top of page

ಘಟ್ಟಿವಾಳಯ್ಯ

   ಪರಿವಿಡಿ
1. ವಚನ ಸಾಹಿತ್ಯ : ಮಹತ್ವ
2. ಘಟ್ಟಿವಾಳಯ್ಯನ ವ್ಯಕ್ತಿತ್ವ :
3. ಅರಿವು’ ಮತ್ತು ‘ಸತ್ಯ’
4. ಭಕ್ತ ಮತ್ತು ಭಕ್ತಿ :
5. ಕೊನೆಯ ಮಾತು:

ವಚನ ಸಾಹಿತ್ಯ : ಮಹತ್ವ

        ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಧ್ಯಕಾಲೀನ ಸಾಹಿತ್ಯದಲ್ಲಿಯೇ ಅತ್ಯಂತ ಹೆಚ್ಚು ಎನ್ನುವಷ್ಟು ಮಾತುಗಳು, ವ್ಯಾಖ್ಯಾನಗಳು, ಚಿಂತನೆಗಳು, ವಿಮರ್ಶೆಗಳು ವಚನ ಸಾಹಿತ್ಯವನ್ನು ಕುರಿತಂತೆ ನಡೆದಿದೆ ಎನ್ನುವ ಮಾತು ಉತ್ಪ್ರೇಕ್ಷೆಯಾಗಬೇಕಿಲ್ಲ. ಅದು ಕೇವಲ ಯಾವುದೋ ಪೂರ್ವಾಗ್ರಹ ಮತ್ತು ಅಭಿಮಾನದ ಮಿತಿಯಿಂದ ಬಂದದ್ದಲ್ಲ. ಅಂತಹ ವ್ಯಾಪ್ತಿಗೆ ಒಡ್ಡಿಕೊಳ್ಳುವ ವಿಸ್ತೃತತೆ ವಚನ ಸಾಹಿತ್ಯಕ್ಕೆ ಎಂಬ ಅರಿವನ್ನು ನಾವು ನಿರಾಕರಿಸುವಂತಿಲ್ಲ. ‘ಮಧ್ಯಕಾಲೀನ’ ಎನ್ನುವ ಚಾರಿತ್ರಿಕ ಅಂಶ ಕೇವಲ ಘಟ್ಟವಷ್ಟೇ ಆಗದೆ ಹಳತು-ಹೊಸತುಗಳ ನಡುವಿನ ಸಂವಹನದಂತೆಯೂ ಈ ಕಾಲಘಟ್ಟವನ್ನು ಪರಿಭಾವಿಸಲು ಅವಕಾಶವಿದೆ. ಹತ್ತು-ಹಲವು ಸೃಜನಶೀಲ ಸಾಧ್ಯತೆಗಳಿಗೆ ಮುನ್ನುಡಿಯಂತಾದ ವಚನಸಾಹಿತ್ಯದ ಆಯಾಮಗಳು ನೂರಾರು. ಅದೊಂದು ಸಾಹಿತ್ಯ ಪ್ರಕಾರವೆ? ಎನ್ನುವ ಜಿಜ್ಞಾಸೆಯೊಂದಿಗೆ ಆರಂಭವಾಗುವ ಚರ್ಚೆಯೇ ‘ವಚನ’ದ ಮಹತ್ವ ಕುರಿತ ಚರ್ಚೆಯ ಸೃಜನಶೀಲ ಹಾದಿ ಎನ್ನಬಹುದು.

        ಆಧುನಿಕತೆಯ ಉತ್ಕರ್ಷದಲ್ಲಿರುವ ಈ ಹೊತ್ತಿಗೂ ‘ವಚನ’ ಎನ್ನುವುದು ಒಂದು ಪ್ರಜ್ಞೆಯಾಗಿಯೇ ಕಾಡುವ ಮಹತ್ವವನ್ನು ಪ್ರತ್ಯೇಕವಾಗಿ ವಿವರಿಸಿಕೊಳ್ಳಬೇಕಾಗಿಲ್ಲ. ಗುರು-ಅರಮನೆಯ ಪರಂಪರೆಯಲ್ಲಿಯೇ ತನ್ನ ಅಸ್ತಿತ್ವ ಮತ್ತು ವಿಕಾಸವನ್ನು ಕಂಡುಕೊಂಡಿದ್ದ ಪ್ರಾಚೀನ ಸಾಹಿತ್ಯ “ಋಷಿಯಲ್ಲದವನು ಕಾವ್ಯ ಬರೆಯಲಾರ” ಎನ್ನುವ ಮಾತಿನ ದೃಢೀಕರಣದಂತೇ ಇತ್ತು. ಶ್ರೇಷ್ಠತೆಯ ಭ್ರಮೆ ಮತ್ತು ಅಹಂಕಾರದ ನಡುವೆ ಸಾಹಿತ್ಯ ಎನ್ನುವುದು ಕದಲಿ, ಕಮರಬಹುದಾದ ಅಪಾಯವಿದ್ದಲ್ಲಿ ಅದನ್ನು ಪಾರುಮಾಡಿದ ಹಿರಿಮೆಯ ಸಿಂಹಪಾಲು ವಚನಕಾರರಿಗೆ ಸಲ್ಲುತ್ತದೆ. ಎಲ್ಲದಕ್ಕಿಂತಲೂ ಬದುಕು ದೊಡ್ಡದು ಎನ್ನುವ ಸತ್ಯಕ್ಕೆ ಮುಖಾ-ಮುಖಿಯಾಗುವ ದೊಡ್ಡ ಎಚ್ಚರವೊಂದು ವಚನಸಾಹಿತ್ಯದ ಮೂಲಕ ತೆರೆದುಕೊಂಡದ್ದು ಈಗ ಇತಿಹಾಸ. ಕನ್ನಡದ ವೈಚಾರಿಕತೆಯ ದಿಟ್ಟಹೆಜ್ಜೆಗಳನ್ನು ವಚನಕಾರರೊಂದಿಗೆ ಗುರುತಿಸುವುದಾದರೂ ಈ ನೆಲದ ಜಾಗೃತಿಯ ಹೆಮ್ಮೆಯೂ ಹೌದು.

        ‘ಧರ್ಮ’ ಎನ್ನುವುದು ಒಳ್ಳೆಯತನಕ್ಕೆ ರೂಪಕವಾಗಬೇಕಿದ್ದರ ಬದಲಾಗಿ ಶೋಷಣೆಗೆ ಮಾರ್ಗವಾದದ್ದು, ಮೌಢ್ಯತೆಗೆ ರಹದಾರಿಯಾದದ್ದು ಮನುಕುಲದ ದೊಡ್ಡ ವಿಪರ್ಯಾಸ. ಅದು ಭಾರತದಂತಹ ದೇಶದಲ್ಲಿ ಅಮಾನವೀಯವಾದ ಜಾತೀಯತೆಯನ್ನು, ಅವೈಜ್ಞಾನಿಕ ಆಚರಣೆಯ ನೆಲೆಯಲ್ಲಿ ಬಿತ್ತಿ-ಬೆಳೆಸಿ ವಿಷವೃಕ್ಷವಾಗಿಸಿದ್ದು ಈಗ ಘೋರ ಇತಿಹಾಸ. ಇದನ್ನೇ ಸತ್ಯವೆಂದು ವಾದಿಸುವ ಪಿತೂರಿಗಳು ಈ ಹೊತ್ತಿಗೂ ನಡೆಯುವಲ್ಲಿಯೇ ಆ ದುರಂತದ ವ್ಯಾಪಕತೆಯನ್ನು ಅರ್ಥೈಸಿಕೊಳ್ಳ ಬಹುದು. ಅಲ್ಲಿ-ಇಲ್ಲಿ ಮಹಾಮಾನವತಾವಾದಿಗಳು ಈ ವಿಷಮತೆಯನ್ನು ದಾಟುವ ಪ್ರಯತ್ನಗಳನ್ನು ನಡೆಸುತ್ತಲೇ ಬಂದದ್ದು ಆಶಾದಾಯಕವಾದ ಚಾರಿತ್ರಿಕ ಬೆಳಕು. ಆದರೆ ಗಾಢವಾದ ಜಾತಿ ಭ್ರಮೆಯ ಕತ್ತಲನ್ನು ಸಣ್ಣ ಬೆಳಕುಗಳು ತೊಡೆಯಲಾಗಿಲ್ಲ ಅಂತಹ ಹೊತ್ತಿನಲ್ಲಿ ಒಂದು ಸಾಮಾಜಿಕ ಪ್ರಜ್ಞೆಯ ರೂಪದಲ್ಲಿ ಸಾಮುದಾಯಿಕ ಪ್ರಯತ್ನದ ರೂಪದಲ್ಲಿ ವಚನಚಳುವಳಿ ಕರ್ನಾಟಕದ ಕಲ್ಯಾಣದ ಕೇಂದ್ರದಲ್ಲಿ ಚಾಲನೆ ಪಡೆದದ್ದು ಗಮನಾರ್ಹ.

        ಬಸವಾದಿಶರಣರು ಈ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿಗೆ ಮುಂದಾದದ್ದು ಮಾನವತಾವಾದದ ಒಂದು ಕ್ರಿಯಾಶೀಲ ಶಕ್ತಿಯೇ ಆಗಿತ್ತು. ಅದರ ತೀವ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಕರ್ನಾಟಕ-ಕನ್ನಡಿಗರು ವಿಫಲವಾದದ್ದು ಸಾಂಸ್ಕøತಿಕ ದುರಂತವೂ ಹೌದು.
 
         ಅರ್ಥವಿಲ್ಲದ ಆಡಂಬರದ ಶಬ್ದಗಳು ಸೂತಕಗಳಾಗಿ ‘ಮಾತು ಜ್ಯೋತಿರ್ಲಿಂಗ’ವಾಗಬೇಕಾದ ತುರ್ತನ್ನು ಸೃಷ್ಟಿಸಿದ ಈ ಕಾಲ ‘ಅರಿವೇ ಗುರು’ ಎನ್ನುವ ಎಚ್ಚರವನ್ನು ಮುಖಾ-ಮುಖಿಯಾಗಬಯಸಿದ್ದು ವಿಶಿಷ್ಟವಾಗಿತ್ತು. ‘ಕಾಯಕವೇ ಕೈಲಾಸ’ವಾದದ್ದು ಇಂತಹದ್ದೇ ಚಿಂತನೆಯ ಮುಂದುವರಿದ ರೂಪವಾಗಿತ್ತು. ಅನುಭವದ ಸಾಮಾನ್ಯ ನೆಲೆ ಅನುಭಾವವಾದ ಜಾಗೃತಿಯೊಂದಿಗೆ ‘ಸಾಮಾನ್ಯತೆ’ಯ ಪರಿಭಾಷೆಯು ಬದಲಾಗಬೇಕಾದ ಅನಿವಾರ್ಯತೆಯು ಸೃಷ್ಟಿಯಾದದ್ದು ಗಮನಾರ್ಹ. ಬಸವಣ್ಣನ ನೇತೃತ್ವದ ಕಲ್ಯಾಣ ಹೀಗೊಂದು ವೈಚಾರಿಕ ಆಕೃತಿಗೆ ಆಶಯವಾದದ್ದು ಈ ನೆಲದ ನಿಜದ ಗುಣವೇನೋ ಎನ್ನುವ ಪರವಶತೆಯನ್ನು ಉಂಟುಮಾಡಿದ್ದು ಸುಳ್ಳಲ್ಲ. ಮೌಢ್ಯಗಳನ್ನು ಪ್ರಶ್ನಿಸುತ್ತಲೇ ಸತ್ಯಕ್ಕೆ ಮುಖಾ-ಮುಖಿಯಾಗಬೇಕಾದ ವಾಸ್ತವವನ್ನು ವಚನಚಳುವಳಿ ತನ್ನ ಅಂತರಂಗ-ಬಹಿರಂಗ ಶುದ್ಧಿಯ ರೂಪದಲ್ಲಿ ಪರಿಭಾವಿಸಿಗೊಂಡಿತ್ತು. ಅರಿವು ಎನ್ನುವುದಕ್ಕೆ ತೀರಾ ಹೊಸತು ಎನ್ನಬಹುದಾದ ಮತ್ತೂ ಮುಖ್ಯವಾಗಿ ಸಹಜ ಎನ್ನಬಹುದಾದ ನಿಜದ ವ್ಯಾಖ್ಯಾನದ ಹಪಹಪಿ ಸಾಧ್ಯವಾದದ್ದೇ ವಚನಕಾರರ ಕಾಲದಲ್ಲಿ ಎನ್ನಬಹುದು. ಬಹುಪಾಲು ಅಲ್ಲಿಯವರೆಗೆ ಜ್ಞಾನ ಎನ್ನುವುದು ಒಂದು ವರ್ಗದ ಆಸ್ತಿ ಮಾತ್ರ. ಅವರು ಹೇಳಿದ್ದೇ ಸತ್ಯ, ಅವರೇ ದರ್ಶನ, ಆ ಕಾರಣಕ್ಕಾಗಿಯೂ ಅವರಷ್ಟೇ ಶ್ರೇಷ್ಠ ಎನ್ನುವ  ಅವೆಷ್ಟೋ ಭ್ರಮೆಗಳು ಜನಸಾಮಾನ್ಯರಿಗೆ ಅವರನ್ನು ವಿೂರಿದಂತೆ ಕವಿದುಕೊಂಡಿತ್ತು. ‘ನನ್ನರಿವೇ ನನಗೆ ಗುರು’ ಎನ್ನಬಹುದಾದ ಮಾತು ಇಡೀ ವಚನಕಾರರ ಅಂತಃಸತ್ವವೇ ಆದದ್ದು, ಬದುಕಿನೊಂದಿಗೆ ನೇರವಾಗಿ ಮುಖಾ-ಮುಖಿಯಾಗುವ ಸ್ವಾತಂತ್ರ್ಯವನ್ನು ಸಾಧಿಸಿತು. ಬದುಕು ಪ್ರತಿಯೊಬ್ಬರಿಗೂ ಅವರವರದ್ದೇ ಪ್ರಯೋಗಶಾಲೆಯಾಯಿತು. ತಮ್ಮ ಅನುಭವ ತಮಗೆ ಕೊಟ್ಟಿದ್ದು ನಿಜದ ದರ್ಶನವಾಗುವುದರೊಂದಿಗೆ ಅದನ್ನೇ ಗಟ್ಟಿಯಾಗಿ ಹೇಳುವ ಧೈರ್ಯವೂ ಒದಗಿಬಂತು. ಇದು ಆ ಹೊತ್ತಿಗೆ ಈ ನೆಲದ ಕ್ರಾಂತಿಯೇ ಹೌದು. ಅರ್ಥವೇ ಇಲ್ಲದ ಸನಾತನತೆಯನ್ನು ಪದೇ ಪದೇ ಪ್ರತಿಪಾದಿಸುತ್ತಾ, ವರ್ಣರಂಜಿತವಾಗಿ, ಆಕರ್ಷಕವಾಗಿ ಮತ್ತು ಅಷ್ಟೇ ಒಳಗೊಂದು ತಲ್ಲಣ ಸೃಷ್ಟಿಸಿ ಒಪ್ಪಿಕೊಳ್ಳುವಂತೆ ಮಾಡುವ ಕಥನಗಳನ್ನು ಸೃಷ್ಟಿಸುತ್ತಾ, ಅಕ್ಷರ-ಧರ್ಮಗಳ ಸಾರ್ವಭೌಮಿಕೆಯನ್ನು ಪ್ರತಿಪಾದಿಸುವ ವ್ಯವಸ್ಥೆಯೊಂದು ಗಟ್ಟಿಯಾಗಿ ನೆಲೆಯೂರಿಬಿಟ್ಟಿತ್ತು. ಅದನ್ನು ವಿೂರಲಾಗದ್ದು, ಪ್ರಶ್ನಿಸಲಾಗದ್ದು, ಅದರಾಚೆಗೆ ಯೋಚಿಸಲಾಗದ್ದು ಸಹಜವೆನ್ನುವಂತಹ ಅಸಹಜ ಕ್ರಮವಾಗಿತ್ತು. ಈ ಬಂಧನದ ಮಧ್ಯದಿಂದಲೇ ಬಿಡುಗಡೆಯ ಕನಸೊಂದು ರೂಪುಗೊಂಡದ್ದು ಬಹುಶಃ ಎಲ್ಲಾ ಕಾಲದ ಆಶಾದಾಯಕವಾದ ಬೆಳವಣಿಗೆಯೇ ಎನ್ನಬಹುದು. ಒಂದು ವಿದ್ಯುಕ್ತವಾದ ಚಾಲನೆಯೊಂದು ಹೀಗೆ ಕನ್ನಡದ ನೆಲದಲ್ಲೇ ಆರಂಭವಾದದ್ದು ಅಭಿಮಾನದ ಸಂಗತಿ.

         ಈ ಅಭಿಮಾನ ಇಂದು ನಮ್ಮನ್ನು ಆ ಕುರಿತು ಸಾಕಷ್ಟು ಮಾತನಾಡಿಸಿದೆ. ಮಧ್ಯಕಾಲೀನ ಸಾಹಿತ್ಯವೆನ್ನುವುದು ನಂತರಕ್ಕೆ ಆಧುನಿಕತೆಯ ಈ ಕ್ಷಣಕ್ಕೂ ಹೊಸ-ಹೊಸ ಸಾಧ್ಯತೆಗೆ ಆಕರವಾಗಿ, ಆದರ್ಶವಾಗಿ ಕಾಣುವುದಕ್ಕೂ ಕಾರಣವಾಗಿಸಿದೆ. ಭಾಷೆ, ಭಾವ, ಅನುಭವ, ಶೈಲಿ, ಕಥನ, ಯೋಚನೆ-ಯೋಜನೆ -ಹೀಗೆ ಇನ್ನು ಹತ್ತಾರು ನೆಲೆಗಳ ಒಳಗೆ ಮಾದರಿಯನ್ನು ಪರಿಕಲ್ಪಿಸುವುದು ಸಾಧ್ಯವಾದದ್ದು ವಚನಕಾರರು ಸಾಧಿಸಿಕೊಂಡ ಸ್ವ-ಸೃಜನಶೀಲತೆಯಿಂದ ಎನ್ನುವುದನ್ನು ನಾವು ಮರೆಯುವಂತಿಲ್ಲ.
‘ಆನು ಒಲಿದಂತೆ ಹಾಡುವೆ’ ಎನ್ನುವ ಬಸವಣ್ಣನ ಮಾತು ಬಹುಪಾಲು ವಚನಕಾರರೆಲ್ಲರ ಆಶಯವೂ ಆಗಿತ್ತು, ತುಡಿತವೂ ಆಗಿತ್ತು, ಹಾಗಾಗಿಯೇ ವಿವಿಧ ಪರಿಸರದ, ಪ್ರಜ್ಞೆಯ, ಮನೋಭಾವದ, ಚಿಂತನೆಯ ಹಲವಾರು ಜನ ಒಂದೆಡೆ ಕಲೆತು ಯೋಚಿಸುವುದು ತಮಗರಿವಿಲ್ಲದಂತೆ ನಾಳಿನ ಒಂದು ಸಾರ್ಥಕ ಪ್ರಜ್ಞೆಯಾಗುವುದು ಸಾಧ್ಯವಾಯ್ತು. ಆದರೆ ಹಾಗೇ ತಾವು ಯಾವುದೋ ಮಾದರಿ, ಆಕರ ಆಗಿಬಿಡಬಹುದೆಂಬ ಕನಸಾಗಲೀ, ಭ್ರಮೆಯಾಗಲಿ ಬಹುಶಃ ಅವರಿಗಿದ್ದಿರಲಿಲ್ಲ. ತಾವು-ತಮ್ಮಕಾಲ-ತಮ್ಮ ಅರಿವು ಮತ್ತು ಬುದಕಿನ ಸತ್ಯಗಳನ್ನು ಅರ್ಥೈಸಿಕೊಂಡು, ಸಾಧ್ಯವಾದರೆ ಅದನ್ನು ಆಚರಿಸಬಹುದಾದ ಪ್ರಯತ್ನವೇ ಅವರಿಗೆ ಪ್ರಧಾನವಾಗಿತ್ತು. ಇದೊಂದು ಮಾನವೀಯತೆಯ ಸಾಮಾನ್ಯ ಹಪಹಪಿ. ಇದು ಸರಿ ಇದು ತಪ್ಪು ಎಂದು ಸಹಜವಾಗಿಯೇ ವಿವೇಚಿಸಬಯಸಿದ ಸಂವೇದನೆಯಾಗಿತ್ತು. ‘ಮಹಾಮನೆ’ಯಂತಹ ಪರಿಕಲ್ಪನೆ, ‘ಶೂನ್ಯ ಸಿಂಹಾಸನ’ದ ಯೋಚನೆಗಳೆಲ್ಲ ಹೀಗೆ ವಾಸ್ತವಕ್ಕೆ ಮುಖಾ-ಮುಖಿಯಾಗುತ್ತಲೇ ಬದುಕಿನ ಸಾಮಾನ್ಯ ಕಳಕಳಿಯ ಹುಡುಕಾಟದ ಮಾರ್ಗಗಳಾಗಿದ್ದವು. ಹಾಗಿರುವಲ್ಲಿಯೇ  ಅನಿವಾರ್ಯ ಎನ್ನುವಂತೆ ಮೌಢ್ಯತೆಗಳನ್ನು ವಿರೋಧಿಸಬಹುದಾದ, ಅಮಾನವೀಯ-ಅವೈಜ್ಞಾನಿಕವಾದ ಸಾಮಾಜಿಕ ತರತಮಗಳ ವಿರುದ್ಧವೂ ಧ್ವನಿಎತ್ತಬಹುದಾದದ್ದು ಸಾಧ್ಯವಾಯ್ತು. ಸಾಮಾಜಿಕ ಚಳುವಳಿ ತನ್ನಿಂತಾನೇ ರೂಪಪಡೆಯುವಂತಾಯ್ತು.

        ಅಲ್ಲಿಯವರೆಗೆ ಜನಸಾಮಾನ್ಯರಿಗೆ ಅರ್ಥವಾಗದ ರೀತಿಯಲ್ಲೋ, ಆತಂಕಹುಟ್ಟಿಸುವ ನೆಲೆಯಲ್ಲೋ, ಶರಣಾಗತಿಯೆ ವಿನಃ ಬೇರೆ ಯಾವುದೇ ರೀತಿಯಿಂದಲೂ ಬದುಕು ಸಾಧ್ಯವಿಲ್ಲ ಎಂಬಂತೆಯೋ ಮೌಢ್ಯ ಮತ್ತು ಆ ತೆರೆನಾದ ನಂಬಿಕೆಗಳಲ್ಲಿಯೇ ಮುಚ್ಚಿಹೋಗಿದ್ದ, ಈ ನೆಲದ ಬಹುಜನರ ಪರವಾಗಿ ಮಾತನಾಡುವುದು ಹಕ್ಕುಗಾರಿಕೆಯ ನೆಲೆಯೊಳಗೆ ಧ್ವನಿಯಾದದ್ದು ವಚನಕಾಲದ ವಿಶೇಷತೆಯಾಗಿತ್ತು. ‘ಜ್ಞಾನ’ ಎನ್ನುವುದು ‘ತಿಳುವಳಿಕೆ’ ಎನ್ನುವುದು ಯಾರದ್ದೋ ಖಾಸಗಿಯಾದ ಆಸ್ತಿ ಎನ್ನುವುದನ್ನು ಒಡೆದುಹಾಕಿ ಧರ್ಮ, ದೇವರು, ನಂಬಿಕೆ, ಆಚರಣೆಗಳ ಬಗೆಗೊಂದು ನಿಜದ ಅರಿವನ್ನು ಮೂಡಿಸುವ ಪ್ರಯತ್ನಕ್ಕೆ ಮುಂದಾದದ್ದು ಇದ್ದಕ್ಕಿದ್ದಂತೆ ಘಟಿಸಿದ ಪವಾಡವಾಗಿರಲಿಲ್ಲ. ಈಗಾಗಲೇ ಗಮನಿಸಿದಂತೆ ಅದೊಂದು ಸಾವಧಾನದ, ಸಹಜ ಪ್ರಕ್ರಿಯೆಯಾಗಿತ್ತು ಅದಕ್ಕೆ ಬಸವಣ್ಣನಂತಹ ಜ್ಞಾನಿಯ ನೇತೃತ್ವವಿತ್ತು ಅಲ್ಲಿ ಅಲ್ಲಮನಿದ್ದ, ಅಕ್ಕಮಹಾದೇವಿ ಇದ್ದಳು, ಸಿದ್ಧರಾಮನಿದ್ದ, ಚನ್ನಬಸವಣ್ಣನಿದ್ದ. ಈ ಪರಂಪರೆಯ ವಾರಸುದಾರರಂತೆ ನೂರಾರು ‘ಶರಣರು’ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಮುಂದೆ ಹರಿಹರನಂತಹ ಕವಿಗೆ ರಗಳೆಯ ವಸ್ತುವಾಗುವ ಪುಣ್ಯಪುರುಷ-ಸ್ತ್ರೀಯರಾಗುವವರೆಗೂ ಇವರ ವ್ಯಕ್ತಿತ್ವ ರೂಪುಗೊಳ್ಳುವುದಾಗಿತ್ತು. ಇದು ಸಾಂಸ್ಕೃತಿಕ ಸಂದರ್ಭಕ್ಕೆ, ಸಾಹಿತ್ಯ ಸೃಷ್ಟಿಯ ಸಂದರ್ಭಕ್ಕೆ ಏನೆಲ್ಲಾ ಆಲೋಚನೆಗಳಿಗೆ ಎಡೆಮಾಡಿದರು. ಆ ಕ್ಷಣಕ್ಕೆ ಹಿಂದಿದ್ದ ನಂಬಿಕೆಗಳನ್ನು, ಘೋಷಿತ ವಸ್ತುವಿನ ಕಡ್ಡಾಯ ಪದ್ಧತಿಯನ್ನು, ವಸ್ತುಕೇಂದ್ರಿತ ನಿಯಮಗಳನ್ನು ವಿೂರುವುದಾಗಿತ್ತು ಮತ್ತು ಒಂದು ಸೃಜನಶೀಲ ಸಾಹಿತ್ಯ-ಸಂಸ್ಕೃತಿ ಪರವಾದ ಆಲೋಚನೆಗಳ ಕುರಿತು ಅನುಸಂಧಾನ ನಡೆಸುವುದಾಗಿತ್ತು.

        ವರ್ಣ-ವರ್ಗ ಭ್ರಮೆಯೊಳಗಿದ್ದ ಸಾಮಾಜಿಕ ನಂಬಿಕೆಗಳನ್ನು ಸೀಳುವಂತೆ ನಡೆದ ಈ ಬಗೆಯ ಪ್ರಯತ್ನಗಳಲ್ಲಿ ‘ಯಾರುಮುಖ್ಯ ಯಾರು ಅಮುಖ್ಯ’ ಎನ್ನುವಂತಿರಲಿಲ್ಲ ಅವರವರ ಶಕ್ತಿಯಿಂದಲೇ ಅವರವರ ಮೌಲ್ಯಮಾಪನ ಆಗುವುದಾಗುತ್ತಿತ್ತು. ಈ ನೆಲದ ತಳಸಮುದಾಯಗಳು, ಶೋಷಿತ ಸಮಾಜದ ಜನರು ಎಲ್ಲ ತರತಮಗಳ ವಿೂರುವ ಹಂಬಲದೊಂದಿಗೆ ಮುಖ್ಯವಾಹಿನಿಗೆ ಬರುವುದು ಸಾಧ್ಯವಾದಂತಾಯ್ತು.

        ವಿಚಿತ್ರ ಮತ್ತು ವಿಷಮ ಎನ್ನುವ ವಿಂಗಡಣೆಗಳಿಂದ ಜನರನ್ನು ದೂರವಾಗಿಸಿಯೇ ‘ಸಮಾಜ’ವೊಂದು ರೂಪುಗೊಂಡಿತ್ತೇ ಎನ್ನುವಂತಿದ್ದ ಸಂದರ್ಭದಲ್ಲಿ ಶರಣರು ಕಲೆಗೊಂಡು ಹೊಸತೊಂದು ಬದುಕಿಗೆ ಸನ್ನದ್ಧರಾದಂತೆ ಕಂಡದ್ದು ವಚನ ಚಳುವಳಿಯ ಬಹು ಮುಖ್ಯ ಸಾಧನೆ. ಭಿನ್ನ ಕಾಯಕ, ಭಿನ್ನಪರಿಸರದ, ಭಿನ್ನ ಮನೋಭಾವದ ವ್ಯಕ್ತಿ-ವ್ಯಕ್ತಿತ್ವಗಳು ಒಂದೆಡೆ ಸಂಘಟಿತವಾದದ್ದು ಪರಸ್ಪರ ಅನುಭವಗಳ ವಿಚಾರ-ವಿನಿಮಯಕ್ಕೆ ಅವಕಾಶವನ್ನೊದಗಿಸಿತು. ತನ್ಮೂಲಕ ಸಮಾನತೆ ಎನ್ನುವುದು ಎಲ್ಲ ಸ್ತರಗಳಲ್ಲೂ ಸಾಧ್ಯವಾಗಬಹುದು ಎನ್ನುವ ಆಶಾವಾದವೂ ಇಲ್ಲಿಂದಲೇ ಚಾಲನೆ ಪಡೆದಂತಾಯಿತು. ಶತಮಾನಗಳಿಂದ ಬೌದ್ಧಿಕವಾಗಿ, ಭೌತಿಕವಾಗಿ ಶೋಷಣೆಗೆ ಒಳಗಾಗಿದ್ದ ಜನತೆ ಜಡತ್ವವನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ, ಆತ್ಮವಿಶ್ವಾಸ ತುಂಬುವ ನೆಲೆಯಲ್ಲಿ ವಚನ ಚಳುವಳಿ ಆಶಾದಾಯಕ ಬೆಳವಣಿಗೆಯಾಗಿದ್ದಿತು.

         ಭೇದಗಳಿಲ್ಲದಂತೆ ಬದುಕು ಕಟ್ಟಿಕೊಳ್ಳುವ ಹೊಸ ಹುಮ್ಮಸ್ಸಿನ ಶರಣರು ವಚನರಚನೆಯಂತಹ ಕ್ರಿಯೆಯಲ್ಲಿ ಭಾಗಿಯಾದದ್ದು ಮತ್ತೊಂದು ವಿಶೇಷವಾಗಿತ್ತು. ಆ ಹೊತ್ತಿಗೆ ವಿದ್ಯೆ ಎನ್ನುವುದು ಕೆಳವರ್ಗದ ಜನರಿಗೆ ಸುಲಭವಾಗಿ ದಕ್ಕುವಂತಹುದಾಗಿರದಿದ್ದರು ಅವರ ಲೋಕಜ್ಞಾನಕ್ಕೆ ಯಾವುದೇ ನಿಯಂತ್ರಣವಿರಲಿಲ್ಲ. ಅವರಿಗೆ ಕನ್ನಡ ಸಾಹಿತ್ಯ, ಚರಿತ್ರೆ ಅಕ್ಷರದಾಖಲೆಯ ಮೂಲಕ ಅರಿವಿರಲಿಲ್ಲ, ಪ್ರಕಾರಗಳ ತಿಳಿವಿರಲಿಲ್ಲ, ಶಾಸ್ತ್ರಬದ್ಧವಾದ ಜ್ಞಾನವಿರಲಿಲ್ಲ ಆದರೆ ಬದುಕಿನ ಅದಮ್ಯ ಪ್ರೀತಿಯಿತ್ತು ಅವರ ಸಂವೇದನೆಗಳಲ್ಲಿ ಸಾಚಾ ಕಳಕಳಿಯಿತ್ತು. ಅಂದಿನ ಅವರ ನಡುವಿನ ಸಾಮಾಜಿಕ ಮತ್ತು ಧಾರ್ಮಿಕ ಎನ್ನಬಹುದಾದ ಚಳುವಳಿ ಹೊಸ ದಿಕ್ಕಿನ ಸೂಚಕವಾಗಿತ್ತು. ಅದುವರೆವಿಗೆ ಧ್ವನಿಯೇ ಇಲ್ಲದವರು ತಮ್ಮ ಅನುಭವಗಳಿಗೆ, ಲೋಕಜ್ಞಾನ ವಿಶ್ಲೇಷಣೆಗೆ ಧ್ವನಿಕೊಟ್ಟರು. ಭಾಷೆ ಎನ್ನುವುದು ಅವರ ಮಾತಿನ ರೂಪದಿಂದಲೇ ಪ್ರಯೋಗವಾಯಿತು.

        ಅನ್ನಿಸಿದ್ದನ್ನು ಸರಳವಾಗಿ ತಮ್ಮ ತಿಳುವಿನ ಭಾಷೆಯಲ್ಲಿ, ತಮ್ಮ ಪರಿಸರದ, ಸಮಾಜದ, ಸಮುದಾಯದ, ಗಾದೆ, ನಾಣ್ಣುಡಿ, ದೃಷ್ಟಾಂತ, ನುಡಿಗಟ್ಟುಗಳ ಮೂಲಕವೇ ವಚನಗಳಿಗೆ ತನ್ಮೂಲಕ ತಮ್ಮ ಆಡುಭಾಷೆಗೆ ಅಪರೂಪದ ಜೀವಂತಿಕೆಯನ್ನು ತುಂಬಲು ಅವರು ಪ್ರಯತ್ನಿಸಿದರು.

        ಹೀಗೊಂದು ‘ವಚನ’ ಮಾಧ್ಯಮ ತಮ್ಮ ಅಭಿವ್ಯಕ್ತಿಗೆ ಒಂದು ಅತ್ಯ್ಯುತ್ತಮ ಸಂವಹನ ಸಾಧ್ಯತೆಯಾಗಬಹುದು ಎನ್ನುವ ಅರಿವು ದಕ್ಕಿದ್ದರಿಂದಲೂ ಅವರೂ ಅದನ್ನು ಮುಖ್ಯ ಪ್ರಕಾರವಾಗಿಸಿಕೊಂಡರು. ಯಾವುದೇ ಶಾಸ್ತ್ರೀಯ ಕಟ್ಟುಪಾಡಿಗೆ ಒಳಗಾಗದ, ಸೃಜನಶೀಲತೆಯನ್ನು ಸ್ವೋಪಜ್ಞ ನೆಲೆಯಲ್ಲಿ ಕಂಡುಕೊಳ್ಳುವ ಕ್ರಿಯಾಶೀಲವೆನ್ನಬಹುದಾದ ಭಾವದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ಬಹುಶಃ ಪರಸ್ಪರರಿಗೆ ಪ್ರೋತ್ಸಾಹದಾಯಕವಾದ ನೆಲೆಯಲ್ಲಿ ವಚನಗಳ ರಚನೆ ನಡೆದಂತೆಯೂ ತೋರುತ್ತದೆ. ‘ಅಂತರಂಗ ಶೋಧ’ ಬಹಿರಂಗ ಶೋಷಣೆಗಳ ವಿರುದ್ಧದ ಧ್ವನಿಯಾಯ್ತು. ವಿಡಂಬನೆ, ವಿರೋಧ, ಆಕ್ರೋಶಗಳು ಅವರ ಮಾತುಗಳಲ್ಲಿ ಸಹಜ ನೆಲೆಯಲ್ಲಿ ಪ್ರಕಟಗೊಂಡವು. ‘ಮಾತು ಜ್ಯೋತಿರ್ಲಿಂಗ’ವಾಗುವ, ‘ಅರಿವೇ ಗುರು’ವಾಗುವುದರೊಂದಿಗೆ ‘ಕಾಯಕವೇ ಕೈಲಾಸ’ವೆಂಬ ಬದ್ಧತೆಯೂ ಸಾಧ್ಯವಾಯಿತು. ಬಹುಪಾಲು ವಚನಕಾರರು ತಮ್ಮ ಅನುಭವಗಳನ್ನು ಬದುಕು, ವೃತ್ತಿಗಳೊಂದಿಗೆ ಹೊಂದಿಸಿಕೊಂಡೇ ವಚನಗಳಾಗಿಸುವ ಮೂಲಕ ವ್ಯಕ್ತಿಗತ ಬದ್ಧತೆಗಳನ್ನು ಕಾಯ್ದುಕೊಂಡದ್ದು ವಚನ ಸಾಹಿತ್ಯದ ಅನನ್ಯತೆಗೂ ಕಾರಣವಾಯಿತೆನ್ನುವುದು ಈಗ ಇತಿಹಾಸ.

        ಸಮಸಮಾಜದ ಕನಸು, ಇರುವುದನ್ನು ವಿೂರುವುದಕ್ಕೆ ಸಂಬಂಧಿಸಿದ್ದು ಅಂದರೆ ಹಲವುಗಳು ಒಂದಾಗುವ ಕ್ರಿಯೆಯನ್ನಿದು ಹೇಳುತ್ತದೆ. ಹಾಗಾಗಿಯೇ ಕಾಯಕ ಜಾತಿಸೂಚಕವಾಗುವ ಅಪಾಯದಿಂದ ಪಾರಾಗಬೇಕಾದ ತುರ್ತನ್ನು ಪ್ರತಿಪಾದಿಸುವುದು ಅತ್ಯಗತ್ಯವಾಗಿತ್ತು. ವಚನಕಾರರು ಈ ಪ್ರಯತ್ನದಲ್ಲಿ ‘ಸ್ವಾಭಿಮಾನ’ ಪ್ರಜ್ಞೆಯನ್ನು ಉಳಿಸಿಕೊಂಡದ್ದು ಗಮನಾರ್ಹ. ‘ಶರಣತ್ವ’, ‘ವೀರಶೈವ’ ವಚನಕಾರರು ಎನ್ನುವುದನ್ನು ಹೀಗೆ ಸಮಾನತೆಯ ಆಶಯವಾಗಿಯೇ ಕಾಣುವುದಾಗಬೇಕು.

        ವಚನಸಾಹಿತ್ಯ, ವಚನಕಾರರು, ಶರಣತ್ವ, ವೀರಶೈವ ಎಂದೆಲ್ಲಾ ಚರ್ಚಿಸುವ ಹೊತ್ತಿಗೆ ಕನ್ನಡ-ಸಾಹಿತ್ಯ ಸಂಸ್ಕೃತಿಯ ಸಂದರ್ಭದಲ್ಲಿ ಸಾಕಷ್ಟು ಸಂಶೋಧನೆ, ಚರ್ಚೆ, ಸಂವಾದ, ಚಿಂತನೆಗಳೆಲ್ಲ ನಡೆದಿವೆ. ಎಲ್ಲದರಾಚೆಗೂ ಇದೊಂದು ಆರೋಗ್ಯಕರವಾದ ಸಮಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ದಿಟ್ಟಹೆಜ್ಜೆಯಾಗಿತ್ತು ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗಾಗಿಯೇ ಕನ್ನಡದ ವೈಚಾರಿಕತೆಯ ಚಿಂತನೆ ಚಾಲನೆ ಪಡೆದಲ್ಲೆಲ್ಲಾ ವಚನಸಾಹಿತ್ಯದ, ವಚನಕಾರರ ಹಾಜರಿ ಎದ್ದು ಕಾಣುತ್ತದೆ.

        ಈ ನಡುವೆಯೂ ಪ್ರಧಾನವಾಗಿ ಕೆಲವು ಮುಖ್ಯ ವ್ಯಕ್ತಿಗಳನ್ನು ವ್ಯಕ್ತಿತ್ವಗಳನ್ನು ಕೇಂದ್ರೀಕರಿಸಿಕೊಂಡಂತೆ ಹೆಚ್ಚು ಚರ್ಚೆಗಳು ನಡೆದಿವೆ. ಸಂಶೋಧನೆಗಳು ನಡೆದಿವೆ. ಅಲ್ಲಲ್ಲಿ ಇತರರನ್ನು ಸಮಷ್ಟಿಪ್ರಜ್ಞೆಯಾಗಿಯೂ ಪರಿಭಾವಿಸಿ ಚರ್ಚಿಸುವ ಪ್ರಯತ್ನಗಳು ಗಂಭೀರವಾಗಿಯೇ ನಡೆದಿವೆ. ಕೆಲವು ವಚನಕಾರರ ಬಗೆಗೆ ವ್ಯಕ್ತಿಗತ ಮಾಹಿತಿಗಳು ಸಮಗ್ರವಾಗಿ ಲಭ್ಯವಾಗಿಲ್ಲದ್ದು ಒಂದು ಕೊರತೆಯಾಗಿದೆ. ಅದನ್ನೇ ಮಿತಿಯಾಗಿಸಿಕೊಳ್ಳದೆ ಲಭ್ಯವಿರುವ ವಚನಗಳ ಮೂಲಕ ಒಂದು ಚಿತ್ರಣವನ್ನು, ಚಿಂತನೆಯ ಸಾಧ್ಯತೆಯನ್ನು ಯೋಚಿಸುವುದು ಕೂಡ ಅತ್ಯಗತ್ಯವಾದ ಸಂಗತಿ. ವಚನಗಳು ಕಲ್ಪನೆಯ ಕಥನಗಳಂತಾಗದೆ, ನಿತ್ಯಬದುಕಿನ ಪ್ರತಿಕ್ರಿಯೆಯಂತೆಯೂ ಕಾಣಸಿಗುವುದರಿಂದ ಅವುಗಳು ಸಾಂಸ್ಕೃತಿಕ ಪರಂಪರೆಯ ರೂಪಕವೂ ಆಗಬಹುದು. ಇಂತಹ ಬಹಳಷ್ಟು ವಚನಕಾರರು ತಮ್ಮ ವಚನಗಳ ಮೂಲಕವೇ ಒಳನೋಟಗಳನ್ನು ನೀಡಬಲ್ಲರು.

        ಅಂತಹ ಕೆಲವು ವಚನಕಾರರಲ್ಲಿ ಘಟ್ಟಿವಾಳಯ್ಯನೂ ಒಬ್ಬ ಮುಖ್ಯ ವಚನಕಾರ. ಈತನ ಬಗೆಗೆ ವೈಯಕ್ತಿಕವಾದ ವಿವರಗಳು ಹೆಚ್ಚು ಲಭ್ಯವಿಲ್ಲ. ಆದರೆ ಲಭ್ಯವಿರುವ ಅವನ ವಚನಗಳನ್ನು ಪರಿಶೀಲಿಸುವುದು, ದಾಖಲಿಸುವುದು ಖಂಡಿತ ಮಹತ್ವದ ಕೆಲಸ. ಅಂತಹದ್ದೊಂದು ಪ್ರಯತ್ನವಿಲ್ಲಿದೆ.

 
bottom of page