top of page
ಮಾತು-ಮನನ
ಪರಿವಿಡಿ
1. ಮೊದಲ ಜ್ಞಾನ – ಮೊದಲಕ್ಷರ : ವಾಲ್ಮೀಕಿ
2. ಚಿತ್ರಾಂಗದೆ
3. ಕಾಡುತ್ತಾಳೆ.....ಅಕ್ಕ.....
4. ವಿಶ್ವಾಮಿತ್ರ ಮತ್ತು ಸತ್ಯದ ಹರಿಶ್ಚಂದ್ರ
5. ಶಾಕುಂತಲೆಯ ನೆನಪಿನ ಹಾದಿಯಲ್ಲಿ....
6. ಭಾರತೀಯ ಮಹಾಕಾವ್ಯಗಳು ಮತ್ತು ಮಹಿಳೆ
7. ಕನ್ನಡ ಮತ್ತು ಮಾತೃಭಾಷೆ
8. ಇಂದಿನ ದೇವರು : ಸರ್ವಕಾಲಕ್ಕೂ ಸಲ್ಲುವ ಕವಿತೆ
9. ಗಾಂಧಿಯ ದೇಶ ನನ್ನದು.....
10. ಸ್ವಾತಂತ್ರ್ಯವನ್ನು ಕನವರಿಸುತ್ತಾ....
11. ಪ್ರಜೆ-ಸ್ವತಂತ್ರ-ಪ್ರಭುತ್ವ......
12. ಅಹಿಂಸೆ... ಅರಿವು...
13. ಖಳತ್ವ ವಿೂರಿದ ಹಾದಿ....
14. ವಿಶ್ವ ಗುರುಪ್ರಜ್ಞೆಗೆ ನಮಿಸುತ್ತಾ.....
15. ನಿಜದ ಮೇಸ್ಟ್ರುಗಳ ಹುಡುಕುತ್ತಾ....
16. ಜನ... ಗಣ... ಮನ..
17. ಮಕ್ಕಳು.....ಶಿಕ್ಷಣ.....ನಾವು.....
18. ನಮ್ಮ ಯುವಜನತೆ....
19. ನಮ್ಮ ನಮ್ಮ ಮನವ ನಾವೇ ಕಾಯುವ ಪರಿ....
20. ನಾವು ಎಂದರೆ ನಾವಲ್ಲ….
21. ಕತ್ತಲಿನಿಂದ...
22. ಆತಂಕದ ಹಾದಿ...
23. ಭಾರತೀಯ ಸಮಾಜ ಮತ್ತು ಜಾತಿ
ಮೊದಲ ಜ್ಞಾನ – ಮೊದಲಕ್ಷರ : ವಾಲ್ಮೀಕಿ
ಭಾರತದ ಹೆಸರಿನೊಂದಿಗೆ ಸಂಸ್ಕøತಿಯ ರೂಪಕವಾಗಿ ಅವೆಷ್ಟೋ ಮಾತುಗಳು ಕಾಡತೊಡಗುತ್ತವೆ. ನಿರಂತರವಾಗಿ ಹೊಸ ವ್ಯಾಖ್ಯಾನಗಳು ರೂಪುಗೊಳ್ಳುತ್ತವೆ ಅದು ವ್ಯಕ್ತಿಯಿಂದ ಹಿಡಿದು ಸ್ಥಳಗಳವರೆಗೂ ವಿಸ್ತರಿಸಿಕೊಳ್ಳುವುದುಂಟು. ವಾಸ್ತವ ಮತ್ತು ಭಾವುಕತೆಯ ನಡುವೆ ಕೆಲವೊಮ್ಮೆ ತರತಮಗಳೇ ಇಲ್ಲದಂತೆ ಚರ್ಚೆಗಳು ಚಾಲ್ತಿಪಡೆದು ವಿಶಿಷ್ಟ ಎನ್ನಿಸಿಬಿಡಬಹುದಾದದ್ದೂ ಉಂಟು. ಪರಂಪರೆಯ ಸನಾತನತೆಯ ವಿಚಿತ್ರ ಚರ್ಚೆಗಳಿಂದ ಬಿಡಿಸಿಕೊಂಡು ಲಭ್ಯ ಸಾಚಾಸಂಗತಿಗಳಿಗೆ ಮುಖಾ-ಮುಖಿಯಾಗಬೇಕಾದದ್ದೇ ಈ ಹೊತ್ತಿನ ನಿಜದ ತುರ್ತು.
ಪರಂಪರೆ, ಇತಿಹಾಸ, ಪುರಾಣಗಳೊಂದಿಗೆ ಮುಖಾ-ಮುಖಿಯಾಗುವಾಗ ಇರಲೇಬೇಕಾದ ಸಾಂಸ್ಕøತಿಕ ಎಚ್ಚರ ಸತ್ಯ ಮತ್ತು ಸತ್ಯದ ಅನಾವರಣದ ಹಾದಿಯಾಗಬೇಕು ಬದಲಾಗಿ ಬೇಕಾದಂತೆ ತಿರುಚಿಬಿಡುವ, ತಿದ್ದಿಬಿಡುವ ವಿಪರ್ಯಾಸಗಳಿಗೆ ಮುಖಾ-ಮುಖಿಯಾಗುವಂತಾಗಬಾರದು. ಹೀಗೊಂದು ಚಿಂತನೆ ಈ ಹೊತ್ತಿನ ಬಹಳಷ್ಟು ಸಂಗತಿಗಳನ್ನು ಕುರಿತು ಯೋಚಿಸುವಾಗ ಗಂಭೀರವಾಗಿಯೇ ಕಾಡತೊಡಗಿಬಿಡುತ್ತದೆ.
ಈ ದೇಶದ ಆದಿಮ ಕವಿ ವಾಲ್ಮೀಕಿ, ಭಾರತವನ್ನು ವಿಶಿಷ್ಟವಾದ ಚಿಂತನೆಗಳಲ್ಲಿ ಹತ್ತು ಹಲವು ಆಯಾಮಗಳಲ್ಲಿ ಕಾಡಿರುವುದುಂಟು, ಪ್ರಭಾವಿಸಿರುವುದುಂಟು. ಈ ಕ್ಷಣಕ್ಕೂ ಹಲ ಬಗೆಯ ತಾಕಲಾಟಗಳು ನಮ್ಮೊಂದಿಗಿವೆ. ಹೀಗೆ ಒಬ್ಬ ವ್ಯಕ್ತಿ, ಭಾವ ಕಥನಗಳು ಮತ್ತೆ ಮತ್ತೆ ವಿಭಿನ್ನ ನೆಲೆಯಲ್ಲಿ ನೆನಪಾಗಿ, ಚಿಂತನೆಯಾಗಿ, ಮನನವಾಗಿ, ಚರ್ಚೆಯಾಗಿ ಕಾಡುವುದೆಂದರೆ ಅದು ಸಾಂಸ್ಕøತಿಕರೂಪಕ ಮತ್ತು ಬಹಳ ಮುಖ್ಯವಾಗಿ ನಿಜಸಂಚಲನದ ಪ್ರತೀಕ. ಕ್ರಿಯಾಶೀಲತೆಯ ಉತ್ಕರ್ಷವೆಂದರೆ ಹೀಗೇ ಇರುವಂತಹುದು.
ಭಾರತದೇಶದ ಆದಿಮಕಾವ್ಯ ರಾಮಾಯಣ. ಅಂದರೆ ಒಂದು ಮಹಾಕಾವ್ಯವೆನ್ನುವುದು ದೇಶದ ಜನರ, ಸಮುದಾಯದ ಬದುಕಿನ ಒಟ್ಟಂದದ ಫಲಿತವೆನ್ನಬಹುದು. ಬಹುಪಾಲು ಜಗತ್ತಿನ ಮಹಾಕಾವ್ಯಗಳಿಗೂ ಹೀಗೊಂದು ದೇಸೀಯತೆ ಎನ್ನಬಹುದಾದ ವ್ಯಾಖ್ಯಾನವೊಂದು ಸಾಧ್ಯವಾಗುತ್ತದೆ. ಭಾರತದೇಶದ ಮಹಾಕಾವ್ಯವನ್ನು ಲೋಕದ ಆದರ್ಶವಾಗಿ ಅರ್ಪಿಸಿದವನು ವಾಲ್ಮೀಕಿ. ಒಂದು ಕಾವ್ಯ ಅಥವಾ ಮಹಾಕಾವ್ಯವೆಂದರೆ ಮಹಾಕವಿಯೊಬ್ಬರಿರಲೇಬೇಕು. ವಿಶೇಷವೇನಿದ್ದೀತು ಎನ್ನುವುದು ಸಾಮಾನ್ಯ ಪ್ರಶ್ನೆಯಾಗಬಹುದು.
ಆದರೆ ಭಾರತದಂತ ‘ವರ್ಣಾಶ್ರಮ ಧರ್ಮದ’ ನೆರಳಿನ ನೆಲದಲ್ಲಿ ಹೀಗೆ ತೀರಾ ಸಹಜವೆಂಬಂತೆ ಯೋಚಿಸುವುದು ಸುಲಭ ಸಾಧ್ಯವಿಲ್ಲ. ‘ಋಷಿಯಲ್ಲದವನು ಕಾವ್ಯ ಬರೆಯಲಾರ’ ಎನ್ನುವುದೊಂದು ಮಾತು ಈ ನೆಲದಲ್ಲಿದೆ. ಅದು ಅನ್ನಿಸಿದಂತೆಲ್ಲಾ ಅರ್ಥ ಕೊಡಬಹುದಾದರೂ ಸರಳ ಮತ್ತು ಸ್ಪಷ್ಟವಾಗಿ ಕಾವ್ಯಪ್ರಜ್ಞೆಯನ್ನು ಬದ್ಧತೆಯನ್ನಾಗಿಸುವ ಎಚ್ಚರವನ್ನೇ ಈ ಮಾತು ಧ್ವನಿಸುತ್ತಿದೆ ಎಂದು ಗ್ರಹಿಸುವುದು ಸಮಂಜಸವಾದುದು. ತನ್ಮೂಲಕ ವಾಲ್ಮೀಕಿ ಈ ನೆಲದ ಅವೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಿದ್ದಾನೆ. ಜಾತಿ ಶ್ರೇಷ್ಠತೆಯೆನ್ನುವುದು ದಿನೇ ದಿನೇ ಈ ನೆಲದ ಅಹಂಕಾರವಾಗುವ ಅಪಾಯ ಘಟಿಸುತ್ತಿರುವ ಹೊತ್ತಿನಲ್ಲಿ ವಿದ್ಯೆ ಕೂಡ ಮೇಲ್ಜಾತಿಗಳ ಹಕ್ಕು ಎನ್ನುವ ನಂಬಿಕೆಯನ್ನು ಮತ್ತೆ ಮತ್ತೆ ಮೂಡಿಸಲು ಸನಾತನದ ಭ್ರಮೆಯ ಪ್ರಜ್ಞೆಗಳು ಸತತವಾಗಿ ಈ ಹೊತ್ತಿಗೂ ಪ್ರಯತ್ನಿಸುತ್ತಲೇ ಇರುವಾಗ ವಾಲ್ಮೀಕಿ ಎನ್ನುವ ಪ್ರತಿಭೆಯೊಂದು ಈ ಬಗೆಯ ಅಹಂಕಾರದ ಮೌಢ್ಯಗಳನ್ನೆಲ್ಲಾ ಒಡೆಯುವಂತೆ ನಮ್ಮೊಂದಿಗೆ ತಳಸಮುದಾಯಗಳ ಆತ್ಮಶಕ್ತಿಯ ಪ್ರತೀಕವಾಗಿ ಉಳಿದದ್ದು ಅನನ್ಯ ಎನ್ನಬಹುದಾದ ಘಟನೆಯೇ ಹೌದು.
ಮೂಲತಃ ಬೇಟೆಗಾರನಾಗಿದ್ದವನು, ಹಿಂಸೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದವನು ಅದನ್ನೆಲ್ಲಾ ತನ್ನ ಸ್ವಶ್ರಮದಿಂದಲೇ ಮೀರಿ ಈ ದೇಶದ ಮೊದಲ ಮಹಾಕಾವ್ಯದ ಕರ್ತೃವಾಗುವುದು, ಆದಿಮ ಜ್ಞಾನದಂತಾಗುವುದು, ಆದಿಮ ಅಕ್ಷರವಾದಂತಾಗುವುದು ಪವಾಡದಂತೆ ನಡೆದುಬಿಡುವುದು ಅತ್ಯಪೂರ್ವವಾದ ಘಟನೆಯೇ ಹೌದು. ವಿದ್ಯೆ-ಜ್ಞಾನವೆನ್ನುವುದು ಯಾರೊಬ್ಬರ ಸ್ವತ್ತಲ್ಲ ಸತತವಾದ ಪರಿಶ್ರಮವೊಂದು ಸಾಧ್ಯವಾದರೆ ಎಲ್ಲವನ್ನು ದಾಟಿ ತನ್ನ ತವನ್ನು ಚರಿತ್ರೆಯಾಗಿಸಿಕೊಳ್ಳಬಹುದು ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಾಧನೆಯ ಸಾಲಿನಲ್ಲಿವೆ. ವ್ಯಾಸ, ಕಾಳಿದಾಸರಂತಹ ಮಹಾಕವಿಗಳೂ ಹೀಗೆ ಜಾತಿಜ್ಞಾನದ, ಅಹಂಕಾರದ ಭ್ರಮೆಗಳನ್ನು ಸೀಳಿ ಶ್ರೇಷ್ಠರಾದರು, ವಿಶ್ವಕವಿಗಳಾದರು ಎನ್ನುವುದಿಲ್ಲಿ ಸ್ಮರಣಾರ್ಹ.
ಅನುಭವವೆನ್ನುವುದು ಶಬ್ದವ್ಯಾಪಾರವನ್ನು ಮೀರಿದಂತಹುದು. ಇನ್ನು ಸರಳವಾಗಿ ಹೇಳಬಹುದಾದರೆ ಅದೊಂದು ತಾನೇ ಆಗುವ, ಅರಗಿಸಿಕೊಳ್ಳುವ ವಿಶಿಷ್ಟವಾದ ಸಂವೇದನೆ ಹೊರನಿಂತು ಮತ್ತಾರೋ ಗ್ರಹಿಸುವಂತಹುದಲ್ಲ. ನಿಜವಾಗಿ ಪ್ರತಿಭೆ ಮತ್ತು ವ್ಯಕ್ತಿನಿಷ್ಟ ಪ್ರಯತ್ನದ ಶ್ರಮಗಳಿಂದ ದಕ್ಕಿಸಿಕೊಂಡವರು ಮಾತ್ರ ಶಕ್ತಿಯನ್ನು ಅರ್ಥೈಸಿಕೊಳ್ಳಬಲ್ಲರು ಜ್ಞಾನ ಎನ್ನುವುದು ತನ್ನೊಳಗೆ, ತನ್ನದೆನ್ನುವ ಪರಿಸರ, ಸಮುದಾಯಗಳೊಳಗೆ ಮಾತ್ರ ಉಳಿಸಿಕೊಂಡು ನನ್ನದು-ನಮ್ಮದು ಎಂದು ಬೀಗುವಂತಹುದಲ್ಲ. ಹಂಚಿದಷ್ಟು ತೆರೆದುಕೊಂಡಷ್ಟು, ಬೆಳೆಯುವಂತಹುದು, ಯಾರೂ ಕದಿಯಲಾಗದ್ದು, ನಿರಂತರ ಬತ್ತದ ನದಿಯಾಗಿ, ಹೊಳೆಯಾಗಿ ಹರಿಯುವಂತಹುದು. ವಾಲ್ಮೀಕಿ ಮತ್ತು ರಾಮಾಯಣದ ಫಲಿತವಿರುವುದೇ ಈ ಬಗೆಯ ಅರಿವಿನಲ್ಲಿ ಎಂದರೆ ಉತ್ಪ್ರೇಕ್ಷೆಯಾಗಬೇಕಿಲ್ಲ.
ತಪಸ್ಸನ್ನು ಅಧ್ಯಾತ್ಮದ ಸ್ವರೂಪವಾಗಿಯೂ ಪರಿಭಾವಿಸುವಾಗ ಅದು ಮೂಲತಃ ಜ್ಞಾನದ ಆಕರವೇ ಆಗಿತ್ತೆನ್ನುವುದನ್ನು ಮರೆಯುವಂತಿಲ್ಲ. ಅರಣ್ಯವಾಸ, ಅಲ್ಲಿನ ಏಕಾಂತತೆ, ಹಲವುದಿನಗಳು-ವರ್ಷಗಳು ಇತ್ಯಾದಿ ಸಂಗತಿಗಳೆಲ್ಲವೂ ಸಾಧನೆಗೆ ತಾನೇ ಒಡ್ಡಿಕೊಳ್ಳುವ ಸವಾಲುಗಳು. ನಿಸರ್ಗವೆನ್ನುವುದು ಎಲ್ಲಕ್ಕೂ ದೊಡ್ಡದು ಮತ್ತು ಬಹಳ ಮುಖ್ಯವಾಗಿ ಏನನ್ನೇ ಕಲಿಯುವುದಾದರೂ ಪಡೆದರೂ ಅದು ಪ್ರಕೃತಿಯ ಒಡಲಿಂದ ಮಾತ್ರ ಎನ್ನುವ ಸಾಮಾನ್ಯಜ್ಞಾನದ ಮೂಲಕವೇ ಸತ್ಯಕ್ಕೆ ಮುಖಾ-ಮುಖಿಯಾಗುವ ಸೃಜನಶೀಲ ಪ್ರಕ್ರಿಯೆಯೇ ತಪಸ್ಸು, ವಾಲ್ಮೀಕಿ ಋಷಿಯಾದದ್ದು ಮಹಾಕವಿಯಾದದ್ದು ಈ ಹಿನ್ನೆಲೆಯಿಂದಲೇ ಎನ್ನುವುದು ಗಮನಾರ್ಹ.
ವಾಲ್ಮೀಕಿ ಮತ್ತು ರಾಮಾಯಣ ಕಾವ್ಯದ ನಡುವೆ ಇರುವಂತಹ ಪರಸ್ಪರ ಎನ್ನುವ ಮುಖಾ-ಮುಖಿಯೇ ಗಮನಾರ್ಹವಾದುದು ಕತೆ ಬರೆದವನೇ ಕಾವ್ಯದ ಒಳಗೊಂದು ಪಾತ್ರವಾಗುತ್ತಾನೆ. ತನ್ನನ್ನು ತಾನು ತಿದ್ದಿಕೊಳ್ಳುತ್ತಲೇ ಪುರುಷೋತ್ತಮನನ್ನು ಪ್ರಶ್ನಿಸುವ ವಿಚಾರಗಳಿಗೆ ಮಾರ್ಗದರ್ಶಿಸೂತ್ರವಾಗುತ್ತಾನೆ. ಕಾಡು-ಬೇಟೆ ಎನ್ನುವುದನ್ನು ವೃತ್ತಿ-ಪ್ರವೃತ್ತಿಯಾಗಿಸಿಕೊಂಡು ಅದನ್ನು ತಮ್ಮ ಬದುಕಿನ ಪ್ರಜ್ಞೆಯಾಗಿಯೂ ಭಾವಿಸಿಕೊಂಡು ಜನಜೀವಿಸಿದ್ದರು. ಬೇಟೆ ಎನ್ನುವುದು ವೃತ್ತಿಯಾಗಿದ್ದ ಕಾಲಕ್ಕೂ ದಟ್ಟವಾದ ಅರಣ್ಯಗಳಿದ್ದವು.
ವನ್ಯಜೀವಿ ಸಂಕುಲ ವೈವಿಧ್ಯತೆಯೊಂದಿಗೆ ಸಂಪದ್ಭರಿತವಾಗಿತ್ತು ಶ್ರೀಸಾಮಾನ್ಯನು ಕಾಡು-ನಾಡುಗಳ ನಡುವಿನ ಬದುಕನ್ನು ಸ್ಪಷ್ಟವಾಗಿ ಅರಿತುಕೊಂಡೇ ಕಾಡನ್ನು ನಾಡಿನ ಬದುಕಿಗೆ ಪ್ರೇರಕವಾಗಿಸಿಕೊಂಡಿದ್ದ ಇಲ್ಲವಾದರೆ ರಾಮ, ಸೀತೆ, ಲಕ್ಷ್ಮಣರು, ಪಾಂಡವರು ಮತ್ತಷ್ಟು ಶಕ್ತಿವಂತರಾಗಿ, ಕ್ರಿಯಾಶೀಲರಾಗಿ ಕಾಡಿನಿಂದ ಹೊರಬರುವುದು ಹೇಗೆ ಸಾಧ್ಯವಾಗುತ್ತಿತ್ತು? ಇಂತಹ ನಿಸರ್ಗ ಪರಂಪರೆಯ ರೂಪಕವಾಗಿಯೇ ವಾಲ್ಮೀಕಿಯಂತಹ ಋಷಿಮುನಿಯನ್ನು ಗ್ರಹಿಸುವ ಅವಶ್ಯಕತೆ ಅನಿವಾರ್ಯವಾಗಿದೆ. ಊರಿನಲ್ಲಿ ಬದುಕು ಕಟ್ಟಿಕೊಂಡಿರಬಹುದಾದ ಬೇಟೆಗಾರನೊಬ್ಬ ಕೊನೆಗೆ ತಾನು ಬದುಕಿರುವುದಷ್ಟೇ ನಿಜದ ಸಾರ್ಥಕತೆಯಲ್ಲ, ಆಚೆಗೆ ಮತ್ತೇನೋ ಇದೆ ಎಂದು ಸ್ಪಷ್ಟವಾಗಿ ಪರಿಭಾವಿಸಿಕೊಂಡ ಕಾರಣಕ್ಕೆ ಆತ ಬದಲಾವಣೆಯ ಕಡೆಗೆ ಹೆಜ್ಜೆ ಇಡುತ್ತಾನೆ. ಇದೊಂದು ಸಾಮಾನ್ಯ ಪವಾಡದಂತಲ್ಲ, ಯಾರದ್ದೋ ಮಹಾನುಭಾವರ ಹಿತೋಕ್ತಿಯ ದಿಢೀರ್ ಫಲಿತವೂ ಅಲ್ಲ ಬಹುಶಃ ಅವನ ಒಳಗೂ ಇದ್ದಿರಲೇಬಹುದಾದ ಯಾವುದೋ ಸೆಳೆತ, ಹೊಸತನದ ತುಡಿತ ಅವನನ್ನು ಮಹತ್ಕಾರ್ಯದೆಡೆಗೆ ಸೆಳೆದಿರಬಹುದು.
ಅಂದರೆ ವೃತ್ತಿಯನ್ನು ಜಾತಿಯನ್ನಾಗಿಸಿ ಅದನ್ನು ಪರಂಪರೆಯಾಗಿಸಿದ, ಬೌದ್ಧಿಕತೆಯನ್ನು ದಾರಿದ್ರ್ಯವನ್ನಾಗಿ ಭಾವಿಸಿ ತನ್ನ ಶಕ್ತಿ-ಪ್ರತಿಭೆ-ವ್ಯಕ್ತಿತ್ವವೇ ನಿಜದ ಅಸ್ತಿತ್ವವಾಗಬೇಕು ಎನ್ನುವ ಕನವರಿಕೆಯಂತಹ ಫಲಿತವೇ ವಾಲ್ಮೀಕಿಯಾದಂತಿದೆ. ತನ್ನ ಇಡೀ ದೇಹವನ್ನು ಆವರಿಸಿಕೊಳ್ಳುವಷ್ಟು ಗಾಢವಾಗಿ ಹುತ್ತಬೆಳೆದರೂ ಕದಲದಂತೆ ತಪಸ್ಸು ಮಾಡಿದವನು ವಾಲ್ಮೀಕಿ ಎನ್ನುವಂತಹ ಕಥನದಲ್ಲಿರುವ ಸಂಕೇತವೇ ಗಮನಾರ್ಹ. ಇದೊಂದು ಮಾನಸಿಕ ಸ್ಥೈರ್ಯದ ಪ್ರತಿಫಲನವೆನ್ನಬಹುದು.
ಈ ದೇಶದಲ್ಲಿ ನೂರಾರು ಋಷಿಮುನಿಗಳು ತಪಸ್ಸು ಮಾಡಿದ್ದಾರೆನ್ನುವ ಸಾಕಷ್ಟು ಉದಾಹರಣೆಗಳಿವೆ ಆದರೆ ಯಾರೊಬ್ಬರು ಹೀಗೆ ಹಠಯೋಗಿಗಳಾಗಿ ‘ವಲ್ಮೀಕ’ದ ಒಳಗೆ ಉಳಿದುಹೋಗಿ ಹೊರಬಂದು ವಾಲ್ಮೀಕಿಯಾದ ಮತ್ತೊಂದು ಮಾದರಿಯಿಲ್ಲ ಇದು ವಾಲ್ಮೀಕಿಯ ಏಕಾಗ್ರತೆಯ ಉತ್ಕರ್ಷದ ನಿಜದದಾಖಲೆ ಮತ್ತು ಬಹಳ ಮುಖ್ಯವಾಗಿ ತಾನು ಸಾಧಿಸಲೇಬೇಕು ಎಂದುಕೊಂಡು, ಅಂದುಕೊಂಡದ್ದನ್ನು ಸಾಧಿಸುವವರೆಗೂ ಕದಲಲಾರೆ ಎಂದು ದೃಢವಾಗಿ ಗೆದ್ದ ರೂಪಕ ಇಂತಹದ್ದೊಂದು ಗಟ್ಟಿತನವಾದರೂ ಈ ನೆಲಸಂಬಂಧಿಯಾಗಿ ಬದುಕಿ ಶ್ರಮವೇ ತನ್ನ ಗುಣ-ಲಕ್ಷಣವೆಂದುಕೊಂಡು ಬದುಕನ್ನು ನಿರಂತರವಾದ ಸವಾಲಿಗೆ ಒಡ್ಡಿಕೊಂಡ ತಳಸಮುದಾಯದ ಪ್ರಜ್ಞೆಗೆ ಮಾತ್ರ ಸಾಧ್ಯವಾಗುತ್ತದೆ. ಆದ್ದರಿಂದಲೇ ಋಷ್ಯತ್ವ ಎನ್ನುವ ಸಾಧನೆಯೊಂದಿಗೆ ಜ್ಞಾನಕ್ಕೆ ಸಂವಾದಿಯಾದ ಕೂಡಲೇ ಮತ್ತೊಬ್ಬ ಬೇಟೆಗಾರನನ್ನು, ಅವನ ವೃತ್ತಿಯ ದುರಂತವನ್ನು ತಡೆಯುವುದು ವಾಲ್ಮೀಕಿಗೆ ಸಾಧ್ಯವಾಗುತ್ತದೆ. ಅವನ ಆ ಕ್ಷಣದ ಸಿಟ್ಟಿಗೆ ನಿಸರ್ಗಪ್ರೀತಿ ಕಾರಣವಾದರೆ, ಅವನ ನೋವು-ಬೇಸರಕ್ಕೆ ಈ ಹಿಂದೆ ತಾನೂ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡದ್ದರ ಅರಿವೂ ಕಾರಣವಾಗುತ್ತಿದೆ ಹಾಗಾಗಿ ಅವನ ಆ ಕ್ಷಣದ ಶೋಕ ಇತರರ ದುಃಖದಂತೆ ಕೇವಲ ಕಣ್ಣೀರಿನ ವ್ಯಾಖ್ಯಾನವಾಗುವುದಿಲ್ಲ, ಬದಲಾಗಿ ಶೋಕ-ಶ್ಲೋಕವಾಗುತ್ತದೆ. ಮುಂದೆ ಇಡೀ ಮಹಾಕಾವ್ಯದ ಚಲನೆಗೆ ಶ್ಲೋಕವೆಂಬ ಹೊಸಪ್ರಕಾರದ ಆಕರವೂ ಸಂವಹನವೂ ಸಾಧಿತ ಆದರ್ಶವೂ ಆಗಿಬಿಡುತ್ತದೆ.
ಹೀಗೆ ಪ್ರಾರಂಭವಾದ ವಾಲ್ಮೀಕಿಯ ಹೊಸಪರ್ವ ರಾಮಾಯಣದಂತಹ ಕಾವ್ಯವನ್ನು ಈ ನೆಲದ ಸಂಸ್ಕøತಿಯನ್ನಾಗಿಸುವಲ್ಲಿ ಪರಿಪೂರ್ಣತೆಯನ್ನು ಪಡೆದುಕೊಂಡದ್ದು ನಮ್ಮೊಂದಿಗಿರುವ ಇತಿಹಾಸ ಮತ್ತು ವರ್ತಮಾನ ಇದೊಂದು ದೇವರ ಅವತಾರದ ಕತೆಯಂತಾಗಿರಬಹುದು, ರಾಮ-ರಾವಣ-ಸೀತೆಯರು ಕತೆಗೆ ನೆಪದ ಪಾತ್ರಗಳೂ ಆಗಿರಬಹುದು. ಆದರೆ ಸಾಕ್ಷಾತ್ ದೇವಾದಿ ದೇವತೆಗಳೂ ತಮ್ಮ ಬದುಕಿಗೆ ಸಾರ್ಥಕತೆಯನ್ನು ಕಂಡುಕೊಳ್ಳುವುದು ಈ ನೆಲದ ಸ್ಪರ್ಶದಿಂದ ಮಾತ್ರ ಎನ್ನುವ ಅರಿವನ್ನೇ ವಾಲ್ಮೀಕಿ ತನ್ನ ದಾರ್ಶನಿಕತೆಯನ್ನಾಗಿಸಿಕೊಂಡಂತಿದೆ. ಇಲ್ಲವಾದರೆ ರಾಮ-ಸೀತಾರ ವೇಷದಲ್ಲಿ ಶ್ರೀಮಾನ್ ವಿಷ್ಣು-ಲಕ್ಷ್ಮಿಯರು ಈ ಪರಿಯಪಾಡಿಗೆ ಒಳಗಾಗಬೇಕಾದ್ದಿರಲಿಲ್ಲ. ದೇವರು ನಮ್ಮನ್ನು ಸೃಷ್ಟಿಸಿದ್ದಾದರೆ ನಾವು ದೇವರನ್ನೇ ರೂಪಿಸಿದವರು ಹಾಗಾಗಿ ನಮ್ಮ ದೇವರು ನಮ್ಮೆಲ್ಲ ಪಾಡುಗಳಿಂದ ಅತೀತರಾಗುವುದು ಹೇಗೆ ಸಾಧ್ಯ? ರಾಮಾಯಣದ ನಿಜವಾದ ಅರ್ಥ ಮತ್ತು ವ್ಯಾಖ್ಯಾನವಿರುವುದೇ ಈ ನೆಲೆಯಲ್ಲಿ ಮತ್ತು ಅದು ತೀರಾ ಎನ್ನುವ ಸರಳವಾದ ನಮ್ಮೆಲ್ಲರ ಬದುಕಿನೊಂದಿಗೆ ಸಂಲಗ್ನಗೊಳ್ಳುವುದರಲ್ಲಿ ಎನ್ನಬಹುದು. ಇಲ್ಲವಾದರೆ ಹೀಗೆ ಭಾರತದೇಶದಲ್ಲಿ ಸಾವಿರಾರು ರಾಮಾಯಣಗಳು ಪುನರ್ ಸೃಷ್ಟಿಯಾಗುವುದು ಸುಲಭಸಾಧ್ಯವಾಗುತ್ತಿರಲಿಲ್ಲ.
ರಾಮ-ಸೀತೆ-ಲಕ್ಷ್ಮಣರು ನಮ್ಮ ಮನೆಯ ಹಿಂದೆ-ಮುಂದೆ, ಊರು-ಕೇರಿ, ಹೊಲಗದ್ದೆಗಳಲ್ಲಿ ನಡೆದಾಡಿದ, ಬದುಕಿದ್ದ ಕಥಾನಕಗಳು ಮೌಖಿಕ ಪರಂಪರೆಯ ಆಸ್ತಿಗಳಾಗಬೇಕಿರಲಿಲ್ಲ. ಪ್ರತೀ ಭಾಷೆಯಲ್ಲಿ, ಬುಡಕಟ್ಟುಗಳಲ್ಲಿ, ಗ್ರಾಮಸಮುದಾಯಗಳಲ್ಲಿ ಹತ್ತು-ಹಲವು ವಾಲ್ಮೀಕಿಯರು ಕಾಣಸಿಗುವುದಾಗುತ್ತಿರಲಿಲ್ಲ. ಈ ಬಗೆಯ ಬೆಳಕನ್ನು ಹಚ್ಚಿದ ಮೊತ್ತಮೊದಲ ಅಕ್ಷರ, ಮೊದಲಜ್ಞಾನ, ಮೊದಲಕವಿ ವಾಲ್ಮೀಕಿ ಈ ದೇಶದ ಬಹುಸಂಖ್ಯಾತರಾದ ಶ್ರಮಿಕ ಸಮುದಾಯವನ್ನು ಪ್ರತಿನಿಧಿಸುವುದು ಎಷ್ಟೊಂದು ಅರ್ಥಪೂರ್ಣ ಮತ್ತು ಅನನ್ಯ!
ರಾಮ-ರಾವಣರನ್ನು, ಸತ್ಯ-ಧರ್ಮಗಳ ಸಂಘರ್ಷಕ್ಕೆ ಪಾತ್ರಧಾರಿಗಳನ್ನಾಗಿಸಿದ ವಾಲ್ಮೀಕಿ, ಮುಂದೆ ಈ ಸಂಘರ್ಷ ಕೊನೆಯಾಗಿ ಪಟ್ಟಾಭಿಷೇಕವು ಮುಗಿದ ನಂತರ ತುಂಬುಗರ್ಭಿಣಿ ಸೀತೆಗೆ ವನವಾಸ ಪ್ರಾಪ್ತಿಯಾದಾಗ ಅವಳನ್ನು ಜತನಮಾಡಲು ತಾನೇ ಪಾತ್ರವಾಗುವುದು ಗಮನಾರ್ಹ. ದಿಢೀರನೆ ಒದಗಿದ ಪರಿತಾಪದಿಂದ ದಿಕ್ಕುತಪ್ಪಿದಂತಾದ ಸೀತೆಯ ಬದುಕಿಗೆ ಆಸರೆಯಾಗಿ, ಸಾಂತ್ವಾನವಾಗುವ ಮುಂದೆ ಹೊಸ ಸಂತಾನಕ್ಕೆ ಗುರುವಾಗುವ ಸ್ಪಷ್ಟ ಉದ್ದೇಶ ವಾಲ್ಮೀಕಿಗಿದೆ. ಅದರೊಂದಿಗೆ ತನ್ನ ಕಾವ್ಯವನ್ನು ಹಾಡಿ ಪ್ರಸಾರಮಾಡಲು, ರಾಮನಿಗೆ ನಿಜದ ಜ್ಞಾನೋದಯ ಮಾಡಿಸಲು ರಾಮನ ಮಕ್ಕಳನ್ನೇ ಸಾಧನವಾಗಿಸುವಲ್ಲಿ ವಾಲ್ಮೀಕಿಯ ಬದುಕಿನ ನಿಜದ ಸಾರ್ಥಕತೆಯಿದೆ. ಸೀತೆಯ ಒಳಬಂಡಾಯಕ್ಕೆ ಸಾಕ್ಷಿಯಾಗುವ ವಾಲ್ಮೀಕಿ ಲವ-ಕುಶರ ಗೆಲುವಿಗೆ ಹಿನ್ನೆಲೆಯಾಗುತ್ತಾನೆ.
ಈ ನೆಲದಲ್ಲಿ ಜ್ಞಾನಕ್ಕೆ ಸಾಕಷ್ಟು ಆಕರಗಳಿದ್ದವು. ಚಿತ್ರ-ವಿಚಿತ್ರ ಸಮರ್ಥನೆಗಳಿದ್ದವು. ಧರ್ಮಸೂಕ್ಷ್ಮವೆಂಬ ಹಲವು ನಿಯಮಗಳಿದ್ದವು ನಿಯಂತ್ರಿಸಲು ಹಲವಾರು ಶಾಸ್ತ್ರಗಳಿದ್ದವು ಆದರೆ ಈ ನೆಲದ ಮೊದಲ ಮಹಾಕಾವ್ಯಕ್ಕೆ ಮುನ್ನುಡಿಯಾಗಿ ಬಂದವನು ವಾಲ್ಮೀಕಿ. ಆತ ಯಾವುದೇ ವಿಶಿಷ್ಟವೆನ್ನುವ ಸಾಮಾನ್ಯತೆಯ ಆಚೆಗಿನ ಲೋಕದ ದೇವಪುರುಷನಾಗಿರಲಿಲ್ಲ, ಅವತಾರದ ವಿಶೇಷ ಪಾತ್ರಧಾರಿಯೂ ಆಗಿರಲಿಲ್ಲ. ಮುಖ್ಯವಾಗಿ ಆತ ಮಾಯಾವೀಯಂತೆ ಪವಾಡ ಪುರುಷನಂತೂ ಆಗಿರಲೇ ಇಲ್ಲ. ಬಹಳ ಸ್ಪಷ್ಟವಾಗಿ ಬದುಕನ್ನೇ ಪ್ರಯೋಗಶಾಲೆಯಾಗಿಸಿಕೊಂಡು ಸರಳ, ಸಹಜವಾಗಿ ಮತ್ತು ನೇರವಾಗಿ ಬಂದಂತೆ ಬದುಕನ್ನು ಸ್ವೀಕರಿಸುವ ಶ್ರೀಸಾಮಾನ್ಯನಾಗಿದ್ದ ಆದರೆ ಒಂದು ದಿನ ತನ್ನಿಂದ ತಾನೇ ಏನೋ ಮತ್ತೇನೋ ಆಗಬೇಕೆಂದು ನಿರ್ಧರಿಸಿಬಿಟ್ಟಿದ್ದ, ಅದಕ್ಕಾಗಿ ಹಠತೊಟ್ಟಿದ್ದ, ಸಾಮಾನ್ಯ ಬದುಕಿನ ಎಲ್ಲ ಬಂಧಗಳನ್ನು ಕಳಚಿಕೊಂಡು ಸ್ವತಂತ್ರತನವನ್ನೇ ತನ್ನ ಹುಡುಕಾಟದ ಗುರಿಯಾಗಿಸಿಕೊಂಡ. ಪ್ರತಿಫಲ ಕಣ್ಣೆದುರೇ ತೆರೆದುಕೊಂಡಿತ್ತು ಆತ ಈ ನೆಲದ ಎಲ್ಲ ಜನರಿಗೂ ತಲುಪಬೇಕಾದ ಕಾವ್ಯವೆಂಬ ಮಹಾಪ್ರಕಾರಕ್ಕೆ ಮೂಲವಾಗಿಬಿಟ್ಟ. ಮೌಲ್ಯ, ಸಂಬಂಧ, ವಿಭಿನ್ನ ಸಂಸ್ಕøತಿ ಎನ್ನುವ ನಿಜದ ನೆಲೆಯ ಹುಡುಕಾಟಕ್ಕೆ ಹಂಬಲಿಸಿದ. ಮಾನವ, ವಾನರ, ದಾನವ ಎಂಬ ವಿಭಿನ್ನ ಸಂಸ್ಕøತಿಗಳ ಮುಖಾ-ಮುಖಿ ಸಾಧಿಸಿದ, ಮೊದಲಿಗೆ ಸಂಘರ್ಷವಾದುದು ನಂತರ ಸಮನ್ವಯವಾದ ಸತ್ಯವನ್ನು ಬಿಡಿಸಿಟ್ಟಿದ್ದು ತನ್ಮೂಲಕ ಅಖಂಡತೆಗೊಂದು ಮೊದಲ ಭಾಷ್ಯ ಬರೆದಿದ್ದ ರಾಮಾಯಣ ವಾಲ್ಮೀಕಿಯ ಸೃಜನಶೀಲ ಮಗುವಾಗಿ ಮುಂದೆ ವಿಶ್ವರೂಪವಾಗಿಬಿಟ್ಟಿತು. ರಾಮ ಆದರ್ಶವಾದ, ರಾಮರಾಜ್ಯ ಕನಸಾಯಿತು.
ವಿಚಿತ್ರ ಮತ್ತು ದುರಂತವೆಂದರೆ ರಾಮಾಯಣವನ್ನು ಅದರ ಆದರ್ಶವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಸಾಧ್ಯವೇ ಆಗಲಿಲ್ಲ ಮತ್ತೂ ವಿಚಿತ್ರವೆಂದರೆ ರಾಮನನ್ನು, ರಾಮಾಯಣವನ್ನು, ಕಲ್ಯಾಣರಾಜ್ಯದ ಕನಸನ್ನು ಕೊಟ್ಟ ವಾಲ್ಮೀಕಿಯನ್ನು ದೂರವಿಟ್ಟು ಕೃತಿಯೇ ಮುಖ್ಯವಾಗಿಬಿಡುವ ಅಪಾಯವೂ ಈ ನೆಲದಲ್ಲಿ ಸಾಧ್ಯವಾಯಿತು. ಕಾರಣ ಮತ್ತದೇ ದಾರಿದ್ರ್ಯದ ಜಾತಿ-ವರ್ಣಗಳ ಮೇಲಾಟ. ಯಾವುದು ಆಗಬಾರದಿತ್ತೋ ಅದು ವಾಲ್ಮೀಕಿಯ ಹೆಸರಿನೊಂದಿಗೂ ಆಗೇಬಿಟ್ಟಿತು. ಭಾರತದ ದುರಂತವಿರುವುದೇ ಇಂತಲ್ಲಿ. ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಭರತ, ದಶರಥ, ಶಬರಿ, ರಾವಣ, ವಿಭೀಷಣ, ಹನುಮ, ವಾಲಿ-ಸುಗ್ರೀವ -ಹೀಗೆ ನೂರಾರು ಆದರ್ಶಗಳನ್ನು ಸೃಷ್ಟಿಸಿದ ವಾಲ್ಮೀಕಿಯ ನಿಜದ ಆಶಯಗಳನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಬೇಕಿರುವುದೇ ಇಂದಿನ ತುರ್ತು. ವಾಲ್ಮೀಕಿ ನಿಜದ ರೂಪಕವಾಗಿ, ನಮ್ಮೆಲ್ಲ ಅಜ್ಞಾನ ಮತ್ತು ಅಂಧಕಾರಗಳ ನೆಲೆಗೆ ಬೆಳಕಾಗಬೇಕು ಸತ್ಯದ ದರ್ಶನವಾಗಬೇಕು.......
bottom of page