top of page

ನೀಂ ಮಹಚ್ಛಿಲ್ಪಿ ದಿಟಂ

ಪರಿವಿಡಿ
1.    ಆರಂಭದ ಹಾದಿ.....
2.    ದಾನವತ್ವದ ಧಾಟಿ.....
3.    ಹಿನ್ನೋಟವಾಗಿ......
4.    ಕಾಣ್ಕೆಯ ಕಡೆಗೆ......
5.    ಹುಡುಕಾಡುತ್ತಾ......
6.    ಭಾವಗಳ ಸುತ್ತಾ......
7.    ಸಂಸ್ಕøತಿಯ ಅರ್ಥದತ್ತ......
8.    ನಂಬಿಕೆಗಳಿಂದಾಗಿ......
9.    ರಾವಣತ್ವ......
10.    ಯುದ್ದವನ್ನರಸುತ್ತಾ......
11.    ಪಾಪಪ್ರಜ್ಞೆ ಪರಿಧಿ.......
12.    ಆತ್ಮೋದ್ಧಾರದ ಹಾದಿ.....
13.    ದರ್ಶನದ ದಾರಿ.....
14.    ಅರಿವಿನೆಡೆಗೆ.....
15.    ಸಾಧನೆಯ ಹಾದಿ......
16.    ವಿಜಯೋತ್ಸವದೆಡೆಗೆ......
17.    ಸಾರ - ಸತ್ವ.....
 

ಆರಂಭದ ಹಾದಿ.....

ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿತಿಯಲ್ಲಿದೆ. ಬದುಕಿನ ಸಾರ್ಥಕತೆಯ ಅರ್ಥವಂತಿಕೆಗಳಿಗೆ ಅನಿವಾರ್ಯ ಎನ್ನುವಂತೆ ಸಾಹಿತ್ಯಸೃಷ್ಟಿಯನ್ನು ಪ್ರತಿಬಿಂಬಿಸುವುದಾದರೂ ಸುಲಭಕ್ಕೆ ಸಾಧ್ಯವಾಗುತ್ತದೆಯೆ? ಎನ್ನುವ ಸ್ಥಿತಿ. ಹಾಗಿದ್ದು ಸೃಜನಶೀಲ ಪ್ರಕ್ರಿಯೆಗಳಲ್ಲಿ ಮೊದಲನೆಯದಾಗಿ ನಿಲ್ಲುವ ಸಾಹಿತ್ಯವನ್ನು ಸುಲಭಕ್ಕೆ ನಿರಾಕರಿಸುವುದು ಸಾಧ್ಯವೇ? ಈ ಕಾರಣದಿಂದಲೂ ಇರಬೇಕು ಹೊಸ ಹೊಸ ಸಾಧ್ಯತೆಗಳಿಗೆ ಸಾಹಿತ್ಯ ಸೃಷ್ಟಿಯು ಚಾಚಿಕೊಳ್ಳುತ್ತಿದೆ. ಹೊಸಬರು ದಿನೇ ದಿನೇ ಈ ಪ್ರಪಂಚಕ್ಕೆ ಸದಸ್ಯರಾಗುತ್ತಲೇ ಇದ್ದಾರೆ. ಓದುಗರನ್ನು ಹುಡುಕಿಕೊಳ್ಳುವ ಹಂಬಲದಲ್ಲೇ ಸಾಹಿತ್ಯ ಪುನರ್‍ಸೃಷ್ಟಿಯತ್ತಲೂ ಚಾಚಿಕೊಳ್ಳುತ್ತಿದೆ. ಇದು ಹಳತನ್ನ ಮತ್ತೆ ಹೊಸತಾಗಿ ಗ್ರಹಿಸುವ ಕ್ರಮವೂ ಹೌದು. ಅನಿವಾರ್ಯತೆಯೂ ಹೌದು. ಒಂದು ‘ವಿಜ್ಞಾನ’ದ ರೀತಿಯಲ್ಲಿ ಈ ಬಗೆಗೊಂದು ಖಚಿತ ಅರ್ಥ ನೀಡುವಂತಿಲ್ಲ ಎಂಬುದೂ ಇಲ್ಲಿ ಮುಖ್ಯವಾದುದು.

        ಸಾಹಿತ್ಯದಂತೆಯೇ ಸಾಹಿತ್ಯ ಪ್ರಕಾರವನ್ನು ಗಮನದಲ್ಲಿರಿಸಿಕೊಂಡು ಮಾತನಾಡಹೊರಟರೆ ಪ್ರಕಾರಗಳು ಓದುಗಕೇಂದ್ರಿತ ಪ್ರಜ್ಞೆಯನ್ನು ತುಸು ಅರಿವಿಗೆ ತಂದುಕೊಳ್ಳುತ್ತವೆ ಎನ್ನುವುದು ಗಮನಾರ್ಹ. ಹಾಗಾಗಿಯೂ ಆಧುನಿಕ ಸಂವೇದನೆಯ ಹೊತ್ತಿಗೆ ‘ಮಹಾಕಾವ್ಯ’ ಎನ್ನುವುದನ್ನು ಜನಪ್ರಿಯತೆಯ ಮಾನದಂಡದಿಂದ ವಿಮರ್ಶೆಯ ಸಹನೆಯ ನೆಲೆಯಿಂದ ಅಳೆಯಲಾಗುವುದಿಲ್ಲ ಆ ಬಗೆಯ ತಾಳ್ಮೆ ಮತ್ತು ಪ್ರಯೋಗದ ಧೈರ್ಯವಾದರು ತುಸು ಕಷ್ಟವೇ ಆಗಿದೆ. ಗದ್ಯದ ಯಶಸ್ಸಾದ ಕಾದಂಬರಿಯೇ ಈ ಬಗೆಯ ಸಮಸ್ಯೆಯನ್ನು ಗಂಭೀರವಾಗಿಯೇ ಎದುರಿಸುತ್ತಿರುವಾಗ ಇನ್ನು ಮಹಾಕಾವ್ಯ ಸಾಧ್ಯತೆ ಮತ್ತಷ್ಟು ದೂರವೇ ಸರಿ. ಆದ್ದರಿಂದಲೂ ‘ಮಹಾಕಾವ್ಯ’ ಈ ಹೊತ್ತಿಗೆ ಹಿಂದಿನ ಕೃತಿಗಳ ಪುನರ್ ಮನನ ಮತ್ತು ಅವುಗಳ ಕಾಲಿಕ ಅನ್ವಯತೆಯ ಸಾಧ್ಯತೆಗೆ ತನ್ನನ್ನು ತೆರೆದುಕೊಳ್ಳಬೇಕಿದೆ, ಇದರೊಂದಿಗೆ ಒಬ್ಬ ಕವಿ ಶ್ರೇಷ್ಠತೆಯನ್ನು ಪ್ರತಿಪಾದಿಸಿಕೊಳ್ಳುತ್ತಲೇ ಸಾರ್ವಕಾಲಿಕತೆಯ ತನ್ನ ಹಿರಿಮೆಯನ್ನು ಪ್ರತಿಷ್ಠಾಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಬದಲಾದ ಬದುಕಿನ, ಕ್ರಮದ ಹೊತ್ತಿಗೆ ಹೀಗೊಂದು ಸಾವಧಾನದ ಬದುಕಿನ ಸಿಂಹಾವಲೋಕನವಾದರು ಒಂದು ‘ಸಂಸ್ಕøತಿ’ಯ ವ್ಯಾಖ್ಯಾನದ ಅವಕಾಶವನ್ನು ವಿಸ್ತರಿಸಬಹುದು. ಈ ದೇಶದ ಯಾವ ಸಾಮಾನ್ಯ ಸಹೃದಯನಾದರೂ ರಾಮಾಯಣ, ಮಹಾಭಾರತಗಳನ್ನು ನಮ್ಮ ಮಹಾಕಾವ್ಯಗಳೆಂದು ಸಲೀಸಾಗಿ ಅಷ್ಟೇ ಸಹಜವಾಗಿ ಉಸುರಿಬಿಡಬಲ್ಲ. ಆ ಬಗೆಯ ಚರ್ಚೆಯಾದರು ಅಪಾರವಾಗಿಯೇ ನಮ್ಮ ನಡುವೆ ನಡದಿವೆ. ಅದು ಚರ್ವಿತ ಚರ್ವಣದ ಮಿತಿಯೂ ಅಲ್ಲ. ಒಂದು ಮಹಾಕಾವ್ಯದ ವಿಸ್ತøತತೆಯನ್ನು ಪ್ರಸ್ತಾಪಿಸುವಂತಹ ಸಂಗತಿಗೆ ಅದು ಸಂಬಂಧಿಸಿದ್ದು.

         ಕತೆಯ ಮೂಲ ಮಹಾಕಾವ್ಯಗಳಿಗಿದ್ದರೂ ಅದು ಯಾವುದೇ ವ್ಯಕ್ತಿಯ ಮನೆತನದ, ರಾಜ್ಯದ ಮಿತಿಗಷ್ಟೇ ಸಂಬಂಧಿಸಿದ್ದಾಗುವುದಿಲ್ಲ ಎನ್ನುವ ‘ಸಾಮಾನ್ಯ’ ನಂಬಿಕೆಗಳೇ ಈ ಬಗೆಯ ಕೃತಿಗಳನ್ನು ಒಂದು ಜನಾಂಗದ, ದೇಶದ, ಸಂಸ್ಕೃತಿಯ ದಾಖಲೆಗಳು ಎಂದು ಸ್ಥಿರೀಕರಿಸಿಬಿಡುತ್ತವೆ. ಅಲ್ಲಿಂದಾಚೆ ಅದರ ಅವಲೋಕನ, ಓದುವ ಕ್ರಮ, ಅನ್ವಯತೆಗಳಲ್ಲಿ ಮತ್ತಷ್ಟು ವಿಸ್ತೃತವೂ ವಿಶಿಷ್ಟವೂ ಆಗಿಬಿಡುತ್ತವೆ. ಹಾಗಾಗಿಯೂ ಅವು ಮತ್ತೆ ಮತ್ತೆ ಭಿನ್ನರೂಪಗಳಾಗಿ, ಆಶಯಗಳಾಗಿ, ಸಂವೇದನೆಗಳಾಗಿ ದಾಖಲಾಗುತ್ತಿರುತ್ತವೆ. ತನ್ಮೂಲಕ ಶ್ರೇಷ್ಠತೆಯ ಪುನರ್ ಮೌಲೀಕರಣವೂ ಸಾಧ್ಯವಾಗುವ ಅವಕಾಶಗಳಿಗೆ ಚಾಚುತ್ತಿರುತ್ತವೆ. ಏಕಕಾಲಕ್ಕೆ ಕವಿ ಮತ್ತು ಸಹೃದಯರನ್ನು ಕಾಡುತ್ತಲೆ ಒಮ್ಮೊಮ್ಮೆ ಅದರ ಆಚೆಗೆ ಅನಕ್ಷರಸ್ಥ ಸಾಮಾನ್ಯ ಜನ ಸಮುದಾಯದ ಪರಿಧಿಗೂ ಅಭಿಮಾನದ ಸಂಗತಿಗಳಂತೆಯೂ ಉಳಿದುಕೊಂಡುಬಿಡುತ್ತವೆ. ಅದು ಗಾಢವಾದಂತೆಲ್ಲಾ ಸೂಕ್ಷ್ಮತೆಗೂ ಕಾರಣವಾಗಿಬಿಡುವುದುಂಟು. ಆ ಬಗೆಯ ಚರ್ಚೆಗಳದ್ದೇ ಒಂದು ಪರಂಪರೆಯಾಗಬಹುದು ಎಂದರದು ಉತ್ಪ್ರೇಕ್ಷೆಯಲ್ಲ.

        ‘ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲಿ’ ಎನ್ನುತ್ತಾನೆ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸ. ಅದು ಅವನು ರಚಿಸಹೊರಟ ಮಹಾಭಾರತದ ಪ್ರಸ್ತುತತೆಯನ್ನೆಂತೋ ರಾಮಾಯಣದ ವಿಸ್ತøತತೆಯನ್ನು ಸಹ ಪ್ರಚುರಪಡಿಸುವಂತಹುದು. ಹಾಗೆಯೇ ರಾಮಾಯಣ ಎನ್ನುವುದು ಈ ನೆಲದ ಜನರ ಸಂಸ್ಕøತಿಯೊಳಗೆ ಅಂತರ್ಗತ ಎನ್ನುವ ‘ರೂಪಕ’ವಾಗಿಯೂ ಉಳಿದಿದೆ. ಹಾಗಾಗಿಯೂ ಅದು ಜಾನಪದದಿಂದ ಆರಂಭವಾಗಿ ಎಲ್ಲಾ ಧರ್ಮಗಳನ್ನು ಪ್ರಭಾವಿಸಿ ಕತೆ, ಪಾತ್ರಗಳಲ್ಲಿ ಬದುಕಿನ ಅವಿಭಾಜ್ಯ ಸಂಗತಿಗಳಾಗಿಯೂ ಉಳಿದು ಬೆಳೆದಿರುವುದುಂಟು. ಅದು ಹೊಸತಾಗಿ ಕಾಣುವವರಿಗೆ ಅವಕಾಶಗಳ ಅನ್ವರ್ಥವಾಗಿಯೂ ಉಳಿದಿದೆ. ಅದರ ಪ್ರತಿಫಲನವೇ ಕನ್ನಡದಲ್ಲಿ ಆಧುನಿಕ ಸಾಹಿತ್ಯ ಕಾಲದ ಸಾರ್ಥಕತೆಯ ಉತ್ಕರ್ಷವಾಗಿ ರೂಪುಗೊಂಡಿದ್ದು ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’.

        ‘ರಾಮಾಯಣವೆನ್ನುವುದು ವಿರಾಮಾಯಣಂ’ ಆಗುವುದಾದರೂ ಅದೊಂದು ಚಮತ್ಕಾರದ ಮಾತಲ್ಲ. ಅದು ಒಂದು ಕತೆಯಾಗುವುದರಾಚೆಗೆ ಮನೆ ಮನಗಳ ನೆನಪಾಗುವುದು, ಬದುಕಾಗುವುದು, ಆದರ್ಶವಾಗುವುದು ಎಂಬ ಹತ್ತಾರು ಸ್ವರೂಪಗಳಿಗೆ ಪರ್ಯಾಯವಾಗುವಂತಹುದು. ಪಾತ್ರಗಳು ಬರೀ ಕಥಾನಕದ ಬೆಳವಣಿಗೆಯ ಪ್ರೇರಣಗಳಾಗುವುದಿಲ್ಲ ಅವು ಪ್ರತಿಯೊಬ್ಬರ ಒಳಹೊರಗಿನ ತುಮುಲಗಳಾಗುತ್ತಲೇ ಅವರವರ ಭಾವಕ್ಕೆ ಅವರವರ ಮಾದರಿಗಳಾಗಿಬಿಡುತ್ತವೆ. ಮುಂದೆ ನಾಣ್ಣುಡಿ, ಜಾಣ್ಣುಡಿ, ಗಾದೆ-ಒಗಟುಗಳಾಗಿ ಬೆಳೆಯುತ್ತ ಸಾಗುತ್ತವೆ. ಮಹಾಕಾವ್ಯ ಎನ್ನುವುದರ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗಳಿಗೆ ಅರ್ಥ ಉಂಟಾಗುವುದೇ ಇಂತಲ್ಲಿ ಎನ್ನಬಹುದು.

        ಏಕವ್ಯಕ್ತಿ ಪ್ರಜ್ಞೆಯಲ್ಲಿ ನಿಯಂತ್ರಿತವಾದಂತೆ ಮೇಲ್ನೋಟಕ್ಕೆ ಸರಳವಾಗಿ ಗೋಚರವಾಗುವ ‘ರಾಮಾಯಣ’ ರಾಮನ ಪ್ರಾತಿನಿಧಿಕತೆಯ ಜೊತೆಗೆ ಒಂದು ಕೌಟುಂಬಿಕ ಸಂಬಂಧವನ್ನು ತನ್ಮೂಲಕ ಸಾಮುದಾಯಿಕ ಅರ್ಥಕ್ಕೆ ವಿಸ್ತರಿಸಿಕೊಳ್ಳುತ್ತಾ ಸಾಮಾಜಿಕತೆಗೆ ವಿಶಿಷ್ಟತೆಯನ್ನು ತುಂಬುವಂತಹುದು. ಈ ಕಾರಣದಿಂದಲೂ ಇದು ಪ್ರತೀ ಕುಟುಂಬದ ಪಾತ್ರಗಳ ಪರಕಾಯ ಪ್ರವೇಶವಾದಂತಾಗಿ ಕಾಣಿಸಬಹುದಾದುದು.

         ಮೇಲ್ನೋಟಕ್ಕೆ ಒಳಿತು-ಕೆಡಕುಗಳ ಸಂಘರ್ಷವಾಗಿ ದಾಖಲಾಗುವ ಮಹಾಕಾವ್ಯ ಕಥಾನಕಗಳು ಅಷ್ಟೇ ಸುಲಭವಾಗಿ ಜನಸಾಮಾನ್ಯರ ನಡುವೆ ಉಳಿಯುವುದಿಲ್ಲ. ಪಾತ್ರಗಳ ಸಂದರ್ಭದಲ್ಲಂತೂ ಇದು ಮತ್ತಷ್ಟು ವಿಶಿಷ್ಟವೂ ಅನನ್ಯವೂ ಆದ ರೀತಿಯಲ್ಲಿ ಕಾಣಸಿಗುತ್ತದೆ. ಅಂದರೆ ಪಾತ್ರಗಳು ಬದುಕಿನ ವಿಭಿನ್ನ ನೆಲೆಗಳಲ್ಲಿ ಪೂರಕವೆನ್ನುವಂತೆ ಉದಾಹರಣೆಯ ರೂಪದಲ್ಲಿ, ರೂಪಕ-ಪ್ರತಿಮೆಗಳ ಮಾದರಿಯಲ್ಲಿ ಪ್ರಸ್ತಾಪಿಸಲ್ಪಡುತ್ತವೆ. ಹಾಗೆ ಪ್ರಸ್ತಾಪಿಸಲ್ಪಡುವ ಹೊತ್ತಿಗೂ ಅದು ಮೂಲ ಕಥನದ ಮಿತಿಯಲ್ಲಷ್ಟೇ ಫಲಿತವಾಗುವುದಿಲ್ಲ ಎನ್ನುವುದು ಗಮನಾರ್ಹ. ಅಂದರೆ ಅವರವರ ಬದುಕಿನ ಪರಿಸರ, ಘಟನೆ ಇತ್ಯಾದಿಗಳ ಹಿನ್ನೆಲೆಯನ್ನು ಪಾತ್ರಗಳ ಗುಣಾವಗುಣಗಳ ವಿವೇಚನೆಯಲ್ಲಿ ವ್ಯಕ್ತಿತ್ವಗಳು ತಮ್ಮ ತಮ್ಮ ಸ್ವೋಪಜ್ಞತೆಯನ್ನು ಮೆರೆಸುತ್ತವೆ, ಬಹುಪಾಲು ಪ್ರಧಾನ ಚರ್ಚೆಯ ಪಾತ್ರಗಳ ಸಂದರ್ಭಕ್ಕೆ ಇದು ಘಟಿಸುತ್ತದೆ.

         ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು ಪ್ರಧಾನವೆಂದು, ನಾಯಕವೆಂದು ಪರಿಗಣಿಸಲ್ಪಟ್ಟ ಪಾತ್ರಗಳ ಬಗೆಗಿನ ನಿಲುವುಗಳನ್ನಲ್ಲ, ಬದಲಾಗಿ ನಾಯಕನ ವಿರುದ್ಧವಾಗಿ, ವ್ಯವಸ್ಥೆಯ ವಿರುದ್ಧವಾಗಿ ಜನರು ರೂಪಿಸಿಕೊಳ್ಳುವ ಅಭಿಪ್ರಾಯಗಳನ್ನು ಗಮನಿಸಬೇಕು. ಇದು ಸಹೃದಯ ಪ್ರತಿಕ್ರಿಯೆಯ ಮಿತಿಯಿಂದಷ್ಟೇ ಅಲ್ಲದೆ, ಒಳಗೊಳ್ಳುವ, ತಮ್ಮದನ್ನಾಗಿಸಿಕೊಳ್ಳುವ ವ್ಯಾಪ್ತಿಯಿಂದಲೂ ಗಮನಿಸಬಹುದಾದಂತಹುದು. ಇಡಿಯಾಗಿ ‘ದುಷ್ಟತೆ’ ಎನ್ನುವುದನ್ನು ಕಣ್ಮುಚ್ಚಿದಂತೆ ಯಾವ ಜನಪದವು ಸುಲಭಕ್ಕೆ ಒಪ್ಪುವುದಿಲ್ಲವೇನೊ? ಅವು ಪ್ರತೀ ಪಾತ್ರಗಳನ್ನು ತಮ್ಮ ಭಾವದೊಂದಿಗೆ ಸಮೀಕರಿಸುವಾಗಲೂ ಅವರನ್ನು ತಮ್ಮಂತೆ ಎಂದೋ ಅಥವಾ ತಮ್ಮನೇ ಅವರ ಜಾಗದಲ್ಲಿ ಇಟ್ಟಂತೆ ಎಂದೋ ವಿವೇಚಿಸುವುದು ಸಹಜತೆಯಂತೆ ಕಾಣಿಸುತ್ತದೆ.

        ಬದುಕಿಗೆ ಇರಬಹುದಾದ ಎಲ್ಲಾ ಬಗೆಯ ಸಾಧ್ಯತೆಗಳನ್ನು ಪ್ರಾತಿನಿಧೀಕರಿಸಿಕೊಳ್ಳುವ ಪ್ರಯೋಗವೂ ಇದಾಗಿದೆ. ಆದ್ದರಿಂದಲೂ ಬಹುಶಃ ಒಂದು ದೇಶದ ಮಹಾಕಾವ್ಯಕ್ಕೆ ಶಿಷ್ಟ ಪರಂಪರೆಗಿಂತಲೂ ಮಹತ್ವವಾದ ಸಾಂಸ್ಕøತಿಕ ನೆಲಗಟ್ಟು ಜನಪದರ ಸಮುದಾಯದಿಂದಲೇ ಒದಗಿಬರುತ್ತದೆ ಎನ್ನಬಹುದು.
 
        ನಮ್ಮ ದೇಶದ ರಾಮಾಯಣ ಮಹಾಭಾರತಗಳು ಮನ-ಮನೆಗಳನ್ನು ಆವರಿಸಿಕೊಂಡದ್ದೇ ಈ ಬಗೆಯಲ್ಲಿ ಎನ್ನಬಹುದು. ಆದ್ದರಿಂದಲೇ ಈ ಮಹಾಕಾವ್ಯಗಳು ‘ಪರಂಪರೆ’ ಎನ್ನುವಂತೆಯೂ ವ್ಯಾಪಿಸಿಕೊಂಡಿವೆ, ಪುನರ್ ಸೃಷ್ಟಿಗೊಂಡಿವೆ, ರೂಪಾಂತರಗೊಂಡಿವೆ, ಕೂಡಲ್ಪಟ್ಟಿದೆ-ಕಳೆಯಲ್ಪಟ್ಟಿದೆ. ಅವರವರದ್ದೇ ಕಥನಗಳಾಗಿಯೂ ಹೇಳಲ್ಪಟ್ಟು, ಕೇಳಲ್ಪಟ್ಟು ಹಾಡುಗಳೂ ಆಗಿ ಉಳಿದಿವೆ. ಬದಲಾವಣೆಯೇ ಸೃಜನಶೀಲತೆಯ ಒಂದು ಮಹತ್ವದ ಸಂಗತಿ ಎನ್ನುವಂತೆ ಸಾಧ್ಯತೆಗಳ ಹುಡುಕಾಟವಾಗಿಯೂ ಕಾಣಿಸಿಕೊಂಡ ಈ ಮಹಾಕಾವ್ಯಗಳಲ್ಲಿ ಆದಿಮ ಕಾವ್ಯವೆನ್ನಲಾದ ರಾಮಾಯಣವು ಕನ್ನಡದ ಯುಗಕವಿ ಕುವೆಂಪುವಿನ ಪ್ರತಿಭೆಯಲ್ಲಿ ಮತ್ತೊಮ್ಮೆ ಹೊಸತಾಗಿ ಮೈತಳೆದಿದೆ ಅದಕ್ಕೆ ಮುಖ್ಯವಾದ ಕಾಣ್ಕೆ ಪಾತ್ರ-ಪ್ರಪಂಚಗಳ ಭೂಮಿಕೆಯಿಂದಲೇ ಆರಂಭವಾಗುತ್ತದೆ. ಕುವೆಂಪು ರಾಮಾಯಣ ಗುರುತಿಸುವ, ರೂಪಿಸುವ, ಕಾಣಿಸುವ ‘ಸಂಸ್ಕøತಿ’ಯ ಚರ್ಚೆಯೇ ವಿಶಿಷ್ಟವಾದುದು. ಅದು ಕಥನದಿಂದ ಬಹುಪಾಲು ಎಲ್ಲಾ ಪಾತ್ರಗಳ ವ್ಯಾಪ್ತಿಗೂ ವಿಸ್ತರಿಸುತ್ತದೆ. “ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ” ಎನ್ನುವ ನಂಬಿಕೆಯ ಕುವೆಂಪುವಿನಲ್ಲಿ “ಪಾಪಿಗೂ ಉದ್ಧಾರವಿಹುದು”. ಇದು ಕವಿ ಸಾಧಿಸುವ ದರ್ಶನ ಮತ್ತು ಅಖಂಡ ಜಗತ್ತಿನಲ್ಲಿ ಸೃಷ್ಟಿಯನ್ನು, ಬದುಕನ್ನು ಗಾಢವಾಗಿ ಪ್ರೀತಿಸುವ ಸಾರ್ಥಕತೆಯ ಪ್ರತಿಫಲನ, ಆದ್ದರಿಂದಲೇ ಲಂಕಾ ಸಂಸ್ಕøತಿಗೂ ಬೆಲೆಯಿದೆ, ರಾವಣ ಮಹಾಶಿಲ್ಪಿಯಾಗುತ್ತಾನೆ. ಆ ದಾನವ ಮಹಾಶಿಲ್ಪಿಯಾದ ವಿಶಿಷ್ಟತೆಯ ವಿವರದ ಪ್ರಯತ್ನವಿದು.

 
bottom of page