ಕೆ ಹೊಸತೊಂದು ಪರಿಭಾಷೆಯು ಒದಗಿದಂತಾಯ್ತು ಮಾನವಪ್ರೀತಿಯೇ ಬದ್ಧತೆಯಾಗಿತ್ತು. ಹಿಂದೂ ಧರ್ಮ ಯಾವ ವರ್ಣವ್ಯವಸ್ಥೆಯನ್ನು ಮುಖ್ಯ ಎನ್ನುವಂತೆ ಪದೇ ಪದೇ ಸಾರುತ್ತಿತ್ತೋ ಆ ವರ್ಣಗಳ ವಿರುದ್ಧದ ಚಿಂತನೆಗಳು ಮಹತ್ವವಾಗಿ ಜೈನ-ಬೌದ್ಧಗಳಲ್ಲಿ ಪ್ರಸ್ತಾಪಿಸಲ್ಪಟ್ಟವು ಮತ್ತು ಬಹಳ ಮುಖ್ಯವಾಗಿ ಯಜ್ಞ ಮತ್ತು ಹಿಂಸೆಗಳ ವಿರುದ್ಧದ ನಿಲುವು ಮಾತ್ರ ವಿಶಿಷ್ಟವಾದುದ್ದೇ ಆಗಿತ್ತು. (ಮುಂದೆ ಗಾಂಧಿ ಅಹಿಂಸೆಯನ್ನೇ ಮಹಾ ಅಸ್ತ್ರವಾಗಿ ಬಳಸಿ ಬ್ರಿಟೀಷರ ವಿರುದ್ದ ಯಶಸ್ವಿಯಾದುದನ್ನು ಇಲ್ಲಿ ಸ್ಮರಿಸಬಹುದು)

         ಅಶೋಕ ನಂತಹ ಮಹಾರಾಜನಿಂದಲೂ ಸ್ವೀಕರಿಸಲ್ಪಟ್ಟು, ಪ್ರಚುರಗೊಂಡ ಬೌದ್ಧ ಭಾರತದಾಚೆಗೂ ತನ್ನ ಅಸ್ತಿತ್ವವನ್ನು ಕಂಡುಕೊಂಡದ್ದು ಮಹತ್ವದ ಸಂಗತಿ ಅಂದರೆ ಆ ಕಾಲಕ್ಕೆ ಪ್ರಬಲ ಶಕ್ತಿಯಾಗಿಯೇ ಬೌದ್ಧ ಧರ್ಮವು ರೂಪುಗೊಂಡಿತು. ಇದು ‘ಹಿಂದೂ’ಎಂಬ ನಂಬಿಕೆಯ ಮೇಲೆ ಬಿದ್ದ ದೊಡ್ಡ ಪೆಟ್ಟಾಗಿತ್ತು. ತನ್ನ ಅಸ್ತಿತ್ವದ ಸಂಚಕಾರವನ್ನು ಗ್ರಹಿಸಿದ ‘ಹಿಂದೂ’ ಎಚ್ಚೆತ್ತುಕೊಳ್ಳುವಲ್ಲಿ ಗಂಭೀರವಾದ ಪ್ರಯತ್ನವನ್ನೇ ನಡೆಸಿತು. ಅದು ಎಲ್ಲಿಯವರಗೆ ಮುಂದುವರಿಯಿತೆಂದರೆ ಬುದ್ಧನನ್ನು ತಮ್ಮ ಧರ್ಮದ ಅವತಾರಗಳಲ್ಲಿ ಒಬ್ಬ ಎನ್ನುವವರೆಗೆ, ಇದು ಚರಿತ್ರೆಯಲ್ಲಿ ಕಾಣಸಿಗುವ ವ್ಯಂಗ್ಯ, ವಿಪರ್ಯಾಸ ಮತ್ತು ಘೋರ ದುರಂತ. ಹೀಗೆ ಜೈನ ಮತ್ತು ಬೌದ್ಧ ಧರ್ಮಗಳಿಂದ ಅವುಗಳ ಪ್ರಭಾವದಿಂದ ಎಚ್ಚರಗೊಂಡ ಹಿಂದೂವಿನಲ್ಲಿ ವೈಚಾರಿಕತೆಯ ವ್ಯಾಖ್ಯಾನ ನಡೆವಂತೆ ಕೆಲವು ಪ್ರಯತ್ನಗಳು ಕಂಡವು. ಅದನ್ನು ‘ದರ್ಶನ’ ಎಂದೂ ಕರೆಯಲಾಗಿತ್ತು. ಈ ಬಗೆಯ ಪ್ರಯತ್ನಗಳು ನಿರಂತರದ ನೆಲೆಯಲ್ಲಿ ನಡೆದವು. ಅವರವರ ವಿವೇಚನೆ ಮತ್ತು ತರ್ಕಕ್ಕೆ ಅನುಗುಣವಾದ ಚಿಂತನೆಗಳು ನಡೆದವು. ಶಂಕರಾಚಾರ್ಯರ ಅದ್ವೈತ, ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಮಧ್ವಾಚಾರ್ಯರದ್ವೈತಗಳ ಪ್ರತಿಪಾದನೆಗಳೆಲ್ಲಾ ಈ ಹಿನ್ನೆಲೆಯಲ್ಲಿ ನಡೆದ ಪ್ರಯತ್ನಗಳೇ ಎನ್ನಬಹುದು. ಇವು ಸಹ ಮುಂದೆ ಪಂಥಗಳೇ ಆದವು ಇದರರ್ಥದಲ್ಲಿಯೂ ಸಂಕುಚಿತತೆ ಹೆಚ್ಚಾಯ್ತೆ ವಿನಃ ನಿಜದ ವೈಚಾರಿಕತೆಯ ಆಕೃತಿಗಳು ರೂಪುಗೊಳ್ಳುವುದಾಗಲಿಲ್ಲ, ಗ್ರಹಿಕೆಗೆ ಪರಿಪೂರ್ಣತೆ ಬರುವುದು ಸಾಧ್ಯವಾಗಲಿಲ್ಲ. ವರ್ಣಶ್ರೇಷ್ಠತೆಯ ಸನಾತನ ನಂಬಿಕೆಗಳಿಗೆ ಈ ಬಗೆಯ ಸಮಾನತೆಯ ಆಶಯ ಸುಲಭವಾದುದಾಗಿರಲಿಲ್ಲ. ಮತ್ತೆ ಮತ್ತೆ ಹಿಂದಕ್ಕೆ ಎಂದರೆ ಪುರುಷಸೂಕ್ತಗಳಿಗೇ ತೆರಳುವ ತಮ್ಮ ಮಡಿವಂತಿಕೆಗಳನ್ನು ಜತನ ಮಾಡಿಕೊಳ್ಳುವಲ್ಲಿಯೇ ಅಮಾನವೀತೆಯನ್ನೇ ಗಟ್ಟಿಮಾಡಿಕೊಳ್ಳುವ ಒದ್ದಾಟಗಳೇ ಪ್ರಧಾನವಾಗಿಬಿಟ್ಟವು.

        ವಿದ್ಯೆ, ಪಾಂಡಿತ್ಯ, ಜ್ಞಾನ ಅದರ ಜೊತೆಗೆ ತಾವು ಪ್ರತಿಪಾದಿಸುವುದೇ ಧರ್ಮ ಎನ್ನುವ ನಂಬಿಕೆಗಳನ್ನೇ ನಿಯಮಗಳನ್ನಾಗಿಸಿದಂತೆ ಪರಂಪರೆಯಂತೆ ಪ್ರತಿಬಿಂಬಿಸುತ್ತಾ ತಮ್ಮ ಅಸ್ತಿತ್ವವನ್ನಷ್ಟೇ ಕಾಯ್ದುಕೊಳ್ಳುವ ಒಂದಂಶದ ಕಾಂiÀರ್iಕ್ರಮವೆಂಬಂತೆ ಮೇಲ್ವರ್ಗಗಳ ಪೋಷಣೆಗಷ್ಟೇ ಪೂರಕವಾಗುವಂತೆ, ಉಳಿದವರು ಅದರ ಸಮೀಪಕ್ಕೂ ಬರಲಾಗದಂತೆ ಅಂತರವನ್ನು ಕಾಯ್ದುಕೊಳ್ಳುವುದಾಯ್ತು. ತಾವು ಭೂಸುರರಾಗಿ ಕ್ಷತ್ರಿಯರು ಪಾಲಕರಾಗಿ, ವೈಶ್ಯರು ಆರ್ಥಿಕತೆಯ ರೂಪಕವಾಗಿ ಉಳಿದರು. ಉಳಿದ ಈ ನೆಲದ ಬಹುಜನರು ನಿಜದ ವಾರಸುದಾರರಾಗಿದ್ದಾಗ್ಯೂ ಉಳಿದ ಮೇಲಿನವರ ಸೇವೆಗಾಗಿ ಮಾತ್ರ ಮೀಸಲಾಗಿ ಬದುಕಬೇಕು ಎನ್ನುವಂತಹ ಕಟ್ಟುಪಾಡುಗಳನ್ನು ಧರ್ಮದ ಕಾನೂನುಗಳೆಂಬಂತೆ ರೂಪಿಸಲಾಯಿತು.ಇದನ್ನು ಮೀರಲ್ಪಡುವವರು ಶಿಕ್ಷೆಗೆ ಒಳಪಡುತ್ತಾರೆ ಎನ್ನುವುದನ್ನು ಭಯದ ಮೂಲದಿಂದಲೇ ಕಾಯ್ದುಕೊಳ್ಳಲಾಯಿತು. ಈ ಬಗೆಯ ನಿಯಂತ್ರಣಕ್ಕೆಂದೇ ಧರ್ಮಪಾಲಕರು ರೂಪುಗೊಂಡರು. ಜಾತಿ ಅವರವರ ಕರ್ಮದ ಪಾಲು ಎನ್ನುವುದಾಯ್ತು ಇದಕ್ಕೂ ಧರ್ಮದ ಆರ್ಶಿರ್ವಾದವೇ ದೊರೆಯಿತು. ಮನುಷ್ಯ-ಮನುಷ್ಯರ ಸಾಮಾಜಿಕ ಸ್ವರದ ವಿನ್ಯಾಸದಲ್ಲೇ ಸಮಾನ ಬದುಕಿನ ಸಾಧ್ಯತೆ ಇರುವಲ್ಲಿಯೇ ಕಂದರಗಳನ್ನು ಸೃಷ್ಟಿಸಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಳ್ಳುವ ಹುನ್ನಾರವೊಂದು ತುಂಬಾ ವ್ಯವಸ್ಥಿತವಾಗಿ ನಡೆದೇ ಹೋಯ್ತು. ಈ ನೆಲದ ನಿಜದ ಶ್ರಮಿಕರ, ಬಹುಜನರ ಮುಗ್ಧತೆಯನ್ನು, ಅಜ್ಞಾನವನ್ನು, ದೇವರು-ಧರ್ಮದ ಹೆಸರಿನಲ್ಲಿಯೇ ಮೌಢ್ಯಗಳನ್ನು ಬಿತ್ತಿ-ಬೆಳೆದು ತಮ್ಮ ಬದುಕನ್ನು ಗಟ್ಟಿಮಾಡಿಕೊಳ್ಳುವ, ಸಾಮಾಜಿಕವಾಗಿ ಪರಮಶ್ರೇಷ್ಠರು ಪ್ರಶ್ನಾತೀತರು ಎನ್ನುವುದನ್ನು ಸ್ಥಾಪಿಸಿಕೊಂಡೇ ಬದುಕಿದರು. ಆಧುನಿಕತೆ ಉತ್ಕರ್ಷದ ಈ ಹೊತ್ತಿಗೂ ಇದರಿಂದ ಪಾರಾಗಲಾರದ ವಿಪರ್ಯಾಸದಲ್ಲಿಯೇ ಅದರ ಯಶಸ್ಸನ್ನು ನಾವು ಈಗ ಸಂಕಟದಿಂದಲೇ ನೋಡುವಂತಾಗಿದೆ. 

        ಈ ಮೇಲಿನ ವಿಚಾರದಲ್ಲಿ ಸಾಂಸ್ಕøತಿಕ ಪ್ರಜ್ಞೆಯನ್ನು ಅವಲೋಕನದ ರೂಪದಲ್ಲಿ ಗಮನಿಸಿದ್ದರ ಉದ್ದೇಶ ಬಹಳ ಸ್ಪಷ್ಟವಾಗಿ ಈ ದೇಶದಲ್ಲಿ ಸನಾತನ ಎಂಬ ಪ್ರಜ್ಞೆ ಉಂಟು ಮಾಡಿರುವ ಅಲ್ಲೋಲ ಕಲ್ಲೋಲವನ್ನು ಗಮನಿಸುವುದಾಗಿದೆ. ಇದು ಬಹಳ ಸ್ಪಷ್ಟವಾಗಿ ಸತ್ಯದಿಂದ ಹೊರತಾದುದು. ಚಾರಿತ್ರಿಕ ಮುಖಾ-ಮುಖಿಗೆ ವಿರುದ್ಧವಾದುದು. ನಿಜವಾದ ಇಲ್ಲಿಯವರ ಮೇಲೆ ಹೊರಗಿನ ವಿಚಾರಗಳನ್ನು ಬಳಸಿಕೊಂಡು ಬಹುಜನರ ಮೇಲೆ ದಬ್ಬಾಳಿಕೆ ನಡೆಸಿ ಅವರನ್ನು ತಮ್ಮ ಅಂಕೆಯೊಳಗಿರಿಸಿಕೊಂಡು ಅವರ ಮುಗ್ಧ ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು, ಶೋಷಣೆಯೇ ತಮ್ಮ ಜನ್ಮಸಿದ್ಧಹಕ್ಕು ಎನ್ನುವಂತೆ ನಡೆದುಕೊಂಡ ವಾಸ್ತವ ಅರ್ಥಮಾಡಿಕೊಳ್ಳುವುದು ತುರ್ತು. ಈ ತೆರನಾದ ಕಾರಣಗಳಿಂದಲೇ ಈ ಹೊತ್ತಿಗೂ ಮೇಲ್ಜಾತಿಯವರು ಎನಿಸಿಕೊಂಡವರು ತಮಗಿಂತ ಕೆಳಗಿನವರು ಎಂದು ಹತ್ತಿಕಲ್ಪಟ್ಟವರಿಗೆ ಅನಿವಾರ್ಯತೆಯ ಕಾರಣಕ್ಕೂ ಒಂದು ಕಿಂಚಿತ್ ಸಹಾಯ-ಸಹಕಾರನೀಡಿದರು ಅದನ್ನೇ ಮಹತ್ಕಾರ್ಯವೆಂದು ಪಡೆದುಕೊಂಡವರು ಮಹಾಪೂರ್ಣವೆಂದೂ ತಾನು ಪ್ರಗತಿಪರವೆಂದು ಮಹಾಮಾನವತೆಯೆಂದು ಕರೆದುಕೊಳ್ಳುವ ವಿಜೃಂಭಿಸುವ ಸಾಧ್ಯತೆಗಳು ನಮ್ಮ ನಡುವೆ ಸಾಕಷ್ಟಿವೆ.

         ಎಲ್ಲಾ ಮನುಷ್ಯರಂತೆಯೇ ಪ್ರಾಕೃತಿಕ ನೆಲೆಯಲ್ಲಿಯೇ ಹುಟ್ಟುವ, ಬೆಳೆಯುವ ಬದುಕ ಬಯಸುವ ಮನುಷ್ಯನನ್ನು ಕನಿಷ್ಠ ಗೌರವವೂ ಇಲ್ಲದಂತೆ ಕಡೆಗಣಿಸಿ ನಡೆಸಿಕೊಳ್ಳುವ ಯಾವುದೇ ವ್ಯವಸ್ಥೆ, ಧರ್ಮ, ಆಧ್ಯಾತ್ಮ ಮತ್ತಾವುದೇ ವಿಚಾರಗಳು ನಾಗರೀಕ, ಸುಸಂಸ್ಕøತ ಎಂದೆನಿಸಿಕೊಳ್ಳುವುದು ಹೇಗೆ ಸಾಧ್ಯ?ಇದು ತೀರಾ ಸಹಜವಾಗುವ ಸಾಮಾನ್ಯವಾದ ಜ್ಞಾನಮಾತ್ರ. ಮನುಷ್ಯನಿಗೆ ಮನುಷ್ಯನಾದವನು ನೀಡಬಹುದಾದ ಸಮಾನತೆಯ ಗೌರವದ ಅರ್ಥದಿಂದ ಮಾತ್ರವೇ ಸಾಮಾಜಿಕ ನ್ಯಾಯ ಮತ್ತು ಸಾಚಾತನದ ಬದ್ಧತೆಯೊಂದು ಸಾಧ್ಯವಾಗುತ್ತದೆ. ಅದರಾಚೆಗೆ ಅವರವರ ವ್ಯಕ್ತಿತ್ವವನ್ನವಲಂಬಿಸಿಯೇ ಜ್ಞಾನವೋ, ವೃತ್ತಿಯೋ ಅಸ್ತಿತ್ವವೋ ದೊರಕುವಂತಿರುತ್ತದೆ. ಹಾಗಾಗಿ ಬಹಳ ಸಹಜವಾದ ಪ್ರೀತಿಯ ನೋಟವೇ ಆದರಿಸುವಿಕೆಯಷ್ಟೇ ನಿಜದ ಮಾನವತ್ವಕ್ಕೆ ಸಾಧ್ಯವಾಗಬೇಕು. ಅಂತಲ್ಲಿ ಮಾತ್ರ  ಮನುಷ್ಯತ್ವದ ಉತ್ಕರ್ಷ ಕಲ್ಯಾಣರಾಜ್ಯ ಮೊದಲಾದ ಆಶಯಗಳು ಸಾಕಾರವಾಗಬಲ್ಲವು ದೇಶದ ಅಭಿವೃದ್ಧಿಗೆ ಏಕತಗೆ ಅನನ್ಯತೆ ಎಂಬಿವೇ ಮೊದಲಾದ ದೊಡ್ಡ ಮಾತುಗಳಿಗೆ ನಿಜವಾದ ಅರ್ಥ ಒದಗಿ ಬರಬಲ್ಲದು. ನಿಜವಾದ ಹೃದಯವಂತಿಕೆ ಸಂಸ್ಕಾರ, ಮನುಷ್ಯ ಪರವಾದ ಕಾಳಜಿಗಳಿಂದ ಹೋರಾಟಗಳು ರೂಪುಗೊಳ್ಳಬೇಕು. ಇದೊಂದು ತೀರಾ ಸರಳ ಎನ್ನಿಸುವ ಕನಿಷ್ಠ ಜ್ಞಾನ ಇದು ಪ್ರತಿಪಾದನೆಯಾಗದಿದ್ದರೆ ಈ ಬಗೆಯ ಒಂದೆನಿತು ಚಿಂತನೆಯು ಸಾಧ್ಯವಾಗದೆ ಹೋದರೆ ಯಾವ ವೇದ, ಆಗಮ, ದರ್ಶನ, ಪಾಂಡಿತ್ಯಗಳು ಸಾಧಿಸುವುದಾದರೂ ಏನನ್ನು? ಬದುಕಿನ ನಿಜ ಕಾಳಜಿಯೇ ಇಲ್ಲದ ಯಾವ ಸಂಗತಿಯಿಂದ ಈ ನೆಲದ ಶ್ರೀಸಾಮಾನ್ಯನಿಗೆ ಏನಾಗಬೇಕಿದೆ.? ಈ ಬಗೆಯ ಜನಪರ, ಸಂಸ್ಕಾರ ಮತ್ತು ಜೀವಂತಿಕೆಯ ನಿಲುವುಗಳ ಆಶಯವಾಗಿಯೇ ದಾರ್ಶನಿಕರು ಆಶಾವಾದಗಳಾಗಿ ಬುದ್ಧ, ಮಹಾವೀರ, ಬಸವ, ಕನಕ, ಪೆರಿಯಾರ, ನಾರಾಯಣಗುರು, ಅಂಬೇಡ್ಕರ್ ಕುವೆಂಪು ಮೊದಲಾದವರು ಕಾಣಿಸಿಕೊಳ್ಳುತ್ತಾರೆ. ಹೊಸ ಆದರ್ಶಗಳನ್ನು ಸಾಧಿಸಬಹುದಾದ ಕನಸುಗಳನ್ನು ಬಿತ್ತುತ್ತಾರೆ........
 
 
 
 
bottom of page