top of page

ಕನ್ನಡ ಸಿನಿಮಾಲೋಕ

   ಪರಿವಿಡಿ
1. ಆರಂಭ/ಹಿನ್ನೆಲೆ : ಒಂದಾನೊಂದು ಕಾಲದಲ್ಲಿ.......
2. ಹಿನ್ನೆಲೆ-ರಂಗಭೂಮಿ : ಒಂದಾನೊಂದು ಕಾಲದಲ್ಲಿ ಆರಂಭ...
3. ಕನ್ನಡ ಚಲನಚಿತ್ರ : ಮೊದಲದಿನಗಳು: ಹೊಸ ಬೆಳಕು ಮೂಡುತಿದೆ...
4. ಮೌನದಿಂದ ಮಾತಿನತ್ತ :  ಬಂದೇ ಬರತಾವ ಕಾಲ.......
5. ನಿರ್ಮಾಪಕ : ನಾನು ಎಂಬುದು ನಾನಲ್ಲ.......
6. ನಿರ್ದೇಶಕ : ಆಡಿಸಿ ನೋಡು, ಬೀಳಿಸಿನೋಡು.......
7. ಕತೆ/ವಸ್ತು : ಕತೆಹೇಳುವೆ ನನ್ನ ಕತೆ.......
8. ಕಲಾತ್ಮಕ ‘ವಸ್ತು’ಗಳು : ಇದೇ ಜೀವನ ಇದೇ.......
9. ಸೃಜನ ಮತ್ತು ನಕಲು    : ನಾನು ಎಂಬುದು ನಾನಲ್ಲ.......
10. ಸಾಹಿತ್ಯ : ಬರೆಯುವೆ ನಿನಗಾಗಿ.......
11. ಹಾಡುಗಳು : ಬಾಳೊಂದು ಭಾವಗೀತೆ.......
12. ಸಂಗೀತ : ನಾದಮಯ ಈ ಲೋಕವೆಲ್ಲಾ.......
13. ಹಾಡುಗಾರರು :  ಹಾಡೊಂದು ನಾ ಹಾಡುವೆನು.......
14. ಇತರ ಶಿಸ್ತುಗಳು : ಕೂಡಿಬಾಳೋಣ, ಸೇರಿದುಡಿಯೋಣ.......
15.ನಟರು : ಬೊಂಬೆಯಾಟವಯ್ಯ.......

16. ಮುತ್ತುರಾಜ್ : ನಾನೇ ರಾಜಕುಮಾರ.......

17. ನಾಯಕಿ ನಟಿಯರು : ಗೆದ್ದವಳು ನಾನೇ.......

18. ಪೋಷಕ ಪಾತ್ರಗಳು : ಒಂದಾಗಿ ಬಾಳುವ.......

19. ಹಾಸ್ಯನಟರು : ನಗುನಗುತಾ ನಲಿ ನಲಿ.......

20. ಖಳನಟರು : ನಾನೊಬ್ಬ ಕಳ್ಳನು, ನಾನೊಬ್ಬ ಸುಳ್ಳನು.......

21. ಆಮದು ನಟ/ನಟಿಯರು : ಎಲ್ಲೇ ಇರು ಹೇಗೇ ಇರು.......

22. ಚಿತ್ರಗಳ ಶೀರ್ಷಿಕೆಗಳು :  ಎಂತಾ ಸೌಂದರ್ಯನೋಡು.......

23. ಪ್ರೇಕ್ಷಕರು : ನಿಮ್ಮೊಲುಮೆ ನಮಗಿರಲಿ.......

24. ಸಿನಿಮಾ ಮತ್ತು ಇತರ ಮಾಧ್ಯಮಗಳು : ಕೇಳಿ ಎಲ್ಲ ಕೇಳಿ.......

25. ಸಿನಿಮಾ ಮತ್ತು ರಾಜಕಾರಣ : ಮಾಮರವೆಲ್ಲೋ

26. ಕೊನೆಯ ಹೆಜ್ಜೆ  : ಎಲ್ಲಿಗೇ ಪಯಣ.......

ಆರಂಭ/ಹಿನ್ನೆಲೆ : ಒಂದಾನೊಂದು ಕಾಲದಲ್ಲಿ.......

        ಮನುಷ್ಯನ ಬೌದ್ಧಿಕ ಚುವಟಿಕೆಗಳನ್ನು ಅವಲಂಬಿಸಿಯೇ, ಅವನನ್ನು ನಾಗರೀಕನೆಂದು ಗುರುತಿಸುವ ಹೊತ್ತಿಗೂ, ಅವನು ದಿನೇ ದಿನೇ ಸಾಧಿಸಿದ ಅಭಿವೃದ್ಧಿ ಅಥವಾ ವಿಕಾಸಕ್ಕೆ ಹಲವು ಅಯಾಮಗಳಿದ್ದವು. ಸಂವಹನಕ್ಕೆ ಸಂಬಂಧಿಸಿದ ಅವನ ಪ್ರಯತ್ನ-ಪ್ರಯೋಗಗಳೇ ಮಹತ್ವವಾದವು. ಭಾಷೆಗೂ ಮೊದಲು ಅವನು ಸನ್ನೆಗಳ ಮೂಲಕವೇ ಸಂವಹನ ಸಾಧಿಸುತ್ತಿದ್ದ ಎನ್ನುವುದು ಮೂಲ ಪ್ರವೃತ್ತಿಯ ವಿಶಿಷ್ಟತೆಯನ್ನು ಸ್ಪಷ್ಟಪಡಿಸುವಂತಹುದು.

       ‘ಸನ್ನೆ’ ಅಥವಾ ಸಂಜ್ಞೆಗಳು ಪ್ರಯತ್ನಗಳ ರೂಪಕಗಳೇ ಆಗಿದ್ದವು, ಅದು ಇಬ್ಬರ ಅಥವಾ ಅದಕ್ಕಿಂತ ಹೆಚ್ಚಿನವರನ್ನು ಒಳಗೊಳ್ಳುವ ಕ್ರಿಯೆಯಾಗಿತ್ತು. ಇದು ಪರಸ್ಪರರಿಗೂ ಸವಾಲಿನ ಸಂಗತಿಯೂ ಆಗಿತ್ತು ಬಹುಶಃ ಅಂತಿಮವಾಗಿ ಅದು ಫಲಿತವಾಗುವುದರಲ್ಲಿ ಪರ್ಯಾವಸನವಾಗುವುದಾದರೂ, ಅವರವರ ಬೌದ್ಧಿಕ ಕಸರತ್ತಿನ ಅರ್ಥವೂ ಆಗುತ್ತಿತ್ತೆನ್ನುವುದು ಮುಖ್ಯ. ಇದು ಏಕಕಾಲಕ್ಕೆ ಪರಸ್ಪರ ಅರಿವಿನ ಮತ್ತು ಅರ್ಥೈಸುವ ಕೆಲಸವೂ ಆಗಿತ್ತು. ಅದು ಒಂದರ್ಥಕ್ಕೆ ಸಾಹಸವಾಗಿತ್ತೆಂದರೂ ವಿಶೇಷವಲ್ಲ. ಮುಂದೆ ಧ್ವನಿಯಾಗಿ, ಮಾತಾಗಿ, ಭಾಷೆಯಾಗುವ ಹೊತ್ತಿಗೂ ಅದರಷ್ಟೇ ಆಂಗಿಕ ಚಲನೆಯ ಸನ್ನೆಗಳೇ ಮಾತುಗಳಿಗೆ ಮತ್ತಷ್ಟು ದೃಢತೆಯನ್ನು, ಖಚಿತತೆಯನ್ನು ತಂದುಕೊಟ್ಟಿತೆನ್ನಬಹುದು. ಇದರ ಸುಧಾರಿಸಿದ ಅರ್ಥವೇ ಅಭಿನಯ.

       ಅಭಿನಯವೆನ್ನುವುದಾದರೂ ಯಾವುದೋ ಹೊಸತಿನ ಪ್ರತಿಮೆಯಲ್ಲ, ಹಾಗೊಂದು ಸಂಕೀರ್ಣವಾದ ಸಂಕೇತವೂ ಅಲ್ಲ, ಅದು ಮೊದಲಲ್ಲೇ ಗಮನಿಸಿದ ಹಾಗೆ ಅರಿವಿನ ಅರ್ಥ ವಿಸ್ತಾರದ ಒಂದು ಸರಳ ರೂಪ ಅಥವಾ ರೂಪಕ. ಅದು ಅದರ ವಿಭಿನ್ನ ಆಯಾಮಗಳಲ್ಲಿ ಅನುಕರಣೆಯ ಸಾಧ್ಯತೆಯನ್ನೇ ಪ್ರಧಾನವಾಗಿ ಒಳಗೊಂಡಿತ್ತು. ಅಂದರೆ ಸನ್ನೆ, ಅಭಿನಯ ಮತ್ತು ಅನುಕರಣೆ ಪರಸ್ಪರ ಪರ್ಯಾಯವೆನ್ನುವ ಅರ್ಥದಲ್ಲಿ ಪ್ರಕಟಗೊಳ್ಳುವಾಗ ಅದು ಅವರವರ ಬದುಕಿನ ಪುನರ್‍ಸಂಘಟನೆಯ ಪ್ರಯತ್ನವೂ ಆಗಿತ್ತೆನ್ನುವುದು ಮುಖ್ಯವಾದುದು. ಶಿಲಾಯುಗದ ಭಿತ್ತಿ ಚಿತ್ರಗಳು, ಮೂಲಮಾನವನ ದೇವರು, ಪೂಜೆ, ಇತ್ಯಾದಿಗಳ ಅರ್ಥದಲ್ಲಿ ಪ್ರಕಟವಾದುದಾದರೂ ಇದೇ ಬಗೆಯ ಪ್ರಯೋಗಗಳು ಎನ್ನುವುದು ಗಮನಾರ್ಹವಾದುದು.

      ‘ಮಾತುಗಳು’ ಮುಂದೆ ಸಂವಹನವನ್ನು ಗಟ್ಟಿಯಾಗಿ ಪ್ರತಿಪಾದಿಸಿ ಸಾಧಿಸಿಕೊಂಡ ಹೊತ್ತಿಗೂ ಅದು ಮುಕ್ತಾಯವಾಗಿರಲಿಲ್ಲ ಮತ್ತಷ್ಟು ಅವಕಾಶ ಮತ್ತು ಸಾಧ್ಯತೆಗಳಿಗೆ ಪ್ರೇರಣೆಯಾಯ್ತು. ಸಾಹಿತ್ಯದ ಸೃಷ್ಟಿಯ ಅರ್ಥವಾದರೂ ಈ ಮೂಲದಿಂದಲೇ ಗುರುತಿಸಬಹುದಾದ, ಮತ್ತೆ ಭಾಷೆ ‘ಲಿಪಿ’ಯಾಗುವ ಮುನ್ನ ‘ಮೌಖಿಕ’ ಒಂದು ಪರಂಪರೆಯೇ ಆಗುವಂತೆ ವ್ಯಾಪಕವಾದುದಾರೂ ‘ಸಾಹಿತ್ಯ’ ಸೃಷ್ಟಿಯ ತುಡಿತವೆಂತೋ, ಮನರಂಜನೆಯ ನೆಪದಿಂದ ಭಾಷೆಯನ್ನು, ಮಾತನ್ನು, ಹೊಸ ಹೊಸ ಅರ್ಥಗಳಿಗೆ ಒಡ್ಡುವ ಬೌದ್ಧಿಕ ಕಸರತ್ತಿನ ಉತ್ಕರ್ಷವೂ ಆಗಿತ್ತು. ಜಗತ್ತಿನ ‘ಜಾನಪದ’ ಶ್ರೀಮಂತವಾಗಿ, ಸಾಹಿತ್ಯವಾಗಿ ಬಹುಪಾಲು ಎಲ್ಲಾ ಶಿಷ್ಟ ದಾಖಲೆಗಳಿಗೆ ಒಂದಲ್ಲ ಒಂದು ಕಾರಣದಿಂದ ಮೂಲವಾದುದು ಸಹ ಈ ಬಗೆಯ ಕಾರಣಗಳಿಂದಲೇ ಎಂಬುದಲ್ಲಿ ಸ್ಮರಣಾರ್ಹವಾದುದು.

       ತಮ್ಮ ‘ಬದುಕು’ ಎನ್ನುವುದೇ ಹೀಗೆ ಸಾಹಿತ್ಯವಾಗಿ ರೂಪುಗೊಳ್ಳುವ ಹೊತ್ತಿಗೂ ಅದರಲ್ಲಿದ್ದ ಕಳಕಳಿಯನ್ನು ಗಮನಿಸಬೇಕು. ಇದು ಏಕಕಾಲಕ್ಕೆ ಬದ್ಧತೆಯನ್ನೆಂತೋ ದೃಢತೆಯನ್ನು ಅಂತೆಯೇ ಪ್ರತಿಪಾದಿಸುವಂತಹುದು. ‘ಜಾನಪದ’ವೆನ್ನುವುದು ವ್ಯಷ್ಟಿಯ ಮಿತಿಯನ್ನು ದಾಟಿ ಬಹುಪಾಲು ಅನುಭವಗಳೆಲ್ಲಾ ಸಮಷ್ಟಿಯಾಗುವುದಾದರೂ ಈ ಕಾರಣಗಳಿಂದಲೇ ಎನ್ನಬಹುದು. ಸಾಮಾನ್ಯವಾಗಿ ಜಗತ್ತಿನ ಮಹಾಕಾವ್ಯಗಳಲ್ಲಿ ಈ ಮೂಲಸೆಲೆಯನ್ನು ಗುರುತಿಸಬಹುದು. ಜೀವನವೆನ್ನುವುದನ್ನು ಸಮಷ್ಟಿಯಾಗಿಸಿಕೊಂಡು ಪರಂಪರೆಯೋಪಾದಿಯಲ್ಲಿ ಗ್ರಹಿಸಲು ಸಾಧ್ಯವಾದದ್ದು, ಅದನ್ನೆ ಸಾಹಿತ್ಯವನ್ನಾಗಿಸಿದ್ದು ಅದನ್ನು ಸ್ವಗತ ಮಾದರಿಯಲ್ಲಿ ಹಾಡಿಕೊಂಡದ್ದು, ಮತ್ತೊಬ್ಬರೊಂದಿಗೆ ಹಂಚಿಕೊಂಡದ್ದು ಇದೆಲ್ಲವು ಸಹಜತೆಯ ರೂಪದಲ್ಲಿಯೆ ಘಟಿಸಿರಲು ಸಾಧ್ಯವಿದೆ. ಇಲ್ಲವಾಗಿದ್ದರೆ ಭಾಷೆ, ಸಾಹಿತ್ಯದ ಮುಂದುವರಿದ ರೂಪದಂತೆ ನಾಟಕದಂತಹ ಪ್ರಕಾರಗಳು ಸೃಷ್ಟಿಯಾಗಬೇಕಿರಲಿಲ್ಲ, ಅನುಕರಣೆ ಎನ್ನುವುದು ಒಂದು ಕಲೆಯಾಗುವಂತಿರಲಿಲ್ಲ.

       ‘ಕಲೆ’ ಎನ್ನುವ ಅರ್ಥವಾದರೂ ಹೀಗೆ ಬದುಕಿನ ಭಿನ್ನ ಸಾಧ್ಯತೆಗಳ ಒಂದು ನಕಲಾಗಿತ್ತು. ಅದು ಸಹ ಸೃಜನಶೀಲತೆಯ ಅರ್ಥದಿಂದಲೇ ಎನ್ನಬಹುದು. ಅಂದರೆ ಇರುವುದರ ಪುನರ್‍ಸೃಷ್ಟಿ. ಹಾಗೆ ಪುನರ್ ಸೃಷ್ಟಿಯಾಗುವ ಹೊತ್ತಿಗೆ ಆ ಸೃಷ್ಟಿಯ ರೂಪಕನ ಶಕ್ತ್ಯಾನುಸಾರವಾದ ರೂಪಾಂತರವೋ, ಹೊಸತನವೋ, ವೈವಿಧ್ಯತೆಯೋ, ಇತ್ಯಾದಿ ಸಾಧ್ಯತೆಗಳೂ ತೆರೆದುಕೊಂಡವು. ‘ಕಲೆಗಾಗಿ ಕಲೆ’ ಎನ್ನುವ ಚಿಂತನೆ ‘ಜೀವನಕ್ಕಾಗಿ ಕಲೆ’ ಎನ್ನುವಂತಾದದ್ದು ಚಿತ್ರದ ಅರ್ಥದಲ್ಲಿ ಆವರ್ತನದ ರೂಪದಲ್ಲಿ ಕಾಣತೊಡಗಿತು.

       ಅನುಕರಣೆಯ ಮೂಲದ ಅಭಿನಯವೆನ್ನುವುದು ಒಂದು ಕಲೆಯಾಗಿ ರೂಪ ಪಡೆದದ್ದು ಪ್ರತಿಭೆಯ ಮಾನದಂಡದಿಂದಲೇ. ಅದು ಸಹ ಬಹಳ ಮುಖ್ಯವಾಗಿ ಸಂವಹನದ ಮಾಧ್ಯಮವಾಗಿತ್ತು. ಈ ಸಂವಹನ ಎನ್ನುವುದು ಅನಿವಾರ್ಯ ಎನ್ನುವಂತೆ ಕಾಣಬೇಕಿಲ್ಲ. ಬಹುಶಃ ಮೊದಲಿಗೆ ಇದು ಮನರಂಜನೆಯಾಗಿ ರೂಪುಗೊಂಡೇ ತನ್ನ ಉತ್ಕರ್ಷದಲ್ಲಿ ಕಲೆಯಾಗಿರಬಹುದು. ಸಮಯ ಕಳೆಯುವ ಮಿತಿಯೊಂದಿಗಿನ ಮನರಂಜನೆ ಕ್ರಮೇಣ ಪ್ರವೃತ್ತಿಯಾಗಿ, ಒಂದು ಹಂತಕ್ಕೆ ವೃತ್ತಿಯೇ ಆಗಿಬಿಟ್ಟಿದ್ದಾದರೂ ‘ಪ್ರತಿಭೆ’ ಮತ್ತು ತನ್ಮೂಲಕ ಕಲೆಯೂ ಒಂದು ಅಗತ್ಯತೆ ಎನ್ನುವಲ್ಲಿಗೆ ಬಂದು ಮುಟ್ಟಿರಬೇಕು. ಬದುಕಿಗಿರುವ ಅಗಾಧತೆಯ ಅರ್ಥಗಳು ರೂಪುಗೊಳ್ಳುವ ಹಿನ್ನೆಲೆಯಲ್ಲಿಯು ನಾವು ಈ ಬಗೆಯ ಸಾಧ್ಯತೆಗಳನ್ನು ಗಮನಿಸಬಹುದು.

       ಮೌಖಿಕ ಪರಂಪರೆ ಮೊದಲಾಗಿ ಬಹುಶಃ ಜಗತ್ತಿನ ಸಾಹಿತ್ಯವೆಲ್ಲ ಬಾಯಿಂದ ಬಾಯಿಗೆ ಹರಡುವಂತಾದದ್ದು ಶಿಷ್ಟ ಸಾಹಿತ್ಯದ ‘ಅಕ್ಷರ’ ಕ್ರಾಂತಿಗೆ ಮೊದಲು ಎನ್ನುವುದು ತುಂಬಾ ಸಹಜವೂ ಸರಳವೂ ಆದ ವಾದವಾದರೂ, ಅದಕ್ಕೆ ಮುನ್ನ ಎಲ್ಲ ಬಗೆಯ ಸಾಧ್ಯತೆಗಳೂ ಹಾಗೊಂದು ನೆನಪಿನ ದಾಖಲೆಯಿಂದಲೇ ಆಕಾರ ಪಡೆಯಲು, ಪ್ರಯೋಗಗೊಳ್ಳಲು ಸಾಧ್ಯವಾಗಿತ್ತೆನ್ನುವುದೇ ದೊಡ್ಡ ಅಚ್ಚರಿ. ‘ಕುರಿತೋದೆದೆಯುಂ ಕಾವ್ಯ ಪ್ರಯೋಗಪರಿಣತ ಮತಿಗಳ್’ ಎನ್ನುವ ಮಾತೊಂದು ಕನ್ನಡದ ಮೊದಲ ಕೃತಿಯಲ್ಲಿ ಅಭಿಮಾನದ ಅರ್ಥದಲ್ಲಿ ದಾಖಲಾಗುವುದನ್ನೂ ಇಲ್ಲಿ ಪೂರಕವಾಗಿ ನೆನೆಯಬಹುದು. ಪ್ರಯೋಗ ಎನ್ನುವುದನ್ನು ಆದಿಮ ಮನುಷ್ಯನ ಪ್ರಜ್ಞೆಯ ಮೂಲಧಾತುವೆಂದೇ ಗಮನಿಸಬಹುದು. ಹೀಗೆ ‘ಪ್ರಯೋಗ’ ಎನ್ನುವುದನ್ನು ಸಾಹಸವಾಗಿಯೂ ಪರಿಭಾವಿಸಿಕೊಂಡದ್ದರಿಂದಲ್ಲೇ ವಿಕಾಸಕ್ಕೆ ವಿಶಿಷ್ಟತೆಯ ಆಯಾಮವೂ ದೊರಕಿತು ಮುಂದೆ ಶಿಷ್ಟ ಸಾಹಿತ್ಯವೂ ಮೊದಲಿಗೆ ‘ನಾಟಕ’ ರೂಪವಾಗಿ ಪ್ರದರ್ಶನವನ್ನೇ ಗುರಿಯಾಗಿಸಿಕೊಂಡದ್ದನ್ನು ನಾವಿಲ್ಲಿ ಉಲ್ಲೇಖಿಸಬಹುದು. ಅಂದರೆ ಮೊದಲಿನವರ ಆಲೋಚನೆಗಿದ್ದ ಸಾಧ್ಯತೆಗಳ ಶಕ್ತಿಯೇ ಭವಿಷ್ಯತ್ತನ್ನು ಎಷ್ಟು ಅಚ್ಚರಿಯಾಗಿ ರೂಪಿಸಿತೆನ್ನುವುದು ಇಲ್ಲಿ ಮುಖ್ಯವಾದುದು.

       ಒಟ್ಟಾರೆಯಾಗಿ ಮನುಷ್ಯನ ನಾಗರೀಕ ಆವಿಷ್ಕಾರದ ಅರ್ಥದಲ್ಲಿಯೇ ಮನರಂಜನೆ ಎನ್ನುವುದೂ ಕಾಣಸಿಗುವುದಾದರೆ ಅದರಲ್ಲಿ ಅನುಕರಣೆಯ ಆಧಾರಿತವಾದ ಅಭಿನಯವೂ, ಅದರೊಂದಿಗೆ ಘಟನಾವಳಿಯಾ ಸಂಯೋಜನೆಯೂ ಸಾಧ್ಯವಾದದ್ದು, ಅದರೊಂದಿಗೆ ಶಬ್ಧಗಳೂ ಜೋಡಣೆಗೊಂಡು ಅಭಿನಯ, ಮಾತು ಮತ್ತು ಸಂಗೀತಗಳ ಅರ್ಥದಲ್ಲಿ ಕಲೆಯ ಜೀವಂತಿಕೆಯ ಚಾಲನೆಯೊಂದು ಪ್ರಾರಂಭವಾಗಿತ್ತೆನ್ನುವುದು ಮುಖ್ಯವಾದುದು. ಇದು ಮೊದಲಿಗೆ ಚಿತ್ರವಾದದ್ದು ನಂತರಕ್ಕೆ ಚಲನವಾದ ಒಂದು ಕ್ರಿಯೆಯಾಯ್ತು. ಬಹುಶಃ ದಿನೇ ದಿನೇ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡಿತ್ತು. ಅಕ್ಷರ ಕ್ರಾಂತಿಯೊಂದಿಗೆ ಕಾವ್ಯವೆನ್ನುವುದು ಒಂದು ದೇಶದ ಪಾಂಡಿತ್ಯ ಪರಂಪರೆಯನ್ನೆಂತೋ, ಧರ್ಮ, ರಾಜಕೀಯ, ಸಾಮಾಜಿಕ ನೆಲೆಗಳ ಮೇಲೆಯೂ ಪ್ರಭಾವ ಬೀರುವ ಹೊತ್ತಿಗೂ ‘ಕಾವ್ಯೇಷು ರಮ್ಯಂ ನಾಟಕಂ’ ಎಂಬ ಮಾತೇ ಗಟ್ಟಿಯಾದದ್ದು, ಕೇವಲ ಓದುವ, ಕೇಳುವ ಮಿತಿಯಿಂದಾಚೆಗೆ ‘ನೋಡುವ’ ಕ್ರಿಯೆಗೆ ಮಹತ್ವವಿತ್ತೆಂಬುದನ್ನು ಪ್ರಾಮಾಣೀಕರಿಸುವುದಾಗಿತ್ತು.

       ಈಗಾಗಲೇ ಚರ್ವಿತ ಚರ್ವಣ ಎನ್ನುವಂತೆ ಗ್ರಹಿಸಿರಬಹುದಾದ ಬದುಕೇ ಪ್ರಧಾನವಾಗಿ ‘ಸಾಹಿತ್ಯ’ವಾಯಿತು ಎನ್ನುವ ವಾದವನ್ನು ಬೇರೆ ಬೇರೆ ನೆಲೆಗಳಲ್ಲಿ ವಿವೇಚಿಸುವ ಪ್ರಯತ್ನ ಈ ಹೊತ್ತಿಗೂ ನಿರಂತರವಾಗಿದೆ. ಇದು ಜೀವಂತಿಕೆಯ ಲಕ್ಷಣವನ್ನೆಂತೋ ಹೊಸತನದ ಅಧ್ಯಯನದ ಅವಕಾಶವನ್ನು ವಿಸ್ತರಿಸುವಂತಹುದು. ಭಾರತದಂತಹ ದೇಶದಲ್ಲಿ ಸಾಹಿತ್ಯವೆನ್ನುವುದು ಮೊದಲಿಗೆ ಒಂದು ವರ್ಗದ, ಬೌದ್ಧಿಕ ಆಸ್ತಿಯೆಂದೇ ಪರಿಗಣಿತವಾಗಿ ಮೊದಲ ಸಾಲಿನ ಪ್ರಾಧಾನ್ಯತೆ ಪಡೆದಿದ್ದ ಹೊತ್ತಿಗೂ ಅದು ಅಕ್ಷರವಿಲ್ಲದವರಿಗೂ ಅರ್ಥೈಸುವ ಪ್ರಯತ್ನವಾಗಿಯೂ ಅಲ್ಲಲ್ಲಿ ಗಂಭೀರವಾಗಿಯೇ ನಡೆದಿತ್ತು. ಹಾಗಾಗಿ ಕಾವ್ಯವೆನ್ನುವುದು ಕೇಳುವ ಪರಂಪರೆಗೂ ವಿಸ್ತರಿಸಿತು.

        ಕೇಳುವ ವರ್ಗ ಸೃಷ್ಟಿಯಾಗುವಾಗ ‘ಹೇಳುವ ನೆಲೆಯೂ ಅಷ್ಟೇ ಮಹತ್ವದ್ದು ಈ ಹೇಳುವ ವರ್ಗ ಮಿತವಾದರೂ ಆ ಹೇಳುವ ಕ್ರಮಕ್ಕೆ ಪ್ರತಿಭೆಯಂತೂ ಅನಿವಾರ್ಯವೇ ಆಗಿತ್ತು. ಹೇಳುವುದು ಎನ್ನುವುದಾದರೂ ಬರೀ ಕೇಳುವ ಮಿತಿಗೆ ಸಂಬಂಧಿಸಿದ್ದಾಗಿರಲಿಲ್ಲ. ಹೇಳುವವರು ಕೇಳುವವರನ್ನು ಒಪ್ಪಿಸಬೇಕಿತ್ತು, ಹೌದು ಎನ್ನಿಸಬೇಕಿತ್ತು. ಈ ಮಾತುಗಳನ್ನು ಗಮನಿಸುವಾಗ ಅಜ್ಜ-ಅಜ್ಜಿಯರ ಕಥೆ ಹೇಳುವ ಕ್ರಮ ನೆನಪಾಗಬೇಕು. ಅಲ್ಲಿ ಅವರ ಕಥೆ ಕೇಳುವ ಮಕ್ಕಳು ಹ್ಞೂ ಅನ್ನಲೇಬೇಕಿತ್ತು. ಕತೆಯನ್ನುವುದು ಭಾರತದಂತಹ ನೆಲದಲ್ಲಿ ವಿಶಿಷ್ಟವಾದುದೇ ಈ ಬಗೆಯ ಒಪ್ಪಿಸುವ ಕಲೆಗಾರಿಕೆಯ ಕಾರಣದಿಂದಲೂ ಎನ್ನಬಹುದು. ‘ಭಾರತ ಕತೆಗಳ ಕಾಣಜ’ ಎನ್ನುವ ಮಾತನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು.
 
         ಕತೆ ಹೇಳುವುದು ‘ಕಣ್ಣಿಗೆ ಕಟ್ಟುವಂತೆ’ ಎಂದು ಪರಿಭಾವಿಸಿದ್ದು ಸಹ ಅದರ ಪ್ರಭಾವಶಾಲಿ ಸಾಧ್ಯತೆಗಳ ಹಿನ್ನೆಲೆಯಿಂದಲೇ ಹೇಳುವವರಿಗೆಂತೋ, ಕೇಳುವವರಿಗೂ ಅದು ಅರ್ಥೈಸಲ್ಪಡುತ್ತಿದ್ದುದು ಹೀಗೆ ‘ಕಣ್ಣಿಗೆ’ ಕಟ್ಟುವ ಕ್ರಮದಿಂದ, ಅಂದರೆ ಅದು ಅರಿವಿರುವ ಮಾದರಿಗಳ ಮೂಲಕವೇ ಎನ್ನಬಹುದು. ಹೀಗೊಂದು ಪ್ರಯೋಗಶೀಲತೆಯನ್ನು ಗಮನಿಸುವ ಹೊತ್ತಿಗೆ ಅದು ಶಿಷ್ಟ ಪರಂಪರೆಯ ಕವಿ-ಸಹೃದಯನನ್ನು ಸೂಚಿಸುತ್ತಿದೆ ಎನ್ನುವುದು ಮುಖ್ಯ. ಮೌಖಿಕ ಮತ್ತು ಲಿಖಿತ ಸಾಹಿತ್ಯ-ಸಂಸ್ಕೃತಿಗಳ ನಡುವೆ ಅನುಸಂಧಾನ ಸಾಧ್ಯವಾಗುತ್ತಿರುವುದು ಕೂಡ ಈ ಸಾದೃಶ್ಯಗಳ ಕಾರಣದಿಂದಲೂ ಹೌದು. ಒಂದು ದೇಶ, ಬದುಕು, ನಂಬಿಕೆ, ಸಾಮಾಜಿಕತೆ, ಎನ್ನುವುದೆಲ್ಲಾ ಅಭಿಮಾನದ ಹೆಸರಿನಲ್ಲಿ ಅರ್ಥ ಪಡೆಯುವುದು ಇಂತಹ ಅನುಸಂಧಾನದಿಂದಲೇ ಸಾಧ್ಯವೆನ್ನಬಹದು.

          ಕಾವ್ಯವೆನ್ನುವುದೇ ವಿದ್ವತ್ ಪರಂಪರೆಯ ಮೂಲ ಎನ್ನುವ ಹೊತ್ತಿಗೂ ಗದ್ಯ ತನ್ನ ಸರಳತೆಯ ಕಾರಣಕ್ಕೂ ಮಹತ್ವ ಪಡೆಯಿತೆನ್ನುವುದು ಮುಖ್ಯ. ಅದು ಈ ಮೇಲೆ ಗಮನಿಸಿದ, ಹೇಳು-ಕೇಳುವ ಕ್ರಮವನ್ನು ಗಟ್ಟಿಗೊಳಿಸಿದ್ದಾಗಿತ್ತು. ಕಾವ್ಯಕ್ಕಿಂತ ಗದ್ಯ ಹೆಚ್ಚು ಸಮಷ್ಟಿಪರ ಎನ್ನುವುದು ಸಿದ್ಧವಾಗುವಂತೆಯೇ ಕಾವ್ಯಕ್ಕಿಂತ ನಾಟಕ ರಮ್ಯ ಎನ್ನುವ ವಾದವೂ ಚಾಲನೆ ಪಡೆಯಿತು. ಇದು ಗದ್ಯಕ್ಕಿಂತ ಮತ್ತಷ್ಟು ಸಮಷ್ಟಿಯೆಡೆಗೆ ಅಥವಾ ಸಮುದಾಯದೆಡೆಗೆ ಚಲಿಸುವುದಾಗಿತ್ತು. ನಾಟಕ ನೋಡಿ ಗ್ರಹಿಸುವ ಪ್ರಕಾರವಾಗುವುದರಿಂದಲೂ, ಪ್ರಯೋಗವೆನ್ನುವ ಕಾರಣದಿಂದಲೂ ಜನಪ್ರಿಯ ಮಾಧ್ಯಮವಾಗುವಂತಾಯ್ತು. ಈ ಅರಿವಿನಿಂದಲೇ ಎನ್ನುವ ಹಾಗೆ ಭಾರತ ಸಾಹಿತ್ಯ ಲೋಕ ಕಾಳಿದಾಸನಂತಹ ಮಹತ್ವದ ನಾಟಕಕಾರನನ್ನು ಕಾಣುವುದಾಯ್ತು

        ಜನಪದ ಲೋಕದಲ್ಲಿ ಈಗಾಗಲೇ ನಾಟಕಗಳು ಬೇರೆ ಬೇರೆಯದ್ದೇ ಆದ ರೂಪಗಳಲ್ಲಿ ಪ್ರಚಲಿತವಿತ್ತು. ಕರ್ನಾಟಕವನ್ನೇ ಗಮನಿಸಿದರೆ ಬಯಲಾಟ, ಯಕ್ಷಗಾನ ಮತ್ತು ಊರೊಟ್ಟಿನ ವಿಶೇಷದ ರಾತ್ರಿನಾಟಕಗಳು ಇತ್ಯಾದಿಗಳನ್ನು ಇಲ್ಲಿ ಉಲ್ಲೇಖಿಸಬಹುದು. ಇದು ಬಹುಪಾಲು ಅನಕ್ಷರಸ್ಥರ ಲೋಕವೇ ಆಗಿದ್ದಾಗ್ಯೂ ಇವುಗಳ ಅಭಿನಯ, ಕಲಿಕೆ ಮತ್ತು ಪ್ರಯೋಗಗಳಲ್ಲಿ ಒಂದು ಗಂಭೀರವಾದ ಬದ್ಧತೆಯಿತ್ತು ಅದು ಒಂದು ಸಂಸ್ಕøತಿ ಮಾದರಿಯಾಗಿಯೂ ಪ್ರತಿಬಿಂಬಿಸಲ್ಪಡುತ್ತಿತ್ತು. ಕಲೆ ಎನ್ನುವುದು ಸಾಮುದಾಯಿಕ ಒಪ್ಪಿಗೆ ಪಡೆದುಕೊಂಡಿತ್ತು. ಶಿಷ್ಟ ಪರಂಪರೆಯ ನಾಟಕಗಳು ಮತ್ತು ಆಧುನಿಕ ನಾಟಕದ ಪ್ರಯೋಗಗಳು ಈ ‘ಜನಪದ’ರಿಂದ  ಸಾಕಷ್ಟು ಪಡಿದಿದ್ದಾವೆಂಬುದನ್ನು ಯಾರೂ ನಿರಾಕರಿಸುವಂತಿಲ್ಲ. ಮೊದ-ಮೊದಲಿಗೆ, ಪುರಾಣ-ಪುಣ್ಯಕತೆಗಳ ಹಿನ್ನೆಲೆಯಿಂದಲೇ ಆರಂಭಗೊಂಡು ಸಾಗಿಬಂದ ನಾಟಕ ಕಾಲಿಕ ಸಹ-ಸ್ಪಂದನದ ಮಹತ್ವದ ಆಕಾರವಾಗಿಯೇ ಬದಲಾಗುತ್ತ ಅಥವಾ ಸುಧಾರಿಸುತ್ತಾ ಬಂದಿತೆನ್ನುವುದು ಅದರ ಯಶಸ್ಸನೆಂತೋ, ಹಿರಿಮೆಯನ್ನು ಅಂತೆಯೇ ಪ್ರಸ್ತಾಪಿಸುವಂತಹುದು. ಭಾರತೀಯ ಕಾವ್ಯ ಮೀಮಾಂಸೆಯ ಚರ್ಚೆ ನಾಟಕ ಮತ್ತು ಪ್ರೇಕ್ಷಕರನನ್ನೂ ಗಮನದಲ್ಲಿರಿಸಿಕೊಂಡೇ ರಸ-ಧ್ವನಿ ಮತ್ತಿತ್ತರ ಕಾವ್ಯ ಚರ್ಚೆಯನ್ನು ಬೆಳೆಸಿತೆನ್ನುವುದು ಇಲ್ಲಿ ನೆನೆಯಬಹುದು.

ಒಟ್ಟಾರೆಯಾಗಿ ನಾಟಕ ಇತರ ಸಾಹಿತ್ಯ ಮತ್ತು ಕಲೆಯ ಸಂದರ್ಭಕ್ಕೆ ಒಂದು ಮಹತ್ವದ ಮೊದಲ ಪ್ರಕಾರ ಮತ್ತು ಅದು ತನ್ನ ಗುರಿ ಸಾಧನೆಯ ಸಂದರ್ಭದಿಂದಲೂ ಬಹು ಜನ ಸಮುದಾಯವನ್ನು ಮುಟ್ಟಿದಾಗಿತ್ತು. ಅದು ಮನರಂಜನೆಯನ್ನಷ್ಟೇ ಉದ್ದೇಶವಾಗಿ ಹೊಂದಿರಲಿಲ್ಲ ಎನ್ನುವುದು ಪರಂಪರೆಯ ಅರಿವಿನಿಂದ ಸ್ಪಷ್ಟವಾಗುವಂತಹುದು


 
bottom of page